ಪದ್ಯ (poem) · ಜಿ.ಎನ್. ಲಕ್ಷ್ಮಣ ಪೈ
ಪಠ್ಯFull text
ಬಿಸಿಲು ಮಳೆಯೂ ಕೂಡಿದವು
ಧಗೆಯನು ತಂಪು ಮಾಡಿದವು
ಕೋತಿಯು ಮಾಡಿತು ತುಂಟತನ
ಕೋಳಿಯು ಮಾಡಿತು ಮೂರ್ಖತನ
ಕೋತಿಗು ಕೋಳಿಗು ನೆಂಟತನ
ಮಾಡಲು ಬೇಕೆಂಬುವ ಹದನ
ಮೃಗಗಳು ಖಗಗಳು ಚರ್ಚಿಸುತ
ಮದುವೆಗೆ ಮಾಡಿದರಣಿ ನಗುತ
ಮಂಗಗೆ ಪಂಚೆಯನುಡಿಸಿದರು
ರಂಗಿನ ಅಂಗಿಯ ಹಾಕಿದರು
ಸಿಂಗರದೊಡವೆಯ ತೊಡಿಸಿದರು
“ಲಾಗಾ ಹಾಕೋ ಮಂಗಣ್ಣ!
ಥೈ ಥೈ ಕುಣಿಯೋ ತಿಮ್ಮಣ್ಣಾ!
ಮದುವಣಿಗನು ನೀ ಹೌದಣ್ಣಾ
ಮೃಗವದು ಹಕ್ಕಿಯ ವರಿಸುವುದು
ನಿನ್ನಿಂ ಮೊದಲಾದುದು ಇಂದು
ನೀನೇ ದಾರಿಯ ತೋರಿಸಿದೆ
ನೀನೆ ಸುಧಾರಕನೆನ್ನಿಸಿದೆ”
ಎಂದು ವಿನೋದದಿ ಆಡಿದರು
ಚಂದದ ಪದಗಳ ಹಾಡಿದರು
ಕೋಳಿಗೆ ಸೀರೆಯನುಡಿಸಿದರು
ಚಿನ್ನದೊಡವೆಗಳ ತೊಡಿಸಿದರು.
“ಕೊಕ್‌ಕೊಕ್ ಕೋ ಕೋ
ಮಂಗನ ರಾಣಿಯು ನೀನಿನ್ನು
ಬಗ್ಗಿಸುವೇತಕೆ ತಲೆಯನ್ನು?
ಕೊಂಕಿಸುವೇತಕೆ ನಡೆಯನ್ನು?
ಬಿಡು ಬಿಡು ಲಜ್ಜೆಯ ಹೂಮಾಲೆ
ಕಪಿವರನಿಗೆ ಹಾಕೆಲೆ ಬಾಲೆ!”
ಎನ್ನುತ ಚೇಷ್ಟೆಯ ಮಾಡಿದರು
ಹಿಗ್ಗುತ ನಲಿನಲಿದಾಡಿದರು
ಸಂಭ್ರಮದೊಳಗಾಯಿತು ಮದುವೆ
ಮರ್ಕಟ ಕುಕ್ಕುಟರಾ ಮದುವೆ.
ಜಿ.ಎನ್. ಲಕ್ಷ್ಮಣ ಪೈ