CRECT Education

Class 5 Kannada Lesson 14: Sangolli Rayanna | KTBS Savi Kannada – Learn the Story

Description

Learn the story of Sangolli Rayanna, the fearless freedom fighter from Kittur who defied the British with guerrilla warfare. Part 1 of the lesson.

ಗದ್ಯ (prose) · ಎಚ್.ಎಸ್. ಸತ್ಯನಾರಾಯಣ (H.S. Satyanarayana)

ಪಠ್ಯFull text

ಕರ್ನಾಟಕ ಜನರಿಗೆ ಕಿತ್ತೂರಿನ ಹೆಸರನ್ನು ಕೇಳಿದಾಕ್ಷಣ ನೆನಪಿಗೆ ಬರುವ ಹೆಸರುಗಳೆಂದರೆ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಎಂಬುವು. ಇದರ ಜೊತೆಗೆ ಸ್ವಾಮಿಕಾರ್ಯಕ್ಕೆ ಜೀವತೆತ್ತ ವೀರಾಗ್ರಣಿ ರಾಯಣ್ಣನ ಬದುಕಿನ ಚಿತ್ರ ಸ್ಮೃತಿಪಟಲದಲ್ಲಿ ತೇಲಿಬರುತ್ತದೆ. ನಾಡ ಉಳಿವಿಗಾಗಿ ಹೋರಾಡುವುದು ಕೇವಲ ರಾಜರ ಕೆಲಸವಲ್ಲ. ಅದು ಸಾಮಾನ್ಯ ಜನತೆಯ ಆದ್ಯ ಕರ್ತವ್ಯವೂ ಹೌದು ಎಂಬುದನ್ನು ತೋರಿಸಿಕೊಟ್ಟ ಕಲಿ ಸಂಗೊಳ್ಳಿ ರಾಯಣ್ಣ. ಕಿತ್ತೂರು ಸಂಸ್ಥಾನವು ಬ್ರಿಟಿಷರ ವಶವಾದ ನಂತರ ಸ್ವಾತಂತ್ರ್ಯಪ್ರಿಯರೆಲ್ಲ ಸಂಗೊಳ್ಳಿ ರಾಯಣ್ಣನ ಮುಂಚೂಣಿ ನಾಯಕತ್ವದಲ್ಲಿ ಜೊತೆಸೇರಿ, ಹೋರಾಟ ನಡೆಸಿ ಅವರನ್ನು ಹೊಡೆದೋಡಿಸುವ ಸಾಹಸ ಮಾಡಿದರು. ಇದರಿಂದಾಗಿ ಸಂಗೊಳ್ಳಿ ರಾಯಣ್ಣನ ನೆನಪು ಇತಿಹಾಸದ ಪುಟದಲ್ಲಿ ಉಳಿಯುವಂತಾಯ್ತು. ಸಂಗೊಳ್ಳಿ ರಾಯಣ್ಣನ ಬದುಕಿನ ವಿವರಗಳು ಇತಿಹಾಸದಲ್ಲಿ ದಾಖಲಾಗಿರುವುದಕ್ಕಿಂತ ಲಾವಣಿಯಂತಹ ಜಾನಪದ ಸಾಹಿತ್ಯದಲ್ಲಿ ಸೇರಿಹೋಗಿರುವುದೇ ಹೆಚ್ಚು. ರಾಯಣ್ಣ ಲಾವಣಿಗಳಲ್ಲಿ ಉಳಿದಿರುವುದು ಅವನ ಜನಪ್ರಿಯತೆಗೆ ಸಾಕ್ಷಿಯನ್ನೊದಗಿಸುತ್ತದೆ. ರಾಯಣ್ಣನ ಊರು ಸಂಗೊಳ್ಳಿ. ಇದು ಬೆಳಗಾವಿ ಜಿಲ್ಲೆಯ ಸಂಪಗಾವಿ ತಾಲ್ಲೂಕಿನ ಒಂದು ಪುಟ್ಟಹಳ್ಳಿ. ಸಂಗೊಳ್ಳಿಯ ಹೊರತಾಗಿ ರಾಯಣ್ಣನನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂಬಷ್ಟು ಎರಡೂ ಹೆಸರುಗಳು ಬೆರೆತುಹೋಗಿವೆ. ರಾಯಣ್ಣ ಸಂಗೊಳ್ಳಿಯಲ್ಲಿ ೧೫ ಆಗಸ್ಟ್ ೧೭೯೮ ರಂದು ಜನಿಸಿದನು. ಆಗಸ್ಟ್ ೧೫ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಹಬ್ಬದ ದಿನ. ರಾಯಣ್ಣನ ತಂದೆಯ ಹೆಸರು ಭರಮಪ್ಪ, ತಾಯಿ ಶ್ರೀಮತಿ ಕೆಂಚವ್ವ. ಅಜ್ಜ-ಮುತ್ತಜ್ಜರಿಂದ ವೀರಪರಂಪರೆ ಹೊಂದಿದ್ದ ಮನೆತನ ಇವರದು. ರಾಯಣ್ಣನ ತಾತನಾದ ರಾಗಪ್ಪ ಎಂಬುವವರು ಅಂದಿನ ಕಿತ್ತೂರು ದೊರೆ ವೀರಪ್ಪ ದೇಸಾಯಿಯಿಂದ 'ಸಾವಿರ ಒಂಟೆ ಸರದಾರ' ಎಂಬ ಬಿರುದನ್ನು ಪಡೆದಿದ್ದರು. 'ಚಿಣಗಿ ಕೋವಾಡ' ಯುದ್ಧದಲ್ಲಿ ತೋರಿದ ಅಪ್ರತಿಮ ಶೌರ್ಯದಿಂದ ರಾಯಣ್ಣನ ತಾತ ಈ ಬಿರುದನ್ನು ಪಡೆದಿದ್ದರು. ರಾಯಣ್ಣನಿಗೆ ಸಹಜವಾಗಿಯೇ ಯೋಧನೊಬ್ಬನಿಗಿರಬೇಕಾದ ಲಕ್ಷಣಗಳೆಲ್ಲವೂ ರಕ್ತಗತವಾಗಿ ಬಂದಿದ್ದವು. ರಾಯಣ್ಣ ಕಿತ್ತೂರು ಸಂಸ್ಥಾನದ ಸಾಮಾನ್ಯ ಪ್ರಜೆಯಾಗಿದ್ದವನು. ಸಂಗೊಳ್ಳಿಗ್ರಾಮದ ತಳವಾರಿಯಾಗಿ ನೇಮಕಗೊಂಡವನು, ಹಲವಾರು, ದೇಶಭಕ್ತರೊಂದಿಗೆ ಬ್ರಿಟಿಷರ ವಿರುದ್ಧ ಅಹೋರಾತ್ರಿ ಹೋರಾಡಿದ್ದರಿಂದ ಕಾರಾಗೃಹವಾಸವನ್ನು ಅನುಭವಿಸಬೇಕಾಯಿತು. ತಮ್ಮ ವಿರುದ್ಧ ಹೋರಾಡಿದನೆಂಬ ಕಾರಣಕ್ಕೆ ಬ್ರಿಟಿಷ್ ಸರ್ಕಾರ ರಾಯಣ್ಣನ ಮನೆತನಕ್ಕೆ ಸೇರಿದ್ದ ಭೂಮಿಯನ್ನು ವಶಪಡಿಸಿಕೊಂಡುಬಿಟ್ಟಿತು. ರಾಯಣ್ಣನಿಗೆ ಊರಿನ ಕುಲಕರ್ಣಿ ಬಾಳಪ್ಪನಿಗೆ ಇದ್ದುದಕ್ಕಿಂತ ಹೆಚ್ಚಿನ ಜಮೀನಿತ್ತು! ಬ್ರಿಟಿಷರ ಕೃತ್ಯದಿಂದ ರಾಯಣ್ಣ ಕ್ರೋಧಗೊಂಡನು. ಅಲ್ಲದೆ, ಕಿತ್ತೂರಿನ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಬೇಕೆಂಬ ಇವನ ಉದಾತ್ತ ಧೈಯವು ಇವನ ದೇಶಾಭಿಮಾನವನ್ನು ಬಲವಾಗಿ ಕೆರಳಿಸಿತು. ಸೈನ್ಯದ ಬಲವಿಲ್ಲದ ಆತ ಮನೋಬಲವನ್ನೇ ನಂಬಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಲು ಶೂರಸಾಹಸಿಗಳ ಗುಂಪನ್ನು ಕಟ್ಟಿ ಬಂಡಾಯವೆಬ್ಬಿಸಿದನು. ಅನೇಕ ಯುವಕರು ರಾಯಣ್ಣನ ಬೆಂಬಲಕ್ಕಿದ್ದರು. ಇದಕ್ಕೆ ಮುಖ್ಯ ಕಾರಣ ರಾಯಣ್ಣನಲ್ಲಿದ್ದ ಅಚಲವಾದ ದೇಶಭಕ್ತಿ. ಸಂಗೊಳ್ಳಿ ರಾಯಣ್ಣನ ಸಾಹಸಗಳು ಹಲವಾರು. ಕಿತ್ತೂರಿನ ರಾಣಿ ಚೆನ್ನಮ್ಮನ ದತ್ತುಪುತ್ರನಾದ ಶಿವಲಿಂಗಪ್ಪನನ್ನು ಕಿತ್ತೂರಿನ ಸಿಂಹಾಸನದಲ್ಲಿ ಕುಳ್ಳಿರಿಸಲು ಮಾಡಿದ ಸಾಹಸ ಅತ್ಯಂತ ದೊಡ್ಡದು ಮತ್ತು ಮುಖ್ಯವಾದದ್ದು. ಆಗ ದತ್ತುಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನನ್ನು ಬ್ರಿಟಿಷರು ಜಾರಿಗೊಳಿಸಿದ್ದರು. ಈ ಮೂಲಕ ಕಿತ್ತೂರಿನಲ್ಲಿ ಬ್ರಿಟಿಷ್ ಸರ್ಕಾರದ ಅಸ್ತಿತ್ವವನ್ನು ಧಿಕ್ಕರಿಸುವ ಎದೆಗಾರಿಕೆಯನ್ನು ರಾಯಣ್ಣ ತೋರಿದನು. ಸೈನ್ಯ ಸಹಾಯವಿಲ್ಲದ ರಾಯಣ್ಣ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಗೆರಿಲ್ಲಾಯುದ್ಧ ಅಥವಾ ಕೂಟಯುದ್ಧವನ್ನು ರೂಪಿಸಿ ಅವರನ್ನು ಬೆಚ್ಚಿಬೀಳಿಸಿದ. ಮೊದಲಿಗೆ, ಖಾನಾಪುರದಲ್ಲಿ ನೆಲೆಸಿದ್ದ ಮೇಜರ್ ಪಿಕ್ರಿಂಗನ ಸೈನ್ಯದ ಮೇಲೆ ದಾಳಿ ನಡೆಸಿದನು. ಅಲ್ಲಿನ ಸರ್ಕಾರಿ ಕಛೇರಿಯನ್ನು ಸುಟ್ಟುಹಾಕುವ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ತನ್ನ ಪ್ರತಿಭಟನೆಯನ್ನು ಈ ಮೂಲಕ ದಾಖಲಿಸಿದ. ಹಗಲು ಹೊತ್ತನ್ನು ಕಾಡಿನಲ್ಲಿ ಕಳೆದು, ರಾತ್ರಿವೇಳೆ ತನ್ನ ಅನೇಕ ಯೋಧರೊಡನೆ ಬ್ರಿಟಿಷರ ಬೀಡಿನ ಮೇಲೆ ಎರಗುತ್ತಿದ್ದ. ಈತನು ಗೆರಿಲ್ಲಾಯುದ್ಧ ತಂತ್ರದಲ್ಲಿ ಪಳಗಿದ್ದವನು. ಕಾಡಿನ ಮರಗಳ ಮೇಲೋ ಬಂಡೆಗಳ ಕೆಳಗೋ ಸಹಚರರೊಂದಿಗೆ ಅಡಗಿ ಕುಳಿತು, ಅನಿರೀಕ್ಷಿತವಾಗಿ ಶತ್ರುಗಳ ಮೇಲೆ ಎರಗಿ ಅವರನ್ನು ಕಕ್ಕಾಬಿಕ್ಕಿಯಾಗಿಸಿ ಮಣಿಸುವುದು ಈ ಯುದ್ಧದ ಮುಖ್ಯ ತಂತ್ರ. ರಾಯಣ್ಣನ ನಾಯಕತ್ವವನ್ನು ಒಪ್ಪಿ ಸರಿಸುಮಾರು ಇಡೀ ಕಿತ್ತೂರು ಸಂಸ್ಥಾನದ ಪ್ರಜೆಗಳೆಲ್ಲ ಇವನ ಬೆಂಗಾವಲಿಗರಾಗಿದ್ದರು. ಮೋಸದಿಂದ ಬ್ರಿಟಿಷರ ಪಕ್ಷವಹಿಸುವವರ ವಿಚಾರದಲ್ಲಿ ರಾಯಣ್ಣ ನಿರ್ದಾಕ್ಷಿಣ್ಯವಾಗಿರುತ್ತಿದ್ದ. ಇವನ ಕಾರ್ಯಗಳಿಂದ ಬೆಚ್ಚಿಬಿದ್ದ ಬ್ರಿಟಿಷ್ ಅಧಿಕಾರಿಗಳು ತಮ್ಮ ರಕ್ಷಣೆಗಾಗಿ ಸೈನ್ಯದ ನೆರವನ್ನು ಕೋರಬೇಕಾಯಿತು. ಖಾನಾಪುರದ ದಾಳಿಯ ನಂತರ ರಾಯಣ್ಣ ಸಂಪಗಾವದ ಮೇಲೆ ದಾಳಿ ಮಾಡಿದ. ಅಲ್ಲಿನ ಖಜಾನೆಯನ್ನು ಸೂರೆಮಾಡಿ, ಹಲವು ಹಳ್ಳಿಗಳ ಮೇಲೂ ಎರಗಿ ಧನಸಂಗ್ರಹ ಮಾಡಿ, ಬ್ರಿಟಿಷರ ನಿಗ್ರಹಕ್ಕೆ ಹಗಲಿರುಳೂ ಪ್ರಯತ್ನಿಸಿದ. ಬಲಾಢ್ಯ ಬ್ರಿಟಿಷ್ ಪಡೆಯನ್ನೇ ಚಿಂತೆಗೀಡುಮಾಡುವ ಸಿಂಹಸ್ವಪ್ನವಾಗಿ ಸಂಗೊಳ್ಳಿ ರಾಯಣ್ಣ ಬೆಳೆದಿದ್ದ. ಸರ್ಕಾರಿ ಅಧಿಕಾರಿಗಳು ಇವನನ್ನು ಸೆರೆಹಿಡಿಯಲು ತಿಣುಕಾಡಿದರೂ ಅವರಿಗೆ ಚಳ್ಳೇಹಣ್ಣು ತಿನ್ನಿಸಿ ನುಣುಚಿಕೊಳ್ಳುವುದರಲ್ಲಿ ನಿಪುಣನಾಗಿದ್ದ. ರಾಯಣ್ಣ ಬ್ರಿಟಿಷರ ವಿರುದ್ಧ ನಿರಂತರವಾಗಿ ತನ್ನದೇ ತಂತ್ರಗಾರಿಕೆಯಿಂದ ಹೋರಾಡುತ್ತಲೇ ಬಂದ. ನಾಲ್ಕು ತಿಂಗಳಕಾಲ ಸತತವಾಗಿ ಪ್ರತಿರೋಧ ತೋರಿದ ರಾಯಣ್ಣನನ್ನು ಯುದ್ಧಮಾಡಿ ಸೆರೆಹಿಡಿಯುವುದು ಅಸಾಧ್ಯವೆಂದು ಮನಗಂಡ ಬ್ರಿಟಿಷ್ ಸರ್ಕಾರ ಕಪಟ ಜಾಲವೊಡ್ಡಿ, ದೇಶದ್ರೋಹಿಗಳ ಸಹಾಯದಿಂದ ಸೆರೆಹಿಡಿದು ವಿಚಾರಣೆಗೊಳಪಡಿಸಿತು. ರಾಯಣ್ಣನನ್ನು ಬಂಧಿಸಿದ ನಂತರ ಆತನ ನಾಲ್ಕುನೂರು ಜನ ಸಹಚರರೂ ಶರಣಾಗತರಾದರು. ರಾಯಣ್ಣನು ತಾನು ನಾಡಿನ ಹಿತಕ್ಕಾಗಿ ಈ ಕಾರ್ಯಗಳನ್ನೆಲ್ಲಾ ಮಾಡಬೇಕಾಯಿತೆಂದು ಒಪ್ಪಿಕೊಂಡನು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಇವನನ್ನು ತಪ್ಪಿತಸ್ಥನೆಂದು ಘೋಷಿಸಿದ್ದರಿಂದ, ಮರಣದಂಡನೆಯನ್ನು ವಿಧಿಸಲಾಯಿತು. ಮರಣದಂಡನೆಗೊಳಗಪಟ್ಟ ರಾಯಣ್ಣನನ್ನು ಅವನ ಮುಖ್ಯ ಕಾರ್ಯಕ್ಷೇತ್ರವಾದ ನಂದಗಡದಲ್ಲೇ ಗಲ್ಲಿಗೇರಿಸಿದರೆ ಜನ ಪಾಠ ಕಲಿಯುವರೆಂಬ ಉದ್ದೇಶದಿಂದ ಅಲ್ಲಿಗೆ ಕರೆತಂದು ವಧಾಸ್ಥಾನಕ್ಕೆ ಕರೆದೊಯ್ಯುತ್ತಿದ್ದಾಗ ಒಂದು ವಿಶಿಷ್ಟವಾದ ಸ್ಥಳದಲ್ಲಿ ತನ್ನ ದೇಹವನ್ನು ಸಮಾಧಿ ಮಾಡಬೇಕೆಂದು ರಾಯಣ್ಣನೇ ಸ್ಥಳವನ್ನು ತೋರಿಸಿದ್ದನಂತೆ. ೨೬ ಜನವರಿ ೧೮೩೧ ರಲ್ಲಿ ರಾಯಣ್ಣನನ್ನು ಗಲ್ಲಿಗೇರಿಸಿ, ಆತ ಬಯಸಿದಲ್ಲೇ ಸಮಾಧಿ ಮಾಡಲಾಯಿತು. ಅಲ್ಲಿ ಒಂದು ಆಲದಮರ ಬೆಳೆದಿದೆ. ರಾಯಣ್ಣನಿಗೊಂದು ಗುಡಿಯನ್ನೂ ಜನರು ಕಟ್ಟಿದ್ದಾರೆ. ರಾಯಣ್ಣನ ಸಮಾಧಿಯು ಈಗ ಭಕ್ತಿ ಗೌರವಗಳುಳ್ಳ ಜನರ ಪಾಲಿಗೆ ವೀರಗುಡಿಯ ರಾಯಣ್ಣನ ಗದ್ದುಗೆಯಾಗಿದೆ. ರಾಯಣ್ಣನ ನೆನಪು ಹಾಡುವ ಹಾಡುಗಳಲ್ಲಿ, ಲಾವಣಿಗಳಲ್ಲಿ ಹಸಿರಾಗಿ ಉಳಿದಿದೆ. ಅವನ ಧೀರಕೃತ್ಯಗಳು, ಶೌರ್ಯ ಸಾಧನೆಗಳು, ಚತುರ ಚಲನವಲನಗಳು, ವ್ಯೂಹಗಳು ಇವಕ್ಕೂ ಮಿಗಿಲಾಗಿ ಕಿತ್ತೂರಿನ ಸ್ವಾತಂತ್ರ್ಯ ಸಾಧನೆಯ ಘನೋದ್ಧಾರಕ್ಕಾಗಿ ಎಡೆಬಿಡದೆ ನಡೆಸಿದ ಪ್ರಯತ್ನಗಳು ಇವುಗಳ ಕಥೆ ಇಂದಿಗೂ ನಾಡಿನ ಜನರ ಕಣ್ಣಲ್ಲಿ ನೀರೂರಿಸಿ, ಎಲ್ಲರಲ್ಲೂ ದೇಶಪ್ರೇಮವನ್ನು ಉಕ್ಕಿಸುತ್ತಲೇ ಇವೆ. ಅಲ್ಲದೆ ಆತನ ಜನ್ಮದಿನ (ಆಗಸ್ಟ್ ೧೫ ಸ್ವಾತಂತ್ರ್ಯೋತ್ಸವ) ಮತ್ತು ಮರಣದಿನ (ಜನವರಿ ೨೬ ಗಣರಾಜ್ಯೋತ್ಸವ) ಗಳೆರಡೂ ನಮ್ಮ ರಾಷ್ಟ್ರೀಯ ಹಬ್ಬಗಳಾಗಿರುವುದೂ ರಾಯಣ್ಣನ ನೆನಪನ್ನು ದೇಶಭಕ್ತಿಯೊಂದಿಗೆ ಸ್ಮರಣೀಯವಾಗಿಸಿದೆ. ಇದೊಂದು ವಿಶೇಷಕರವಾದ ಸಂಗತಿ. **ಕೌಶಲ :** ಬರೆಯುವುದು. **ಸಾಮರ್ಥ್ಯ :** ಸರಳ ಸಾಂದರ್ಭಿಕ ಭಾಷಾಂಶ ನಿಯಮಗಳನ್ನು ಅರ್ಥಮಾಡಿಕೊಂಡು ಸೂಕ್ತ ಚಿಹ್ನೆಗಳನ್ನು ಬಳಸಿ ವಾಕ್ಯಗಳನ್ನು ಬರೆಯುವುದು.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಸಂಗೊಳ್ಳಿ ರಾಯಣ್ಣ ಯಾವಾಗ, ಎಲ್ಲಿ ಜನಿಸಿದನು?

    Answer

    ಸಂಗೊಳ್ಳಿ ರಾಯಣ್ಣನು ೧೫ ಆಗಸ್ಟ್ ೧೭೯೮ ರಂದು ಸಂಗೊಳ್ಳಿಯಲ್ಲಿ ಜನಿಸಿದನು.

  2. ೨. ಸಂಗೊಳ್ಳಿ ರಾಯಣ್ಣನ ತಂದೆ-ತಾಯಿಗಳು ಯಾರು?

    Answer

    ಸಂಗೊಳ್ಳಿ ರಾಯಣ್ಣನ ತಂದೆ ಭರಮಪ್ಪ ಮತ್ತು ತಾಯಿ ಶ್ರೀಮತಿ ಕೆಂಚವ್ವ.

  3. ೩. ಸಂಗೊಳ್ಳಿ ರಾಯಣ್ಣನು ಯಾವ ಸಂಸ್ಥಾನದ ಬಿಡುಗಡೆಗಾಗಿ ಹೋರಾಡಿದನು?

    Answer

    ಸಂಗೊಳ್ಳಿ ರಾಯಣ್ಣನು ಕಿತ್ತೂರು ಸಂಸ್ಥಾನದ ಬಿಡುಗಡೆಗಾಗಿ ಹೋರಾಡಿದನು.

  4. ೪. ಕಿತ್ತೂರಿನ ರಾಣಿಚೆನ್ನಮ್ಮನ ದತ್ತು ಪುತ್ರನ ಹೆಸರೇನು?

    Answer

    ಕಿತ್ತೂರಿನ ರಾಣಿ ಚೆನ್ನಮ್ಮನ ದತ್ತು ಪುತ್ರನ ಹೆಸರು ಶಿವಲಿಂಗಪ್ಪ.

  5. ೫. ಸಂಗೊಳ್ಳಿ ರಾಯಣ್ಣನನ್ನು ಯಾವಾಗ ಗಲ್ಲಿಗೇರಿಸಲಾಯಿತು?

    Answer

    ಸಂಗೊಳ್ಳಿ ರಾಯಣ್ಣನನ್ನು ೨೬ ಜನವರಿ ೧೮೩೧ ರಲ್ಲಿ ಗಲ್ಲಿಗೇರಿಸಲಾಯಿತು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಯಾವುದು ಆದ್ಯ ಕರ್ತವ್ಯವೆಂಬುದನ್ನು ಸಂಗೊಳ್ಳಿ ರಾಯಣ್ಣ ತೋರಿಸಿಕೊಟ್ಟಿದ್ದಾನೆ?

    Answer

    ನಾಡ ಉಳಿವಿಗಾಗಿ ಹೋರಾಡುವುದು ಸಾಮಾನ್ಯ ಜನತೆಯ ಆದ್ಯ ಕರ್ತವ್ಯವೆಂದು ಸಂಗೊಳ್ಳಿ ರಾಯಣ್ಣ ತೋರಿಸಿಕೊಟ್ಟನು. ಅವನು ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಈ ತತ್ವವನ್ನು ಸಾಬೀತುಪಡಿಸಿದನು.

  2. ೨. 'ಸಾವಿರ ಒಂಟೆ ಸರದಾರ' ಎಂಬ ಬಿರುದು ಯಾರಿಗಿತ್ತು? ಏಕೆ?

    Answer

    ಈ ಬಿರುದು ರಾಯಣ್ಣನ ತಾತ ರಾಗಪ್ಪನವರಿಗಿತ್ತು. ಚಿಣಗಿ ಕೋವಾಡ ಯುದ್ಧದಲ್ಲಿ ಅವರು ತೋರಿದ ಅಪ್ರತಿಮ ಶೌರ್ಯದಿಂದಾಗಿ ಅವರಿಗೆ ಈ ಬಿರುದು ದೊರಕಿತ್ತು.

  3. ೩. ಗೆರಿಲ್ಲಾ ಯುದ್ಧ ಎಂದರೇನು?

    Answer

    ಗೆರಿಲ್ಲಾ ಯುದ್ಧವೆಂದರೆ ಕಾಡಿನಲ್ಲಿ ಅಡಗಿಕೊಂಡು ಶತ್ರುಗಳ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡುವ ಯುದ್ಧತಂತ್ರ. ಈ ತಂತ್ರದಲ್ಲಿ ಸೈನಿಕರು ಮರಗಳ ಮೇಲೆ ಅಥವಾ ಬಂಡೆಗಳ ಕೆಳಗೆ ಅಡಗಿದ್ದು, ಇದ್ದಕ್ಕಿದ್ದಂತೆ ಎರಗಿ ಶತ್ರುಗಳನ್ನು ಸೋಲಿಸುತ್ತಾರೆ.

  4. ೪. ಸಂಗೊಳ್ಳಿ ರಾಯಣ್ಣನ ಅತ್ಯಂತ ದೊಡ್ಡ ಸಾಹಸ ಯಾವುದು?

    Answer

    ರಾಣಿ ಚೆನ್ನಮ್ಮನ ದತ್ತುಪುತ್ರ ಶಿವಲಿಂಗಪ್ಪನನ್ನು ಕಿತ್ತೂರಿನ ಸಿಂಹಾಸನದಲ್ಲಿ ಕುಳ್ಳಿರಿಸಲು ಮಾಡಿದ ಸಾಹಸವೇ ಸಂಗೊಳ್ಳಿ ರಾಯಣ್ಣನ ಅತ್ಯಂತ ದೊಡ್ಡ ಸಾಹಸವಾಗಿದೆ. ಆಗ ಬ್ರಿಟಿಷರು ದತ್ತುಮಕ್ಕಳಿಗೆ ಹಕ್ಕಿಲ್ಲವೆಂದು ಕಾನೂನು ಜಾರಿಗೊಳಿಸಿದ್ದರೂ ಈ ಸಾಹಸ ಮಾಡಿದನು.

  5. ೫. ಬ್ರಿಟಿಷ್ ಆಡಳಿತ ವಿರುದ್ಧ ತನ್ನ ಪ್ರತಿಭಟನೆಯನ್ನು ರಾಯಣ್ಣ ದಾಖಲಿಸಿದ್ದು ಹೇಗೆ?

    Answer

    ರಾಯಣ್ಣನು ಖಾನಾಪುರದಲ್ಲಿದ್ದ ಮೇಜರ್ ಪಿಕ್ರಿಂಗನ ಸೈನ್ಯದ ಮೇಲೆ ದಾಳಿ ನಡೆಸಿದನು. ಅಲ್ಲಿನ ಸರ್ಕಾರಿ ಕಛೇರಿಯನ್ನು ಸುಟ್ಟುಹಾಕುವ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ತನ್ನ ಪ್ರತಿಭಟನೆಯನ್ನು ದಾಖಲಿಸಿದನು.

  6. ೬. ನ್ಯಾಯಾಲಯದಲ್ಲಿ ರಾಯಣ್ಣ ತನ್ನ ಕಾರ್ಯಗಳ ಬಗ್ಗೆ ಯಾವ ಸಮರ್ಥನೆ ನೀಡಿದನು?

    Answer

    ನ್ಯಾಯಾಲಯದಲ್ಲಿ ರಾಯಣ್ಣನು ತಾನು ನಾಡಿನ ಹಿತಕ್ಕಾಗಿ ಈ ಕಾರ್ಯಗಳನ್ನೆಲ್ಲಾ ಮಾಡಬೇಕಾಯಿತೆಂದು ಸಮರ್ಥನೆ ನೀಡಿದನು. ಅವನು ಕಿತ್ತೂರಿನ ಸ್ವಾತಂತ್ರ್ಯ ಸಾಧನೆಯೇ ತನ್ನ ಗುರಿಯಾಗಿತ್ತೆಂದು ಒಪ್ಪಿಕೊಂಡನು.

ಇ. ಕೆಳಗಿನ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಸಂಗೊಳ್ಳಿ ರಾಯಣ್ಣನ ನೆನಪು ನಾಡಿನ ಜನರಲ್ಲಿ ಉಳಿದಿರಲು ಕಾರಣಗಳನ್ನು ವಿವರಿಸಿ.

    Answer

    ಸಂಗೊಳ್ಳಿ ರಾಯಣ್ಣನ ನೆನಪು ನಾಡಿನ ಜನರಲ್ಲಿ ಹಲವು ಕಾರಣಗಳಿಂದ ಉಳಿದಿದೆ. ಮೊದಲನೆಯದಾಗಿ, ಅವನು ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಾಗ್ರಣಿ. ಎರಡನೆಯದಾಗಿ, ಅವನ ಧೀರಕೃತ್ಯಗಳು ಮತ್ತು ಶೌರ್ಯ ಸಾಧನೆಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಮೂರನೆಯದಾಗಿ, ಅವನು ಬಳಸಿದ ಗೆರಿಲ್ಲಾ ಯುದ್ಧತಂತ್ರಗಳು ಜನಪ್ರಿಯವಾಗಿವೆ. ನಾಲ್ಕನೆಯದಾಗಿ, ಅವನ ಸಮಾಧಿಯು ವೀರಗುಡಿಯ ರಾಯಣ್ಣನ ಗದ್ದುಗೆಯಾಗಿ ಪೂಜಿಸಲ್ಪಡುತ್ತಿದೆ. ಐದನೆಯದಾಗಿ, ಅವನ ಬಗ್ಗೆ ಹಾಡುವ ಲಾವಣಿಗಳು ಮತ್ತು ಹಾಡುಗಳು ಅವನ ನೆನಪನ್ನು ಹಸಿರಾಗಿಟ್ಟಿವೆ. ಆರನೆಯದಾಗಿ, ಅವನ ಜನ್ಮ ಮತ್ತು ಮರಣದಿನಗಳು ರಾಷ್ಟ್ರೀಯ ಹಬ್ಬಗಳೊಂದಿಗೆ ಸೇರಿರುವುದು ವಿಶೇಷ ಸಂಗತಿಯಾಗಿದೆ.

  2. ೨. ಸಂಗೊಳ್ಳಿ ರಾಯಣ್ಣನ ಯುದ್ಧತಂತ್ರಗಳನ್ನು ನಿಮ್ಮ ಮಾತುಗಳಲ್ಲಿ ವಿವರಿಸಿ.

    Answer

    ಸಂಗೊಳ್ಳಿ ರಾಯಣ್ಣನು ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧತಂತ್ರವನ್ನು ಬಳಸಿದನು. ಅವನು ಹಗಲು ಕಾಡಿನಲ್ಲಿ ಅಡಗಿಕೊಂಡಿದ್ದು, ರಾತ್ರಿ ವೇಳೆ ಶತ್ರುಗಳ ಮೇಲೆ ದಾಳಿ ನಡೆಸುತ್ತಿದ್ದನು. ಮರಗಳ ಮೇಲೆ ಮತ್ತು ಬಂಡೆಗಳ ಕೆಳಗೆ ಅಡಗಿಕೊಂಡು ಅನಿರೀಕ್ಷಿತವಾಗಿ ಎರಗಿ ಶತ್ರುಗಳನ್ನು ಸೋಲಿಸುತ್ತಿದ್ದನು. ಮೊದಲು ಖಾನಾಪುರದಲ್ಲಿದ್ದ ಮೇಜರ್ ಪಿಕ್ರಿಂಗನ ಸೈನ್ಯದ ಮೇಲೆ ದಾಳಿ ಮಾಡಿ ಸರ್ಕಾರಿ ಕಛೇರಿಯನ್ನು ಸುಟ್ಟುಹಾಕಿದನು. ನಂತರ ಸಂಪಗಾವದ ಮೇಲೆ ದಾಳಿ ಮಾಡಿ ಖಜಾನೆಯನ್ನು ಸೂರೆಮಾಡಿದನು. ಹಲವು ಹಳ್ಳಿಗಳ ಮೇಲೆ ದಾಳಿ ಮಾಡಿ ಧನಸಂಗ್ರಹ ಮಾಡಿ ಬ್ರಿಟಿಷರನ್ನು ಎದುರಿಸಿದನು.

ಈ. ಕೊಟ್ಟಿರುವ ವಾಕ್ಯಗಳನ್ನು ಸಂದರ್ಭಸಹಿತ ವಿವರಿಸಿ.

  1. ೧. ನಾಡ ಉಳಿವಿಗಾಗಿ ಹೋರಾಡುವುದು ಕೇವಲ ರಾಜರ ಕೆಲಸವಲ್ಲ.

    Answer

    ಈ ವಾಕ್ಯವು ಸಂಗೊಳ್ಳಿ ರಾಯಣ್ಣನ ತತ್ವವನ್ನು ಸೂಚಿಸುತ್ತದೆ. ಅವನು ಸಾಮಾನ್ಯ ಪ್ರಜೆಯಾಗಿದ್ದರೂ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ನಾಡ ಉಳಿವಿಗಾಗಿ ಹೋರಾಡುವುದು ಎಲ್ಲರ ಆದ್ಯ ಕರ್ತವ್ಯವೆಂದು ತೋರಿಸಿಕೊಟ್ಟನು.

  2. ೨. ಆಗಸ್ಟ್ ಹದಿನೈದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಹಬ್ಬದ ದಿನ.

    Answer

    ಸಂಗೊಳ್ಳಿ ರಾಯಣ್ಣನ ಜನ್ಮದಿನ ಆಗಸ್ಟ್ ೧೫, ಇದು ಭಾರತದ ಸ್ವಾತಂತ್ರ್ಯ ದಿನವೂ ಹೌದು. ಈ ವಿಶೇಷ ಸಂಗತಿಯು ರಾಯಣ್ಣನ ನೆನಪನ್ನು ದೇಶಭಕ್ತಿಯೊಂದಿಗೆ ಜೋಡಿಸುತ್ತದೆ.

  3. ೩. ಈತನು ಗೆರಿಲ್ಲಾ ಯುದ್ಧ ತಂತ್ರದಲ್ಲಿ ಪಳಗಿದ್ದವನು.

    Answer

    ಸಂಗೊಳ್ಳಿ ರಾಯಣ್ಣನು ಗೆರಿಲ್ಲಾ ಯುದ್ಧದಲ್ಲಿ ನಿಪುಣನಾಗಿದ್ದನು. ಅವನು ಕಾಡಿನಲ್ಲಿ ಅಡಗಿಕೊಂಡು ರಾತ್ರಿ ವೇಳೆ ಶತ್ರುಗಳ ಮೇಲೆ ದಾಳಿ ಮಾಡುವ ಈ ತಂತ್ರವನ್ನು ಚೆನ್ನಾಗಿ ಬಳಸುತ್ತಿದ್ದನು.

  4. ೪. ಎಲ್ಲರಲ್ಲೂ ದೇಶಪ್ರೇಮವನ್ನು ಉಕ್ಕಿಸುತ್ತಲೇ ಇವೆ.

    Answer

    ರಾಯಣ್ಣನ ಧೀರಕೃತ್ಯಗಳು, ಶೌರ್ಯ ಸಾಧನೆಗಳು ಮತ್ತು ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಅವನು ನಡೆಸಿದ ಪ್ರಯತ್ನಗಳ ಕಥೆಗಳು ಇಂದಿಗೂ ಜನರಲ್ಲಿ ದೇಶಪ್ರೇಮವನ್ನು ಹೆಚ್ಚಿಸುತ್ತಿವೆ.

Interactive Lab