ಅಮ್ಮ ನಂಗೆ ಪುಟ್ಟದೊಂದು ಗೊಂಬೆ ತಂದ್ಕೊಡೆ
ಗೊಂಬೆ ಜೊತೆ ಆಡುವೆ, ಆಡಿ ಪಾಡಿ ನಲಿಯುವೆ
ಗೊಂಬೆಯೆಂದರೆ ಮಕ್ಕಳಿಗೆ ಬಲು ಪ್ರೀತಿ. ಚಿಕ್ಕಮಕ್ಕಳಿಗೆ ಪ್ರಮುಖ ಆಸ್ತಿ. ದೊಡ್ಡವರೂ ಸಹ ಗೊಂಬೆಗಳನ್ನು ಆಡಿಸಿ ನಲಿಯುತ್ತಾರೆ. ಹಠ ಮಾಡಿ ಅಳುತ್ತಿದ್ದ ಮಕ್ಕಳಿಗೆ ಗೊಂಬೆ ಕೊಟ್ಟರೆ ಸಾಕು ಗಪ್‌ಚುಪ್. ಗೊಂಬೆಗಳು ಮಕ್ಕಳ ಕೈಯಲ್ಲಿ ಮಕ್ಕಳಾಗಿ ಬಿಡುತ್ತವೆ.
ಗೊಂಬೆ ಕಂಡರೆ ಸಾಕು, ಮಕ್ಕಳ ಮುಖದಲ್ಲಿ ನಗು. ಚಿಕ್ಕ ಮಕ್ಕಳು ಎತ್ತಿ, ಬಿಸಾಡಿ, ನೂಕಿ, ಎಳೆದು, ಜಗ್ಗಿ ನಲಿಯುತ್ತಾರೆ. ಸ್ವಲ್ಪ ಸ್ವಲ್ಪ ದೊಡ್ಡವರಾದಂತೆ ಗೊಂಬೆಗಳನ್ನು ಮುದ್ದಿಸುತ್ತಾರೆ. ತಾಯಿ ತಮ್ಮನ್ನೆಲ್ಲ ಹೇಗೆ ಪೋಷಣೆ ಮಾಡುತ್ತಾಳೋ ಹಾಗೆಯೇ ಮಕ್ಕಳು ಗೊಂಬೆಗಳನ್ನು ನೋಡಿಕೊಳ್ಳುತ್ತಾರೆ. ಅವುಗಳಿಗೆ ತಿಂಡಿ ತಿನ್ನಿಸುವುದು, ಸ್ನಾನ ಮಾಡಿಸುವುದು, ಮಲಗಿಸಿ ಲಾಲಿ ಹಾಡುವುದು, ಬಟ್ಟೆ ತೊಡಿಸುವುದು, ಶೃಂಗಾರ ಮಾಡುವುದು-ಹೀಗೆ ಎಲ್ಲವನ್ನೂ ಪ್ರೀತಿಯಿಂದ ಮಾಡುತ್ತಾರೆ.
ಮಕ್ಕಳ ಕೈಯಲ್ಲಿ ಗೊಂಬೆಗಳಿಗೆ ಜೀವ ಬರುತ್ತದೆ. ಯಾರಾದರೂ ತಮ್ಮ ಗೊಂಬೆಗಳಿಗೆ ಕೀಟಲೆ ಮಾಡಿದರೆ ಮಕ್ಕಳು ಸುಮ್ಮನಿರುವುದಿಲ್ಲ. ಗೊಂಬೆಗೆ ನೋವಾಯಿತೆಂದು ಎತ್ತಿ ಮುದ್ದಾಡಿ ಸಮಾಧಾನ ಮಾಡುತ್ತಾರೆ. ಕೈಜಾರಿದ ಗೊಂಬೆ ಕೆಳಕ್ಕೆ ಬಿದ್ದರಂತೂ ಮಕ್ಕಳು ಅತ್ತೇ ಬಿಡುತ್ತಾರೆ! ಅದನ್ನು ಎತ್ತಿಕೊಂಡು ಹಾಡು ಹೇಳಿ ಸಮಾಧಾನ ಮಾಡುತ್ತಾರೆ.
ಅಳಬೇಡ ಅಳಬೇಡ ಗೊಂಬವ್ವ ನೀನು
ಜರತಾರಿ ಲಂಗ ಕೊಡಿಸುವೆನು ನಾನು
ಗೊಂಬೆಗಳನ್ನು ವಿವಿಧ ವಸ್ತುಗಳಿಂದ ತಯಾರಿಸುತ್ತಾರೆ. ಮರ, ಮಣ್ಣು, ಪ್ಲಾಸ್ಟಿಕ್, ರಬ್ಬರ್, ಪಿಂಗಾಣಿ, ಬಟ್ಟೆ, ಹತ್ತಿ, ಬಿದಿರು, ಕಾಗದಗಳಿಂದ ಗೊಂಬೆಗಳು ಸಿದ್ಧವಾಗುತ್ತವೆ. ಇತ್ತೀಚೆಗೆ ಗೊಂಬೆಗಳು ವಿವಿಧ ರೂಪಗಳನ್ನು ಪಡೆದಿವೆ. ಮನುಷ್ಯ, ಪ್ರಾಣಿ, ಪಕ್ಷಿ, ಕೀಟ ಎಲ್ಲ ರೂಪಗಳಲ್ಲೂ ಜನ್ಮತಾಳಿವೆ. ವಿವಿಧ ವಸ್ತುಗಳಲ್ಲೂ ಗೊಂಬೆಯ ರೂಪ! ಗೊಂಬೆಯ ಪೆನ್ಸಿಲ್, ಗೊಂಬೆಯ ಪೆನ್ನು, ಗೊಂಬೆಯ ತಿಂಡಿ-ತಿನಿಸುಗಳು ಹೀಗೆ ಎಲ್ಲದರಲ್ಲೂ ಗೊಂಬೆಗಳು ಕಾಣಸಿಗುತ್ತವೆ.
ಜಾತ್ರೆ ಉತ್ಸವಗಳಲ್ಲಿ ಗೊಂಬೆಗಳದ್ದೇ ಆಕರ್ಷಣೆ. ವೈವಿಧ್ಯಮಯ ಗೊಂಬೆಗಳು ಅಂಗಡಿಗಳಲ್ಲಿ ಕೈ ಬೀಸಿ ಕರೆಯುತ್ತವೆ. ಉತ್ಸವಗಳಲ್ಲಿ ಕುಣಿಯುವ ಗೊಂಬೆಗಳನ್ನು ನೋಡುವುದು ಎಲ್ಲಿಲ್ಲದ ಆನಂದ! ಅವುಗಳನ್ನು ನೋಡಿದರೆ ಹರ್ಷ-ನಗು ಒಟ್ಟಿಗೇ ಬರುತ್ತವೆ. ಜೋಕರ್ ಗೊಂಬೆಗಳಂತೂ ತಾನೂ ನಗುತ್ತ ಎಲ್ಲರನ್ನೂ ನಗಿಸುತ್ತವೆ.
ನಮ್ಮ ನಾಡಹಬ್ಬ ದಸರಾದಲ್ಲಿ ಮನೆ-ಮನೆಗಳಲ್ಲೂ ಗೊಂಬೆಗಳನ್ನು ಅಲಂಕರಿಸುತ್ತಾರೆ. ಅಲಂಕರಿಸಿದ ನೂರಾರು ಗೊಂಬೆಗಳನ್ನು ಒಟ್ಟಿಗೆ ನೋಡುವುದೇ ಒಂದು ಹಬ್ಬ! ಅವುಗಳ ಶೃಂಗಾರ, ಜೋಡಣೆ ಅಲಂಕಾರ ಬಲು ಸುಂದರ. ಸ್ಪ್ರಿಂಗ್ ಗೊಂಬೆಗಳು, ಕೀ ಗೊಂಬೆಗಳು, ಕೀಲು ಗೊಂಬೆಗಳು, ಯಂತ್ರ ಗೊಂಬೆಗಳು, ಸಣ್ಣ ದೊಡ್ಡ ವಿವಿಧ ರಂಗಿನ ಗೊಂಬೆಗಳು, ವಿವಿಧ ಆಟಗಳ ಮೂಲಕ ಸಂತೋಷಕೊಡುತ್ತವೆ. ನಿಜವಾಗಿ ಜೀವವಿದ್ದವುಗಳಂತೆ ವರ್ತಿಸುತ್ತವೆ.
ಎಲ್ಲರ ಮನೆಗಳಲ್ಲೂ ಗೊಂಬೆಗಳು ಸ್ಥಾನ ಪಡೆದಿವೆ. ಗೊಂಬೆಗಳು ಮನುಷ್ಯನಿಗೆ ಅನೇಕ ರೀತಿಯಲ್ಲಿ ಜೀವನ ಪಾಠವನ್ನೂ ಹೇಳುತ್ತವೆ! ಗೊಂಬೆಗಳು ಯಾರ ಹೊಗಳಿಕೆಗೂ ತೆಗಳಿಕೆಗೂ ಜಗ್ಗುವುದಿಲ್ಲ.
ಆಡಿಸಿ ನೋಡು ಬೀಳಿಸಿ ನೋಡು ಉರುಳಿಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯಬಾಗದು