CRECT Education

Class 5 Kannada Lesson 4: Peacock | KTBS Savi Kannada – Practice & Quiz

Description

Practice your Kannada with questions from Lesson 4: ನವಿಲು (Peacock). How many can you get right?

ಗದ್ಯ (prose) · ಸಂಪಾದಿತ (Edited)

ಪಠ್ಯFull text

ಜುಳುಜುಳು ಹರಿಯುವ ನದಿ. ಹಚ್ಚ ಹಸಿರಿನ ಮೈದಾನ. ಕರಿಮೋಡದ ಅಲೆಗಳು. ತಣ್ಣನೆಯ ಗಾಳಿ. ಆಕಾಶದಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು. ಜಿನುಗುವ ಸೋನೆ ಮಳೆ. ಆಗ ಹಕ್ಕಿಯೊಂದು ರೆಕ್ಕೆ ಬಿಚ್ಚಿ ಕುಣಿಯಲು ಆರಂಭಿಸಿತು. ಉದ್ದವಾದ ಗರಿ ಕೆದರಿತು. ಅದು ಬಣ್ಣ ಬಣ್ಣದ ಬೀಸಣಿಕೆಯಂತೆ ಕಾಣುತ್ತಿದೆ. ಕತ್ತನ್ನು ಅತ್ತ ಇತ್ತ ತಿರುಗಿಸುತ್ತಿದೆ. ಅದರ ಗರಿಗಳಲ್ಲಿ ಸಾವಿರಾರು ಕಣ್ಣುಗಳು. ಅವು ಫಳ ಫಳ ಹೊಳೆಯುತ್ತಿವೆ. ಅದು ಥಕ ಥೈ ಎಂದು ಕುಣಿಯುತ್ತಿದೆ. ಅದರ ಸುಂದರತೆಯನ್ನು ರಂಗು ರಂಗಿನ ತುರಾಯಿ ಹೆಚ್ಚಿಸಿದೆ. ಯಾವುದೀ ಹಕ್ಕಿ? ಅದೇ ನವಿಲು ಅಲ್ಲವೇ? ನವಿಲನ್ನು ಮಯೂರ, ಶಿಖಿ, ಸಹಸ್ರಾಕ್ಷ ಎಂದು ಕರೆಯುತ್ತಾರೆ. ನವಿಲುಗರಿಯಲ್ಲಿ ಹೊಳಪುಳ್ಳ ಕಣ್ಣಿದೆ. ಅದು ಹಸಿರು ಮಿಶ್ರಿತ ನೀಲಿ ಬಣ್ಣದಿಂದ ಸಿಂಗಾರಗೊಂಡಿದೆ. ಅದರ ಸುತ್ತ ತಾಮ್ರಮಿಶ್ರಿತ ಬಂಗಾರ ವರ್ಣದ ಉಂಗುರ ಚಮಕಿಸುತ್ತಿದೆ. ಈ ಗರಿಯ ನೋಟ ಮನಸ್ಸನ್ನು ಸೆಳೆಯುತ್ತಿದೆ. ಆದ್ದರಿಂದ ನವಿಲನ್ನು ಸಾವಿರ ಕಣ್ಣುಳ್ಳ ಸಹಸ್ರಾಕ್ಷ ಎಂದು ಕರೆಯುತ್ತಾರೆ. ಕವಿಗಳು ಅದರ ರೂಪ ಲಾವಣ್ಯಕ್ಕೆ ಮನಸೋತಿದ್ದಾರೆ. ಅನೇಕರು ಕವಿತೆ ರಚಿಸಿದ್ದಾರೆ. ಇದು ಸೌಂದರ್ಯದ ಸಂಕೇತ. ಆದ ಕಾರಣವೇ ಇದು 'ರಾಷ್ಟ್ರಪಕ್ಷಿ' ಎಂಬ ಗೌರವ ಹೊಂದಿದೆ. ಇದನ್ನು ಹಿಂಸಿಸುವುದು, ಕೊಲ್ಲುವುದು ಅಪರಾಧವಾಗಿದೆ. ನವಿಲು ಷಣ್ಮುಖನ ವಾಹನ. ನವಿಲು ಗರಿ ಮುರಳಿ ಮೋಹನನ ಜುಟ್ಟಿನ ಅಲಂಕಾರವೂ ಹೌದು. ನವಿಲಿನ ನರ್ತನ ಕಂಡ ಕಲಾವಿದರು, ಮಯೂರ ನಾಟ್ಯವೆಂಬ ಕಲಾಪ್ರಕಾರವನ್ನೇ ಸೃಷ್ಟಿಸಿದ್ದಾರೆ. ನವಿಲಿನ ಕುಣಿತ ನಯನ ಮನೋಹರ. ಹೆಣ್ಣಿಗಿಲ್ಲದ ರೂಪ ಗಂಡಿಗಿದೆ. ಇದೇ ನವಿಲಿನ ವಿಶೇಷ! ಹೆಣ್ಣು ನವಿಲಿನ ಪುಕ್ಕಗಳು ಚಿಕ್ಕವು. ನವಿಲು ಜಗತ್ತಿನ ಎಲ್ಲ ಪ್ರದೇಶಗಳಲ್ಲಿ ವಾಸಿಸುತ್ತದೆ. ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ನವಿಲಿನ ಬಣ್ಣ ನೀಲಿ ಛಾಯೆ. ಜಾವ ಮತ್ತು ಮಯನ್ಮಾರ್ ದೇಶಗಳಲ್ಲಿ ಹಸಿರು ಛಾಯೆ ಹೊಂದಿರುತ್ತವೆ. ಇವು ಹಿಂಡು ಹಿಂಡಾಗಿ ವಾಸಿಸುತ್ತವೆ. ಇವು ೧೫ ವರ್ಷ ಜೀವಿಸಬಲ್ಲವು. ಗುಡ್ಡದ ಹುಲ್ಲುಗಾವಲುಗಳಲ್ಲಿ, ನದಿ, ಕೆರೆ, ಹೊಳೆ, ಹಳ್ಳ ಇರುವಲ್ಲಿ ಇವು ಹೆಚ್ಚು ಇರುತ್ತವೆ. ನವಿಲು ನೋಡಲು ಎಷ್ಟು ಸುಂದರವೋ ಅಷ್ಟೇ ಶಿಸ್ತಿನ ಸಿಪಾಯಿ; ಉಪಕಾರಿಯೂ ಹೌದು. ಇದು ರೈತ ಮಿತ್ರ. ಬೆಳೆದ ಫಸಲಿಗೆ ಕೀಟಬಾಧೆ ತಗುಲದಂತೆ ಬೆಳೆಗಳ ರಕ್ಷಣೆ ಮಾಡುತ್ತದೆ. ಕೀಟಗಳನ್ನು ತಿನ್ನುತ್ತದೆ. ನವಿಲು ಇರುವ ಪ್ರದೇಶದಲ್ಲಿ ಹಾವುಗಳು ಸುಳಿಯಲಾರವು. ****

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಅಲೆ – ತೆರೆ

  2. ಕತ್ತು – ಕೊರಳು

  3. ಕೊಂಕು – ಡೊಂಕು

  4. ಛಾಯೆ – ನೆರಳು

  5. ತುರಾಯಿ – ಹಕ್ಕಿಗಳ ಜುಟ್ಟು

  6. ನಯನ – ಕಣ್ಣು; ಅಕ್ಷಿ; ನೇತ್ರ.

  7. ಆವಾಸ – ನೆಲೆ; ಮನೆ.

  8. ಕಮಾನು – ಅರ್ಧಚಂದ್ರಾಕೃತಿಯ ರಚನೆ.

  9. ಚಮಕಿಸು – ಹೊಳಪು

  10. ಜಿನುಗು – ತೊಟ್ಟಿಕ್ಕು

  11. ನರ್ತನ – ಕುಣಿತ

  12. ಬಾಧೆ – ತೊಂದರೆ; ನೋವು; ಅಡ್ಡಿ.

  13. ಮನೋಹರ – ಸುಂದರ

  14. ಮುರಳಿ – ಕೊಳಲು

  15. ರಾಷ್ಟ್ರಪಕ್ಷಿ – ರಾಷ್ಟ್ರಗೌರವಕ್ಕೆ ಪಾತ್ರವಾದ ಪಕ್ಷಿ.

  16. ವರ್ಣ – ಬಣ್ಣ

  17. ಸಿಪಾಯಿ – ಸೈನಿಕ; ಯೋಧ.

  18. ಹಿಂಡು – ಗುಂಪು

  19. ಮುರಳಿ ಮೋಹನ – ಕೃಷ್ಣ.

  20. ಮೋಹನ – ಆಕರ್ಷಣೆ; ಸೆಳೆತ.

  21. ಲಾವಣ್ಯ – ಸೊಗಸು; ಒಯ್ಯಾರ.

  22. ಶಿಖಿ – ನವಿಲಿನ ತಲೆ ಮೇಲಿನ ಜುಟ್ಟು.

  23. ಸಹಸ್ರಾಕ್ಷ – ಸಾವಿರ ಕಣ್ಣು

  24. ಹುಲ್ಲುಗಾವಲು – ಹುಲ್ಲಿನ ಮೈದಾನ

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ನವಿಲಿನ ಕಣ್ಣುಗಳು ಹೇಗೆ ಹೊಳೆಯುತ್ತವೆ?

    Answer

    ನವಿಲಿನ ಕಣ್ಣುಗಳು ಫಳ ಫಳ ಎಂದು ಹೊಳೆಯುತ್ತವೆ.

  2. ೨. ನವಿಲು ಯಾವ ರೀತಿ ಕುಣಿಯುತ್ತದೆ?

    Answer

    ನವಿಲು ಥಕ ಥೈ ಎಂದು ಕುಣಿಯುತ್ತದೆ.

  3. ೩. ನವಿಲಿಗೆ ಇರುವ ಇತರ ಹೆಸರುಗಳಾವುವು?

    Answer

    ನವಿಲಿಗೆ ಮಯೂರ, ಶಿಖಿ, ಸಹಸ್ರಾಕ್ಷ ಎಂಬ ಇತರ ಹೆಸರುಗಳಿವೆ.

  4. ೪. ನವಿಲಿಗೆ ಭಾರತದಲ್ಲಿ ಯಾವ ಗೌರವ ಲಭಿಸಿದೆ?

    Answer

    ನವಿಲಿಗೆ ಭಾರತದಲ್ಲಿ 'ರಾಷ್ಟ್ರಪಕ್ಷಿ' ಎಂಬ ಗೌರವ ಲಭಿಸಿದೆ.

  5. ೫. ನವಿಲುಗರಿ ಯಾರ ಜುಟ್ಟಿನ ಅಲಂಕಾರವಾಗಿ ಬಳಕೆಯಾಗಿದೆ?

    Answer

    ನವಿಲುಗರಿ ಮುರಳಿ ಮೋಹನನ ಜುಟ್ಟಿನ ಅಲಂಕಾರವಾಗಿ ಬಳಕೆಯಾಗಿದೆ.

  6. ೬. ನೀಲಿ ಬಣ್ಣದ ನವಿಲುಗಳು ಯಾವ ದೇಶಗಳಲ್ಲಿ ಕಂಡುಬರುತ್ತವೆ?

    Answer

    ನೀಲಿ ಬಣ್ಣದ ನವಿಲುಗಳು ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ಕಂಡುಬರುತ್ತವೆ.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ನವಿಲು ಕುಣಿಯುವ ರೀತಿಯನ್ನು ವರ್ಣಿಸಿ.

    Answer

    ನವಿಲು ರೆಕ್ಕೆ ಬಿಚ್ಚಿ ಕುಣಿಯಲು ಆರಂಭಿಸುತ್ತದೆ. ಅದರ ಉದ್ದವಾದ ಗರಿ ಕೆದರಿ ಬಣ್ಣ ಬಣ್ಣದ ಬೀಸಣಿಕೆಯಂತೆ ಕಾಣುತ್ತದೆ. ಅದು ಕತ್ತನ್ನು ಅತ್ತ ಇತ್ತ ತಿರುಗಿಸುತ್ತಾ ಥಕ ಥೈ ಎಂದು ಕುಣಿಯುತ್ತದೆ.

  2. ೨. ನವಿಲಿನ ಗರಿಯ ವಿಶೇಷತೆಗಳೇನು?

    Answer

    ನವಿಲಿನ ಗರಿಯಲ್ಲಿ ಹೊಳಪುಳ್ಳ ಕಣ್ಣಿದೆ. ಅದು ಹಸಿರು ಮಿಶ್ರಿತ ನೀಲಿ ಬಣ್ಣದಿಂದ ಸಿಂಗಾರಗೊಂಡಿದೆ. ಅದರ ಸುತ್ತ ತಾಮ್ರಮಿಶ್ರಿತ ಬಂಗಾರ ವರ್ಣದ ಉಂಗುರ ಚಮಕಿಸುತ್ತದೆ.

  3. ೩. ನವಿಲನ್ನು ಸಹಸ್ರಾಕ್ಷ ಎಂದು ಏಕೆ ಕರೆಯುವರು?

    Answer

    ನವಿಲಿನ ಗರಿಗಳಲ್ಲಿ ಸಾವಿರಾರು ಕಣ್ಣುಗಳಿದ್ದು ಅವು ಫಳ ಫಳ ಹೊಳೆಯುತ್ತವೆ. ಆದ್ದರಿಂದ ನವಿಲನ್ನು ಸಾವಿರ ಕಣ್ಣುಳ್ಳ ಸಹಸ್ರಾಕ್ಷ ಎಂದು ಕರೆಯುತ್ತಾರೆ.

  4. ೪. ಗಂಡು ನವಿಲಿನ ವಿಶೇಷತೆ ಏನು?

    Answer

    ಹೆಣ್ಣಿಗಿಲ್ಲದ ರೂಪ ಗಂಡಿಗಿದೆ. ಇದೇ ನವಿಲಿನ ವಿಶೇಷ. ಗಂಡು ನವಿಲಿನ ಪುಕ್ಕಗಳು ದೊಡ್ಡದಾಗಿದ್ದು, ಹೆಣ್ಣು ನವಿಲಿನ ಪುಕ್ಕಗಳು ಚಿಕ್ಕವಾಗಿರುತ್ತವೆ.

  5. ೫. ನವಿಲನ್ನು ರೈತಮಿತ್ರ ಎಂದು ಏಕೆ ಕರೆಯುತ್ತಾರೆ?

    Answer

    ನವಿಲು ಬೆಳೆದ ಫಸಲಿಗೆ ಕೀಟಬಾಧೆ ತಗುಲದಂತೆ ಬೆಳೆಗಳ ರಕ್ಷಣೆ ಮಾಡುತ್ತದೆ ಮತ್ತು ಕೀಟಗಳನ್ನು ತಿನ್ನುತ್ತದೆ. ಆದ್ದರಿಂದ ನವಿಲನ್ನು ರೈತಮಿತ್ರ ಎಂದು ಕರೆಯುತ್ತಾರೆ.

ಇ) 'ಅ' ಪಟ್ಟಿಗೆ 'ಬ' ಪಟ್ಟಿಯನ್ನು ಹೊಂದಿಸಿ ಬರೆಯಿರಿ.

  1. 'ಅ' ಪಟ್ಟಿ — 'ಬ' ಪಟ್ಟಿ

  2. ಅ) ರೈತಮಿತ್ರ — ೧) ಹೊಳಪು .........................

    Answer

    ಅ) ರೈತಮಿತ್ರ — ೨) ನವಿಲು

  3. ಆ) ತುರಾಯಿ — ೨) ನವಿಲು .........................

    Answer

    ಆ) ತುರಾಯಿ — ೪) ಜುಟ್ಟು

  4. ಇ) ಮನೋಹರ — ೩) ಕಾಮನಬಿಲ್ಲು .........................

    Answer

    ಇ) ಮನೋಹರ — ೫) ಸುಂದರ

  5. ಈ) ಆಕಾಶ — ೪) ಜುಟ್ಟು .........................

    Answer

    ಈ) ಆಕಾಶ — ೩) ಕಾಮನಬಿಲ್ಲು

  6. ಉ) ಚಮಕಿಸು — ೫) ಸುಂದರ .........................

    Answer

    ಉ) ಚಮಕಿಸು — ೧) ಹೊಳಪು

ಈ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧) ಷಣ್ಮುಖನ ವಾಹನ .................................

    Answer

    ೧) ಷಣ್ಮುಖನ ವಾಹನ ಕ) ನವಿಲು

  2. ಅ) ನಂದಿ

  3. ಬ) ಕುದುರೆ

  4. ಕ) ನವಿಲು

  5. ಡ) ಗರುಡ

  6. ೨) ನವಿಲು ನೋಡಲು ಎಷ್ಟು ಸುಂದರವೋ ಅಷ್ಟೇ .................................

    Answer

    ೨) ನವಿಲು ನೋಡಲು ಎಷ್ಟು ಸುಂದರವೋ ಅಷ್ಟೇ ಅ) ಶಿಸ್ತಿನ ಸಿಪಾಯಿ

  7. ಅ) ಶಿಸ್ತಿನ ಸಿಪಾಯಿ

  8. ಬ) ಮೃದು ಸಿಪಾಯಿ

  9. ಕ) ಚೇಷ್ಟೆಯ ಸಿಪಾಯಿ

  10. ಡ) ಸಿಟ್ಟಿನ ಸಿಪಾಯಿ

  11. ೩) ನವಿಲು ಇರುವ ಪ್ರದೇಶಗಳಲ್ಲಿ ಇವು ಸುಳಿಯಲಾರವು .................................

    Answer

    ೩) ನವಿಲು ಇರುವ ಪ್ರದೇಶಗಳಲ್ಲಿ ಇವು ಸುಳಿಯಲಾರವು ಕ) ಹಾವುಗಳು

  12. ಅ) ಹಕ್ಕಿಗಳು

  13. ಬ) ಕೀಟಗಳು

  14. ಕ) ಹಾವುಗಳು

  15. ಡ) ಮೊಲಗಳು

  16. ೪) ನವಿಲಿಗೆ ಹಸಿರು ಛಾಯೆ ಈ ದೇಶಗಳಲ್ಲಿ ಇರುತ್ತದೆ .................................

    Answer

    ೪) ನವಿಲಿಗೆ ಹಸಿರು ಛಾಯೆ ಈ ದೇಶಗಳಲ್ಲಿ ಇರುತ್ತದೆ ಕ) ಜಾವಾ ಮತ್ತು ಮಯನ್ಮಾರ್

  17. ಅ) ಕೀನ್ಯಾ ಮತ್ತು ಜಪಾನ್

  18. ಬ) ಅಮೇರಿಕ ಮತ್ತು ಇಂಗ್ಲೆಂಡ್

  19. ಕ) ಜಾವಾ ಮತ್ತು ಮಯನ್ಮಾರ್

  20. ಡ) ಶ್ರೀಲಂಕಾ ಮತ್ತು ಭಾರತ

III. ಭಾಷಾಭ್ಯಾಸ :

ಅ) ಈ ಪದಗಳನ್ನು ಸ್ವಂತವಾಕ್ಯಗಳಲ್ಲಿ ಉಪಯೋಗಿಸಿ ಬರೆಯಿರಿ.

  1. ೧. ಹಚ್ಚಹಸಿರು :.........................................................................................

    Answer

    ಹಚ್ಚಹಸಿರು: ನಮ್ಮ ಶಾಲೆಯ ಮುಂದೆ ಹಚ್ಚಹಸಿರಿನ ಹುಲ್ಲಿನ ಮೈದಾನವಿದೆ.

  2. ೨. ಅಪರಾಧ :.........................................................................................

    Answer

    ಅಪರಾಧ: ಕಸವನ್ನು ರಸ್ತೆಯ ಮೇಲೆ ಎಸೆಯುವುದು ಅಪರಾಧ.

  3. ೩. ಸುಂದರ :.........................................................................................

    Answer

    ಸುಂದರ: ನನ್ನ ತಂಗಿಯ ನಗೆ ತುಂಬಾ ಸುಂದರವಾಗಿದೆ.

  4. ೪. ಸಂಕೇತ :.........................................................................................

    Answer

    ಸಂಕೇತ: ಹಸಿರು ಬಣ್ಣವು ಪರಿಸರದ ಸಂಕೇತವಾಗಿದೆ.

  5. ೫. ಮನಸೋಲು :.........................................................................................

    Answer

    ಮನಸೋಲು: ಅಂಗಡಿಯಲ್ಲಿನ ಆಟಿಕೆ ಕಾರನ್ನು ನೋಡಿ ನನ್ನ ಮನಸೋತಿತು.

  6. ೬. ಶಿಸ್ತಿನ ಸಿಪಾಯಿ :.........................................................................................

    Answer

    ಶಿಸ್ತಿನ ಸಿಪಾಯಿ: ನಮ್ಮ ತರಗತಿಯ ಮುಖ್ಯಸ್ಥನು ಶಿಸ್ತಿನ ಸಿಪಾಯಿಯಂತೆ ಇರುತ್ತಾನೆ.

ಆ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

  1. ಮಾದರಿ : ನೃತ್ಯ – ನರ್ತನ, ಕುಣಿತ.

  2. ೧. ನಯನ – ......................... .........................

    Answer

    ೧. ನಯನ – ಕಣ್ಣು, ನೇತ್ರ

  3. ೨. ನವಿಲು – ......................... .........................

    Answer

    ೨. ನವಿಲು – ಮಯೂರ, ಶಿಖಿ

  4. ೩. ಲಾವಣ್ಯ – ......................... .........................

    Answer

    ೩. ಲಾವಣ್ಯ – ಸೌಂದರ್ಯ, ಚೆಲುವು

  5. ೪. ರೆಕ್ಕೆ – ......................... .........................

    Answer

    ೪. ರೆಕ್ಕೆ – ಪುಕ್ಕ, ಗರಿ

  6. ೫. ಬಂಗಾರ – ......................... .........................

    Answer

    ೫. ಬಂಗಾರ – ಚಿನ್ನ, ಸ್ವರ್ಣ

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಹಿಂಸೆ x .........................

    Answer

    ೧. ಹಿಂಸೆ x ಅಹಿಂಸೆ

  2. ೨. ಆರಂಭ x .........................

    Answer

    ೨. ಆರಂಭ x ಅಂತ್ಯ

  3. ೩. ಹೊಗಳು x .........................

    Answer

    ೩. ಹೊಗಳು x ತೆಗಳು

  4. ೪. ಶಿಸ್ತು x .........................

    Answer

    ೪. ಶಿಸ್ತು x ಅಶಿಸ್ತು

ಈ) ಈ ಪದಗಳನ್ನು ಗಟ್ಟಿಯಾಗಿ ಉಚ್ಚರಿಸಿ ಬರೆಯಿರಿ.

  1. ಹಚ್ಚಹಸಿರು — ರಾಷ್ಟ್ರಪಕ್ಷಿ — ಸಹಸ್ರಾಕ್ಷ — ಷಣ್ಮುಖ

  2. ......................... — ......................... — ......................... — .........................

    Answer

    ಹಚ್ಚಹಸಿರು — ರಾಷ್ಟ್ರಪಕ್ಷಿ — ಸಹಸ್ರಾಕ್ಷ — ಷಣ್ಮುಖ

  3. ......................... — ......................... — ......................... — .........................

    Answer

    ಹಚ್ಚಹಸಿರು — ರಾಷ್ಟ್ರಪಕ್ಷಿ — ಸಹಸ್ರಾಕ್ಷ — ಷಣ್ಮುಖ

  4. ......................... — ......................... — ......................... — .........................

    Answer

    ಹಚ್ಚಹಸಿರು — ರಾಷ್ಟ್ರಪಕ್ಷಿ — ಸಹಸ್ರಾಕ್ಷ — ಷಣ್ಮುಖ

  5. ......................... — ......................... — ......................... — .........................

    Answer

    ಹಚ್ಚಹಸಿರು — ರಾಷ್ಟ್ರಪಕ್ಷಿ — ಸಹಸ್ರಾಕ್ಷ — ಷಣ್ಮುಖ

ಉ) ಗೆರೆ ಎಳೆದಿರುವ ಅನುಕರಣೀಯ ಪದಗಳನ್ನು ಗಮನಿಸಿ ಸ್ಪಷ್ಟವಾಗಿ ಉಚ್ಚರಿಸಿರಿ.

  1. ೧. ಜುಳು ಜುಳು ನದಿ ಹರಿಯುತ್ತದೆ.

  2. ೨. ಕಣ್ಣು ಫಳ ಫಳ ಹೊಳೆಯುತ್ತದೆ.

  3. ೩. ನವಿಲು ಥಕ ಥೈ ಎಂದು ಕುಣಿಯುತ್ತದೆ.

  4. ೪. ಢಣ ಢಣ ಗಂಟೆ ಬಾರಿಸಿತು.

  5. ೫. ಜಿಟಿ ಜಿಟಿ ಮಳೆ ಸುರಿಯಿತು.

ಊ) ಕೆಳಗಿನ ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸಿ, ಅರ್ಥ ವ್ಯತ್ಯಾಸ ತಿಳಿಯಿರಿ.

  1. ೧. ಅಕ್ಕಿ - ಹಕ್ಕಿ

  2. ೨. ರುರಿ - ಜರಿ

  3. ೩. ಕಾಳು - ಕಾಲು

  4. ೪. ಅರಿ - ಹರಿ

  5. ೫. ಧನ - ದನ

  6. ೬. ಫಲ - ಪಲ

  7. ೭. ಉಣ್ಣು - ಹುಣ್ಣು

  8. ೮. ಏರು - ಹೇರು

IV. ಸೈದ್ಧಾಂತಿಕ ವ್ಯಾಕರಣ :

೧. ಗುಣಿತಾಕ್ಷರಗಳು :

  1. ಮಕ್ಕಳೇ, ನಿಮಗೆ ಕನ್ನಡ ವರ್ಣಮಾಲೆಯನ್ನು ಬರೆಯಲು ಬರುತ್ತದೆ. ಅವುಗಳ ಪರಿಚಯ ನಿಮಗೆ ಇದೆ. ಈಗ ಇಲ್ಲಿ ನೀಡಿರುವ ಅಕ್ಷರಗಳನ್ನು ಗಮನಿಸಿರಿ.

  2. ಕ್ + ಅ = ಕ

  3. ಕ್ + ಆ = ಕಾ

  4. ಕ್ + ಇ = ಕಿ

  5. ಕ್ + ಈ = ಕೀ

  6. ಕ್ + ಉ = ಕು

  7. ಕ್ + ಊ = ಕೂ

  8. ಕ್ + ಋ = ಕೃ

  9. ಕ್ + ಎ = ಕೆ

  10. ಕ್ + ಏ = ಕೇ

  11. ಕ್ + ಐ = ಕೈ

  12. ಕ್ + ಒ = ಕೊ

  13. ಕ್ + ಓ = ಕೋ

  14. ಕ್ + ಔ = ಕೌ

  15. ಕ್ + ಅಂ = ಕಂ

  16. ಕ್ + ಅಃ = ಕಃ

  17. ಮಕ್ಕಳೇ ಇಲ್ಲಿ ವ್ಯಂಜನಗಳಿಗೆ ಸ್ವರಾಕ್ಷರಗಳು ಸೇರಿಕೊಂಡಿವೆ. ಇವುಗಳನ್ನು ಗುಣಿತಾಕ್ಷರಗಳು ಎಂದು ಕರೆಯುತ್ತಾರೆ. ನೀವು ಉಳಿದ ವ್ಯಂಜನಾಕ್ಷರಗಳಿಗೆ ಸ್ವರಗಳನ್ನು ಸೇರಿಸಿ ಗುಣಿತಾಕ್ಷರಗಳನ್ನು ಬರೆಯಿರಿ.

೨. ಕೆಳಗಿನ ಅಕ್ಷರಗಳನ್ನು ಸೇರಿಸಿ ಗುಣಿತಾಕ್ಷರ ಬರೆಯಿರಿ.

  1. ಯ್ + ಅ = .........................

    Answer

    ಯ್ + ಅ = ಯ

  2. ರ್ + ಆ = .........................

    Answer

    ರ್ + ಆ = ರಾ

  3. ಸ್ + ಇ = .........................

    Answer

    ಸ್ + ಇ = ಸಿ

  4. ಲ್ + ಈ = .........................

    Answer

    ಲ್ + ಈ = ಲೀ

  5. ಟ್ + ಉ = .........................

    Answer

    ಟ್ + ಉ = ಟು

  6. ತ್ + ಊ = .........................

    Answer

    ತ್ + ಊ = ತೂ

  7. ಡ್ + ಋ = .........................

    Answer

    ಡ್ + ಋ = ಡೃ

  8. ಗ್ + ಎ = .........................

    Answer

    ಗ್ + ಎ = ಗೆ

  9. ಜ್ + ಏ = .........................

    Answer

    ಜ್ + ಏ = ಜೇ

  10. ಪ್ + ಐ = .........................

    Answer

    ಪ್ + ಐ = ಪೈ

  11. ನ್ + ಒ = .........................

    Answer

    ನ್ + ಒ = ನೊ

  12. ಚ್ + ಓ = .........................

    Answer

    ಚ್ + ಓ = ಚೋ

  13. ಹ್ + ಔ = .........................

    Answer

    ಹ್ + ಔ = ಹೌ

  14. ಹ್ + ಅಂ = .........................

    Answer

    ಹ್ + ಅಂ = ಹಂ

  15. ದ್ + ಅಃ = .........................

    Answer

    ದ್ + ಅಃ = ದಃ

೩. ಒತ್ತಕ್ಷರ/ಸಂಯುಕ್ತಾಕ್ಷರಗಳು

  1. ವ್ಯಂಜನಕ್ಕೆ ವ್ಯಂಜನ ಸೇರಿಕೊಂಡು (ಸ್ವರದ ಸಹಾಯದಿಂದ) ಉಂಟಾಗುವ ಅಕ್ಷರಕ್ಕೆ ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯುವರು.

  2. ಉದಾ : ಅ+ಕ್+ಕ್+ಅ=ಅಕ್ಕ

  3. ಭ್+ಅ+ಕ್+ತ್+ಅ=ಭಕ್ತ

  4. ಅ+ಣ್+ಣ್+ಅ=ಅಣ್ಣ

  5. ಸ್+ಅ+ತ್+ಯ್+ಅ=ಸತ್ಯ

Interactive Lab