CRECT Education

Class 5 Kannada Lesson 6: Boy who changed palmline | KTBS Second Language – Learn the Story

Description

Learn Class 5 Kannada Lesson 6 — ಹಸ್ತರೇಖೆ ಬದಲಿಸಿದ ಬಾಲಕ (Boy who changed palmline) from the KTBS Second Language textbook. This video covers the inspiring story of Panini, the boy who carved his own destiny.

ಗದ್ಯ (prose) · ಸಂಪಾದಿತ

ಪಠ್ಯFull text

ತಕ್ಷಶಿಲೆ ಪ್ರಾಚೀನ ಭಾರತದ ಅತಿದೊಡ್ಡ ಗುರುಕುಲ. ಅಲ್ಲಿ ಓದುವುದೆಂದರೆ ಘನತೆಯ ವಿಷಯ. ತಮ್ಮ ಮಕ್ಕಳು ಅಲ್ಲಿ ಓದಿ ವಿದ್ಯಾವಂತರಾಗಲಿ ಎಂದು ತಂದೆ-ತಾಯಿಗಳು ಆಸೆ ಪಡುತ್ತಿದ್ದರು. ಒಬ್ಬ ತಾಯಿ ತನ್ನ ಮಗನನ್ನು ಗುರುಕುಲಕ್ಕೆ ಸೇರಿಸಲು ಬಂದಳು. ವಿದ್ಯೆ ಕಲಿಸುವಂತೆ ಗುರುಗಳಲ್ಲಿ ಬೇಡಿಕೊಂಡಳು. ಬಾಲಕನಿಗೆ ಗುರುಕುಲದ ವಾತಾವರಣ ಹೊಸದು. ಎತ್ತಲೋ ನೋಡುತ್ತ ನಿಂತಿದ್ದ. ಗುರುಗಳು ಆತನನ್ನು ಗಮನಿಸಿದರು. ಕರೆದು ಬಾಲಕನ ಕೈ ನೋಡಿದರು. ನಿರಾಶರಾದರು. ಈ ಬಾಲಕನಿಗೆ ಓದಿನಲ್ಲಿ ಅಭಿರುಚಿಯಿಲ್ಲ. ವಿದ್ಯೆ ಹತ್ತದು ಎಂದು ತಿಳಿಸಿದರು. ತಾಯಿ ದಕ್ಷಿ ಗಾಬರಿಯಾದಳು. ವಿದ್ಯಾದಾನ ಮಾಡುವಂತೆ ಗುರುಗಳಲ್ಲಿ ಪರಿಪರಿಯಾಗಿ ಬೇಡಿಕೊಂಡಳು. ಆದರೆ ಗುರುಗಳು “ಅವನ ಕೈಯಲ್ಲಿ ವಿದ್ಯಾರೇಖೆಯಿಲ್ಲ. ವಿದ್ಯೆ ಹತ್ತುವುದಿಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿದರು. ತಾಯಿಗೆ ತುಂಬಾ ನಿರಾಸೆ ಆಯಿತು. ಅವಳಿಗೆ ಅಳು ಬಂದಿತು. ತಾಯಿಯ ನೋವನ್ನು ಆ ಬಾಲಕ ಗಮನಿಸಿದ. ತಾಯಿಯ ಆಸೆಯನ್ನು ಪೂರೈಸಲು ಯೋಚಿಸತೊಡಗಿದ. ಸ್ವಲ್ಪ ಸಮಯದ ನಂತರ ಬಾಲಕ ಮತ್ತೆ ಅಲ್ಲಿಗೆ ಬಂದನು. “ಏಕೆ ಬಂದೆ?” ಎಂದು ಗುರುಗಳು ಗಡುಸಾಗಿ ಕೇಳಿದರು. “ಗುರುಗಳೆ, ವಿದ್ಯಾರೇಖೆ ಹೇಗಿರುತ್ತದೆ?” ಎಂದು ಬಾಲಕ ವಿನೀತನಾಗಿ ಕೇಳಿದನು. ಗುರುಗಳು ಬಳಿಯಿದ್ದ ಒಬ್ಬ ಬಾಲಕನನ್ನು ಕರೆದರು. ಅವನ ಕೈ ಹಿಡಿದು “ಇಗೋ ನೋಡು, ಇದು ವಿದ್ಯಾ ರೇಖೆ ! ಅದು ನಿನಗೆ ಇಲ್ಲ ಹೋಗು” ಎಂದರು. ಬಾಲಕ ನಿರಾಶನಾಗಿ ಹೊರಬಂದ. ಹಲವು ಬಾರಿ ಕೈ ನೋಡಿದ, ಯೋಚಿಸಿದ. ತಕ್ಷಣ ಬೆಣಚುಕಲ್ಲಿನಿಂದ ಗಟ್ಟಿಯಾಗಿ ವಿದ್ಯಾರೇಖೆಯನ್ನು ಕೈ ಮೇಲೆ ಕೊರೆದುಕೊಂಡನು. ಚರ್ಮ ಕಿತ್ತಿತು. ರಕ್ತ ಸುರಿಯಲು ಆರಂಭಿಸಿತು. ಆದರೂ ಭಯ ಪಡಲಿಲ್ಲ. ದಡದಡನೆ ಗುರುಕುಲದ ಒಳಗೆ ಹೊಕ್ಕ. “ಗುರುಗಳೇ ನನ್ನ ಕೈಯಲ್ಲಿ ವಿದ್ಯಾರೇಖೆ ಮೂಡಿದೆ, ನೋಡಿ!” ಎಂದ. ತನ್ನ ಕೈಯನ್ನು ಮುಂದೆ ಚಾಚಿದ. ಆದರೆ ಅದು ನಿಜವಾದ ವಿದ್ಯಾರೇಖೆ ಆಗಿರಲಿಲ್ಲ. ರಕ್ತ ಸುರಿಯುತ್ತಿರುವ ಆ ಪುಟ್ಟ ಕೈಯನ್ನು ಗುರುಗಳು ನೋಡಿದರು. ಗಾಬರಿಯಾದರು. ಮನಸ್ಸು ಕಲಕಿತು. ಬಾಲಕನ ತಲೆ ನೇವರಿಸಿ ಅಪ್ಪಿಕೊಂಡರು. ಅವನಲ್ಲಿ ವಿದ್ಯೆ ಕಲಿಯುವ ಛಲವನ್ನು ಗುರುತಿಸಿದರು. “ನಿನ್ನಂತಹ ಶಿಷ್ಯನಿಗೆ ಅಲ್ಲದೆ ಇನ್ನಾರಿಗೆ ವಿದ್ಯಾದಾನ ಮಾಡಲಿ?” ಎಂದು ಕಣ್ಣೀರು ಸುರಿಸಿದರು. ಶಿಷ್ಯನನ್ನಾಗಿ ಸ್ವೀಕರಿಸಿದರು. ಈ ಬಾಲಕನೇ ಪಾಣಿನಿ. ಪಾಣಿನಿ ಸತತ ಅಭ್ಯಾಸ ಮಾಡಿದ ; ಮನನ ಮಾಡಿದ ; ಮನನ ಮಾಡಿದ್ದನ್ನು ಚಿಂತನ ಮಾಡಿದ. ತನ್ನ ಪ್ರತಿಭೆಯಿಂದ ಹೊಸ ವಿಚಾರಗಳನ್ನು ಹೊರಹೊಮ್ಮಿಸಿದ. ಸಂಸ್ಕೃತ ಭಾಷೆಗೆ ವ್ಯಾಕರಣ ಶಾಸ್ತ್ರ ರಚಿಸಿದನು. ಅದು ಜಗತ್ ಪ್ರಸಿದ್ಧವಾಯಿತು. ಇಂದಿಗೂ ಪಾಣಿನಿ ರಚಿಸಿದ ವ್ಯಾಕರಣ ಶಾಸ್ತ್ರ ಸಂಸ್ಕೃತಕ್ಕೆ ಮೂಲ ಮಂತ್ರವಾಗಿದೆ. ಇವನ ಕಾಲ ಕ್ರಿ.ಪೂ. ೬ನೇ ಶತಮಾನ. ಇವನ ಗುರುವಿನ ಹೆಸರು ಉಪವರ್ಷ ಎಂಬುದಾಗಿದೆ. ವಿದ್ಯಾ ರೇಖೆ ಇಲ್ಲದಿದ್ದರೂ ಪರಿಶ್ರಮ ಮತ್ತು ಪ್ರತಿಭೆಯಿಂದ ಸಾಧನೆ ಮಾಡಬಹುದು ಎಂಬುದಕ್ಕೆ ಪಾಣಿನಿ ಉದಾಹರಣೆಯಾಗಿದ್ದಾನೆ.

"ವಿದ್ಯಾ ರೇಖೆ ಇಲ್ಲದಿದ್ದರೂ ಪರಿಶ್ರಮ ಮತ್ತು ಪ್ರತಿಭೆಯಿಂದ ಸಾಧನೆ ಮಾಡಬಹುದು" — "Even without a line of education on your palm, you can achieve success through hard work and talent."

ಪದಗಳ ಅರ್ಥword meanings

KannadaPronunciationMeaning
| **ಗಮನಿಸಿತಿಳಿಯಿರಿ :** ಗುರುಕುಲ - ಶಿಕ್ಷಣ ಕೇಂದ್ರ, ಪ್ರಾಚೀನ ಕಾಲದ ಶಾಲೆ
ಕಡ್ಡಿ ಮುರಿದಂತೆ ಮಾತನಾಡುನಿಷ್ಠುರವಾಗಿ ಮಾತನಾಡು
ವಿದ್ಯಾರೇಖೆಹಸ್ತ ಸಾಮುದ್ರಿಕೆ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ವಿದ್ಯೆಯನ್ನು ಸೂಚಿಸುವ ಗೆರೆ
ಮನಸ್ಸು ಕಲಕುಮನಸ್ಸಿನಲ್ಲಿ ಉಂಟಾದ ಭಾವಗಳನ್ನು ಕದಡುವುದು
ತಲೆ ನೇವರಿಸುಪ್ರೀತಿಯಿಂದ ತಲೆಯ ಮೇಲೆ ಕೈಯಾಡಿಸು, ಸಾಂತ್ವನ ನೀಡು

ಅಭ್ಯಾಸexercises from the textbook

Model answers — a guide, not the only correct wording. Check with your teacher.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಪ್ರಾಚೀನ ಭಾರತದ ಅತಿದೊಡ್ಡ ಗುರುಕುಲ ಯಾವುದು?

    Answer

    ಪ್ರಾಚೀನ ಭಾರತದ ಅತಿದೊಡ್ಡ ಗುರುಕುಲ ತಕ್ಷಶಿಲೆ ಆಗಿತ್ತು.

  2. ೨. ತಾಯಿ ದಕ್ಷಿ ಗುರುಗಳಲ್ಲಿ ಏನೆಂದು ಬೇಡಿಕೊಂಡಳು?

    Answer

    ತಾಯಿ ದಕ್ಷಿ ತನ್ನ ಮಗನಿಗೆ ವಿದ್ಯೆ ಕಲಿಸುವಂತೆ ಗುರುಗಳಲ್ಲಿ ಬೇಡಿಕೊಂಡಳು.

  3. ೩. ಗುರುಗಳು ಬಾಲಕನ ಕೈ ನೋಡಿ ಏನೆಂದು ಹೇಳಿದರು?

    Answer

    ಗುರುಗಳು ಬಾಲಕನ ಕೈಯಲ್ಲಿ ವಿದ್ಯಾರೇಖೆ ಇಲ್ಲವೆಂದು ಮತ್ತು ವಿದ್ಯೆ ಹತ್ತದು ಎಂದು ಹೇಳಿದರು.

  4. ೪. ಬಾಲಕ ಕೈಯಲ್ಲಿ ವಿದ್ಯಾರೇಖೆಯನ್ನು ಯಾವುದರಿಂದ ಮೂಡಿಸಿಕೊಂಡನು?

    Answer

    ಬಾಲಕನು ಬೆಣಚುಕಲ್ಲಿನಿಂದ ತನ್ನ ಕೈಯಲ್ಲಿ ವಿದ್ಯಾರೇಖೆಯನ್ನು ಮೂಡಿಸಿಕೊಂಡನು.

  5. ೫. ಪಾಣಿನಿಯ ಗುರುವಿನ ಹೆಸರೇನು?

    Answer

    ಪಾಣಿನಿಯ ಗುರುವಿನ ಹೆಸರು ಉಪವರ್ಷ.

  6. ೬. ಪಾಣಿನಿ ಯಾವ ಭಾಷೆಯಲ್ಲಿ ವ್ಯಾಕರಣ ರಚಿಸಿದ್ದಾನೆ?

    Answer

    ಪಾಣಿನಿಯು ಸಂಸ್ಕೃತ ಭಾಷೆಯಲ್ಲಿ ವ್ಯಾಕರಣ ರಚಿಸಿದ್ದಾನೆ.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಗುರುಗಳು ಬಾಲಕನಿಗೆ ವಿದ್ಯೆ ಕಲಿಸಲು ಏಕೆ ನಿರಾಕರಿಸಿದರು?

    Answer

    ಗುರುಗಳು ಬಾಲಕನ ಕೈಯಲ್ಲಿ ವಿದ್ಯಾರೇಖೆಯಿಲ್ಲ ಮತ್ತು ಅವನಿಗೆ ವಿದ್ಯೆಯಲ್ಲಿ ಅಭಿರುಚಿ ಇಲ್ಲ ಎಂದು ತಿಳಿಸಿ ವಿದ್ಯೆ ಕಲಿಸಲು ನಿರಾಕರಿಸಿದರು.

  2. ೨. ಬಾಲಕ ತನ್ನ ಕೈಯಲ್ಲಿ ವಿದ್ಯಾರೇಖೆಯನ್ನು ಹೇಗೆ ಮೂಡಿಸಿಕೊಂಡನು?

    Answer

    ಬಾಲಕನು ಛಲದಿಂದ ಬೆಣಚುಕಲ್ಲಿನಿಂದ ತನ್ನ ಕೈಮೇಲೆ ಗಟ್ಟಿಯಾಗಿ ವಿದ್ಯಾರೇಖೆಯನ್ನು ಕೊರೆದುಕೊಂಡನು. ಇದರಿಂದ ಚರ್ಮ ಕಿತ್ತು ರಕ್ತ ಸುರಿಯಿತು. ಆದರೂ ಅವನು ಭಯಪಡಲಿಲ್ಲ.

  3. ೩. ಗುರುಗಳು ಪಾಣಿನಿಗೆ ವಿದ್ಯೆ ನೀಡಲು ಏಕೆ ಮನಸ್ಸು ಮಾಡಿದರು?

    Answer

    ಗುರುಗಳು ಪಾಣಿನಿಯಲ್ಲಿ ವಿದ್ಯೆ ಕಲಿಯುವ ಅಚಲ ಛಲವನ್ನು ಕಂಡರು. ಕೈಯಿಂದ ರಕ್ತ ಸುರಿಯುತ್ತಿದ್ದರೂ ಹಿಂಜರಿಯದೆ ವಿದ್ಯಾರೇಖೆ ಮೂಡಿಸಿದ ಪ್ರಯತ್ನವನ್ನು ಮೆಚ್ಚಿ ಅವನಿಗೆ ವಿದ್ಯೆ ನೀಡಲು ಮನಸ್ಸು ಮಾಡಿದರು.

  4. ೪. ಪಾಣಿನಿ ಜಗತ್ ಪ್ರಸಿದ್ಧನಾದುದು ಹೇಗೆ?

    Answer

    ಪಾಣಿನಿಯು ಸಂಸ್ಕೃತ ಭಾಷೆಗೆ ವ್ಯಾಕರಣ ಶಾಸ್ತ್ರವನ್ನು ರಚಿಸಿದನು. ಅವನ ಈ ಕೃತಿಯು ಜಗತ್ ಪ್ರಸಿದ್ಧವಾಗಿ, ಇಂದಿಗೂ ಸಂಸ್ಕೃತಕ್ಕೆ ಮೂಲ ಮಂತ್ರವಾಗಿದೆ.

ಇ) ಕೆಳಗೆ ನೀಡಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. “ಇಗೋ ನೋಡು, ಇದು ವಿದ್ಯಾರೇಖೆ!”

    Answer

    ಈ ಮಾತನ್ನು ಗುರುಗಳು ಪಾಣಿನಿಗೆ ಹೇಳಿದರು.

  2. ೨. “ಗುರುಗಳೇ ನನ್ನ ಕೈಯಲ್ಲಿ ವಿದ್ಯಾರೇಖೆ ಮೂಡಿದೆ ನೋಡಿ!”

    Answer

    ಈ ಮಾತನ್ನು ಪಾಣಿನಿಯು ಗುರುಗಳಿಗೆ ಹೇಳಿದನು.

ಈ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

  1. ೧. ಬಾಲಕನು ಬೆಣಚು ಕಲ್ಲಿನಿಂದ ತನ್ನ ಕೈಮೇಲೆ ................. ಕೊರೆದುಕೊಂಡನು.

    Answer

    ಬಾಲಕನು ಬೆಣಚು ಕಲ್ಲಿನಿಂದ ತನ್ನ ಕೈಮೇಲೆ ವಿದ್ಯಾರೇಖೆಯನ್ನು ಕೊರೆದುಕೊಂಡನು.

  2. ೨. ಪಾಣಿನಿಯ ತಾಯಿಯ ಹೆಸರು .................

    Answer

    ಪಾಣಿನಿಯ ತಾಯಿಯ ಹೆಸರು ದಕ್ಷಿ.

  3. ೩. ಪಾಣಿನಿಯು ................. ಶತಮಾನದಲ್ಲಿ ಬದುಕಿದ್ದನು.

    Answer

    ಪಾಣಿನಿಯು ಕ್ರಿ.ಪೂ. ೬ನೇ ಶತಮಾನದಲ್ಲಿ ಬದುಕಿದ್ದನು.

  4. ೪. ಪ್ರಾಚೀನ ಭಾರತದ ಅತಿದೊಡ್ಡ ಗುರುಕುಲ ................. ಆಗಿತ್ತು.

    Answer

    ಪ್ರಾಚೀನ ಭಾರತದ ಅತಿದೊಡ್ಡ ಗುರುಕುಲ ತಕ್ಷಶಿಲೆ ಆಗಿತ್ತು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿ ಬರೆಯಿರಿ.

  1. ಪ್ರಾಚೀನ : ........................................................................................

    Model sentence

    ಪ್ರಾಚೀನ: ಪ್ರಾಚೀನ ಕಾಲದಲ್ಲಿ ಜನರು ಗುಹೆಗಳಲ್ಲಿ ವಾಸಿಸುತ್ತಿದ್ದರು.

  2. ಅಭಿರುಚಿ : ........................................................................................

    Model sentence

    ಅಭಿರುಚಿ: ನನಗೆ ಚಿತ್ರ ಬಿಡಿಸುವುದರಲ್ಲಿ ತುಂಬಾ ಅಭಿರುಚಿ ಇದೆ.

  3. ಪೂರೈಸು : ........................................................................................

    Model sentence

    ಪೂರೈಸು: ನಾನು ನನ್ನ ತಾಯಿಯ ಆಸೆಯನ್ನು ಪೂರೈಸಲು ಚೆನ್ನಾಗಿ ಓದುತ್ತೇನೆ.

  4. ವಿನೀತ : ........................................................................................

    Model sentence

    ವಿನೀತ: ನನ್ನ ಸ್ನೇಹಿತ ರಾಮು ಯಾವಾಗಲೂ ವಿನೀತನಾಗಿ ಮಾತನಾಡುತ್ತಾನೆ.

  5. ಪರಿಪರಿಯಾಗಿ : ........................................................................................

    Model sentence

    ಪರಿಪರಿಯಾಗಿ: ಅಮ್ಮ ನನಗೆ ಹೊಸ ಬಟ್ಟೆ ತರಲು ಪರಿಪರಿಯಾಗಿ ಹೇಳಿದಳು.

ಆ) ಈ ಪದಗಳನ್ನು ಓದುತ್ತಾ ಬರೆಯಿರಿ.

  1. (A table with 4 blank rows under each of these headings for the student to copy the words: ಪ್ರಾಚೀನ, ವಿದ್ಯೆ, ವಿದ್ಯಾರೇಖೆ, ವ್ಯಾಕರಣ, ಚರ್ಮ, ಬೆಣಚುಕಲ್ಲು, ಶಿಷ್ಯ, ಅಪ್ಪಿಕೊ, ಸಂಸ್ಕೃತ, ಕಣ್ಣೀರು)

ಇ) ಈ ನುಡಿಗಟ್ಟುಗಳ ಅರ್ಥ ತಿಳಿಯಿರಿ. ನಂತರ ನಿಮ್ಮ ವಾಕ್ಯದಲ್ಲಿ ಉಪಯೋಗಿಸಿರಿ.

  1. ೧. ವಿದ್ಯೆ ಹತ್ತು : ವಿದ್ಯೆಯನ್ನು ತಿಳಿದುಕೊ ಅಥವಾ ಅರ್ಥ ಮಾಡಿಕೊ.

  2. ವಾಕ್ಯ ಪ್ರಯೋಗ : ಆಸಕ್ತಿಯಿಲ್ಲದೆ ಅಭ್ಯಾಸ ಮಾಡಿದರೆ ವಿದ್ಯೆ ಹತ್ತುವುದಿಲ್ಲ.

  3. ವಾಕ್ಯ ರಚಿಸು : ................................................................

    Answer

    ವಿದ್ಯೆ ಹತ್ತು: ಪ್ರತಿದಿನ ಪಾಠ ಓದಿದಾಗ ನನಗೆ ವಿದ್ಯೆ ಚೆನ್ನಾಗಿ ಹತ್ತುತ್ತದೆ.

  4. ೨. ಕಡ್ಡಿ ಮುರಿದಂತೆ : ನಿಷ್ಠುರವಾಗಿ

  5. ವಾಕ್ಯ ಪ್ರಯೋಗ : ಕಡ್ಡಿಮುರಿದಂತೆ ಮಾತನಾಡಬಾರದು.

  6. ವಾಕ್ಯ ರಚಿಸು : ................................................................

    Answer

    ಕಡ್ಡಿ ಮುರಿದಂತೆ: ನಮ್ಮ ಶಿಕ್ಷಕರು ಯಾರ ಜೊತೆಯೂ ಕಡ್ಡಿ ಮುರಿದಂತೆ ಮಾತನಾಡುವುದಿಲ್ಲ.

  7. ೩. ಮನಸ್ಸು ಕಲಕು : ಭಾವನೆಗಳನ್ನು ಕದಡು.

  8. ವಾಕ್ಯ ಪ್ರಯೋಗ : ಭಿಕ್ಷುಕನ ದೀನ ಪರಿಸ್ಥಿತಿಯನ್ನು ಕಂಡು ಮನಸ್ಸು ಕಲಕಿತು.

  9. ವಾಕ್ಯ ರಚಿಸು : ................................................................

    Answer

    ಮನಸ್ಸು ಕಲಕು: ಬೀದಿಯಲ್ಲಿ ಗಾಯಗೊಂಡ ನಾಯಿಯನ್ನು ನೋಡಿ ನನ್ನ ಮನಸ್ಸು ಕಲಕಿತು.

ಈ) ಇಲ್ಲಿರುವ ಪದಗಳನ್ನು ಗಮನಿಸಿ ಓದಿರಿ :

  1. ೧. ಮಗು + ಅನ್ನು = ಮಗುವನ್ನು

  2. ೨. ನೋವು + ಅನ್ನು = ನೋವನ್ನು

  3. ೩. ಕೈ + ಅಲ್ಲಿ = ಕೈಯಲ್ಲಿ

  4. ೪. ಗುರುಗಳು + ಅಲ್ಲಿ = ಗುರುಗಳಲ್ಲಿ

  5. ೫. ಅಭಿರುಚಿ + ಇಲ್ಲ = ಅಭಿರುಚಿಯಿಲ್ಲ

ಉ) ಕೆಳಗೆ ನೀಡಿರುವ ವಿಷಯ ಕಂಡಿಕೆಯಲ್ಲಿ ಬಳಕೆಯಾಗಿರುವ ಲೇಖನ ಚಿಹ್ನೆಗಳನ್ನು ಗಮನಿಸಿರಿ.

  1. ಸ್ವಲ್ಪ ಸಮಯದ ನಂತರ ಬಾಲಕ ಮತ್ತೆ ಅಲ್ಲಿಗೆ ಬಂದನು. “ಏಕೆ ಬಂದೆ?” ಎಂದು ಗಡುಸಾಗಿ ಕೇಳಿದರು. “ಗುರುಗಳೆ, ವಿದ್ಯಾರೇಖೆ ಹೇಗಿರುತ್ತದೆ?” ಎಂದು ಬಾಲಕ ವಿನೀತನಾಗಿ ಕೇಳಿದನು. “ನೋಡಿ, ಗುರುಗಳೇ ನನ್ನ ಕೈಯಲ್ಲಿ ವಿದ್ಯಾರೇಖೆ ಮೂಡಿದೆ!” ಎಂದು ಸಂತಸದಿಂದ ಕೈ ಮುಂದೆ ಚಾಚಿದ.

  2. ಆವರಣದಲ್ಲಿರುವ ಲೇಖನ ಚಿಹ್ನೆಗಳ ಹೆಸರು ತಿಳಿಯಿರಿ.

    Answer

    ಆವರಣದಲ್ಲಿರುವ ಲೇಖನ ಚಿಹ್ನೆಗಳ ಹೆಸರು: ಪೂರ್ಣವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ, ಉದ್ಧರಣ, ಆಶ್ಚರ್ಯ ಸೂಚಕ.

  3. ೧. ( . ) ಪೂರ್ಣವಿರಾಮ ಚಿಹ್ನೆ

  4. ೨. ( , ) ಅಲ್ಪವಿರಾಮ ಚಿಹ್ನೆ

  5. ೩. ( ? ) ಪ್ರಶ್ನಾರ್ಥಕ ಚಿಹ್ನೆ

  6. ೪. ( “.....” ) ಉದ್ಧರಣ ಚಿಹ್ನೆ

  7. ೫. ( ! ) ಆಶ್ಚರ್ಯ ಸೂಚಕ ಚಿಹ್ನೆ

ಪೂರಕ ಓದು :

ಅ) ಈ ಕಥೆ ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹೇಳಿರಿ.

  1. ಏಕಲವ್ಯ ಎಂಬ ಬಾಲಕನಿದ್ದ. ಅವನಿಗೆ ದ್ರೋಣಾಚಾರ್ಯರಲ್ಲಿ ಬಿಲ್ಲು ವಿದ್ಯೆಯನ್ನು ಕಲಿಯುವ ಆಸೆ. ಒಂದು ದಿನ ನೇರವಾಗಿ ಹಸ್ತಿನಾವತಿಗೆ ಹೋದನು. ದ್ರೋಣಾಚಾರ್ಯರ ದರುಶನಕ್ಕಾಗಿ ಕಾದು ನಿಂತನು. ಗುರು ದ್ರೋಣರು ದೂರದಲ್ಲಿ ನಡೆದು ಬರುತ್ತಿದ್ದರು. ಓಡಿ ಹೋಗಿ ಅವರ ಪಾದಕ್ಕೆ ವಂದಿಸಿದನು. ತಾನು ಬೇಡರ ಬಾಲಕ, ಕಾಡಿನಲ್ಲಿ ವಾಸಿಸುತ್ತಿರುವೆ ಎಂದು ಪರಿಚಯ ಮಾಡಿಕೊಂಡನು. ವಿದ್ಯೆ ಕಲಿಸುವಂತೆ ವಿನಯದಿಂದ ಬೇಡಿಕೊಂಡನು.

  2. ದ್ರೋಣರು ತಾವು ರಾಜಗುರುಗಳು, ಆದುದರಿಂದ ಇತರರಿಗೆ ವಿದ್ಯೆ ಕಲಿಸಲು ಆಗುವುದಿಲ್ಲ ಎಂದು ನಿರಾಕರಿಸಿದರು. ಏಕಲವ್ಯನಿಗೆ ಬಹಳ ದುಃಖವಾಯಿತು. ಗುರುಗಳ ಮಿತಿ ಅರ್ಥವಾಯಿತು. ವಿದ್ಯೆ ಕೊಡದಿದ್ದರೂ ಚಿಂತೆಯಿಲ್ಲ, ಬಿಲ್ವಿದ್ಯೆಗೆ ಆಶೀರ್ವಾದ ಬೇಡಿದ. ಗುರುಗಳು ಶುಭವಾಗಲಿ ಎಂದು ಹರಸಿದರು. ಏಕಲವ್ಯ ಕಾಡಿಗೆ ಬಂದನು. ಅವನಿಗೆ ಅನ್ನ ನೀರು ಸೇರಲಿಲ್ಲ. ನಿದ್ದೆ ಹತ್ತಲಿಲ್ಲ. ಹೇಗಾದರೂ ವಿದ್ಯೆ ಕಲಿಯಲೇಬೇಕೆಂದು ಚಡಪಡಿಸಿದನು. ಹಠ ಮನೆಮಾಡಿತು. ಮಣ್ಣಿನಿಂದ ದ್ರೋಣಾಚಾರ್ಯರ ಮೂರ್ತಿಯನ್ನು ಮಾಡಿದ. ಅದನ್ನೇ ಗುರು ಎಂದು ಪೂಜಿಸಿದನು. ಗುರುವಿನ ಎದುರಿನಲ್ಲಿ ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದನು. ಬಿಲ್ಲು ವಿದ್ಯೆಯಲ್ಲಿ ಪರಿಣಿತನಾದನು. ಅರ್ಜುನನ್ನು ಮೀರಿಸುವಂತಹ ಪರಿಣತಿಯನ್ನು ಪಡೆದನು.

ಪ್ರಶ್ನೆಗಳು :

  1. ೧. ಏಕಲವ್ಯ ಯಾವ ವಿದ್ಯೆ ಕಲಿಯಬೇಕೆಂದು ಇಚ್ಛಿಸಿದನು?

    Answer

    ಏಕಲವ್ಯನು ಬಿಲ್ಲು ವಿದ್ಯೆಯನ್ನು ಕಲಿಯಬೇಕೆಂದು ಇಚ್ಛಿಸಿದನು.

  2. ೨. ಏಕಲವ್ಯನಿಗೆ ಯಾರ ಬಳಿ ವಿದ್ಯೆ ಕಲಿಯುವ ಆಸೆಯಾಯಿತು?

    Answer

    ಏಕಲವ್ಯನಿಗೆ ದ್ರೋಣಾಚಾರ್ಯರ ಬಳಿ ವಿದ್ಯೆ ಕಲಿಯುವ ಆಸೆಯಾಯಿತು.

  3. ೩. ದ್ರೋಣರು ಏಕಲವ್ಯನಿಗೆ ಶಿಕ್ಷಣ ನೀಡಲು ಏಕೆ ನಿರಾಕರಿಸಿದರು?

    Answer

    ದ್ರೋಣರು ತಾವು ರಾಜಗುರುಗಳಾದ್ದರಿಂದ ಇತರರಿಗೆ ವಿದ್ಯೆ ಕಲಿಸಲು ಸಾಧ್ಯವಿಲ್ಲ ಎಂದು ಏಕಲವ್ಯನಿಗೆ ಶಿಕ್ಷಣ ನೀಡಲು ನಿರಾಕರಿಸಿದರು.

  4. ೪. ಏಕಲವ್ಯ ಬಿಲ್ಲು ವಿದ್ಯೆಯಲ್ಲಿ ಹೇಗೆ ಪರಿಣಿತನಾದನು?

    Answer

    ಏಕಲವ್ಯನು ದ್ರೋಣಾಚಾರ್ಯರ ಮಣ್ಣಿನ ಮೂರ್ತಿಯನ್ನು ಮಾಡಿ ಅದನ್ನು ಗುರುವೆಂದು ಪೂಜಿಸಿ, ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ಬಿಲ್ಲು ವಿದ್ಯೆಯಲ್ಲಿ ಪರಿಣಿತನಾದನು.

ಆ) ಗುರು-ಶಿಷ್ಯರ ಸಂಬಂಧ ತಿಳಿಯಿರಿ.

  1. | ಶಿಷ್ಯ | ಗುರು |

  2. |---|---|

  3. | ೧. ರಾಮ | ವಶಿಷ್ಠ |

    Answer

    | ರಾಮ | ವಶಿಷ್ಠ |

  4. | ೨. ಕೃಷ್ಣ | ಸಾಂದೀಪನಿ |

    Answer

    | ಕೃಷ್ಣ | ಸಾಂದೀಪನಿ |

  5. | ೩. ಏಕಲವ್ಯ | ದ್ರೋಣಾಚಾರ್ಯ |

    Answer

    | ಏಕಲವ್ಯ | ದ್ರೋಣಾಚಾರ್ಯ |

  6. | ೪. ಕರ್ಣ | ಪರಶುರಾಮ |

    Answer

    | ಕರ್ಣ | ಪರಶುರಾಮ |

  7. | ೫. ದುರ್ಯೋಧನ | ಬಲರಾಮ |

    Answer

    | ದುರ್ಯೋಧನ | ಬಲರಾಮ |

  8. | ೬. ಹಕ್ಕಬುಕ್ಕ | ವಿದ್ಯಾರಣ್ಯ |

    Answer

    | ಹಕ್ಕಬುಕ್ಕ | ವಿದ್ಯಾರಣ್ಯ |

  9. | ೭. ಶಿವಾಜಿ | ದಾದಾಜಿ ಕೊಂಡದೇವ |

    Answer

    | ಶಿವಾಜಿ | ದಾದಾಜಿ ಕೊಂಡದೇವ |

  10. | ೮. ವಿವೇಕಾನಂದ | ರಾಮಕೃಷ್ಣ ಪರಮಹಂಸ |

    Answer

    | ವಿವೇಕಾನಂದ | ರಾಮಕೃಷ್ಣ ಪರಮಹಂಸ |

Interactive Lab

| **ಗಮನಿಸಿತಿಳಿಯಿರಿ :** ಗುರುಕುಲ - ಶಿಕ್ಷಣ ಕೇಂದ್ರ, ಪ್ರಾಚೀನ ಕಾಲದ ಶಾಲೆ
ಕಡ್ಡಿ ಮುರಿದಂತೆ ಮಾತನಾಡುನಿಷ್ಠುರವಾಗಿ ಮಾತನಾಡು
ವಿದ್ಯಾರೇಖೆಹಸ್ತ ಸಾಮುದ್ರಿಕೆ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ವಿದ್ಯೆಯನ್ನು ಸೂಚಿಸುವ ಗೆರೆ
ಮನಸ್ಸು ಕಲಕುಮನಸ್ಸಿನಲ್ಲಿ ಉಂಟಾದ ಭಾವಗಳನ್ನು ಕದಡುವುದು
ತಲೆ ನೇವರಿಸುಪ್ರೀತಿಯಿಂದ ತಲೆಯ ಮೇಲೆ ಕೈಯಾಡಿಸು, ಸಾಂತ್ವನ ನೀಡು