CRECT Education

Class 6 Kannada Lesson 1: Path of Great People | KTBS – Learn the Story

Description

Part 1 of 2: Learn the true stories of Dr. Rajendra Prasad and Dr. Zakir Husain, with key Kannada vocabulary from the KTBS Class 6 First Language textbook.

ಗದ್ಯ (prose) · ಬೆ.ಗೋ. ರಮೇಶ್ (Be. Go. Ramesh)

ಪಠ್ಯFull text

**ಡಾ. ರಾಜೇಂದ್ರ ಪ್ರಸಾದ್** (Portrait of Dr. Rajendra Prasad) ಡಾ. ರಾಜೇಂದ್ರ ಪ್ರಸಾದರು ಭಾರತದ ಪ್ರಥಮ ರಾಷ್ಟ್ರಪತಿಗಳು. ಅತ್ಯಂತ ಉನ್ನತ ಸ್ಥಾನಕ್ಕೇರಿದರೂ ಸರಳ ಜೀವನ ನಡೆಸಿದವರು. ಜನಕ ಮಹಾರಾಜನಂತೆ ಅವರದು ಋಷಿಸದೃಶ ಜೀವನ. ಅವರು ಕೋಪವನ್ನು ಹತ್ತಿಕ್ಕಬಲ್ಲವರಾಗಿದ್ದರು. ಬಾಳಿನಲ್ಲಿ ಶಿಸ್ತು, ಸಂಯಮ, ಸಮಯಪಾಲನೆ ಇವುಗಳಿಗೆ ಭಾರಿ ಮಹತ್ವ ನೀಡುತ್ತಿದ್ದರು. ತಾವು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು. ಒಂದು ದಿನ ಕಚೇರಿಯ ಕೆಲಸ ಮುಗಿಸಿ ರಾಜೇಂದ್ರ ಪ್ರಸಾದರು ಮನೆಗೆ ಬಂದಾಗ ಅವರ ಒಂದು ಪುಸ್ತಕದ ಹಲವು ಪುಟಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಹರಿದು ಬಿದ್ದಿರುವುದನ್ನು ನೋಡಿದರು. ಇದೆಲ್ಲ ಮಕ್ಕಳ ಕೆಲಸ ಎಂಬುದು ಅವರಿಗೆ ಹೊಳೆಯಲು ಹೆಚ್ಚು ವೇಳೆ ಬೇಕಾಗಲಿಲ್ಲ. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಬೇಕು ಎಂದೆನಿಸಿತು. ಆದರೆ ಆ ಮಕ್ಕಳನ್ನು ಅಪರಾಧಿಗಳಾಗಿಸಲು ಅವರ ಮನ ಒಪ್ಪಲಿಲ್ಲ. ಒಂದು ಉಪಾಯ ಹೂಡಿದರು. ಪ್ರಸಾದರು ಮುಖ ಕೈಕಾಲು ತೊಳೆದು ಬಂದರು. ನಿಧಾನವಾಗಿ ಕೋಣೆಯಲ್ಲಿ ಹರಿದು ಬಿದ್ದಿದ್ದ ಪುಸ್ತಕದ ಪುಟಗಳನ್ನು ಒಂದೊಂದಾಗಿ ಎತ್ತಿ ಮೇಜಿನ ಮೇಲಿಟ್ಟರು. ಬಳಿಕ ಮಕ್ಕಳನ್ನೆಲ್ಲ ಬಳಿಗೆ ಕರೆದರು. ಮಕ್ಕಳು ಓಡೋಡಿ ಬಂದರು. ರಾಜೇಂದ್ರ ಪ್ರಸಾದರು “ಮಕ್ಕಳೇ, ನೋಡಿ ಇಲ್ಲಿ ಎಷ್ಟೊಂದು ಕಾಗದಗಳು ಹರಿದು ಹೋಗಿವೆ. ಇವೆಲ್ಲ ಪುಸ್ತಕದ ಪುಟಗಳು. ನಿಮ್ಮಲ್ಲಿ ಯಾರು ಯಾರು ಎಷ್ಟೆಷ್ಟು ಪುಟಗಳನ್ನು ಹರಿದಿದ್ದೀರೋ ಅವರಿಗೆ ಆ ಪುಟಗಳ ಸಂಖ್ಯೆಗನುಗುಣವಾಗಿ ಕಾಸು ಕೊಡುತ್ತೇನೆ. ಆಗಬಹುದೆ?” ಎಂದರು. ಮಕ್ಕಳು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಒಬ್ಬೊಬ್ಬರು ಕಾಸು ಸಿಗುವುದಲ್ಲ ಎಂಬ ಸಂತೋಷದಿಂದ ತಾವು ಹರಿದ ಪುಟಗಳ ಸಂಖ್ಯೆಯನ್ನು ತಿಳಿಸಿದರು. ಪ್ರಸಾದರು ಅವರಿಗೆಲ್ಲ ಅಷ್ಟಷ್ಟು ಕಾಸು ಕೊಟ್ಟರು. ಹುಡುಗರಿಗೆ ಖುಷಿಯೋ ಖುಷಿ! ಆಗ ಪ್ರಸಾದರು “ನೋಡಿ ಮಕ್ಕಳೇ, ಪುಸ್ತಕಗಳು ಜ್ಞಾನ ಭಂಡಾರ. ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವ ಆಕರಗಳು. ಪುಸ್ತಕದ ಪುಟಗಳನ್ನು ಹರಿದು ಹಾಕುವುದು ಒಳ್ಳೆಯ ಅಭ್ಯಾಸವಲ್ಲ. ತಿಳಿಯಿತೆ?” ಎಂದು ಮಕ್ಕಳಿಗೆ ತಿಳಿಯುವಂತೆ ಹೇಳಿದರು. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಯಿತು. ಅವರೆಲ್ಲ ರಾಜೇಂದ್ರರಿಗೆ, “ತಾತಾ ನಾವು ಇನ್ನು ಮುಂದೆ ಎಂದೂ ಪುಸ್ತಕಗಳ ಪುಟಗಳನ್ನು ಹರಿಯುವುದಿಲ್ಲ. ಜೋಪಾನ ಮಾಡುತ್ತೇವೆ” ಎಂದು ಪ್ರಮಾಣಮಾಡಿ ಹೇಳಿದರು. ಪ್ರಸಾದರಿಗೆ ಸಮಾಧಾನವಾಯಿತು. ಮಕ್ಕಳಲ್ಲಿ ಅಪರಾಧಿ ಮನೋಭಾವ ಮೂಡಲಿಲ್ಲ. ದೊಡ್ಡ ವ್ಯಕ್ತಿಗಳೇ ಹಾಗೆ. ಕೋಪ, ಅಸಹನೆ, ತಾಳ್ಗೆಡುವುದು ಇವೆಲ್ಲ ಅವರಿಂದ ದೂರ. ಪ್ರಗತಿಯ ಗುಟ್ಟೇ ಅದು. **ಡಾ. ಜಾಕಿರ್ ಹುಸೇನ್** (Portrait of Dr. Zakir Husain) ಡಾ. ಜಾಕಿರ್ ಹುಸೇನರು ಭಾರತೀಯ ಶಿಕ್ಷಣದ ಅಭಿವೃದ್ಧಿ ಹಾಗೂ ಸುಧಾರಣೆ ಕುರಿತಂತೆ ಹಲವು ಪುಸ್ತಕಗಳನ್ನು ಬರೆದವರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಬಿಹಾರದ ರಾಜ್ಯಪಾಲರಾಗಿ, ಭಾರತದ ಉಪರಾಷ್ಟ್ರಪತಿಗಳಾಗಿ, ಅನಂತರ ರಾಷ್ಟ್ರಪತಿಗಳಾಗಿ ದುಡಿದರು. ಕೆಲಕಾಲ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದರು. ಶಿಕ್ಷಣ ಅವರ ಪ್ರಮುಖ ಕಾರ್ಯಕ್ಷೇತ್ರವಾಗಿತ್ತು. ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಉನ್ನತ ಶಿಕ್ಷಣಕ್ಕೆ ಹೆಸರಾದ ಸಂಸ್ಥೆ. ಅದರ ಸ್ಥಾಪಕರು ಡಾ. ಜಾಕಿರ್ ಹುಸೇನರು. ಅವರು ತಮ್ಮ ಜೀವನದ ಬಹುಭಾಗವನ್ನು ಆ ವಿಶ್ವವಿದ್ಯಾಲಯದಲ್ಲಿಯೇ ಕಳೆದರೆನ್ನಬಹುದು. ಅಲ್ಲಿನ ಒಂದು ಘಟನೆ ತುಂಬಾ ರೋಚಕವಾಗಿದೆ. ಡಾ. ಜಾಕಿರ್ ಹುಸೇನರು ಶಿಸ್ತು ಮತ್ತು ಶುಚಿಗೆ ಅಪಾರ ಮಹತ್ವ ನೀಡುತ್ತಿದ್ದರು. ಎಲ್ಲ ವಿದ್ಯಾರ್ಥಿಗಳೂ ಪ್ರತಿನಿತ್ಯ ಶುಚಿಯಾದ ಬಟ್ಟೆಗಳನ್ನು ಧರಿಸಿ ಕಾಲೇಜಿಗೆ ಬರಬೇಕು ಹಾಗೂ ಕಾಲಿಗೆ ಹಾಕಿದ ಬೂಟುಗಳನ್ನು ಚೆನ್ನಾಗಿ ಪಾಲಿಶ್ ಮಾಡಿರಬೇಕು ಎಂದು ಹೇಳುತ್ತಿದ್ದರು. ಆದರೆ ಎಷ್ಟೋ ವಿದ್ಯಾರ್ಥಿಗಳು ಜಾಕಿರ್ ಹುಸೇನರು ಹೇಳಿದುದನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲ. ಇದರಿಂದ ಶಿಸ್ತಿಗೆ ಭಂಗವಾಗುವುದೆಂದು ಹುಸೇನರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಿಗೆ ಬುದ್ಧಿಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು. ಒಂದು ದಿನ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಜಾಕಿರ್ ಹುಸೇನರು ಒಬ್ಬ ಬೂಟ್‌ಪಾಲಿಶ್ ಹಾಕುವವನ ವೇಷದಲ್ಲಿ ಕುಳಿತಿದ್ದು ವಿದ್ಯಾರ್ಥಿಗಳ ಗಮನಕ್ಕೆ ಬಂತು. ಕುಲಪತಿಗಳು ಕೈಯಲ್ಲಿ ಪಾಲಿಶ್ ಡಬ್ಬಿ, ಬ್ರಷ್ ಹಿಡಿದು ಕುಳಿತಿದ್ದ ದೃಶ್ಯ ಕಂಡ ವಿದ್ಯಾರ್ಥಿಗಳು ತಮ್ಮ ವರ್ತನೆಗೆ ನಾಚಿದರು. ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡೂ ಆಗಿತ್ತು. ಅಂದಿನಿಂದ ವಿದ್ಯಾರ್ಥಿಗಳು ನೀಟಾಗಿ ಬಟ್ಟೆ ಧರಿಸಿಕೊಂಡು, ಬೂಟುಗಳಿಗೆ ಪಾಲಿಶ್ ಹಾಕಿಕೊಂಡು ಕಾಲೇಜಿಗೆ ಬರತೊಡಗಿದರು. ಇದು ವಿದ್ಯಾರ್ಥಿಗಳ ಬಾಳಿನಲ್ಲಿ ಶಿಸ್ತು ಬೆಳೆಸಿಕೊಳ್ಳಲು ನೆರವಾಯಿತು. “ಶಿಸ್ತು ಮೂಡಿಸಿಕೊಳ್ಳಿ” ಇದು ಜಾಕಿರ್ ಹುಸೇನರ ಆದೇಶವಾಗಿತ್ತು. **ಕೌಶಲ :** ಮಾತನಾಡುವುದು. **ಸಾಮರ್ಥ್ಯ :** ಸನ್ನಿವೇಶ ಮತ್ತು ಘಟನೆಗಳನ್ನು ಕುರಿತು ನಿಖರವಾಗಿ ಮಾತನಾಡುವುದು. **ಕವಿ ಕೃತಿ ಪರಿಚಯ:** ಬೆ. ಗೋ. ರಮೇಶ್ (Portrait of Be. Go. Ramesh) ಅವರು ೧೯೪೫ ರ ಆಗಸ್ಟ್ ೨೨ ರಂದು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ದೊಡ್ಡಹನಸೋಗೇ ಗ್ರಾಮದಲ್ಲಿ ಜನಿಸಿದರು. ತಂದೆ ಬಿ.ಎಸ್. ಗೋವಿಂದರಾಜು, ತಾಯಿ ರಾಧಮ್ಮ. ರಮೇಶ್ ಬಿ.ಇ. ಪದವೀಧರರಾಗಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ಸೇವೆಸಲ್ಲಿಸಿ ನಿವೃತ್ತರಾಗಿರುವರು. ಪ್ರವೃತ್ತಿಯಿಂದ ಸಾಹಿತಿಗಳಾಗಿರುವ ಇವರು ಉತ್ತಮ ಭಾಷಾಂತರಕಾರರೂ ಗಮಕಿಗಳೂ ಆಗಿರುವರು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವರು, ಕನ್ನಡದಲ್ಲಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ಇನ್ನೂರು ಪುಸ್ತಕಗಳನ್ನು ರಚಿಸಿರುವರು. ಜೀವನಚರಿತ್ರೆ, ವ್ಯಕ್ತಿ ಚಿತ್ರಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. **ವಿಶ್ವವಿಖ್ಯಾತ ಮಹಿಳೆಯರು, ನಮ್ಮ ಗಮಕಿಗಳು, ಕನ್ನಡ ಕವಿರತ್ನತ್ರಯರು, ವಿಜ್ಞಾನಿಗಳ ಹಾಗೂ ದೇಶಭಕ್ತರ ಜೀವನ ಚರಿತ್ರೆಗಳು ಇವರ ಗಮನಾರ್ಹ ಕೃತಿಗಳು.** ‘ಶಾಂತಿಪ್ರಿಯ’ ಅಂಕಿತದಲ್ಲಿ ಇವರು ರಚಿಸಿದ ಆರುನೂರು ವಚನಗಳ ಸಂಕಲನ **‘ವಚನಸಾಗರ’** ಕೃತಿಗೆ ವಚನ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿರುತ್ತದೆ. ಸರ್ ಎಂ.ವಿ.ರವರ ಪ್ರಶಸ್ತಿ, ಡೆಪ್ಯೂಟಿ ಚನ್ನಬಸಪ್ಪ ರಾಜ್ಯ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಪಠ್ಯಭಾಗವನ್ನು ಇವರ **“ಪ್ರಸಿದ್ಧ ವ್ಯಕ್ತಿಗಳ ಬಾಳಿನಲ್ಲಿ ಒಂದು ಘಟನೆ”** ಕೃತಿಯಿಂದ ಆಯ್ದುಕೊಳ್ಳಲಾಗಿದೆ.

"ಕಳೆದು ಹೋದುದರ ಬಗ್ಗೆ ಚಿಂತಿಸಬೇಡ, ಮುಂದಿನದನ್ನು ಯೋಚಿಸು." — "Do not worry about what is lost, think about the future." (A great mindset for moving forward and focusing on what can be done next.)

ಪದಗಳ ಅರ್ಥword meanings

KannadaPronunciationMeaning
ರಾಷ್ಟ್ರಪತಿ—ರಾಷ್ಟ್ರಾಧ್ಯಕ್ಷ, ರಾಷ್ಟ್ರದ ಪ್ರಥಮ ಪ್ರಜೆ
ಉನ್ನತ—ಎತ್ತರವಾದ, ಮೇಲಾದ
ಹತ್ತಿಕ್ಕು—ಅಡಗಿಸು, ದಮನಮಾಡು
ಚೆಲ್ಲಾಪಿಲ್ಲಿ—ಅಸ್ತವ್ಯಸ್ತ, ಚದುರು
ಅನುಗುಣ—ಅನುಸಾರ, ಹೊಂದಿಕೊಂಡು
ಆಕರ—ಮೂಲ ಆಧಾರ
ಮನೋಭಾವ—ಮನಸ್ಸಿನಭಾವನೆ
ದೌರ್ಬಲ್ಯ—ಬಲಹೀನತೆ
ಭಂಗ—ಸೋಲು, ವೈಫಲ್ಯ
ವರ್ತನೆ—ನಡತೆ, ರೀತಿ
ಆದೇಶ—ಆಜ್ಞೆ, ಅಪ್ಪಣೆ
ಸದೃಶ—ಹೋಲುವ, ಸಾಟಿಯಾದ
ಸಂಯಮ—ಹತೋಟಿ, ನಿಯಂತ್ರಣ
ಅಪರಾಧಿ—ತಪ್ಪುಮಾಡಿದವನು
ಭಂಡಾರ—ಬೊಕ್ಕಸ, ಖಜಾನೆ
ಜೋಪಾನ—ರಕ್ಷಣೆ, ಜತನ
ಪ್ರಗತಿ—ಮುನ್ನಡೆ, ಅಭಿವೃದ್ಧಿ
ರೋಚಕ—ಕುತೂಹಲಕಾರಿ, ಸೋಜಿಗದಾಯಕ
ಪ್ರವೇಶದ್ವಾರ—ಒಳಹೋಗುವ ಮುಖ್ಯ ಬಾಗಿಲು
ನೀಟಾಗಿ—ಅಂದವಾಗಿ, ಸೊಗಸಾಗಿ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದುದನ್ನು ಆರಿಸಿ ಬಿಟ್ಟಸ್ಥಳ ಭರ್ತಿಮಾಡಿರಿ.

  1. ೧. ಮಕ್ಕಳಿಗೆ ತಮ್ಮ_________________ಅರಿವಾಗಬೇಕು ಎಂದೆನಿಸಿತು.

    Answer

    ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಬೇಕು ಎಂದೆನಿಸಿತು.

  2. ೨. ಪ್ರಸಾದರು ಅವರಿಗೆಲ್ಲ ಅಷ್ಟಷ್ಟು _________________ ಕೊಟ್ಟರು.

    Answer

    ಪ್ರಸಾದರು ಅವರಿಗೆಲ್ಲ ಅಷ್ಟಷ್ಟು ಕಾಸು ಕೊಟ್ಟರು.

  3. ೩. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ತಾವೇ ಒಂದು _________________ಕಂಡುಕೊಂಡರು.

    Answer

    ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು.

  4. ೪. ಒಂದಿಬ್ಬರು _________________ಹಾಕಿಸಿಕೊಂಡೂ ಆಗಿತ್ತು.

    Answer

    ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡೂ ಆಗಿತ್ತು.

  5. (ಪಾಲಿಶ್, ಕಾಸು, ಕಾಗದದ ಚೂರು, ತಪ್ಪಿನ, ದಾರಿ)

ಆ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ರಚಿಸಿರಿ.

  1. ೧. ರಾಷ್ಟ್ರಪತಿ

    Model sentence

    ರಾಷ್ಟ್ರಪತಿ: ನಮ್ಮ ದೇಶದ ರಾಷ್ಟ್ರಪತಿಗಳು ರಾಷ್ಟ್ರಭವನದಲ್ಲಿ ಇರುತ್ತಾರೆ.

  2. ೨. ಕಾಸು

    Model sentence

    ಕಾಸು: ಅಮ್ಮ ನನಗೆ ದಿನವೂ ಕಾಸು ಕೊಡುತ್ತಾಳೆ.

  3. ೩. ಶಿಸ್ತು

    Model sentence

    ಶಿಸ್ತು: ಶಾಲೆಯಲ್ಲಿ ಎಲ್ಲರೂ ಶಿಸ್ತಿನಿಂದ ಇರಬೇಕು.

  4. ೪. ದಾರಿ

    Model sentence

    ದಾರಿ: ನನ್ನ ಮನೆಯ ಹತ್ತಿರ ಅಗಲವಾದ ದಾರಿ ಇದೆ.

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ರಾಜೇಂದ್ರ ಪ್ರಸಾದರು ತಾವು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು?

    Answer

    ರಾಜೇಂದ್ರ ಪ್ರಸಾದರು ತಾವು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.

  2. ೨. ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಏನನ್ನು ಕೊಟ್ಟರು?

    Answer

    ಪ್ರಸಾದರು ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಕಾಸು ಕೊಟ್ಟರು.

  3. ೩. ಯಾವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು?

    Answer

    ಪ್ರಸಾದರು ಪುಸ್ತಕದ ಪುಟಗಳನ್ನು ಹರಿದು ಹಾಕುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಮಕ್ಕಳಿಗೆ ಹೇಳಿದರು.

  4. ೪. ಜಾಮಿಯಾ ಮಿಲಿಯಾ ಎಲ್ಲಿದೆ?

    Answer

    ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯವು ದೆಹಲಿಯಲ್ಲಿದೆ.

  5. ೫. ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಯಾವ ವೇಷ ಹಾಕಿದರು?

    Answer

    ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಬೂಟ್‌ಪಾಲಿಶ್ ಹಾಕುವವನ ವೇಷ ಹಾಕಿದರು.

ಈ. ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು?

  1. ೧. “ನೋಡಿ ಮಕ್ಕಳೇ, ಪುಸ್ತಕಗಳು ಜ್ಞಾನ ಭಂಡಾರ.”

    Answer

    ಈ ಮಾತನ್ನು ರಾಜೇಂದ್ರ ಪ್ರಸಾದರು ಮಕ್ಕಳಿಗೆ ಹೇಳಿದರು.

  2. ೨. “ತಾತಾ, ನಾವು ಇನ್ನು ಮುಂದೆ ಎಂದೂ ಪುಸ್ತಕಗಳ ಪುಟಗಳನ್ನು ಹರಿಯುವುದಿಲ್ಲ”

    Answer

    ಈ ಮಾತನ್ನು ಮಕ್ಕಳು ರಾಜೇಂದ್ರ ಪ್ರಸಾದರಿಗೆ ಹೇಳಿದರು.

ಉ. ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವವನ್ನು ವಿವರಿಸಿರಿ.

    Answer

    ಡಾ. ರಾಜೇಂದ್ರ ಪ್ರಸಾದರು ಉನ್ನತ ಸ್ಥಾನದಲ್ಲಿದ್ದರೂ ಸರಳ ಜೀವನ ನಡೆಸಿದರು. ಅವರು ಕೋಪವನ್ನು ಹತ್ತಿಕ್ಕಬಲ್ಲವರಾಗಿದ್ದರು. ಶಿಸ್ತು, ಸಂಯಮ, ಸಮಯಪಾಲನೆಗಳಿಗೆ ಅವರು ಭಾರಿ ಮಹತ್ವ ನೀಡುತ್ತಿದ್ದರು. ಅವರು ತಾವು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.

  2. ೨. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್‌ಹುಸೇನ್ ಏನು ಮಾಡಿದರು?

    Answer

    ಜಾಕಿರ್ ಹುಸೇನರು ವಿದ್ಯಾರ್ಥಿಗಳ ಶಿಸ್ತಿಗಾಗಿ ಒಂದು ಉಪಾಯ ಮಾಡಿದರು. ಒಂದು ದಿನ ಅವರು ಬೂಟ್ ಪಾಲಿಶ್ ಮಾಡುವವನ ವೇಷದಲ್ಲಿ ಕಾಲೇಜಿನ ಪ್ರವೇಶದ್ವಾರದಲ್ಲಿ ಕುಳಿತರು. ಇದನ್ನು ಕಂಡ ವಿದ್ಯಾರ್ಥಿಗಳು ನಾಚಿದರು, ಕೆಲವರು ಪಾಲಿಶ್ ಹಾಕಿಸಿಕೊಂಡರು. ಅಂದಿನಿಂದ ಎಲ್ಲರೂ ನೀಟಾಗಿ ಬಟ್ಟೆ ಧರಿಸಿ, ಬೂಟು ಪಾಲಿಶ್ ಮಾಡಿಕೊಂಡು ಬರತೊಡಗಿದರು.