CRECT Education

Class 6 Kannada Lesson 12: Siddharoodha Fair | KTBS First Language – Learn the Story

Description

Learn the story of the Siddharoodha Fair from Class 6 Kannada First Language. We walk through the school trip to the fair, the teachings of the Guru, and the vibrant celebration — beat by beat.

ಗದ್ಯ · ಸಮಿತಿ ರಚನೆ

ಪಠ್ಯFull text

ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ಒಂದು ದೊಡ್ಡ ಪಟ್ಟಣ. ಅದು ವ್ಯಾಪಾರಕ್ಕಾಗಿ ಹೆಸರಾಗಿದೆ. ಅದು ವಿದ್ಯಾಕೇಂದ್ರವೂ ಹೌದು. ಅಲ್ಲಿ ದೊಡ್ಡ ಮಠಗಳು ಇವೆ. ಅವುಗಳಲ್ಲಿ ಸಿದ್ದಾರೂಢಸ್ವಾಮಿಯ ಮಠವೂ ಒಂದು. ಪ್ರತಿ ವರುಷ ಶಿವರಾತ್ರಿಯ ದಿನ ಅಲ್ಲಿ ಜಾತ್ರೆ ಕೂಡುತ್ತದೆ. ಜಾತ್ರೆಯ ದಿನ ಎಲ್ಲಿ ನೋಡಿದರೂ ಜನರ ಗದ್ದಲವೇ ಗದ್ದಲ. ರೈಲುನಿಲ್ದಾಣದಲ್ಲಿ, ಬಸ್ ನಿಲ್ದಾಣದಲ್ಲಿ ಜನಸಾಗರ. ಸುತ್ತಲಿನ ಹಳ್ಳಿಗಳಿಂದ ಮಾತ್ರವಲ್ಲ, ದೂರದೂರದ ಊರುಗಳಿಂದಲೂ ಸಿದ್ದಾರೂಢಸ್ವಾಮಿಯ ಭಕ್ತರು ಅಂದು ಜಾತ್ರೆಗೆಂದು ಜಮಾಯಿಸುವರು. ನೆರೆಯೂರಾದ ಅದರ್‌ಗುಂಜಿಯ ಶಾಲೆಯ ಮಕ್ಕಳು ಈ ಜಾತ್ರೆಯನ್ನು ನೋಡಲು ಹೊರಟರು. ತಮಗೆ ಬೇಕಾದ ಸಾಮಾನುಗಳನ್ನು ತಮ್ಮ ಬ್ಯಾಗುಗಳಲ್ಲಿ ಹಾಕಿಕೊಂಡು ಸಜ್ಜಾದರು. ಸದಾನಂದನು ಆರನೆಯ ತರಗತಿಯ ಹಿರೇಮಣಿ. ಅವನು ತನ್ನ ತರಗತಿಯ ಬಾಲಕರನ್ನು ಕರೆದುಕೊಂಡು ಜಾತ್ರೆಗೆ ನಡೆದನು. ಗುರುಗಳು ಅವರನ್ನು ಹಿಂಬಾಲಿಸಿದರು. ದಾರಿಯುದ್ದಕ್ಕೂ ಹಾಡುತ್ತ ಅವರು ಶಿಸ್ತಿನಿಂದ ಸಾಗಿದರು. ಆಗಾಗ ಹುಡುಗರು ಒಂದಿಲ್ಲೊಂದು ಪ್ರಶ್ನೆಯನ್ನು ಗುರುಗಳಲ್ಲಿ ಕೇಳುವುದೂ ಆ ಪ್ರಶ್ನೆಗಳಿಗೆ ಗುರುಗಳು ಉತ್ತರಿಸುವುದೂ ನಡೆದಿತ್ತು. ತರಗತಿಯ ಚೂಟಿ ಹುಡುಗ ರುಸ್ತುಮ್, "ಗುರುಗಳೆ, ಈ ಸಿದ್ದಾರೂಢ ಮಠದ ಇತಿಹಾಸ ಏನು, ಇದು ಎಷ್ಟು ವರ್ಷಗಳಿಂದ ಇದೆ?" ಎಂದು ಕೇಳಿದನು. "ಸಿದ್ದಾರೂಢರು ಒಬ್ಬರು ಮಹಾನ್ ಸಂತರು. ಅವರು ಮೂಲತಃ ಬೀದರ್ ಜಿಲ್ಲೆಯ ಚಳಕಾಪುರದವರು. ೧೮೩೬ರಲ್ಲಿ ಹುಟ್ಟಿದರು. ಚಿಕ್ಕಂದಿನಲ್ಲಿಯೇ ಅವರಿಗೆ ಜೀವನದ ಐಹಿಕ ಸುಖಭೋಗಗಳಲ್ಲಿ ವಿರಕ್ತಿ ಬಂದು ಸಂನ್ಯಾಸವನ್ನು ಸ್ವೀಕಾರ ಮಾಡಿದರು. ಮನೆ ಬಿಟ್ಟು ಲೋಕಸಂಚಾರಿಯಾದರು. ಹಾಗೆ ಊರಿಂದೂರಿಗೆ ಸಂಚರಿಸುತ್ತಿದ್ದ ಸ್ವಾಮಿಗಳು ತನ್ನ ೪೧ನೆಯ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ನೆಲೆ ನಿಂತರು. ಇದನ್ನೇ ತನ್ನ ಕರ್ಮಭೂಮಿಯನ್ನಾಗಿ ಆರಿಸಿಕೊಂಡರು. ನಂಬಿ ಬಂದವರಿಗೆ ಅಭಯ ನೀಡಿದರು. ದೇವರ ಭಕ್ತಿಯಿಂದ ಸಕಲ ಕಷ್ಟಗಳೂ ದೂರಾಗುತ್ತವೆ ಎಂಬ ಪ್ರೇರಣೆ ತುಂಬಿದರು. "ಓಂ ನಮಃ ಶಿವಾಯ" ಎಂಬ ಪಂಚಾಕ್ಷರಿ ಮಂತ್ರವನ್ನು ಜಾತಿಭೇದಗಳಿಲ್ಲದೆ ಎಲ್ಲರಿಗೂ ಸಮಾನವಾಗಿ ಬೋಧಿಸಿದರು" ಎಂದರು ಗುರುಗಳು. "ಗುರುಗಳೇ, ಮಠ ಎಂದರೇನು? ಅದು ಏನು ಕೆಲಸ ಮಾಡುತ್ತದೆ?" ಎಂದು ಪ್ರಶ್ನಿಸಿದಳು ಹಸೀನಾ. "ಹಸೀನಾ, ಮಠ ಎಂಬುದು ಹಿಂದೂ ಧರ್ಮದಲ್ಲಿರುವ ಒಂದು ಸಾಮಾಜಿಕ ವ್ಯವಸ್ಥೆ. ಸಮಾಜದ ಮಂದಿಗೆ ಕಷ್ಟಕಾಲದಲ್ಲಿ ಒಂದು ಭರವಸೆ ಬೇಕಾಗುತ್ತದೆ. ತಮ್ಮ ಗೊಂದಲಗಳಿಗೆ ಪರಿಹಾರ ಕೊಡುವ ಒಬ್ಬರು ಹಿರಿಯ ವ್ಯಕ್ತಿ ಬೇಕಾಗುತ್ತಾರೆ ಅಥವಾ ಕಷ್ಟಕಾರ್ಪಣ್ಯಗಳು ಏನೂ ಇಲ್ಲದಿದ್ದರೂ ಒಟ್ಟಾರೆಯಾಗಿ ಮಾನಸಿಕ ನೆಮ್ಮದಿಗಾಗಿ ಮನುಷ್ಯ ಒಂದಿಲ್ಲೊಂದು ವ್ಯವಸ್ಥೆಯನ್ನು ಹುಡುಕುತ್ತಲೇ ಇರುತ್ತಾನೆ ಅಲ್ಲವೆ? ಜನರಿಗೆ ಅಂಥದೊಂದು ಭದ್ರತೆ, ಭರವಸೆ ಮೂಡಿಸುವ ಕೆಲಸ ಮಾಡುವುದೇ ಮಠಗಳು. ಸಮಾಜದಲ್ಲಿರುವ ಮಠಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜಮುಖಿ ಕೆಲಸವನ್ನೇ ಮಾಡುತ್ತವೆ. ಅವು ಬಡಬಗ್ಗರಿಗೆ ಧನಸಹಾಯ ಮಾಡಬಹುದು, ವಿದ್ಯಾರ್ಥಿಗಳಿಗೆ ಊಟ-ವಸತಿ ನೀಡಬಹುದು, ದಿಕ್ಕುತೋಚದವರಿಗೆ ಮಾನಸಿಕ ನೆಮ್ಮದಿ ನೀಡುವ ಉಪದೇಶ ಮಾಡಬಹುದು, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು, ಮಹಾಕಾವ್ಯಗಳನ್ನೂ, ಪುರಾಣಗಳನ್ನೂ ಜನರಿಗೆ ತಲುಪಿಸುವ ಕೆಲಸ ಮಾಡಬಹುದು, ಧರ್ಮದೊಳಗಿನ ಅನೇಕ ತತ್ತ್ವಶಾಸ್ತ್ರದ ವಿಚಾರಗಳನ್ನು ಪಂಡಿತರ ಪ್ರವಚನಗಳ ಮೂಲಕ ಜನರಿಗೆ ತಲುಪಿಸಬಹುದು. ಒಟ್ಟಾರೆಯಾಗಿ ಮಠವೆಂದರೆ ಸಮಾಜವೆಂಬ ಸಮುದ್ರದ ಕಿನಾರೆಯಲ್ಲಿ ನಿಂತ ದೀಪಸ್ತಂಭ" ಉತ್ತರಿಸಿದರು ಗುರುಗಳು. ಈ ಎಲ್ಲ ಚರ್ಚೆ, ಸಂವಾದಗಳು ದಾರಿಯುದ್ದಕ್ಕೂ ನಡೆದುದರಿಂದ ವಿದ್ಯಾರ್ಥಿಗಳಿಗೆ ದಾರಿಯ ದಣಿವು ಎಳ್ಳಷ್ಟೂ ಅನಿಸಲಿಲ್ಲ. ಅವರೆಲ್ಲರೂ ಮಠಕ್ಕೆ ಬಂದರು. ಸದಾನಂದ: ಗುರುಗಳೇ, ಮಠದ ಪಡಸಾಲೆಯಲ್ಲಿ ಬಹಳ ಜನರು ಸೇರಿದ್ದಾರೆ. ಅವರು ಭಜನೆ ಮಾಡುತ್ತಿದ್ದಾರೆ. ನಾವೂ ಒಳಗೆ ಹೋಗೋಣ. ಗುರುಗಳು: ಬಾಲಕರೇ, ಎಲ್ಲಿ ನೋಡಿದರೂ ಭಜನೆ ನಡೆದಿದೆ. ಆಚೆಗೆ ಅಡುಗೆ ಮನೆಯಿದೆ. ಅಲ್ಲಿಯೂ ಭಜನೆ ನಡೆಯುತ್ತಿದೆ. ಹೊರಗಿನ ಬಯಲಲ್ಲಿ ನೋಡಿ. ಕೆಲವು ಜನರು ಅಡುಗೆಪಾತ್ರೆಗಳನ್ನು ತೊಳೆಯುತ್ತಿದ್ದಾರೆ, ಅವರೂ ಭಜನೆ ಮಾಡುತ್ತಿದ್ದಾರೆ. ಯಾರು ಯಾವ ಕೆಲಸದಲ್ಲಿ ತೊಡಗಿದ್ದರೂ ಭಜನೆ ಮಾಡುತ್ತ ಕೆಲಸ ಮಾಡುತ್ತಿದ್ದಾರೆ. ಜಾತ್ರೆಗೆ ಬಂದ ಪರ ಊರಿನ ಜನರು ಮಠದಲ್ಲಿಯೇ ಊಟ ಮಾಡುವರು. ಅದರ್‌ಗುಂಜಿಯ ಶಾಲೆಯ ಬಾಲಕರು ಮಠದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದರು. ಕೆಲವರು ನೀರು ತಂದು ಕೊಟ್ಟರು. ಕೆಲವರು ಬಂದ ಜನರಿಗೆ ಊಟ ಬಡಿಸಿದರು. ಬಳಿಕ ಮಠದಲ್ಲಿ ಊಟ ಮಾಡಿದರು. ತುಸು ಹೊತ್ತು ಮಠದ ಆವಾರದಲ್ಲಿಯೇ ವಿಶ್ರಮಿಸಿದರು. ಮಠದ ಮುಂದೆ ಒಂದು ದೊಡ್ಡ ಮಂಟಪವನ್ನು ಹಾಕಿದ್ದರು. ತಳಿರುತೋರಣಗಳಿಂದ ಅದನ್ನು ಸಿಂಗರಿಸುತ್ತಿದ್ದರು. ಮಂಟಪದ ಮುಂದೆ ಬಣ್ಣ ಬಣ್ಣದ ಅರಿವೆ ಸುತ್ತಿ, ಪತಾಕೆಗಳನ್ನು ಹಚ್ಚಿ ಸಿಂಗರಿಸಿದ ದೊಡ್ಡ ತೇರು ನಿಂತಿತ್ತು. ನಾಲ್ಕು ಗಂಟೆಗೆ ಜನರೆಲ್ಲ ತೇರು ನೋಡಲು ಸೇರಿದರು. ಕೆಲವರು ಗುಂಪು ಗುಂಪಾಗಿ ಅಲ್ಲಲ್ಲಿ ನಿಂತರು. ಕೆಲವರು ತೇರಿನ ಹಗ್ಗ ಹಿಡಿದು ಅವರ ಸಮೀಪ ನಿಂತರು. ಎಲ್ಲರೂ "ಹರ ಹರ ಮಹಾದೇವ!" ಎಂದು ಭಕ್ತಿಯಿಂದ ಕೂಗುತ್ತ ತೇರನ್ನು ಎಳೆಯತೊಡಗಿದರು. ಸದಾನಂದ: ಅಗೋ ನೋಡಿ! ತೇರು ಮುಂದೆ ಸಾಗುತ್ತಿದೆ. ತೇರಿಗೆ ಬಣ್ಣಬಣ್ಣದ ಪತಾಕೆಗಳಿವೆ. ಗಾಳಿಗೆ ಅವು ಪಟಪಟ ಹಾರುತ್ತಿವೆ. ಹನುಮ : ತೇರಿನ ಕಳಸ ನೋಡಿ. ಹೇಗೆ ಲಕಲಕ ಹೊಳೆಯುತ್ತಿದೆ ! ಶಂಕರ : ಇದೇನು, ತೇರಿನ ಮೇಲೆ ಜನರು ಉತ್ತತ್ತಿಗಳನ್ನು ಎಸೆಯುತ್ತಿದ್ದಾರೆ ! ಭರಮ : ಅದೋ! ನೋಡು, ಬಾಳೆಹಣ್ಣುಗಳನ್ನು ಎಸೆಯುತ್ತಿದ್ದಾರೆ. ಅದರ್‌ಗುಂಜಿ ಶಾಲೆಯ ಬಾಲಕರು ತೇರಿನ ಹಗ್ಗ ಹಿಡಿದು ಸ್ವಲ್ಪ ದೂರ ತೇರನ್ನು ಎಳೆದರು. ಬಳಿಕ ಭಜನೆ ಮಾಡುತ್ತಿರುವ ಜನರನ್ನು ದಾಟಿ, ಅವರು ಜಾತ್ರೆ ನೋಡಲು ಹೋದರು. ಎಲ್ಲಿ ನೋಡಿದರಲ್ಲಿ ಅಂಗಡಿಗಳ ಸಾಲು. ಬಾಳೆಹಣ್ಣು, ತೆಂಗಿನಕಾಯಿಗಳ ಅಂಗಡಿಗಳಿಗಂತೂ ಎಣಿಕೆಯಿಲ್ಲ. ಬಳೆಗಳ ಅಂಗಡಿಗಳಲ್ಲಿ ಹೆಣ್ಣು ಮಕ್ಕಳು ಕಿಕ್ಕಿರಿದು ಸೇರಿದ್ದರು. ಮಿಠಾಯಿಗಳನ್ನು ಕೊಳ್ಳಲು ಜನರು ಗುಂಪು ಗುಂಪಾಗಿ ನಿಂತಿದ್ದರು. ಆ ಶಾಲೆಯ ಮಕ್ಕಳು ಮಿಠಾಯಿಗಳನ್ನು ಕೊಂಡುಕೊಂಡರು. ಮುಂದೆ ತೊಟ್ಟಿಲ ಜೀಕ ಹಾಗೂ ಕುದುರೆ, ಆನೆ, ಒಂಟೆ ಮೊದಲಾದವುಗಳಿಂದ ಕೂಡಿದ ತಿರುಗು ಯಂತ್ರಗಳು ಕಾಣಿಸಿದವು. ಆ ಹುಡುಗರು ಬಹಳ ಹುರುಪಿನಿಂದ ಆ ತಿರುಗುಯಂತ್ರಗಳಲ್ಲಿ ಕುಳಿತು ಆಟ ಆಡಿದರು. ಆಮೇಲೆ ಅವರೆಲ್ಲರೂ ಸಮೀಪದ ಮಠದ ಕೆಳಗೆ ತುಸು ಹೊತ್ತು ಕುಳಿತರು. ಸದಾನಂದನು ಎಲ್ಲರಿಗೂ ಮಿಠಾಯಿ ಹಂಚಿದನು. "ಸಿದ್ದಾರೂಢರ ಮಹಿಮೆ ಎಂಥದು! ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿದ್ದ ಮಠವಿದು. ಗಾಂಧೀಜಿ, ತಿಲಕರಂಥ ರಾಷ್ಟ್ರನಾಯಕರಿಗೆ ಸ್ಫೂರ್ತಿ ಕೊಟ್ಟ ಮಠವಿದು" ಎನ್ನುತ್ತ ಗುರುಗಳು ಮಠದ ಪ್ರಸಾದವನ್ನು ಕಣ್ಣಿಗೊತ್ತಿಕೊಂಡರು. "ಸಿದ್ದಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ...", "ಸಿದ್ದಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ..." ಮುಂತಾದ ಜಯಘೋಷಗಳು ಜನಸ್ತೋಮದಿಂದ ಕೇಳಿಬರುತ್ತಿದ್ದವು. ಅಷ್ಟರಲ್ಲಿ ಸಂಜೆಯಾಯಿತು. ಮಕ್ಕಳು ಅದರ್‌ಗುಂಜಿಗೆ ಹಿಂದಿರುಗಿದರು. **ಕೌಶಲ : ಆಲಿಸುವುದು.** **ಸಾಮರ್ಥ್ಯ : ಗುಂಪು ಚಟುವಟಿಕೆಯ ನಿರ್ದೇಶನಗಳನ್ನು ಆಲಿಸಿ ಕಾರ್ಯರೂಪಕ್ಕೆ ತರುವುದು.**

"ಒಂದಾಗಿ ಶ್ರಮಿಸಿರಿ, ಸಂಭ್ರಮವನ್ನು ಪಡೆಯಿರಿ." — "Work hard together, and achieve celebration." A reminder that unity and collective effort lead to success and joy.

ಪದಗಳ ಅರ್ಥword meanings

KannadaPronunciationMeaning
ಐಹಿಕಪ್ರಾಪಂಚಿಕ, ಸಂನ್ಯಾಸ - ಸಾಂಸಾರಿಕ ಬಂಧಗಳನ್ನು ಕಳಚಿಕೊಂಡ ಸ್ಥಿತಿ, ದೀಪಸ್ತಂಭ - ಸಮುದ್ರದಂಡೆಯಲ್ಲಿ ಕಟ್ಟಿದ ದೀಪ ಗೋಪುರ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಪದಗಳ ಅರ್ಥ ಬರೆಯಿರಿ.

  1. ೧. ಹಿರೇಮಣಿ

  2. ೨. ಕರ್ಮಭೂಮಿ

  3. ೩. ಪತಾಕೆ

  4. ೪. ಜನಸ್ತೋಮ

ಆ. ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ.

  1. ೧. ಅಲ್ಲಿ ಜಾತ್ರೆ ದಿನ ಶಿವರಾತ್ರಿಯ ಕೂಡುತ್ತದೆ.

    Answer

    ಅಲ್ಲಿ ಶಿವರಾತ್ರಿಯ ದಿನ ಜಾತ್ರೆ ಕೂಡುತ್ತದೆ.

  2. ೨. ಮಠದ ಮಂಟಪ ಮುಂದೆ ಹಾಕಿದ್ದರು ದೊಡ್ಡ.

    Answer

    ಮಠದ ಮುಂದೆ ದೊಡ್ಡ ಮಂಟಪವನ್ನು ಹಾಕಿದ್ದರು.

  3. ೩. ಮಿಠಾಯಿಗಳನ್ನು ಶಾಲೆಯ ಕೊಂಡರು ಮಕ್ಕಳು.

    Answer

    ಶಾಲೆಯ ಮಕ್ಕಳು ಮಿಠಾಯಿಗಳನ್ನು ಕೊಂಡರು.

  4. ೪. ಹೋರಾಟದ ಸಕ್ರಿಯವಾಗಿದ್ದ ಸ್ವಾತಂತ್ರ್ಯ ಮಠವಿದು ಸಮಯದಲ್ಲಿ.

    Answer

    ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿದ್ದ ಮಠವಿದು.

ಇ. ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.

  1. ೧. ಪ್ರೇರಣೆ

    Model sentence

    ಪ್ರೇರಣೆ: ನನ್ನ ಶಿಕ್ಷಕರು ನನಗೆ ಸದಾ ಪ್ರೇರಣೆ ನೀಡುತ್ತಾರೆ.

  2. ೨. ಕಷ್ಟಕಾರ್ಪಣ್ಯ

    Model sentence

    ಕಷ್ಟಕಾರ್ಪಣ್ಯ: ಬಡವರ ಕಷ್ಟಕಾರ್ಪಣ್ಯ ಕಂಡು ನನಗೆ ನೋವಾಯಿತು.

  3. ೩. ಹುರುಪು

    Model sentence

    ಹುರುಪು: ಆಟದ ಸ್ಪರ್ಧೆಯಲ್ಲಿ ನಾನು ಹುರುಪಿನಿಂದ ಭಾಗವಹಿಸಿದೆ.

  4. ೪. ಸ್ವಯಂಸೇವಕ

    Model sentence

    ಸ್ವಯಂಸೇವಕ: ಶಾಲಾ ಉತ್ಸವದಲ್ಲಿ ನಾನು ಸ್ವಯಂಸೇವಕನಾಗಿ ಕೆಲಸ ಮಾಡಿದೆ.

ಈ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಸಿದ್ದಾರೂಢರ ಮಠವು ಯಾವ ಜಿಲ್ಲೆಯಲ್ಲಿ ಇದೆ?

    Answer

    ಸಿದ್ದಾರೂಢರ ಮಠವು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿದೆ.

  2. ೨. ಶಾಲೆಯ ಮಕ್ಕಳಿಗೆ ದಾರಿಯ ದಣಿವು ಏಕೆ ಆಗಲಿಲ್ಲ?

    Answer

    ದಾರಿಯುದ್ದಕ್ಕೂ ಚರ್ಚೆ ಮತ್ತು ಸಂವಾದಗಳು ನಡೆದುದರಿಂದ ಶಾಲೆಯ ಮಕ್ಕಳಿಗೆ ದಾರಿಯ ದಣಿವು ಆಗಲಿಲ್ಲ.

  3. ೩. ಸಿದ್ದಾರೂಢ ಸ್ವಾಮಿಗಳು ಮೂಲತಃ ಯಾವ ಊರಿನವರು?

    Answer

    ಸಿದ್ದಾರೂಢ ಸ್ವಾಮಿಗಳು ಮೂಲತಃ ಬೀದರ್ ಜಿಲ್ಲೆಯ ಚಳಕಾಪುರದವರು.

  4. ೪. ಸ್ವಾಮಿಗಳು ಯಾವ ಮಂತ್ರವನ್ನು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು?

    Answer

    ಸ್ವಾಮಿಗಳು 'ಓಂ ನಮಃ ಶಿವಾಯ' ಎಂಬ ಪಂಚಾಕ್ಷರಿ ಮಂತ್ರವನ್ನು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು.

  5. ೫. ಮಠದಲ್ಲಿ ಶಾಲೆಯ ಮಕ್ಕಳು ಯಾವ ಕೆಲಸಗಳನ್ನು ಮಾಡಿದರು?

    Answer

    ಮಠದಲ್ಲಿ ಶಾಲೆಯ ಮಕ್ಕಳು ನೀರು ತರುವುದು ಮತ್ತು ಊಟ ಬಡಿಸುವುದು ಮುಂತಾದ ಸ್ವಯಂಸೇವಕ ಕೆಲಸಗಳನ್ನು ಮಾಡಿದರು.

  6. ೬. ಶಾಲಾ ಮಕ್ಕಳು ಯಾವ ಆಟಗಳನ್ನು ಆಡಿದರು?

    Answer

    ಶಾಲಾ ಮಕ್ಕಳು ತೊಟ್ಟಿಲ ಜೀಕ, ಕುದುರೆ, ಆನೆ, ಒಂಟೆ ಮೊದಲಾದ ತಿರುಗು ಯಂತ್ರಗಳ ಆಟಗಳನ್ನು ಆಡಿದರು.

  7. ೭. ಸಿದ್ದಾರೂಢರ ಮಠದಿಂದ ಸ್ಫೂರ್ತಿಯನ್ನು ಪಡೆದ ರಾಷ್ಟ್ರನಾಯಕರು ಯಾರು?

    Answer

    ಗಾಂಧೀಜಿ ಮತ್ತು ತಿಲಕರಂಥ ರಾಷ್ಟ್ರನಾಯಕರು ಸಿದ್ದಾರೂಢರ ಮಠದಿಂದ ಸ್ಫೂರ್ತಿ ಪಡೆದರು.

ಉ. ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಸಿದ್ದಾರೂಢ ಸ್ವಾಮಿಗಳ ಜೀವನದ ಬಗ್ಗೆ ತಿಳಿಸಿ.

    Answer

    ಸಿದ್ದಾರೂಢರು ಒಬ್ಬ ಮಹಾನ್ ಸಂತರು. ಅವರು ಮೂಲತಃ ಬೀದರ್ ಜಿಲ್ಲೆಯ ಚಳಕಾಪುರದವರು. ೧೮೩೬ರಲ್ಲಿ ಹುಟ್ಟಿದ ಇವರು ಚಿಕ್ಕಂದಿನಲ್ಲಿಯೇ ಸಂನ್ಯಾಸ ಸ್ವೀಕರಿಸಿ ಲೋಕಸಂಚಾರಿಯಾದರು. ೪೧ನೆಯ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ನೆಲೆನಿಂತು 'ಓಂ ನಮಃ ಶಿವಾಯ' ಮಂತ್ರವನ್ನು ಎಲ್ಲರಿಗೂ ಬೋಧಿಸಿದರು.

  2. ೨. ಮಠವು ಸಮಾಜದಲ್ಲಿ ಹೇಗೆ ದಾರಿದೀಪವಾಗಿದೆ?

    Answer

    ಮಠವು ಸಮಾಜದ ಕಷ್ಟಕಾಲದಲ್ಲಿ ಭರವಸೆ ನೀಡಿ ಮಾನಸಿಕ ನೆಮ್ಮದಿ ಮೂಡಿಸುತ್ತದೆ. ಬಡಬಗ್ಗರಿಗೆ ಸಹಾಯ, ವಿದ್ಯಾರ್ಥಿಗಳಿಗೆ ಊಟ-ವಸತಿ, ದಿಕ್ಕುತೋಚದವರಿಗೆ ಉಪದೇಶ ಮಾಡುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪುರಾಣ ಪ್ರವಚನಗಳ ಮೂಲಕ ತತ್ತ್ವಶಾಸ್ತ್ರದ ವಿಚಾರಗಳನ್ನು ಜನರಿಗೆ ತಲುಪಿಸುತ್ತದೆ. ಹೀಗೆ ಮಠವು ಸಮಾಜದ ದೀಪಸ್ತಂಭವಾಗಿದೆ.

  3. ೩. ಸಿದ್ದಾರೂಢ ಜಾತ್ರೆಯ ತೇರೆಳೆಯುವ ಸಂದರ್ಭವನ್ನು ವರ್ಣಿಸಿ.

    Answer

    ಜಾತ್ರೆಯಲ್ಲಿ ಮಠದ ಮುಂದೆ ತಳಿರುತೋರಣಗಳಿಂದ ಸಿಂಗರಿಸಿದ ದೊಡ್ಡ ತೇರಿತ್ತು. ಜನರು ಗುಂಪುಗೂಡಿ 'ಹರ ಹರ ಮಹಾದೇವ' ಎಂಬ ಭಕ್ತಿಯ ಕೂಗಿನೊಂದಿಗೆ ತೇರಿನ ಹಗ್ಗ ಹಿಡಿದು ಎಳೆದರು. ತೇರಿನ ಮೇಲೆ ಉತ್ತತ್ತಿಗಳನ್ನು ಮತ್ತು ಬಾಳೆಹಣ್ಣುಗಳನ್ನು ಎಸೆಯುತ್ತಿದ್ದರು. ಅದರ್‌ಗುಂಜಿ ಶಾಲೆಯ ಬಾಲಕರು ಸಹ ತೇರನ್ನು ಎಳೆದು ಸಂಭ್ರಮಿಸಿದರು.

ಊ. ಕೆಳಗಿನ ವಾಕ್ಯಗಳಲ್ಲಿ ಜೋಡುನುಡಿಗಳನ್ನು ಗುರುತಿಸಿ ಬರೆಯಿರಿ.

  1. ೧. ನಮ್ಮ ನೆರೆಹೊರೆಯವರು ಬಹಳ ಒಳ್ಳೆಯವರು.

  2. ೨. ಅಮ್ಮ ರಾತ್ರಿಹಗಲು ಕೆಲಸ ಮಾಡುತ್ತಾಳೆ.

  3. ೩. ನಾಟಕದಲ್ಲಿ ವಿಧವಿಧವಾದ ಉಡುಗೆತೊಡುಗೆ ಧರಿಸುತ್ತಾರೆ.

    Answer

    ವಿಧವಿಧ, ಉಡುಗೆತೊಡುಗೆ

ಋ) ಸರಿಹೊಂದುವ ಬಿಡಿ ಪದಗಳನ್ನು ಸೇರಿಸಿ ಜೋಡಿನುಡಿಗಳನ್ನು ರಚಿಸಿರಿ.

  1. ಆಟ, ತಿಂಡಿ, ಹೊರಗೆ, ದಿಕ್ಕು, ತೀರ್ಥ, ಪಕ್ಕ, ದೆಸೆ, ಒಳಗೆ, ಅಕ್ಕ, ಕೊಳ್ಳ, ಪಾರ, ಹಳ್ಳ.

    Answer

    ತಿಂಡಿತೀರ್ಥ ಹೊರಗೊಳಗೆ ದಿಕ್ಕುದೆಸೆ ಅಕ್ಕಪಕ್ಕ ಕೊಳ್ಳಹಳ್ಳ

ಎ) ಚಟುವಟಿಕೆ:

  1. ೧. ನಿಮ್ಮ ಊರಿನ ಜಾತ್ರೆಯ ವಿಶೇಷತೆಯನ್ನು ಕುರಿತು ಒಂದು ಪ್ರಬಂಧ ಬರೆಯಿರಿ.

  2. ೨. ಜಾತ್ರೆಯ ಚಿತ್ರಗಳನ್ನು ಸಂಗ್ರಹಿಸಿ.

Interactive Lab

ಐಹಿಕಪ್ರಾಪಂಚಿಕ, ಸಂನ್ಯಾಸ - ಸಾಂಸಾರಿಕ ಬಂಧಗಳನ್ನು ಕಳಚಿಕೊಂಡ ಸ್ಥಿತಿ, ದೀಪಸ್ತಂಭ - ಸಮುದ್ರದಂಡೆಯಲ್ಲಿ ಕಟ್ಟಿದ ದೀಪ ಗೋಪುರ