CRECT Education

Class 6 Kannada Lesson 2: Gandharvasena! | KTBS Savi Kannada – Learn the Story

Description

Learn the hilarious folk tale 'Gandharvasena!' from the KTBS Class 6 Kannada First Language textbook. A king, a minister, and a dead donkey—discover the story and master key vocabulary.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಒಂದು ದಿನ ಒಬ್ಬ ರಾಜ ಒಡ್ಡೋಲಗದಲ್ಲಿದ್ದಾಗ, ಅವನ ಮಂತ್ರಿ ಗಟ್ಟಿಯಾಗಿ ಅಳುತ್ತಾ ಬಂದನು. ಅವನ ರೋಚನಕ್ಕೆ ಕಾರಣವೇನೆಂದು ರಾಜ ಪ್ರಶ್ನಿಸಿದ. ಮಂತ್ರಿಯು ಸಿಂಹಾಸನವನ್ನು ಚುಂಬಿಸಿ, ಭೂಮಿಯನ್ನು ಮುಟ್ಟಿ ನಮಸ್ಕರಿಸಿ ತನ್ನ ನಾಲಗೆಯನ್ನು ಉದ್ದ ಮಾಡಿ – 'ಮಹಾರಾಜರೇ ಗಂಧರ್ವಸೇನರು ತೀರಿಕೊಂಡರಂತೆ' ಎಂದು ಉದ್ಗರಿಸುತ್ತಾ ಮೂರ್ಛೆ ಹೋದ. ರಾಜನು ಒಡ್ಡೋಲಗವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿ ಕಣ್ಣೀರು ಸುರಿಸುತ್ತ ಗಂಧರ್ವಸೇನರ ಆತ್ಮಶಾಂತಿಗಾಗಿ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಎಲ್ಲರೂ ಶೋಕಾಚರಣೆ ಮಾಡಬೇಕೆಂದು ಆಜ್ಞಾಪಿಸಿದ. ಮಂತ್ರಿಯ ಆರೈಕೆಗೆ ವೈದ್ಯರನ್ನು ಕರೆಸಿ ಉಪಚರಿಸುವಂತೆ ರಾಜಭಟರಿಗೆ ತಿಳಿಸಿ ಅಂತಃಪುರಕ್ಕೆ ಬಂದ. ರಾಜ, ಅಲ್ಲಿಯೂ ಕರುಳು ಕಿತ್ತುಬರುವಂತೆ ಅಳತೊಡಗಿದ. ರಾಣಿಯರು ಅವನ ಶೋಕಕ್ಕೆ ಕಾರಣವನ್ನು ಕೇಳಿದರು. 'ಗಂಧರ್ವಸೇನರು ತೀರಿಕೊಂಡರು' ಎಂದು ರಾಜ ಗದ್ಗದ ಕಂಠದಿಂದ ಹೇಳಿದಾಗ, 'ರಾಜನ ದುಃಖ ತಮ್ಮ ದುಃಖ' ಎಂದು ಅವರು ಕೂಡ ಕರುಳು ಹಿಂಡುವಂತೆ ಎದೆ ಬಡಿದುಕೊಂಡು ಅಳಲಾರಂಭಿಸಿದರು. ಇಡೀ ಅಂತಃಪುರ ದುಃಖ ಹಾಗೂ ಗೊಂದಲದಿಂದ ತುಂಬಿತು. ರಾಣಿಯ ಸೇವಕಿಯೊಬ್ಬಳಿಗೆ ಈ ಎಲ್ಲಾ ಗೊಂದಲ ಏಕೆಂದರೆ ತಿಳಿಯಲಿಲ್ಲ. ಅವಳು, “ಮಹಾರಾಣಿಯವರೇ, ಎಲ್ಲರು ಏಕೆ ಅಳುತ್ತಿದ್ದಾರೆ?” ಎಂದು ಕೇಳಿದಳು. ರಾಣಿ ನಿಟ್ಟುಸಿರುಬಿಟ್ಟು, “ಪಾಪ! ಗಂಧರ್ವಸೇನರು ತೀರಿಕೊಂಡರಂತೆ” ಎಂದಳು. ಸೇವಕಿ ಚುರುಕು ಬುದ್ಧಿಯವಳು. ಅವಳು ಆಲೋಚನೆ ಮಾಡಿದಳು. ಈ ನಮ್ಮ ಮಹಾರಾಜರಿಗೂ ಆ ಗಂಧರ್ವಸೇನರಿಗೂ ಏನ್ ಸಂಬಂಧ? ಎಂದು ಆತಂಕದಿಂದ ರಾಣಿಯ ಬಳಿ ಕೇಳಿದಳು. ರಾಣಿ ಅದು ತನಗೆ ಗೊತ್ತಿಲ್ಲವೆಂದು ನುಡಿದು ರಾಜನ ಬಳಿಗೆ ಓಡಿಹೋಗಿ, “ಗಂಧರ್ವಸೇನರು ಯಾರು?” ಎಂದು ಕೇಳಿದಳು. ರಾಜನಿಗೂ ಗೊತ್ತಿಲ್ಲ. ಆತ ಕಣ್ ಕಣ್ ಬಿಟ್ಟು “ತಾನೆಂಥ ಮೂರ್ಖತನದ ಕೆಲಸ ಮಾಡಿದೆ” ಅಂದುಕೊಂಡು ಕೂಡಲೇ ಆಸ್ಥಾನಕ್ಕೆ ತೆರಳಿದ. ಈಗಾಗಲೆ ವೈದ್ಯರ ಉಪಚಾರದಿಂದ ಸುಧಾರಿಸಿಕೊಂಡಿದ್ದ ಮಂತ್ರಿಯನ್ನು ಕರೆಸಿಕೊಂಡು, “ಮಂತ್ರಿಗಳೇ, ಯಾರು ಈ ಗಂಧರ್ವಸೇನ?” ಎಂದು ಪ್ರಶ್ನಿಸಿದ. “ಮಹಾರಾಜರೆ ದಯವಿಟ್ಟು ಕ್ಷಮಿಸಿ. ಗಂಧರ್ವಸೇನರು ಯಾರೆಂಬುದು ನನಗೂ ತಿಳಿದಿಲ್ಲ. ಆದರೆ ಪಡೆಯ ಮುಖ್ಯಸ್ಥನು ಗಂಧರ್ವಸೇನ ತೀರಿಕೊಂಡರೆಂದು ಗಟ್ಟಿಯಾಗಿ ಗಂಟಲು ಹರಿಯುವಂತೆ ಕೂಗುತ್ತಾ ಅಳುತ್ತಿರುವುದನ್ನು ಕಂಡು ನಾನೂ ಅತ್ತೆ” ಎಂದು ಮಾರ್ನುಡಿದ. ರಾಜನ ಕೋಪ ನೆತ್ತಿಗೇರಿತು. “ನೀನೊಬ್ಬ ಮೂರ್ಖ. ಕೂಡಲೆ ಹೋಗಿ ಗಂಧರ್ವಸೇನ ಯಾರೆಂದು ಪತ್ತೆ ಮಾಡಿಕೊಂಡು ಬಾ” ಎಂದ. ಮಂತ್ರಿ ರಾಜನಿಗೆ ವಂದಿಸಿ, 'ಕೇಳಿದ ಕಿವಿ ಊರಿಗೆ ಮಾರಿ ತಂದಿತು' ಅಂದು- ಕೊಂಡು ಅಲ್ಲಿಂದ ಕಾಲಿಗೆ ಬುದ್ಧಿಹೇಳಿದ. ಪಡೆಯ ಮುಖ್ಯಸ್ಥನನ್ನು ಕಂಡು, “ಗಂಧರ್ವಸೇನರು ಯಾರು?” ಎಂದು ಪ್ರಶ್ನಿಸಿದ. “ಸ್ವಾಮಿ, ಅವರು ಯಾರು? ಏನಾಗಿದ್ದರು? ಎಂದು ನನಗೆ ತಿಳಿಯದು. ಆದರೆ ಅವರು ತೀರಿಕೊಂಡರೆಂದು ಸ್ವತಃ ನನ್ನ ಹೆಂಡತಿಯೇ ಅಳುತ್ತಿದ್ದಳು. ಈ ಸುದ್ದಿಯನ್ನು ನಿಮಗೆ ಹೇಳಬೇಕೆನಿಸಿತು. ಬಂದು ಹೇಳಿದೆ” ಎಂದನು. ಮಂತ್ರಿ ತಲೆಯ ಮೇಲೆ ಕೈ ಹೊತ್ತು ಕುಳಿತ. ಇರಲಿ, ಇವನ ಹೆಂಡತಿಯನ್ನು ವಿಚಾರಿಸೋಣ ಎಂದು ಇಬ್ಬರೂ ಆತನ ಮನೆಗೆ ಹೋಗಿ, “ಯಾರಮ್ಮ ಈ ಗಂಧರ್ವಸೇನ?” ಎಂದು ಕೇಳಿದರು. ಅವಳು, “ಸ್ವಾಮೀ, ಗಂಧರ್ವಸೇನರ ಪರಿಚಯ ನನಗಿಲ್ಲ. ಈ ದಿವಸ ಬೆಳಿಗ್ಗೆ ಸ್ನಾನ ಮಾಡಲಿಕ್ಕೆ ಕೆರೆಗೆ ಹೋಗಿದ್ದೆ. ಅಲ್ಲಿ ಮಡಿವಾಳ್ತಿ ತನ್ನ ಗಂಧರ್ವ ಸೇನ ಸತ್ತಿದ್ದಾನೆಂದು ಬಾಯಿ ಬಡಿದುಕೊಂಡು ಒಂದೇ ಸಮನೆ ಅಳುತ್ತಿದ್ದಳು. ಅದನ್ನು ನೋಡಿ ನಾನೂ ಅತ್ತೆ, ಗಂಡನ ಬಳಿ ಹೇಳಿದೆ" ಎಂದಳು. ಮಂತ್ರಿಗೆ ತಲೆಸುತ್ತಿದಂತಾಯ್ತು. ಈ ಗಂಧರ್ವಸೇನ ಯಾರು? ತಲೆತಲೆ ಚಚ್ಚಿಕೊಂಡ. ಏನೇ ಆಗಲಿ ಎಂದುಕೊಂಡು ಅವರೆಲ್ಲರೂ ಆ ಮಡಿವಾಳ್ತಿಯ ಮನೆಗೆ ಹೋಗಿ, “ಗಂಧರ್ವಸೇನ ಯಾರು?” ಎಂದು ಕೇಳಿದರು. ಅವಳು ದುಃಖಿಸತೊಡಗಿದಳು. “ಸ್ವಾಮಿ, ನನಗೆ ಅದೃಷ್ಟವಿಲ್ಲ. ಈಗಲೂ ನನ್ನ ಹೃದಯ ಅವನಿಗಾಗಿ ಮಿಡಿಯುತ್ತಿದೆ. ಗಂಧರ್ವಸೇನ ನನ್ನ ಪ್ರೀತಿಯ ಕತ್ತೆ. ನನ್ನ ಮಗನಿಗಿಂತಲೂ ಹೆಚ್ಚಾಗಿ ಅವನನ್ನು ಮುದ್ದಿನಿಂದ ಬೆಳೆಸಿದ್ದೆ. ನಮ್ಮ ಎಲ್ಲಾ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದ ಸ್ವಾಮಿ, ನಿನ್ನೆ ರಾತ್ರಿ ಕಣ್ಣು ಮುಚ್ಕೊಂಡ್ಬಿಟ್ಟ. ನನ್ನ ಹೊಟ್ಟೆ ಮೇಲೆ ಕಲ್ಹಾಕ್ ಬಿಟ್ಟ” ಎಂದು ಬೊಬ್ಬಿಟ್ಟು ಅತ್ತಳು. ಇದನ್ನು ಕೇಳಿದ ಮಂತ್ರಿ, ಮುಖ್ಯಸ್ಥ, ಅವನ ಹೆಂಡತಿ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಅಲ್ಲಿಂದ ಕಂಬಿಕಿತ್ತರು. ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ನಿಜಾಂಶವನ್ನು ಹೇಳಿದ. “ಗಂಧರ್ವಸೇನರು ಸತ್ತರೆಂದು ನಾವೆಲ್ಲ ಶೋಕಿಸಿದೆವಲ್ಲಾ, ಅದು ಬೇರೆ ಯಾರು ಅಲ್ಲ; ಮಡಿವಾಳ್ತಿಯ ಪ್ರೀತಿಯ ಕತ್ತೆ” ಎಂದು ಹೇಳಿದ. ರಾಜ ಅವನಿಗೆ ಹಿಗ್ಗಾಮುಗ್ಗಾ ಬೈದನು. ಆದರೆ ಶಿಕ್ಷಿಸದೆ ಬಿಟ್ಟುಬಿಟ್ಟ. ಈ ಸುದ್ದಿ ಅಂತಃಪುರದ ರಾಣಿಯರ ಕಿವಿಗೂ ಮುಟ್ಟಿತು. 'ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು' ಎನ್ನುವಂತೆ ರಾಜ ಮತ್ತು ಅವನ ಆಸ್ಥಾನಿಕರ ಮೂರ್ಖತನಕ್ಕಾಗಿ ರಾಣಿಯರು ತಮ್ಮ ಪಕ್ಕೆಲುಬುಗಳು ನೋಯುವವರೆಗೂ ನಗುತ್ತಲೇ ಇದ್ದರು. ಕೌಶಲ : ಓದುವುದು ಮತ್ತು ಬರೆಯುವುದು. ಸಾಮರ್ಥ್ಯ : ಪದಪುಂಜ, ನುಡಿಗಟ್ಟು ಮತ್ತು ನಾಣ್ಣುಡಿಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು

"ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು." — Even if you see something with your own eyes, verify it. (A reminder for critical thinking and not rushing to conclusions.)

ಪದಗಳ ಅರ್ಥword meanings

KannadaPronunciationMeaning
ಒಡ್ಡೋಲಗರಾಜಸಭೆ, ದರ್ಬಾರು
ರೋದನಅಳುವಿಕೆ, ಪ್ರಲಾಪ
ಚುಂಬನಮುತ್ತು
ಉದ್ಗರಿಸುಹೇಳು, ಹೊರಗೆಡಹು
ಪರಿಸಮಾಪ್ತಿಮುಕ್ತಾಯ, ಕೊನೆ
ಶೋಕಅಳಲು, ದುಃಖ
ಗದ್ಗದ ಕಂಠನಿಂತು ನಿಂತು ಬರುವ ಅಸ್ಪಷ್ಟವಾದ ಮಾತು, ಬಿಗಿದ ಕಂಠ
ಅಂತಃಪುರರಾಣಿವಾಸ
ನಿಟ್ಟುಸಿರುದೀರ್ಘವಾಗಿ ಬಿಡುವ ಉಸಿರು, ನಿಡಿದಾದ ಶ್ವಾಸ
ಬಡಪಾಯಿಅಶಕ್ತ, ದುರ್ಬಲ, ತೀರಿಕೊಳ್ಳು-ಗತಿಸು, ಮರಣ ಹೊಂದು
ಮಾರ್ನುಡಿಪ್ರತಿಯಾಗಿ ಮಾತನಾಡು, ಮುತ್ತರ ಕೊಡು
ಪತ್ತೆಗುರುತು, ಸುಳಿವು, ವಿಳಾಸ
ಬೊಬ್ಬಿಡುಕೂಗು, ಅರಚು, ಗಟ್ಟಿಯಾಗಿ ಹೇಳು
ನಿಜಾಂಶಸತ್ಯ, ದಿಟ
ಪಕ್ಕೆಲುಬುಇಬ್ಬದಿಯ ಎಲುಬುಗಳು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಸರಿಯಾದ ಪದಗಳನ್ನು ಆಯ್ಕೆ ಮಾಡಿ ಬಿಟ್ಟ ಸ್ಥಳ ತುಂಬಿರಿ.

  1. ೧. ರಾಜನು ______________ವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿದ.

    Answer

    ರಾಜನು ಒಡ್ಡೋಲಗವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿದ.

  2. (ಒಡ್ಡೋಲಗ, ಬಡ್ಡೋಲಗ, ಓಡ್ಡೋಲಗ)

  3. ೨. ಸೇವಕಿ ______________ಬುದ್ಧಿಯವಳು. (ಮುರುಕು, ತಳುಕು, ಚುರುಕು)

    Answer

    ಸೇವಕಿ ಚುರುಕು ಬುದ್ಧಿಯವಳು.

  4. ೩. ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ______________ಹೇಳಿದ.

    Answer

    ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ನಿಜಾಂಶವನ್ನು ಹೇಳಿದ.

  5. (ನಿಜಾಂಶ, ಸಾರಾಂಶ, ಮಿಥ್ಯಾಂಶ)

  6. ೪. ರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು ______________

    Answer

    ರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು ಮಂತ್ರಿ.

  7. (ಮಂತ್ರಿ, ರಾಣಿ, ಸೇವಕಿ)

  8. ೫. ಅಂತಃಪುರ ಇದರ ಅರ್ಥ______________ (ರಾಣಿವಾಸ, ಸೇವಕಿಯರ ವಾಸ, ರಾಜಗೃಹ)

    Answer

    ಅಂತಃಪುರ ಇದರ ಅರ್ಥ ರಾಣಿವಾಸ.

ಆ. ಈ ಪದಗಳ ಅರ್ಥ ಬರೆಯಿರಿ.

  1. ೧. ನಿಟ್ಟುಸಿರು ೨. ಪರಿಸಮಾಪ್ತಿ ೩. ಮಾರ್ನುಡಿ ೪. ಉದ್ಗರಿಸು

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1. ೧. ಮಂತ್ರಿ ಅಳುತ್ತಾ ರಾಜನ ಬಳಿ ಏನೆಂದು ಹೇಳಿದ?

    Answer

    ಮಂತ್ರಿ ಅಳುತ್ತಾ ರಾಜನ ಬಳಿ ‘ಮಹಾರಾಜರೇ ಗಂಧರ್ವಸೇನರು ತೀರಿಕೊಂಡರಂತೆ’ ಎಂದು ಹೇಳಿದ.

  2. ೨. ಗಂಧರ್ವಸೇನ ಯಾರು?

    Answer

    ಗಂಧರ್ವಸೇನ ಮಡಿವಾಳ್ತಿಯ ಪ್ರೀತಿಯ ಕತ್ತೆ.

  3. ೩. ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಜ ಯಾರಿಗೆ ಹೇಳಿದ?

    Answer

    ರಾಜ ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಣಿಯರಿಗೆ ಹೇಳಿದ.

  4. ೪. ರಾಣಿಯ ಸೇವಕಿ ಏನೆಂದು ಆಲೋಚನೆ ಮಾಡಿದಳು?

    Answer

    ನಮ್ಮ ಮಹಾರಾಜರಿಗೂ ಆ ಗಂಧರ್ವಸೇನರಿಗೂ ಏನು ಸಂಬಂಧ ಎಂದು ರಾಣಿಯ ಸೇವಕಿ ಆಲೋಚನೆ ಮಾಡಿದಳು.

  5. ೫. ರಾಣಿಯರು ನಗಲು ಕಾರಣವೇನು?

    Answer

    ರಾಜ ಮತ್ತು ಅವನ ಆಸ್ಥಾನಿಕರ ಮೂರ್ಖತನಕ್ಕಾಗಿ ರಾಣಿಯರು ನಕ್ಕರು.

ಈ. ಕೆಳಗಿನ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ರಾಜನ ಒಡ್ಡೋಲಗದಲ್ಲಿ ನಡೆದ ಪ್ರಸಂಗವನ್ನು ವಿವರಿಸಿರಿ.

    Answer

    ಒಂದು ದಿನ ರಾಜ ಒಡ್ಡೋಲಗದಲ್ಲಿದ್ದಾಗ ಮಂತ್ರಿ ಗಟ್ಟಿಯಾಗಿ ಅಳುತ್ತಾ ಬಂದನು. ರಾಜ ಅವನ ರೋದನಕ್ಕೆ ಕಾರಣ ಕೇಳಿದಾಗ, ಮಂತ್ರಿ ‘ಮಹಾರಾಜರೇ ಗಂಧರ್ವಸೇನರು ತೀರಿಕೊಂಡರಂತೆ’ ಎಂದು ಹೇಳಿ ಮೂರ್ಛೆ ಹೋದನು. ರಾಜ ಒಡ್ಡೋಲಗವನ್ನು ಪರಿಸಮಾಪ್ತಿಗೊಳಿಸಿ, ಗಂಧರ್ವಸೇನರ ಆತ್ಮಶಾಂತಿಗಾಗಿ ನಾಲ್ಕು ದಿನ ಶೋಕಾಚರಣೆ ಮಾಡಬೇಕೆಂದು ಆಜ್ಞಾಪಿಸಿದನು. ಮಂತ್ರಿಯ ಆರೈಕೆಗೆ ವೈದ್ಯರನ್ನು ಕರೆಸಿ ರಾಜಭಟರಿಗೆ ಉಪಚರಿಸುವಂತೆ ತಿಳಿಸಿದನು. ಅನಂತರ ರಾಜ ಅಂತಃಪುರಕ್ಕೆ ಬಂದು ಅಲ್ಲಿಯೂ ಅಳತೊಡಗಿದನು.

  2. ೨. ಗಂಧರ್ವಸೇನ ಯಾರು ಎಂಬುದನ್ನು ತಿಳಿಯಲು ಮಂತ್ರಿಯು ಮಾಡಿದ ಪ್ರಯತ್ನಗಳೇನು?

    Answer

    ಗಂಧರ್ವಸೇನ ಯಾರೆಂದು ತಿಳಿಯಲು ಮಂತ್ರಿ ಪಡೆಯ ಮುಖ್ಯಸ್ಥನನ್ನು ಕೇಳಿದನು. ಮುಖ್ಯಸ್ಥನಿಗೆ ತಿಳಿಯದೆ, ತನ್ನ ಹೆಂಡತಿ ಅತ್ತುದನ್ನು ನೋಡಿ ತಾನು ಅತ್ತೆ ಎಂದನು. ಆಗ ಮಂತ್ರಿ ಮುಖ್ಯಸ್ಥನ ಜೊತೆ ಆತನ ಹೆಂಡತಿಯನ್ನು ವಿಚಾರಿಸಲು ಅವರ ಮನೆಗೆ ಹೋದನು. ಆಕೆ ಗಂಧರ್ವಸೇನರ ಪರಿಚಯ ತನಗಿಲ್ಲವೆಂದು ಹೇಳಿ, ಮಡಿವಾಳ್ತಿ ಅತ್ತುದನ್ನು ನೋಡಿ ತಾನು ಅತ್ತೆ ಎಂದಳು. ನಂತರ ಅವರೆಲ್ಲರೂ ಮಡಿವಾಳ್ತಿಯ ಮನೆಗೆ ಹೋಗಿ ಗಂಧರ್ವಸೇನ ಯಾರೆಂದು ಕೇಳಿದರು. ಮಡಿವಾಳ್ತಿ ಗಂಧರ್ವಸೇನ ತನ್ನ ಪ್ರೀತಿಯ ಕತ್ತೆ ಎಂದು ಹೇಳಿದಳು.

ಉ. ಸಂದರ್ಭ ಸಹಿತ ವಿವರಿಸಿರಿ.

  1. ೧. “ಮಹಾರಾಜರೇ ಗಂಧರ್ವ ಸೇನರು ತೀರಿಕೊಂಡರಂತೆ.”

    Answer

    ರಾಜ ಒಡ್ಡೋಲಗದಲ್ಲಿದ್ದಾಗ ಅಳುತ್ತಾ ಬಂದ ಮಂತ್ರಿಯು ಗಂಧರ್ವಸೇನರು ತೀರಿಕೊಂಡರೆಂಬ ಸುದ್ದಿಯನ್ನು ಈ ಮಾತಿನಲ್ಲಿ ರಾಜನಿಗೆ ತಿಳಿಸಿ ಮೂರ್ಛೆ ಹೋದನು.

  2. ೨. “ಸ್ವಾಮಿ, ಅವರು ಯಾರು? ಏನಾಗಿದ್ದರು? ಎಂದು ನನಗೆ ತಿಳಿಯದು.”

    Answer

    ಗಂಧರ್ವಸೇನ ಯಾರೆಂದು ಪತ್ತೆ ಮಾಡಲು ಮಂತ್ರಿ ಪಡೆಯ ಮುಖ್ಯಸ್ಥನನ್ನು ಕೇಳಿದಾಗ, ಆತ ತನಗೆ ಏನೂ ತಿಳಿಯದೆಂದು ಈ ರೀತಿ ಉತ್ತರಿಸಿದನು.

  3. ೩. “ನಿನ್ನೆ ರಾತ್ರಿ ಕಣ್ಣು ಮುಚ್ಕೊಂಡ್ಬಿಟ್ಟ.”

    Answer

    ಯಾರೆಂದು ವಿಚಾರಿಸಲು ಹೋದಾಗ ಮಡಿವಾಳ್ತಿ ತನ್ನ ಪ್ರೀತಿಯ ಕತ್ತೆ ಗಂಧರ್ವಸೇನ ನಿನ್ನೆ ರಾತ್ರಿ ಸತ್ತುಹೋಯಿತೆಂದು ದುಃಖದಿಂದ ಈ ಮಾತನ್ನು ಹೇಳಿದಳು.

  4. ೪. “ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು.”

    Answer

    ಗಂಧರ್ವಸೇನ ಒಂದು ಕತ್ತೆ ಎಂಬ ಸತ್ಯ ತಿಳಿದಾಗ, ಯೋಚಿಸದೆ ಎಲ್ಲರೂ ಒಬ್ಬರನ್ನು ನೋಡಿ ಇನ್ನೊಬ್ಬರು ಅತ್ತಿದ್ದ ಮೂರ್ಖತನವನ್ನು ಈ ಗಾದೆಯಿಂದ ವಿವರಿಸಲಾಗಿದೆ.

ಊ. ಕೆಳಗಿನವುಗಳನ್ನು ನುಡಿಗಟ್ಟು, ಗಾದೆ, ಒಗಟುಗಳಾಗಿ ವಿಂಗಡಿಸಿ ಬರೆಯಿರಿ.

  1. ೧. ಮೂಗು ತೂರಿಸು, ೨. ಕೇಳಿದ ಕಿವಿ ಊರಿಗೆ ಮಾರಿ ತಂದಿತು, ೩. ಕಾಲಿಗೆ ಬುದ್ಧಿಹೇಳು,

    Answer

    ೧. ಮೂಗು ತೂರಿಸು - ನುಡಿಗಟ್ಟು ೨. ಕೇಳಿದ ಕಿವಿ ಊರಿಗೆ ಮಾರಿ ತಂದಿತು - ಗಾದೆ ೩. ಕಾಲಿಗೆ ಬುದ್ಧಿಹೇಳು - ನುಡಿಗಟ್ಟು

  2. ೪. ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೇ ಬುರುಡೆ, ೫. ಬೆನ್ನಿಗೆ ಚೂರಿ ಹಾಕು,

    Answer

    ೪. ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೇ ಬುರುಡೆ - ಒಗಟು ೫. ಬೆನ್ನಿಗೆ ಚೂರಿ ಹಾಕು - ನುಡಿಗಟ್ಟು

  3. ೬. ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು, ೭. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ,

    Answer

    ೬. ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು - ಗಾದೆ ೭. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ - ಒಗಟು

  4. ೮. ತಲೆ ಹಾಕು, ೯. ಮುಚ್ಚಿಟ್ಟದ್ದು ಮಣ್ಣಿನ ಪಾಲು, ೧೦. ಕರುಳು ಹಿಂಡು, ೧೧. ಮಂಕು

    Answer

    ೮. ತಲೆ ಹಾಕು - ನುಡಿಗಟ್ಟು ೯. ಮುಚ್ಚಿಟ್ಟದ್ದು ಮಣ್ಣಿನ ಪಾಲು - ಗಾದೆ ೧೦. ಕರುಳು ಹಿಂಡು - ನುಡಿಗಟ್ಟು ೧೧. ಮಂಕು ಬೂದಿ - ನುಡಿಗಟ್ಟು

  5. ಬೂದಿ, ೧೨. ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು.

    Answer

    ಬೂದಿ - ನುಡಿಗಟ್ಟು ೧೨. ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು - ಗಾದೆ

Interactive Lab

ಒಡ್ಡೋಲಗರಾಜಸಭೆ, ದರ್ಬಾರು
ರೋದನಅಳುವಿಕೆ, ಪ್ರಲಾಪ
ಚುಂಬನಮುತ್ತು
ಉದ್ಗರಿಸುಹೇಳು, ಹೊರಗೆಡಹು
ಪರಿಸಮಾಪ್ತಿಮುಕ್ತಾಯ, ಕೊನೆ
ಶೋಕಅಳಲು, ದುಃಖ
ಗದ್ಗದ ಕಂಠನಿಂತು ನಿಂತು ಬರುವ ಅಸ್ಪಷ್ಟವಾದ ಮಾತು, ಬಿಗಿದ ಕಂಠ
ಅಂತಃಪುರರಾಣಿವಾಸ
ನಿಟ್ಟುಸಿರುದೀರ್ಘವಾಗಿ ಬಿಡುವ ಉಸಿರು, ನಿಡಿದಾದ ಶ್ವಾಸ
ಬಡಪಾಯಿಅಶಕ್ತ, ದುರ್ಬಲ, ತೀರಿಕೊಳ್ಳು-ಗತಿಸು, ಮರಣ ಹೊಂದು
ಮಾರ್ನುಡಿಪ್ರತಿಯಾಗಿ ಮಾತನಾಡು, ಮುತ್ತರ ಕೊಡು
ಪತ್ತೆಗುರುತು, ಸುಳಿವು, ವಿಳಾಸ
ಬೊಬ್ಬಿಡುಕೂಗು, ಅರಚು, ಗಟ್ಟಿಯಾಗಿ ಹೇಳು
ನಿಜಾಂಶಸತ್ಯ, ದಿಟ
ಪಕ್ಕೆಲುಬುಇಬ್ಬದಿಯ ಎಲುಬುಗಳು