CRECT Education

Class 6 Kannada Lesson 4: Dr. Rajkumar | KTBS First Language – Learn the Story

Description

Learn the inspiring life story of Dr. Rajkumar, a legendary Kannada actor and singer, from the Class 6 KTBS First Language textbook.

ಗದ್ಯ · ಡಾ. ಎಚ್.ಎಸ್. ಸತ್ಯನಾರಾಯಣ

ಪಠ್ಯFull text

ಡಾ. ರಾಜಕುಮಾರ್ ಅವರು ಚಾಮರಾಜನಗರ ಜಿಲ್ಲೆಗೆ ಸೇರಿದ ಗಾಜನೂರಿನಲ್ಲಿ 24 ಏಪ್ರಿಲ್ 1929ರಂದು ಜನಿಸಿದರು. ಸಿಂಗಾನಲ್ಲೂರು ಮೂಲದ ಶ್ರೀಯುತ ಪುಟ್ಟಸ್ವಾಮಯ್ಯನವರು ರಾಜಕುಮಾರ್ ಅವರ ತಂದೆ. ತಾಯಿ ಗಾಜನೂರಿನವರಾದ ಶ್ರೀಮತಿ ಲಕ್ಷ್ಮಮ್ಮನವರು. ಈ ದಂಪತಿ ಗಂಡು ಮಗುವನ್ನು ಕರುಣಿಸೆಂದು ತಮ್ಮ ಇಷ್ಟದೈವ ಮುತ್ತತ್ತಿರಾಯನಿಗೆ ಹರಕೆ ಹೊತ್ತಿದ್ದರಂತೆ. ಹಾಗಾಗಿ ಆ ದೇವರ ಹೆಸರನ್ನೇ ಮಗನಿಗೆ ಇಟ್ಟರು. 'ರಾಜ' ಎಂಬುದು 'ರಾಯ' ಎಂಬುದರ ತದ್ಭವ ರೂಪವಾಗಿರುವುದರಿಂದ 'ಮುತ್ತುರಾಯ' ಸ್ವಾಮಿಯ ಹೆಸರು 'ಮುತ್ತುರಾಜ' ಎಂದಾಗಿದ್ದು ಮಾತ್ರವಲ್ಲ ಕನ್ನಡಿಗರ ಮನಗೆದ್ದ ರಾಜಕುಮಾರನೇ ಆಗಿದ್ದು ಆಕಸ್ಮಿಕವಲ್ಲ. ಮುತ್ತುರಾಜನೊಳಗಿನ ಪ್ರತಿಭೆಯು ವಿಕಾಸಗೊಂಡ ಪರಿ ಅದು. ಮಳೆಯಿಲ್ಲದೆ ಕಂಗೆಟ್ಟಿದ್ದ ನೆಲಕ್ಕೆ ಸ್ವಾತಿಯ ಮಳೆಸುರಿದು ತಂಪೆರೆಯುವ ತೆರದಿ ಜೋರು ಮಳೆ ಸುರಿಯುವಾಗ ಹುಟ್ಟಿದ ಮುತ್ತುರಾಜರ ಜನನದಿಂದ ಮನೆಮಂದಿಯೆಲ್ಲ ಸಂಭ್ರಮಪಟ್ಟರು. ಬಾಲ್ಯದಲ್ಲಿಯೇ ಮುತ್ತುರಾಜರಿಗೆ ಬಡವರ ಕಷ್ಟ ಕಂಡು ಮರುಗುವ ಗುಣವಿತ್ತು. ಶಾಲೆಯಲ್ಲಿ ಕೂತಿದ್ದರೂ ಅವರ ಮನಸ್ಸು ಬಡತನ, ಹಸಿವು, ಕಷ್ಟಗಳತ್ತ ಹೊರಳುತ್ತಿತ್ತು. ಇದರೊಂದಿಗೆ ಹಳ್ಳಿಗಾಡಿನ ಸುಪ್ರಸನ್ನತೆ, ಸುಂದರ ಪರಿಸರ, ಮುಗ್ಧ ಜನರ ಆಚಾರ ವಿಚಾರಗಳು, ಹಳ್ಳ ಕೊಳ್ಳ, ಕಾಡು ಮುಂತಾದವೆಲ್ಲ ಮುತ್ತುರಾಜರ ಭಾವಲೋಕವನ್ನು ಹಿಗ್ಗಿಸುತ್ತಿತ್ತು. ಶಾಲೆಯಲ್ಲಿ ಕಲಿತದ್ದು ಮೂರನೆಯ ತರಗತಿಯವರೆಗೆ ಮಾತ್ರವಾದರೂ ಆ ವಯಸ್ಸಿನಿಂದಲೇ ಆದ ಲೋಕಾನುಭವದ ಶಿಕ್ಷಣದ ಪಾತ್ರ ಇವರ ವ್ಯಕ್ತಿತ್ವವನ್ನು ರೂಪಿಸಿತು. ಇವರ ತಂದೆ ಪುಟ್ಟಸ್ವಾಮಯ್ಯನವರು ಅದ್ಭುತ ರಂಗ ಕಲಾವಿದರಾಗಿದ್ದರು. ಸೋದರ ಮಾವಂದಿರು ಸೊಗಸಾದ ಗಾಯಕರಾಗಿದ್ದರು. ಈ ಪರಿಸರದಲ್ಲಿ ತಮ್ಮ ಬಾಲ್ಯವನ್ನು ಕಳೆದ ಮುತ್ತುರಾಜರಿಗೆ ಸಹಜವಾಗಿಯೇ ರಂಗಭೂಮಿ ಕೈಬೀಸಿ ಕರೆಯಿತು. ಮುತ್ತುರಾಜ ಅವರು ಬಾಲ ನಟನಾಗಿ ಕಲಾ ಪ್ರಪಂಚಕ್ಕೆ ಕಾಲಿಟ್ಟರು. ಗುಬ್ಬಿವೀರಣ್ಣನವರ ನಾಟಕ ಕಂಪನಿಯಲ್ಲಿ ಮೊದಮೊದಲು ಸಖಿ, ಸೇವಕಿಯಂತಹ ಸಣ್ಣಪುಟ್ಟ ಪಾತ್ರಗಳನ್ನು ಮಾಡಬೇಕಾಯಿತು. ಆಮೇಲೆ ಮತ್ತೋರ್ವ ಹಿರಿಯ ರಂಗಭೂಮಿಯ ಕಲಾವಿದರಾದ ಶ್ರೀ ಸುಬ್ಬಯ್ಯನಾಯ್ಡು ಅವರ ನಾಟಕ ಕಂಪನಿಗೆ ಸೇರಿ ಅನೇಕ ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆಯುತ್ತಿರುವಾಗ ತಂದೆಯವರ ಅಕಾಲಿಕ ಮರಣದ ದುಃಖ ಎದುರಾಯಿತು. ಇಡೀ ಕುಟುಂಬವನ್ನು ಕಾಪಾಡಬೇಕಾದ ಜವಾಬ್ದಾರಿಯನ್ನು ಆತ್ಮವಿಶ್ವಾಸದಿಂದ ಎದುರಿಸಿದ ಮುತ್ತುರಾಜರು, ಈ ಅನುಭವ ಮತ್ತು ಅಭಿನಯ ಎರಡರಿಂದಲೂ ಮಾಗುತ್ತ ಸಾಗಿದರು. ಕಷ್ಟದ ದಿನಗಳಲ್ಲೇ ಕಲಾವಿದನ ಕೈ ಹಿಡಿದು ಸಂಸಾರದ ಬದುಕಿಗೆ ಹೆಗಲೆಣೆಯಾದವರು ಮುತ್ತುರಾಜರ ಸೋದರ ಮಾವನ ಮಗಳಾದ ಪಾರ್ವತಮ್ಮನವರು. ಭಕ್ತ ಪ್ರಹ್ಲಾದ, ಶ್ರೀನಿವಾಸ ಕಲ್ಯಾಣದಂತಹ ಪೌರಾಣಿಕ ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ 1954ರಲ್ಲಿ ತೆರೆಕಂಡ 'ಬೇಡರ ಕಣ್ಣಪ್ಪ' ಎಂಬ ಚಿತ್ರವು ಮುತ್ತುರಾಜರ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಿತು. ಈ ಚಿತ್ರದ ನಿರ್ದೇಶಕರಾದ ಎಚ್.ಎಲ್.ಎನ್. ಸಿಂಹ ಅವರು 'ಮುತ್ತುರಾಜ' ಎಂಬ ಹೆಸರನ್ನು 'ರಾಜಕುಮಾರ್' ಎಂದು ಬದಲಾಯಿಸಿ, ಬೆಳ್ಳಿತೆರೆಗೆ ಪರಿಚಯಿಸಿದರು. ತಮ್ಮ ಹೆಸರನ್ನು ಬದಲಾಯಿಸುವುದು ಮುತ್ತುರಾಜರಿಗೆ ಇಷ್ಟವಿರಲಿಲ್ಲವಂತೆ. ಆದರೆ ಕನ್ನಡಿಗರು ರಾಜಕುಮಾರ್ ಎಂಬ ಹೆಸರನ್ನೇ ತಮ್ಮ ಹೃದಯ ಸಿಂಹಾಸನದಲ್ಲಿರಿಸಿಕೊಳ್ಳುವಂತೆ ತಾವು ಅಭಿನಯಿಸಿದ ಪ್ರತಿಯೊಂದು ಪಾತ್ರಕ್ಕೂ ರಾಜಕುಮಾರ್ ಜೀವ ತುಂಬಿದರು. ರಾಜಕುಮಾರ್ ಅವರು ಅಭಿನಯಿಸಿದ ಭಕ್ತಿಪ್ರಧಾನವಾದ ಭಕ್ತವಿಜಯ, ಓಹಿಲೇಶ್ವರ, ಶ್ರೀಕೃಷ್ಣ ಗಾರುಡಿ, ಭಕ್ತಕುಂಬಾರ, ಸಂತ ತುಕಾರಾಂ, ಭಕ್ತ ಕನಕದಾಸ ಮುಂತಾದ ಚಿತ್ರಗಳನ್ನು ನೋಡಿದ ಚಿತ್ರರಸಿಕರು ರಾಜಕುಮಾರ್ ಅವರ ಮನೋಜ್ಞ ಅಭಿನಯಕ್ಕೆ ಸೋತುಹೋದರು. ಅತ್ಯಂತ ಯಶಸ್ಸುಗಳಿಸಿದ ಭಕ್ತಪ್ರಹ್ಲಾದ, ಮಯೂರ, ಬಭ್ರುವಾಹನ, ಕವಿರತ್ನ ಕಾಳಿದಾಸ ಮುಂತಾದ ಚಿತ್ರಗಳಲ್ಲಿನ ಅಭಿನಯವಂತೂ ರಾಜಕುಮಾರರಿಗೆ ಅಪಾರವಾದ ಜನಪ್ರೀತಿ, ಕೀರ್ತಿ, ಪುರಸ್ಕಾರಗಳನ್ನು ಹೊತ್ತು ತಂದವು. ಸಂಧ್ಯಾರಾಗ, ಸನಾದಿ ಅಪ್ಪಣ್ಣ, ಜೀವನಚೈತ್ರ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ದೇವತಾ ಮನುಷ್ಯ ಮುಂತಾದ ಸಾಮಾಜಿಕ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆದವು. ಜನ ಮೆಚ್ಚಿದ 'ರಸಿಕರ ರಾಜ' ಎನಿಸಿದ್ದು ಹೀಗೇ. ಯೋಗದಿಂದ ಸಾಧಿಸಿದ್ದ ಸುಂದರ ಮೈಕಟ್ಟು, ಮುಗ್ಧಸ್ನಿಗ್ಧ ನಗೆಯ ಮುಖಭಾವ, ಸರಳ ಸೊಬಗಿನ ನಯವಂತಿಕೆಯ ಆಚಾರ ವಿಚಾರ ಇವೆಲ್ಲವೂ ರಸಿಕರ ರಾಜನ ಗುಣ ಶ್ರೀಮಂತಿಕೆ ಮತ್ತು ವ್ಯಕ್ತಿತ್ವದ ಬಗೆ. ತಮ್ಮ ಸೊಗಸಾದ ಕಂಠ ಮತ್ತು ಹಾಡುಗಾರಿಕೆಯಿಂದಲೂ ಕನ್ನಡಿಗರ ಮನಸೂರೆಗೊಂಡ ರಾಜಕುಮಾರ್ ಅವರು 'ಗಾನಗಂಧರ್ವ' ಎನಿಸಿದರು. 'ಸಂಪತ್ತಿಗೆ ಸವಾಲ್' ಎಂಬ ಚಿತ್ರದಲ್ಲಿ ನಾಯಕ ಎಮ್ಮೆಯ ಮೇಲೆ ಕುಳಿತು ಹಾಡಿದ “ಯಾರೇ ಕೂಗಾಡಲಿ, ಊರೇ ಹೋರಾಡಲಿ” ಎಂಬ ಗೀತೆಯು ದಿನ ಬೆಳಗಾಗುವುದರೊಳಗೆ ರಾಜಕುಮಾರ್ ಅವರನ್ನು ಹಿನ್ನೆಲೆಗಾಯಕರನ್ನಾಗಿ ಪರಿಚಯಿಸಿತು. ಚಿಕ್ಕಂದಿನಿಂದಲೂ ಇವರಿಗೆ ಹಾಡಲು ಬರುತ್ತಿತ್ತು. ಜೊತೆಗೆ, ನಾಟಕಗಳಲ್ಲಿ ಹಾಡಿದ ಅನುಭವವೂ ಇತ್ತು. ಸಂಪತ್ತಿಗೆ ಸವಾಲ್ ಚಿತ್ರದಿಂದ ತಮ್ಮ ಪಾತ್ರಗಳಿಗೆ ತಾವೇ ಹಾಡಲಾರಂಭಿಸಿದ ರಾಜಕುಮಾರ್ ಅವರು ನೂರಾರು ಚಲನಚಿತ್ರ ಗೀತೆಗಳನ್ನೂ, ಸಾವಿರಾರು ಭಕ್ತಿಗೀತೆಗಳನ್ನೂ, ಅನೇಕ ಭಾವಗೀತೆಗಳನ್ನೂ ಹಾಡಿದ್ದಾರೆ. ಜೀವನ ಚೈತ್ರ ಚಿತ್ರದ “ನಾದಮಯ ಈ ಲೋಕವೆಲ್ಲಾ ನಾದಮಯ” ಎಂಬ ಅದ್ಭುತ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಹಿರಿಮೆಯೂ ಇವರದಾಗಿದೆ. ನಟರಾಗಿ ಮಾತ್ರವಲ್ಲದೆ ಅನನ್ಯ ಕನ್ನಡ ಪ್ರೀತಿಗಾಗಿಯೂ ನಾಡು ರಾಜಕುಮಾರ್ ಅವರನ್ನು ಸದಾ ಸ್ಮರಿಸುತ್ತದೆ. ಎಂತಹ ಆಮಿಷವೊಡ್ಡಿದರೂ ರಾಜಕುಮಾರ್ ಅವರು ಕನ್ನಡ ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲು ಒಪ್ಪಲಿಲ್ಲ. ಅಂತಹ ಕನ್ನಡ ಪ್ರೀತಿ ಅವರದು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆದ್ಯತೆ, ಮಾನ್ಯತೆಗಳು ದೊರಕಬೇಕೆಂಬ ಸಂಕಲ್ಪದಿಂದಾರಂಭಿಸಿದ ಗೋಕಾಕ್ ಚಳುವಳಿಗೆ ಧುಮುಕಿದ ರಾಜಕುಮಾರ್ ಅವರು ಕನ್ನಡಿಗರ ಭಾವನೆಯ ಸ್ವರೂಪದ ಪ್ರತಿರೂಪದಂತೆ ಕಾಣಿಸಿಕೊಂಡು ಕನ್ನಡದ ಹೋರಾಟಕ್ಕೆ ಬಲ ತಂದರು. ತಾವು ಅಭಿನಯಿಸಿದ ಎಲ್ಲ ಪಾತ್ರಗಳು ಆಡುವ ಸರಳ, ಸೊಗಸಾದ ಕನ್ನಡದ ನುಡಿಗಳಿಂದ ಅವರು ಕನ್ನಡಿಗರ ಎದೆಗಳಲ್ಲಿ ಸವಿಗನ್ನಡದ ಕಂಪು ತುಂಬಿದ್ದನ್ನು ನಾವು ಎಂದಿಗೂ ಮರೆಯುವಂತಿಲ್ಲ. ಅಶಕ್ತ ಕಲಾವಿದರ ನೆರವಿಗಾಗಿ ರಾಜಕುಮಾರ್ ಅವರು ಅನೇಕ ರಸಸಂಜೆ ಕಾರ್ಯಕ್ರಮಗಳನ್ನು ನಡೆಸಿ ನೆರವಿಗೆ ಬಂದಿದ್ದಾರೆ. ಬಡತನದಲ್ಲಿ ಬೆಳೆದು ಬಂದ ಅವರಿಗೆ ಹಸಿವಿನ, ಅನ್ನದ ಬೆಲೆ ಚೆನ್ನಾಗಿ ತಿಳಿದಿತ್ತು. ಲೆಕ್ಕವಿಲ್ಲದಷ್ಟು ಸಹ ಕಲಾವಿದರು, ತಂತ್ರಜ್ಞರು, ಚಲನಚಿತ್ರ ಕಾರ್ಮಿಕರು, ಸಂಘ ಸಂಸ್ಥೆಗಳು ರಾಜಕುಮಾರ್ ಅವರಿಂದ ಆರ್ಥಿಕ ನೆರವು ಪಡೆದ ಉದಾಹರಣೆಗಳಿವೆ. ರಾಜಕುಮಾರ್ ಅವರ ಕರುಣಾಮಯಿ ಹೃದಯ ಸಂಪನ್ನತೆಗೆ ಇವು ಕೆಲವು ಉದಾಹರಣೆಗಳು ಮಾತ್ರ. ರಾಜಕುಮಾರರ ಕುಟುಂಬವೇ ಕನ್ನಡ ಚಿತ್ರರಂಗದ ದೊಡ್ಡ ಮನೆಯೆನಿಸಿದೆ. ಶ್ರೀಮತಿ ಪಾರ್ವತಮ್ಮನವರು ಚಿತ್ರ ನಿರ್ಮಾಪಕರಾಗಿ ವಿತರಕರಾಗಿ ದೊಡ್ಡ ಸಾಧನೆಗೈದರೆ, ಮಕ್ಕಳಾದ ರಾಘವೇಂದ್ರ ರಾಜಕುಮಾರ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್ ನಟರಾಗಿ, ಗಾಯಕರಾಗಿ ನಾಡಿನ ಜನರ ಮನಗೆದ್ದವರು. ಪುನೀತ್ ರಾಜಕುಮಾರ್ ತಮ್ಮ ಬಾಲ್ಯದಲ್ಲಿಯೇ 'ಬೆಟ್ಟದ ಹೂ' ಚಿತ್ರದ ಅಮೋಘ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅವರು ತಂದೆಯಂತೆಯೇ 'ಕರ್ನಾಟಕ ರತ್ನ' ಎನ್ನಿಸಿದ ಸಾಹಸಗಾಥೆ ಬೇರೆಯದೇ ಇದೆ. ರಾಜಕುಮಾರ್ ಅವರ ಮೊಮ್ಮಕ್ಕಳೂ ಸಿನಿಮಾ ನಾಯಕರಾಗಿರುವುದು ಈ ಕಲಾಸಂಪನ್ನತೆಯು ಮೂರನೇ ತಲೆಮಾರಿಗೂ ಹರಿದು ಬಂದಿರುವುದರ ಪ್ರತೀಕವಾಗಿದೆ. ರಾಜಕುಮಾರ್ ಎಂಬ ಸಮ್ಮೋಹಕ ಪ್ರತಿಭೆಗೆ ಮನಸೋತ ಕನ್ನಡಿಗರು ಅವರನ್ನು ನಟ ಸಾರ್ವಭೌಮ, ಕಲಾ ಕೌಸ್ತುಭ, ಕಲಾ ಕೇಸರಿ, ವರನಟ, ರಸಿಕರ ರಾಜ, ಗಾನಗಂಧರ್ವ, ಕನ್ನಡದ ಕಣ್ಮಣಿ ಮುಂತಾದ ವಿಶೇಷಣಗಳಿಂದ ಕರೆದು ಸಂತೋಷಪಟ್ಟರೆ, 1979ರಲ್ಲಿ ಮೈಸೂರು ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿತು. ಅಂದಿನಿಂದ ಇವರು ಎಲ್ಲರ ಪ್ರೀತಿಯ 'ಡಾಕ್ಟರ್ ರಾಜಕುಮಾರ್' ಎನಿಸಿದರು. ಕೇಂದ್ರ ಸರ್ಕಾರ ಇವರ ಕಲಾಸೇವೆಗೆ 'ಪದ್ಮಭೂಷಣ' ಪ್ರಶಸ್ತಿಯನ್ನಿತ್ತು ಗೌರವಿಸಿತು. ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರದ ಅತ್ಯುಚ್ಚ ಪ್ರಶಸ್ತಿಯಾದ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯೂ ದೊರೆಯಿತು. ಕರ್ನಾಟಕ ಸರ್ಕಾರವು “ಕರ್ನಾಟಕ ರತ್ನ ಪ್ರಶಸ್ತಿ” ನೀಡಿತು. ಈ ಮೊದಲೇ ಹೇಳಿದಂತೆ ಬಡತನದ ಪರಿಸರದಲ್ಲಿ ಹುಟ್ಟಿದರೂ ಸಾಧನೆಯ ತಪಸ್ಸಿನಲ್ಲಿ ಶ್ರದ್ಧೆಯಿದ್ದರೆ ಯಾವುದೂ ತೊಡಕಲ್ಲವೆಂಬುದಕ್ಕೆ ರಾಜಕುಮಾರ್ ಅವರ ಬದುಕು ದೊಡ್ಡ ಮಾದರಿಯಾಗಿದೆ. ಅದೇ ಬಗೆಯ ಪರಿಸರದಲ್ಲಿ ಹುಟ್ಟಿದ ನಮ್ಮ ನಾಡ ಮಕ್ಕಳಿಗೆ ಅನುಕರಣೀಯವೂ ಅನುಸರಣೀಯವೂ ಆಗಿದೆ. **ಕೌಶಲ :** ಓದುವುದು **ಸಾಮರ್ಥ್ಯ :** ಮುದ್ರಿತ ವಿಷಯಗಳನ್ನು ಓದಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು. **ಕವಿ ಕೃತಿ ಪರಿಚಯ:** (Portrait of Dr. H.S. Satyanarayana) **ಡಾ.ಎಚ್.ಎಸ್. ಸತ್ಯನಾರಾಯಣ** ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ. ಶ್ರೀಮತಿ ಇಂದಿರಮ್ಮ- ಶ್ರೀ ಎಚ್.ಕೆ. ಶ್ರೀನಿವಾಸ ದಂಪತಿ ಇವರ ತಂದೆ-ತಾಯಿ. ಬಿ.ಎ. ಪದವಿಯನ್ನು ತೀ‌ನಂಶ್ರೀ ಸ್ಮಾರಕ ಚಿನ್ನದ ಪದಕದೊಂದಿಗೆ ಪಡೆದು, “ಪೂರ್ಣಚಂದ್ರ ತೇಜಸ್ವಿಯವರ ಕಥನ ಸಾಹಿತ್ಯದ ಸಾಂಸ್ಕೃತಿಕ ನೆಲೆಗಳು” ಎಂಬ ಪ್ರೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ಸಾಹಿತ್ಯ ವಿಮರ್ಶೆ, ಲಲಿತ ಪ್ರಬಂಧ, ಅಂಕಣ ಬರಹಗಳಲ್ಲಿ ಕೃಷಿಮಾಡಿ ಅಪೂರ್ವ ಒಡನಾಟ, ಕುವೆಂಪು : ಅಲಕ್ಷಿತರೆದೆಯ ದೀಪ, ಕಣ್ಣೋಟ, ನುಡಿಚಿತ್ರ, ಪನ್ನೇರಳೆ, ನಗೆಮೊಗದ ಅಜ್ಜ ಮಾಸ್ತಿ, ಬಿದಿರ ತಡಿಕೆ, ಗಿರೀಶ್ ಕಾರ್ನಾಡ್ ಬದುಕು-ಬರಹ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಉದಯೋನ್ಮುಖ ವರ್ಧಮಾನ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಹಿರೇಮಲ್ಲೂರು ಈಶ್ವರನ್ ರಾಜ್ಯ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿರುವ ಡಾ.ಎಚ್.ಎಸ್. ಸತ್ಯನಾರಾಯಣ ಅವರಿಗೆ ಕರ್ನಾಟಕ ಸರ್ಕಾರವು 2017ರ ಸಾಲಿನ ಅತ್ಯುತ್ತಮ ಉಪನ್ಯಾಸಕ ಎಂದು ರಾಜ್ಯ ಪ್ರಶಸ್ತಿಯನ್ನಿತ್ತು ಪುರಸ್ಕರಿಸಿದೆ. ಪ್ರಸ್ತುತ ಚಿಕ್ಕಮಗಳೂರಿನ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.

ಪದಗಳ ಅರ್ಥword meanings

KannadaPronunciationMeaning
ಸೌಕರ್ಯಅನುಕೂಲ, ಜನಮಾನಸ-ಜನರ ಮನಸ್ಸು, ನಾಡೋಜ-ನಾಡಿಗೆ ಗುರು, ಉಜ್ವಲ-ಬೆಳಗುವ, ಸಜ್ಜನಿಕೆ-ಒಳ್ಳೆಯ ನಡವಳಿಕೆ, ಮೇರುವ್ಯಕ್ತಿತ್ವ-ಎತ್ತರದ ವ್ಯಕ್ತಿತ್ವ, ವಿಕಾಸ-ಹರಡಿಕೊಳ್ಳು, ಹಿಗ್ಗಿಸು-ಹಿರಿದಾಗಿಸು, ರಂಗಭೂಮಿ-ನಾಟಕವಾಡುವ ಸ್ಥಳ, ಅಕಾಲಿಕ-ಕಾಲವಲ್ಲದ, ಮಾಗುತ್ತ-ಪಕ್ವಗೊಳ್ಳುತ್ತ, ಹೆಗಲೆಣೆ-ನೆರವು ನೀಡು, ಬೆಳ್ಳಿತೆರೆ-ಚಲನಚಿತ್ರ ತೋರುವ ಪರದೆ, ಮನೋಜ್ಞ-ಮನಮೆಚ್ಚುವ, ಸಂಪನ್ನತೆ-ಸಿರಿವಂತಿಕೆ; ಸಮೃದ್ಧತೆ, ಪ್ರತೀಕ-ಸಂಕೇತ, ತೊಡಕು-ಅಡ್ಡಿ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:

  1. 1. ರಾಜಕುಮಾರ್ ಅವರ ಮೊದಲ ಹೆಸರೇನು?

    Answer

    ರಾಜಕುಮಾರ್ ಅವರ ಮೊದಲ ಹೆಸರು ಮುತ್ತುರಾಜ.

  2. 2. ರಾಜಕುಮಾರ್ ಅವರ ಜನ್ಮಸ್ಥಳ ಯಾವುದು?

    Answer

    ರಾಜಕುಮಾರ್ ಅವರ ಜನ್ಮಸ್ಥಳ ಚಾಮರಾಜನಗರ ಜಿಲ್ಲೆಗೆ ಸೇರಿದ ಗಾಜನೂರು.

  3. 3. ರಾಜಕುಮಾರ್ ಅವರ ತಂದೆ-ತಾಯಿ ಯಾರು?

    Answer

    ರಾಜಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯನವರು ಮತ್ತು ತಾಯಿ ಲಕ್ಷ್ಮಮ್ಮನವರು.

  4. 4. ನಾಯಕ ನಟರಾಗಿ ರಾಜಕುಮಾರ್‌ರವರು ನಟಿಸಿದ ಮೊದಲ ಚಿತ್ರ ಯಾವುದು?

    Answer

    ನಾಯಕ ನಟರಾಗಿ ರಾಜಕುಮಾರ್ ಅವರು ನಟಿಸಿದ ಮೊದಲ ಚಿತ್ರ 'ಬೇಡರ ಕಣ್ಣಪ್ಪ'.

  5. 5. ಯಾವ ಚಿತ್ರದ ಗಾಯನಕ್ಕೆ ರಾಜಕುಮಾರ್ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ?

    Answer

    'ಜೀವನ ಚೈತ್ರ' ಚಿತ್ರದ 'ನಾದಮಯ ಈ ಲೋಕವೆಲ್ಲಾ ನಾದಮಯ' ಎಂಬ ಗಾಯನಕ್ಕೆ ರಾಜಕುಮಾರ್ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ.

  6. 6. ಕರ್ನಾಟಕ ಸರ್ಕಾರ ರಾಜಕುಮಾರ್ ಅವರಿಗೆ ನೀಡಿದ ಅತ್ಯುಚ್ಚ ಪುರಸ್ಕಾರ ಯಾವುದು?

    Answer

    ಕರ್ನಾಟಕ ಸರ್ಕಾರ ರಾಜಕುಮಾರ್ ಅವರಿಗೆ ನೀಡಿದ ಅತ್ಯುಚ್ಚ ಪುರಸ್ಕಾರ 'ಕರ್ನಾಟಕ ರತ್ನ ಪ್ರಶಸ್ತಿ'.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

  1. 1. ಯಾವ ನಾಟಕ ಕಂಪನಿಗಳಲ್ಲಿ ರಾಜಕುಮಾರ್‌ರವರು ಅಭಿನಯಿಸಿದರು?

    Answer

    ರಾಜಕುಮಾರ್ ಅವರು ಮೊದಲು ಗುಬ್ಬಿವೀರಣ್ಣನವರ ನಾಟಕ ಕಂಪನಿಯಲ್ಲಿ ಅಭಿನಯಿಸಿದರು. ನಂತರ ಸುಬ್ಬಯ್ಯನಾಯ್ಡು ಅವರ ನಾಟಕ ಕಂಪನಿಯಲ್ಲಿ ಅನೇಕ ಮಹತ್ವದ ಪಾತ್ರಗಳನ್ನು ನಿರ್ವಹಿಸಿದರು.

  2. 2. ರಾಜಕುಮಾರ್ ಅವರು ಅಭಿನಯಿಸಿದ ಭಕ್ತಿ ಪ್ರಧಾನವಾದ ಚಿತ್ರಗಳಾವುವು?

    Answer

    ರಾಜಕುಮಾರ್ ಅವರು ಅಭಿನಯಿಸಿದ ಭಕ್ತಿ ಪ್ರಧಾನವಾದ ಚಿತ್ರಗಳೆಂದರೆ ಭಕ್ತವಿಜಯ, ಓಹಿಲೇಶ್ವರ, ಶ್ರೀಕೃಷ್ಣ ಗಾರುಡಿ, ಭಕ್ತಕುಂಬಾರ, ಸಂತ ತುಕಾರಾಂ ಮತ್ತು ಭಕ್ತ ಕನಕದಾಸ.

  3. 3. ಅಭಿಮಾನಿಗಳು ರಾಜಕುಮಾರ್‌ರವರಿಗೆ ನೀಡಿದ ವಿಶೇಷಣ-ಬಿರುದುಗಳು ಯಾವುವು?

    Answer

    ಅಭಿಮಾನಿಗಳು ರಾಜಕುಮಾರ್ ಅವರಿಗೆ ನಟ ಸಾರ್ವಭೌಮ, ಕಲಾ ಕೌಸ್ತುಭ, ಕಲಾ ಕೇಸರಿ, ವರನಟ, ರಸಿಕರ ರಾಜ, ಗಾನಗಂಧರ್ವ ಮತ್ತು ಕನ್ನಡದ ಕಣ್ಮಣಿ ಎಂಬ ವಿಶೇಷಣ-ಬಿರುದುಗಳನ್ನು ನೀಡಿದರು.

  4. 4. ರಾಜಕುಮಾರ್ ಅವರ ಹೃದಯ ಸಂಪನ್ನತೆಗೆ ಒಂದೆರಡು ಉದಾಹರಣೆ ನೀಡಿ.

    Answer

    ರಾಜಕುಮಾರ್ ಅವರು ಅಶಕ್ತ ಕಲಾವಿದರ ನೆರವಿಗಾಗಿ ಅನೇಕ ರಸಸಂಜೆ ಕಾರ್ಯಕ್ರಮಗಳನ್ನು ನಡೆಸಿದರು. ಲೆಕ್ಕವಿಲ್ಲದಷ್ಟು ಸಹ ಕಲಾವಿದರು, ತಂತ್ರಜ್ಞರು ಮತ್ತು ಚಲನಚಿತ್ರ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿದ್ದಾರೆ.

ಇ. ಕೆಳಗಿನ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ:

  1. 1. ರಾಜಕುಮಾರ್ ಅವರ ಬಾಲ್ಯ ಜೀವನವನ್ನು ಪರಿಚಯಿಸಿ.

    Answer

    ರಾಜಕುಮಾರ್ ಅವರು ಚಾಮರಾಜನಗರ ಜಿಲ್ಲೆಯ ಗಾಜನೂರಿನಲ್ಲಿ ಜನಿಸಿದರು. ಅವರ ಮೊದಲ ಹೆಸರು ಮುತ್ತುರಾಜ. ಬಾಲ್ಯದಲ್ಲಿಯೇ ಅವರಿಗೆ ಬಡವರ ಕಷ್ಟ ಕಂಡು ಮರುಗುವ ಗುಣವಿತ್ತು. ಶಾಲೆಯಲ್ಲಿ ಮೂರನೆಯ ತರಗತಿಯವರೆಗೆ ಮಾತ್ರ ಕಲಿತರೂ ಲೋಕಾನುಭವದ ಶಿಕ್ಷಣ ಅವರ ವ್ಯಕ್ತಿತ್ವವನ್ನು ರೂಪಿಸಿತು. ಅವರ ತಂದೆ ಪುಟ್ಟಸ್ವಾಮಯ್ಯನವರು ಅದ್ಭುತ ರಂಗ ಕಲಾವಿದರಾಗಿದ್ದರು. ಈ ಪರಿಸರದಲ್ಲಿ ಬೆಳೆದ ಮುತ್ತುರಾಜರಿಗೆ ಸಹಜವಾಗಿಯೇ ರಂಗಭೂಮಿ ಕೈಬೀಸಿ ಕರೆಯಿತು.

  2. 2. ರಾಜಕುಮಾರ್‌ರವರ ಕುಟುಂಬವು ಚಲನಚಿತ್ರ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

    Answer

    ರಾಜಕುಮಾರ್ ಅವರ ಕುಟುಂಬವೇ ಕನ್ನಡ ಚಿತ್ರರಂಗದ ದೊಡ್ಡ ಮನೆಯೆನಿಸಿದೆ. ಅವರ ಪತ್ನಿ ಪಾರ್ವತಮ್ಮನವರು ಚಿತ್ರ ನಿರ್ಮಾಪಕರಾಗಿ ಮತ್ತು ವಿತರಕರಾಗಿ ದೊಡ್ಡ ಸಾಧನೆ ಮಾಡಿದರು. ಮಕ್ಕಳಾದ ರಾಘವೇಂದ್ರ ರಾಜಕುಮಾರ್, ಶಿವರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ನಟರಾಗಿ, ಗಾಯಕರಾಗಿ ಜನರ ಮನ ಗೆದ್ದರು. ಪುನೀತ್ ರಾಜಕುಮಾರ್ ಬಾಲ್ಯದಲ್ಲಿಯೇ 'ಬೆಟ್ಟದ ಹೂ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು. ಮೊಮ್ಮಕ್ಕಳೂ ಸಿನಿಮಾ ನಾಯಕರಾಗಿದ್ದು, ಈ ಕಲಾಸಂಪನ್ನತೆ ಮೂರನೇ ತಲೆಮಾರಿಗೂ ಹರಿದು ಬಂದಿದೆ.

  3. 3. ಯಾವ ಯಾವ ಕ್ಷೇತ್ರಕ್ಕೆ ರಾಜಕುಮಾರ್ ಅವರ ಕೊಡುಗೆಗಳು ಸಂದಿವೆಯೆಂಬುದನ್ನು ಸಂಗ್ರಹಿಸಿ ಬರೆಯಿರಿ.

    Answer

    ರಾಜಕುಮಾರ್ ಅವರ ಕೊಡುಗೆಗಳು ಹಲವು ಕ್ಷೇತ್ರಗಳಿಗೆ ಸಂದಿವೆ. ನಟನಾ ಕ್ಷೇತ್ರದಲ್ಲಿ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ಗಾಯನ ಕ್ಷೇತ್ರದಲ್ಲಿ ನೂರಾರು ಚಲನಚಿತ್ರ ಗೀತೆ, ಸಾವಿರಾರು ಭಕ್ತಿಗೀತೆ ಮತ್ತು ಭಾವಗೀತೆಗಳನ್ನು ಹಾಡಿ 'ಗಾನಗಂಧರ್ವ' ಎನಿಸಿದರು. ಕನ್ನಡ ಭಾಷಾ ಚಳುವಳಿಯಲ್ಲಿ ಧುಮುಕಿ ಗೋಕಾಕ್ ಚಳುವಳಿಗೆ ಬಲ ತಂದರು. ಸಮಾಜ ಸೇವೆಯಲ್ಲಿ ಅಶಕ್ತ ಕಲಾವಿದರಿಗೆ ನೆರವಾದರು.

ಈ. ಸಂದರ್ಭ ಸೂಚಿಸಿ :

  1. 1. ಮುತ್ತುರಾಯ ಸ್ವಾಮಿಯ ಹೆಸರೇ ಮುತ್ತುರಾಜ ಆಯಿತು.

    Answer

    ರಾಜಕುಮಾರ್ ಅವರ ತಂದೆ-ತಾಯಿ ತಮ್ಮ ಇಷ್ಟದೈವ ಮುತ್ತತ್ತಿರಾಯನಿಗೆ ಮಗುವಿಗಾಗಿ ಹರಕೆ ಹೊತ್ತಿದ್ದರು. ಹಾಗಾಗಿ ಆ ದೇವರ ಹೆಸರನ್ನೇ ಮಗನಿಗೆ ಇಟ್ಟರು. 'ರಾಜ' ಎಂಬುದು 'ರಾಯ' ಎಂಬುದರ ತದ್ಭವ ರೂಪವಾಗಿರುವುದರಿಂದ 'ಮುತ್ತುರಾಯ' ಸ್ವಾಮಿಯ ಹೆಸರು 'ಮುತ್ತುರಾಜ' ಎಂದಾಯಿತು.

  2. 2. ರಂಗಭೂಮಿ ಕೈ ಬೀಸಿ ಕರೆಯಿತು.

    Answer

    ಮುತ್ತುರಾಜರ ತಂದೆ ಪುಟ್ಟಸ್ವಾಮಯ್ಯನವರು ಅದ್ಭುತ ರಂಗ ಕಲಾವಿದರಾಗಿದ್ದರು ಮತ್ತು ಸೋದರ ಮಾವಂದಿರು ಸೊಗಸಾದ ಗಾಯಕರಾಗಿದ್ದರು. ಈ ಕಲಾಮಯ ಪರಿಸರದಲ್ಲಿ ತಮ್ಮ ಬಾಲ್ಯವನ್ನು ಕಳೆದ ಮುತ್ತುರಾಜರಿಗೆ ಸಹಜವಾಗಿಯೇ ರಂಗಭೂಮಿ ಕೈಬೀಸಿ ಕರೆಯಿತು.

  3. 3. ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲು ಒಪ್ಪಲಿಲ್ಲ.

    Answer

    ರಾಜಕುಮಾರ್ ಅವರಿಗೆ ಅನನ್ಯವಾದ ಕನ್ನಡ ಪ್ರೀತಿ ಇತ್ತು. ಎಂತಹ ಆಮಿಷವೊಡ್ಡಿದರೂ ಅವರು ಕನ್ನಡ ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲು ಒಪ್ಪಲಿಲ್ಲ.

  4. 4. ಶ್ರದ್ಧೆಯಿದ್ದರೆ ಯಾವುದೂ ತೊಡಕಲ್ಲ.

    Answer

    ಬಡತನದ ಪರಿಸರದಲ್ಲಿ ಹುಟ್ಟಿದರೂ ಸಾಧನೆಯ ತಪಸ್ಸಿನಲ್ಲಿ ಶ್ರದ್ಧೆಯಿದ್ದರೆ ಯಾವುದೂ ತೊಡಕಲ್ಲವೆಂಬುದಕ್ಕೆ ರಾಜಕುಮಾರ್ ಅವರ ಬದುಕು ದೊಡ್ಡ ಮಾದರಿಯಾಗಿದೆ.

ಭಾಷಾ ಅಭ್ಯಾಸ

ಅ. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ:

  1. 1. ರಾಜಕುಮಾರ್ ಅವರು ಜನಿಸಿದ್ದು \_\_\_\_\_\_\_\_\_\_\_\_\_.

    Answer

    ರಾಜಕುಮಾರ್ ಅವರು ಜನಿಸಿದ್ದು ಗಾಜನೂರಿನಲ್ಲಿ.

  2. 2. \_\_\_\_\_\_\_\_\_\_\_\_\_ ಎಂಬುವರು ರಾಜಕುಮಾರ್ ಅವರ ಶ್ರೀಮತಿಯವರು.

    Answer

    ಪಾರ್ವತಮ್ಮನವರು ಎಂಬುವರು ರಾಜಕುಮಾರ್ ಅವರ ಶ್ರೀಮತಿಯವರು.

  3. 3. ರಾಜಕುಮಾರ್ ಮೊದಲಿಗೆ \_\_\_\_\_\_\_\_\_\_\_\_\_ ಅವರ ನಾಟಕ ಕಂಪನಿಯಲ್ಲಿ ಅಭಿನಯಿಸಿದರು.

    Answer

    ರಾಜಕುಮಾರ್ ಮೊದಲಿಗೆ ಗುಬ್ಬಿವೀರಣ್ಣನವರ ನಾಟಕ ಕಂಪನಿಯಲ್ಲಿ ಅಭಿನಯಿಸಿದರು.

  4. 4. ಮೈಸೂರು ವಿಶ್ವ ವಿದ್ಯಾಲಯವು ರಾಜಕುಮಾರ್ ಅವರಿಗೆ \_\_\_\_\_\_\_\_\_\_\_\_\_ ಪದವಿ ನೀಡಿದೆ.

    Answer

    ಮೈಸೂರು ವಿಶ್ವ ವಿದ್ಯಾಲಯವು ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ.

  5. 5. \_\_\_\_\_\_\_\_\_\_\_\_\_ ಎಂಬುದು ರಾಜಕುಮಾರ್ ಅವರ ಗಾಯನಕ್ಕೆ ಜನ ನೀಡಿದ ಬಿರುದು.

    Answer

    ಗಾನಗಂಧರ್ವ ಎಂಬುದು ರಾಜಕುಮಾರ್ ಅವರ ಗಾಯನಕ್ಕೆ ಜನ ನೀಡಿದ ಬಿರುದು.

ಆ. ಹೊಂದಿಸಿ ಬರೆಯಿರಿ.

  1. 'ಅ' — 'ಬ'

  2. 1. ಜನ್ಮಸ್ಥಳ — ರಾಷ್ಟ್ರಪ್ರಶಸ್ತಿ

    Answer

    1. ಜನ್ಮಸ್ಥಳ — ಗಾಜನೂರು

  3. 2. ಮೊದಲ ಹೆಸರು — ಗಾಜನೂರು

    Answer

    2. ಮೊದಲ ಹೆಸರು — ಮುತ್ತುರಾಜ

  4. 3. ಜೀವನಚೈತ್ರ — ಮುತ್ತುರಾಜ

    Answer

    3. ಜೀವನಚೈತ್ರ — ರಾಷ್ಟ್ರಪ್ರಶಸ್ತಿ

  5. 4. ಮೊದಲ ಚಿತ್ರ — ಸಂಪತ್ತಿಗೆ ಸವಾಲ್

    Answer

    4. ಮೊದಲ ಚಿತ್ರ — ಬೇಡರ ಕಣ್ಣಪ್ಪ

  6. 5. ಮೊದಲ ಗಾಯನ — ಬೇಡರ ಕಣ್ಣಪ್ಪ

    Answer

    5. ಮೊದಲ ಗಾಯನ — ಸಂಪತ್ತಿಗೆ ಸವಾಲ್

ವ್ಯಾಕರಣ ಮಾಹಿತಿ

ಅ. ಕನ್ನಡ ಸಂಧಿಗಳು

ಲೋಪಸಂಧಿ :

  1. ೧. ಮೇಲೆ + ಇಟ್ಟು = ಮೇಲಿಟ್ಟು

  2. ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. 'ಮೇಲೆ' ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ 'ಎ' ಎಂಬುದು ಇಲ್ಲಿ ಲೋಪವಾಗಿದೆ.

  3. ೨. ಮುಳ್ಳು + ಅನ್ನು = ಮುಳ್ಳನ್ನು

  4. ಇಲ್ಲಿ 'ಮುಳ್ಳು' ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ 'ಉ' ಎಂಬುದು ಇಲ್ಲಿ ಲೋಪವಾಗಿದೆ. ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಲೋಪವಾದರೆ ಅದನ್ನು 'ಲೋಪಸಂಧಿ' ಎನ್ನುವರು.

  5. ಇದರಂತೆ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ.

  6. ಒಸರುತ್ತ + ಇದ್ದ = ಒಸರುತ್ತಿದ್ದ : ಅ ಸ್ವರ ಲೋಪವಾಗಿದೆ.

  7. ಹುಡುಗರು + ಎಲ್ಲರು = ಹುಡುಗರೆಲ್ಲರು : ಉ ಸ್ವರ ಲೋಪವಾಗಿದೆ.

  8. ಮೇಲೆ + ಏರು = ಮೇಲೇರು : ಎ ಸ್ವರ ಲೋಪವಾಗಿದೆ.

ಆಗಮಸಂಧಿ :

  1. ೧. ಹೊಲ + ಅನ್ನು = ಹೊಲವನ್ನು

  2. ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಹೊಲವನ್ನು ಎಂಬ ಪದದಲ್ಲಿ 'ವ' ಎಂಬ ಅಕ್ಷರವು ಬಂದು ಸೇರಿಕೊಂಡಿದೆ.

  3. ೨.ಹೊಳೆ + ಅಲ್ಲಿ = ಹೊಳೆಯಲ್ಲಿ

  4. ಇಲ್ಲಿ 'ಹೊಳೆಯಲ್ಲಿ' ಎಂಬ ಪದದಲ್ಲಿ 'ಯ' ಎಂಬ ಅಕ್ಷರವು ಬಂದು ಸೇರಿಕೊಂಡಿದೆ.

  5. ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಒಂದು ಅಕ್ಷರ ಆಗಮವಾದರೆ ಅದನ್ನು ಆಗಮಸಂಧಿ ಎನ್ನುವರು.

  6. ಈ ರೀತಿಯಾದ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ :

  7. ಗಡಿಬಿಡಿ + ಇಂದ = ಗಡಿಬಿಡಿಯಿಂದ: ಯ ಆಗಮವಾಗಿದೆ.

  8. ಆರಂಭ + ಆಗು = ಆರಂಭವಾಗು : ವ ಆಗಮವಾಗಿದೆ.

ಆದೇಶಸಂಧಿ :

  1. ೧. ಕೋಪ + ಕೊಂಡು = ಕೋಪಗೊಂಡು

  2. ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಕೋಪಗೊಂಡು ಎಂಬ ಪದದಲ್ಲಿ ಕ (ಕೊ) ಅಕ್ಷರದ ಬದಲಿಗೆ ಗ (ಗೊ) ಅಕ್ಷರ ಬಂದಿದೆ.

  3. ೨. ಮೈ + ತೊಳೆ = ಮೈದೊಳೆ

  4. ಇಲ್ಲಿ ಮೈದೊಳೆ ಎಂಬ ಪದದಲ್ಲಿ 'ತ' (ತೊ) ಅಕ್ಷರದ ಬದಲಿಗೆ 'ದ' (ದೊ) ಅಕ್ಷರ ಬಂದಿದೆ.

  5. ಹೀಗೆ ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರ ಬಂದರೆ ಅದನ್ನು ಆದೇಶಸಂಧಿ ಎನ್ನುವರು. ಇಲ್ಲಿ ಉತ್ತರ ಪದದ ಮೊದಲನೆಯ ಅಕ್ಷರವು ಬದಲಾಗುತ್ತದೆ. ಸಾಮಾನ್ಯವಾಗಿ ಕ,ತ,ಪ ಗಳಿಗೆ ಕ್ರಮವಾಗಿ ಗ,ದ,ಬ ಗಳು ಆದೇಶವಾಗಿ ಬರುತ್ತವೆ.

  6. ಈ ರೀತಿಯಾದ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ :

  7. ಕುಡು + ಕೋಲು = ಕುಡುಗೋಲು : 'ಕ' ದ ಬದಲು 'ಗ' ಆಗಿದೆ.

  8. ಬೆಟ್ಟ + ತಾವರೆ = ಬೆಟ್ಟದಾವರೆ : 'ತ' ದ ಬದಲು 'ದ' ಆಗಿದೆ.

  9. ಕಣ್ + ಪನಿ = ಕಂಬನಿ : 'ಪ' ದ ಬದಲು 'ಬ' ಆಗಿದೆ.

  10. ಕನ್ನಡ ಪದಗಳು ಪರಸ್ಪರ ಸೇರಿ ಸಂಧಿಕಾರ್ಯ ನಡೆದಿದೆ. ಆದ್ದರಿಂದ ಇವುಗಳನ್ನು 'ಕನ್ನಡ ಸಂಧಿ' ಎಂದು ಕರೆಯುತ್ತೇವೆ.

  11. ಇದುವರೆಗೆ ನಾವು ಮೂರು ರೀತಿಯ ಸಂಧಿಕಾರ್ಯಗಳನ್ನು ಗಮನಿಸಿದ್ದೇವೆ.

  12. ಕನ್ನಡ ಸಂಧಿಗಳು (Tree diagram branching into three: ೧ ಲೋಪಸಂಧಿ, ೨ ಆಗಮಸಂಧಿ, ೩ ಆದೇಶಸಂಧಿ)

ಭಾಷಾಭ್ಯಾಸ

ಅ. ಪದಗಳನ್ನು ಕೂಡಿಸಿ ಬರೆಯಿರಿ.

  1. ೧. ಮೇಲೆ + ಇಟ್ಟುಕೊಂಡು

    Answer

    ೧. ಮೇಲಿಟ್ಟುಕೊಂಡು

  2. ೨. ಶುಭ + ಆಯಿತು

    Answer

    ೨. ಶುಭವಾಯಿತು

  3. ೩. ಬಂದೆ + ಅನ್ನು

    Answer

    ೩. ಬಂದೆಯನ್ನು

ಆ. ಪದಗಳನ್ನು ಬಿಡಿಸಿ ಸಂಧಿಯ ಹೆಸರು ತಿಳಿಸಿರಿ.

  1. ಸವಿಗನ್ನಡ, ಮರವನ್ನು, ನಾವೆಲ್ಲಾ, ದಾರಿಯಲ್ಲಿ, ಒಂದೊಂದು.

    Answer

    ಸವಿ + ಕನ್ನಡ = ಸವಿಗನ್ನಡ (ಆದೇಶಸಂಧಿ) ಮರ + ಅನ್ನು = ಮರವನ್ನು (ಆಗಮಸಂಧಿ) ನಾವು + ಎಲ್ಲಾ = ನಾವೆಲ್ಲಾ (ಲೋಪಸಂಧಿ) ದಾರಿ + ಅಲ್ಲಿ = ದಾರಿಯಲ್ಲಿ (ಆಗಮಸಂಧಿ) ಒಂದು + ಒಂದು = ಒಂದೊಂದು (ಲೋಪಸಂಧಿ)

ಚಟುವಟಿಕೆ:

  1. 1. ರಾಜಕುಮಾರ್ ಅವರನ್ನು ಕುರಿತು ಪ್ರಕಟವಾಗಿರುವ ಪುಸ್ತಕಗಳನ್ನು ಸಂಗ್ರಹಿಸಿ, ಅಭ್ಯಾಸ ಮಾಡಿ.

  2. 2. ರಾಜಕುಮಾರ್‌ರವರು ಅಭಿನಯಿಸಿರುವ ನಿಮ್ಮ ಮೆಚ್ಚಿನ ಚಲನಚಿತ್ರವನ್ನು ಕುರಿತು ಒಂದು ಪ್ರಬಂಧ ಬರೆಯಿರಿ.

  3. 3. ರಾಜಕುಮಾರ್ ಅವರ ವಿವಿಧ ಬಗೆಯ ಪಾತ್ರಗಳ ಚಿತ್ರ ಸಂಗ್ರಹಿಸಿ, ಪುಟ್ಟದೊಂದು ಆಲ್ಬಂ ತಯಾರಿಸಿ.

Interactive Lab

ಸೌಕರ್ಯಅನುಕೂಲ, ಜನಮಾನಸ-ಜನರ ಮನಸ್ಸು, ನಾಡೋಜ-ನಾಡಿಗೆ ಗುರು, ಉಜ್ವಲ-ಬೆಳಗುವ, ಸಜ್ಜನಿಕೆ-ಒಳ್ಳೆಯ ನಡವಳಿಕೆ, ಮೇರುವ್ಯಕ್ತಿತ್ವ-ಎತ್ತರದ ವ್ಯಕ್ತಿತ್ವ, ವಿಕಾಸ-ಹರಡಿಕೊಳ್ಳು, ಹಿಗ್ಗಿಸು-ಹಿರಿದಾಗಿಸು, ರಂಗಭೂಮಿ-ನಾಟಕವಾಡುವ ಸ್ಥಳ, ಅಕಾಲಿಕ-ಕಾಲವಲ್ಲದ, ಮಾಗುತ್ತ-ಪಕ್ವಗೊಳ್ಳುತ್ತ, ಹೆಗಲೆಣೆ-ನೆರವು ನೀಡು, ಬೆಳ್ಳಿತೆರೆ-ಚಲನಚಿತ್ರ ತೋರುವ ಪರದೆ, ಮನೋಜ್ಞ-ಮನಮೆಚ್ಚುವ, ಸಂಪನ್ನತೆ-ಸಿರಿವಂತಿಕೆ; ಸಮೃದ್ಧತೆ, ಪ್ರತೀಕ-ಸಂಕೇತ, ತೊಡಕು-ಅಡ್ಡಿ