CRECT Education

Class 7 Kannada Lesson 12: Weaver Ants and Their Life – Learn the Story | KTBS First Language

Description

Part 1 of KTBS Class 7 First Language Lesson 12 by Poornachandra Tejaswi: the extraordinary world of weaver ants, their nest-building, teamwork, and chemical communication.

ಗದ್ಯ · ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಪಠ್ಯFull text

ಇರುವೆಗಳ ವರ್ಗದಲ್ಲೇ ಅದ್ಭುತವೆಂದು ವರ್ಣನೆಗೊಳಗಾಗಿರುವ ಚಗಳಿ ಇರುವೆಗಳು ಮಲೆನಾಡಿಗರಿಗೆ ಚಿರಪರಿಚಿತ. ಇವು ಕಾಡಿನಲ್ಲಿ, ತೋಟದಲ್ಲಿ ಅಗಾಧವಾದ ಗೂಡುಗಳನ್ನು ಕಟ್ಟಿಕೊಂಡು ವಾಸಿಸುತ್ತವೆ. ಎಲೆಗಳನ್ನು ಒಂದಕ್ಕೊಂದು ಸೇರಿಸಿ ಇವು ಕಟ್ಟುವ ಗೂಡುಗಳನ್ನು ‘ಕೊಟ್ಟೆ’ ಎನ್ನುತ್ತಾರೆ. ಅತ್ಯಂತ ಸಂಕೀರ್ಣ ಸಂದೇಶಗಳನ್ನು ತಿಳಿಸಬಲ್ಲ ಭಾಷೆ ಅಥವಾ ಸಂವಹನ ಮಾಧ್ಯಮ ಇಲ್ಲದೆ ಈ ಇರುವೆಗಳು ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದು ಇದರಿಂದ ತಿಳಿದುಬರುತ್ತದೆ. ಸಂಘಜೀವಿಗಳಾದ ಈ ಇರುವೆಗಳು ಇಡೀ ಗೂಡು ಒಂದೇ ಎನ್ನುವಷ್ಟು ಶಿಸ್ತಿನಿಂದ ವರ್ತಿಸುತ್ತವೆ. (Photo of a Weaver Ant) ಉದಾಹರಣೆಗೆ, ಇವು ಕೊಟ್ಟೆಗಳನ್ನು ರಚಿಸುವ ರೀತಿಯನ್ನೇ ನೋಡಿ. ಒಂದು ಕೊಂಬೆಯ ಎಲೆಗಳನ್ನು ಬಗ್ಗಿಸಿ ಒಂದಕ್ಕೊಂದು ತಾಗಿಸಿ ಹೊಲಿದಿರುತ್ತವೆ. ನಮಗೆ ಹೊರಗಿನಿಂದ ನೋಡಿದಾಗ ಇದೇನು ಮಹಾ ಅನ್ನಿಸಬಹುದು. ಆದರೆ ಇರುವೆಯಂಥ ಅತ್ಯಂತ ಸಣ್ಣ ಶರೀರದ ಪ್ರಾಣಿ ಅದರ ನೂರಾರು ಪಟ್ಟು ವಿಸ್ತಾರವಾಗಿಯೂ ಬಲವಾಗಿಯೂ ಇರುವ ಎಲೆಗಳನ್ನು ಬಗ್ಗಿಸುವುದು ಹೇಗೆ? ಯಾವ ಎಲೆಗಳನ್ನು ಬಗ್ಗಿಸಬೇಕಾಗಿದೆಯೋ ಆ ಎಲೆಯ ಮೇಲೆ ನೂರಾರು ಇರುವೆಗಳು ಜಮಾಯಿಸುತ್ತವೆ. ಅನಂತರ ಒಂದರ ಕಾಲು ಒಂದು ಹಿಡಿದುಕೊಂಡು ಜೋತಾಡುತ್ತಾ ಕೆಳಗಿಳಿಯುತ್ತವೆ. ಕೆಳಗಿನ ಎಲೆಯ ಅಂಚು ಸಿಕ್ಕಿದ ಕೂಡಲೆ ನೇತಾಡುವ ದಾರದ ಕೊನೆಯಲ್ಲಿರುವ ಇರುವೆ ಎಲೆಯ ಅಂಚನ್ನು ಹಿಡಿಯುತ್ತದೆ. ಮೇಲಿನಿಂದ ಕೆಳಗೆ ನೇತುಕೊಂಡಿರುವ ಹಲವಾರು ದಾರಗಳು ನಿರ್ಮಾಣವಾದ ಕೂಡಲೇ ನೀಡಿರುವ ತಮ್ಮ ಕೈ ಕಾಲುಗಳನ್ನು ಎಲ್ಲ ಇರುವೆಗಳೂ ನಿಧಾನವಾಗಿ ಮಡಚುತ್ತವೆ. ದಾರದ ಸೆಳೆತಕ್ಕೆ ಎಲೆ ಮೆಲ್ಲಗೆ ಕೆಳಗೆ ಬಾಗುತ್ತದೆ. ಮೊದಲ ಇರುವೆಗಳ ದಾರ ಸಂಕುಚಿಸಿ ಎಲೆ ಕೆಳಕ್ಕೆ ಬಾಗಿರಬೇಕಾದರೆ ಮತ್ತೆ ಎರಡನೇ ಸುತ್ತಿನ ಇರುವೆಗಳ ದಾರ ನಿರ್ಮಾಣವಾಗುತ್ತದೆ. ಮೊದಲನೆಯ ಸರಣಿ ಎಳೆದು ಹಿಡಿದಿರುವ ಎಲೆಯಿಂದ ಮತ್ತೊಂದು ಸುತ್ತಿನ ದಾರಗಳು ಬಂದು ಎಲೆಯನ್ನು ಮತ್ತಷ್ಟು ಕೆಳಗೆ ಎಳೆಯುತ್ತವೆ. ಕೆಲಹೊತ್ತಿನಲ್ಲೇ ಆ ಎಲೆಯನ್ನು ಪೊಟ್ಟಣದಂತೆ ಬಗ್ಗಿಸಿ ಕೆಳಗಿನ ಎಲೆಗೆ ಒತ್ತಿ ಹಿಡಿಯುತ್ತವೆ. ಹಲಸಿನ ಮತ್ತು ಮಾವಿನ ಮರದಲ್ಲಿ ನೇತಾಡುತ್ತಿರುವ ಸಾಮಾನ್ಯ ಗಾತ್ರದ ಚಗಳಿ ಕೊಟ್ಟೆಯ ಚಕ್ಕೆಲೆಗಳು ಒಂದಕ್ಕೊಂದು ತಾಗುತ್ತಿದ್ದಂತೆಯೇ ಇರುವೆಗಳು ತಮ್ಮ ಹಳೆಗೂಡಿಗೆ ಓಡಿ ಅಲ್ಲಿ ಇನ್ನೂ ಕೋಶಾವಸ್ಥೆಯಲ್ಲಿರುವ ಲಾರ್ವಾಗಳನ್ನು ತಮ್ಮ ದವಡೆಯಲ್ಲಿ ಮೃದುವಾಗಿ ಹಿಡಿದು ತರುತ್ತವೆ. ಆ ಲಾರ್ವಾಗಳನ್ನು ಎಲೆಗೆ ಎಲೆ ಅಂಟಿಸಬೇಕಾದ ಜಾಗದಲ್ಲಿ ವಿಚಿತ್ರವಾಗಿ ನೇವರಿಸುತ್ತಾ ಮೇಲೂ ಕೆಳಗೂ ಮಗ್ಗದ ಲಾಳ ಆಡಿಸುವಂತೆ ಅತ್ತಿಂದಿತ್ತ ಆಡಿಸುತ್ತವೆ. ಲಾರ್ವಾಗಳನ್ನು ನೇವರಿಸುವುದರಿಂದ ಅವು ರೇಷ್ಮೆಯಂಥ ನೂಲನ್ನು ಸತತವಾಗಿ ಸ್ರವಿಸಲು ಶುರು ಮಾಡುತ್ತವೆ. ಜೇಡರ ಬಲೆಯಂತೆ ಎರಡನ್ನೂ ಬೆಸೆಯುವ ಈ ನೂಲು ಕೆಲಸ ಮುಗಿಯುವ ಹೊತ್ತಿಗೆ ರೇಷ್ಮೆ ಬಟ್ಟೆಯಂತೆಯೇ ದಟ್ಟವಾಗಿ ದಪ್ಪಗಿದ್ದು ಎಲೆಗಳೆರಡನ್ನು ಅಂಟಿಸಿರುತ್ತದೆ. (Three photos showing Weaver Ants making a nest with leaves) ಚಗಳಿ ಇರುವೆಗಳು ಮೊದಲು ಎರಡೋ ಮೂರೋ ಅಕ್ಕಪಕ್ಕದ ಎಲೆಗಳನ್ನು ಸೇರಿಸಿ ಪೊಟ್ಟಣ ಕಟ್ಟಿದಂತೆ ಚಿಕ್ಕಗೂಡು ಕಟ್ಟುತ್ತವೆ. ಇವುಗಳ ಸಂಖ್ಯೆ ಬೆಳೆದಂತೆಲ್ಲಾ ಮೇಲಿನ ಮತ್ತು ಅಕ್ಕಪಕ್ಕದ ಎಲೆಗಳನ್ನು ಹೊಂದಿಸಿ ಮಾಳಿಗೆಗಳನ್ನು ನಿರ್ಮಿಸುತ್ತಾ ಗೂಡನ್ನು ದೊಡ್ಡವನ್ನಾಗಿ ಮಾಡುತ್ತವೆ. ದೊಡ್ಡ ಗೂಡುಗಳಲ್ಲಿ ಐದರಿಂದ ಹತ್ತು ಲಕ್ಷ ಇರುವೆಗಳವರೆಗೂ ಇರುತ್ತವೆ. ಇರುವೆಗಳ ಸಂಖ್ಯೆ ಇದನ್ನೂ ಮೀರಿ ಬೆಳೆದರೆ ಆಗ ಅದೇ ಮರದ ಬೇರೆ ಕೊಂಬೆಯಲ್ಲೋ ಅಥವಾ ಸಮೀಪದ ಇನ್ನೊಂದು ಮರದಲ್ಲೋ ಹೊಸ ಉಪಕೊಟ್ಟೆಗಳನ್ನು ಕಟ್ಟುತ್ತವೆ. ಈ ಇರುವೆಗಳ ಶಿಸ್ತು, ಧೈರ್ಯ ಮತ್ತು ಒಗ್ಗಟ್ಟುಗಳ ದೆಸೆಯಿಂದ ಇವನ್ನು ಮನುಷ್ಯರಿಗೂ ಸಹ ಹಿಮ್ಮೆಟ್ಟಿಸುವುದು ಕಷ್ಟ. ಬೇರೆ ಇರುವೆಗಳನ್ನು ನೀವು ಹಿಡಿಯಲು ಹೋದರೆ ಅವು ತಲೆ ತಪ್ಪಿಸಿಕೊಂಡು ಓಡಿಹೋಗಲು ನೋಡುತ್ತವೆ. ಆದರೆ ಚಗಳಿ ಇರುವೆಗಳನ್ನು ಹಿಡಿಯಲು ಹೋದರೆ ಅವು ಓಡುವುದಿಲ್ಲ. ಬದಲಿಗೆ ತಿರುಗಿ ನಿಂತು ನೆಗೆದು ಕಚ್ಚಲು ಸಿದ್ಧವಾಗುತ್ತವೆ. ಅಷ್ಟೇ ಅಲ್ಲದೆ ತನ್ನ ಹಿಂಭಾಗವನ್ನು ಮೇಲೆತ್ತಿ ಹೊಟ್ಟೆ ಅಡಿಯಲ್ಲಿರುವ ಗ್ರಂಥಿಗಳಿಂದ ಅಪಾಯದ ಫಿರಮೋನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪರಿಸುತ್ತವೆ. ಕೆಲವೇ ಕ್ಷಣಗಳಲ್ಲಿ ಆಜುಬಾಜಿನಲ್ಲಿರುವ ಎಲ್ಲ ಚಗಳಿ ಇರುವೆಗಳೂ ಯುದ್ಧ ಸನ್ನದ್ಧರಾಗಿ ಹಾಜರಾಗುತ್ತವೆ. ಈ ಇರುವೆಗಳು ತಮ್ಮಲ್ಲೇ ದನ ಸಾಕುವ ಗೋಪಾಲಕರಂಥ ಕೆಲಸಗಾರ ಇರುವೆಗಳನ್ನು ರೂಪಿಸಿವೆ. ಇವುಗಳ ಕೆಲಸವೆಂದರೆ ಗಿಡದ ರಸ ಹೀರಿ ಬದುಕುವ ತಿಗಣೆ ಮತ್ತು ಜಿಗಿ ಹುಳುಗಳನ್ನು ಹಿಡಿತಂದು ತಾವು ಕೊಟ್ಟೆ ಕಟ್ಟಿದ ಮರದ ಕೊಂಬೆಗಳ ಮೇಲೆ ಸಾಕುವುದು. ಚಗಳಿಗಳ ಜೀವನದಲ್ಲಿ ಇವಕ್ಕೆ ಅಪಾರ ಪ್ರಾಮುಖ್ಯತೆ ಇದೆ. ಅವುಗಳ ಉಚ್ಛಿಷ್ಟ ಸಿಹಿಯಾದ ಮಧುವಾಗಿರುವುದರಿಂದ ಅದು ಇರುವೆಗಳ ಆಹಾರವೂ ಹೌದು. ನಾವು ದನ ಸಾಕಿ ಅವುಗಳಿಂದ ಹಾಲು ಕರೆದುಕೊಳ್ಳುವಂತೆ ತಮಗೆ ಆಹಾರೋತ್ಪತ್ತಿ ಮಾಡುವ ಈ ಕೀಟಗಳನ್ನು ಚಗಳಿ ಇರುವೆಗಳು ಸಾಕುತ್ತವೆ. ಇದರಿಂದಾಗಿ ಚಗಳಿ ಇರುವೆಗಳು ಲಕ್ಷಾಂತರ ಕೀಟಗಳನ್ನು ಹಿಡಿದು ಕೊಂಡು ರೈತನಿಗೆ ಸಹಾಯ ಮಾಡಿದರೂ ಜಿಗಿ ಹುಳುಗಳನ್ನೂ ತಿಗಣೆಗಳನ್ನೂ ಇವು ಗೂಡು ಮಾಡಿರುವ ಮರಗಿಡಗಳಲ್ಲೆಲ್ಲ ತಂದಿಟ್ಟು ಸಾಕುವುದರಿಂದ ಈ ಉಪದ್ರವಕಾರಿ ಕೀಟಗಳನ್ನು ಗಿಡದಿಂದ ಗಿಡಕ್ಕೆ ಹಬ್ಬಿಸಿ ಸಾಕುವ ವಾಹಕಗಳಾಗಿವೆ. ಚಗಳಿ ಇರುವೆಗಳಿಗೆ ಇತರ ಸಂಘಜೀವಿಗಳಾದ ಕೀಟಗಳಲ್ಲಿರುವಂತೆಯೇ ಒಂದು ರಾಣಿ ಇರುವೆ ಇರುತ್ತದೆ. ಇಡೀ ಇರುವೆಗಳ ಗುಂಪಿಗೆ ಇದೇ ಮೂಲ. ಇದರ ಕೆಲಸ ಸತತವಾಗಿ ಮೊಟ್ಟೆ ಇಡುವುದು. ರಾಣಿ ಇರುವೆಯ ಮೈಯಲ್ಲಿ ಅನೇಕ ಗ್ರಂಥಿಗಳಿಂದ ಹಲವಾರು ಬಗೆಯ ಫಿರಮೋನ್ ರಾಸಾಯನಿಕ ಒಸರುತ್ತದೆ. ಈ ರಾಸಾಯನಿಕಗಳು ಒಂದು ಇರುವೆಯ ಸಮುದಾಯದ ರೂಪುರೇಷೆಗಳನ್ನು ನಿಯಂತ್ರಿಸುವವು. ಗಂಡು ಇರುವೆಗಳು, ಕಾವಲುಗಾರ ಇರುವೆಗಳು, ಸೈನಿಕ ಇರುವೆಗಳು ಸಹ ಈ ರಾಸಾಯನಿಕ ಸಂಯೋಜನೆಯಲ್ಲಿ ರೂಪುಗೊಳ್ಳುವವು. ರಾಣಿಯ ಮೇಲೆ ಸದಾ ಇರುವೆಗಳು ಮುತ್ತಿಕೊಂಡಿರುತ್ತವೆ. ಅದರ ಮೈಮೇಲೆ ಒಸರುವ ರಾಸಾಯನಿಕವನ್ನು ತಾವು ನೆಕ್ಕುವುದಲ್ಲದೆ ಅದನ್ನು ಸಂಗ್ರಹಿಸಿ ಬೇರೆ ಬೇರೆ ಇರುವೆಗಳಿಗೆ ಒಯ್ದು ತಿನ್ನಿಸುತ್ತವೆ. ತಾವು ಹೊರಗಿನಿಂದ ಸಂಗ್ರಹಿಸಿ ತಂದ ಆಹಾರವನ್ನು ಕೆಲಸಗಾರ ಇರುವೆಗಳು ರಾಣಿಗೆ ತಿನ್ನಿಸುತ್ತಲೂ ಇರುತ್ತವೆ. ಚಗಳಿ ಇರುವೆಗಳದ್ದು ಸ್ತ್ರೀ ಪ್ರಧಾನವಾದ ಸಮಾಜ. **ಕೌಶಲ :** ಮಾತನಾಡುವುದು. **ಸಾಮರ್ಥ್ಯ :** ಸನ್ನಿವೇಶ ಮತ್ತು ಘಟನೆಗಳನ್ನು ಕುರಿತು ನಿರರ್ಗಳವಾಗಿ ಹಾಗೂ ಸ್ಪಷ್ಟವಾಗಿ ಮಾತನಾಡುವುದು. **ಆಶಯ :** ಇಂದು ನಮ್ಮ ಸುತ್ತಮುತ್ತಲು ಅನೇಕ ಕೌತುಕಗಳು ನಡೆಯುತ್ತಿರುತ್ತವೆ. ವಿಚಿತ್ರ ಸಂಗತಿಗಳು ಘಟಿಸುತ್ತಿರುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಅನೇಕ ಜೀವಿಗಳ ಜೀವನದಿಂದ ನಾವು ಕಲಿಯಬೇಕಾದುದು ಬಹಳ ಇದೆ. ಅಂತಹ ಕೌತುಕಗಳಲ್ಲಿ ಒಂದಾದ ಚಗಳಿ ಇರುವೆಗಳ ಪರಿಚಯ ಮಾಡಿಕೊಡುವುದು ಇಲ್ಲಿನ ಉದ್ದೇಶ. **ಕೃತಿಕಾರರ ಪರಿಚಯ** (Portrait of Poornachandra Tejaswi) ಪೂರ್ಣಚಂದ್ರ ತೇಜಸ್ವಿ (೧೯೩೮-೨೦೦೨) ರಾಷ್ಟ್ರಕವಿ ಕುವೆಂಪು ರವರ ಪುತ್ರ. ೧೯೩೮ರ ಸೆಪ್ಟೆಂಬರ್ ೦೮ರಂದು ಶಿವಮೊಗ್ಗದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆಸಿದರು. ತೋಟಗಾರಿಕೆ, ಛಾಯಾಗ್ರಹಣ, ಬರವಣಿಗೆ ಮತ್ತು ಚಿತ್ರಕಲೆ ತೇಜಸ್ವಿಯವರ ಹವ್ಯಾಸ. ಕಥೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನಗಳು, ಪರಿಸರ, ಶಿಕಾರಿ ಸಂಬಂಧಿತ ಬರಹಗಳು, ಇತಿಹಾಸ, ತತ್ವಜ್ಞಾನ, ಮಾನವಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಕರ್ವಾಲೋ, ಅಬಚೂರಿನ ಪೋಸ್ಟಾಫೀಸ್, ಚಿದಂಬರ ರಹಸ್ಯ, ಕಿರಗೂರಿನ ಗಯ್ಯಾಳಿಗಳು, ತಬರನ ಕಥೆ, ಜುಗಾರಿ ಕ್ರಾಸ್, ಮಾಯಾಲೋಕ, ಪರಿಸರದ ಕತೆ, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್, ಅಣ್ಣನ ನೆನಪು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ತೇಜಸ್ವಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ದೊರೆತಿವೆ. ಇವರ ಸಮಗ್ರ ಸಾಹಿತ್ಯಕ್ಕಾಗಿ ಪಂಪ ಪ್ರಶಸ್ತಿ ನೀಡಲಾಗಿದೆ. ತೇಜಸ್ವಿ ಅವರು ಏಪ್ರಿಲ್ ೫, ೨೦೦೨ ರಂದು ನಿಧನರಾದರು

ಪದಗಳ ಅರ್ಥword meanings

KannadaPronunciationMeaning
ವರ್ಗಗುಂಪು, ಸಮೂಹ; ವರ್ಣನೆ-ಬಣ್ಣನೆ; ಸಂಕೀರ್ಣ-ಜಟಿಲವಾದ, ನಾನಾ ವಿಧವಾದ; ಅಂಚು-ಕೊನೆ, ತುದಿ; ಸ್ರವಿಸು-ಒಸರು, ಜಿನುಗು; ಬೆಸೆ-ಕೂಡಿಸು, ಸೇರಿಸು; ಮಾಳಿಗೆ-ಮಹಡಿ; ಹಿಮ್ಮೆಟ್ಟಿಸು-ಹಿಂದಕ್ಕೆ ಸರಿಸು, ಸೋಲಿಸು; ಸಿಂಪರಿಸು-ಚಿಮುಕಿಸು, ಲೇಪಿಸು; ಆಜುಬಾಜು-ಅಕ್ಕಪಕ್ಕ, ನೆರೆಹೊರೆ; ಸನ್ನದ್ಧ-ಸಿದ್ಧವಾಗು; ಉಚ್ಛಿಷ್ಟ-ಎಂಜಲು; ಮಧು-ಸಿಹಿ; ವಾಹಕ-ಸಾಗಿಸುವ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಕೊಟ್ಟೆ ಎಂದರೇನು?

    Answer

    ಎಲೆಗಳನ್ನು ಒಂದಕ್ಕೊಂದು ಸೇರಿಸಿ ಚಗಳಿ ಇರುವೆಗಳು ಕಟ್ಟುವ ಗೂಡುಗಳನ್ನು ಕೊಟ್ಟೆ ಎನ್ನುತ್ತಾರೆ.

  2. ೨. ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ಏನನ್ನು ಬಳಸುತ್ತವೆ?

    Answer

    ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ಲಾರ್ವಾಗಳು ಸ್ರವಿಸುವ ರೇಷ್ಮೆಯಂಥ ನೂಲನ್ನು ಬಳಸುತ್ತವೆ.

  3. ೩. ಚಗಳಿ ಇರುವೆಗಳು ತಮ್ಮ ಸಂಗಡಿಗರಿಗೆ ಯಾವ ರಾಸಾಯನಿಕದ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ?

    Answer

    ಚಗಳಿ ಇರುವೆಗಳು ತಮ್ಮ ಸಂಗಡಿಗರಿಗೆ ಫಿರಮೋನ್ ರಾಸಾಯನಿಕದ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ.

  4. ೪. ಚಗಳಿ ಇರುವೆಗಳಂತೆಯೇ ಸಂಘಜೀವನವನ್ನು ನಡೆಸುವ ಇತರ ಜೀವಿಗಳು ಯಾವುವು?

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಚಗಳಿ ಇರುವೆಗಳ ಶಿಸ್ತಿಗೆ ಒಂದು ಉದಾಹರಣೆ ಕೊಡಿ.

    Answer

    ಚಗಳಿ ಇರುವೆಗಳು ಕೊಟ್ಟೆ ಕಟ್ಟುವಾಗ ನೂರಾರು ಇರುವೆಗಳು ಒಂದಾಗಿ ಎಲೆಗಳನ್ನು ಬಗ್ಗಿಸಲು ಸರಪಳಿಯಂತೆ ಜೋತಾಡುತ್ತವೆ. ಮೊದಲ ಸರಣಿ ಎಲೆಯನ್ನು ಎಳೆದು ಹಿಡಿದ ನಂತರ ಎರಡನೇ ಸರಣಿ ಮತ್ತಷ್ಟು ಎಳೆದು ಎಲೆಯನ್ನು ಪೊಟ್ಟಣದಂತೆ ಬಗ್ಗಿಸುತ್ತವೆ. ಇದು ಅವುಗಳ ಅಚ್ಚುಕಟ್ಟಾದ ಶಿಸ್ತನ್ನು ತೋರಿಸುತ್ತದೆ.

  2. ೨. ಕೆಲಸಗಾರ ಇರುವೆಗಳ ಕೆಲಸವೇನು?

    Answer

    ಕೆಲಸಗಾರ ಇರುವೆಗಳು ತಿಗಣೆ ಮತ್ತು ಜಿಗಿ ಹುಳುಗಳನ್ನು ಹಿಡಿದು ತಂದು ಸಾಕುತ್ತವೆ. ಅವುಗಳ ಉಚ್ಛಿಷ್ಟವಾದ ಸಿಹಿ ಮಧುವನ್ನು ಆಹಾರವಾಗಿ ಸೇವಿಸುತ್ತವೆ. ಜೊತೆಗೆ, ಹೊರಗಿನಿಂದ ತಂದ ಆಹಾರವನ್ನು ರಾಣಿ ಇರುವೆಗೆ ತಿನ್ನಿಸುತ್ತವೆ.

  3. ೩. ಚಗಳಿ ಇರುವೆಗಳನ್ನು ಹಿಮ್ಮೆಟ್ಟಿಸುವುದು ಮನುಷ್ಯರಿಗೂ ಕಷ್ಟ ಏಕೆ?

    Answer

    ಚಗಳಿ ಇರುವೆಗಳು ಓಡಿಹೋಗದೆ ತಿರುಗಿ ನಿಂತು ಕಚ್ಚಲು ಸಿದ್ಧವಾಗುತ್ತವೆ. ಅಪಾಯದ ಫಿರಮೋನ್ ರಾಸಾಯನಿಕವನ್ನು ಸಿಂಪರಿಸಿ ಕೆಲವೇ ಕ್ಷಣಗಳಲ್ಲಿ ಸುತ್ತಲಿನ ಎಲ್ಲ ಇರುವೆಗಳನ್ನೂ ಯುದ್ಧ ಸನ್ನದ್ಧಗೊಳಿಸುತ್ತವೆ. ಈ ಧೈರ್ಯ ಮತ್ತು ಒಗ್ಗಟ್ಟಿನಿಂದ ಅವುಗಳನ್ನು ಹಿಮ್ಮೆಟ್ಟಿಸುವುದು ಕಷ್ಟ.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಚಗಳಿ ಇರುವೆಗಳು ತಮ್ಮ ಗೂಡನ್ನು ಹೇಗೆ ನಿರ್ಮಿಸುತ್ತವೆ?

    Answer

    ಚಗಳಿ ಇರುವೆಗಳು ಮೊದಲು ಎಲೆಗಳ ಮೇಲೆ ನೂರಾರು ಸಂಖ್ಯೆಯಲ್ಲಿ ಜಮಾಯಿಸುತ್ತವೆ. ಒಂದರ ಕಾಲು ಒಂದು ಹಿಡಿದುಕೊಂಡು ಜೋತಾಡುತ್ತಾ ಕೆಳಗಿಳಿದು, ಕೆಳಗಿನ ಎಲೆಯ ಅಂಚನ್ನು ಹಿಡಿಯುತ್ತವೆ. ನೇತಾಡುವ ದಾರಗಳ ಸೆಳೆತದಿಂದ ಎಲೆಗಳು ಬಾಗುತ್ತವೆ. ಹೀಗೆ ಎಲೆಗಳನ್ನು ಪೊಟ್ಟಣದಂತೆ ಬಗ್ಗಿಸಿ ಒತ್ತಿ ಹಿಡಿಯುತ್ತವೆ. ನಂತರ ಹಳೆಗೂಡಿನಿಂದ ಲಾರ್ವಾಗಳನ್ನು ತಂದು, ಅವುಗಳನ್ನು ನೇವರಿಸಿ ರೇಷ್ಮೆಯಂಥ ನೂಲನ್ನು ಸ್ರವಿಸುವಂತೆ ಮಾಡಿ ಎಲೆಗಳನ್ನು ಅಂಟಿಸುತ್ತವೆ. ಸಂಖ್ಯೆ ಬೆಳೆದಂತೆ ಮೇಲಿನ ಮತ್ತು ಅಕ್ಕಪಕ್ಕದ ಎಲೆಗಳನ್ನು ಸೇರಿಸಿ ಗೂಡನ್ನು ದೊಡ್ಡದಾಗಿಸುತ್ತವೆ.

  2. ೨. ಚಗಳಿ ಇರುವೆಗಳು ಉಪಕಾರಿಗಳೂ ಹೌದು ಉಪದ್ರವಕಾರಿಗಳೂ ಹೌದು. ಈ ಹೇಳಿಕೆಯನ್ನು ವಿವರಿಸಿ.

    Answer

    ಚಗಳಿ ಇರುವೆಗಳು ಲಕ್ಷಾಂತರ ಕೀಟಗಳನ್ನು ಹಿಡಿದು ತಿನ್ನುವುದರಿಂದ ರೈತರಿಗೆ ಸಹಾಯ ಮಾಡುತ್ತವೆ. ಆದರೆ ಅವು ತಿಗಣೆ ಮತ್ತು ಜಿಗಿ ಹುಳುಗಳನ್ನು ಸಾಕಲು ಹಿಡಿದು ತಂದು ಮರಗಿಡಗಳ ಮೇಲೆ ಇಡುತ್ತವೆ. ಈ ಉಪದ್ರವಕಾರಿ ಕೀಟಗಳು ಗಿಡದಿಂದ ಗಿಡಕ್ಕೆ ಹಬ್ಬಲು ಇರುವೆಗಳು ವಾಹಕಗಳಾಗುತ್ತವೆ. ಹೀಗೆ ಅವು ಒಂದು ಕಡೆ ಉಪಕಾರಿಗಳಾದರೆ ಇನ್ನೊಂದು ಕಡೆ ಉಪದ್ರವಕಾರಿಗಳೂ ಆಗಿವೆ.

  3. ೩. ಕಷ್ಟಕ್ಕೆ ಹೆದರಿ ಓಡಬಾರದು, ತಿರುಗಿ ನಿಂತು ಎದುರಿಸಬೇಕೆಂಬ ಸಂದೇಶವನ್ನು ನಾವು ಇರುವೆ ಜೀವನದಿಂದ ಹೇಗೆ ಕಲಿಯಬಹುದು?

    Answer

    ಚಗಳಿ ಇರುವೆಗಳು ಅಪಾಯ ಎದುರಾದಾಗ ಓಡಿಹೋಗದೆ ತಿರುಗಿ ನಿಂತು ಕಚ್ಚಲು ಸಿದ್ಧವಾಗುತ್ತವೆ. ತಮ್ಮ ಒಗ್ಗಟ್ಟಿನಿಂದ ಶತ್ರುವನ್ನು ಎದುರಿಸುತ್ತವೆ. ಇದರಿಂದ ನಾವು ಕಷ್ಟಗಳಿಗೆ ಹೆದರದೆ ಧೈರ್ಯದಿಂದ ಎದುರಿಸಬೇಕೆಂಬ ಪಾಠ ಕಲಿಯಬಹುದು. ಒಗ್ಗಟ್ಟಿನಿಂದ ಯಾವುದೇ ಸಮಸ್ಯೆಯನ್ನು ನಿವಾರಿಸಬಹುದು ಎಂಬುದನ್ನು ಅವುಗಳ ನಡವಳಿಕೆ ತೋರಿಸುತ್ತದೆ.

ಈ. ಖಾಲಿ ಜಾಗವನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ.

  1. ೧. ಚಗಳಿ ಇರುವೆಗಳಿಗೆ ಮೂಲ ____________________ ಇರುವೆ.

    Answer

    ಚಗಳಿ ಇರುವೆಗಳಿಗೆ ಮೂಲ ರಾಣಿ ಇರುವೆ.

  2. ೨. ದನ ಸಾಕುವ ಗೋಪಾಲಕರನ್ನು ಹೋಲುವ ಇರುವೆಗಳು ____________________

    Answer

    ದನ ಸಾಕುವ ಗೋಪಾಲಕರನ್ನು ಹೋಲುವ ಇರುವೆಗಳು ಕೆಲಸಗಾರ ಇರುವೆಗಳು.

  3. ೩. ಚಗಳಿ ಇರುವೆಗಳ ಗೂಡನ್ನು ____________________ ಎಂದು ಕರೆಯುತ್ತಾರೆ.

    Answer

    ಚಗಳಿ ಇರುವೆಗಳ ಗೂಡನ್ನು ಕೊಟ್ಟೆ ಎಂದು ಕರೆಯುತ್ತಾರೆ.

  4. ೪. ಒಂದು ಚಗಳಿ ಇರುವೆ ಗೂಡಿನಲ್ಲಿ ಸುಮಾರು ____________________ ಇರುವೆಗಳು ಇರುತ್ತವೆ.

    Answer

    ಒಂದು ಚಗಳಿ ಇರುವೆ ಗೂಡಿನಲ್ಲಿ ಸುಮಾರು ಐದರಿಂದ ಹತ್ತು ಲಕ್ಷ ಇರುವೆಗಳು ಇರುತ್ತವೆ.

  5. ೫. ಇರುವೆಗಳಿಂದ ಒಸರುವ ರಾಸಾಯನಿಕ ____________________

    Answer

    ಇರುವೆಗಳಿಂದ ಒಸರುವ ರಾಸಾಯನಿಕ ಫಿರಮೋನ್.

Interactive Lab

ವರ್ಗಗುಂಪು, ಸಮೂಹ; ವರ್ಣನೆ-ಬಣ್ಣನೆ; ಸಂಕೀರ್ಣ-ಜಟಿಲವಾದ, ನಾನಾ ವಿಧವಾದ; ಅಂಚು-ಕೊನೆ, ತುದಿ; ಸ್ರವಿಸು-ಒಸರು, ಜಿನುಗು; ಬೆಸೆ-ಕೂಡಿಸು, ಸೇರಿಸು; ಮಾಳಿಗೆ-ಮಹಡಿ; ಹಿಮ್ಮೆಟ್ಟಿಸು-ಹಿಂದಕ್ಕೆ ಸರಿಸು, ಸೋಲಿಸು; ಸಿಂಪರಿಸು-ಚಿಮುಕಿಸು, ಲೇಪಿಸು; ಆಜುಬಾಜು-ಅಕ್ಕಪಕ್ಕ, ನೆರೆಹೊರೆ; ಸನ್ನದ್ಧ-ಸಿದ್ಧವಾಗು; ಉಚ್ಛಿಷ್ಟ-ಎಂಜಲು; ಮಧು-ಸಿಹಿ; ವಾಹಕ-ಸಾಗಿಸುವ