CRECT Education

Class 7 Kannada Lesson 13: The Festival of the Bow | KTBS Kannada – Learn the Story

Description

Learn Class 7 Kannada First Language Lesson 13: ಬಿಲ್ಲಹಬ್ಬ (The Festival of the Bow) — a play by H.S. Venkatesha Murthy. Follow the story beat by beat and master 5 key vocabulary words.

ಗದ್ಯ (prose/play) · ಎಚ್.ಎಸ್. ವೆಂಕಟೇಶಮೂರ್ತಿ (H.S. Venkatesha Murthy)

ಪಠ್ಯFull text

[ರಾತ್ರಿ, ಮಹಾರಾಜ ಕಂಸನ ಅರಮನೆಯ ಬಿಸಿಲುಮುಚ್ಚು. ಅಲ್ಲಿ ಮಂತ್ರಿ, ವೈದ್ಯ ಗುಸು ಗುಸು ಮಾತಾಡುತ್ತಿದ್ದಾರೆ. ಒಬ್ಬ ಸೇವಕ ಓಡಿಬಂದು “ಒಡೆಯರು ಬರ್ತಾ ಇದಾರೆ” ಎನ್ನುತ್ತಾನೆ. ಮಂತ್ರಿ ಮತ್ತು ಇತರರು ತಕ್ಷಣ ಎದ್ದು ಕಂಸನನ್ನು ನಿರೀಕ್ಷಿಸುತ್ತಾ ನಿಲ್ಲುತ್ತಾರೆ. ಎರಡೂ ಪಕ್ಕ ದೀವಟಿಗೆಯವರು. ಕಂಸ ರಂಗಕ್ಕೆ ಧಾವಿಸುತ್ತಾನೆ. ಮೆಟ್ಟಿಲು ಹತ್ತಿ ಬಂದಿರೋದರಿಂದ ಏದುಸಿರು ಬಿಡುತ್ತಾ ಇದ್ದಾನೆ.] **ಕಂಸ :** ಕೃಷ್ಣ ... ಕೃಷ್ಣ... ಕೃಷ್ಣ... ಕೇಳೀ ಕೇಳೀ ನನ್ನ ಕಿವಿ ತೂತು ಬಿದ್ದುಹೋದವು ... ಯಾರು? ಯಾರು? ಈ ಕೃಷ್ಣ..? ಹಾಲು ಕೊಡಲು ಹೋದ ಪೂತನಿಯ ರಕ್ತ ಹೀರಿದನಂತೆ...... ! ಸವಾರಿ ಮಾಡು ಅಂತ ಬೆನ್ನೊಡ್ಡಿದರೆ ಶಕಟನ ಸೊಂಟಾನೆ ಮುರಿದನಂತೆ.. .. .. ! ಅವನ ಕೈಯಲ್ಲಿ ತೃಣಾವರ್ತ ಆಟದ ಬುಗುರಿಯಾಗಿ ಹೋದ..! ಧೇನುಕ ಬೇಲದ ಹಣ್ಣು ಬಡಿಯೋ ಬಡಿಗೆಯಾದ.. .. .. ! ಗೋವರ್ಧನಬೆಟ್ಟ ಯಕ್ಷಚ್ಛತ್ರಿ ಆಗಿ ಹೋಯ್ತು! ಯಾರು....? ಯಾರ್ರೀ ಈ ಕೃಷ್ಣ? ಈ ಗೊಲ್ಲರ ಪೋರನಿಗೆ ಈ ಪಾಟಿ ಶಕ್ತಿನಾ.. .. ..? ಎಲ್ಲಿಂದ ಬಂತು ಈ ಶಕ್ತಿ? ಯಾರು ಕೊಟ್ರು ಈ ಶಕ್ತಿ? **ಮಂತ್ರಿ :** [ತೊದಲುತ್ತಾ] ನಮ್.. ..ಗೂಢಚಾರ್ರು ಶೋಧನೆ ಮಾಡ್ತಿದ್ದಾರೆ ಒಡೆಯಾ ....!... **ಕಂಸ :** [ರೇಗಿ] ನಮ್.. ..ಗೂಢಚಾರ್ರು ಶೋಧನೆ ಮಾಡ್ತಿದ್ದಾರೆ ಒಡೆಯಾ ....ಎಷ್ಟು ದಿನಾರಿ ಶೋಧನೆ ಮಾಡೋದು.. ..? ಬೆಂಕಿ, ಕೈ ಇಟ್ಟರೆ ತಕ್ಷಣ ಸುಡುತ್ತೆ... ಹಾವು, ಕಾಲಿಟ್ಟರೆ ತಕ್ಷಣ ಕಚ್ಚತ್ತೆ... ... ಶೋಧನೆ ಮಾಡ್ತಾರಂತೆ ಶೋಧನೆ.. .. ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತ .. ... **ಮಂತ್ರಿ :** [ಮುಖ ತಿಕ್ಕಿಕೊಳ್ಳುತ್ತಾ] ಮಾಹಿತಿ ಸಂಗ್ರಹ ಕೊನೇ ಹಂತಕ್ಕೆ ... ... (Illustration: Kamsa interacting with his ministers and guards carrying torches) **ಕಂಸ :** ಕೊನೇ ಹಂತಕ್ಕೆ ! ಯಾರ ಕೊನೆ ಹಂತಕ್ಕೆ ? (ಅಣಕದ ನಗೆ ನಕ್ಕು) ಅಹ್ಹಾ.. ..ಕೊನೇ ಹಂತಕ್ಕೆ ಬಂದಿದೆ.. (ಇದ್ದಕ್ಕಿದ್ದಂತೆ ಲೋಕಾಭಿರಾಮಕ್ಕೆ ಬಂದು) ಬರ್ಲೀ ಬಿಡಿ.. .. ಬೇಜಾರು ಮಾಡ್ಕೋಬೇಡಿ ಇವ್ರೆ... ...ನಾನು ಹೇಳಿದೆನಲ್ಲ ಆ ಇಬ್ರು..... **ಮಂತ್ರಿ :** (ಉತ್ಸಾಹಿತನಾಗಿ) ಇವರೇ ಒಡೆಯಾ ಅವರು... ಇವ ಶೈಲಿಕ ...ಇವ ದುರ್ವಿಧ... **ಶೈಲಿಕ-ದುರ್ವಿಧ :** (ಹಲ್ಲು ಗಿಂಜುತ್ತಾ) ನಮಸ್ಕಾರ ಅನ್ನದಾತ ...(ಕಂಸನ ಕೈ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುತ್ತಾ) **ಶೈಲಿಕ :** ಇದು ನಿಮ್ಮ ಕೈ ಅಲ್ಲ ನಿಮ್ಮ ಕಾಲು... **ದುರ್ವಿಧ :** ಕಾಲಲ್ಲ ... ನಿಮ್ಮ ಎಕ್ಕಡ... **ಕಂಸ :** (ನಕ್ಕು) ಶಹಬ್ಬಾಶ್......(ಇಬ್ಬರಿಗೂ ಬೆನ್ನಟ್ಟಿ... ಕೈತೋರಿಸುತ್ತಾ)...ಇದು ಕಾಲಲ್ಲ.. ಎಕ್ಕಡಾನೂ ಅಲ್ಲ ಯಮಪಾಶ!......ತಿಳ್ಕೊಳ್ಳಿ..... ಹಾ....! ಏರ್ಪಾಡೆಲ್ಲ ಆಗಿದೆಯಾ......? **ಶೈಲಿಕ :** (ಉಗುಳು ನುಂಗಿ).. ಆಗಿದೆ ಒಡೆಯಾ .. ..ಸಾಹೇಬ್ರೆ ಬಂದು ಖುದ್ದು ಪರಾಂಬರಿಸಿದ್ದಾರೆ.. . **ಮಂತ್ರಿ :** ಹೌದು ಒಡೆಯಾ.....ಕ್ರೀಡಾಂಗಣಕ್ಕೆ ಇರೋದು ಒಂದೇ ಹೆಬ್ಬಾಗಿಲು.. ..ಬಾಗಿಲವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ .. ಬಾಗಿಲವಾಡದ ಕಮಾನಿನ ಮೇಲೆ ಗಾಜಿನ ರಾಜಗೋಪುರ.. ... ಅದೇನಾದ್ರೂ ತಲೇ ಮೇಲೆ ಬಿತ್ತು ಅಂದ್ರೆ.. .. ..ಶ್ರೀಮದ್ ರಮಾರಮಣ ಗೋವಿಂದಾ ಗೋವಿಂದ . . . **ಕಂಸ :** ಆದ್ರೆ ಅದು ತಲೇ ಮೇಲೇ ಬೀಳ್ಬೇಕಲ್ಲಾ? **ಶೈಲಿಕ :** ಬೀಳತ್ತೆ ಬೀಳತ್ತೆ. . .ಇಡೀ ರಚನೆ ಒಂದು ಸಣ್ಣ ಕೀಲಿನ ಮೇಲೆ ನಿಂತಿರ್ತದೆ. ಆ ಕೀಲು ಎಳೆದುಬಿಟ್ರೆ. . . ಮುಗೀತು.. ..! **ಕಂಸ :** ಅಬ್ಬ !. . . ಒಳ್ಳೇ ರಾಕ್ಷಸ ಕಣ್ರೀ ನೀವು. . . ಏನು ಬುದ್ಧಿ ಏನ್ಕತೆ. . ಆ ಪಿಳ್ಳಂಗೋವಿ ಕೃಷ್ಣ ಅದೇ ಬಾಗ್ಲಲ್ಲಿ ತಾನೆ ಬರ್ಬೇಕು ? **ಮಂತ್ರಿ :** ಬೇರೆ ದಾರೀನೆ ಇಲ್ಲಾ ಅಂತೀನಿ. . .! **ಕಂಸ :** ಅಂತೀರಿ ನನ್ನ ತಲೆ ತಿಂತೀರಿ.. .. ನಿಮಗೆ ತಲೆ ಇದೆಯೇನ್ರೀ? ಸುಮ್ಮೇ ಇನ್ನೊಂದು ಬಾಗಿಲು ಇಡಿ. **ಮಂತ್ರಿ :** ಇನ್ನೊಂದು ಬಾಗ್ಲಾ. . . ? **ಕಂಸ :** ಎಲ್ಲರೂ ಬರೋ ಬಾಗ್ಲಲ್ಲಿ ನಾನೂ ಬರೋಕಾಗುತ್ತಾ ಮತ್ತೆ . . ? **ಶೈಲಿಕ :** ಆದ್ರೆ ಒಡೆಯಾ. . . **ಕಂಸ :** ನಿನ್ನ ಬುರುಡೆ ಒಡೆಯಾ. . .ಸರ್ಕಳ್ವಯ್ಯ ಆಚೆ. . . . . ಏಯ್. .. ನೀನು ಬಾ ಈ ಕಡೆ. . . **ದುರ್ವಿಧ :** ಅಪ್ಪಣೆಯಾಗಬೇಕು ಅನ್ನದಾತ. . . **ಕಂಸ :** ನಮ್ಮ ಪಟ್ಟದ ಆನೆ ಹೇಗಿದೆ ಹೇಳು. . ಏನು ಅದರ ಹೆಸರು. . .? ಹಾ. . ಕುವಲಯಾಪೀಡ ... .....!ಕುವಲಯಾ ಪೀ. . .ಡ. .! **ದುರ್ವಿಧ :** ಔಷಧ - ಪಥ್ಯ ಎಲ್ಲ ಮಾಡಿದೀನಿ . . ಹಳದಿ ಬಣ್ಣ ನೋಡಿದ್ರೆ ಸಾಕು . . ಫೀ. . .ಅಂತ ಮೈಮೇಲೇ ಬೀಳತ್ತೆ. . . **ಕಂಸ :** ಬೀಳಬೇಕು ಮತ್ತೆ. . ಬೀಳಬೇಕು...ಕೆಲ್ಸ ಆದಮೇಲೆ ಮದ್ದು ಹಾಸಿರ್ ಸುಟ್ಟುಬಿಡಿ ಅದನ್ನ ಬೇರೆ ಇನ್ನೇನಾದ್ರೂ ಧಾಂದ್ಲೆ ಮಾಡೀತು . . ಮಕ್ಕಳು ಮರಿ ಇರ್ತಾವೆ..... ಪಾಪ. . . **ದುರ್ವಿಧ :** (ಲೊಚಗುಟ್ಟಿ) ಅಲ್ವೇ ಮತ್ತೇ. . . ! **ಕಂಸ :** ನೀವಿನ್ನು ಹೊರಡಿ. .. .(ಹೊರಡುತ್ತಾರೆ) ಸ್ವಲ್ಪ ಇರಿ . . .ಕೊಯ್ಯು ಮೋಟು ಯಾರಿಗೂ ಗೊತ್ತಾಗಬಾರದು. . ಹಾಂ. ..ನಮ್ಮೂರಲ್ಲಿ ಕಂಬ ಕಂಬಕ್ಕೂ ಕಿವಿ. ಕಮಕ್ ಕಿಮಕ್ ಅಂದ್ರೆ (ಕೈ ತೋರಿಸಿ) ಇದು ಕೈ ಅಲ್ಲ ... ಕಾಲಲ್ಲ ... ಎಕ್ಕಡಾನೂ ಅಲ್ಲ.. (ಶೈಲಿಕ-ದುರ್ವಿಧ ಮುಖ ಮುಖ ನೋಡಿಕೊಂಡು) **ಶೈಲಿಕ-ದುರ್ವಿಧ :** (ಒಟ್ಟಿಗೇ) ಯಮಪಾಶ. . . **ಕಂಸ :** ಹ. . .ಹ. . ಹ. . .ಬಲೇ ತಮಾಷೆ ಕಣ್ರೀ ನೀವು. . .(ಶೈಲಿಕ-ದುರ್ವಿಧ_ಹಿಂದು ಹಿಂದಕ್ಕೆ ಸರಿದು ನಿರ್ಗಮಿಸುತ್ತಾರೆ.) ಮಂತ್ರಿ ಇವರ ಮೇಲೂ ಒಂದು ಕಣ್ಣಿಡು ನೀನು . . . ರಾಜಕೀಯದಲ್ಲಿ ಯಾರನ್ನು ಯಾರೂ ನಂಬಬಾರ್ದು. . . ನಿನ್ನನ್ನು ನೀನೂ ಕೂಡಾ . . ...ಹಹ್ಹಾ. . (ಕಂಸ ದಡಬಡ ಹೋಗಿ ಆಸನದ ಮೇಲೆ ಕೂತು, ಕಾಲು ನೀಡಿ, ಅಂಗಾಲು ಆಡಿಸುತ್ತಾ. . ) ಮಂತ್ರಿ ಬಾ ಇಲ್ಲಿ ಕೂತ್ಕೋ. **ಮಂತ್ರಿ :** (ನಿಂತೇ) ಇರ್ಲೀ ಬುದ್ಧೀ **ಕಂಸ :** (ಬೇಸರದ ರಾಗದಲ್ಲಿ) ಏನು ಇರಬೇಕ್ರಿ. . .? ಮಂಡೇಲಿ ಕೊಂಚ ಮಾಂಸ ಇರಬೇಕು. ಹಾಂ. . . (ಲೋಕಾಭಿರಾಮವಾಗಿ) ನೀವು ನೋಡಿದ್ದೀರೇನ್ರಿ. . . ? **ಮಂತ್ರಿ :** ಏನಂದ್ರಿ ಒಡೆಯಾ. . .? **ಕಂಸ :** (ರೇಗಿ) ನೀವು ನೋಡಿದ್ದೀರೇನ್ರಿ ಆ ಕೃಷ್ಣನ್ನ . . .? **ಮಂತ್ರಿ :** ಓಹೋ . . .! ನೋಡ್ಡೆ ಒಡೆಯಾ. . **ಕಂಸ :** ಹೇಗಿದಾನ್ರಿ ಆ ಘಟಿಂಗ. . .? **ಮಂತ್ರಿ :** (ಏನು ಹೇಳಬೇಕೋ ತೋಚದೆ) ಒಳ್ಳೇ. . . ಇದ್ದಾನೆ ಒಡೆಯಾ. . **ಕಂಸ :** ಇದ್ದಾನೆ . . ಗೊತ್ತು. . . ಯಾರ ಹಾಗೆ ಇದ್ದಾನೆ ಅವ . . ? **ಮಂತ್ರಿ :** ಅಂದ್ರೆ . . ತಾವು ಹೇಳೋದು. . . ? **ಕಂಸ :** (ತಾರಮ್ಮಯ್ಯ ಮಾಡಿ) ತಮಗೆ ತಿಳೀಲಿಲ್ಲ. . .! ಅಲ್ಲಾ? **ಮಂತ್ರಿ :** (ತಲೆ ಆಡಿಸುತ್ತಾನೆ) **ಕಂಸ :** ನಿಮ್ಮ ತಲೆ. . . ! (ಛಟ್ಟನೆ ಮುಂದೆ ಬಾಗಿ ಕೂತು) ಆ ಹುಡುಗನ್ನ ನೀವು ಹತ್ತಿರದಿಂದ ನೋಡಿದ್ರಿ ಅಲ್ವಾ. . . ? **ಮಂತ್ರಿ :** ನೋಡಿದೆ ಒಡೆಯಾ. . . **ಕಂಸ :** ಅವನು ನಮ್ಮ ದೇವಕಿ ಮಗ ಅನ್ನಸ್ತಾ ನಿಮಗೆ. . ? ಕಣ್ಣು . . !? ಮೂಗು.!? ತುಟಿ. . !? ಗದ್ದ. . !? ಏನಾದ್ರು ಹೋಲಿಕೆ ಇದೆಯಾ.? ದೇವಕೀ ಥರಾ? ಅಥವಾ ವಸುದೇವನ ಥರಾ ? ಹೊಟ್ಟೇಲಿ ಹುಟ್ಟಿದ್ರೆ ಏನಾದ್ರು ಒಂದು ಹೋಲಿಕೆ ಇರ್ಲೇಬೇಕಲ್ಲ....? ನನ್ನ ನೋಡಿ . . ಈ ಕೈ ಬೆರಳು . .! ಎಲ್ಲಾ ನಮ್ಮ ಅಪ್ಪನದೇ . .ಕೈ ಮಾತ್ರ ನಂದು . . ! (ಕೈ ತೋರಿಸುತ್ತಾನೆ) **ಮಂತ್ರಿ :** (ಕೈಯನ್ನೇ ದುರುದುರು ನೋಡಿ) ವಸುದೇವ ದೇವಕಿ ಹೋಲಿಕೆ ಏನೂ ಕಾಣಲಿಲ್ಲ. . ಆದ್ರೆ. .. ಆ ಕೈ ಮಾತ್ರ ... **ಕಂಸ :** ಕೈ ಮಾತ್ರಾ . . . **ಮಂತ್ರಿ :** ಹೀಗೇ ಕಾಣ್ತು. . . . **ಕಂಸ :** ಎಲಾ ಇವ್ನಾ . . ! (ಧಡಕ್ಕನೆ ಎದ್ದು ಕೂತು) ಮಕ್ಕಳು ಸೋದರ ಮಾವನ್ನ ಹೋಲ್ತಾವೇನ್ರೀ.? (ನಿಧಾನ ಕತ್ತಲು) ದೃಶ್ಯ-೨ (ವಸುದೇವ ದೇವಕಿಯರನ್ನು ಕಂಸ ಬಂಧಿಸಿಟ್ಟಿರುವ ಸ್ಥಳ. ಇಬ್ಬರೂ ಸ್ವರ್ಣ ಶೃಂಖಲೆಯಲ್ಲಿದ್ದಾರೆ. ದೇವಕಿ ವಾತಾಯನದ ಬಳಿ ನಿಂತಿದ್ದಾಳೆ. ವಸುದೇವ ಚಿಂತಾಮಗ್ನನಾಗಿ ನಿಂತಿದ್ದಾನೆ.) (Illustration: Kamsa interacting with Vasudeva and Devaki, who are in chains) **ವಸುದೇವ :** ಅಕ್ರೂರ ಹೇಳಿದ - ಎದೆಯುದ್ದ ಬೆಳೆದಾರೆ ಮಕ್ಕಳು ಅಂತ. ...ಹದಿನಾರುವರ್ಷ ಆಯ್ತು ಕೃಷ್ಣನ್ನ ನೋಡಿ. . . ನನ್ನ ಕಣ್ಣಲ್ಲಿ ಅವನಿನ್ನೂ ಎಳೆಗೂಸೆ. . .! ಲೋಕದ ಎಲ್ಲಾ ಮಕ್ಕಳು ಅಪ್ಪ ಅಮ್ಮನ ಕಣ್ಣೆದುರು ದಿನಾ ದಿನಾ ಚೂರು ಚೂರು ಬೆಳೀತಾರೆ. . . ಮಕ್ಕಳು ಬೆಳೆಯೋದು ನೋಡೋ ಅಪ್ಪ ಅಮ್ಮಂದಿರ ಪುಣ್ಯವೇ ಪುಣ್ಯ . . .ಮಕ್ಕಳನ್ನು ಆಡಿಸಲಿಲ್ಲ. . .ಆರೈಕೆ ಮಾಡಲಿಲ್ಲ. . . ತೊದಲು ನುಡಿ ಕೇಳಲಿಲ್ಲ. . ತೂಗಲಿಲ್ಲ. . . ಜೋಗುಳ ಹಾಡಲಿಲ್ಲ. . (ವಸುದೇವ ಮಾತನಾಡುತ್ತಿರುವಾಗ ಬಾಗಿಲು ಬಡಿಯುವ ಸದ್ದು) **ದೇವಕಿ :** (ತಕ್ಷಣ ಕಣ್ಣೊರೆಸಿಕೊಂಡು) ನೋಡಿ. . .. . ಯಾರೋ ಬಂದ ಹಾಗಿದೆ. .. **ವಸುದೇವ :** (ಬಾಗಿಲು ತೆರೆಯುತ್ತಾ) ಓಹೋ . .ಮಹಾರಾಜ . . ಬಾ. .ಬಾ. . . **ಕಂಸ :** (ಕೈ ಬಿಚ್ಚಿ ಮಡಿಚಿ ಮಾಡುತ್ತಾ) ನಿದ್ದೆ ಬಂತಾ ಭಾವಾ. . . ? ಹುಂ . . ಬರದೆ ಏನು ಮಾಡುತ್ತೆ. . ? ಅರಸನ ಅಂಕೆಯಿಲ್ಲ. . . ದೆವ್ವದ ಕಾಟ ಇಲ್ಲ. . . **ವಸುದೇವ :** ಬಾ. . . ಕೂತುಕೋ... . . **ಕಂಸ :** ಶಹಬ್ಬಾಷ್ ಭಾವ. . .ನನ್ನ ಮನೇಲಿ ನನಗೇ ಉಪಚಾರ. . .(ಕೂತು ಮೈಮುರಿದು) ನನಗಂತೂ ರಾತ್ರಿಯೆಲ್ಲಾ ನಿದ್ದೇನೇ ಇಲ್ಲ. . . ! **ವಸುದೇವ :** ರಾಜಕಾರ್ಯಾನೇ ಹಾಗೆ ! ಹತ್ತು ಜನರ ಮಧ್ಯೆ ಕೂತಾಗ ಜೋಲಿ. . ಏಕಾಂಗಿ ಇದ್ದಾಗ ಒತ್ತಿದರೂ ಮುಚ್ಚದ ರೆಪ್ಪೆ. . . ! **ಕಂಸ :** (ಗಟ್ಟಿಯಾಗಿ ನಕ್ಕು) ಮೊದಲಿಂದಲೂ ಅಷ್ಟೆ ಬಲೇ ತಮಾಷೆ ನೀನು. . .! **ವಸುದೇವ :** ದೇವಕೀ. . .ನಿಮ್ಮ ಅಣ್ಣನಿಗೆ ಸ್ವಲ್ಪ ಹಾಲಾದರೂ ಕೊಡು. . . . **ಕಂಸ :** (ಕಿಸಕ್ಕನೆ ನಕ್ಕು) ಹಾಲಾ. . .? ಹಾಲಾಹಲ ಕುಡಿಯೋರು ನಾವು . .ಹಾಲು ಹಿಡಿಸೊಲ್ಲ ನಮಗೆ. . .ಕ್ಷೀರಸಾಗರ ಮಥನದ ಕಥೆ ಗೊತ್ತಲ್ಲ ನಿಮಗೆ. . .? ಬೇಡ ದೇವಕಿ ಹಾಲು ಗೀಲು ಏನೂ ಬೇಡ. ಸ್ವಲ್ಪ ಮಾತಾಡಿ ಹೋಗೋಣ ಅಂತ ಬಂದೆ. . . **ವಸುದೇವ :** ನಿನ್ನ ಕುಂಬಳ, ನಿನ್ನ ಕುಡುಗೋಲು . . . . ಮಾತಾಡು ಮಹಾರಾಜ. . . **ಕಂಸ :** ನೋಡಿದೆಯಾ. . .ನೋಡಿದೆಯಾ. . .ಇನ್ನೂ ನನ್ನ ಮೇಲೆ ಅಸಮಾಧಾನ . . ನನ್ನ ತಂಗಿ ಮೇಲೆ ನನಗೆ ಪ್ರೀತಿ ಇಲ್ಲ ಅಂದ್ಕೊಂಡೆಯಾ. . . ? (ಕೈ ಚಾಚಿ ದೇವಕಿಯ ಕೈ ಹಿಡಿದು) ಸಂಕೋಲೆ ಹಾಕಿದ್ದೀನಿ ನಿಜ. . .ಆದ್ರೆ ನೂರಕ್ಕೆ ನೂರು ಶುದ್ಧ ಅಪರಂಜೀದು. . . ! ಕೊರಳಿಗೆ ಮೂರೆಳೆ ಕೈಗೆ ಎರಡೆಳೆ ಕಾಲಿಗೆ ಒಂದೆಳೆ-ಎಲ್ಲಾ ಚಿನ್ನದ್ದೇ. . .ಇಪ್ಪತ್ತೈದು ವರ್ಷ ಆಯ್ತಲ್ಲ ಮಾಡ್ಸಿ. . .ಸ್ವಲ್ಪ ಆದರೂ ಕಪ್ಪಾಗಿದೆಯಾ . . .? ಅದು ಪ್ರೀತಿ ಅಂದ್ರೆ. . . .ಇರ್ಲಿ ಬಿಡು ಭಾವ..(ಎದ್ದು ವಾತಾಯನದ ಬಳಿಗೆ ಹೋಗಿ ನಿಂತು) ನಿಮಗೊಂದು ವಿಶೇಷ ಸುದ್ದಿ ಹೇಳ್ಬೇಕು. . . ಇವತ್ತು ಮಥುರಾನಗರದಲ್ಲಿ ಧನುರ್ಯಾಗ ಮಹೋತ್ಸವ. ದೇಶದ ಎಲ್ಲಾ ಕಡೆಯಿಂದ್ಲೂ ಸಾಹಸೀ ಯುವಕರು ಬಂದಿದ್ದಾರೆ . . . ರಾಜನ ಮುಂದೆ ತಮ್ಮ ಶಕ್ತಿ ಪ್ರದರ್ಶಿಸಬೇಕು. . ಮಥುರಾವೀರ ಪ್ರಶಸ್ತಿ ಗೆಲ್ಲಬೇಕು . . . ಏನು ಹುಚ್ಚೋ ಈ ಹುಡುಗರದ್ದು **ವಸುದೇವ :** ಇವತ್ತಾ ಬಿಲ್ಲಹಬ್ಬ. . .? **ಕಂಸ :** ಯಾಕೆ? ನಿಮಗೆ ಗೊತ್ತಿಲ್ವಾ . ? ಅದೃಷ್ಟವಂತರು ನೀವು. . ನಿಮಗೆ ಏನೂ ಗೊತ್ತಾಗೋಲ್ಲ .. ಹೊತ್ತು ಹೊತ್ತಿಗೆ ಊಟ ಹೊತ್ತು ಹೊತ್ತಿಗೆ ನಿದ್ದೆ ಬಿಸಿಲಲ್ಲಿ ಬೇಯೋ ಹಾಗಿಲ್ಲ. . .ಮಳೇಲಿ ತೋಯೋ ಹಾಗಿಲ್ಲ. . . ನಾಕು ಗೋಡೆ ಮಧ್ಯೆ ನಿಮ್ಮೇ ಒಂದು ಪ್ರಪಂಚ. . .ಒಂದು ನೊಣ ಕೂಡಾ ಒಳಗೆ ಬರೋಹಾಗಿಲ್ಲ. . ಒಂದು ನೊಣ ಹೊರಗೆ ಹೋಗೋಹಾಗಿಲ್ಲ **ವಸುದೇವ :** (ನಕ್ಕು) ಆದ್ರೂ ಮುಪ್ಪು ಸೆರೆಮನೇ ಒಳಗೆ ಬಂದೇ ಬಿಡ್ತು. . . **ದೇವಕಿ :** ನೆಮ್ಮದಿ ಸೆರೆಮನೆಯಿಂದ ಹೊರಗೆ . . . **ಕಂಸ :** ಆದ್ರೂ. . .ಆದ್ರೂ. . . ದೇವಕೀ. . .ಬಂಧನದಲ್ಲಿ ಇದ್ರೂ ನೀವು ಸ್ವತಂತ್ರರು. . . ನಾವೋ ಬಯಲಲ್ಲಿದ್ರೂ ಬಂಧಿಗಳು. . . ಎಲ್ಲಿ ಹೋದ್ರೂ ಈ ಅಂಗರಕ್ಷಕರ ಪೀಡೆ. . . ನಿಶ್ಚಿಂತವಾಗಿ ಊಟ ಮಾಡೋಹಾಗಿಲ್ಲ. . ನಿಶ್ಚಿಂತವಾಗಿ ನಿದ್ದೆ ಮಾಡೋಹಾಗಿಲ್ಲ. . ಕಣ್ಣು ಮುಚ್ಚಿದರೆ - ತಕಪಕ ಕುಣೀತಾ ನಾನು ಕೊಂದ ಮಕ್ಕಳು ಕಣ್ಣು ಮುಂದೆ ಬರ್ತಾವೆ. . . ಹದಿನಾರು ವರ್ಷದ ಹಿಂದೆ ಅಷ್ಟಮೀ ರಾತ್ರಿ ಅದೆಷ್ಟು ಮಕ್ಕಳು ಹುಟ್ಟಿದವೋ ಈ ದೇಶದಲ್ಲಿ . . .ಎಷ್ಟೂ ಅಂತ ಅವನ್ನ ಕೊಲ್ಲಿಸಲಿ. . . ? ದೇವಕೀ ಹೊಟ್ಟೇಲಿ ಹುಟ್ಟೋ ಎಂಟನೇ ಮಗ-ಅಷ್ಟಮಪುತ್ರ-ನನ್ನ ಕೊಲ್ಲಬೇಕು.. ಆದ್ರೆ ನಿನ್ನ ಎಂಟನೇ ಮಗು ಪುತ್ರ ಅಲ್ಲ... ಪುತ್ರಿ. . ! ದೇವಕೀ ದೇವಕೀ . . .ಬೆನ್ನಿಗೆ ಬಿದ್ದ ಅಣ್ಣನಿಗಿಂತ ಹೊಟ್ಟೇಲಿ ಹುಟ್ಟಿದ ಕೂಸು ನಿನಗೆ ದೊಡ್ಡದಾ. . .? ದಯವಿಟ್ಟು. . ದಯವಿಟ್ಟು . . ಹೇಳು. . ನಿನ್ನ ಎಂಟನೇ ಮಗನ್ನ ಎಲ್ಲಿ ಬಚ್ಚಿಟ್ಟಿದ್ದೀ . . ? ನನಗೆ ರಾಜ್ಯ ಬೇಡ . . ಕೋಶ ಬೇಡ..ಪಟ್ಟ ಬೇಡ . ಪಗಡಿ ಬೇಡ. . . ಎಲ್ಲಾ ನಿನ್ನ ಗಂಡನಿಗೆ ಕೊಡ್ತೀನಿ . . ನಿನ್ನ ಮಗನ್ನ ಎಲ್ಲಿ ಬಚ್ಚಿಟ್ಟಿದ್ದೀ. . . ? ಹೇಳು ಎಲ್ಲಿ ಬಚ್ಚಿಟ್ಟಿದ್ದೀ.. ? (ದೇವಕಿಯ ಭುಜ ಹಿಡಿದು ಕಂಸ ಆವೇಶದಿಂದ ಅಲುಗಿಸುತ್ತಾನೆ) **ದೇವಕಿ :** (ತಣ್ಣಗೆ) ನಾನು ನಿಜ ಹೇಳಿದ್ರೆ ನೀನು ನಂಬೋದಿಲ್ಲ. . . **ವಸುದೇವ :** ದೇವಕೀ. . . ! **ಕಂಸ :** ಷ್. . . ! (ದೇವಕಿಯ ಗಲ್ಲ ಹಿಡಿದು ಅಲುಗಿಸಿ) ಹೇಳು. . ಹೇಳು ನಿನ್ನ ಮಾತು ನಾನು ನಂಬ್ತೀನಿ..ಹೇಳು.. **ದೇವಕಿ :** ಬಚ್ಚಿಟ್ಟದ್ದು ನಿಜ. . .ಒಂಬತ್ತು ತಿಂಗಳು. . .ಇಲ್ಲಿ. .ಇಲ್ಲಿ. . ಬಚ್ಚಿಟ್ಟಿದ್ದೆ ಮಗೂನ.. **ಕಂಸ :** ಮತ್ತೆ ಅದೇ ಬೊಗಳೆ.... ಹೇಳೀ...ಛೇ...(ಶತಪಥ ಹಾಕಿ, ಛಟ್ಟನೆ ನಿಂತು) ಹದಿನಾರು ವರ್ಷದ ಹಿಂದೆ ಅಷ್ಟಮಿ ರಾತ್ರಿ ಹುಟ್ಟಿದ ಎಲ್ಲ ಮಕ್ಕಳನ್ನೂ ಕೊಲ್ಲಿಸಿದೆ... ಎಲ್ಲ... ಎಲ್ಲ... ಮಕ್ಕಳನ್ನೂ... (ರಂಗದ ತುಂಬ ಎಳೆ ಮಕ್ಕಳ ಆಕ್ರಂದನ. ವಸುದೇವ ದೇವಕಿ ಕಿವಿ ಮುಚ್ಚಿಕೊಳ್ಳುತ್ತಾರೆ. ಕಂಸ ಗಹಗಹಿಸಿ ನಗುತ್ತಾ) ಲಕ್ಷ. . .ಲಕ್ಷ. . ಲಕ್ಷ. . ಮಕ್ಕಳು. . .ಆದ್ರೆ ಒಂದು ಮಗೂನ ಮಾತ್ರ ಇನ್ನೂ ಕೊಲ್ಲಲಿಕ್ಕೆ ಆಗಿಲ್ಲ......ಅವೋ . . .ಅವನೇ . . ಆ ಗೋಕುಲದ ಗೊಲ್ಲರ ಹುಡುಗ ಪಿಳ್ಳಂಗೋವಿ ಕೃಷ್ಣ. . ಛೆ. . .ಕೊಲ್ಲಲಿಕ್ಕೆ ಬಂದವರನ್ನೆಲ್ಲಾ ಅವನೇ ಕೊಂದು ಬಿಟ್ಟ.. . ಹಾ. . ಆ ಕೃಷ್ಣನ ಅಪ್ಪ ನಂದ ನಿನ್ನ ಗಂಡನ ಬಾಲ್ಯ ಸ್ನೇಹಿತ, ಪರಮಾಪ್ತ ಪ್ರಾಣಮಿತ್ರ. . . . .(ವಸುದೇವನ ಕಡೆ ತಿರುಗಿ) ನಿನ್ನ ಮೊದಲ ಹೆಂಡ್ರಿ ರೋಹಿಣಿ, ಅವಳ ಪಿಳ್ಳೆ ಬಲರಾಮ ಆ ನಂದನ ಮನೇಲೇ ಇರೋದು. . . ಅರಮನೆ ಕವಳಕ್ಕೆ ಕತ್ತಿ ಹಾಕೋಕೆ ಬದ್ಲು ಇದ್ರೋಳ್ಲಿ ಅಲ್ಲೇ ಅಂತ ಸುಮ್ಮೆ ಇದ್ದೆ . . .ಈಗ ನೋಡಿದ್ರೆ ನೀವೆಲ್ಲ ಕೂಡಿ ಏನೋ ಮಸಲತ್ತು ಮಾಡ್ತಿರೊ ಹಾಗಿದೆ . . .(ಇಬ್ಬರನ್ನೂ ನೋಡುತ್ತಾ ತಗ್ಗಿದ ದನಿಯಲ್ಲಿ) ಆ ಕೃಷ್ಣ ನಿಮ್ಮ ಮಗನೇ ಇರಬೇಕು. . .ಇರ್ಬೇಕು ಏನು... ನಿಮ್ಮ ಮಗನೇ ಅವನು. . .! (ತನ್ನ ಅಂಗೈ ನೋಡಿಕೊಳ್ಳುತ್ತಾ) ನನ್ನ ಸೋದರಳಿಯ ಅವ್ನು . . ! **ದೇವಕಿ :** ಸುಳ್ಳು. . .ಕೃಷ್ಣ ನಮ್ಮ ಮಗ ಯಾಕೆ ಆದಾನು. . . ? (ಕಣ್ಣಲ್ಲಿ ನೀರು ತಂದುಕೊಂಡು) ಕೃಷ್ಣ ನಂದನ ಮಗ . . .ಕೃಷ್ಣ ಯಶೋಧೆ ಮಗ... (ಅಳುತ್ತಾ) ನನ್ನ ಮಗ ಅಲ್ಲ ಅವನು ನನ್ನ ಮಗ ಅಲ್ಲ ಅವನು. . . ! **ಕಂಸ :** (ಸಮಾಧಾನ ಧ್ವನಿಯಲ್ಲಿ) ನಿಮ್ಮ ಮಗ ಅಲ್ಲ. . .ಸರಿ ಮತ್ತೆ. . . ನಿಮ್ಮ ಮಗ ಅಲ್ಲ ಅವನು...! (ದುಡು ದುಡು ಬಾಗಿಲ ಬಳಿ ಹೋಗಿ, ಗಕ್ಕನೆ ತಿರುಗಿ ನೋಡಿ) ಅಂದ್ಯೇಲೆ ಅವನನ್ನ ಕೊಂದ್ರೆ ನಿಮಗೆ ಬೇಜಾರಿಲ್ಲ ... ಅಲ್ವಾ...? (ರಂಗದಲ್ಲಿ ಕತ್ತಲು) **ಕೌಶಲ :** ಆಲಿಸುವುದು. **ಸಾಮರ್ಥ್ಯ :** ಗುಂಪು ಚಟುವಟಿಕೆಗಳ ನಿರ್ದೇಶನಗಳನ್ನು ಆಲಿಸಿ. ಅರ್ಥಮಾಡಿಕೊಂಡು ಆಂಗಿಕವಾಗಿ ಪ್ರತಿಕ್ರಿಯಿಸುವುದು. **ಆಶಯ :** ಪೌರಾಣಿಕ ಪಾತ್ರವಾದ ಕಂಸ ಅಧಿಕಾರಶಾಹೀ ವ್ಯಕ್ತಿತ್ವದ ಒಂದು ಸಂಕೇತ. ಅಧಿಕಾರಕ್ಕಾಗಿ ಅರಮನೆಗಳಲ್ಲಿ ನಡೆಯುವ ಕಾರಸ್ಥಾನಗಳು. ಅಧಿಕಾರಸ್ಥರ ಆತಂಕ, ತಲ್ಲಣ, ಭಯಗಳು ನಿಚ್ಚಳವಾಗಿ ವ್ಯಕ್ತವಾಗಿವೆ. ಅಧಿಕಾರಲಾಲಸೆ, ಅಂತಸ್ತಿಗಾಗಿ ರಕ್ತಸಂಬಂಧವನ್ನೇ ಕಡಿದುಕೊಳ್ಳುವ ಸ್ವಭಾವವನ್ನಿಲ್ಲಿ ಕಾಣಬಹುದು. ಕೃಷ್ಣನನ್ನು ಕೊಲ್ಲುವ ಉದ್ದೇಶದಿಂದ ಮಥುರಾನಗರದಲ್ಲಿ ಬಿಲ್ಲಹಬ್ಬದ ನೆಪಮಾಡಿ ಸಂಚು ನಡೆಸುವುದು ನಾಟಕದ ವಸ್ತು. ಅವೆಲ್ಲಕ್ಕಿಂತ ಮುಖ್ಯವಾಗಿ, ನಾಟಕದ ಸಂಭಾಷಣೆಯ ಮೊನಚು, ವ್ಯಂಗ್ಯಭರಿತ ಹಾಸ್ಯ ಓದುಗರ ಮನ ಸೆಳೆಯುವುದು. **ಕೃತಿಕಾರರ ಪರಿಚಯ** (Portrait of Dr. H.S. Venkatesha Murthy is shown) ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು (೧೯೪೪) ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಜನಿಸಿದರು. ಕನ್ನಡ ಪ್ರಾಧ್ಯಾಪಕರಾಗಿದ್ದ ಇವರು ಬಹುಮುಖಿ ಪ್ರತಿಭೆಯ ಸಾಹಿತಿ. ಇವರ ಸಿಂದಾಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲಹಬ್ಬ, ಭೂಮಿಯೂ ಒಂದು ಆಕಾಶ ಮೊದಲಾದವು ಕವನ ಸಂಕಲನಗಳು. ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಅಳಿಲು ರಾಮಾಯಣ, ಸುಣ್ಣದ ಸುತ್ತು, ಊರ್ಮಿಳಾ ಹೂವಿ ಮತ್ತು ಸಂಧಾನ ಮೊದಲಾದವು ಪ್ರಮುಖ ನಾಟಕಗಳು. ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರ ಋತುವಿಲಾಸ ಅನುವಾದಿತ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ದೇವರಾಜ ಬಹದ್ದೂರ್ ಪ್ರಶಸ್ತಿಗಳನ್ನು ಪಡೆದಿರುವ ಇವರು ಕನ್ನಡದಲ್ಲಿ ಕಥನ ಕವನಗಳು ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿಗಳಿಸಿದ್ದಾರೆ. **ಪೂರ್ವ ಕಥೆ** ಮಥುರೆಯ ರಾಜನಾದ ಕಂಸ ತನ್ನ ಸೋದರಿ ದೇವಕಿಯ ವಿವಾಹವನ್ನು ವಸುದೇವನೊಡನೆ ವೈಭವದಿಂದ ನೆರವೇರಿಸಿ, ಮೆರವಣಿಗೆಯಲ್ಲಿ ಸಾಗುತ್ತಿದ್ದನು. ಆಗ ಅಶರೀರ ವಾಣಿಯೊಂದು ನಿನ್ನ ಸಾವಿಗೆ ದೇವಕಿಯ ಅಷ್ಟಮ ಪುತ್ರನೇ ಕಾರಣನಾಗುತ್ತಾನೆಂದು ಭವಿಷ್ಯ ನುಡಿಯಿತು. ಇದರಿಂದ ಕ್ರೋಧಗೊಂಡ ಕಂಸ ತಂಗಿಯನ್ನೇ ಕೊಲ್ಲಲು ಸಿದ್ಧನಾದ. ಆದರೆ ವಸುದೇವ ಅಡ್ಡ ಬಂದು ದೇವಕಿಯ ಗರ್ಭದಲ್ಲಿ ಹುಟ್ಟುವ ಎಲ್ಲ ಮಕ್ಕಳನ್ನು ನಿನಗೆ ಒಪ್ಪಿಸುತ್ತೇನೆಂದು ಮಾತು ಕೊಟ್ಟಿದ್ದರಿಂದ ಅವರನ್ನು ಸೆರೆಯಲ್ಲಿಟ್ಟನು. ವಸುದೇವ ಕೊಟ್ಟ ಮಾತಿನಂತೆ ಹುಟ್ಟಿದ ಎಲ್ಲ ಮಕ್ಕಳನ್ನೂ ಕಂಸನಿಗೆ ಒಪ್ಪಿಸುತ್ತಿದ್ದ. ಕಂಸ ಆ ಎಲ್ಲ ಮಕ್ಕಳನ್ನೂ ನಿರ್ದಯವಾಗಿ ಕೊಂದ. ಆದರೆ ಅಷ್ಟಮ ಗರ್ಭದಲ್ಲಿ ಶ್ರೀಮನ್ನಾರಾಯಣನು ಜನಿಸಿ ತನ್ನನ್ನು ಗೋಕುಲದ ನಂದಗೋಪನ ಮನೆಯಲ್ಲಿ ಬಿಟ್ಟು, ಅಲ್ಲಿರುವ ಹೆಣ್ಣು ಶಿಶುವನ್ನು ದೇವಕಿಯ ಮಡಿಲಿನಲ್ಲಿಡಬೇಕೆಂದು ವಸುದೇವನಿಗೆ ತಿಳಿಸಿದನು. ಕಂಸ ಅಷ್ಟಮ ಗರ್ಭದಲ್ಲಿ ಹೆಣ್ಣುಮಗು ಹುಟ್ಟಿದ್ದನ್ನು ಕಂಡು ಆಶ್ಚರ್ಯಪಟ್ಟರೂ ಅದನ್ನು ಕೊಲ್ಲಲು ಹೋದಾಗ ಅದು ಆಕಾಶಕ್ಕೆ ನೆಗೆದು ನಿನ್ನನ್ನು ಕೊಲ್ಲುವವನು ಗೋಕುಲದಲ್ಲಿ ಬೆಳೆಯುತ್ತಿದ್ದಾನೆಂದು ಹೇಳಿ ಮಾಯವಾಯಿತು. ಇದರಿಂದ ಕಂಸ ಗೋಕುಲದಲ್ಲಿ ಹಿಂದಿನ ದಿನ ಹುಟ್ಟಿದ ಮಕ್ಕಳನ್ನೆಲ್ಲ ಕೊಂದ. ಆದರೆ ನಂದನ ಮನೆಯಲ್ಲಿ ಬೆಳೆಯುತ್ತಿದ್ದ ಕೃಷ್ಣನನ್ನು ಕೊಲ್ಲಲಾಗಲಿಲ್ಲ. ಅವನನ್ನು ಕೊಲ್ಲಲು ಕಂಸ ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ಕೃಷ್ಣನು ಬೆಳೆಯುತ್ತಿದ್ದಂತೆ ಅವನ ಲೀಲೆಗಳು ಕಂಸನ ಕಿವಿಗೆ ಬೀಳತೊಡಗಿದವು. ಹಾಗಾಗಿ ಮಥುರಾನಗರದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಬಿಲ್ಲಹಬ್ಬದ ಸಂದರ್ಭದಲ್ಲಿ ಕೃಷ್ಣನನ್ನು ಆಹ್ವಾನಿಸಿ ಕೊಲ್ಲಲು ನಡೆಸುವ ಸಂಚು ಈ ನಾಟಕದಲ್ಲಿ ವ್ಯಂಗ್ಯ ಹಾಗೂ ಹಾಸ್ಯಗಳಿಂದ ಮಿಳಿತಗೊಂಡು ಮೂಡಿಬಂದಿದೆ.

ಪದಗಳ ಅರ್ಥword meanings

KannadaPronunciationMeaning
ಬಿಸಿಲು ಮುಚ್ಚುಬಿಸಿಲು ಮಾಳಿಗೆ ; ಬಡಿಗೆ - ದೊಣ್ಣೆ ಕೋಲು ; ಪೋರ - ಹುಡುಗ; ಗೂಢಚಾರ - ಗುಪ್ತಚರ ; ಶೋಧ - ಹುಡುಕು ; ಮಾಹಿತಿ - ತಿಳಿವಳಿಕೆ, ವಿವರಣೆ ; ಲೋಕಾಭಿರಾಮ- ಸಹಜವಾಗಿ; ಎಕ್ಕಡ - ಪಾದುಕೆ, ಪಾದರಕ್ಷೆ ; ಪಾಶ - ಹಗ್ಗ ; ಪರಾಂಬರಿಸು - ಗಮನಿಸು, ಪರಿಶೀಲಿಸು; ಕ್ರೀಡಾಗಾರ - ಕ್ರೀಡಾಂಗಣ ; ಹೆಬ್ಬಾಗಿಲು - ಮಹಾದ್ವಾರ ; ಪಥ್ಯ - ಆಹಾರದ ಕಟ್ಟುಪಾಡು, ಯೋಗ್ಯವಾದುದು ; ತಮಾಷೆ - ಹಾಸ್ಯ; ಕೊಂಚ - ಸ್ವಲ್ಪ ; ಘಟಿಂಗ - ತುಂಟ, ಭಂಡ ; ತಾರಮ್ಮಯ್ಯ - ಅಂಗೈ ಆಡಿಸು ; ವಾತಾಯನ-ಕಿಟಕಿ ; ಕೂಸು - ಮಗು ; ಹಾಲಾಹಲ - ವಿಷ ; ಕ್ಷೀರ - ಹಾಲು; ಮಥಿಸು - ಕಡೆ; ಸಂಕೋಲೆ - ಸರಪಳಿ; ಅಪರಂಜಿ - ಬಂಗಾರ; ಯಾಗ- ಯಜ್ಞ; ತೋಯ್ - ನೆನೆ, ಒದ್ದೆಯಾಗು; ಸೆರೆಮನೆ - ಬಂದೀಖಾನೆ ; ಪೀಡೆ - ತೊಂದರೆ; ಬೊಗಳೆ-ಕೆಲಸಕ್ಕೆ ಬಾರದ ಮಾತು, ಪೊಳ್ಳು ಹರಟೆ; ಅಷ್ಟಮೀ - ಎಂಟನೆಯ; ಕೋಶ - ಭಂಡಾರ; ಪಟ್ಟ-ಸಿಂಹಾಸನ; ಪಗಡಿ - ಕಾಣಿಕೆ, ಗೌರವ ; ಪಿಳ್ಳಂಗೋವಿ - ಕೊಳಲು ; ಸ್ನೇಹಿತ - ಗೆಳೆಯ, ಸಂಗಾತಿ, ಜತೆಗಾರ; ಪಿಳ್ಳೆ - ಮಗು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಕೃಷ್ಣ ಯಾರ ಸೊಂಟವನ್ನು ಮುರಿದ?

    Answer

    ಕೃಷ್ಣನು ಶಕಟನ ಸೊಂಟವನ್ನು ಮುರಿದನು.

  2. ೨. ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಏನಾದ?

    Answer

    ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕನು ಬೇಲದ ಹಣ್ಣು ಬಡಿಯುವ ಬಡಿಗೆಯಾದನು.

  3. ೩. ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಯಾರು?

    Answer

    ಮಂತ್ರಿಯು ಕಂಸನ ಬಳಿಗೆ ಕರೆತಂದ ಇಬ್ಬರು ಶೈಲಿಕ ಮತ್ತು ದುರ್ವಿಧ.

  4. ೪. ವಸುದೇವನಿಗೆ ಮಕ್ಕಳ ವಿಚಾರ ಹೇಳಿದವರು ಯಾರು?

    Answer

    ವಸುದೇವನಿಗೆ ಮಕ್ಕಳ ವಿಚಾರವನ್ನು ಅಕ್ರೂರನು ಹೇಳಿದನು.

  5. ೫. ವಸುದೇವ ಹೇಳುವಂತೆ ರಾಜಕಾರ್ಯ ಹೇಗಿರುತ್ತದೆ?

    Answer

    ವಸುದೇವನ ಪ್ರಕಾರ, ರಾಜಕಾರ್ಯವು ಹತ್ತು ಜನರ ಮಧ್ಯೆ ಕುಳಿತಾಗ ಜೋಲಿ ಮತ್ತು ಏಕಾಂಗಿಯಾಗಿದ್ದಾಗ ಒತ್ತಿದರೂ ರೆಪ್ಪೆ ಮುಚ್ಚದಂತಹದ್ದು.

  6. ೬. ನಂದ ಯಾರೆಂದು ಕಂಸ ಹೇಳುತ್ತಾನೆ?

    Answer

    ಕಂಸನ ಪ್ರಕಾರ, ನಂದನು ವಸುದೇವನ ಬಾಲ್ಯ ಸ್ನೇಹಿತ ಮತ್ತು ಪರಮಾಪ್ತ ಪ್ರಾಣಮಿತ್ರ.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಕೃಷ್ಣ ಯಾರು ಯಾರನ್ನು ಕೊಂದ?

    Answer

    ಕೃಷ್ಣನು ಪೂತನಿಯ ರಕ್ತ ಹೀರಿದನು, ಶಕಟನ ಸೊಂಟ ಮುರಿದನು, ತೃಣಾವರ್ತನನ್ನು ಆಟದ ಬುಗುರಿಯಾಗಿಸಿದನು ಮತ್ತು ಧೇನುಕನನ್ನು ಬಡಿಗೆಯಾಗಿಸಿದನು. ಹೀಗೆ ತನ್ನನ್ನು ಕೊಲ್ಲಲು ಬಂದವರನ್ನೆಲ್ಲಾ ಅವನೇ ಕೊಂದುಬಿಟ್ಟನು.

  2. ೨. ಕ್ರೀಡಾಗಾರದಲ್ಲಿ ಆಗಿದ್ದ ಗುಪ್ತ ಏರ್ಪಾಡು ಏನು?

    Answer

    ಕ್ರೀಡಾಂಗಣದಲ್ಲಿ ಒಂದೇ ಹೆಬ್ಬಾಗಿಲಿತ್ತು. ಅದರ ಕಮಾನಿಗೆ ಕಿರುಗತ್ತಿಗಳನ್ನು ಅಲಂಕರಿಸಲಾಗಿತ್ತು ಮತ್ತು ಕಮಾನಿನ ಮೇಲೆ ಗಾಜಿನ ರಾಜಗೋಪುರವಿತ್ತು. ಒಂದು ಸಣ್ಣ ಕೀಲನ್ನು ಎಳೆದರೆ ಇಡೀ ರಚನೆಯು ಕೆಳಗೆ ಬಿದ್ದು ಕೃಷ್ಣನನ್ನು ಕೊಲ್ಲುವ ಗುಪ್ತ ಏರ್ಪಾಡು ಮಾಡಲಾಗಿತ್ತು.

  3. ೩. ವಸುದೇವ ಮಕ್ಕಳನ್ನು ನೆನೆದು ವ್ಯಥೆಪಟ್ಟ ಬಗೆ ಹೇಗೆ?

    Answer

    ವಸುದೇವನು ಹದಿನಾರು ವರ್ಷಗಳಿಂದ ಕೃಷ್ಣನನ್ನು ನೋಡಿಲ್ಲ. ತನ್ನ ಕಣ್ಣಲ್ಲಿ ಅವನಿನ್ನೂ ಎಳೆಗೂಸು. ಮಕ್ಕಳನ್ನು ಆಡಿಸಲಿಲ್ಲ, ಆರೈಕೆ ಮಾಡಲಿಲ್ಲ, ತೊದಲು ನುಡಿ ಕೇಳಲಿಲ್ಲ, ತೂಗಲಿಲ್ಲ, ಜೋಗುಳ ಹಾಡಲಿಲ್ಲ ಎಂದು ವ್ಯಥೆಪಟ್ಟನು.

  4. ೪. ಕಂಸ ತಂಗಿಯ ಮೇಲಿನ ಪ್ರೀತಿ ಎಂಥದ್ದೆಂದು ಹೇಳಿಕೊಂಡಿದ್ದಾನೆ?

    Answer

    ಕಂಸನು ತಂಗಿಯ ಮೇಲಿನ ಪ್ರೀತಿಯನ್ನು ಚಿನ್ನದ ಸಂಕೋಲೆಗಳಿಂದ ತೋರಿಸಿದ್ದೇನೆ ಎಂದು ಹೇಳಿಕೊಂಡನು. ಅವು ಶುದ್ಧ ಅಪರಂಜಿಯವು, ಇಪ್ಪತ್ತೈದು ವರ್ಷಗಳಾದರೂ ಕಪ್ಪಾಗಿಲ್ಲ ಎಂದು ಹೆಮ್ಮೆಪಟ್ಟನು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಗೂಢಚಾರರು ಯಾವುದರ ಬಗ್ಗೆ ಶೋಧನೆ ಮಾಡುತ್ತಿದ್ದಾರೆ? ವಿವರಿಸಿ.

    Answer

    ಗೂಢಚಾರರು ಕೃಷ್ಣನ ಬಗ್ಗೆ ಶೋಧನೆ ಮಾಡುತ್ತಿದ್ದಾರೆ. ಕೃಷ್ಣನು ಯಾರು, ಅವನಿಗೆ ಅಷ್ಟು ಶಕ್ತಿ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಮಾಹಿತಿ ಸಂಗ್ರಹವು ಕೊನೆಯ ಹಂತದಲ್ಲಿದೆ ಎಂದು ಮಂತ್ರಿಯು ತಿಳಿಸುತ್ತಾನೆ. ಕಂಸನು ಕೃಷ್ಣನ ಶಕ್ತಿಯ ಮೂಲವನ್ನು ತಿಳಿಯಲು ಆತುರನಾಗಿದ್ದಾನೆ.

  2. ೨. ಕೃಷ್ಣನನ್ನು ಕೊಲ್ಲಲು ದುರ್ವಿಧ-ಶೈಲಿಕರು ಮಾಡಿದ್ದ ಏರ್ಪಾಡುಗಳೇನು?

    Answer

    ದುರ್ವಿಧ ಮತ್ತು ಶೈಲಿಕರು ಕೃಷ್ಣನನ್ನು ಕೊಲ್ಲಲು ಎರಡು ಏರ್ಪಾಡುಗಳನ್ನು ಮಾಡಿದ್ದರು. ಮೊದಲನೆಯದಾಗಿ, ಕ್ರೀಡಾಂಗಣದ ಒಂದೇ ಹೆಬ್ಬಾಗಿಲಿನ ಕಮಾನಿಗೆ ಕಿರುಗತ್ತಿಗಳನ್ನು ಅಲಂಕರಿಸಿ, ಮೇಲೆ ಗಾಜಿನ ರಾಜಗೋಪುರವನ್ನು ನಿರ್ಮಿಸಿದ್ದರು. ಒಂದು ಸಣ್ಣ ಕೀಲನ್ನು ಎಳೆದರೆ ಇಡೀ ರಚನೆಯು ಕೃಷ್ಣನ ತಲೆಯ ಮೇಲೆ ಬೀಳುವಂತೆ ಮಾಡಿದ್ದರು. ಎರಡನೆಯದಾಗಿ, ಕುವಲಯಾಪೀಡ ಎಂಬ ಪಟ್ಟದ ಆನೆಗೆ ಔಷಧ-ಪಥ್ಯ ಮಾಡಿ, ಹಳದಿ ಬಣ್ಣ ಕಂಡರೆ ಸಾಕು ಮೈಮೇಲೆ ಬೀಳುವಂತೆ ತರಬೇತಿ ನೀಡಿದ್ದರು.

  3. ೩. ಕಂಸ ದೇವಕಿಯಿಂದ ಕೃಷ್ಣನ ಬಗ್ಗೆ ತಿಳಿಯಲು ಹೋಗಿ ನಿರಾಶನಾದದ್ದು ಹೇಗೆ?

    Answer

    ಕಂಸನು ದೇವಕಿಯ ಬಳಿಗೆ ಹೋಗಿ ತನ್ನ ಎಂಟನೆಯ ಮಗನನ್ನು ಎಲ್ಲಿ ಬಚ್ಚಿಟ್ಟಿದ್ದಾಳೆಂದು ಕೇಳಿದನು. ರಾಜ್ಯ, ಕೋಶ, ಪಟ್ಟ, ಪಗಡಿ ಎಲ್ಲವನ್ನೂ ಕೊಡುವುದಾಗಿ ಆಮಿಷ ತೋರಿದನು. ಆದರೆ ದೇವಕಿಯು ಕೃಷ್ಣನು ತನ್ನ ಮಗನಲ್ಲ, ನಂದ-ಯಶೋಧೆಯರ ಮಗ ಎಂದು ಹೇಳಿದಳು. ಕಂಸನು ಅದನ್ನು ನಂಬದೆ, ಅದೇ ಬೊಗಳೆ ಎಂದು ಕೋಪಗೊಂಡು ನಿರಾಶೆಯಿಂದ ಹೊರಟುಹೋದನು.

ಈ. ಈ ವಾಕ್ಯಗಳನ್ನು/ಹೇಳಿಕೆಗಳನ್ನು ಯಾರು ಯಾರಿಗೆ ಯಾವಾಗ ಹೇಳಿದರು/ತಿಳಿಸಿರಿ?

  1. ೧. “ಹೌದು ಒಡೆಯ -- ಕ್ರೀಡಾಂಗಣಕ್ಕೆ ಇರೋದು ಒಂದೇ ಹೆಬ್ಬಾಗಿಲು”

    Answer

    ಈ ಮಾತನ್ನು ಮಂತ್ರಿಯು ಕಂಸನಿಗೆ, ಕ್ರೀಡಾಂಗಣದ ಗುಪ್ತ ಏರ್ಪಾಡಿನ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಹೇಳಿದನು.

  2. ೨. “ಮಂಡೇಲಿ ಕೊಂಚ ಮಾಂಸ ಇರಬೇಕು”

    Answer

    ಈ ಮಾತನ್ನು ಕಂಸನು ಮಂತ್ರಿಗೆ, ಮಂತ್ರಿಯು ಕುಳಿತುಕೊಳ್ಳಲು ನಿರಾಕರಿಸಿದಾಗ, ಬೇಸರದಿಂದ ಹೇಳಿದನು.

  3. ೩. “ನಿಮ್ಮ ಅಣ್ಣನಿಗೆ ಸ್ವಲ್ಪ ಹಾಲಾದರೂ ಕೊಡು”

    Answer

    ಈ ಮಾತನ್ನು ವಸುದೇವನು ದೇವಕಿಗೆ, ಕಂಸನು ತಮ್ಮ ಬಂಧನದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದನು.

  4. ೪. “ಕೊಲ್ಲಲು ಬಂದವರನ್ನೆಲ್ಲಾ ಅವನೇ ಕೊಂದುಬಿಟ್ಟ”

    Answer

    ಈ ಮಾತನ್ನು ಕಂಸನು ವಸುದೇವ ಮತ್ತು ದೇವಕಿಯರಿಗೆ, ಕೃಷ್ಣನನ್ನು ಕೊಲ್ಲಲು ತಾನು ಕಳುಹಿಸಿದವರೆಲ್ಲರೂ ವಿಫಲರಾದ ಬಗ್ಗೆ ಹೇಳುವಾಗ ಹೇಳಿದನು.

ಉ. ಹೊಂದಿಸಿ ಬರೆಯಿರಿ.

  1. (Two lists to match)

  2. ೧. ಒಡೆಯ

    Answer

    ೧. ಒಡೆಯ - ಕಂಸ

  3. ೨. ಶಿಲ್ಪಿ

    Answer

    ೨. ಶಿಲ್ಪಿ - ಶೈಲಿಕ

  4. ೩. ವೈದ್ಯ

    Answer

    ೩. ವೈದ್ಯ - ದುರ್ವಿಧ

  5. ೪. ಆನೆ

    Answer

    ೪. ಆನೆ - ಕುವಲಯಾಪೀಡ

  6. ೫. ಬೆಟ್ಟ

    Answer

    ೫. ಬೆಟ್ಟ - ಗೋವರ್ಧನ

  7. ಕುವಲಯಾಪೀಡ

  8. ಶಕಟ

  9. ಗೋವರ್ಧನ

  10. ದುರ್ವಿಧ

  11. ಶೈಲಿಕ

  12. ಧೇನುಕ

  13. ಕಂಸ

ಊ. ಕೆಳಗೆ ಕೊಟ್ಟಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ, ವಾಕ್ಯ ರಚಿಸಿ.

  1. ೧. ಲೋಕಾಭಿರಾಮ

    Model sentence

    ಲೋಕಾಭಿರಾಮ: ನಮ್ಮ ಶಾಲೆಯಲ್ಲಿ ಲೋಕಾಭಿರಾಮವಾಗಿ ಕ್ರೀಡಾ ಸ್ಪರ್ಧೆ ನಡೆಯಿತು.

  2. ೨. ಪರಾಂಬರಿಸು

    Model sentence

    ಪರಾಂಬರಿಸು: ಶಿಕ್ಷಕರು ನಮ್ಮ ಮನೆಕೆಲಸವನ್ನು ಪರಾಂಬರಿಸಿದರು.

  3. ೩. ಅಪರಂಜಿ

    Model sentence

    ಅಪರಂಜಿ: ಅಮ್ಮನ ಮದುವೆಯ ಸರ ಅಪರಂಜಿಯದು.

  4. ೪. ಸೆರೆಮನೆ

    Model sentence

    ಸೆರೆಮನೆ: ಕಳ್ಳನನ್ನು ಪೋಲೀಸರು ಸೆರೆಮನೆಗೆ ಕಳುಹಿಸಿದರು.

  5. ೫. ಸಂಕೋಲೆ

    Model sentence

    ಸಂಕೋಲೆ: ಆನೆಯ ಕಾಲಿಗೆ ಸಂಕೋಲೆ ಹಾಕಿದ್ದರು.

  6. ೬. ಬೊಗಳೆ

    Model sentence

    ಬೊಗಳೆ: ಅವನು ಯಾವಾಗಲೂ ಬೊಗಳೆ ಮಾತನಾಡುತ್ತಾನೆ.

ವ್ಯಾಕರಣ ಮಾಹಿತಿ

ಸಮಾಸಗಳು

ದ್ವಿಗು ಸಮಾಸ

  1. ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ‘ದ್ವಿಗುಸಮಾಸ’.

  2. ಒಂದು + ಕಟ್ಟು = ಒಗ್ಗಟ್ಟು

  3. ಎರಡು + ಮಡಿ = ಇಮ್ಮಡಿ

  4. ಪಂಚಗಳಾದ + ಇಂದ್ರಿಯಗಳು = ಪಂಚೇಂದ್ರಿಯಗಳು

  5. ಸಪ್ತಗಳಾದ + ಸ್ವರಗಳು = ಸಪ್ತಸ್ವರಗಳು

ಬಹುವ್ರೀಹಿ ಸಮಾಸ

  1. ೧. ಮೂರು ಕಣ್ಣುಳ್ಳವನು: ಮುಕ್ಕಣ್ಣ

  2. ೨. ಹಣೆಯಲ್ಲಿ ಕಣ್ಣುಳ್ಳವನು: ಹಣೆಗಣ್ಣ

  3. ೩. ಚಕ್ರವನ್ನು ಹಿಡಿದಿರುವವನು: ಚಕ್ರಪಾಣಿ

  4. ೪. ಚಂದ್ರನಂತೆ ಮುಖವುಳ್ಳವಳು: ಚಂದ್ರಮುಖಿ

  5. ಹೀಗೆ ಸಮಾಸವಾದಾಗ ಪೂರ್ವೋತ್ತರ ಪದಗಳು ಪ್ರಧಾನವಾಗದೆ ಬೇರೊಂದು ಪದ ಪ್ರಧಾನವಾದರೆ ಅಂತಹ ಸಮಾಸಗಳಿಗೆ ‘ಬಹುವ್ರೀಹಿ ಸಮಾಸ’ ಎಂದು ಹೆಸರು.

ಕ್ರಿಯಾ ಸಮಾಸ (ಇದು ಕನ್ನಡಕ್ಕೆ ವಿಶಿಷ್ಟವಾದ ಸಮಾಸ)

  1. ೧. ಕೈಯನ್ನು + ತೊಳೆ = ಕೈತೊಳೆ

  2. ೨. ಮರವನ್ನು + ಹತ್ತು = ಮರಹತ್ತು

  3. ೩. ಕಳೆಯನ್ನು + ಕೀಳು = ಕಳೆಕೀಳು

  4. ೪. ಊಟವನ್ನು + ಮಾಡು = ಊಟಮಾಡು

  5. ೫. ತಲೆಯನ್ನು + ಬಾಚು = ತಲೆಬಾಚು

  6. ೬. ಕಾಲನ್ನು + ಎಳೆ = ಕಾಲೆಳೆ

  7. ಸಮಾಸದಲ್ಲಿ ಪೂರ್ವಪದವು ನಾಮಪದವಾಗಿದ್ದು, ಉತ್ತರ ಪದವು ಕ್ರಿಯಾ ಪದವಾಗಿದ್ದರೆ ಅಂತಹ ಸಮಾಸಗಳಿಗೆ ‘ಕ್ರಿಯಾ ಸಮಾಸ’ ಎಂದು ಹೆಸರು.

ಗಮಕ ಸಮಾಸ

  1. ೧. ಅವನು + ಹುಡುಗ = ಆ ಹುಡುಗ

  2. ೨. ಇದು + ಕಲ್ಲು = ಈ ಕಲ್ಲು

  3. ೩. ಕಡೆಯುವುದು + ಕೋಲು = ಕಡೆಗೋಲು

  4. ೪. ಮಾಡಿದುದು + ಅಡಿಗೆ = ಮಾಡಿದಡಿಗೆ

  5. ಹೀಗೆ ಪೂರ್ವ ಪದವು ಸರ್ವನಾಮ ಕೃದಾಂತಗಳಲ್ಲಿ ಒಂದಾಗಿದ್ದು ಉತ್ತರ ಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ಗಮಕ ಸಮಾಸ.

ಚಟುವಟಿಕೆ

  1. ೧. ಈ ನಾಟಕವನ್ನು ಗೆಳೆಯರ ಜೊತೆಗೂಡಿ ಶಿಕ್ಷಕರ ಮಾರ್ಗದರ್ಶನದಲ್ಲಿ ಅಭಿನಯಿಸಿರಿ.

  2. ೨. ಈ ನಾಟಕವನ್ನು ಕಥೆಯ ರೂಪದಲ್ಲಿ ನಿಮ್ಮ ತರಗತಿಯ ಗೆಳೆಯರಿಗೆ ಹೇಳಿ.

Interactive Lab

ಬಿಸಿಲು ಮುಚ್ಚುಬಿಸಿಲು ಮಾಳಿಗೆ ; ಬಡಿಗೆ - ದೊಣ್ಣೆ ಕೋಲು ; ಪೋರ - ಹುಡುಗ; ಗೂಢಚಾರ - ಗುಪ್ತಚರ ; ಶೋಧ - ಹುಡುಕು ; ಮಾಹಿತಿ - ತಿಳಿವಳಿಕೆ, ವಿವರಣೆ ; ಲೋಕಾಭಿರಾಮ- ಸಹಜವಾಗಿ; ಎಕ್ಕಡ - ಪಾದುಕೆ, ಪಾದರಕ್ಷೆ ; ಪಾಶ - ಹಗ್ಗ ; ಪರಾಂಬರಿಸು - ಗಮನಿಸು, ಪರಿಶೀಲಿಸು; ಕ್ರೀಡಾಗಾರ - ಕ್ರೀಡಾಂಗಣ ; ಹೆಬ್ಬಾಗಿಲು - ಮಹಾದ್ವಾರ ; ಪಥ್ಯ - ಆಹಾರದ ಕಟ್ಟುಪಾಡು, ಯೋಗ್ಯವಾದುದು ; ತಮಾಷೆ - ಹಾಸ್ಯ; ಕೊಂಚ - ಸ್ವಲ್ಪ ; ಘಟಿಂಗ - ತುಂಟ, ಭಂಡ ; ತಾರಮ್ಮಯ್ಯ - ಅಂಗೈ ಆಡಿಸು ; ವಾತಾಯನ-ಕಿಟಕಿ ; ಕೂಸು - ಮಗು ; ಹಾಲಾಹಲ - ವಿಷ ; ಕ್ಷೀರ - ಹಾಲು; ಮಥಿಸು - ಕಡೆ; ಸಂಕೋಲೆ - ಸರಪಳಿ; ಅಪರಂಜಿ - ಬಂಗಾರ; ಯಾಗ- ಯಜ್ಞ; ತೋಯ್ - ನೆನೆ, ಒದ್ದೆಯಾಗು; ಸೆರೆಮನೆ - ಬಂದೀಖಾನೆ ; ಪೀಡೆ - ತೊಂದರೆ; ಬೊಗಳೆ-ಕೆಲಸಕ್ಕೆ ಬಾರದ ಮಾತು, ಪೊಳ್ಳು ಹರಟೆ; ಅಷ್ಟಮೀ - ಎಂಟನೆಯ; ಕೋಶ - ಭಂಡಾರ; ಪಟ್ಟ-ಸಿಂಹಾಸನ; ಪಗಡಿ - ಕಾಣಿಕೆ, ಗೌರವ ; ಪಿಳ್ಳಂಗೋವಿ - ಕೊಳಲು ; ಸ್ನೇಹಿತ - ಗೆಳೆಯ, ಸಂಗಾತಿ, ಜತೆಗಾರ; ಪಿಳ್ಳೆ - ಮಗು