CRECT Education

Class 7 Kannada Lesson 19: Rebel Mundaragi Bheemaraya | KTBS Second Language – Learn the Story

Description

Bheemaraya's rebellion at Koppal fort — story walkthrough and vocabulary.

ಗದ್ಯ (prose) · ಡಾ. ನಿಂಗು ಸೋಲಗಿ

ಪಠ್ಯFull text

**ದೃಶ್ಯ - ೧** (ಬ್ರಿಟೀಷ್ ಅಧಿಕಾರಿಯ ಕಾರ್ಯಾಲಯ. ಪಾಶ್ಚಾತ್ಯ ಸಂಗೀತದ ಹಿನ್ನೆಲೆ) ಬ್ರಿಟೀಷ್ ಅಧಿಕಾರಿ : ಏನೀ ಅನಾಹುತ ರಾಯಚೂರ, ಧಾರವಾಡ ಕಲೆಕ್ಟರುಗಳು, ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕೊಪ್ಪಳ ಕೋಟೆ ಕಾಯುತ್ತಿದ್ದೇವೆ ಎಂದಿದ್ದರು, ಆದರೆ ಭೀಮರಾವ್-ಕೆಂಚನಗೌಡ ಬಂದಾಗ ಕಣ್ಣುಮುಚ್ಚಿ ಕುಳಿತಿದ್ದರೇನು? ಹ್ಯೂಜಿಸ್ : ಸರ್, ನಮ್ಮ ಸೆಕ್ಯೂರಿಟಿ ಗಾರ್ಡ್ಸ್ ನಮಗೆ ವಿಶ್ವಾಸಘಾತ ಮಾಡಿದ್ದಾರೆ. ಮಕ್ಕುಂ ಸಾಬ್ ಮತ್ತು ಅವನ ಸಂಗಡಿಗರು ನಮ್ಮಲ್ಲಿ ಕೆಲಸಕ್ಕಿದ್ದು ಅವರೇ ಪರವಾಗಿ ಕೆಲಸಮಾಡಿದ್ದಾರೆ. ಅವರೇ ಕೋಟೆಯ ಬಾಗಿಲು ತೆರೆದಿದ್ದಾರೆ. ಬ್ರಿಟೀಷ್ ಅಧಿಕಾರಿ : ಮೇಜರ್ ಹ್ಯೂಜಿಸ್ ಈಗ ಸಮಯವೆಷ್ಟು? ಹ್ಯೂಜಿಸ್ : Sir, it is 9.30 p.m. 30th May 1858 Sir. ಬ್ರಿಟೀಷ್ ಅಧಿಕಾರಿ : ಐ.ಸೀ. ನೀವೀಗ ಇನ್ನೊಂದು ಗಂಟೆಯಲ್ಲಿ ಅಶ್ವದಳದೊಂದಿಗೆ ಇಲ್ಲಿಂದ ಹೊರಡಲು ಅನುವಾಗಿ. ನಾಳೆ ೩೦ ರ ಬೆಳಿಗ್ಗೆ ಇಲ್ಲಿಂದ ೨೬ ಮೈಲಿ ದೂರವಿರುವ ಕೊಪ್ಪಳಕ್ಕೆ ಹೋಗಿ ಕೋಟೆಯನ್ನು ವಶಕ್ಕೆ ತೆಗೆದುಕೊಳ್ಳಬೇಕು. ಹ್ಯೂಜಿಸ್ : Yes Sir, But ನಮ್ಮ Soldiers ಕಡಿಮೆ ಇದ್ದಾರೆ. ಭೀಮರಾವ್ ಜೊತೆ ಹೇಗೆ Fight ಮಾಡುವುದು? ಅವರೊಂದಿಗೆ ಹೋರಾಡುವುದು ಸುಲಭವಲ್ಲ ಸರ್... ಬ್ರಿಟೀಷ್ ಅಧಿಕಾರಿ : You'r Fool ಹ್ಯೂಜಿಸ್ : No sir.... Yes Sir. ಬ್ರಿಟೀಷ್ ಅಧಿಕಾರಿ : ನಿಮಗೆ ಅದರ ಚಿಂತೆ ಬೇಡ, ಮುಂದೆ ಹೋಗಿ ಪರಿಸ್ಥಿತಿ ಪರಿಶೀಲಿಸಿ. ಅಷ್ಟರಲ್ಲಿ ಲಿಂಗಸೂರಿನಿಂದ, ಹೈದರಾಬಾದಿನಿಂದ ಡೆಪ್ಯೂಟಿ ಕಮೀಷನರ್, ಲೆಪ್ಟಿನೆಂಟ್ ಟೇಲರ್, ಕರ್ನೂಲಿನಿಂದ ಅಶ್ವದಳದ ಬಾಬುರಾವ್ ಮತ್ತು ಕೃಷ್ಣರಾವ್ ಬರುತ್ತಾರೆ. ಕ್ಯಾಪ್ಟನ್ ರುದರ್‌ಫೋರ್ಡ್ ಲೀಡರ್‌ಶಿಪ್‌ನಲ್ಲಿ ಹಾಯ್ ಲ್ಯಾಂಡರ್ಸ್ ಸೈನಿಕ ತುಕಡಿ ಬರುತ್ತದೆ, ನೀವು ಮುಂದೆ ಹೋಗಿ.. Go, go ahead. ಹ್ಯೂಜಿಸ್ : ರೈಟ್ ಸಾರ್, ಭೀಮರಾಯನನ್ನು ಖಂಡಿತ ಜೀವಂತ ಹಿಡಿದು ತರುತ್ತೇವೆ. ಬ್ರಿಟೀಷ್ ಅಧಿಕಾರಿ : ಅವನು ಸಿಡಿಲು ಮರಿ..ಗೊರಿಲ್ಲಾ ಯುದ್ಧ ಪರಿಣಿತನಾದ ಅವನನ್ನು ಹಿಡಿಯಲು ಹೋದರೆ ಸಿಡಿಯುತ್ತಾನೆ, ತನ್ನವರನ್ನು ಹುರಿದುಂಬಿಸಿ ಬಾಂಬುಗಳಂತೆ ಸ್ಫೋಟಿಸುತ್ತಾನೆ. ಅವನು ಗುಂಡೇಟಿನ ಗುರಿಕಾರ. Sharp Shooter. ಎಚ್ಚರದಿಂದ ಹೊಂಚುಹಾಕಿ ಹಿಡಿದು ತನ್ನಿ. ಹ್ಯೂಜಿಸ್ : Yes sir, We are going to arrest him, Yes sir. **ದೃಶ್ಯ - ೨** (ಕೊಪ್ಪಳ ಕೋಟೆ ಒಳಗಡೆ ಸೇನಾನಿಗಳ ಸಭೆ, ಹೊರಗೆ ಕೋಟೆ ಬುರುಜಿನ ಮೇಲೆ ಶಸ್ತ್ರ ಸಜ್ಜಿತರಾಗಿ ಕೆಲವು ಸೇನಾನಿಗಳು ಕಾಯುತ್ತಿದ್ದಾರೆ.) ಭೀಮರಾಯ : ಸೇನಾನಿಗಳೇ, ನಿಮ್ಮ ಸಾಹಸ ಮೆಚ್ಚುವಂಥದ್ದು, ಬ್ರಿಟೀಷರನ್ನು ಬಗ್ಗುಬಡಿದು ಕೊಪ್ಪಳ ಕೋಟೆ ವಶಪಡಿಸಿಕೊಂಡು ಗೆಲುವಿನ ಬಾವುಟ ಹಾರಿಸಿದ್ದೀರಿ. ಆದರೆ ಇದಿನ್ನೂ ಹೋರಾಟದ ಪ್ರಾರಂಭ. ಬ್ರಿಟೀಷರು ನಮ್ಮ ನಾಡು ಬಿಟ್ಟು ತೊಲಗುವವರೆಗೂ ಹೋರಾಡೋಣ, ಕೆಚ್ಚೆದೆಯಿಂದ ಹೋರಾಡಲು ಸಜ್ಜಾಗಿರಿ. ಕರಿಯಪ್ಪ : ನಾಳೆದಿದ್ದ ಮತ್ತಷ್ಟು ಸೈನ್ಯ ಬರೋ ಸಾಧ್ಯತೆ ಐತಿ. ಬಹಳಷ್ಟು ಮದ್ದುಗುಂಡು ಇವತ್ತ ಬಳಕಿ ಆದ್ವು ನಾಳೆ ಹ್ಯಾಂಗ್ರಿ ಧಣಿ. ಕೆಂಚನಗೌಡ : ನನಗೂ ಅದಕ ಚಿಂತಾಗೈತಿ, ಇವತ್ತು ಬಲ್ಲಂಗ ಅವರ ಗುಂಡಿಗೆ ಪ್ರತಿಗುಂಡು ಹಾರಿಸಿ ಬೆಚ್ಚಿ ಬೀಳಿಸಿದೀವಿ. ಭೀಮರಾಯ : ಚಿಂತೀ ಮಾಡಿ ಪ್ರಯೋಜನ ಇಲ್ಲ. ನಾವು ಏಳು ಸುತ್ತಿನಕೋಟೆ ಒಳಗ ಅದೀವಿ. ಏನಾದ್ರೂ ತಂತ್ರ ಬಳಸಿ ಅವರ್ನ ಒಳಗ ಬರದಂಗ ನೋಡ್ಕೋಬೇಕು. ಗುರಿ ಇಟ್ಟು ಬ್ರಿಟೀಷ್ ಅಧಿಕಾರಿಗಳ ಎದೀ ಸೀಳಬೇಕು. ಸ್ವಾತಂತ್ರ್ಯ ಅನ್ನೋದು ದೇಹಿ ಅಂತ ಬೇಡಿದರ ಸಿಗುವ ವಸ್ತು ಅಲ್ಲ ಹೋರಾಟಕ್ಕ ಇಳಿದೀವಿ. ಬ್ರಿಟೀಷರ ಗುಂಡಿಗೆ ಬಲಿ ಆದ್ರೂ ಸರಿ, ಛಲ ಬಿಡೋದು ಬ್ಯಾಡ, ಸ್ವಾತಂತ್ರ್ಯ ತಗೊಂಡೇ ತೀರೋಣ. ಕೆಂಚನಗೌಡ : ಆಯ್ತು ರಾಯರೆ... ಇಟ್ಟ ಹೆಜ್ಜೆ ತೆಗೆಯದಿರೋಣ ಹಿಂದಕ್ಕೆ. (ತೆರೆ ಬೀಳುವುದು) **ದೃಶ್ಯ - ೩** (ಕೋಟೆಯ ಹೊರಭಾಗ. ಗಲಿಬಿಲಿ ಗದ್ದಲ . . . ಗುಂಡು ಸಿಡಿಸಿದ ಸದ್ದು) ಬ್ರಿಟೀಷ್ ಅಧಿಕಾರಿ : (ಪ್ರತಿದ್ವನಿಸುವಂತೆ ವಿಶೇಷ ಧ್ವನಿಯಲ್ಲಿ) ಭೀಮರಾವ್ ಕೇಳು ಇನ್ನು ಮೂರು ಗಂಟೆಗಳಲ್ಲಿ ಕೋಟೆಯ ಒಳಗೆ ಇದ್ದವರೆಲ್ಲ ಹೊರಗೆ ಬಂದು. ಕೋಟೆಯನ್ನು Vacate ಮಾಡಿ surrender ಆಗದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಚ್ಚರ! ಭೀಮರಾಯ : ಹೆ ಹೈ..ನಿಮ್ಮ ಗೊಡ್ಡು ಬೆದರಿಕೆೀಗೆಲ್ಲ ಬೆದರಿ ಗೊತ್ತಿಲ್ಲ ಈ ಭೀಮರಾವಗ. ನಮ್ಮ ಗುರಿ ಏನಿದ್ರೂ ಈ ನೆಲದಿಂದ ಅಟ್ಟೋದೊಂದೇ. ಗೆದ್ರೆ ಸ್ವಾತಂತ್ರ್ಯ, ಸತ್ತರೆ ವೀರಸ್ವರ್ಗ. ಬ್ರಿಟೀಷ್ ಅಧಿಕಾರಿ : ಭೀಮರಾವ್.. ನೀನು ಸಾಗರಕ್ಕೆ ಸೇತುವೆ ಕಟ್ಟುವ ಸಾಹಸಕ್ಕೆ ಕೈ ಹಾಕಿದ್ದೀಯಾ. ನಿನ್ನ ಬಂಡಾಯದಿಂದ ಏನೂ ಪ್ರಯೋಜನವಿಲ್ಲ. ಬಾ ಹೊರಗೆ ಕೋಟೆ ಬಿಟ್ಟುಕೊಟ್ಟು ಶರಣಾದ್ರೆ ನಿನಗೆ ಕಂಪನಿ ಸರಕಾರ ಉತ್ತಮ ಸ್ಥಾನ ನೀಡಿ ಚೆನ್ನಾಗಿ Treat ಮಾಡುತ್ತದೆ. (Illustration of the fort, and a man holding a sword) ಭೀಮರಾಯ : ಏಯ್ ಪರಂಗಿ..ದೀಪ ಬೆಳಗೋದು ತನಗಾಗಿ ಅಲ್ಲ. ಇತರರಿಗೆ ಬೆಳಕಾಗಲಿ ಅಂತ. ನಮ್ಮ ಹೋರಾಟ ನಮ್ಮ ಜೀವಕ್ಕಲ್ಲ. ನಿಮ್ಮ ದಾಸ್ಯದಿಂದ ಈ ನಾಡಿನ ಬಿಡುಗಡೆಗೆ ನಾವು ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆಯೋದಿಲ್ಲ. ದಾಸ್ಯದ ಅರಮನೆಗಿಂತ ಸ್ವಾತಂತ್ರ್ಯದ ಸೆರೆಮನೆಯೇ ಲೇಸು. ಕ್ರಾಂತಿ ಎಂದೂ ಹಿಮ್ಮುಖವಾಗಿ ನಡೆಯೋದಿಲ್ಲ. ಜೈ ಕನಕರಾಯ. ಜೈ ಮೃಡಗಿರೀಶ..... ಕೆಂಚನಗೌಡ : ಜೈ ವೀರಭದ್ರ... ಜೈ ಮೃಡಗಿರೀಶ.... (ಗುಂಡಿನ ಕಾಳಗ, ಸೈನಿಕರು ಉರುಳಿ ಬೀಳುವರು, ಕೆಂಚನಗೌಡನಿಗೆ ಗುಂಡೇಟು ಬೀಳುವುದು.) ಕೆಂಚನಗೌಡ : ಹಾ....... ಅಯ್ಯೋ! ಭೀಮರಾಯ : ಕೆಂಚನಗೌಡ!!... ಕೆಂಚನಗೌಡ : ಭೀಮರಾಯರ... ಈ ಪರಂಗಿ ಗುಂಡು ನನ್ನ ಎದಿಯಾಗ ಹೊಕ್ಕೈ, ಎದಿಯಾಗ ಹೊಕ್ಕು, ಲೇ.. ಪರಂಗಿ ಪಾಪಿಗಳೇ, ನಿಮ್.. ನಿಮ್ಮ ಎದೀ ಸೀಳದೇ ಬಿಡೊದಿಲ್ಲ ನಮ್ಮ ಭೀಮರಾಯ.. ನಿಮ್ಮನ್ನ ಹಾ ಹಾ ಹಾ.. ಭೀಮರಾಯ : ಕೆಂಚನಗೌಡ್ರs... (ದುಃಖಿ) ಬ್ರಿಟೀಷ್ ಅಧಿಕಾರಿ : ಭೀಮರಾವ್ ..ಈಗಲಾದರು ಶರಣಾಗು ನಿನಗೆ ಜೀವದಾನ ಮಾಡುತ್ತೇವೆ. ಭೀಮರಾಯ : ಏನು! ..ನನಗೆ ಜೀವದಾನ ಮಾಡ್ತೀಯಾ? ಜೀವದಾನ.. ನನ್ನ ಸಂಗಾತಿಗಳ್ನ ಕೊಂದ ನಿಮ್ಮನ್ನ ಸುಮ್ಮಬಿಡೊದಿಲ್ಲ. (ಗುಂಡು ಹಾರಿಸುವನು) ಬ್ರಿಟೀಷ್ ಅಧಿಕಾರಿ : Fire... Fire... (ಗುಂಡುಗಳ ಸುರಿಮಳೆ) ಭೀಮರಾಯ : ಹ್ಞಾ... ಪರಂಗಿ ಬ್ರಿಟೀಷ್ ಅಧಿಕಾರಿ : ಹಹ್ಹ... ಹಹ್ಹ... ಮುಂಡರಗಿ ಭೀಮರಾಯಗೆ ಗುಂಡು ಬಿತ್ತು. ಗೆಲವು ನಮ್ಮದೇ. ಭೀಮರಾಯ : ಏ ... ಫರಂಗೀ ....ನಾನು ಸತ್ತರೂ ಈ ನೆಲದಾಗ ನಾವು ಹುಟ್ಟು ಹಾಕಿದ ಬಂಡಾಯಕ್ಕೆ ಸಾವಿಲ್ಲ. ಈ ನಾಡಿನ್ಯಾಗ ಈ ಬಂಡಾಯದ ಕಹಳೆ ಮೊಳಗತಾನೇ ಇರುತ್ತೆ, ಈ ಜನ ನಿಮ್ಮ ದಾಸ್ಯದಿಂದ ಮುಕ್ತರಾಗೋ ... ತನಕ ಹೋರಾಟ ನಡೆಸೇತೀರ್ತಾರ. ನಿಮ್ಮನ್ನ ಈ ನೆಲದಿಂದ ಓಡಿಸಿ, ಭಾರತಮಾತೇನ ಸ್ವಾತಂತ್ರ ಮಾಡೇ ಮಾಡ್ತಾರಾ, ಹ್ಞಾ, ಹ್ಞಾ, ಹ್ಞಾ, ಜೈ ಮೃಡಗಿರೀಶ, ಜೈ ಕನಕರಾಯ, ಜೈ ಕನ್ನಾಡಾಂಬೆ, ಜೈ ಭಾರತಾಂಬೆ. (ತೆರೆ ಬೀಳುವುದು) * * * * * **ಕೃತಿಕಾರರ ಪರಿಚಯ :** (Portrait of ಡಾ. ನಿಂಗು ಸೋಲಗಿ is shown) ಡಾ. ನಿಂಗು ಸೋಲಗಿಯವರ ಪೂರ್ಣ ಹೆಸರು ನಿಂಬಪ್ಪ ಗುರುಲಿಂಗಪ್ಪ ಸೋಲಗಿ. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕೌಜಗೇರಿಯವರಾದ ಇವರು ‘ನಿಂಗು ಸೋಲಗಿ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ಪರಿಚಿತರು. ಇವರು ಮಕ್ಕಳ ರಂಗಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಇವರು ‘ಕನಸಿನ ಬಾಲೆ’, ‘ಬಾಳಜ್ಯೋತಿ’, ‘ಕರುಳಿನ ಗೆಳೆಯ’ ಮೊದಲಾದ ನಾಟಕಗಳನ್ನು, ‘ನಲಿಯುವ ಚಿಣ್ಣರು ನಾವು’, ‘ಮೂಡಣದ ಹಾಡುಗಳು’ ಮುಂತಾದ ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ, ಧಾರವಾಡದ ಡೆಪ್ಯುಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ‘ಉತ್ತಮ ಸಾಹಿತಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾನುಲಿಯಲ್ಲಿ ಪ್ರಸಾರಗೊಂಡ ಇವರ ಐತಿಹಾಸಿಕ ನಾಟಕ ‘ಬಂಡೆದ್ದ ಮುಂಡರಗಿ ಭೀಮರಾಯ’ ಕೃತಿಯ ಭಾಗದ ಸಂಕ್ಷಿಪ್ತ ರೂಪವನ್ನು ಇಲ್ಲಿ ನೀಡಲಾಗಿದೆ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ ತಿಳಿಯಿರಿ :

  1. ಅನಾಹುತ - ಆಕಸ್ಮಿಕ ಕೇಡು

  2. ಅಶ್ವದಳ - ಕುದುರೆ ಸೇನೆ

  3. ಗೊಡ್ಡು ಬೆದರಿಕೆ - ವ್ಯರ್ಥಗದರಿಕೆ

  4. ತಂತ್ರ - ಉಪಾಯ

  5. ದೇಹಿ - ದಯಪಾಲಿಸು; ಕೊಡು.

  6. ಪರಿಣತ - ನುರಿತ; ತಿಳಿದವ; ಪಂಡಿತ.

  7. ಬಗ್ಗುಬಡಿ - ಹತ್ತಿಕ್ಕು; ದಮನಮಾಡು.

  8. ಶರಣಾಗು - ಮೊರೆಹೋಗು; ರಕ್ಷಣೆ.

  9. ಹಿಮ್ಮುಖಿ - ಹಿಂದೆ ಸರಿಯುವುದು

  10. ಅಟ್ಟೋದು - ಹೊರದೂಡುವುದು

  11. ಕೆಚ್ಚೆಡೆ - ಧೈರ್ಯಶಾಲಿ; ಸಾಹಸಿ.

  12. ಛಲ - ಹಟ

  13. ದಾಸ್ಯ - ಗುಲಾಮಗಿರಿ; ಚಾಕರಿ.

  14. ಪರಂಗಿ - ವಿದೇಶಿ; ಪಾಶ್ಚಾತ್ಯ ದೇಶದವನು.

  15. ಬಂಡಾಯ - ದಂಗೆ; ಕ್ರಾಂತಿ.

  16. ವಿಶ್ವಾಸಘಾತ - ನಂಬಿಕೆ ದ್ರೋಹ

  17. ಸಜ್ಜಾಗು - ಸಿದ್ಧನಾಗು

  18. ಹೊಂಚುಹಾಕು - ಸಂಚುಹೂಡು

ಟಿಪ್ಪಣಿ :

  1. ೧. ಗೆರಿಲ್ಲಾ ಯುದ್ಧ - ಯಾವುದೇ ಮುನ್ಸೂಚನೆ ನೀಡದೆ ಮರೆಯಲ್ಲಿ ನಿಂತು ಶತ್ರುಗಳ ಮೇಲೆ ದಾಳಿ ಮಾಡುವುದು.

  2. ೨. ಕಣ್ಣಲ್ಲಿ ಎಣ್ಣೆ ಹಾಕಿಕೊಂಡು - ಜಾಗರೂಕತೆಯಿಂದ ಎಚ್ಚರವಾಗಿರುವುದು.

  3. ೩. ಕಣ್ಣುಮುಚ್ಚಿ ಕುಳಿತಿರು - ಮೈಮರೆತು ಇರುವುದು.

  4. ೪. ಕಲೆಕ್ಟರುಗಳು - ಬ್ರಿಟೀಷರ ಕಾಲದಲ್ಲಿದ್ದ ತೆರಿಗೆ ಅಧಿಕಾರಿಗಳು.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಬ್ರಿಟೀಷ್ ಅಧಿಕಾರಿಗೆ ಯಾವ ಕೋಟೆಯನ್ನು ವಶಪಡಿಸಿಕೊಳ್ಳುವ ಉದ್ದೇಶವಿತ್ತು?

    Answer

    ಬ್ರಿಟೀಷ್ ಅಧಿಕಾರಿಗೆ ಕೊಪ್ಪಳ ಕೋಟೆಯನ್ನು ವಶಪಡಿಸಿಕೊಳ್ಳುವ ಉದ್ದೇಶವಿತ್ತು.

  2. ೨. ಭೀಮರಾಯ ಎಂತಹ ಯುದ್ಧದಲ್ಲಿ ಪರಿಣಿತನಾಗಿದ್ದನು?

    Answer

    ಭೀಮರಾಯ ಗೆರಿಲ್ಲಾ ಯುದ್ಧದಲ್ಲಿ ಪರಿಣಿತನಾಗಿದ್ದನು.

  3. ೩. ಕೊಪ್ಪಳದ ಕೋಟೆಯಲ್ಲಿ ಬ್ರಿಟೀಷರಿಗೆ ವಿಶ್ವಾಸಘಾತ ಮಾಡಿದವರು ಯಾರು?

    Answer

    ಕೊಪ್ಪಳದ ಕೋಟೆಯಲ್ಲಿ ಬ್ರಿಟೀಷರಿಗೆ ಮಕ್ಕುಂ ಸಾಬ್ ಮತ್ತು ಅವನ ಸಂಗಡಿಗರು ವಿಶ್ವಾಸಘಾತ ಮಾಡಿದರು.

  4. ೪. ಭೀಮರಾಯನ ಹೋರಾಟದ ಗುರಿ ಏನಾಗಿತ್ತು?

    Answer

    ಭೀಮರಾಯನ ಹೋರಾಟದ ಗುರಿ ಬ್ರಿಟೀಷರನ್ನು ನಾಡಿನಿಂದ ಓಡಿಸಿ ಸ್ವಾತಂತ್ರ್ಯ ಪಡೆಯುವುದಾಗಿತ್ತು.

  5. ೫. ಬ್ರಿಟೀಷ್ ಅಧಿಕಾರಿ ಭೀಮರಾಯನಿಗೆ ಶರಣಾಗಲು ಯಾವ ಆಮಿಷ ಒಡ್ಡಿದನು?

    Answer

    ಬ್ರಿಟೀಷ್ ಅಧಿಕಾರಿ ಭೀಮರಾಯನಿಗೆ ಶರಣಾದರೆ ಕಂಪನಿ ಸರಕಾರ ಉತ್ತಮ ಸ್ಥಾನ ನೀಡಿ ಚೆನ್ನಾಗಿ ನಡೆಸಿಕೊಳ್ಳುವುದಾಗಿ ಆಮಿಷ ಒಡ್ಡಿದನು.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಬ್ರಿಟೀಷ್ ಅಧಿಕಾರಿ ಭೀಮರಾಯನ ಶಕ್ತಿ ಸಾಮರ್ಥ್ಯಗಳ ಬಗ್ಗೆ ಏನೆಂದು ಹೇಳಿದನು?

    Answer

    ಬ್ರಿಟೀಷ್ ಅಧಿಕಾರಿಯು ಭೀಮರಾಯನನ್ನು ಸಿಡಿಲು ಮರಿ ಎಂದು ಬಣ್ಣಿಸಿದನು. ಅವನು ಗೆರಿಲ್ಲಾ ಯುದ್ಧದಲ್ಲಿ ಪರಿಣಿತನಾಗಿದ್ದು, ಹಿಡಿಯಲು ಹೋದರೆ ಸಿಡಿಯುತ್ತಾನೆ ಮತ್ತು ತನ್ನವರನ್ನು ಬಾಂಬುಗಳಂತೆ ಸ್ಫೋಟಿಸುತ್ತಾನೆ ಎಂದನು. ಅಲ್ಲದೆ ಅವನು ಗುಂಡೇಟಿನ ಗುರಿಕಾರನೆಂದೂ ಹೇಳಿದನು.

  2. ೨. ಭೀಮರಾಯನು ತನ್ನ ಸೇನಾನಿಗಳಿಗೆ ಮೆಚ್ಚುಗೆಯಿಂದ ಹೇಳಿದ ಮಾತುಗಳಾವುವು?

    Answer

    ಭೀಮರಾಯನು ತನ್ನ ಸೇನಾನಿಗಳ ಸಾಹಸವನ್ನು ಮೆಚ್ಚಿ, ಅವರು ಬ್ರಿಟೀಷರನ್ನು ಸೋಲಿಸಿ ಕೊಪ್ಪಳ ಕೋಟೆಯನ್ನು ವಶಪಡಿಸಿಕೊಂಡು ಗೆಲುವಿನ ಬಾವುಟ ಹಾರಿಸಿದ್ದಾರೆ ಎಂದು ಹೊಗಳಿದನು.

  3. ೩. ಭೀಮರಾಯನು ತನ್ನ ಸೇನಾನಿಗಳಿಗೆ ಏನೆಂದು ಹುರಿದುಂಬಿಸಿದನು?

    Answer

    ಭೀಮರಾಯನು ಸೇನಾನಿಗಳಿಗೆ ಇದು ಹೋರಾಟದ ಪ್ರಾರಂಭವಷ್ಟೇ ಎಂದು ಹೇಳಿ, ಬ್ರಿಟೀಷರು ನಾಡು ಬಿಡುವವರೆಗೂ ಕೆಚ್ಚೆದೆಯಿಂದ ಹೋರಾಡಬೇಕೆಂದು ಹುರಿದುಂಬಿಸಿದನು. ಸ್ವಾತಂತ್ರ್ಯವು ಬೇಡಿದರೆ ಸಿಗುವುದಿಲ್ಲ, ಛಲ ಬಿಡದೆ ಹೋರಾಡಿ ಸ್ವಾತಂತ್ರ್ಯ ಪಡೆಯಬೇಕೆಂದು ಪ್ರೇರೇಪಿಸಿದನು.

  4. ೪. ಬ್ರಿಟೀಷ್ ಅಧಿಕಾರಿ ಕೋಟೆಯನ್ನು ಮುತ್ತಿಗೆ ಹಾಕಿ ಭೀಮರಾಯನಿಗೆ ಏನೆಂದು ಎಚ್ಚರಿಕೆ ಕೊಟ್ಟನು?

    Answer

    ಬ್ರಿಟೀಷ್ ಅಧಿಕಾರಿಯು ಭೀಮರಾಯನಿಗೆ ಮೂರು ಗಂಟೆಗಳ ಒಳಗೆ ಕೋಟೆಯನ್ನು ಖಾಲಿ ಮಾಡಿ ಶರಣಾಗದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುವುದೆಂದು ಎಚ್ಚರಿಕೆ ನೀಡಿದನು.

  5. ೫. ಬ್ರಿಟೀಷ್ ಅಧಿಕಾರಿಯು ಶರಣಾಗು ಎಂದು ಹೇಳಿದ ಮಾತಿಗೆ ಭೀಮರಾಯನು ಏನೆಂದು ಪ್ರತಿಕ್ರಿಯಿಸಿದನು?

    Answer

    ಭೀಮರಾಯನು ಶರಣಾಗುವ ಮಾತಿಗೆ ಕೋಪಗೊಂಡು, ತನ್ನ ಸಂಗಾತಿಗಳನ್ನು ಕೊಂದ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರತಿಕ್ರಿಯಿಸಿದನು.

  6. ೬. ಭೀಮರಾಯನು ಸಾವಿನ ಸಂದರ್ಭದಲ್ಲಿ ಬ್ರಿಟೀಷರ ವಿರುದ್ಧ ಏನೆಂದು ಬಂಡಾಯ ಸಾರಿದನು?

    Answer

    ಭೀಮರಾಯನು ತಾನು ಸತ್ತರೂ ತಾವು ಹುಟ್ಟುಹಾಕಿದ ಬಂಡಾಯ ಸಾಯುವುದಿಲ್ಲವೆಂದೂ, ಜನರು ದಾಸ್ಯದಿಂದ ಮುಕ್ತರಾಗುವವರೆಗೂ ಹೋರಾಟ ನಡೆಸಿ ಬ್ರಿಟೀಷರನ್ನು ಓಡಿಸಿ ಭಾರತಮಾತೆಯನ್ನು ಸ್ವತಂತ್ರಗೊಳಿಸುವರೆಂದು ಬಂಡಾಯ ಸಾರಿದನು.

ಇ) ಕೆಳಗಿನ ಹೇಳಿಕೆಗಳನ್ನು ಯಾರು ಯಾರಿಗೆ ಹೇಳಿದ್ದಾರೆ? ತಿಳಿಸಿರಿ.

  1. ೧. “ಅವನು ಗುಂಡೇಟಿನ ಗುರಿಕಾರ.”

    Answer

    ಈ ಮಾತನ್ನು ಬ್ರಿಟೀಷ್ ಅಧಿಕಾರಿಯು ಹ್ಯೂಜಿಸ್‌ಗೆ ಹೇಳಿದನು.

  2. ೨. “ದಾಸ್ಯದ ಅರಮನೆಗಿಂತ ಸ್ವಾತಂತ್ರ್ಯದ ಸೆರೆಮನೆಯೇ ಲೇಸು.”

    Answer

    ಈ ಮಾತನ್ನು ಭೀಮರಾಯನು ಬ್ರಿಟೀಷ್ ಅಧಿಕಾರಿಗೆ ಹೇಳಿದನು.

  3. ೩. “ಬ್ರಿಟೀಷರು ನಮ್ಮ ನಾಡು ಬಿಟ್ಟು ತೊಲಗುವವರೆಗೂ ಹೋರಾಡೋಣ.”

    Answer

    ಈ ಮಾತನ್ನು ಭೀಮರಾಯನು ತನ್ನ ಸೇನಾನಿಗಳಿಗೆ ಹೇಳಿದನು.

  4. ೪. “ನಮ್ಮ ಸಂಗಾತಿಗಳ್ನ ಕೊಂದ ನಿಮ್ಮನ್ನ ಸುಮ್ಮ ಬಿಡೊದಿಲ್ಲ!”

    Answer

    ಈ ಮಾತನ್ನು ಭೀಮರಾಯನು ಬ್ರಿಟೀಷ್ ಅಧಿಕಾರಿಗೆ ಹೇಳಿದನು.

ಈ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

  1. ೧. ಸ್ವಾತಂತ್ರ್ಯ ಅನ್ನೋದು _______________ ಅಂತ ಬೇಡಿದರೆ ಸಿಗುವ ವಸ್ತು ಅಲ್ಲ.

    Answer

    ಸ್ವಾತಂತ್ರ್ಯ ಅನ್ನೋದು ದೇಹಿ ಅಂತ ಬೇಡಿದರೆ ಸಿಗುವ ವಸ್ತು ಅಲ್ಲ.

  2. ೨. ದೀಪ ಬೆಳಗೋದು ಇತರರಿಗೆ _______________ ಎಂದು.

    Answer

    ದೀಪ ಬೆಳಗೋದು ಇತರರಿಗೆ ಬೆಳಕಾಗಲಿ ಎಂದು.

  3. ೩. ಗೆದ್ದರೆ ಸ್ವಾತಂತ್ರ್ಯ, ಸತ್ತರೆ _______________

    Answer

    ಗೆದ್ದರೆ ಸ್ವಾತಂತ್ರ್ಯ, ಸತ್ತರೆ ವೀರಸ್ವರ್ಗ.

  4. ೪. ದಾಸ್ಯದ ಅರಮನೆಗಿಂತ _______________ ಸೆರೆಮನೆಯೇ ಲೇಸು.

    Answer

    ದಾಸ್ಯದ ಅರಮನೆಗಿಂತ ಸ್ವಾತಂತ್ರ್ಯದ ಸೆರೆಮನೆಯೇ ಲೇಸು.

III. ಭಾಷಾಭ್ಯಾಸ :

ಅ) ಕೆಳಗಿನವುಗಳಿಗೆ ವಿರುದ್ಧ ಪದಗಳನ್ನು ಬರೆಯಿರಿ.

  1. ೧. ಸುಲಭ X _______________ ೨. ಗೆಲುವು X _______________

    Answer

    ಸುಲಭ X ಕಠಿಣ ಗೆಲುವು X ಸೋಲು

  2. ೩. ಪ್ರಾರಂಭ X _______________ ೪. ಸ್ವಾತಂತ್ರ್ಯ X _______________

    Answer

    ಪ್ರಾರಂಭ X ಅಂತ್ಯ ಸ್ವಾತಂತ್ರ್ಯ X ದಾಸ್ಯ

  3. ೫. ಪರ X _______________ ೬. ಹಿಂದಕ್ಕೆ X _______________

    Answer

    ಪರ X ಸ್ವ ಹಿಂದಕ್ಕೆ X ಮುಂದಕ್ಕೆ

ಆ) ಇಲ್ಲಿ ನೀಡಿರುವ ಪದಗಳನ್ನು ಗ್ರಾಂಥಿಕ ರೂಪದಲ್ಲಿ ಬರೆಯಿರಿ.

  1. ಉದಾಹರಣೆ : ಕ್ವಾಟೆ - ಕೋಟೆ

  2. ೧. ಐತಿ - _______________ ೨. ಆದ್ವು - _______________

    Answer

    ಐತಿ - ಇದೆ ಆದ್ವು - ಆದವು

  3. ೩. ಆಗೈತಿ - _______________ ೪. ಬರದಂಗ - _______________

    Answer

    ಆಗೈತಿ - ಆಗಿದೆ ಬರದಂಗ - ಬರದಂತೆ

  4. ೫. ಬ್ಯಾಡ - _______________ ೬. ತಗೊಂಡೇ - _______________

    Answer

    ಬ್ಯಾಡ - ಬೇಡ ತಗೊಂಡೇ - ತೆಗೆದುಕೊಂಡೇ

IV. ಚಟುವಟಿಕೆಗಳು :

  1. ೧. ಐತಿಹಾಸಿಕ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ನಾಟಕಗಳನ್ನು ಸಂಗ್ರಹಿಸಿ ಓದಿರಿ.

  2. ೨. ಪ್ರಸ್ತುತ ನಾಟಕವನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಪಾತ್ರಗಳನ್ನು ಹಂಚಿಕೊಂಡು ಅಭಿನಯಿಸಿರಿ.

V. ಸೈದ್ಧಾಂತಿಕ ವ್ಯಾಕರಣ :

  1. **ಕ್ರಿಯಾಪದ :** ಕ್ರಿಯೆಯನ್ನು ಸೂಚಿಸುವ ಪದವೇ “ಕ್ರಿಯಾಪದ”. ಕ್ರಿಯಾಪದದ ಮೂಲ ರೂಪವೇ ‘ಧಾತು’. ಈ ಕೆಳಗಿನ ಉದಾಹರಣೆಗಳಲ್ಲಿ ಗೆರೆ ಎಳೆದಿರುವ ಪದಗಳನ್ನು ಗಮನಿಸಿ.

  2. ೧. ಕಾವಲುಗಾರ ಕೋಟೆಯನ್ನು **ಕಾಯುತ್ತಿದ್ದಾನೆ**.

  3. ೨. ಅಮ್ಮ ಅಡುಗೆ **ಮಾಡುವಳು**.

  4. ೩. ಬಂಡಾಯದ ಕಹಳೆ **ಮೊಳಗಿತ್ತು**.

  5. ಮೇಲಿನ ಉದಾಹರಣೆಗಳಲ್ಲಿ ಕಾಯುತ್ತಿದ್ದಾನೆ, ಮಾಡುವಳು, ಮೊಳಗಿತ್ತು ಇವುಗಳು ಕ್ರಿಯಾಪದಗಳು. ಕಾಯುತ್ತಿದ್ದಾನೆ ಎನ್ನುವ ಕ್ರಿಯಾಪದದ ಮೂಲರೂಪ ‘ಕಾಯು’. ಅದೇ ರೀತಿ ಮಾಡುವಳು ಎನ್ನುವ ಕ್ರಿಯಾಪದದ ಮೂಲರೂಪ ‘ಮಾಡು’. ಮೊಳಗಿತ್ತು ಎನ್ನುವುದರ ಮೂಲರೂಪ ‘ಮೊಳಗು’ ಇವುಗಳನ್ನು ಧಾತು ಎನ್ನುತ್ತೇವೆ.

ಕೆಳಗಿನ ಕ್ರಿಯಾಪದಗಳಿಗೆ ಧಾತು ಪದ ಬರೆಯಿರಿ.

  1. ಕ್ರಿಯಾಪದ ಧಾತು

  2. ೧. ಮಾಡುತ್ತಾನೆ _______________

    Answer

    ಮಾಡುತ್ತಾನೆ - ಮಾಡು

  3. ೨. ಓಡುತ್ತದೆ _______________

    Answer

    ಓಡುತ್ತದೆ - ಓಡು

  4. ೩. ಹೋದಳು _______________

    Answer

    ಹೋದಳು - ಹೋಗು

  5. ೪. ತಿಂದನು _______________

    Answer

    ತಿಂದನು - ತಿನ್ನು

  6. * * * * *

Interactive Lab