CRECT Education

ಕಾಡಿನಲ್ಲೊಂದು ಸ್ಪರ್ಧೆ – ಅಭ್ಯಾಸ & ಆಟ

Description

Practice comprehension and fun language games from the forest competition story. Part 2 of the lesson.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ದಟ್ಟವಾದ ಕಾಡೊಂದರಲ್ಲಿ ಗಿಡಮರಗಳೆಲ್ಲಾ ಚಿಗುರೊಡೆದು ಕಂಗೊಳಿಸುತ್ತಿದ್ದವು. ಪ್ರಾಣಿಗಳೆಲ್ಲಾ ನಿರ್ಭಯವಾಗಿ ಓಡಾಡುತ್ತಿದ್ದವು. ನವಿಲುಗಳು ನರ್ತಿಸುತ್ತಿದ್ದವು. ಗಿಣಿಗುಬ್ಬಿಗಳು ಚಿಲಿ-ಪಿಲಿಯೆಂದು ಉಲಿಯುತ್ತಿದ್ದವು. ಎಲ್ಲಾ ಪ್ರಾಣಿ ಪಕ್ಷಿಗಳು ಸಂತೋಷದಿಂದ ಸಹಬಾಳ್ವೆ ನಡೆಸುತ್ತಿದ್ದವು. ಕಾಡಿನ ರಾಜನಾದ ಸಿಂಹವು ಕಾಡಿನ ದಿನಾಚರಣೆಯನ್ನು ಆಚರಿಸುವ ಬಗ್ಗೆ ಚರ್ಚಿಸಲು ಪ್ರಾಣಿ ಪಕ್ಷಿಗಳ ಸಭೆ ಕರೆಯಿತು. ಎಲ್ಲ ಪ್ರಾಣಿಗಳೂ ಸಭೆಗೆ ಬಂದು ಸೇರಿದವು. ಸಿಂಹ : (ಕಾಡಿನ ಎಲ್ಲ ಪ್ರಾಣಿಗಳನ್ನು ಕುರಿತು) ನಾವೆಲ್ಲಾ ಕಾಡಿನ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸೋಣವೇ? ಎಲ್ಲ ಪ್ರಾಣಿಗಳು ಒಕ್ಕೊರಲಿನಿಂದ ಹೌದು ಹೌದು ಎಂದವು ಆನೆ : ಆಯ್ತು, ಆದರೆ ಈ ವರ್ಷ ವಿಶೇಷವಾಗಿ ಆಚರಿಸೋಣ. ಕಾಗಕ್ಕ : ವಿಶೇಷವಾಗಿ ಎಂದರೆ ಹೇಗೆ? ಆನೆ : ಕಾಗಕ್ಕ ವಿಶೇಷವಾಗಿ ಎಂದರೆ, ಆಟಗಳ ಸ್ಪರ್ಧೆ ನಡೆಸುವುದು. ಗೆದ್ದವರಿಗೆ ಇನಾಮು ಕೊಡುವುದು. ಮೊಲ : ಇಲ್ಲಾ! ಇಲ್ಲಾ! ಈ ಬಾರಿ ಆಟಗಳ ಬದಲು ಆಶುಭಾಷಣ ಸ್ಪರ್ಧೆ ನಡೆಸೋಣ. ಆನೆ : ಏಕೆ? ಹಿಂದೆ ಆಮೆಯ ಜೊತೆ ಓಟದ ಸ್ಪರ್ಧೆಯಲ್ಲಿ ಸೋತಿದ್ದಕ್ಕೆ ಭಯವೇನು? ಮೊಲ : ಇಲ್ಲಪ್ಪ! ನನಗ್ಯಾಕೆ ಭಯ. ಆಶುಭಾಷಣ ಸ್ಪರ್ಧೆಯಿಂದ ಗೊತ್ತಿಲ್ಲದ ಎಷ್ಟೋ ವಿಚಾರಗಳನ್ನು ನಾವೂ ತಿಳಿದುಕೊಳ್ಳಬಹುದು ಎಂದೆನಷ್ಟೇ. ನರಿ : ಆಶುಭಾಷಣ ಸ್ಪರ್ಧೆ! ಹಾಗೆಂದರೇನು? ಮೊಲ : ಓ! ನರಿರಾಯ ನಿನಗೆ ಅಷ್ಟು ಗೊತ್ತಿಲ್ಲವಾ? ಆಶುಭಾಷಣ ಸ್ಪರ್ಧೆ ಎಂದರೆ ಸ್ಥಳದಲ್ಲಿಯೇ ಸೂಚಿಸಿದ ವಿಷಯದ ಬಗ್ಗೆ ಭಾಷಣ ಮಾಡುವುದು. ಸಿಂಹ : ಸರಿ! ಹಾಗಾದರೆ ನಾಳೆ ಸ್ಪರ್ಧೆಗಳನ್ನು ನಡೆಸೋಣ, ಎಲ್ಲರೂ ನಾಳೆ ಇಲ್ಲಿಯೇ ಸೇರೋಣ. (ಮರುದಿನ ಎಲ್ಲಾ ಪ್ರಾಣಿಗಳು ಒಂದೆಡೆ ಸೇರಿದವು. ಆಶುಭಾಷಣ ಸ್ಪರ್ಧೆಗೆ ತೀರ್ಪುಗಾರರನ್ನಾಗಿ ಕೋಗಿಲೆ, ಕೋತಿ ಮತ್ತು ತೋಳವನ್ನು ಆಯ್ಕೆ ಮಾಡಲಾಯಿತು. ತೀರ್ಪುಗಾರರು ಸ್ಪರ್ಧೆ ಪ್ರಾರಂಭವಾಗುವುದಕ್ಕೆ ಮುನ್ನ ವಿಷಯಗಳನ್ನು ಚೀಟಿಯಲ್ಲಿ ಬರೆದು ಡಬ್ಬಿಯಲ್ಲಿ ಹಾಕಿದರು. ಸ್ಪರ್ಧೆ ಪ್ರಾರಂಭವಾಯಿತು). ತೋಳ : ಒಬ್ಬೊಬ್ಬರಾಗಿ ಬನ್ನಿ. ಡಬ್ಬಿಯಿಂದ ಒಂದು ಚೀಟಿ ತೆಗೆದುಕೊಂಡು ಅದರಲ್ಲಿರುವ ವಿಷಯವನ್ನು ಕುರಿತು ಮಾತನಾಡಿರಿ. ಪ್ರತಿಯೊಬ್ಬರಿಗೂ ಸಮಯ ಐದು ನಿಮಿಷಗಳು ಮಾತ್ರ ಎಂದು ಸ್ಪಷ್ಟಪಡಿಸಿತು. ಅಲ್ಲಿದ್ದ ಪ್ರಾಣಿ ಪಕ್ಷಿಗಳಲ್ಲಿ ಕೆಲವು ಸರದಿಯ ಪ್ರಕಾರ ಬಂದು ಚೀಟಿ ತೆಗೆದುಕೊಂಡು ಮಾತನಾಡಲು ಪ್ರಾರಂಭಿಸಿದವು. ಸೊಂಡಿಲು ಹಾಗೂ ಬಾಲವನ್ನು ಅಲ್ಲಾಡಿಸುತ್ತಾ ಘೀಳಿಡುತ್ತಾ ಬಂದ ಆನೆ ಗಂಟಲನ್ನು ಸರಿಪಡಿಸಿಕೊಂಡು ಡಬ್ಬಿಯಲ್ಲಿ ಸೊಂಡಿಲನ್ನು ಹಾಕಿ ಚೀಟಿಯನ್ನು ಎತ್ತಿಕೊಂಡಿತು. ಆನೆ : ಅಬ್ಬಾ! ಚೀಟಿಯಲ್ಲಿ ನನಗೆ ಇಷ್ಟವಾದ ವಿಷಯ 'ರೇಡಿಯೊ' ಬಂದಿದೆ. ರೇಡಿಯೊ ಒಂದು ಸಂಪರ್ಕ ಸಾಧನ. ರೇಡಿಯೋ ಕಂಡುಹಿಡಿದವರು ಮಾರ್ಕೋನಿ. ಇದರಲ್ಲಿ ಚಿಂತನ, ಕೃಷಿ ಸಮಾಚಾರ, ಶಿಕ್ಷಣವಾರ್ತೆ, ಕ್ರೀಡೆ, ಸಂದರ್ಶನ, ರಾಜಕೀಯ, ಮನರಂಜನೆ, ಚಿತ್ರಗೀತೆ, ವಾರ್ತೆ ಇತ್ಯಾದಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ದೇಶವಿದೇಶದ ಸಮಾಚಾರವನ್ನು ತಕ್ಷಣವೇ ಇದರ ಮೂಲಕ ತಿಳಿಯಬಹುದು. ಇದರಲ್ಲಿ ಪ್ರಸಾರವಾಗುವ ಚಿನ್ನರಚುಕ್ಕಿ, ಚುಕ್ಕಿಚಿನ್ನ ಮತ್ತು ಕೇಳಿ-ಕಲಿ ಕಾರ್ಯಕ್ರಮ ಎಂದರೆ ನನಗೆ ಅಚ್ಚುಮೆಚ್ಚು. ವೇಗವಾಗಿ ಓಡಿ ಬಂದ ಚಿರತೆಯು ಚೀಟಿಯನ್ನು ಎತ್ತಿಕೊಂಡಿತು. ಚಿರತೆ : ನನಗೆ ರೈಲು ವಿಷಯ ಸಿಕ್ಕಿದೆ. ಓಹೋ! ನನಗಿಂತ ವೇಗವಾಗಿ ಚಲಿಸುವ ಉದ್ದವಾದ ವಾಹನವಿದು. ಇದು ಕಂಬಿಗಳ ಮೇಲೆ ಮಾತ್ರ ಚಲಿಸುತ್ತದೆ. ರೈಲಿನಲ್ಲಿ ಒಮ್ಮೆಗೇ ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದು. ಸರಕುಗಳನ್ನು ಸಾಗಿಸಬಹುದು. ರೈಲಿನಲ್ಲಿ ಶೌಚಾಲಯ, ಕುಡಿಯುವ ನೀರು, ಊಟ, ತಿಂಡಿ, ಮಲಗುವ ವ್ಯವಸ್ಥೆ ಇರುತ್ತದೆ. ಈಗ ರೈಲು ಪ್ರಯಾಣ ಸುಖಕರ ಹಾಗೂ ಅದರ ದರವೂ ಕಡಿಮೆ ಎಂದು ಹೇಳಿ ಕುಳಿತುಕೊಂಡಿತು. ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಗರಿ ಬಿಚ್ಚಿ ತನ್ನ ಸೌಂದರ್ಯವನ್ನು ಬಿಂಕದಿಂದ ಪ್ರದರ್ಶಿಸಿ ನವಿಲು ಎಲ್ಲರ ಕಣ್ಣನ ಸೆಳೆಯಿತು. ಕೊಕ್ಕಿನಿಂದ ಚೀಟಿ ತೆಗೆದುಕೊಂಡು, ವಿಮಾನದ ಬಗ್ಗೆ ಹೀಗೆ ಹೇಳಿತು. ನವಿಲು : ಮನುಷ್ಯ ಹಕ್ಕಿಗಳು ಹಾರುವುದನ್ನು ಕಂಡು ತಾನೂ ಹಾರಬೇಕೆಂದು ಈ ವಿಮಾನವನ್ನು ಕಂಡುಹಿಡಿದನು. ವಿಮಾನವು ವಾಯುಮಾರ್ಗದಲ್ಲಿ ಚಲಿಸುತ್ತದೆ. ಇದರ ಮೂಲಕ ಕಡಿಮೆ ಸಮಯದಲ್ಲಿ ಬಹಳ ದೂರ ಪ್ರಯಾಣಿಸಬಹುದು. ಜನರು ದೇಶವಿದೇಶಗಳಿಗೆ ಹೋಗುವಾಗ ಹೆಚ್ಚಾಗಿ ವಿಮಾನದಲ್ಲಿಯೇ ಸಂಚರಿಸುತ್ತಾರೆ. ನನಗೆ ವಿಮಾನ ಪ್ರಯಾಣವೆಂದರೆ ತುಂಬಾ ಇಷ್ಟ. ಆದರೆ ಇದರ ದರ ದುಬಾರಿ ಎಂಬುದೇ ನನಗೆ ಬೇಸರವಾಗಿದೆ. (ಎನ್ನುತ್ತಾ ವೈಯಾರ ಮಾಡುತ್ತಾ ವೇದಿಕೆಯಿಂದ ಕೆಳಗೆ ಇಳಿದು ಬಂದಿತು. ಕುಣಿ ಕುಣಿಯುತ್ತ ಬಂದ ಕರಡಿಯು ಸಭಿಕರಿಗೆಲ್ಲಾ ಕೈಮುಗಿದು ಒಂದು ಚೀಟಿಯನ್ನು ಎತ್ತಿಕೊಂಡಿತು.) ಕರಡಿ : ನನಗೆ ಸಿಕ್ಕ ವಿಷಯ ಹಿಮಾಲಯ ಪರ್ವತ ಶ್ರೇಣಿ. ಇಲ್ಲಿ ಅತ್ಯಂತ ಎತ್ತರವಾದ ಪರ್ವತಗಳಿವೆ. ಭಾರತದ ಉತ್ತರ ಭಾಗದಲ್ಲಿದ್ದು ಹಿಮದಿಂದ ಕೂಡಿವೆ. ಶತ್ರುಗಳು ನಮ್ಮ ದೇಶಕ್ಕೆ ಬರದಂತೆ ಇವು ತಡೆದಿವೆ. ಇಲ್ಲಿ ಹುಟ್ಟುವ ಗಂಗಾ, ಯಮುನಾ, ಬ್ರಹ್ಮಪುತ್ರ ನದಿಗಳು ಸದಾ ತುಂಬಿ ಹರಿಯುತ್ತವೆ. ತಕ್ಷಣ ತೀರ್ಪುಗಾರನಾದ ಕೋತಿಯು “ಕರಡಿ ಮಹಾರಾಯರೇ ನಿಮ್ಮ ಸಮಯ ಮುಗಿಯಿತು” ಎಂದು ಎಚ್ಚರಿಸಿತು. ಸರಸರನೆ ಹರಿಯುತ್ತಾ ಹಾವೊಂದು ಬಂದಿತು. ಹೆಡೆ ಬಿಚ್ಚಿ “ಶ್” ಎನ್ನುತ್ತಾ ಎಲ್ಲರನ್ನು ಆಕರ್ಷಿಸಿತು. ಬಗ್ಗಿ ತಾನೊಂದು ಚೀಟಿಯನ್ನು ತೆಗೆದುಕೊಂಡು ಸುರುಳಿ ಬಿಚ್ಚಿತು. ಹಾವು : ಬ್ಯಾಂಕ್ ವಿಷಯ ನನಗೆ ಸಿಕ್ಕಿದೆ. ಎಲ್ಲರೂ ಬ್ಯಾಂಕ್‌ನಲ್ಲಿ ಹಣದ ವ್ಯವಹಾರ ಮಾಡುತ್ತೇವೆ. 'ಹನಿ ಹನಿಗೂಡಿದರೆ ಹಳ್ಳ, ತೆನೆ ತೆನೆಗೂಡಿದರೆ ಬಳ್ಳ' ಎಂಬಂತೆ ಉಳಿತಾಯ ಮಾಡಬೇಕು. ಹಣ ಇರಿಸಲು, ಬೇಕಾದಾಗ ತೆಗೆದುಕೊಳ್ಳಲು ಈಗ ಉತ್ತಮ ವ್ಯವಸ್ಥೆಯನ್ನು ಎಲ್ಲಾ ಬ್ಯಾಂಕಿನವರೂ ಮಾಡಿದ್ದಾರೆ. ನಮ್ಮ ಖಾತೆಯಲ್ಲಿರುವ ಹಣವನ್ನು ಅವಶ್ಯಕತೆ ಇದ್ದಾಗಲೆಲ್ಲಾ ಬ್ಯಾಂಕಿನಿಂದ ಅಥವಾ ಎ.ಟಿ.ಎಂ. ಮೂಲಕ ತೆಗೆದುಕೊಳ್ಳಬಹುದು. ಎ.ಟಿ.ಎಂ. ವ್ಯವಸ್ಥೆಯು ಹೆಚ್ಚಿನ ಬ್ಯಾಂಕ್‌ಗಳಲ್ಲಿ ಲಭ್ಯವಿದೆ. ಗೂಗಲ್ ಪೇ, ಫೋನ್ ಪೇ ಇರುವುದರಿಂದ ತಕ್ಷಣವೇ ಹಣ ವರ್ಗಾವಣೆ ಮಾಡಬಹುದು ಎಂದು ಹೇಳಿ ಕೆಳಗಿಳಿಯಿತು. ರೆಕ್ಕೆ ಬಿಚ್ಚಿ ಹಾರುತ್ತಾ ಕೆಂಪು ಮೂತಿಯ ಗಿಳಿಯು ಕೊಕ್ಕಿನಿಂದ ಚೀಟಿಯನ್ನು ಹೆಕ್ಕಿತು. ಮುದ್ದು ಮುದ್ದಾಗಿ ಹೀಗೆ ಮಾತನಾಡತೊಡಗಿತು. ಗಿಳಿ : 'ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ನ' ಎಂಬಂತೆ ನನಗೆ 'ಮೊಬೈಲು' ವಿಷಯ ಬಂದಿದೆ. ಈಗ ಎಲ್ಲರ ಕೈಯಲ್ಲಿ ಇರುವುದು ಮೊಬೈಲು. ಇದರ ಮೂಲಕ ಜಗತ್ತಿನ ಮೂಲೆಮೂಲೆಯ ಜನರು ವಿಚಾರ ವಿನಿಮಯ ಮಾಡಿಕೊಳ್ಳಬಹುದು. ವಿಚಾರ ವಿನಿಮಯದ ಜೊತೆಗೆ ಸಂದೇಶಗಳನ್ನೂ ಕಳುಹಿಸಬಹುದು. ಇವುಗಳಲ್ಲದೆ ಇದರಿಂದ ಛಾಯಾಚಿತ್ರ ತೆಗೆಯಬಹುದು, ಲೆಕ್ಕ ಮಾಡಬಹುದು. ದಿನಾಂಕ ತಿಳಿಯಬಹುದು, ದೂರವಾಣಿ ಸಂಖ್ಯೆಗಳನ್ನು ದಾಖಲಿಸಿಕೊಳ್ಳಬಹುದು, ಹಣದ ವ್ಯವಹಾರವನ್ನು ಮೊಬೈಲ್‌ನಲ್ಲಿ ಮಾಡಬಹುದು. ಈಗ ಅಂಗೈನಲ್ಲಿರುವ ಸಣ್ಣ ಕಂಪ್ಯೂಟರ್‌ನಂತೆ ಆಗಿದೆ. ನರಿ : ಅಬ್ಬಾ! ಮೊಲವು ತಿಳಿಸಿದಂತೆ ಈ ಆಶುಭಾಷಣ ಸ್ಪರ್ಧೆ ಮೂಲಕ ನಾವೆಲ್ಲಾ ಬಹಳ ವಿಷಯಗಳನ್ನು ತಿಳಿದುಕೊಂಡೆವು. ಎಲ್ಲರೂ ತುಂಬಾ ಅದ್ಭುತವಾಗಿ ಮಾತನಾಡಿದ್ದೀರಿ. ಈ ಸ್ಪರ್ಧೆ ನಡೆಸಲು ಸಹಕರಿಸಿದವರಿಗೆಲ್ಲಾ ಧನ್ಯವಾದಗಳು. ಸಿಂಹ : ಓ ನನ್ನ ಬಂಧುಗಳೆ, ನೀವೆಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಿ. ಇದು ನನಗೆ ಹರ್ಷ ತಂದಿದೆ. ನಾಳೆ ಹೊರಾಂಗಣದಲ್ಲಿ ಕಬಡ್ಡಿ ಆಟವನ್ನು ಆಡೋಣ. ಎರಡೂ ಸ್ಪರ್ಧೆಗಳಲ್ಲಿ ಗೆದ್ದವರಿಗೆ ದಿನಾಚರಣೆಯಂದು ಇನಾಮನ್ನು ನೀಡೋಣ.

"ಕೂಡಿ ಬಾಳಿದರೆ ಸ್ವರ್ಗ ಸುಖ" — "Living together in harmony is heavenly bliss."

ಪದಗಳ ಅರ್ಥword meanings

KannadaPronunciationMeaning
ಕಂಗೊಳಿಸುkan-go-li-suಹೊಳೆಯುವುದು (to shine/look beautiful)
ಉಲಿu-liಮಾತು, ಧ್ವನಿ (speech, sound)
ಸಹಬಾಳ್ವೆsa-ha-baal-veಒಟ್ಟಾಗಿ ಬಾಳುವುದು (living together harmoniously)
ಸ್ಪರ್ಧೆspar-dheಪೈಪೋಟಿ, ಮೇಲಾಟ (competition)
ಸರದಿsa-ra-diಸಾಲು (queue/turn)
ತೀರ್ಪುteer-puತೀರ್ಮಾನ (judgment/decision)
ಸರಕುsa-ra-kuವಸ್ತುಗಳು (goods)
ಸಾಗಾಣಿಕೆsaa-gaa-ni-keಸಾಗಿಸುವುದು (transportation)
ದರda-raಬೆಲೆ (price)
ವಾಯುvaa-yuಗಾಳಿ (air)
ವಿದೇಶvi-de-shaಹೊರದೇಶ (foreign country)
ಸಭಿಕರುsa-bhi-ka-ruಪ್ರೇಕ್ಷಕರು (audience)
ಎಚ್ಚರech-cha-raಜಾಗೃತಿ (awareness/alertness)
ಆಕರ್ಷಣೆaa-kar-sha-neಸೆಳೆತ (attraction)
ಲಭ್ಯlabh-yaದೊರಕಿದುದು, ಪ್ರಾಪ್ತಿ (available)
ವಿನಿಮಯvi-ni-ma-yaಪರಸ್ಪರ ಬದಲಾಯಿಸು (exchange)
ಸಂದೇಶsan-de-shaಸುದ್ದಿ, ಮಾಹಿತಿ (message, information)
ಬಂಧುban-dhuಸಂಬಂಧಿ (relative/friend)
ಸಹಕರಿಸುsa-ha-ka-ri-suಸಹಾಯ ನೀಡು (to cooperate/help)
ಇನಾಮುi-naa-muಬಹುಮಾನ (prize/reward)
ಧನ್ಯdhan-yaಪಾವನ (blessed/grateful)
ಸಮ್ಮತಿsam-ma-tiಒಪ್ಪಿಗೆ, ಅನುಮತಿ (agreement, permission)
ಹರ್ಷhar-shaಸಂತೋಷ (joy/happiness)
ಬಿಂಕbin-kaಗರ್ವ (pride)
ಅದ್ಭುತad-bhu-taಆಶ್ಚರ್ಯ (wonderful/amazing)

ಟಿಪ್ಪಣಿnotes

  • ಆಶುಭಾಷಣ : ಸ್ಥಳದಲ್ಲಿಯೇ ಸೂಚಿಸಿದ ವಿಷಯದ ಬಗ್ಗೆ ಭಾಷಣ ಮಾಡುವುದು.
  • ಚಿಂತನೆ : ಒಂದು ವಿಷಯದ ಬಗ್ಗೆ ಆಳವಾಗಿ ಆಲೋಚಿಸುವುದು.
  • ಬಳ್ಳ : ಒಂದು ಅಳತೆಯ ಪ್ರಮಾಣ.
  • ಎ.ಟಿ.ಎಂ. : ಆಟೋಮೇಟೆಡ್ ಟೆಲ್ಲರ್ ಮೆಷಿನ್. (Automated Teller Machine). ಬೇಕಾದಾಗ ನಮ್ಮ ಖಾತೆಯಲ್ಲಿರುವ ಹಣವನ್ನು ತೆಗೆದುಕೊಳ್ಳಲು ಅವಕಾಶ ಇರುವ ಯಂತ್ರ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. ೧. ಪ್ರಾಣಿ ಪಕ್ಷಿಗಳ ಸಭೆಯನ್ನು ಕರೆದವರು ಯಾರು?

    Answer

    ಪ್ರಾಣಿ ಪಕ್ಷಿಗಳ ಸಭೆಯನ್ನು ಕಾಡಿನ ರಾಜನಾದ ಸಿಂಹವು ಕರೆಯಿತು.

  2. ೨. ಕಾಡಿನಲ್ಲಿ ನಡೆದ ಸ್ಪರ್ಧೆ ಯಾವುದು?

    Answer

    ಕಾಡಿನಲ್ಲಿ ನಡೆದ ಸ್ಪರ್ಧೆ ಆಶುಭಾಷಣ ಸ್ಪರ್ಧೆ.

  3. ೩. ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದವರು ಯಾರು?

    Answer

    ತೀರ್ಪುಗಾರರಾಗಿ ಕೋಗಿಲೆ, ಕೋತಿ ಮತ್ತು ತೋಳ ಕಾರ್ಯ ನಿರ್ವಹಿಸಿದವು.

ಆ. ಮೂರು - ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ

  1. ೧. ರೇಡಿಯೋದಲ್ಲಿ ನಾವು ಪ್ರತಿದಿನ ಯಾವ ಯಾವ ಕಾರ್ಯಕ್ರಮ ಕೇಳಬಹುದು?

    Answer

    ರೇಡಿಯೋದಲ್ಲಿ ನಾವು ಪ್ರತಿದಿನ ಚಿಂತನ, ಕೃಷಿ ಸಮಾಚಾರ, ಶಿಕ್ಷಣವಾರ್ತೆ, ಕ್ರೀಡೆ, ಸಂದರ್ಶನ, ರಾಜಕೀಯ, ಮನರಂಜನೆ, ಚಿತ್ರಗೀತೆ ಮತ್ತು ವಾರ್ತೆ ಮುಂತಾದ ಕಾರ್ಯಕ್ರಮಗಳನ್ನು ಕೇಳಬಹುದು.

  2. ೨. ರೈಲು ಪ್ರಯಾಣದ ಬಗ್ಗೆ ಚಿರತೆಯ ಅಭಿಪ್ರಾಯವೇನು?

    Answer

    ರೈಲು ತನಗಿಂತ ವೇಗವಾಗಿ ಚಲಿಸುವ ಉದ್ದವಾದ ವಾಹನವೆಂದೂ, ಇದರಲ್ಲಿ ಒಮ್ಮೆಗೇ ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದು ಮತ್ತು ಸರಕುಗಳನ್ನು ಸಾಗಿಸಬಹುದು ಎಂದೂ ಚಿರತೆ ಅಭಿಪ್ರಾಯಪಟ್ಟಿತು. ಅಲ್ಲದೆ ರೈಲಿನಲ್ಲಿ ಶೌಚಾಲಯ, ಕುಡಿಯುವ ನೀರು, ಊಟ, ತಿಂಡಿ, ಮಲಗುವ ವ್ಯವಸ್ಥೆ ಇರುತ್ತದೆ ಹಾಗೂ ರೈಲು ಪ್ರಯಾಣ ಸುಖಕರ ಮತ್ತು ದರವೂ ಕಡಿಮೆ ಎಂದು ಹೇಳಿತು.

  3. ೩. ಆಶುಭಾಷಣ ಸ್ಪರ್ಧೆಯಲ್ಲಿ ಯಾರು ಯಾರು ಭಾಗವಹಿಸಿದ್ದರು?

    Answer

    ಆಶುಭಾಷಣ ಸ್ಪರ್ಧೆಯಲ್ಲಿ ಆನೆ, ಚಿರತೆ, ನವಿಲು, ಕರಡಿ, ಹಾವು ಮತ್ತು ಗಿಳಿ ಭಾಗವಹಿಸಿದ್ದವು.

ಇ. ಈ ಮಾತುಗಳನ್ನು ಯಾರು? ಯಾರಿಗೆ ಹೇಳಿದರು?

  1. ೧. "ಆಮೆಯ ಜೊತೆ ಓಟದ ಸ್ಪರ್ಧೆಯಲ್ಲಿ ಸೋತಿದ್ದಕ್ಕೆ ಭಯವೇನು?"

  2. ಯಾರು?

    Answer

    ಆನೆ

  3. ಯಾರಿಗೆ?

    Answer

    ಮೊಲಕ್ಕೆ

  4. ೨. "ಅಬ್ಬಾ! ಚೀಟಿಯಲ್ಲಿ ನನಗೆ ಇಷ್ಟವಾದ ವಿಷಯ 'ರೇಡಿಯೊ' ಬಂದಿದೆ".

  5. ಯಾರು?

    Answer

    ಆನೆ

  6. ಯಾರಿಗೆ?

    Answer

    ಸಭೆಗೆ (ಎಲ್ಲ ಪ್ರಾಣಿ ಪಕ್ಷಿಗಳಿಗೆ)

ಈ. ಕೊಟ್ಟಿರುವ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ

  1. ೧. ಸಂತೋಷದಿಂದ ನಡೆಸುತ್ತಿದ್ದವು ಸಹಬಾಳ್ವೆ ಪ್ರಾಣಿ ಪಕ್ಷಿಗಳು

    Answer

    ಪ್ರಾಣಿ ಪಕ್ಷಿಗಳು ಸಂತೋಷದಿಂದ ಸಹಬಾಳ್ವೆ ನಡೆಸುತ್ತಿದ್ದವು.

  2. ೨. ಕೇಳಿ ಕಲಿ ಕಾರ್ಯಕ್ರಮ ನನಗೆ ಎಂದರೆ ಅಚ್ಚುಮೆಚ್ಚು

    Answer

    ಕೇಳಿ-ಕಲಿ ಕಾರ್ಯಕ್ರಮ ಎಂದರೆ ನನಗೆ ಅಚ್ಚುಮೆಚ್ಚು.

  3. ೪. ತುಂಬಾ ಇಷ್ಟ ನನಗೆ ಪ್ರಯಾಣವೆಂದರೆ ವಿಮಾನ

    Answer

    ವಿಮಾನ ಪ್ರಯಾಣವೆಂದರೆ ನನಗೆ ತುಂಬಾ ಇಷ್ಟ.

ಉ. ಕೊಟ್ಟಿರುವ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ.

  1. ಸಹಬಾಳ್ವೆ -

    Model sentence

    ಸಹಬಾಳ್ವೆ: ನಾವು ನಮ್ಮ ತರಗತಿಯಲ್ಲಿ ಸಹಬಾಳ್ವೆಯಿಂದ ಇರುತ್ತೇವೆ.

  2. ಆಕರ್ಷಣೆ -

    Model sentence

    ಆಕರ್ಷಣೆ: ಚಿಟ್ಟೆಯ ಬಣ್ಣಗಳ ಆಕರ್ಷಣೆ ನನಗೆ ತುಂಬಾ ಇಷ್ಟ.

  3. ಸ್ಪರ್ಧೆ -

    Model sentence

    ಸ್ಪರ್ಧೆ: ನಮ್ಮ ಶಾಲೆಯಲ್ಲಿ ಓಟದ ಸ್ಪರ್ಧೆ ನಡೆಯಿತು.

  4. ಅಚ್ಚುಮೆಚ್ಚು -

    Model sentence

    ಅಚ್ಚುಮೆಚ್ಚು: ನನಗೆ ಮಾವಿನ ಹಣ್ಣು ಎಂದರೆ ಅಚ್ಚುಮೆಚ್ಚು.

  5. ತಮಾಷೆ -

    Model sentence

    ತಮಾಷೆ: ನನ್ನ ಗೆಳೆಯ ಅಣ್ಣಯ್ಯ ತುಂಬಾ ತಮಾಷೆ ಮಾಡುತ್ತಾನೆ.

ಊ. ಕೊಟ್ಟಿರುವ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ

  1. ೧. ಭಯ x

    Answer

    ಧೈರ್ಯ

  2. ೨. ಶತ್ರು x

    Answer

    ಮಿತ್ರ

  3. ೩. ಸಂತೋಷ x

    Answer

    ದುಃಖ

  4. ೪. ಮುಕ್ತಾಯ x

    Answer

    ಪ್ರಾರಂಭ

ಭಾಷಾ ಚಟುವಟಿಕೆ

ಅ. ನಾನು ಯಾರು? ಯೋಚಿಸಿ ಬರೆ.

  1. ಅ. ಜುಟ್ಟುಂಟು ನಾರಿಯಲ್ಲ

  2. ಕಣ್ಣುಂಟು ಮನುಷ್ಯನಲ್ಲ

  3. ನೀರುಂಟು ಬಾವಿಯಲ್ಲ

  4. ಹಾಗಾದರೆ ನಾನು ಯಾರು?

    Answer

    ತೆಂಗಿನಕಾಯಿ

  5. ಆ. ನಾಲ್ಕು ಕಂಬಗಳುಂಟು ದೇವಾಲಯವಲ್ಲ

  6. ಎರಡು ಮೊರಗಳುಂಟು ಕೇರಲಾಗುವುದಿಲ್ಲ

  7. ಒಂದು ಕಹಳೆಯುಂಟು ಊದಲಾಗುವುದಿಲ್ಲ

  8. ಹಾಗಾದರೆ ನಾನು ಯಾರು?

    Answer

    ಆನೆ

  9. ಇ. ಮರದ ಮೇಲಿರುವೆ ಪಕ್ಷಿಯಲ್ಲ

  10. ಹಸಿರಂಗಿ ತೊಟ್ಟಿರುವೆ ಬಾಲಕನಲ್ಲ

  11. ಕೆಂಪು ಮೂತಿಯುಂಟು ಗಿಳಿಯಲ್ಲ

  12. ಹಾಗಾದರೆ ನಾನು ಯಾರು?

    Answer

    ಗಿಳಿ

ಆ. ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ.

  1. ಮಾದರಿ : ರೈಲು + ಅನ್ನು = ರೈಲನ್ನು

  2. ನಾಡು + ಅನ್ನು =

    Answer

    ನಾಡನ್ನು

  3. ಕಾಡು + ಅನ್ನು =

    Answer

    ಕಾಡನ್ನು

  4. ಬಸ್ಸು + ಅನ್ನು =

    Answer

    ಬಸ್ಸನ್ನು

  5. ಮಾತು + ಅನ್ನು =

    Answer

    ಮಾತನ್ನು

ಇ. ಕೊಟ್ಟಿರುವ ವಾಕ್ಯದಲ್ಲಿ ಗೆರೆ ಹಾಕಿದ ಪದವನ್ನು ಗಮನವಿಟ್ಟು ಓದಿ.

  1. ೧. ಆನೆ ಘೀಳಿಟ್ಟಿತು.

  2. ೨. ನವಿಲು ನರ್ತಿಸಿತು.

  3. ೩. ಕರಡಿ ಕುಣಿಯಿತು.

  4. ೪. ಚಿರತೆ ವೇಗವಾಗಿ ಓಡಿತು.

  5. ೫. ಗಿಳಿ ರೆಕ್ಕೆ ಬಿಚ್ಚಿ ಹಾರುತ್ತಾ ಬಂದಿತು.

ಬಳಕೆ ಚಟುವಟಿಕೆ

  1. ೧. ಕೆಳಗಿನವುಗಳನ್ನು ಗಮನಿಸಿ. ಅನುಕೂಲ ಹಾಗೂ ಅನನುಕೂಲಗಳನ್ನು ಬರೆಯಿರಿ.

  2. (A table with two rows: 'ದೂರದರ್ಶನ' and 'ಮೊಬೈಲ್'. Each row has two columns: 'ಅನುಕೂಲ' with 2 numbered lines, and 'ಅನನುಕೂಲ' with 2 numbered lines to fill in).

  3. ೨. ನೀನು ಆಡುವ ಆಟಗಳನ್ನು ಚೌಕದಲ್ಲಿ ಬರೆಯಿರಿ.

  4. (A 3x3 grid of empty boxes to write game names in).

  5. ೩. ಆಟ ಆಡಲು ಸೂಚನೆ:

  6. (Title: ಈರುಳ್ಳಿ ಸಿಪ್ಪೆ ಆಟ)

  7. - ಈರುಳ್ಳಿಯ ಆಕಾರವನ್ನು ಕಾಗದದ ಹಾಳೆಯಿಂದ ಸಿದ್ಧಪಡಿಸುವುದು.

  8. - ಪ್ರತಿ ಹಾಳೆಯಲ್ಲೂ ನಿರ್ದಿಷ್ಟ ವಿಷಯ ಬರೆದು ಸುರುಳಿ ಸುತ್ತುವುದು.

  9. - ವೃತ್ತಾಕಾರದಲ್ಲಿ ಕುಳಿತ ಮಕ್ಕಳು ಈರುಳ್ಳಿಯನ್ನು ಒಬ್ಬರ ಕೈನಿಂದ ಮತ್ತೊಬ್ಬರ ಕೈಗೆ ಬದಲಾಯಿಸುತ್ತಿರಬೇಕು.

  10. - ಸೀಟಿ ಊದುವಾಗ ಯಾರ ಕೈಯಲ್ಲಿ ಈರುಳ್ಳಿ ಇರುತ್ತದೊ ಅವರು ಅದರ ಒಂದು ಸಿಪ್ಪೆ ಸುಲಿದು ಆ ಸಿಪ್ಪೆಯಲ್ಲಿದ್ದ ವಿಷಯದ ಬಗ್ಗೆ ಮಾತನಾಡಬೇಕು.

  11. ೪. ವಿವಿಧ ಮರ ಗಿಡಗಳ ಚಿತ್ರಗಳನ್ನು ಸಂಗ್ರಹಿಸಿ ಚಿತ್ರಕೋಶ ತಯಾರಿಸಿ.

  12. ೫. ಕಬಡ್ಡಿ ಆಟ ಹಾಗೂ ಆಟದ ನಿಯಮಗಳನ್ನು ಶಿಕ್ಷಕರಿಂದ ಕೇಳಿ ತಿಳಿದು ಸ್ನೇಹಿತರ ಜೊತೆ ಸೇರಿ ಆಡಿ ಆನಂದಿಸಿ.

  13. ೬. ಈ ಪಾಠದಲ್ಲಿ ಯಾವ ಪ್ರಾಣಿ ಅಥವಾ ಪಕ್ಷಿಯ ಮಾತು ನಿನಗಿಷ್ಟವಾಯಿತು? ಏಕೆ? ನಿನ್ನ ಸ್ನೇಹಿತರೊಂದಿಗೆ ಚರ್ಚಿಸು.

Interactive Lab

ಕಂಗೊಳಿಸುkan-go-li-suಹೊಳೆಯುವುದು (to shine/look beautiful)
ಉಲಿu-liಮಾತು, ಧ್ವನಿ (speech, sound)
ಸಹಬಾಳ್ವೆsa-ha-baal-veಒಟ್ಟಾಗಿ ಬಾಳುವುದು (living together harmoniously)
ಸ್ಪರ್ಧೆspar-dheಪೈಪೋಟಿ, ಮೇಲಾಟ (competition)
ಸರದಿsa-ra-diಸಾಲು (queue/turn)
ತೀರ್ಪುteer-puತೀರ್ಮಾನ (judgment/decision)
ಸರಕುsa-ra-kuವಸ್ತುಗಳು (goods)
ಸಾಗಾಣಿಕೆsaa-gaa-ni-keಸಾಗಿಸುವುದು (transportation)
ದರda-raಬೆಲೆ (price)
ವಾಯುvaa-yuಗಾಳಿ (air)
ವಿದೇಶvi-de-shaಹೊರದೇಶ (foreign country)
ಸಭಿಕರುsa-bhi-ka-ruಪ್ರೇಕ್ಷಕರು (audience)
ಎಚ್ಚರech-cha-raಜಾಗೃತಿ (awareness/alertness)
ಆಕರ್ಷಣೆaa-kar-sha-neಸೆಳೆತ (attraction)
ಲಭ್ಯlabh-yaದೊರಕಿದುದು, ಪ್ರಾಪ್ತಿ (available)
ವಿನಿಮಯvi-ni-ma-yaಪರಸ್ಪರ ಬದಲಾಯಿಸು (exchange)
ಸಂದೇಶsan-de-shaಸುದ್ದಿ, ಮಾಹಿತಿ (message, information)
ಬಂಧುban-dhuಸಂಬಂಧಿ (relative/friend)
ಸಹಕರಿಸುsa-ha-ka-ri-suಸಹಾಯ ನೀಡು (to cooperate/help)
ಇನಾಮುi-naa-muಬಹುಮಾನ (prize/reward)
ಧನ್ಯdhan-yaಪಾವನ (blessed/grateful)
ಸಮ್ಮತಿsam-ma-tiಒಪ್ಪಿಗೆ, ಅನುಮತಿ (agreement, permission)
ಹರ್ಷhar-shaಸಂತೋಷ (joy/happiness)
ಬಿಂಕbin-kaಗರ್ವ (pride)
ಅದ್ಭುತad-bhu-taಆಶ್ಚರ್ಯ (wonderful/amazing)