CRECT Education

Kannada Class 4 | Lesson 9: Women's Day Celebration (Learn the Story)

Description

Walk through the story of a school's Women's Day celebration, beat-by-beat, and learn key Kannada vocabulary from the lesson.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಅಂದು ಬೆಳಗ್ಗೆ ಶಾಲಾ ಬಯಲಿನಲ್ಲಿ ಮಕ್ಕಳೆಲ್ಲರೂ ಬಹಳ ಸಡಗರ ಸಂಭ್ರಮದಿಂದ ಓಡಾಡುತ್ತಿದ್ದರು. ಮುಖ್ಯಶಿಕ್ಷಕರು ಮಕ್ಕಳನ್ನು ಕುರಿತು "ಮಕ್ಕಳೇ! ಎಲ್ಲರೂ ಬೇಗ ಇಲ್ಲಿ ಬನ್ನಿರಿ" ಎಂದರು. ಮುಖ್ಯಶಿಕ್ಷಕರು : ಮಕ್ಕಳೇ, ಈ ದಿನದ ವಿಶೇಷ ನಿಮಗೀಗಾಗಲೇ ತಿಳಿದಿದೆಯಲ್ಲವೇ? ಮಕ್ಕಳು : (ಒಟ್ಟಾಗಿ) ಹೌದು ಗುರುಗಳೇ. ಇಂದು ಮಹಿಳಾ ದಿನಾಚರಣೆ ಎಂದು ನಿನ್ನೆ ನೀವೇ ಹೇಳಿದ್ದಿರಲ್ಲ. ಶಿಕ್ಷಕಿ : ಮಕ್ಕಳೇ! ಇಂದು ಆಗಬೇಕಾದ ಕೆಲಸದ ಬಗ್ಗೆ ನಿನ್ನೆಯೇ ನಿಮಗೆ ತಿಳಿಸಿದ್ದೆವು. ಅದರಂತೆ ನೀವೆಲ್ಲ ಕಾರ್ಯ ನಿರ್ವಹಿಸಿದ್ದೀರಿ ಅಲ್ಲವೇ. ಮಕ್ಕಳು : ಹೌದು ಮೇಡಂ. ನೀವು ಹೇಳಿದಂತೆ ಶಾಲಾ ಆವರಣ ಸ್ವಚ್ಛ ಮಾಡಿದ್ದೇವೆ. ತಳಿರು ತೋರಣ ಕಟ್ಟಿ ರಾಷ್ಟ್ರಕ್ಕಾಗಿ ದುಡಿದ ಅನೇಕ ಮಹಿಳೆಯರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದ್ದೇವೆ. ಮುಖ್ಯಶಿಕ್ಷಕರು : ಹಾಗಾದರೆ ನಾವೆಲ್ಲ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿ ಅತಿಥಿಗಳನ್ನು ಸ್ವಾಗತಿಸೋಣ ಬನ್ನಿ. ಮಕ್ಕಳೆಲ್ಲರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಆಸೀನರಾದರು. ಐದನೆಯ ತರಗತಿ ವಿದ್ಯಾರ್ಥಿ ಶೇಖರ್ ಕಾರ್ಯಕ್ರಮ ನಿರೂಪಣೆ ಮಾಡಿದನು. ಸಭೆಗೆ ಆಗಮಿಸಿದ ಅತಿಥಿಗಳಿಗೆ ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಳ್ಳಲು ವಿನಂತಿಸಿದನು. ನಾಲ್ಕನೆಯ ತರಗತಿ ವಿದ್ಯಾರ್ಥಿನಿಯರಾದ ಕುಸುಮ ಮತ್ತು ಮೇರಿ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರನ್ನು ಸುಮತಿ ಸ್ವಾಗತಿಸಿದಳು. ಮುಖ್ಯಶಿಕ್ಷಕರು ಪ್ರಾಸ್ತಾವಿಕವಾಗಿ ಈ ದಿನದ ಮಹತ್ವವನ್ನು ಸಭೆಗೆ ತಿಳಿಸಿದರು. ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿಯವರು ಮಹಿಳಾ ದಿನಾಚರಣೆ ಕುರಿತು ಮಾತನಾಡಲು ಪ್ರಾರಂಭಿಸಿದರು. "ಜಾಗತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಲು ಪ್ರತಿವರ್ಷ ಮಾರ್ಚ್ ೮ ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಆಚರಣೆಯು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗೆ ಮನ್ನಣೆ ನೀಡುತ್ತದೆ. ಸಮಾಜ ಮತ್ತು ದೇಶದ ಕಲ್ಯಾಣಕ್ಕೆ ಮಹಿಳೆಯರು ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಮಹಿಳಾ ದಿನಾಚರಣೆಯು ಪ್ರತಿಯೊಬ್ಬರ ಜೀವನದಲ್ಲಿ ಮತ್ತು ಸಮಾಜದಲ್ಲಿ ಮಹಿಳೆಯರ ಬಗ್ಗೆ ಮೆಚ್ಚುಗೆ, ಗೌರವ, ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ. ಹಿಂದೆ ಮಹಿಳೆಯರು ಮನೆಗಳಲ್ಲಿ ನಿರ್ಬಂಧವನ್ನು ಹೊಂದಿದ್ದರು ಮತ್ತು ಕೆಲಸ ನಿಮಿತ್ತ ಮನೆಯಿಂದ ಹೊರಗೆ ಕಾಲಿಡುವಂತಿರಲಿಲ್ಲ. ಆದರೆ ಆಧುನಿಕ ಮಹಿಳೆಯರು ಕೆಲಸದಲ್ಲಿ ಸಮಾನ ಅವಕಾಶ ಪಡೆದುಕೊಂಡಿದ್ದಾರೆ. ಇಂದು ತಮ್ಮ ಸಾಮರ್ಥ್ಯ ಅರಿತುಕೊಂಡು ತಮ್ಮ ಕುಟುಂಬ ಮತ್ತು ಇಡೀ ಸಮಾಜದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ. ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಸಾಹಿತ್ಯ, ಸಂಗೀತ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ, ರಾಜಕೀಯ, ಸ್ವಾತಂತ್ರ್ಯ ಹೋರಾಟ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಈ ಸಾಧಕಿಯರ ಹೆಸರು ಹಾಗೂ ಸಾಧನೆ ಅಜರಾಮರವಾಗಿವೆ. ಮಕ್ಕಳೇ, ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕೆಲವು ಮಹಿಳಾ ಸಾಧಕಿಯರನ್ನು ಸ್ಮರಿಸೋಣ. ಸ್ವಾತಂತ್ರ್ಯ ಹೋರಾಟದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ ಹೀಗೆ ಅನೇಕರ ಹೆಸರು ಸ್ಮರಣೀಯ. ಶಿಕ್ಷಣದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಹೆಸರು ಅಚ್ಚಳಿಯದೆ ಉಳಿದಿರುವಂತೆ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮದರ್ ತೆರೇಸಾ, ಕಮಲಾದೇವಿ ಚಟ್ಟೋಪಾಧ್ಯಾಯ ಹೀಗೆ ಮೊದಲಾದವರ ಸಾಧನೆ ನೆನಪಿನಲ್ಲಿ ಇರುವಂತಹದು. ರಾಜಕೀಯ ಕ್ಷೇತ್ರದಲ್ಲಿ ಸರೋಜಿನಿ ನಾಯ್ಡು, ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್ ಮುಂತಾದವರನ್ನು ನೆನೆಯಬಹುದು. ಸಾಹಿತ್ಯ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಹಿರಿದಾದದ್ದು. ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ, ತಿರುಮಲಾಂಬ, ಎಂ.ಕೆ. ಇಂದಿರಾ, ಅರುಂಧತಿ ರಾಯ್, ಕಮಲಾ ಹಂಪನಾ, ಸಾ.ರಾ. ಅಬೂಬಕ್ಕರ್ ಮುಂತಾದವರ ಕೊಡುಗೆ ಅಪಾರ. ಸಂಗೀತ ಕ್ಷೇತ್ರದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ, ಗಂಗೂಬಾಯಿ ಹಾನಗಲ್, ಲತಾ ಮಂಗೇಶ್ಕರ್ ಮುಂತಾದವರು ದಂತಕಥೆ ಎನಿಸುವ ಸಾಧಕಿಯರಾಗಿದ್ದಾರೆ. ಪಿ.ಟಿ. ಉಷಾ, ಮಿಥಾಲಿರಾಜ್, ಹಿಮಾದಾಸ್, ಶೀತಲ್ ದೇವಿ, ಮೇರಿಕೋಮ್, ಪಿ.ವಿ. ಸಿಂಧು, ಸೈನಾ ನೆಹ್ವಾಲ್ ಇವರ ಕ್ರೀಡಾಕ್ಷೇತ್ರದ ಸಾಧನೆಯು ದೇಶದ ಕೀರ್ತಿಪತಾಕೆಯನ್ನು ಮೇಲಕ್ಕೇರಿಸಿದೆ. ಇದಲ್ಲದೆ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಬಹು ಹೆಮ್ಮೆ ಪಡುವಂತದ್ದು. ಕಲ್ಪನಾ ಚಾವ್ಲ, ಸುನಿತಾ ವಿಲಿಯಮ್ಸ್ ಇವರ ಅಪ್ರತಿಮ ಧೈರ್ಯ, ಸಾಧನೆ ದೇಶದ ಪ್ರಗತಿಯ ಹಾದಿಯಲ್ಲಿ ಒಂದು ಮೈಲಿಗಲ್ಲು. ನಾವೂ ಸಹ ಇಂತಹ ಮಹಿಳಾ ಸಾಧಕಿಯರ ಸಾಧನೆ ಅರಿತುಕೊಂಡು ಅವರ ಆದರ್ಶಗಳನ್ನು ರೂಢಿಸಿಕೊಂಡು ಸಾಧನೆಯ ಪಥದತ್ತ ಸಾಗೋಣ; ನಮ್ಮ ದೇಶದ ಉತ್ತಮ ಪ್ರಜೆಗಳಾಗಿ ಬಾಳೋಣ” ಎಂದು ಮಹಾಲಕ್ಷ್ಮಿಯವರು ಎಲ್ಲರಿಗೂ ಧನ್ಯವಾದ ಸಲ್ಲಿಸಿ ಭಾಷಣ ಮುಗಿಸಿದರು. ಮಕ್ಕಳೆಲ್ಲರೂ ಬಹಳ ಕುತೂಹಲದಿಂದ ಭಾಷಣವನ್ನು ಆಲಿಸುವುದರಲ್ಲಿ ಮೈಮರೆತಿದ್ದರು. ವಿದ್ಯಾರ್ಥಿ ಫಾತಿಮಾಳು ವೇದಿಕೆಗೆ ಬಂದು ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದಳು. ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು. ಎಸ್.ಡಿ.ಎಮ್.ಸಿ ಯವರ ಸಹಕಾರದಿಂದ ಎಲ್ಲರಿಗೂ ಸಿಹಿ ಹಂಚಲಾಯಿತು.

"ಹೆಣ್ಣು ದೇಶದ ಅಭಿವೃದ್ಧಿಯ ಕಣ್ಣು" — "Woman is the eye of the nation's development."

ಪದಗಳ ಅರ್ಥword meanings

KannadaPronunciationMeaning
ಸಂಭ್ರಮsam-bhra-maexcitement, enthusiasm
ಕಾರ್ಯkaar-yawork, task
ಸಿಂಗರಿಸುsin-ga-ri-sudecorate, adorn
ನಿರೂಪಣೆni-roo-pa-nepresentation, narration
ಗಣ್ಯgan-yadistinguished, prominent
ಪೋಷಣೆpo-sha-neprotection, care
ವಂದನೆvan-da-negreeting, salutation
ಮುಕ್ತಾಯmuk-taa-yaend, conclusion
ಸಹಕಾರsa-ha-kaa-rahelp, cooperation
ಸ್ಮರಣೀಯsma-ra-nee-yamemorable
ನೆನೆne-neremember, recall
ಅಪ್ರತಿಮa-pra-ti-maunparalleled, matchless
ಕುತೂಹಲku-too-ha-lacuriosity, wonder
ಪಥpa-thapath, way

ಟಿಪ್ಪಣಿnotes

  • ಅಜರಾಮರ — ಮುಪ್ಪೂ ಸಾವೂ ಇಲ್ಲದಿರುವಿಕೆ
  • ಅಚ್ಚಳಿಯದೆ — ಅಳಿಸಲಾಗದ
  • ಕೀರ್ತಿಪತಾಕೆ — ಯಶಸ್ಸಿನ ಧ್ವಜ
  • ಮೈಲಿಗಲ್ಲು — ಸಾಧನೆಯ ದಾರಿಯಲ್ಲಿ ಪ್ರಮುಖವಾದ ಘಟ್ಟ. ಮಾರ್ಗದಲ್ಲಿ ದೂರವನ್ನು ಸೂಚಿಸಲು ದಾರಿಯ ಪಕ್ಕದಲ್ಲಿ ನೆಟ್ಟಿರುವ ಕಲ್ಲು
  • ತಳಿರು ತೋರಣ — ಚಿಗುರೆಲೆಗಳ ಮಾಲೆ.
  • ಎಸ್.ಡಿ.ಎಮ್.ಸಿ. — ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ.
  • ಅತಿಥಿ — ಆಮಂತ್ರಣವನ್ನು ಪಡೆದು ಅಥವಾ ಪಡೆಯದೆಯೆ ಮನೆಗೆ, ಕಾರ್ಯಕ್ರಮಕ್ಕೆ ಬಂದ ವ್ಯಕ್ತಿ.
  • ಆಸನ — ಕುಳಿತುಕೊಳ್ಳಲು ಉಪಯೋಗಿಸುವ ಪೀಠ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆ.

  1. ೧. ಮಕ್ಕಳು ಯಾರ ಭಾವಚಿತ್ರಗಳನ್ನು ಸಿಂಗರಿಸಿದ್ದರು?

    Answer

    ಮಕ್ಕಳು ರಾಷ್ಟ್ರಕ್ಕಾಗಿ ದುಡಿದ ಅನೇಕ ಮಹಿಳೆಯರ ಭಾವಚಿತ್ರಗಳನ್ನು ಸಿಂಗರಿಸಿದ್ದರು.

  2. ೨. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ?

    Answer

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿವರ್ಷ ಮಾರ್ಚ್ ೮ ರಂದು ಆಚರಿಸಲಾಗುತ್ತದೆ.

  3. ೩. ಸಾವಿತ್ರಿಬಾಯಿ ಫುಲೆಯವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ?

    Answer

    ಸಾವಿತ್ರಿಬಾಯಿ ಫುಲೆಯವರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

  4. ೪. ಕಲ್ಪನಾ ಚಾವ್ಲರವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ?

    Answer

    ಕಲ್ಪನಾ ಚಾವ್ಲರವರು ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

ಆ. ವಾಕ್ಯಗಳನ್ನು ಗಮನಿಸಿ ಸರಿ/ತಪ್ಪು ಗುರುತಿಸು-ತಪ್ಪಿದ್ದರೆ ಸರಿಪಡಿಸಿ ಬರೆ.

  1. ೧. ಮಕ್ಕಳೆಲ್ಲರೂ ಬಹಳ ಸಡಗರ ಸಂಭ್ರಮದಿಂದ ತೇಲಾಡುತ್ತಿದ್ದರು.

    Answer

    ತಪ್ಪು. ಮಕ್ಕಳೆಲ್ಲರೂ ಬಹಳ ಸಡಗರ ಸಂಭ್ರಮದಿಂದ ಓಡಾಡುತ್ತಿದ್ದರು.

  2. ೨. ಪುರುಷರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದರು.

    Answer

    ತಪ್ಪು. ಮಹಿಳೆಯರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದರು.

  3. ೩. ಮಕ್ಕಳೆಲ್ಲರೂ ಶಾಲಾ ಕೊಠಡಿಗೆ ಹೋಗಿ ಕುಳಿತರು.

    Answer

    ತಪ್ಪು. ಮಕ್ಕಳೆಲ್ಲರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಆಸೀನರಾದರು.

  4. ೪. ಮೇರಿಕೋಮ್ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

    Answer

    ತಪ್ಪು. ಮೇರಿಕೋಮ್ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

ಇ. ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆ

  1. ೧. ಸಮಾನತೆ X ........................... ೩. ಹಿಂದೆ X ...........................

    Answer

    ಸಮಾನತೆ X ಅಸಮಾನತೆ ಹಿಂದೆ X ಮುಂದೆ

  2. ೨. ಸ್ವಾತಂತ್ರ್ಯ X ........................... ೪. ಮುಕ್ತಾಯ X ...........................

    Answer

    ಸ್ವಾತಂತ್ರ್ಯ X ಪರಾಧೀನತೆ ಮುಕ್ತಾಯ X ಆರಂಭ

ಭಾಷಾ ಚಟುವಟಿಕೆ

ಅ. ಕೊಟ್ಟಿರುವ ಪದಗಳಿಗೆ ಸ್ತ್ರೀರೂಪ ಬರೆ.

  1. ೧. ವಿದ್ಯಾರ್ಥಿ : ........................... ೩. ಅಧ್ಯಕ್ಷ : ...........................

    Answer

    ವಿದ್ಯಾರ್ಥಿ : ವಿದ್ಯಾರ್ಥಿನಿ ಅಧ್ಯಕ್ಷ : ಅಧ್ಯಕ್ಷೆ

  2. ೨. ಗಂಡು : ........................... ೪. ಸಾಧಕ : ...........................

    Answer

    ಗಂಡು : ಹೆಣ್ಣು ಸಾಧಕ : ಸಾಧಕಿ

ಆ. ಮಾದರಿಯಂತೆ ಬರೆ.

  1. ಮಾದರಿ: ಮರ – ಮರಗಳು

  2. ೧. ಅಂಗಡಿ – ........................... ೩. ಶಾಲೆ – ...........................

    Answer

    ಅಂಗಡಿ – ಅಂಗಡಿಗಳು ಶಾಲೆ – ಶಾಲೆಗಳು

  3. ೨. ಚಿತ್ರ – ........................... ೪. ಪ್ರಜೆ – ...........................

    Answer

    ಚಿತ್ರ – ಚಿತ್ರಗಳು ಪ್ರಜೆ – ಪ್ರಜೆಗಳು

ಇ. ಗುಂಪಿಗೆ ಸೇರದ ಪದ ಗುರುತಿಸಿ ಬರೆ.

  1. ೧. ಮಹಿಳೆ, ಹೆಣ್ಣು, ಹೆಂಗಸು, ಇಳೆ: ....................................................

  2. ೨. ಆಸನ, ಪೀಠ, ಗದ್ದುಗೆ, ಕಿರೀಟ: ....................................................

  3. ೩. ಸಂಚಿ ಹೊನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ರಾಣಿ ಚೆನ್ನಮ್ಮ:....................................................

  4. ೪. ಸಾಧನೆ, ಯಶಸ್ಸು, ಸಿದ್ಧಿ, ಹೋರಾಟ ....................................................

ಬಳಕೆ ಚಟುವಟಿಕೆ

  1. ೧. ನಿಮ್ಮ ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪಟ್ಟಿ ಸಿದ್ಧಪಡಿಸು.

  2. ೨. ಶಾಲೆಯಲ್ಲಿ ನಡೆಯುವ ನಾಟಕ ಪ್ರದರ್ಶನದ ಪ್ರಚಾರಕ್ಕಾಗಿ ಒಂದು ಭಿತ್ತಿ ಪತ್ರವನ್ನು ನಿಮ್ಮ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿಸಿ.

  3. ೩. ಈ ಗದ್ಯದಲ್ಲಿ ಬರುವ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕನಂತವರ ಇತಿಹಾಸ ಪ್ರಸಿದ್ಧ ಮಹಿಳೆಯರ ಪಾತ್ರವನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ತರಗತಿಯಲ್ಲಿ ಅಭಿನಯಿಸಿ.

  4. ೪. ನಿಮ್ಮ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರ ಹೆಸರುಗಳನ್ನು ನಿನ್ನ ನೋಟ್ ಪುಸ್ತಕದಲ್ಲಿ ಪಟ್ಟಿಮಾಡು.

Interactive Lab

ಸಂಭ್ರಮsam-bhra-maexcitement, enthusiasm
ಕಾರ್ಯkaar-yawork, task
ಸಿಂಗರಿಸುsin-ga-ri-sudecorate, adorn
ನಿರೂಪಣೆni-roo-pa-nepresentation, narration
ಗಣ್ಯgan-yadistinguished, prominent
ಪೋಷಣೆpo-sha-neprotection, care
ವಂದನೆvan-da-negreeting, salutation
ಮುಕ್ತಾಯmuk-taa-yaend, conclusion
ಸಹಕಾರsa-ha-kaa-rahelp, cooperation
ಸ್ಮರಣೀಯsma-ra-nee-yamemorable
ನೆನೆne-neremember, recall
ಅಪ್ರತಿಮa-pra-ti-maunparalleled, matchless
ಕುತೂಹಲku-too-ha-lacuriosity, wonder
ಪಥpa-thapath, way