CRECT Education

Class 4 Kannada Lesson 2: Working Together | KTBS Kannada Second Language – Learn the Story

Description

Learn the story 'Working Together' (ಒಗ್ಗಟ್ಟಿನ ಕೆಲಸ) from the Class 4 Kannada Second Language textbook. Kids take on a dirty playground — and teach an entire town the power of unity.

ಗದ್ಯ (prose) · ಸಮಿತಿ ರಚನೆ

ಪಠ್ಯFull text

ಒಂದು ದಿನ ಮಕ್ಕಳು ಆಟದ ಮೈದಾನದಲ್ಲಿ ಆಡುತ್ತಿದ್ದರು. ಮೈದಾನದ ಸುತ್ತಮುತ್ತ ಮನೆಗಳು, ಅಂಗಡಿಗಳು ಇದ್ದವು. ಎಲ್ಲರೂ ಕಸವನ್ನು ತಂದು ಆಟದ ಮೈದಾನದಲ್ಲಿ ಬಿಸಾಡುತ್ತಿದ್ದರು. ಮೈದಾನದಿಂದ ಕೆಟ್ಟವಾಸನೆ ಬರುತ್ತಿತ್ತು. ಮಕ್ಕಳಿಗೆ ಆಟವಾಡಲು ಆಗುತ್ತಿರಲಿಲ್ಲ. ಇದಕ್ಕೆ ಏನಾದರೂ ಒಂದು ಪರಿಹಾರ ಹುಡುಕಬೇಕು ಎಂದು ಎಲ್ಲಾ ಹುಡುಗರು ಮಾತಾಡಿಕೊಂಡರು. "ನಾವೆಲ್ಲರು ಈ ಆಟದ ಮೈದಾನದ ಕಸವನ್ನು ತೆಗೆಯೋಣ. ಸ್ವಚ್ಛಗೊಳಿಸಿದ ಅನಂತರ ಸುತ್ತಮುತ್ತಲಿನ ಅಂಗಡಿ, ಮನೆಯವರಿಗೆ ಇನ್ನು ಮುಂದೆ ಕಸ ಹಾಕಬಾರದೆಂದು ಕೇಳಿಕೊಳ್ಳೋಣ" ಎಂದು ಮಾತಾಡಿಕೊಂಡರು. ಹುಡುಗರು ಹಾಗೂ ಹುಡುಗಿಯರು ಕೆಲಸವನ್ನು ಹಂಚಿಕೊಂಡರು. ಜೋಸೆಫ್ ಹಾಗೂ ಜೀನತ್ ತಮ್ಮ ಮನೆಗಳಿಂದ ಎರಡು ದೊಡ್ಡ ಬುಟ್ಟಿಗಳನ್ನು ತಂದರು. ಕಿರಣ್ ಒಂದು ಸನಿಕೆಯನ್ನು ತಂದನು. ಮಕ್ಕಳು ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಕಾಗದದ ಚೂರುಗಳನ್ನೂ ಖಾಲಿ ಬಾಟಲಿಗಳನ್ನೂ ಹೆಕ್ಕಿದರು. ಕಿರಣ್ ಅಲ್ಲಲ್ಲಿ ಮುದ್ದೆಯಾಗಿ ಬಿದ್ದಿದ್ದ ಕೊಚ್ಚೆಯನ್ನು ಅಗೆದು ತೆಗೆದ. ಗೌತಮಿ ಅವನಿಗೆ ಸಹಾಯ ಮಾಡಿದಳು. ಮಕ್ಕಳ ಕೆಲಸವನ್ನು ನೋಡಿದ ಕೆಲವು ಹಿರಿಯರು ಮಕ್ಕಳೊಂದಿಗೆ ತಾವೂ ಜೊತೆಗೂಡಿ ಆಟದ ಮೈದಾನ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಇದನ್ನೆಲ್ಲ ನೋಡುತ್ತಿದ್ದ ದಾರಿಹೋಕರು ಮಕ್ಕಳ ಕೆಲಸವನ್ನು ಮೆಚ್ಚಿ ತಮ್ಮತಮ್ಮಲ್ಲೇ ಮಾತನಾಡಿಕೊಂಡರು. ಇದು ಆ ಊರಿನ ನಗರಸಭೆಯ ಅಧ್ಯಕ್ಷರ ಗಮನಕ್ಕೆ ಬಂದಿತು. ಅವರು ಸ್ಥಳಕ್ಕೆ ಆಗಮಿಸಿದರು. ಮಕ್ಕಳ ಕೆಲಸವನ್ನು ನೋಡಿ ಖುಷಿಪಟ್ಟರು. ಮಕ್ಕಳು ರಾಶಿ ಹಾಕಿದ್ದ ಕಸವನ್ನು ನೋಡಿ, ಕಸದ ಗಾಡಿ ತರಲು ಅಧಿಕಾರಿಗಳಿಗೆ ಹೇಳಿದರು. ಕಸದ ಗಾಡಿ ಬಂದು ಕಸವನ್ನೆಲ್ಲ ತೆಗೆದುಕೊಂಡು ಹೋಯಿತು. ಕೆಲವೇ ಗಂಟೆಗಳಲ್ಲಿ ಆಟದ ಮೈದಾನದ ಕಸವೆಲ್ಲಾ ಮಾಯವಾಗಿ, ಸುಂದರವಾಗಿ ಕಾಣತೊಡಗಿತು. ಮಕ್ಕಳ ಕೆಲಸವನ್ನು ನಗರಸಭೆಯ ಅಧ್ಯಕ್ಷರು ಮೆಚ್ಚಿ ಹೊಗಳಿದರು. ಇನ್ನು ಮುಂದೆ ಇಲ್ಲಿ ಯಾರಾದರು ಕಸ, ಕೊಳಚೆನೀರು ಹರಿಸಿದರೆ ದಂಡ ಹಾಕುವುದಾಗಿ ಎಚ್ಚರಿಸಿದರು. ಮಕ್ಕಳ ಒಗ್ಗಟ್ಟಿನ ಕೆಲಸವನ್ನು ಮೆಚ್ಚಿದ ಊರ ನಾಗರಿಕರು, ಈ ರೀತಿ ಮಾಡಿದರೆ ನಮ್ಮ ನಗರ ಸ್ವಚ್ಛವಾಗುವುದರಲ್ಲಿ ಸಂದೇಹವಿಲ್ಲ ಅಂದುಕೊಂಡರು. ಮಕ್ಕಳಿಗೆ ಸಂತೋಷವಾಯಿತು. ಅನಂತರ ಮಕ್ಕಳು ಆಟದ ಮೈದಾನದ ಸುತ್ತ ಹೂವಿನ ಹಾಗೂ ಅಲಂಕಾರಿಕ ಗಿಡಗಳನ್ನು ನೆಟ್ಟರು. ಅವುಗಳಿಗೆ ನೀರುಣಿಸಿದರು. ಒಂದೆರಡು ತಿಂಗಳಲ್ಲಿ ಆಟದ ಮೈದಾನ ಹಸಿರು ಗಿಡಗಳಿಂದ ಕಂಗೊಳಿಸಿತು. ಮಕ್ಕಳಿಗೆ ಆಟದ ಮೈದಾನ, ಹಿರಿಯರಿಗೆ ವಿಶ್ರಾಂತಿ ತೆಗೆದುಕೊಳ್ಳುವ ಸುಂದರ ಸ್ಥಳವಾಗಿ ಕಾಣಿಸಿತು.