CRECT Education

Class 5 Kannada Lesson 1: Joy of Living Together | KTBS Kannada – Practice & Play

Description

Practice & Play – comprehension review of the folk tale about the neem tree and the stone who learn the value of unity, from KTBS Class 5 Kannada First Language.

ಗದ್ಯ (prose) · ಜನಪದ ಕಥೆ (Folk tale)

ಪಠ್ಯFull text

ಒಂದು ಹಳ್ಳಿ. ಅಲ್ಲಿ ರೈತನೊಬ್ಬನ ಹೊಲ ಇತ್ತು. ಅಲ್ಲಿ ಒಂದು ಬೇವಿನ ಮರವಿತ್ತು. ಹೇಗೋ ಏನೋ ಅದರ ಕೆಳಗೆ ಒಂದು ಗುಂಡನೆಯ ಕಲ್ಲು ಬಂದು ನಿಂತುಕೊಂಡಿತು. ಮರದ ಮೇಲೆ ಕುಳಿತುಕೊಳ್ಳುತ್ತಿದ್ದ ಹಕ್ಕಿಗಳ ಹಿಕ್ಕೆ ಕಲ್ಲಿನ ಮೇಲೆ ಬಿದ್ದು ಬಿದ್ದು, ಆ ಕಲ್ಲು ಬೆಳ್ಳಗಾಗಿ, ವಿಭೂತಿ ಬಳಿದಂತೆ ಕಾಣಿಸುತ್ತಿತ್ತು. ಇದರಿಂದಾಗಿ ಆ ಬಿಳಿಯ ಕಲ್ಲು ಎಲ್ಲರಿಗೂ ಅಮ್ಮನ ಕಲ್ಲಿನಂತೆ ಕಾಣಿಸುತ್ತಿತ್ತು. ಆದ್ದರಿಂದ, ಬೇವಿನ ಮರವನ್ನು ಜನ 'ಅಮ್ಮನ ಮರ' ಎಂದು ಕರೆಯುತ್ತಿದ್ದರು. ಆ ಕಲ್ಲು ಬೇವಿನ ಮರದ ಕೆಳಗಿದ್ದುದರಿಂದ ಅದಕ್ಕೆ 'ಅಮ್ಮನ ಕಲ್ಲು' ಎಂಬ ಹೆಸರು ರೂಢಿಗೆ ಬಂದಿತ್ತು. ಹೀಗೆ ಒಂದರಿಂದ ಇನ್ನೊಂದು ಹೆಸರು ಪಡೆದುಕೊಂಡು ಎರಡೂ ಸುಖವಾಗಿದ್ದವು. 'ಅಮ್ಮನ ಮರ', 'ಅಮ್ಮನ ಕಲ್ಲು' ಎಂದು ಊರಿನ ಜನಗಳು ಅವುಗಳ ತಂಟೆಗೆ ಹೋಗುತ್ತಿರಲಿಲ್ಲ. ಒಂದು ಸಲ, ತನ್ನಿಂದ ಇನ್ನೊಂದು ಸುಖವಾಗಿದೆ ಎಂದು ಎರಡಕ್ಕೂ ಜಂಬ ಬಂತು. ಬೇವಿನ ಮರ "ನಾನು ಅಮ್ಮನ ಮರ, ನೀನು ನನ್ನ ಕೆಳಗಿರುವುದರಿಂದ ನಿನ್ನನ್ನು ಅಮ್ಮನ ಕಲ್ಲು, ಎಂದು ಜನ ಕರೆಯುತ್ತಾರೆ" ಎಂದು ಹೇಳಿತು. ಅದಕ್ಕೆ ಕಲ್ಲು "ನಾನು ಅಮ್ಮನ ಕಲ್ಲು, ನನ್ನ ಪಕ್ಕದಲ್ಲಿ ನೀನಿರುವುದರಿಂದ ನಿನ್ನನ್ನು ಅಮ್ಮನ ಮರ ಎಂದು ಕರೆಯುತ್ತಾರೆ" ಎಂದಿತು. ಹೀಗೆ ಎರಡೂ ಜಗಳ ಮಾಡಿದವು. ಕೊನೆಗೆ ಕಲ್ಲು ಕೋಪದಿಂದ ಉರುಳಿ ಉರುಳಿ ಬೇವಿನ ಮರದಿಂದ ದೂರ ಹೋಗಿ ನಿಂತಿತು. "ನಾನಿಲ್ಲದಿದ್ದರೆ ಮರವನ್ನು ಕಡಿದುಹಾಕುತ್ತಾರೆ" ಎಂದು ಕಲ್ಲು, "ನನ್ನ ಕೆಳಗಿರದಿದ್ದರೆ ಕಲ್ಲನ್ನು ಒಡೆದು ಹಾಕುತ್ತಾರೆ" ಎಂದು ಮರ-ಹೀಗೆ ಎರಡೂ ತಮ್ಮೊಳಗೆ ಆಲೋಚಿಸುತ್ತಿದ್ದವು. ಒಂದು ದಿನ ಹೊಲವನ್ನು ಉಳಲಿಕ್ಕೆ ಆ ಹಳ್ಳಿಯ ರೈತ ತನ್ನ ಮಕ್ಕಳ ಜೊತೆ ಬಂದನು. ಅಮ್ಮನ ಕಲ್ಲು ಇಲ್ಲದ ಆ ಬೇವಿನ ಮರವನ್ನು ನೋಡಿ "ಇದನ್ನು ನಾಳೆ ಕಡಿಸಿ, ನೇಗಿಲು, ಚಕ್ರ ಮಾಡಿಸಿ" ಎಂದು ತನ್ನ ಮಕ್ಕಳಿಗೆ ಹೇಳಿದ. ಬೇವಿನ ಮರದಿಂದ ದೂರ ಬಿದ್ದಿದ್ದ ಕಲ್ಲನ್ನು ನೋಡಿ "ಈ ಕಲ್ಲನ್ನು ನಾಳೆ ಕಲ್ಲು ಒಡೆಯುವವರಿಂದ ಒಡೆಸಿದರೆ ನೇಗಿಲನ್ನು ಕಟ್ಟಿ ಉಳಲು ಬರುತ್ತದೆ" ಎಂದು ತನ್ನ ಮಕ್ಕಳಿಗೆ ಹೇಳಿದ. ಇದನ್ನು ಕೇಳಿ ಮರ ಮತ್ತು ಕಲ್ಲು ಎರಡೂ ಭಯದಿಂದ ನಡುಗಿದವು. ನಾವಿಬ್ಬರೂ ಒಬ್ಬರಿಂದ ಒಬ್ಬರು ದೂರವಾಗಿದ್ದರೆ ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ. ಆದ್ದರಿಂದ ನಾವಿಬ್ಬರೂ ಉಳಿಯುವುದಿಲ್ಲ ಎಂಬ ತಿಳಿವಳಿಕೆ ಮರ ಮತ್ತು ಕಲ್ಲಿಗೆ ಬಂದಿತು. ರೈತ ಮತ್ತು ರೈತನ ಮಕ್ಕಳು ಅತ್ತ ಹೋಗುವುದನ್ನೇ ಕಾದಿದ್ದು, ಕಲ್ಲು "ಬರಲಾ" ಎಂದು ಬೇವಿನ ಮರವನ್ನು ಕೇಳಿತು. ಮರ "ಬೇಗ ಬಾ" ಎಂದು ಕಲ್ಲಿಗೆ ಹೇಳಿತು. ತಾನು ಇನ್ನೊಂದರಿಂದ ಸುಖವಾಗಿರುವುದು ಎಂದು ಈಗ ಎರಡಕ್ಕೂ ತಿಳಿಯಿತು. ಬೇವಿನ ಮರ ಮತ್ತು ಕಲ್ಲು ಮತ್ತೆ ಸ್ನೇಹಿತರಾದವು. ಮಾರನೆಯ ದಿನ ಮರಕಡಿಯುವವರು ಬಂದು ನೋಡಿದರು. ಕಲ್ಲು ಮರದ ಕೆಳಗೆ ಮೊದಲಿನಂತೆ ನಿಂತಿತ್ತು. ಅವರಿಗೆ ಮರ ಮತ್ತು ಕಲ್ಲಿನ ಬಗ್ಗೆ ಭಯ-ಭಕ್ತಿ ಉಂಟಾಯಿತು. "ಇದು ಅಮ್ಮನ ಮರ, ಕಡಿಯುವುದು ಬೇಡ" ಎಂದು ಹೊರಟು ಹೋದರು. ಕಲ್ಲು ಒಡೆಯುವವರು ಬಂದು "ಇದು ಅಮ್ಮನ ಕಲ್ಲು, ಒಡೆಯುವುದು ಬೇಡ" ಎಂದು ಅವರೂ ಹೊರಟು ಹೋದರು. ಬೇವಿನ ಮರ ಮತ್ತು ಕಲ್ಲು ಕಂಟಕದಿಂದ ಪಾರಾದವು. ಈಗ ಎರಡೂ ಸಹ ಯಾರ ಭಯವಿಲ್ಲದೆ ಸುಖವಾಗಿದ್ದವು. ಹೀಗೆ ಎಲ್ಲರೂ ಒಟ್ಟಾಗಿ ಬಾಳಿದರೆ, ಎಲ್ಲರೂ ಸುಖವಾಗಿ ಇರಬಹುದು. **ಕೌಶಲ :** ಮಾತನಾಡುವುದು. **ಸಾಮರ್ಥ್ಯ :** ಪರಿಚಿತ ವಿಷಯಗಳ ಬಗ್ಗೆ ನಿರರ್ಗಳ ಮತ್ತು ಸಹಜವಾಗಿ ಮಾತನಾಡುವುದು. **ಆಕರ ಕೃತಿ :** ಸಾಲು ಸಂಪಿಗೆ (ಜನಪದ ಕಥೆಗಳು) **ಸಂಪಾದಕರು :** ಪ್ರೊ. ಕಾಳೇಗೌಡ ನಾಗವಾರ, ಜಿ. ವಿ. ಆನಂದಮೂರ್ತಿ

"ಹೀಗೆ ಎಲ್ಲರೂ ಒಟ್ಟಾಗಿ ಬಾಳಿದರೆ, ಎಲ್ಲರೂ ಸುಖವಾಗಿ ಇರಬಹುದು." — "In this way, if everyone lives together, everyone can be happy." An excellent affirmation of unity and cooperation.

ಪದಗಳ ಅರ್ಥword meanings

KannadaPronunciationMeaning
ಕಂಟಕ—ಕೇಡು, ವಿಪತ್ತು ಜಗಳ - ಕಲಹ ಜಂಬ - ಗರ್ವ, ಒಣ ಆಡಂಬರ ನೇಗಿಲು - ಭೂಮಿಯನ್ನು ಉಳುವ ಸಾಧನ ರೈತ - ಬೇಸಾಯ ಮಾಡುವವನು ವಿಭೂತಿ - ಭಸ್ಮ, ಬೂದಿ ಹಿಕ್ಕೆ - ಹಕ್ಕಿಗಳ ಮಲ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಗುಂಡನೆಯ ಕಲ್ಲು ಎಲ್ಲಿತ್ತು?

    Answer

    ಗುಂಡನೆಯ ಕಲ್ಲು ಬೇವಿನ ಮರದ ಕೆಳಗೆ ಇತ್ತು.

  2. ೨. ಬೇವಿನ ಮರವನ್ನು ಜನ ಏನೆಂದು ಕರೆಯುತ್ತಿದ್ದರು?

    Answer

    ಬೇವಿನ ಮರವನ್ನು ಜನ 'ಅಮ್ಮನ ಮರ' ಎಂದು ಕರೆಯುತ್ತಿದ್ದರು.

  3. ೩. ಕಲ್ಲು ಕೋಪದಿಂದ ಏನು ಮಾಡಿತು?

    Answer

    ಕಲ್ಲು ಕೋಪದಿಂದ ಉರುಳಿ ಉರುಳಿ ಬೇವಿನ ಮರದಿಂದ ದೂರ ಹೋಗಿ ನಿಂತಿತು.

  4. ೪. ಮರ ಕಡಿಯುವವರು ಏನೆಂದು ಹೇಳಿ ಹೊರಟು ಹೋದರು?

    Answer

    ಮರ ಕಡಿಯುವವರು 'ಇದು ಅಮ್ಮನ ಮರ, ಕಡಿಯುವುದು ಬೇಡ' ಎಂದು ಹೇಳಿ ಹೊರಟು ಹೋದರು.

  5. ೫. ಕಲ್ಲು ಹೊಡೆಯುವವರು ಏನೆಂದು ಹೇಳಿ ಹೊರಟು ಹೋದರು?

    Answer

    ಕಲ್ಲು ಒಡೆಯುವವರು 'ಇದು ಅಮ್ಮನ ಕಲ್ಲು, ಒಡೆಯುವುದು ಬೇಡ' ಎಂದು ಹೇಳಿ ಹೊರಟು ಹೋದರು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಜಂಬದಿಂದ ಬೇವಿನ ಮರ ಅಮ್ಮನ ಕಲ್ಲಿಗೆ ಏನೆಂದು ಹೇಳಿತು?

    Answer

    ಜಂಬದಿಂದ ಬೇವಿನ ಮರ, 'ನಾನು ಅಮ್ಮನ ಮರ, ನೀನು ನನ್ನ ಕೆಳಗಿರುವುದರಿಂದ ನಿನ್ನನ್ನು ಅಮ್ಮನ ಕಲ್ಲು ಎಂದು ಜನ ಕರೆಯುತ್ತಾರೆ' ಎಂದು ಹೇಳಿತು.

  2. ೨. ಜಂಬದಿಂದ ಅಮ್ಮನ ಕಲ್ಲು ಬೇವಿನ ಮರಕ್ಕೆ ಏನೆಂದು ಹೇಳಿತು?

    Answer

    ಜಂಬದಿಂದ ಅಮ್ಮನ ಕಲ್ಲು, 'ನಾನು ಅಮ್ಮನ ಕಲ್ಲು, ನನ್ನ ಪಕ್ಕದಲ್ಲಿ ನೀನಿರುವುದರಿಂದ ನಿನ್ನನ್ನು ಅಮ್ಮನ ಮರ ಎಂದು ಕರೆಯುತ್ತಾರೆ' ಎಂದು ಹೇಳಿತು.

  3. ೩. ಬೇರೆ ಬೇರೆಯಾಗಿದ್ದ ಬೇವಿನ ಮರ ಮತ್ತು ಕಲ್ಲನ್ನು ನೋಡಿ ರೈತನು ತನ್ನ ಮಕ್ಕಳಿಗೆ ಏನು ಹೇಳಿದನು?

    Answer

    ಬೇರೆ ಬೇರೆಯಾಗಿದ್ದ ಬೇವಿನ ಮರ ಮತ್ತು ಕಲ್ಲನ್ನು ನೋಡಿ ರೈತನು ತನ್ನ ಮಕ್ಕಳಿಗೆ, ಮರವನ್ನು ಕಡಿಸಿ ನೇಗಿಲು ಚಕ್ರ ಮಾಡಿಸುವುದಾಗಿಯೂ ಮತ್ತು ಕಲ್ಲನ್ನು ಒಡೆಸಿ ನೇಗಿಲು ಕಟ್ಟಿ ಉಳಲು ಬರುತ್ತದೆ ಎಂದೂ ಹೇಳಿದನು.

  4. ೪. ಬೇವಿನ ಮರ ಮತ್ತು ಅಮ್ಮನ ಕಲ್ಲು ಮತ್ತೆ ಹೇಗೆ ಸ್ನೇಹಿತರಾದವು?

    Answer

    ರೈತ ಮತ್ತು ಅವನ ಮಕ್ಕಳು ಹೋದ ನಂತರ, ಕಲ್ಲು 'ಬರಲಾ' ಎಂದು ಕೇಳಲು ಮರ 'ಬೇಗ ಬಾ' ಎಂದಿತು. ಹೀಗೆ ತಾವು ಒಬ್ಬರಿಂದ ಒಬ್ಬರು ಸುಖವಾಗಿರುವುದು ತಿಳಿದು ಅವು ಮತ್ತೆ ಸ್ನೇಹಿತರಾದವು.

ಇ. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

  1. ೧. ಬೇವಿನ ಮರವನ್ನು ಜನ _________ ಎಂದು ಕರೆಯುತ್ತಿದ್ದರು.

    Answer

    ಬೇವಿನ ಮರವನ್ನು ಜನ ಅಮ್ಮನ ಮರ ಎಂದು ಕರೆಯುತ್ತಿದ್ದರು.

  2. ೨. ನಾವಿಬ್ಬರೂ ಒಬ್ಬರಿಂದ ಒಬ್ಬರು _________ ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ.

    Answer

    ನಾವಿಬ್ಬರೂ ಒಬ್ಬರಿಂದ ಒಬ್ಬರು ದೂರವಾಗಿದ್ದರೆ ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ.

  3. ೩. "ಇದು ಅಮ್ಮನ ಮರ _________ ಬೇಡ" ಎಂದು ಹೊರಟುಹೋದರು.

    Answer

    'ಇದು ಅಮ್ಮನ ಮರ ಕಡಿಯುವುದು ಬೇಡ' ಎಂದು ಹೊರಟುಹೋದರು.

  4. ೪. ಕಲ್ಲು ಒಡೆಯುವವರು ಬಂದು "ಇದು ಅಮ್ಮನ ಕಲ್ಲು, _________ ಬೇಡ ಎಂದು ಅವರೂ ಹೊರಟುಹೋದರು.

    Answer

    ಕಲ್ಲು ಒಡೆಯುವವರು ಬಂದು 'ಇದು ಅಮ್ಮನ ಕಲ್ಲು, ಒಡೆಯುವುದು ಬೇಡ' ಎಂದು ಅವರೂ ಹೊರಟುಹೋದರು.

  5. ೫. ಎಲ್ಲರೂ ಒಟ್ಟಾಗಿ ಬಾಳಿದರೆ, ಎಲ್ಲರೂ _________ ಇರಬಹುದು.

    Answer

    ಎಲ್ಲರೂ ಒಟ್ಟಾಗಿ ಬಾಳಿದರೆ, ಎಲ್ಲರೂ ಸುಖವಾಗಿ ಇರಬಹುದು.