CRECT Education

Class 5 Kannada Lesson 10: Me and the Tamarind Tree | KTBS Savi Kannada – Practice & Quiz

Description

Practice & Play: Class 5 Kannada First Language – Lesson 10 ನಾನು ಮತ್ತು ಹುಂಚಿಮರ. Comprehension questions, word play, and a riddle from the story about a tamarind tree and superstition. For CBSE, ICSE, and Karnataka State Board students.

ಗದ್ಯ (prose) · ಗುರುಸಿದ್ಧಯ್ಯ ಹುಚ್ಚಯ್ಯ ಹನ್ನೇರಡುಮಠ

ಪಠ್ಯFull text

ನಾನು ದಾರಿಯಲ್ಲಿ ನಡೆದು ಹೋಗುತ್ತಿದ್ದೆ. ನನ್ನ ಬೂಟುಗಳು ಇದ್ದಕ್ಕಿದ್ದಂತೆ ನಿಂತುಹೋದವು. ಮೆಲ್ಲನೆ ಕೆಳಗೆ ನೋಡಿದರೆ... ಆಹಾ... ಹುಂಚಿಹೂವು! ನೆಲದ ತುಂಬಾ ಹಳದಿಯ ಹುಂಚಿಹೂವುಗಳ ರಾಶಿರಾಶಿ. ಚಿಕ್ಕವನಿದ್ದಾಗ ನನಗೊಂದು ವಿಚಿತ್ರ ಹವ್ಯಾಸವಿತ್ತು. ಅದೆಂದರೆ ಹುಂಚಿಹೂವು ತಿನ್ನುವುದು! ಎಳೆಯ ಹಲ್ಲುಗಳಿಂದ ಹುಂಚಿಹೂವುಗಳನ್ನು ಬಕಬಕ ತಿನ್ನುವ ಬಕಪಕ್ಷಿ ನಾನಾಗಿದ್ದೆ. ಜುಮ್ಮೆಂದಾಗಲೇ ಹಲ್ಲು ಚಳಿತದ್ದು ಗೊತ್ತಾಗುತ್ತಿತ್ತು. ನನ್ನ ಬಾಯಲ್ಲಿ ನೀರೂರಿತು. ಮೆಲ್ಲನೆ ಬಗ್ಗಿ, ಐದಾರು ಹುಂಚಿಹೂವುಗಳನ್ನು ಆರಿಸಿಕೊಂಡು ತಿನ್ನುವಾಸೆ ಮೂಡಿತು. ಆದರೆ... ನಾನೀಗ ಪುಟ್ಟ ಹುಡುಗನಲ್ಲ...ದೊಡ್ಡವ.... ದೊಡ್ಡ ಪಗಾರದವ...ಪ್ಯಾಂಟು ಬೂಟು... ಇಂಥ ಕಾಲದಲ್ಲಿ... ಅದೂ ರಸ್ತೆಯಲ್ಲಿ ನಿಂತು... ನಾನು ಹುಂಚಿಹೂವು ಆರಿಸಿದರೆ ಜನ ಏನೆಂದಾರು? ಅದನ್ನು ಅಲ್ಲೇ ಬಿಟ್ಟೆ. ಬೂಟು ಖಟ್ ಖಟ್ ಊರುತ್ತಾ ಮುಂದೆ ಸಾಗಿಬಿಟ್ಟೆ. ಮುಂದೆ ಒಂದು ವಾರದ ಅನಂತರ ಅದೇ ಹುಣಿಸೆ ಮರದ ಕೆಳಗಿನಿಂದ ಹೋಗುವಾಗ ಸ್ವಲ್ಪ ಬಲಿತ ಎಳನಾಗರಕಾಯಿಗಳು ಕಂಡವು. ಕೆಲವು ಹುಡುಗರು ಹುಂಚಿಮರಕ್ಕೆ ಕಲ್ಲು ಎಸೆದು, ನಾಗರಕಾಯಿ ಬೀಳಿಸಿ ತಿನ್ನುತ್ತಿದ್ದರು. ನನ್ನ ಬಾಯಲ್ಲಿ ಹಂಡೆ ನೀರು ಭಿಲ್ಲೆಂದು ಚಿಮ್ಮಿತು. ಆ ಹುಡುಗರಿಗೆ ಜಬರಿಸುವ ನೆಪದಲ್ಲಿ ನಿಂತು ಅವರಿಗೆಂದೆ, “ಲೇ...ಲೇ...ಕಲ್ಲು ಹೊಡೀಬ್ಯಾಡ್ರಿ...! ಯಾರ ತಲೆ ಒಡೀಬೇಕಂತ ಮಾಡಿದ್ದೀರಿ?” ನನ್ನ ಗದರಿಕೆಗೆ ಆ ಹುಡುಗರು ಅಂಜಿ ದಿಕ್ಕಾಪಾಲಾಗಿ ಓಡಿಬಿಟ್ಟರು. “ಅಯ್ಯಯ್ಯೋ” ಅಂದೆ! ಅವರು ತೂರಿದ ಕಲ್ಲು ನೇರವಾಗಿ ನನ್ನ ತಲೆಗೆ ಬಡಿದಿದ್ದರೂ ನಾನು ಬೇಡ ಅನ್ನುತ್ತಿರಲಿಲ್ಲ. ಅಷ್ಟು ಪ್ರೀತಿ ನನಗೆ ಹುಂಚಿಕಾಯಿಯ ಮೇಲೆ. ಸ್ವಲ್ಪ ದಿನಗಳ ಅನಂತರ ಅದೇ ಮರದ ದಾರಿಗೆ ಬಂದೆ. ಅಬ್ಬಾ...! ಇನ್ನೂ ಒಂದು ವಿಚಿತ್ರ ಕಂಡೆ! ಹುಂಚಿಗಿಡದ ಇಳಿಬಿದ್ದ ಉದ್ದ ಟೊಂಗೆಗಳನ್ನು ಹಿಡಿದು ಕೆಲವು ಹುಡುಗಿಯರು ಜೋಕಾಲಿ ಜೀಕುತ್ತಿದ್ದರು. ಒಂದು ಕ್ಷಣ ನಿಂತೆ, ಹೌದು! ನಾನು ಚಿಕ್ಕವನಿದ್ದಾಗ ಹೀಗೆಯೇ ಜೋಕಾಲಿ ಜೀಕುತ್ತಿದ್ದೆ. ಎರಡು ಮೂರು ವಾರ ದಾಟಿದವು. ಆ ಹುಂಚಿಮರದ ಬಳಿಗೆ ಬಂದಾಗ ಅಲ್ಲಿ ಹಬ್ಬದ ವಾತಾವರಣ. ಕಾರಣ ‘ಡೋರೆ ಹುಣಿಸೆ’. ಅಂದರೆ....ಇತ್ತ ಕಾಯಿ ಹುಣಿಸೆಯು ಅಲ್ಲ; ಅತ್ತ ಹಣ್ಣು ಹುಣಿಸೆಯು ಅಲ್ಲ ...ಇದರ ಮಧ್ಯದ ಹಂತದ ಹಳದಿ-ಹಸಿರು ಬಣ್ಣದ ಡೋರೆಹುಣಿಸೆ ಹಣ್ಣು. ಒಂದು ವಿಶಿಷ್ಟ ರುಚಿಯ ಹಣ್ಣು. ಈ ಹಣ್ಣಿನ ಅದ್ಭುತ ರುಚಿಯು ಆಪೂಸ್ ಮಾವಿನ ಹಣ್ಣಿನ ರುಚಿಗಿಂತ ಮೇಲು! ಮತ್ತೊಂದು ವಾರ ಕಳೆಯಿತು. ಆ ಹುಣಿಸೆಮರದ ಹತ್ತಿರ ಒಂದು ದುಂಡಾದ ಬಂಡೆಗಲ್ಲು ಇತ್ತು. ನಾನು ಸಂಜೆ ಗಾಳಿ ಸೇವಿಸುವ ನೆಪಮಾಡಿಕೊಂಡು ಅಲ್ಲಿ ಹೋಗಿ ಕುಳಿತೆ. ಅಲ್ಲಿ ಮರಕುಟಿಗನ ಹಕ್ಕಿ, ಕಾಗೆ, ಗುಬ್ಬಿ, ಮೈನಾ, ಟಿಟ್ಟಿಭ ಮುಂತಾದ ಪಕ್ಷಿಗಳು ಕಾಣಿಸಿಕೊಂಡವು. ಆ ಹಕ್ಕಿಮಿತ್ರರೊಂದಿಗೆ ಮಾತಾಡಿದೆ. ಅವೆಲ್ಲವೂ ಆ ಹುಣಿಸೆಮರದಲ್ಲಿ ಹಾಡಿ ನಲಿಯುತ್ತಿದ್ದವು. ಕತ್ತಲೆಯಾಗುತ್ತ ಬಂತು. ತಂಗಾಳಿ ಬೀಸಿತು. ಅಲ್ಲಿಂದ ಎದ್ದೆ. ಹುರಿದ ಹುಂಚಿಕಪ್ಪ ಕಟುಂಕಟುಂ ಎಂದು ತಿಂದದ್ದು ನೆನಪಾಯಿತು. ಹುಂಚಿಹಣ್ಣಿನ ಜೊತೆಗೆ ಉಪ್ಪು, ಜೀರಿಗೆ-ಬೆಲ್ಲ ಬೆರೆಸಿ ಕುಟ್ಟಿ ಉಂಡೆಮಾಡಿ ಕಡ್ಡಿಗೆ ಸಿಕ್ಕಿಸಿ ಜುರುಜುರು ಚೀಪಿದ ನೆನಪು ಮರುಕಳಿಸಿತು. ಹೀಗೆ ಹುಂಚಿಮರದೊಂದಿಗಿನ ನನ್ನ ಸಂಬಂಧ ಎಂದೆಂದಿಗೂ ಮರೆಯಲಾರದ್ದು. ಮತ್ತೆ ಹಲವಾರು ವಾರಗಳು ಕಳೆದ ಮೇಲೆ ನಾನು ಅದೇ ದಾರಿಯಲ್ಲಿ ಹೊರಟಿದ್ದೆ. ಆ ದೊಡ್ಡ ಹುಣಿಸೆ ಮರವಿದ್ದ ಸ್ಥಳಕ್ಕೆ ನಾನು ಬಂದಾಗ... ಸುತ್ತಲೂ ನೋಡಿದೆ...ಆ ಮರವೇ ಕಾಣೆಯಾಗಿತ್ತು! ಆ ಮರದ ಸಾವಿರಾರು ಟೊಂಗೆಗಳ ಜಾಗದಲ್ಲಿ ಬರಿಯ ಬೋಳು ಮುಗಿಲು ಮಾತ್ರ ಕಾಣಿಸುತ್ತಿತ್ತು! ಎದೆ ಜೋರಾಗಿ ಬಡಿದುಕೊಂಡಿತು. ಅಲ್ಲಿ ಆಟ ಆಡುತ್ತಿದ್ದ ಒಬ್ಬ ಹುಡುಗನನ್ನು ಕರೆದು ಕೇಳಿದೆ: “ಏ ತಮ್ಮ... ಇಲ್ಲಿ ಹುಂಚಿ ಮರ ಇತ್ತಲ್ಲ... ಏನಾಯ್ತು?” ಆತ ಸಪ್ಪೆ ಮುಖ ಮಾಡಿಕೊಂಡು ಹೇಳಿದ- “ಕಡಿದರು..ಕಡಿದುಬಿಟ್ಟರು..” “ಆಂ...ಆಂ...ಕಡಿದರೆ? ಯಾಕೆ? ಯಾಕೆ?” ಒಂದೇ ಉಸಿರಿನಲ್ಲಿ ಕೇಳಿದೆ. “ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ. ಇದರಲ್ಲಿ ದೆವ್ವ ವಾಸಮಾಡ್ತಿತ್ತಂತೆ, ಅದಕ್ಕ ಕಡಿದುಬಿಟ್ರು ಸಾವ್ಕಾರ್ರು...” ಆ ಹುಡುಗ ಆಕಾಶವನ್ನು ನೋಡುತ್ತ ಕಂಗಾಲಾಗಿ ನಿಂತುಬಿಟ್ಟನು. ಮೇಲೆ ಬಿಸಿಲು.. ಕೆಳಗೆ ಬೋಳು ನೆಲ... ಅಷ್ಟು ಕಾಲ ನಾನು ಪ್ರೀತಿಸುತ್ತಿದ್ದ ಹುಣಿಸೆಮರ ಅಂದು ಕಾಣದಾಗಿತ್ತು. ಮೂಢನಂಬಿಕೆಗೆ ಬಲಿಯಾಗಿತ್ತು. ಎಲ್ಲೋ ದೂರದಿಂದ ಅದೇ ಹುಣಿಸೆಮರ ಕೂಗಿ ಕೊಂಡಂತೆ ಭಾಸವಾಯಿತು. “ಮನುಷ್ಯರು ಯಾಕೆ ಹೀಗೆ ಮಾಡುತ್ತಾರೆ?”

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಹುಂಚಿಹೂವು ತಿನ್ನುವುದರಿಂದ ಹಲ್ಲುಗಳು ಏನಾಗುತ್ತವೆ?

    Answer

    ಹುಂಚಿಹೂವು ತಿನ್ನುವುದರಿಂದ ಹಲ್ಲುಗಳು ಚಳಿಯುತ್ತವೆ.

  2. ೨. ಡೋರೆಹುಣಿಸೆ ಎಂದರೇನು?

    Answer

    ಡೋರೆಹುಣಿಸೆ ಎಂದರೆ ಕಾಯಿ ಹುಣಿಸೆಯೂ ಅಲ್ಲದ ಹಣ್ಣು ಹುಣಿಸೆಯೂ ಅಲ್ಲದ ಮಧ್ಯದ ಹಂತದ ಹಳದಿ-ಹಸಿರು ಬಣ್ಣದ ಹಣ್ಣು.

  3. ೩. ಹುಂಚಿಮರದ ಟೊಂಗೆಗಳನ್ನು ಹಿಡಿದು ಹುಡುಗಿಯರು ಏನು ಮಾಡುತ್ತಿದ್ದರು?

    Answer

    ಹುಂಚಿಮರದ ಟೊಂಗೆಗಳನ್ನು ಹಿಡಿದು ಹುಡುಗಿಯರು ಜೋಕಾಲಿ ಜೀಕುತ್ತಿದ್ದರು.

  4. ೪. ಹುಂಚಿಮರದ ಬಳಿಯಲ್ಲಿ ಹಬ್ಬದ ವಾತಾವರಣವಿರಲು ಯಾರು ಕಾರಣವಾದರು?

    Answer

    ಹುಂಚಿಮರದ ಬಳಿಯಲ್ಲಿ ಹಬ್ಬದ ವಾತಾವರಣವಿರಲು ಡೋರೆಹುಣಿಸೆ ಕಾರಣವಾಯಿತು.

  5. ೫. ಮೂಢನಂಬಿಕೆಗೆ ಯಾವುದು ಬಲಿಯಾಗಿತ್ತು?

    Answer

    ಮೂಢನಂಬಿಕೆಗೆ ಹುಣಿಸೆಮರವು ಬಲಿಯಾಗಿತ್ತು.

Interactive Lab