CRECT Education

Class 5 Kannada Lesson 11: The Cage School | KTBS First Language – Learn the Story

Description

Discover the play ಪಂಜರ ಶಾಲೆ (The Cage School) by B. V. Karanth, beat by beat, and learn key Kannada vocabulary. For Class 5 First Language students.

ಗದ್ಯ (prose) · ಬಿ. ವಿ. ಕಾರಂತ

ಪಠ್ಯFull text

(ವಸಂತದ ವೈಭವ; ರಾಜೋದ್ಯಾನ, ಹಿನ್ನೆಲೆಯಲ್ಲಿ ಆಲಾಪ, ಅನಂತರ-ಗಿಳಿವಿಂಡು ವಿಹರಿಸಿ ಹೊರಡಲು ಸಿದ್ಧವಾಗುತ್ತಿರುವಷ್ಟರಲ್ಲಿ ಒಂದು ಗಿಳಿಮರಿ ಹಣ್ಣು ತೂಗಿ ಬಾಗಿದ ಗಿಡವೊಂದನ್ನು ಕಂಡು ಸಂತೋಷದಿಂದ ಹುಚ್ಚೆದ್ದು ಕೂಗುವುದು.) **ಗಿಳಿಮರಿ :** ಬನ್ನಿ ಬನ್ನಿ, ಮಧುಫಲ ತಿನ್ನಿ, ಬೇಗ, ಹಾರಿ ಬನ್ನಿ. [ಅಲ್ಲಿವರೆಗೆ ನಿದ್ರೆಮಾಡುತ್ತಿದ್ದ ಉದ್ಯಾನ ರಕ್ಷಕರು ಕೂಗಿಗೆ ಎಚ್ಚೆತ್ತು ಓಡಿ ಬರುವರು.] **ರಕ್ಷಕರು :** ಹಿಡಿಯಿರಿ, ಬಡಿಯಿರಿ, ಹಣ್ಣುಗಳ್ಳರನ್ನು ಬಡಿದೋಡಿಸಿರಿ. [ಗಿಳಿವಿಂಡು ಹೆದರಿ ಚಲ್ಲಾಪಿಲ್ಲಿ ಓಡತೊಡಗುವುವು. ರಕ್ಷಕರು ಕೋಲಿನಿಂದ ನೆಲಬಡಿಯುತ್ತ ಅಟ್ಟಿಸುವರು.] **ರಕ್ಷಕ ೧ :** ಹಾಂ, ಸದೆಬಡಿಯಿರಿ, ಬಿಡಬೇಡಿ. ಒಂದು ಪಿಳ್ಳೆಯೂ ಹಾರಿ ಹೋಗದಿರಲಿ. [ರಕ್ಷಕರ ಕೈಗಾಗಲೀ ಬಳೆಗಾಗಲೀ ಸಿಕ್ಕದೆ ಗಿಳಿಗಳು ತಪ್ಪಿಸಿಕೊಂಡು ಹಾರಿ ಹೋಗುವುವು. ರಕ್ಷಕರು ಮೇಲುಸಿರು ಬಿಡುತ್ತ ಕೂತುಕೊಳ್ಳುವರು. ಮರಿಗಿಳಿಯೊಂದು ಮಾತ್ರ ಪರಿವೆಯೇ ಇಲ್ಲದೆ ಹಣ್ಣು ತಿನ್ನುವುದರಲ್ಲಿ ಮಗ್ನವಾಗಿದೆ.] **ಗಿಳಿಮರಿ :** ಅಣ್ಣ, ಅಮ್ಮ, ಬನ್ನಿ ಬನ್ನಿ. ಟೇಂ ಟೇಂ. ಚಿಕ್ಕಪ್ಪ ದೊಡ್ಡಪ್ಪ, ಹಣ್ಣು ತಿನ್ನಿ. ಟೇಂ ಟೇಂ. ಎಲ್ಲಾ ಹಣ್ಣೂ ನಮ್ಮೇ ನಮ್ಮೇ ಎಲ್ಲಾ ಹಣ್ಣು .. ಟೇಂ ಟೇಂ . [ದಣಿದು ಕೂತ ರಕ್ಷಕರ ಕಿವಿ ನೆಟ್ಟಗಾಗುವುದು, ಹುಡುಕಲು ಪ್ರಾರಂಭಿಸುವರು.] **ರಕ್ಷಕ ೧ :** ಹಣ್ಣುಗಳ್ಳ ಇಲ್ಲೇ ಎಲ್ಲೋ ಇದ್ದಾನೆ, ಹುಡುಕೋ ಹುಡುಕೋ. [ಹುಡುಕುವರು] **ಗಿಳಿಮರಿ :** ಟೇಂ ಟೇಂ ಬನ್ನಿ ಬನ್ನಿ. **ರಕ್ಷಕ ೨ :** ಅಕೋ! ತೋಟಗಳ್ಳ ಕೊನೆಗೂ ಸಿಕ್ಕ! ಹಿಡಿಯೋ ಬಡಿಯೋ! [ರಕ್ಷಕರು ಗಿಳಿಯನ್ನು ಸುತ್ತುಗಟ್ಟುವರು.] **ರಕ್ಷಕ ೧ :** ರಾಜನ ತೋಟ ಹಾಳುಮಾಡ್ತೀ? **ರಕ್ಷಕ ೨ :** ದೊರೇ ತೋಟದ ಹಣ್ಣು ತಿನ್ತೀ? **ರಕ್ಷಕ ೧ :** ಇವತ್ತು ನಿನಗೆ ಕೋಲುಪೂಜೆ! **ರಕ್ಷಕ ೨ :** ಕಿತ್ತುಬಿಡೋನ ರೆಕ್ಕೆ ಪುಕ್ಕ! **ರಕ್ಷಕ ೧ :** ಮೂರ್ಖರ ಮೂರ್ಖ ಗಿಳಿಯಪ್ಪ! **ರಕ್ಷಕ ೨ :** ಹೆಡ್ಡರ ಹೆಡ್ಡ ತುಡುಗಪ್ಪ! **ರಕ್ಷಕ ೧ :** ಮುಗೀತು ಇವತ್ತು ನಿನ್ನ ಕಥೆ! **ರಕ್ಷಕ ೨ :** ತಿನ್ನೋದು ನಿಲ್ಲೋ ಗಿಳಿಪಿಳ್ಳೆ ! **ರಕ್ಷಕ ೧ :** ಗೊತ್ತೇ ನಿನಗೆ ತೋಟ ಯಾರದು? **ರಕ್ಷಕ ೨ :** ನಿಮ್ಮ ತಾತಂದೇ? **ರಕ್ಷಕ ೧ :** ನಿಮ್ಮಪ್ಪಂದೇ? **ರಕ್ಷಕ ೨ :** ನಮ್ಮ ರಾಜಂದು ! **ರಕ್ಷಕ ೧ :** ಈ ಮರ ಈ ಗಿಡ, ಹೂವು ಹಣ್ಣು ... **ರಕ್ಷಕ ೨ :** ಎಲ್ಲಾ ನಮ್ಮ ರಾಜಂದು ! **ರಕ್ಷಕ ೧ :** ಎಂಥಾ ರಾಜ ಗೊತ್ತೇ ನಿಂಗೆ ? ರಾಜಾಧಿರಾಜ **ರಕ್ಷಕ ೨ :** ಸಾವಿರ ಸಾವಿರ ಸೇನೆಯ ರಾಜ! **ಗಿಳಿಮರಿ :** ಬನ್ನೋ, ಬನ್ನೊ ನಮ್ಮದು ಹಣ್ಣು, ಹಣ್ಣು ತಿನ್ನೋವನದೇ ಹಣ್ಣಿನ ತೋಟ! **ರಕ್ಷಕ ೧ :** ಏ ಮರಿಪಿಳ್ಳೆ, ರಾಜನ ಭಯ ಇಲ್ಲೇನೋ ನಿಂಗೆ. **ರಕ್ಷಕ ೨ :** ರಾಜಂದು ಹೋಗ್ಲಿ, ನಮ್ಮ ಭಯಾನೂ ಇಲ್ಲೇನೋ. **ರಕ್ಷಕ ೧ :** ಹೋಗ್ಲಿ. ಈ ಕೋಲಿನ ಭಯ ? **ರಕ್ಷಕ ೨ :** ಹಿಡಿಯೋ, ಬಲೆ ಹಾಕೋ, [ಬಲೆ ಬೀಸುವರು, ಗಿಳಿಮರಿ ಬಲೆಯೊಳಗೆ ಸಿಕ್ಕಿ ಬೀಳುವುದು] [ನೇಪಥ್ಯದಲ್ಲಿ ವಂದಿಮಾಗಧರ ಧ್ವನಿ, ಕ್ರಮೇಣ ಅವರು ರಂಗವನ್ನು ಪ್ರವೇಶಿಸುವರು.] **ವಂದಿಗಳು :** ಸಾವಧಾನ, ಸಾವಧಾನ.... ಮಹಾಕರುಣಾಳು ಖಗಮೃಗ ಕೃಪಾಳು ಗಿಡಮರದಯಾಳು ವಿದ್ಯಾವಂತ ಪ್ರಜ್ಞಾವಧಾನಿ ಕಣಕಣಕೂ ವಿದ್ಯಾದಾನಿ ವಾಚಾಳಪುರವರಾಧೀಶ್ವರ ರಾಜಾಧಿರಾಜ ರಾಜಮಾರ್ತಾಂಡರು ದಯಮಾಡಿಸುತ್ತಿದ್ದಾರೆ, ಭೋ ಪರಾಕ್.... [ಗಿಳಿಮರಿ ಬಿಡಿಸಿಕೊಳ್ಳಲು ಒದ್ದಾಡುತ್ತಿದೆ. ಟೇಂ ಟೇಂ ಎಂದು ಕಿರುಚುತ್ತದೆ. ಅಷ್ಟರಲ್ಲಿ ರಾಜ, ಮಂತ್ರಿ, ರಾಜನ ಅಳಿಯ ಪ್ರವೇಶಿಸುವರು.] **ಗಿಳಿಮರಿ :** ಟೇಂ...ಟೇಂ... **ರಾಜ :** (ಆಶ್ಚರ್ಯದಿಂದ) ಇದೇನು ಒದರುತ್ತಿದೆ? **ಗಿಳಿಮರಿ :** ಟೇಂ.....ಟೇಂ..... **ರಾಜ :** ಯಾವ ಭಾಷೆ ಮಾತಾಡ್ತಾ ಇದೆ? ಪ್ರಾಕೃತ ಭಾಷೆ? ಪಿಶಾಚ ಭಾಷೆ? **ಗಿಳಿಮರಿ :** ಟೇಂ... **ರಾಜ :** (ರೇಗಿ, ಮಂತ್ರಿಯ ಕಡೆ) ಏನಿದರ ಅರ್ಥ? **ವಂದಿಗಳು :** ಟೇಂ (ಮಂತ್ರಿ ಸನ್ನೆ ಮಾಡಲು ಗಪ್ಪನೆ ಬಾಯಿಮುಚ್ಚುವರು.) **ಮಂತ್ರಿ :** ರಾಜಾಧಿರಾಜ, ಇದೊಂದು ಗಿಳಿಮರಿ. ಕಾಡುಜಾತಿ, ಅನಾಗರಿಕ, ವಸಂತಕಾಲಕ್ಕೆ ಮದ ಹತ್ತಿ ರಾಜತೋಟಕ್ಕೆ ನುಗ್ಗಿ ಹಣ್ಣುಹಂಪಲುಗಳನ್ನು ನಾಶಪಡಿಸಿದೆ. **ರಾಜ :** ಇದಕ್ಕೆ ಮಾತು ಬರುತ್ತದೆಯೆ? **ಮಂತ್ರಿ :** ಇಲ್ಲ. **ರಾಜ :** ಹಾಡು ಬರುತ್ತದೆಯೆ? **ಮಂತ್ರಿ :** ಇಲ್ಲ. **ರಾಜ :** ಓದು ಬರುತ್ತದೆಯೆ? **ಮಂತ್ರಿ :** ಇಲ್ಲ. **ರಾಜ :** ನೃತ್ಯ ಬರುತ್ತದೆಯೆ? **ಮಂತ್ರಿ :** ಇಲ್ಲ. **ರಾಜ :** ತರ್ಕ, ಶಾಸ್ತ್ರ, ಪುರಾಣ, ವ್ಯಾಕರಣ? **ಮಂತ್ರಿ :** ಯಾವುದೂ ಬರೋದಿಲ್ಲ. **ರಾಜ :** ಮತ್ತೇನು ಬರುತ್ತದೆ? ಜೀವನವೆಲ್ಲ ಏನು ಮಾಡುತ್ತದೆ? **ಗಿಳಿಮರಿ :** ಟೇಂ...ಟೇಂ... **ಮಂತ್ರಿ :** ಮಹಾಪ್ರಭು, ಈ ಗಿಳಿ ಅರಣ್ಯವಾಸಿ, ನಿರಕ್ಷರಕುಕ್ಷಿ; ತೀರಾ ಅಸಂಸ್ಕೃತ. ಸಂಗೀತವಿಲ್ಲ, ನೃತ್ಯವಿಲ್ಲ, ಗದ್ಯಪದ್ಯದ ಭೇದ ಗೊತ್ತಿಲ್ಲ, ಒಂದು ಎರಡರ ಮಗ್ಗಿ ಕೂಡಾ ಬರೋದಿಲ್ಲ, ಇದಕ್ಕೆ ಬರೋದು ಒಂದೇ- ಗಿಡಮರ ಹತ್ತಿ ಕೊಂಬೆ ಮುರಿದು ಹಣ್ಣು ತಿನ್ನೋದು, ಉದುರಿಸೋದು, ಆಮೇಲೆ.... **ಗಿಳಿಮರಿ :** ಟೇಂ...ಟೇಂ... **ಮಂತ್ರಿ :** ಹಾಗನ್ನೋದು. **ರಾಜ :** ಪಾಪ ಪಾಪ! [ರಕ್ಷಕರು, ವಂದಿಗಳು 'ಅಯ್ಯೋ ಪಾಪ' ಎಂದು ದನಿಗೂಡಿಸುವರು.] **ಗಿಳಿಮರಿ :** ಟೇಂ...ಟೇಂ... **ರಾಜ :** ಛೀ ಛೀ ಛೀ! ಬರೇ ಹಣ್ಣು ತಿನ್ನೋದೊಂದೇ ಗೊತ್ತೆ ? ಮಹಾವಾಚಾಳ ನಗರೋದ್ಯಾನದಲ್ಲಿ ಬಂದು ಹಣ್ಣು ತಿನ್ನೋದು ಮಾತ್ರ ಗೊತ್ತೆ? ವಂದಿಮಾಗಧರೆ- **ವಂದಿಗಳು :** ಮಹಾಕರುಣಾಳು ಖಗಮೃಗಕೃಪಾಳು ಗಿಡಮರದಯಾಳು ವಿದ್ಯಾವತಂಸ ಪ್ರಜ್ಞಾವಧಾನಿ ಕಣಕಣಕೂ ವಿದ್ಯಾದಾನಿ ಮಹಾವಾಚಾಳಪುರ- **ರಾಜ :** ಈ ಸಭ್ಯ ಸುಶಿಕ್ಷಿತ ನಾಗರಿಕ ರಾಜ್ಯದಲ್ಲಿ ಈ ಅನಾಗರಿಕ ಪಕ್ಷಿ! ರಾಜ ತೋಟದಲ್ಲಿ ನಿರಕ್ಷರ ಕುಕ್ಷಿ ! ಮತ್ತೆ ಇದಕ್ಕೆ ನೀವೇ ಸಾಕ್ಷಿ !... ಮಂತ್ರಿ, ಈ ಅಸಭ್ಯ ಪಕ್ಷಿಯನ್ನು ರಾಜಶಾಲೆಗೆ ಸೇರಿಸತಕ್ಕದ್ದು. ರಾಜಾಧ್ಯಾಪಕರಿಂದ ಇದಕ್ಕೆ ಶಿಕ್ಷಣ ಕೊಡಿಸು. ಈ ಅನಾಗರಿಕ ಶುಕಪಕ್ಷಿಯ ಆದಿಮ ಪ್ರವೃತ್ತಿಗಳನ್ನು ಸುಧಾರಿಸಿ ಆಧುನಿಕ ಮಾಡತಕ್ಕದ್ದು. **ಮಂತ್ರಿ :** ಅಪ್ಪಣೆ ಪ್ರಭು. **ರಾಜ :** ಇದು ಸಭ್ಯತೆ ಕಲಿಯಲಿ, ಕಾಡುತನ ಮರೆಯಲಿ. ಶಾಸ್ತ್ರ ವ್ಯಾಕರಣ ಕಲಿತು ಸುಶಿಕ್ಷಿತವಾಗಲಿ. ತಾನು ಸುಸಂಸ್ಕೃತವಾಗಲಿ. ತಾನು ಸುಸಂಸ್ಕೃತನಾಗಿ ಕಾಡಿನ ಉಳಿದ ಶುಕಪಕ್ಷಿಗಳನ್ನು ಸಭ್ಯ ಮಾಡಲಿ. **ಮಂತ್ರಿ :** ಅಪ್ಪಣೆ ಪ್ರಭು. **ಅಳಿಯ :** ಮಹಾರಾಜ, ರಾಜಮಾವ, ನನ್ನದೊಂದು ನಮ್ರ ನಿವೇದನೆ; ಇದನ್ನು ರಾಜಶಾಲೆಗೆ ಸೇರಿಸುವ ಮೊದಲು ಒಂದು ಮುಖ್ಯ ತಥ್ಯವನ್ನು ಕಂಡುಹಿಡಿಯಬೇಕು. ಇದರ ಅಸಭ್ಯತೆಗೆ ಮತ್ತು ಅವಿದ್ಯೆಗೆ ಮೂಲಕಾರಣವನ್ನು ಕಂಡುಹಿಡಿಯಬೇಕು. ಈ ಗಿಳಿಮರಿ ತಿನ್ನೋದೇನು, ಕುಡಿಯೋದೇನು, ಇದರ ಆವರಣ ಎಂಥದು, ಇದು ಇರೋದೆಲ್ಲಿ, ಹಾರೋದೆಲ್ಲಿ, ಇದರ ರೆಕ್ಕೆ ಪುಕ್ಕ ಕೊಕ್ಕುಗಳ ಉದ್ದಗಲವೆಷ್ಟು, ಭಾರವೆಷ್ಟು-ಈ ಅಂಶಗಳ ಬಗ್ಗೆ ದೀರ್ಘಸಂಶೋಧನೆ ನಡೆಯಬೇಕು. **ಮಂತ್ರಿ :** ಪ್ರಭು, ಯುವರಾಜ ಅಳಿಯದೇವರು ಮಹಾ ಪ್ರತಿಭಾಶಾಲಿಗಳು, ದೇಶಕೋಶ ಸುತ್ತಿ ಬಂದವರು. ವಿದೇಶಗಳಿಂದ ಪದವಿಗಳನ್ನು ಹೊತ್ತು ತಂದವರು. ಕಾಂಭೋಜದೇಶದಲ್ಲಿ ಪ್ರಾಣಿಶಾಸ್ತ್ರ, ಪಕ್ಷಿಶಾಸ್ತ್ರ ಪಾರಂಗತರಾದವರು. (ದನಿ ತಗ್ಗಿಸಿ) ಸದ್ಯ ನಿರುದ್ಯೋಗಿಗಳು. ಅದಕ್ಕೇ ಒಂದು ವಿನಂತಿ-ಅಳಿಯರಾಜರಿಗೆ ಶುಕಶಿಕ್ಷಣದ ಭಾರವನ್ನು ವಹಿಸಿಬಿಡಬಹುದು. **ರಾಜ :** ವಿನಂತಿಯನ್ನು ಸ್ವೀಕರಿಸಿದ್ದೇವೆ. ಅಳಿಯರಾಜ, ಇಂದಿನಿಂದ ನೀನು ಶುಕಶಿಕ್ಷಣದ ಮಂತ್ರಿ. **ಅಳಿಯ :** ಮಹಾರಾಜ, ರಾಜಮಾವ, ಇನ್ನೊಂದು ವಸಂತ ಬರುವುದರೊಳಗಾಗಿ ಈ ಕಾಡುಗಿಳಿ ತನ್ನ ವನ್ಯವ್ಯವಹಾರಗಳನ್ನು ಮರೆತಿರಬೇಕು, ಸಭ್ಯ ಸುಶಿಕ್ಷಿತ ಸುಸಂಸ್ಕೃತವಾಗಿರಬೇಕು. ಇದಕ್ಕಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ಒಂದು ಶುಕ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಬೇಕು. **ರಾಜ :** ನಿನ್ನ ಕಾರ್ಯದಲ್ಲಿ ಜಯವಾಗಲಿ. ಮಂತ್ರಿ, ಡಂಗುರ ಹೊಡೆಯಿಸು.ರಾಜ್ಯದ ಮೂಲೆ ಮೂಲೆಯ ಪ್ರತಿಯೊಬ್ಬ ಪ್ರಜೆಗೂ ಗೊತ್ತಾಗಲಿ-ಅಲ್ಲವಾದ ಒಂದು ಪಕ್ಷಿಯ ಶಿಕ್ಷಣದಲ್ಲೂ ರಾಜರ ಆಸಕ್ತಿ ಎಷ್ಟಿದೆ ಎನ್ನುವುದು. ನಮ್ಮ ಪುತ್ರಿಯೂ ಸಂತುಷ್ಟಳಾಗಲಿ, ಅಳಿಯರಾಜ ಶುಕಶಿಕ್ಷಣ ಮಂತ್ರಿಯಾದನೆಂದು. [ರಾಜ ವಂದಿಗಳ ಕಡೆ ನೋಡುತ್ತಾನೆ. ಅವರು ಪುನಃ ಪರಾಕು ಹೇಳುತ್ತ ನಿರ್ಗಮಿಸುತ್ತಾರೆ.] **ಕೌಶಲ :** ಮಾತನಾಡುವುದು. **ಸಾಮರ್ಥ್ಯ :** ನಾಟಕ ಮತ್ತು ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವುದು.

"ಕಲಿಯಲು ಸ್ವತಂತ್ರ ಇರಬೇಕು. ಒತ್ತಡ ಇರಬಾರದು." — "To learn, there must be freedom. There shouldn't be pressure."

ಪದಗಳ ಅರ್ಥword meanings

KannadaPronunciationMeaning
ಖಗಪಕ್ಷಿ ತರ್ಕ - ಆರು ದರ್ಶನಗಳಲ್ಲಿ ಒಂದು ಪುರಾಣ - ಹಿಂದಿನ ಕಾಲದಲ್ಲಿ ನಡೆದುಹೋದ ಕಥೆ ಪ್ರಜ್ಞಾವಧಾನಿ - ತಿಳಿವಳಿಕೆ ಹಾಗೂ ಸ್ಮರಣೆ ಶಕ್ತಿಯುಳ್ಳವನು ಮಧುಫಲ - ಸಿಹಿಯಾದ ಹಣ್ಣು ಮೃಗ - ಪ್ರಾಣಿ ರಕ್ಷಕರು - ಕಾಪಾಡುವವರು ವಿದ್ಯಾವತಂಸ - ವಿದ್ಯಾವಂತ ವಂದಿಮಾಗಧರು - ಸ್ತುತಿ ಪಾಠಕರು, ಹೊಗಳುಭಟ್ಟರು
ಶುಕಗಿಳಿ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಗಿಳಿಮರಿಯು ಏನನ್ನು ತಿನ್ನಲು ತನ್ನ ಬಳಗವನ್ನು ಕರೆಯಿತು?

    Answer

    ಗಿಳಿಮರಿಯು ಮಧುಫಲವನ್ನು ತಿನ್ನಲು ತನ್ನ ಬಳಗವನ್ನು ಕರೆಯಿತು.

  2. ೨. ಮಂತ್ರಿಯ ಪ್ರಕಾರ ಗಿಳಿಮರಿಗೆ ಏನೇನು ಬರುವುದಿಲ್ಲ ಎಂದು ಹೇಳಿದನು?

    Answer

    ಮಂತ್ರಿಯ ಪ್ರಕಾರ ಗಿಳಿಮರಿಗೆ ಮಾತು, ಹಾಡು, ಓದು, ನೃತ್ಯ, ತರ್ಕ, ಶಾಸ್ತ್ರ, ಪುರಾಣ ಮತ್ತು ವ್ಯಾಕರಣ ಇವು ಯಾವುವೂ ಬರುವುದಿಲ್ಲ.

  3. ೩. ರಾಜನು ಗಿಳಿಮರಿಯನ್ನು ಯಾವ ಶಾಲೆಗೆ ಸೇರಿಸಲು ಆದೇಶ ಮಾಡಿದನು?

    Answer

    ರಾಜನು ಗಿಳಿಮರಿಯನ್ನು ರಾಜಶಾಲೆಗೆ ಸೇರಿಸಲು ಆದೇಶ ಮಾಡಿದನು.

  4. ೪. ರಾಜನು ಯಾರನ್ನು ಶುಕಶಿಕ್ಷಣ ಮಂತ್ರಿಯನ್ನಾಗಿ ನೇಮಿಸಿದನು?

    Answer

    ರಾಜನು ತನ್ನ ಅಳಿಯನನ್ನು ಶುಕಶಿಕ್ಷಣ ಮಂತ್ರಿಯನ್ನಾಗಿ ನೇಮಿಸಿದನು.

  5. ೫. ರಾಜನು ಗಿಳಿಮರಿಗೆ ಏನನ್ನು ಕಲಿಸಬೇಕು ಎಂದು ಹೇಳಿದನು?

    Answer

    ರಾಜನು ಗಿಳಿಮರಿಗೆ ಸಭ್ಯತೆ, ಶಾಸ್ತ್ರ ಮತ್ತು ವ್ಯಾಕರಣವನ್ನು ಕಲಿಸಬೇಕು ಮತ್ತು ಅದು ಸುಸಂಸ್ಕೃತವಾಗಿ ಇತರ ಶುಕಪಕ್ಷಿಗಳನ್ನೂ ಸಭ್ಯಗೊಳಿಸಬೇಕು ಎಂದು ಹೇಳಿದನು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಗಿಳಿಮರಿಯ ಬಗ್ಗೆ ಮಂತ್ರಿಯು ರಾಜನಿಗೆ ಏನು ಹೇಳಿದನು?

    Answer

    ಮಂತ್ರಿಯು ಗಿಳಿಮರಿಯು ಕಾಡುಜಾತಿಯ ಅನಾಗರಿಕ ಪಕ್ಷಿಯೆಂದೂ, ರಾಜತೋಟಕ್ಕೆ ನುಗ್ಗಿ ಹಣ್ಣುಗಳನ್ನು ನಾಶಪಡಿಸಿದೆಯೆಂದೂ ಹೇಳಿದನು. ಅದು ನಿರಕ್ಷರಕುಕ್ಷಿಯಾಗಿದ್ದು, ಸಂಗೀತ, ನೃತ್ಯ, ಶಾಸ್ತ್ರ ಯಾವುದೂ ಬಾರದು. ಅದಕ್ಕೆ ಬರುವುದು ಕೇವಲ ಹಣ್ಣು ತಿನ್ನುವುದು ಮಾತ್ರ ಎಂದು ತಿಳಿಸಿದನು.

  2. ೨. ರಾಜನು ಗಿಳಿಮರಿಗೆ ಏನು ಮಾಡುವಂತೆ ಮಂತ್ರಿಗೆ ಹೇಳಿದನು?

    Answer

    ರಾಜನು ಮಂತ್ರಿಗೆ ಗಿಳಿಮರಿಯನ್ನು ರಾಜಶಾಲೆಗೆ ಸೇರಿಸಿ, ರಾಜಾಧ್ಯಾಪಕರಿಂದ ಶಿಕ್ಷಣ ಕೊಡಿಸಲು ಮತ್ತು ಅದರ ಆದಿಮ ಪ್ರವೃತ್ತಿಗಳನ್ನು ಸುಧಾರಿಸಿ ಆಧುನಿಕಗೊಳಿಸಲು ಹೇಳಿದನು.

  3. ೩. ಗಿಳಿಮರಿಯು ಏನೇನು ಕಲಿಯಬೇಕು ಎಂದು ರಾಜನು ಹೇಳುತ್ತಾನೆ?

    Answer

    ಗಿಳಿಮರಿಯು ಸಭ್ಯತೆ ಕಲಿತು ಕಾಡುತನ ಮರೆಯಬೇಕು, ಶಾಸ್ತ್ರ ವ್ಯಾಕರಣ ಕಲಿತು ಸುಶಿಕ್ಷಿತವಾಗಬೇಕು, ಮತ್ತು ತಾನು ಸುಸಂಸ್ಕೃತನಾಗಿ ಕಾಡಿನ ಇತರ ಶುಕಪಕ್ಷಿಗಳನ್ನು ಸಭ್ಯಗೊಳಿಸಬೇಕು ಎಂದು ರಾಜನು ಹೇಳಿದನು.

  4. ೪. ರಾಜನ ಅಳಿಯನು ಏನೆಂದು ನಿವೇದನೆ ಮಾಡಿದನು?

    Answer

    ರಾಜನ ಅಳಿಯನು, ಗಿಳಿಮರಿಯನ್ನು ಶಾಲೆಗೆ ಸೇರಿಸುವ ಮೊದಲು ಅದರ ಅಸಭ್ಯತೆಗೆ ಮತ್ತು ಅವಿದ್ಯೆಗೆ ಮೂಲಕಾರಣವನ್ನು ಸಂಶೋಧಿಸಬೇಕೆಂದು ನಿವೇದಿಸಿದನು. ಅದರ ಆಹಾರ, ಆವರಣ, ರೆಕ್ಕೆಪುಕ್ಕಗಳ ಉದ್ದಗಲ ಮೊದಲಾದವುಗಳ ವಿವರವಾದ ಅಧ್ಯಯನ ನಡೆಯಬೇಕೆಂದೂ ತಿಳಿಸಿದನು.

  5. ೫. ಮಂತ್ರಿಯು ರಾಜನ ಅಳಿಯನ ಬಗ್ಗೆ ಹೇಳಿದ ಮಾತುಗಳಾವುವು?

    Answer

    ಮಂತ್ರಿಯು ರಾಜನ ಅಳಿಯನನ್ನು ಮಹಾ ಪ್ರತಿಭಾಶಾಲಿ, ದೇಶಕೋಶ ಸುತ್ತಿ ಬಂದವನು, ವಿದೇಶಗಳಿಂದ ಪದವಿ ಪಡೆದವನು, ಕಾಂಭೋಜದೇಶದಲ್ಲಿ ಪ್ರಾಣಿಶಾಸ್ತ್ರ ಹಾಗೂ ಪಕ್ಷಿಶಾಸ್ತ್ರದಲ್ಲಿ ಪಾರಂಗತನೆಂದು ಹೊಗಳಿದನು. ಆತನು ಸದ್ಯಕ್ಕೆ ನಿರುದ್ಯೋಗಿಯಾಗಿದ್ದಾನೆಂದೂ ತಿಳಿಸಿದನು.

ಇ. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತಪದಗಳಿಂದ ತುಂಬಿರಿ.

  1. ೧. ಬನ್ನಿ ಬನ್ನಿ ____________ ತಿನ್ನಿ, ಬೇಗ, ಹಾರಿಬನ್ನಿ.

    Answer

    ಬನ್ನಿ ಬನ್ನಿ ಮಧುಫಲ ತಿನ್ನಿ, ಬೇಗ, ಹಾರಿಬನ್ನಿ.

  2. ೨. ಈ ಅಸಭ್ಯ ____________ ಯನ್ನು ರಾಜಶಾಲೆಗೆ ಸೇರಿಸತಕ್ಕದ್ದು.

    Answer

    ಈ ಅಸಭ್ಯ ಪಕ್ಷಿಯನ್ನು ರಾಜಶಾಲೆಗೆ ಸೇರಿಸತಕ್ಕದ್ದು.

  3. ೩. ತಾನು ಸುಸಂಸ್ಕೃತನಾಗಿ ಕಾಡಿನ ಉಳಿದ ____________ ಗಳನ್ನು ಸಭ್ಯಮಾಡಲಿ.

    Answer

    ತಾನು ಸುಸಂಸ್ಕೃತನಾಗಿ ಕಾಡಿನ ಉಳಿದ ಶುಕಪಕ್ಷಿಗಳನ್ನು ಸಭ್ಯಮಾಡಲಿ.

  4. ೪. ಅಳಿಯ ರಾಜ, ಇಂದಿನಿಂದ ನೀನು ____________ ದ ಮಂತ್ರಿ.

    Answer

    ಅಳಿಯ ರಾಜ, ಇಂದಿನಿಂದ ನೀನು ಶುಕಶಿಕ್ಷಣದ ಮಂತ್ರಿ.

  5. ೫. ಒಂದು ಪಕ್ಷಿಯ ____________ ದಲ್ಲೂ ರಾಜನ ಆಸಕ್ತಿ ಎಷ್ಟಿದೆ ಎನ್ನುವುದು.

    Answer

    ಒಂದು ಪಕ್ಷಿಯ ಶಿಕ್ಷಣದಲ್ಲೂ ರಾಜನ ಆಸಕ್ತಿ ಎಷ್ಟಿದೆ ಎನ್ನುವುದು.

Interactive Lab

ಖಗಪಕ್ಷಿ ತರ್ಕ - ಆರು ದರ್ಶನಗಳಲ್ಲಿ ಒಂದು ಪುರಾಣ - ಹಿಂದಿನ ಕಾಲದಲ್ಲಿ ನಡೆದುಹೋದ ಕಥೆ ಪ್ರಜ್ಞಾವಧಾನಿ - ತಿಳಿವಳಿಕೆ ಹಾಗೂ ಸ್ಮರಣೆ ಶಕ್ತಿಯುಳ್ಳವನು ಮಧುಫಲ - ಸಿಹಿಯಾದ ಹಣ್ಣು ಮೃಗ - ಪ್ರಾಣಿ ರಕ್ಷಕರು - ಕಾಪಾಡುವವರು ವಿದ್ಯಾವತಂಸ - ವಿದ್ಯಾವಂತ ವಂದಿಮಾಗಧರು - ಸ್ತುತಿ ಪಾಠಕರು, ಹೊಗಳುಭಟ್ಟರು
ಶುಕಗಿಳಿ