ಗದ್ಯ (prose) · ಕಾನ್‌ಸ್ಟನ್ಸ್ ಜೆ ಫಾಸ್ಟರ್
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಡಾಕ್ಟರ್ ತೇಡ್ಡಿಯಸ್ ಮಾರ್ಲಿನನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಯಾವುದನ್ನು ಅವಿವೇಕ ಎಂದು ಭಾವಿಸಿದ್ದನು?
Answerಡಾಕ್ಟರ್ ತೇಡ್ಡಿಯಸ್ ಮಾರ್ಲಿನನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ, ಗುಣವಾಗದ ಕಾಯಿಲೆ ಇರುವ ವ್ಯಕ್ತಿಗೆ ವೈದ್ಯಕೀಯ ಉಪಚಾರ ಮಾಡಿ ಬದುಕಿಸುವುದನ್ನು ಶುದ್ಧ ಅವಿವೇಕ ಎಂದು ಭಾವಿಸಿದ್ದನು.
೨. ಜರ್ಮನಿಯಿಂದ ವಲಸೆ ಬಂದ ಹೆಂಗಸಿಗೆ ಡಾ. ತೇಡ್ಡಿಯಸ್ ಹೇಗೆ ಸಹಾಯ ಮಾಡಿದನು?
Answerಜರ್ಮನಿಯಿಂದ ವಲಸೆ ಬಂದ ಹೆಂಗಸಿನ ಪ್ರಸವದಲ್ಲಿ ನೆರವಾಗಿ, ಆಕೆಯ ಮಗುವಿನ ಬಾಯಿಯೊಳಗೆ ಊದಿ ಉಸಿರಾಡುವಂತೆ ಮಾಡುವ ಮೂಲಕ ಡಾ. ತೇಡ್ಡಿಯಸ್ ಸಹಾಯ ಮಾಡಿದನು.
೩. ಬಾರ್ಬರಾ ಯಾವ ಸಮಸ್ಯೆಯಿಂದ ನರಳುತ್ತಿದ್ದಳು?
Answerಬಾರ್ಬರಾ ಕುತ್ತಿಗೆಯ ಸೆಳೆತ ಮತ್ತು ಕೈಕಾಲುಗಳ ನೋವಿನಿಂದ ನರಳುತ್ತಿದ್ದಳು. ಅದು ಕ್ರಮೇಣ ದೊಡ್ಡ ಪ್ರಮಾಣದ ಪಾರ್ಶ್ವವಾಯುವಿಗೆ ಕಾರಣವಾಗುವ ಅಪರೂಪದ ವಿಷಮ ಅಂಟುರೋಗವಾಗಿತ್ತು.
೪. ಡಾಕ್ಟರ್ ತೇಡ್ಡಿಯಸ್ ತನ್ನೊಳಗೆ ಏನನ್ನು ಜ್ಞಾಪಿಸಿಕೊಂಡನು?
Answerತಾನು ತರುಣ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ‘ಈ ಒಂದು ಮಗು ಇಲ್ಲವಾದರೆ ಜಗತ್ತಿಗೇನು ನಷ್ಟ!’ ಎಂದು ಅಂದುಕೊಂಡದ್ದನ್ನು ಡಾಕ್ಟರ್ ತೇಡ್ಡಿಯಸ್ ಜ್ಞಾಪಿಸಿಕೊಂಡನು.
೫. ಡಾಕ್ಟರ್ ಮಾರ್ಲಿನನು ಬಾರ್ಬರಾಳನ್ನು ಉಪಚರಿಸಿದ ವೈದ್ಯನಿಗೆ ಏನೆಂದು ಹೇಳಿದನು?
Answerಡಾಕ್ಟರ್ ಮಾರ್ಲಿನನು ಬಾರ್ಬರಾಳನ್ನು ಉಪಚರಿಸಿದ ವೈದ್ಯನಿಗೆ, ‘ನೀನು ಪುಟ್ಟ ಹುಡುಗಿಯ ಕಾಲು ಸರಿಪಡಿಸುತ್ತಿರುವುದಷ್ಟೇ ಅಲ್ಲ, ಕುರುಡಾಗಿದ್ದ ಒಬ್ಬ ಹಿರಿಯನ ಕಣ್ಣನ್ನೂ ತೆರೆಸಿರುವೆ!’ ಎಂದು ಹೇಳಿದನು.
ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಮಗುವಿಗೆ ಉಸಿರಾಡುವಂತೆ ಸಹಕರಿಸುವಾಗ ಮಾರ್ಲಿನನ ಮನಸ್ಸಿನಲ್ಲಿ ಬಂದ ಆಲೋಚನೆಗಳೇನು?
Answerಮಗುವಿಗೆ ಉಸಿರಾಡುವಂತೆ ಸಹಕರಿಸುವಾಗ ಮಾರ್ಲಿನನ ಮನಸ್ಸಿನಲ್ಲಿ, ‘ಏನು ದುರಂತವೀ ಶಿಶು! ಇದು ಬೆಳೆದಾಗ ಜೀವನವಿಡೀ ಕುಂಟು ಕಾಲಿನಲ್ಲೇ ನಡೆಯಬೇಕು. ಇತರ ಮಕ್ಕಳು ಅಣಕಿಸಿ ಗೇಲಿ ಮಾಡುವರು. ಈ ಮಗು ಜೀವಿಸುವಂತೆ ಮಾಡುವುದೇಕೆ? ಇದು ಸತ್ತರೆ ಜಗತ್ತಿಗೆ ಏನು ನಷ್ಟ!’ ಎಂಬ ಆಲೋಚನೆಗಳು ಬಂದವು.
೨. ಮಾರ್ಲಿನನನ್ನು ಭೇಟಿಯಾದ ಪ್ರವೀಣರಲ್ಲೊಬ್ಬ ಯಾವ ಸಲಹೆಯನ್ನು ಕೊಟ್ಟನು?
Answerಮಾರ್ಲಿನನನ್ನು ಭೇಟಿಯಾದ ಪ್ರವೀಣರಲ್ಲೊಬ್ಬನು, ‘ಒಬ್ಬ ತರುಣ ಡಾಕ್ಟರನಿದ್ದಾನೆ, ಟಿ. ಜೆ. ಮಿಲ್ಲರ್. ಅವನು ಇಂಥ ಪ್ರಕರಣಗಳನ್ನು ನೋಡಿದ್ದಾನೆ, ಔಷಧಿಯನ್ನೂ ಕೊಟ್ಟಿದ್ದಾನೆ. ಅವನ ಸಹಾಯ ಪಡೆಯಬೇಕು’ ಎಂಬ ಸಲಹೆ ನೀಡಿದನು.
೩. ಡಾಕ್ಟರ್ ಮಿಲ್ಲರ್, ಮಾರ್ಲಿನನನ್ನು ಭೇಟಿಯಾದಾಗ ವೈದ್ಯಕೀಯ ವೃತ್ತಿಯ ಬಗ್ಗೆ ಹೇಳಿದ ಮಾತುಗಳೇನು?
Answerಡಾಕ್ಟರ್ ಮಿಲ್ಲರ್, ‘ನನ್ನ ಬಳಿ ಬರುವ ರೋಗಿಗಳೆಲ್ಲರೂ ಒಂದಿಲ್ಲೊಂದು ಅಂಗದ ಸಮಸ್ಯೆ ಇರುವವರೇ. ಆಗೆಲ್ಲ ನನಗೆ ನಾನೂ ಅವರಲ್ಲೊಬ್ಬ, ಅವರ ಮನೆಯ ಸದಸ್ಯ ಎಂಬ ಭಾವನೆ ಬರುತ್ತದೆ. ನನ್ನನ್ನು ಅವರು ಡಾಕ್ಟರಂಕಲ್ ಎಂದು ಕರೆದಾಗ ನನ್ನ ಹೆಸರು ಮರೆತೇ ಹೋಗುತ್ತದೆ’ ಎಂದು ಹೇಳಿದನು.
೪. ಮಾರ್ಲಿನನ ಕಂಠ ಬಿಗಿದು ಬರಲು ಕಾರಣವೇನು?
Answerಡಾಕ್ಟರ್ ಮಿಲ್ಲರನು ತಾನು ಹುಟ್ಟಿಸಿದ ಹಾಗೂ ಸಾಯಬೇಕೆಂದುಕೊಂಡ ಮಗುವೇ ಎಂದು ತಿಳಿದು, ತನ್ನ ಹಿಂದಿನ ಕುರುಡು ಆಲೋಚನೆಯು ನೆನಪಾಗಿ ಮಾರ್ಲಿನನ ಕಂಠ ಬಿಗಿದು ಬಂತು.
ಇ. ಈ ನುಡಿಗಟ್ಟುಗಳ ಅರ್ಥ ಬರೆದು, ವಾಕ್ಯಗಳಲ್ಲಿ ಬಳಸಿ.
೧. ಕಂಠವು ಬಿಗಿದು ಬಂತು
Answerಅರ್ಥ: ಭಾವೋದ್ರೇಕದಿಂದ ಗಂಟಲು ಕಟ್ಟಿದಂತಾಗುವುದು. ವಾಕ್ಯ: ಶಾಲಾ ವಾರ್ಷಿಕೋತ್ಸವದಲ್ಲಿ ನನಗೆ ಪ್ರಶಸ್ತಿ ಸಿಕ್ಕಿದಾಗ ಕಂಠವು ಬಿಗಿದು ಬಂತು.
೨. ಕಣ್ಣನ್ನು ತೆರೆಸು
Answerಅರ್ಥ: ಸತ್ಯವನ್ನು ಅರಿವಿಗೆ ತರುವುದು. ವಾಕ್ಯ: ತಂದೆಯ ಸಲಹೆ ನನ್ನ ತಪ್ಪನ್ನು ತೋರಿಸಿ ಕಣ್ಣನ್ನು ತೆರೆಸಿತು.
ಈ. ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದದ್ದನ್ನು ಆರಿಸಿ ಬಿಟ್ಟ ಸ್ಥಳ ಭರ್ತಿ ಮಾಡಿರಿ.
೧. ಇತರ ಮಕ್ಕಳು _________ ಗೇಲಿ ಮಾಡುವರು.
Answerಇತರ ಮಕ್ಕಳು ಅಣಕಿಸಿ ಗೇಲಿ ಮಾಡುವರು.
೨. ತನ್ನ ದೀರ್ಘಕಾಲದ ವೃತ್ತಿಯಲ್ಲಿ ಇಂತಹ _________ ಒಮ್ಮೆಯಾದರೂ ಕಂಡಿರಲಿಲ್ಲ.
Answerತನ್ನ ದೀರ್ಘಕಾಲದ ವೃತ್ತಿಯಲ್ಲಿ ಇಂತಹ ರೋಗಸ್ಥಿತಿಯನ್ನು ಒಮ್ಮೆಯಾದರೂ ಕಂಡಿರಲಿಲ್ಲ.
೩. ಮಕ್ಕಳನ್ನು ಭೂಮಿಗಿಳಿಸಿದ ವೈದ್ಯರ ಹೆಸರನ್ನು ಆ ಮಕ್ಕಳ _________ ಬಳಸುವುದು ನಮ್ಮೂರಿನ ಸಂಪ್ರದಾಯ.
Answerಮಕ್ಕಳನ್ನು ಭೂಮಿಗಿಳಿಸಿದ ವೈದ್ಯರ ಹೆಸರನ್ನು ಆ ಮಕ್ಕಳ ಅಡ್ಡಹೆಸರಾಗಿ ಬಳಸುವುದು ನಮ್ಮೂರಿನ ಸಂಪ್ರದಾಯ.
(ಜ್ಞಾಪಿಸಿಕೊಂಡು, ರೋಗಸ್ಥಿತಿಯನ್ನು, ವೈಫಲ್ಯದ, ಅಡ್ಡಹೆಸರಾಗಿ, ಅಣಕಿಸಿ)
ಉ. ಪೂರಕ ಚಟುವಟಿಕೆ :
೧. ಪೋಲಿಯೋ ತರಹವೇ ಮಕ್ಕಳನ್ನು ಬಾಧಿಸುವ ಇತರೆ ಕಾಯಿಲೆಗಳು ಯಾವುವು ಪಟ್ಟಿಮಾಡಿ.
೨. ಪೋಲಿಯೋಗೆ ಇಂದಿನ ದಿನಗಳಲ್ಲಿ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಯಿರಿ.
೩. ಪ್ರತಿಯೊಂದು ಜೀವಿಯನ್ನೂ ಕರುಣೆಯಿಂದ ನೋಡಬೇಕು" - ಈ ವಿಚಾರದ ಕುರಿತು ಒಂದು ಪ್ರಬಂಧ ಬರೆಯಿರಿ.
ಊ. ಕೆಳಗಿನ ವಿಷಯಗಳಲ್ಲಿ ಭಾಷಣ ಸ್ಪರ್ಧೆಗಳನ್ನು ನಡೆಸಿರಿ.
೧. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವುದು ಒಳ್ಳೆಯದು.
೨. ಯಾರನ್ನೂ ಕೀಳಾಗಿ ಕಾಣಬಾರದು.
೩. ನಮ್ಮ ವಿಕಲತೆಗಳ ಬಗ್ಗೆ ಗೊಣಗುತ್ತ ಕೂರಬಾರದು.
೪. ಎಲ್ಲ ಪರಿಸ್ಥಿತಿಗಳನ್ನೂ ಫಲದಿಂದ ಎದುರಿಸಬೇಕು.
೫. ಗೇಲಿಗಳಿಗೆ ತಲೆ ಕೆಡಿಸಿಕೊಳ್ಳಬಾರದು.
೬. ನಮ್ಮ ನ್ಯೂನತೆಗಳನ್ನು ಮೀರಿ ಸಾಧನೆ ಮಾಡಬೇಕು.
ವ್ಯಾಕರಣ ಮಾಹಿತಿ
ಅ. ನಾಮಪದ
ವ್ಯಕ್ತಿ, ವಸ್ತು, ಸ್ಥಳ ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ ನಾಮಪದ ಎನ್ನುವರು. **ಉದಾಹರಣೆ :** ಮಂಡ್ಯ, ತಿಮ್ಮಣ್ಣ, ಹುಲಿ, ಕಲ್ಲು ಇತ್ಯಾದಿ.
ನಾಮಪದದಲ್ಲಿ ಒಂಬತ್ತು ವಿಧಗಳು. ಅವುಗಳಲ್ಲಿ ವಸ್ತುವಾಚಕ ನಾಮಪದವೂ ಒಂದು. ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು ವಸ್ತುವಾಚಕ ನಾಮಪದಗಳೆನ್ನುವರು.
ಈ ವಸ್ತುವಾಚಕ ನಾಮಪದಗಳಲ್ಲಿ ಮೂರು ವಿಧ.
ವಸ್ತುವಾಚಕ ನಾಮಪದಗಳು
ರೂಢನಾಮ · ಅಂಕಿತನಾಮ · ಅನ್ವರ್ಥನಾಮ
**ರೂಢನಾಮ :** ರೂಢಿಯಿಂದ ಬಂದ ಪದಗಳಿಗೆ ರೂಢನಾಮ ಎನ್ನುವರು.
ಉದಾ : ನದಿ, ಪರ್ವತ, ಹೆಂಗಸು, ಪಟ್ಟಣ, ದೇಶ ಇತ್ಯಾದಿ.
**ಅಂಕಿತನಾಮ :** ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.
ಉದಾ: ರಮೇಶ, ಹಸೀನಾ, ಮೇರಿ, ಗಂಗಾ, ಬ್ರಹ್ಮಪುತ್ರ, ಭಾರತ ಇತ್ಯಾದಿ.
**ಅನ್ವರ್ಥನಾಮ :** ರೂಪ, ಗುಣ, ವೃತ್ತಿ, ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥನಾಮಗಳು.
ಉದಾ: ವ್ಯಾಪಾರಿ, ರೋಗಿ, ಯೋಗಿ, ಬಳೆಗಾರ, ಪೂಜಾರಿ, ಶಿಕ್ಷಕ, ವಿದ್ಯಾರ್ಥಿನಿ ಇತ್ಯಾದಿ.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
ಅ) ನಾಮಪದ ಎಂದರೇನು? ಉದಾಹರಣೆ ಕೊಡಿ.
ಆ) ನಾಮಪದಗಳಲ್ಲಿ ಎಷ್ಟು ವಿಧ?
ಇ) ವಸ್ತುವಾಚಕ ನಾಮಪದ ಎಂದರೇನು? ಅವುಗಳಲ್ಲಿ ಎಷ್ಟು ವಿಧ?
ಆ. ಹೊಂದಿಸಿ ಬರೆಯಿರಿ.
‘ಅ’
೧. ಅಂಕಿತ ನಾಮ
೨. ರೂಢನಾಮ
೩. ಅನ್ವರ್ಥ ನಾಮ
‘ಬ’
– ರೂಢಿಯಿಂದ ಬಂದ ಪದಗಳು
– ರೂಪ, ಗುಣ, ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಬಂದ ಹೆಸರು
– ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರು
ಇ. ಕೊಟ್ಟಿರುವ ಪದಗಳನ್ನು ರೂಢನಾಮ, ಅಂಕಿತ ನಾಮ ಹಾಗೂ ಅನ್ವರ್ಥನಾಮಗಳಾಗಿ ವಿಂಗಡಿಸಿ ಬರೆಯಿರಿ.
ಮಾರ್ಲಿನ್, ಮಿಲ್ಲರ್, ವೈದ್ಯ, ರೋಗಿ, ಹೆಂಗಸು, ಶಿಶು, ಬಾರ್ಬರಾ, ಪ್ರವೀಣ, ಬಾಲಕಿ, ವಿದ್ಯಾರ್ಥಿ
ಈ. ಯೋಜನೆ
೧. ಕರಪತ್ರ, ಲಗ್ನಪತ್ರಿಕೆಗಳು ಹಾಗೂ ಸಾಹಿತಿಗಳ ಕೈಬರಹಗಳನ್ನು ಸಂಗ್ರಹಿಸಿ ಆಲ್ಬಂ ತಯಾರಿಸಿ.
ಉ. ಓದಿಗೆ ಮನ್ನಣೆ
೧. ಮುದ್ರಿತ ಕರಪತ್ರ ಹಾಗೂ ಲಗ್ನ ಪತ್ರಿಕೆಗಳನ್ನು ಸಂಗ್ರಹಿಸಿ ಓದಿರಿ.
೨. ಶಿಶು ಗೀತೆಗಳನ್ನು ಓದಿರಿ.
೩. ರಾಜರತ್ನಂ, ಡುಂಡಿರಾಜ್ ಮೊದಲಾದ ಲೇಖಕರು ಬರೆದ ಮಕ್ಕಳ ಕವಿತೆಗಳನ್ನು ಓದಿರಿ.
ಊ. ಶುಭನುಡಿ
೧. ಕನ್ನಡಿ ನಿನಗೆ ಬೇಡ, ಕನ್ನಡಿಯೇ ನೀನಾಗು.
೨. ನುಡಿದರೆ ಮುತ್ತಿನ ಹಾರದಂತಿರಬೇಕು.
೩. ಮಾತಿನ ರೀತಿಗೆ ಪ್ರೀತಿಯ ಬೆಸುಗೆ.