CRECT Education

Class 5 Kannada Lesson 4: The Value of Life – Practice & Play | KTBS Kannada First Language

Description

Comprehension & language practice for Lesson 4: ಜೀವದ ಮೌಲ್ಯ (The Value of Life)

ಗದ್ಯ (prose) · ಕಾನ್‌ಸ್ಟನ್ಸ್ ಜೆ ಫಾಸ್ಟರ್

ಪಠ್ಯFull text

“ಒಬ್ಬ ವ್ಯಕ್ತಿಗೆ ಗುಣವಾಗದ ಕಾಯಿಲೆ ಇದ್ದರೆ ಆತನನ್ನು ಬದುಕಿಸಿ ಉಳಿಸಿ ಸಾಧಿಸುವುದೇನಿದೆ? ಹಾಗೆ ಆತನಿಗೆ ವೈದ್ಯಕೀಯ ಉಪಚಾರ ಮಾಡುತ್ತ ಬದುಕಿಸುವುದು ಶುದ್ಧ ಅವಿವೇಕ” – ಎಂಬುದು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ತರುಣ ಡಾಕ್ಟರ್ ತೇಡ್ಡಿಯಸ್ ಮಾರ್ಲಿನನ ನಿಶ್ಚಿತ ಅಭಿಪ್ರಾಯವಾಗಿತ್ತು. “ಹಾಗೆ ವಾಸಿಯಾಗದ ಕಾಯಿಲೆಗಳಿಂದ ನರಳುವ ರೋಗಿಗಳಿಗೆ ಮತ್ತು ಅತಿಯಾದ ನೋವು-ನರಳುವಿಕೆ ಅನುಭವಿಸುವ ರೋಗಿಗಳಿಗೆ ಸುಖ ಮರಣ ಉಂಟಾಗುವಂತೆ ಮಾಡುವುದೇ ಲೇಸು”– ಎಂದು ಅವನು ತನ್ನ ತರಗತಿಯ ಇತರ ವಿದ್ಯಾರ್ಥಿಗಳೊಡನೆ ವಾದಿಸುತ್ತಿದ್ದನು. “ಆದರೆ ನಾವು ಇಲ್ಲಿರುವುದು ಅಂಗಹೀನರಾದ ಹತಭಾಗ್ಯರ ಆರೈಕೆಗಾಗಿ!” – ಎಂದು ಅವರು ಪ್ರತಿಭಟಿಸುತ್ತಿದ್ದರು. “ಡಾಕ್ಟರರು ಇರುವುದು ರೋಗಿಗಳನ್ನು ಆರೋಗ್ಯವಂತರನ್ನಾಗಿ ಮಾಡಲಿಕ್ಕೇ. ನಿಜ, ಒಪ್ಪುತ್ತೇನೆ. ಆದರೆ, ಯಾವುದೂ ಅವರನ್ನು ಗುಣಪಡಿಸುವಂತಿಲ್ಲವಾದರೆ ಅವರು ನರಳುವುದಕ್ಕಿಂತ ಸಾಯುವುದೇ ಲೇಸು!” ಎಂದು ಮಾರ್ಲಿನನು ಫಲದಿಂದ ನುಡಿಯುತ್ತಿದ್ದನು. ಮಾರ್ಲಿನನ ವ್ಯಾಸಂಗದ ಕೊನೆಯ ವರ್ಷವಾಗಿತ್ತು. ಅದೊಂದು ರಾತ್ರೆ ಮಾರ್ಲಿನನು ಆಸ್ಪತ್ರೆಯ ಕೆಲಸದಲ್ಲಿದ್ದನು. ನಗರದ ಒಂದು ಕೊಳಕು ಭಾಗದಿಂದ ಒಂದು ಪ್ರಸವಕ್ಕಾಗಿ ಕರೆ ಬಂತು. ಮಾರ್ಲಿನನು ಕೂಡಲೇ ಹೋಗಿ, ಜರ್ಮನಿಯಿಂದ ವಲಸೆ ಬಂದ ಓರ್ವ ಹೆಂಗಸಿನ ಪ್ರಸವದಲ್ಲಿ ನೆರವಾದನು. ಅದು ಅವಳ ಹತ್ತನೆಯ ಮಗುವಾಗಿತ್ತು. ಒಂದು ಕಾಲಿಗಿಂತ ಇನ್ನೊಂದು ಕಾಲು ಗಿಡ್ಡವಾಗಿ ಆ ಮಗು ಹುಟ್ಟಿತ್ತು. ಡಾಕ್ಟರನ ಅಭ್ಯಾಸದಂತೆ, ಅವನು ಆ ಮಗುವು ಉಸಿರಾಡುವಂತೆ ಮಾಡಲು ಅದರ ಬಾಯಿಯೊಳಗೆ ಊದಿದನು. ಆದರೆ, ಮರುಕ್ಷಣವೇ ಅವನಿಗನಿಸಿತು: “ಏನು ದುರಂತವೀ ಶಿಶು! ಅದು ಬೆಳೆದಾಗ ಜೀವನವಿಡೀ ಕುಂಟು ಕಾಲಿನಲ್ಲೇ ನಡೆಯಬೇಕು. ಇತರ ಮಕ್ಕಳು ಅಣಕಿಸಿ ಗೇಲಿ ಮಾಡುವರು. ಈ ಮಗು ಜೀವಿಸುವಂತೆ ಮಾಡುವುದೇಕೆ? ಇದು ಸತ್ತರೆ ಜಗತ್ತಿಗೆ ಏನು ನಷ್ಟ!” ಆದರೆ ಅವನು ಹೇಳಿಕೇಳಿ ವೈದ್ಯ. ಮಗುವನ್ನು ಹುಟ್ಟಿನಲ್ಲೇ ಸಾಯಿಸುವ ಯೋಚನೆ ಬಂದರೂ ಆತನ ವೈದ್ಯ ಬುದ್ಧಿ ಜಾಗ್ರತವಾಗಿತ್ತು. ಬೆನ್ನು-ಹೊಟ್ಟೆಗಳ ಭಾಗಕ್ಕೆ ನಯವಾಗಿ ಬಡಿದು ಆತ ಆ ಮಗುವಿನ ಉಸಿರಾಟದ ಪ್ರಕ್ರಿಯೆ ಪ್ರಾರಂಭವಾಗುವಂತೆ ಮಾಡಿದನು. ಕೊನೆಗೆ ಅವನು ನಿರೀಕ್ಷಿಸುತ್ತಿದ್ದ ಉಸಿರೆಳೆಯು ಬಂತು. ಮಗುವಿನ ಮುಖವು ಕೆಂಪಗಾಯಿತು. ಮಗು ಹುಟ್ಟಿದ ಮೇಲೆ ಪ್ರತಿಯೊಬ್ಬರೂ ನಿರೀಕ್ಷಿಸುವ ಆ ಮೊದಲ ಅಳು – ಅದು ಕೊನೆಗೂ ಮಗುವಿನಿಂದ ಹೊರಟಿತು. ತೇಡ್ಡಿಯಸ್‌ಗೆ ನೆಮ್ಮದಿಯಾಯಿತು. ಆತ ತನ್ನ ಉಪಕರಣಗಳನ್ನು ಚೀಲದೊಳಗೆ ತುಂಬಿ, ನಗರದ ಕಡೆಗೆ ಹೊರಟುಹೋದನು. ತಾನು ಮಾಡಿದ ಕೆಲಸಕ್ಕಾಗಿ ಅವನು ಬಹಳ ಅಸಮಾಧಾನಪಟ್ಟಿದ್ದನು. “ನಾನೇಕೆ ಹಾಗೆ ಮಾಡಿದೆನೆಂದು ನನಗೇ ತಿಳಿಯದು, ದಾರಿದ್ರ್ಯ ತುಂಬಿದ ಆ ಮನೆಯಲ್ಲಿ, ಈ ಮೊದಲೇ, ಬೇಕಾದುದಕ್ಕಿಂತ ಹೆಚ್ಚು ಮಕ್ಕಳಿರುವರು. ನ್ಯೂನತೆಯುಳ್ಳ ಇದನ್ನು ನಾನೇಕೆ ಬದುಕಿಸಿದೆ? ಇಂಥ ಕುಂಟರಿಲ್ಲದಿದ್ದರೆ ಜಗತ್ತು ಉತ್ತಮವಾಗದೇ?” ಎಂದು ಅವನು ತನ್ನೊಳಗೆ ಗೊಣಗುತ್ತಿದ್ದನು. ವರುಷಗಳು ಉರುಳಿದುವು. ಡಾಕ್ಟರ್ ಮಾರ್ಲಿನನು, ಒಂದು ಕೈಗಾರಿಕಾ ನಗರಕ್ಕೆ ಹೋಗಿ ತನ್ನ ವೃತ್ತಿ ಸ್ಥಾಪಿಸಿದ್ದನು. ಚೆನ್ನಾಗಿ ಸಂಪಾದನೆಯಾಗುತ್ತಿತ್ತು. ತಾರುಣ್ಯದಲ್ಲಿದ್ದ ಆ ಸುಧಾರಣಾ ಭಾವವು ಅವನನ್ನು ಬಿಟ್ಟುಹೋಗಿತ್ತು. ಜನರನ್ನು ಜೀವಂತರನ್ನಾಗಿ ಉಳಿಸಲು ಹರಹಿಡಿದು ಶ್ರಮಿಸುವ, ವಿರಾಮವಿಲ್ಲದೆ ದುಡಿವ ಡಾಕ್ಟರರಲ್ಲಿ ಅವನೂ ಒಬ್ಬನಾಗಿದ್ದನು. ಡಾಕ್ಟರ್ ಮಾರ್ಲಿನನೀಗ ತಕ್ಕಷ್ಟು ವೃದ್ಧನಾಗಿದ್ದನು, ಅವನಿಗೂ ಅವನ ಪಾಲಿನ ಕಷ್ಟಗಳಿದ್ದವು. ಅವನ ಒಬ್ಬನೇ ಮಗ ಮತ್ತು ಆ ಮಗನ ಹೆಂಡತಿ, ಒಂದು ಮೋಟಾರು ಅವಘಡದಲ್ಲಿ ಸತ್ತಿದ್ದರು. ಅವರ ಚಿಕ್ಕ ಮಗಳ ಆರೈಕೆಯನ್ನು ಅವನೇ ನೋಡಿಕೊಂಡಿದ್ದನು. ಮಾರ್ಲಿನನು ತನ್ನ ಮೊಮ್ಮಗಳನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಒಂದು ದಿನ, ಅವಳ ('ಬಾರ್ಬರಾ' ಎಂದಾಕೆಯ ಹೆಸರು) ಹತ್ತನೆಯ ವರ್ಷದ ಬೇಸಗೆಯ ದಿನ, ಅವಳು ಏಳುವಾಗಲೇ ಕುತ್ತಿಗೆಯ ಸೆಳೆತ ಮತ್ತು ಕೈಕಾಲುಗಳ ನೋವಿನಿಂದ ನರಳುತ್ತಿದ್ದಳು. ಮೊದಲು ಅದು 'ಪೋಲಿಯೋ' ಎಂದು ಪರಿಗಣಿಸಲ್ಪಟ್ಟಿತು. ಆದರೆ ಕ್ರಮೇಣ, ಅದು ಅಪರೂಪವಾಗಿ ಉಂಟಾಗುವ ಒಂದು ವಿಷಮ ಅಂಟುರೋಗವೆಂದು ತಿಳಿದುಬಂತು. ಡಾಕ್ಟರ್ ಮಾರ್ಲಿನನು, ತನ್ನ ದೀರ್ಘಕಾಲದ ವೃತ್ತಿಯಲ್ಲಿ ಇಂತಹ ರೋಗಸ್ಥಿತಿಯನ್ನು ಒಮ್ಮೆಯಾದರೂ ಕಂಡಿರಲಿಲ್ಲ. ಅವನು ನರಸಂಬಂಧವಾದ ರೋಗಚಿಕಿತ್ಸಕರನ್ನು ಕರೆಸಿದನು. ಅವರು, ನಿರಾಶೆಯಾಗುವಂತೆ ತಲೆಯಲ್ಲಾಡಿಸಿದರು. ಆ ಕಾಯಿಲೆಗೆ ಯಾವ ಮದ್ದೂ ಇಲ್ಲವೆಂದೂ ಅದು ನಿಧಾನವಾಗಿ ಹೆಚ್ಚುತ್ತಹೋಗಿ ಕೊನೆಗೆ ದೊಡ್ಡ ಪ್ರಮಾಣದ ಪಾರ್ಶ್ವವಾಯುವಾಗಿ ಪರಿಣಮಿಸುವುದೆಂದೂ ತಿಳಿಸಿದರು. ಬಂದ ಪ್ರವೀಣರಲ್ಲಿ ಒಬ್ಬನು ಹೇಳಿದನು: ”ಒಬ್ಬ ತರುಣ ಡಾಕ್ಟರನಿದ್ದಾನೆ. ಅವನು ಇಂಥ ಒಂದಷ್ಟು ಪ್ರಕರಣಗಳನ್ನು ನೋಡಿದ್ದಾನೆ, ಔಷಧಿಯನ್ನೂ ಕೊಟ್ಟಿದ್ದಾನೆ. ಆ ಕುರಿತು ಒಂದು ಲೇಖನವನ್ನೂ ಒಂದು ಪತ್ರಿಕೆಯಲ್ಲಿ ಬರೆದಿದ್ದಾನೆ. ಅವನ ಹೆಸರು ಟಿ. ಜೆ. ಮಿಲ್ಲರ್. ನಾನು ನಿನ್ನ ಸ್ಥಾನದಲ್ಲಿದ್ದರೆ ಅವನ ಸಹಾಯ ಪಡೆಯುತ್ತಿದ್ದೆ.” ವಿವಿಧ ತರದ ಕುಂಟುತನದ ವ್ಯಾಧಿಗಳಿಗೆ ತುತ್ತಾದವರಿಗೆ ತನ್ನ ಹೊಸ ಹಾಗೂ ಕ್ರಾಂತಿಕಾರಕ ಚಿಕಿತ್ಸಾ ವಿಧಾನಗಳನ್ನು ಬಳಸುತ್ತಿದ್ದ ಡಾಕ್ಟರ್ ಮಿಲ್ಲರನ ಚಿಕ್ಕ ಖಾಸಗಿ ಆಸ್ಪತ್ರೆಗೆ ಡಾಕ್ಟರ್ ಮಾರ್ಲಿನನು ತನ್ನ ಮೊಮ್ಮಗಳು ಬಾರ್ಬರಾಳನ್ನು ಕರೆದುಕೊಂಡು ಹೋದನು. ಡಾಕ್ಟರ್ ಮಿಲ್ಲರನು ಕುಂಟುತ್ತ ನಡೆಯುತ್ತಿದ್ದುದನ್ನು ಕಂಡನು. ಡಾಕ್ಟರ್ ಮಾರ್ಲಿನನಿಗೆ ಡಾಕ್ಟರ್ ಮಿಲ್ಲರನು ಹೇಳಿದನು: "ನನ್ನ ಬಳಿ ಬರುವ ರೋಗಿಗಳೆಲ್ಲರೂ ಒಂದಿಲ್ಲೊಂದು ಅಂಗದ ಸಮಸ್ಯೆ ಇರುವವರೇ. ಆಗೆಲ್ಲ ನನಗೆ ನಾನೂ ಅವರಲ್ಲೊಬ್ಬ, ಅವರ ಮನೆಯ ಸದಸ್ಯ ಎಂಬ ಭಾವನೆ ಬರುತ್ತದೆ. ನನ್ನನ್ನು ಅವರು ಡಾಕ್ಟರಂಕಲ್ ಎಂದು ಕರೆದಾಗ ನನಗೆ ನನ್ನ ಹೆಸರು ಡಾ. ತೇಡ್ಡಿಯಸ್ ಎಂಬುದು ಮರೆತೇಹೋಗುತ್ತದೆ." “ತೇಡ್ಡಿಯಸ್?” – ಡಾಕ್ಟರ್ ತೇಡ್ಡಿಯಸ್ ಮಾರ್ಲಿನನು ಕುತೂಹಲಪಟ್ಟು ಡಾಕ್ಟರ್ ಮಿಲ್ಲರನನ್ನು ಪ್ರಶ್ನಿಸಿದನು. “ನಿನ್ನ ಹೆಸರಲ್ಲೂ ತೇಡ್ಡಿಯಸ್ ಎಂದಿದೆಯೇ?” “ಹೌದು" ಎಂಬಂತೆ ತಲೆಯಾಡಿಸಿದನು ಡಾ. ಮಿಲ್ಲರ್. "ಮಕ್ಕಳನ್ನು ಭೂಮಿಗಿಳಿಸಿದ ವೈದ್ಯರ ಹೆಸರನ್ನು ಆ ಮಕ್ಕಳ ಅಡ್ಡಹೆಸರಾಗಿ ಬಳಸುವುದು ನಮ್ಮೂರಿನ ಸಂಪ್ರದಾಯ. ಹಾಗೆಯೇ ನನ್ನನ್ನು ಭೂಮಿಗಿಳಿಸಿದ ಒಬ್ಬ ತರುಣ ವೈದ್ಯಕೀಯ ವಿದ್ಯಾರ್ಥಿಯ ಹೆಸರನ್ನೇ ನನಗೆ ಇಡಲಾಯಿತು" ಎಂದನು. ಡಾಕ್ಟರ್ ತೇಡ್ಡಿಯಸ್ ಮಾರ್ಲಿನನ ಕಂಠವು ಬಿಗಿದು ಬಂತು. ತಾನು ತರುಣ ವಿದ್ಯಾರ್ಥಿಯಾಗಿದ್ದಾಗ, “ಈ ಒಂದು ಮಗು ಇಲ್ಲವಾದರೆ ಜಗತ್ತಿಗೇನು ನಷ್ಟ!” ಎಂದು ತನ್ನೊಳಗೆ ಅಂದುಕೊಂಡದ್ದನ್ನು ಜ್ಞಾಪಿಸಿಕೊಂಡನು. ಆ ದಿನಗಳಲ್ಲಿ ಅವನು ಎಷ್ಟೊಂದು ಕುರುಡನಾಗಿದ್ದನು! ಬಾರ್ಬರಾಳನ್ನು ಪುನಃ ನಡೆಯುವಂತೆ ಮಾಡಲು ಹೊರಟ ಡಾಕ್ಟರನಿಗೆ ಮಾರ್ಲಿನನು ತನ್ನ ಕೈಯ್ಯನ್ನು ನೀಡಿ ಹೇಳಿದನು: "ನೀನು ಪುಟ್ಟ ಹುಡುಗಿಯ ಕಾಲು ಸರಿಪಡಿಸುತ್ತಿರುವುದಷ್ಟೇ ಅಲ್ಲ, ಕುರುಡಾಗಿದ್ದ ಒಬ್ಬ ಹಿರಿಯನ ಕಣ್ಣನ್ನೂ ತೆರೆಸಿರುವೆ!" **ಕೃತಿಕಾರರ ಪರಿಚಯ** ಕಾನ್‌ಸ್ಟನ್ಸ್ ಜೆ ಫಾಸ್ಟರ್ ಎಂಬವರು ೨೦ನೇ ಶತಮಾನದಲ್ಲಿದ್ದ ಓರ್ವ ಇಂಗ್ಲಿಷ್ ಲೇಖಕರು. ಇವರು ಮುಖ್ಯವಾಗಿ ಮಕ್ಕಳ ಕಲಿಕೆ, ಮಕ್ಕಳನ್ನು ನೋಡಿಕೊಳ್ಳುವುದು, ಶಿಶು ಆರೈಕೆ ಮುಂತಾದ ವಿಷಯಗಳ ಬಗ್ಗೆ ಹಲವು ಕೃತಿಗಳನ್ನು ರಚಿಸಿದ್ದಾರೆ. "ದ ಅಟ್ರಾಕ್ಟಿವ್ ಚೈಲ್ಡ್", "ದ ರಿಚ್ ವರ್ಲ್ಡ್", "ಫಾದರ್ಸ್ ಆಂಡ್ ಪೇರೆಂಟ್ಸ್ ಟೂ", "ಡೆವಲಪಿಂಗ್ ರೆಸ್ಪಾನ್ಸಿಬಿಲಿಟಿ ಇನ್ ಚಿಲ್ಡ್ರನ್" ಮುಂತಾದವು ಅವರ ಕೃತಿಗಳು. ಫಾಸ್ಟರ್ ಅವರು ಇಂಗ್ಲೀಷ್ ಭಾಷೆಯಲ್ಲಿ ಬರೆದ ಕತೆಯನ್ನು ಎಲ್. ಎಸ್. ನಾಯ್ಕ್ ಎಂಬುವವರು "ಜೀವದ ಮೌಲ್ಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. **ಕೌಶಲ :** ಓದುವುದು. **ಸಾಮರ್ಥ್ಯ :** ಬರೆಹ ಮತ್ತು ಮುದ್ರಿತ ವಿಷಯಗಳನ್ನು ನಿರರ್ಗಳವಾಗಿ ಓದುವುದು.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಡಾಕ್ಟರ್ ತೇಡ್ಡಿಯಸ್ ಮಾರ್ಲಿನನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಯಾವುದನ್ನು ಅವಿವೇಕ ಎಂದು ಭಾವಿಸಿದ್ದನು?

    Answer

    ಡಾಕ್ಟರ್ ತೇಡ್ಡಿಯಸ್ ಮಾರ್ಲಿನನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ, ಗುಣವಾಗದ ಕಾಯಿಲೆ ಇರುವ ವ್ಯಕ್ತಿಗೆ ವೈದ್ಯಕೀಯ ಉಪಚಾರ ಮಾಡಿ ಬದುಕಿಸುವುದನ್ನು ಶುದ್ಧ ಅವಿವೇಕ ಎಂದು ಭಾವಿಸಿದ್ದನು.

  2. ೨. ಜರ್ಮನಿಯಿಂದ ವಲಸೆ ಬಂದ ಹೆಂಗಸಿಗೆ ಡಾ. ತೇಡ್ಡಿಯಸ್ ಹೇಗೆ ಸಹಾಯ ಮಾಡಿದನು?

    Answer

    ಜರ್ಮನಿಯಿಂದ ವಲಸೆ ಬಂದ ಹೆಂಗಸಿನ ಪ್ರಸವದಲ್ಲಿ ನೆರವಾಗಿ, ಆಕೆಯ ಮಗುವಿನ ಬಾಯಿಯೊಳಗೆ ಊದಿ ಉಸಿರಾಡುವಂತೆ ಮಾಡುವ ಮೂಲಕ ಡಾ. ತೇಡ್ಡಿಯಸ್ ಸಹಾಯ ಮಾಡಿದನು.

  3. ೩. ಬಾರ್ಬರಾ ಯಾವ ಸಮಸ್ಯೆಯಿಂದ ನರಳುತ್ತಿದ್ದಳು?

    Answer

    ಬಾರ್ಬರಾ ಕುತ್ತಿಗೆಯ ಸೆಳೆತ ಮತ್ತು ಕೈಕಾಲುಗಳ ನೋವಿನಿಂದ ನರಳುತ್ತಿದ್ದಳು. ಅದು ಕ್ರಮೇಣ ದೊಡ್ಡ ಪ್ರಮಾಣದ ಪಾರ್ಶ್ವವಾಯುವಿಗೆ ಕಾರಣವಾಗುವ ಅಪರೂಪದ ವಿಷಮ ಅಂಟುರೋಗವಾಗಿತ್ತು.

  4. ೪. ಡಾಕ್ಟರ್ ತೇಡ್ಡಿಯಸ್ ತನ್ನೊಳಗೆ ಏನನ್ನು ಜ್ಞಾಪಿಸಿಕೊಂಡನು?

    Answer

    ತಾನು ತರುಣ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ‘ಈ ಒಂದು ಮಗು ಇಲ್ಲವಾದರೆ ಜಗತ್ತಿಗೇನು ನಷ್ಟ!’ ಎಂದು ಅಂದುಕೊಂಡದ್ದನ್ನು ಡಾಕ್ಟರ್ ತೇಡ್ಡಿಯಸ್ ಜ್ಞಾಪಿಸಿಕೊಂಡನು.

  5. ೫. ಡಾಕ್ಟರ್ ಮಾರ್ಲಿನನು ಬಾರ್ಬರಾಳನ್ನು ಉಪಚರಿಸಿದ ವೈದ್ಯನಿಗೆ ಏನೆಂದು ಹೇಳಿದನು?

    Answer

    ಡಾಕ್ಟರ್ ಮಾರ್ಲಿನನು ಬಾರ್ಬರಾಳನ್ನು ಉಪಚರಿಸಿದ ವೈದ್ಯನಿಗೆ, ‘ನೀನು ಪುಟ್ಟ ಹುಡುಗಿಯ ಕಾಲು ಸರಿಪಡಿಸುತ್ತಿರುವುದಷ್ಟೇ ಅಲ್ಲ, ಕುರುಡಾಗಿದ್ದ ಒಬ್ಬ ಹಿರಿಯನ ಕಣ್ಣನ್ನೂ ತೆರೆಸಿರುವೆ!’ ಎಂದು ಹೇಳಿದನು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಮಗುವಿಗೆ ಉಸಿರಾಡುವಂತೆ ಸಹಕರಿಸುವಾಗ ಮಾರ್ಲಿನನ ಮನಸ್ಸಿನಲ್ಲಿ ಬಂದ ಆಲೋಚನೆಗಳೇನು?

    Answer

    ಮಗುವಿಗೆ ಉಸಿರಾಡುವಂತೆ ಸಹಕರಿಸುವಾಗ ಮಾರ್ಲಿನನ ಮನಸ್ಸಿನಲ್ಲಿ, ‘ಏನು ದುರಂತವೀ ಶಿಶು! ಇದು ಬೆಳೆದಾಗ ಜೀವನವಿಡೀ ಕುಂಟು ಕಾಲಿನಲ್ಲೇ ನಡೆಯಬೇಕು. ಇತರ ಮಕ್ಕಳು ಅಣಕಿಸಿ ಗೇಲಿ ಮಾಡುವರು. ಈ ಮಗು ಜೀವಿಸುವಂತೆ ಮಾಡುವುದೇಕೆ? ಇದು ಸತ್ತರೆ ಜಗತ್ತಿಗೆ ಏನು ನಷ್ಟ!’ ಎಂಬ ಆಲೋಚನೆಗಳು ಬಂದವು.

  2. ೨. ಮಾರ್ಲಿನನನ್ನು ಭೇಟಿಯಾದ ಪ್ರವೀಣರಲ್ಲೊಬ್ಬ ಯಾವ ಸಲಹೆಯನ್ನು ಕೊಟ್ಟನು?

    Answer

    ಮಾರ್ಲಿನನನ್ನು ಭೇಟಿಯಾದ ಪ್ರವೀಣರಲ್ಲೊಬ್ಬನು, ‘ಒಬ್ಬ ತರುಣ ಡಾಕ್ಟರನಿದ್ದಾನೆ, ಟಿ. ಜೆ. ಮಿಲ್ಲರ್. ಅವನು ಇಂಥ ಪ್ರಕರಣಗಳನ್ನು ನೋಡಿದ್ದಾನೆ, ಔಷಧಿಯನ್ನೂ ಕೊಟ್ಟಿದ್ದಾನೆ. ಅವನ ಸಹಾಯ ಪಡೆಯಬೇಕು’ ಎಂಬ ಸಲಹೆ ನೀಡಿದನು.

  3. ೩. ಡಾಕ್ಟರ್ ಮಿಲ್ಲರ್, ಮಾರ್ಲಿನನನ್ನು ಭೇಟಿಯಾದಾಗ ವೈದ್ಯಕೀಯ ವೃತ್ತಿಯ ಬಗ್ಗೆ ಹೇಳಿದ ಮಾತುಗಳೇನು?

    Answer

    ಡಾಕ್ಟರ್ ಮಿಲ್ಲರ್, ‘ನನ್ನ ಬಳಿ ಬರುವ ರೋಗಿಗಳೆಲ್ಲರೂ ಒಂದಿಲ್ಲೊಂದು ಅಂಗದ ಸಮಸ್ಯೆ ಇರುವವರೇ. ಆಗೆಲ್ಲ ನನಗೆ ನಾನೂ ಅವರಲ್ಲೊಬ್ಬ, ಅವರ ಮನೆಯ ಸದಸ್ಯ ಎಂಬ ಭಾವನೆ ಬರುತ್ತದೆ. ನನ್ನನ್ನು ಅವರು ಡಾಕ್ಟರಂಕಲ್ ಎಂದು ಕರೆದಾಗ ನನ್ನ ಹೆಸರು ಮರೆತೇ ಹೋಗುತ್ತದೆ’ ಎಂದು ಹೇಳಿದನು.

  4. ೪. ಮಾರ್ಲಿನನ ಕಂಠ ಬಿಗಿದು ಬರಲು ಕಾರಣವೇನು?

    Answer

    ಡಾಕ್ಟರ್ ಮಿಲ್ಲರನು ತಾನು ಹುಟ್ಟಿಸಿದ ಹಾಗೂ ಸಾಯಬೇಕೆಂದುಕೊಂಡ ಮಗುವೇ ಎಂದು ತಿಳಿದು, ತನ್ನ ಹಿಂದಿನ ಕುರುಡು ಆಲೋಚನೆಯು ನೆನಪಾಗಿ ಮಾರ್ಲಿನನ ಕಂಠ ಬಿಗಿದು ಬಂತು.

ಇ. ಈ ನುಡಿಗಟ್ಟುಗಳ ಅರ್ಥ ಬರೆದು, ವಾಕ್ಯಗಳಲ್ಲಿ ಬಳಸಿ.

  1. ೧. ಕಂಠವು ಬಿಗಿದು ಬಂತು

    Answer

    ಅರ್ಥ: ಭಾವೋದ್ರೇಕದಿಂದ ಗಂಟಲು ಕಟ್ಟಿದಂತಾಗುವುದು. ವಾಕ್ಯ: ಶಾಲಾ ವಾರ್ಷಿಕೋತ್ಸವದಲ್ಲಿ ನನಗೆ ಪ್ರಶಸ್ತಿ ಸಿಕ್ಕಿದಾಗ ಕಂಠವು ಬಿಗಿದು ಬಂತು.

  2. ೨. ಕಣ್ಣನ್ನು ತೆರೆಸು

    Answer

    ಅರ್ಥ: ಸತ್ಯವನ್ನು ಅರಿವಿಗೆ ತರುವುದು. ವಾಕ್ಯ: ತಂದೆಯ ಸಲಹೆ ನನ್ನ ತಪ್ಪನ್ನು ತೋರಿಸಿ ಕಣ್ಣನ್ನು ತೆರೆಸಿತು.

ಈ. ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದದ್ದನ್ನು ಆರಿಸಿ ಬಿಟ್ಟ ಸ್ಥಳ ಭರ್ತಿ ಮಾಡಿರಿ.

  1. ೧. ಇತರ ಮಕ್ಕಳು _________ ಗೇಲಿ ಮಾಡುವರು.

    Answer

    ಇತರ ಮಕ್ಕಳು ಅಣಕಿಸಿ ಗೇಲಿ ಮಾಡುವರು.

  2. ೨. ತನ್ನ ದೀರ್ಘಕಾಲದ ವೃತ್ತಿಯಲ್ಲಿ ಇಂತಹ _________ ಒಮ್ಮೆಯಾದರೂ ಕಂಡಿರಲಿಲ್ಲ.

    Answer

    ತನ್ನ ದೀರ್ಘಕಾಲದ ವೃತ್ತಿಯಲ್ಲಿ ಇಂತಹ ರೋಗಸ್ಥಿತಿಯನ್ನು ಒಮ್ಮೆಯಾದರೂ ಕಂಡಿರಲಿಲ್ಲ.

  3. ೩. ಮಕ್ಕಳನ್ನು ಭೂಮಿಗಿಳಿಸಿದ ವೈದ್ಯರ ಹೆಸರನ್ನು ಆ ಮಕ್ಕಳ _________ ಬಳಸುವುದು ನಮ್ಮೂರಿನ ಸಂಪ್ರದಾಯ.

    Answer

    ಮಕ್ಕಳನ್ನು ಭೂಮಿಗಿಳಿಸಿದ ವೈದ್ಯರ ಹೆಸರನ್ನು ಆ ಮಕ್ಕಳ ಅಡ್ಡಹೆಸರಾಗಿ ಬಳಸುವುದು ನಮ್ಮೂರಿನ ಸಂಪ್ರದಾಯ.

  4. (ಜ್ಞಾಪಿಸಿಕೊಂಡು, ರೋಗಸ್ಥಿತಿಯನ್ನು, ವೈಫಲ್ಯದ, ಅಡ್ಡಹೆಸರಾಗಿ, ಅಣಕಿಸಿ)

ಉ. ಪೂರಕ ಚಟುವಟಿಕೆ :

  1. ೧. ಪೋಲಿಯೋ ತರಹವೇ ಮಕ್ಕಳನ್ನು ಬಾಧಿಸುವ ಇತರೆ ಕಾಯಿಲೆಗಳು ಯಾವುವು ಪಟ್ಟಿಮಾಡಿ.

  2. ೨. ಪೋಲಿಯೋಗೆ ಇಂದಿನ ದಿನಗಳಲ್ಲಿ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಯಿರಿ.

  3. ೩. ಪ್ರತಿಯೊಂದು ಜೀವಿಯನ್ನೂ ಕರುಣೆಯಿಂದ ನೋಡಬೇಕು" - ಈ ವಿಚಾರದ ಕುರಿತು ಒಂದು ಪ್ರಬಂಧ ಬರೆಯಿರಿ.

ಊ. ಕೆಳಗಿನ ವಿಷಯಗಳಲ್ಲಿ ಭಾಷಣ ಸ್ಪರ್ಧೆಗಳನ್ನು ನಡೆಸಿರಿ.

  1. ೧. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವುದು ಒಳ್ಳೆಯದು.

  2. ೨. ಯಾರನ್ನೂ ಕೀಳಾಗಿ ಕಾಣಬಾರದು.

  3. ೩. ನಮ್ಮ ವಿಕಲತೆಗಳ ಬಗ್ಗೆ ಗೊಣಗುತ್ತ ಕೂರಬಾರದು.

  4. ೪. ಎಲ್ಲ ಪರಿಸ್ಥಿತಿಗಳನ್ನೂ ಫಲದಿಂದ ಎದುರಿಸಬೇಕು.

  5. ೫. ಗೇಲಿಗಳಿಗೆ ತಲೆ ಕೆಡಿಸಿಕೊಳ್ಳಬಾರದು.

  6. ೬. ನಮ್ಮ ನ್ಯೂನತೆಗಳನ್ನು ಮೀರಿ ಸಾಧನೆ ಮಾಡಬೇಕು.

ವ್ಯಾಕರಣ ಮಾಹಿತಿ

ಅ. ನಾಮಪದ

  1. ವ್ಯಕ್ತಿ, ವಸ್ತು, ಸ್ಥಳ ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ ನಾಮಪದ ಎನ್ನುವರು. **ಉದಾಹರಣೆ :** ಮಂಡ್ಯ, ತಿಮ್ಮಣ್ಣ, ಹುಲಿ, ಕಲ್ಲು ಇತ್ಯಾದಿ.

  2. ನಾಮಪದದಲ್ಲಿ ಒಂಬತ್ತು ವಿಧಗಳು. ಅವುಗಳಲ್ಲಿ ವಸ್ತುವಾಚಕ ನಾಮಪದವೂ ಒಂದು. ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು ವಸ್ತುವಾಚಕ ನಾಮಪದಗಳೆನ್ನುವರು.

ಈ ವಸ್ತುವಾಚಕ ನಾಮಪದಗಳಲ್ಲಿ ಮೂರು ವಿಧ.

  1. ವಸ್ತುವಾಚಕ ನಾಮಪದಗಳು

  2. ರೂಢನಾಮ · ಅಂಕಿತನಾಮ · ಅನ್ವರ್ಥನಾಮ

  3. **ರೂಢನಾಮ :** ರೂಢಿಯಿಂದ ಬಂದ ಪದಗಳಿಗೆ ರೂಢನಾಮ ಎನ್ನುವರು.

  4. ಉದಾ : ನದಿ, ಪರ್ವತ, ಹೆಂಗಸು, ಪಟ್ಟಣ, ದೇಶ ಇತ್ಯಾದಿ.

  5. **ಅಂಕಿತನಾಮ :** ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.

  6. ಉದಾ: ರಮೇಶ, ಹಸೀನಾ, ಮೇರಿ, ಗಂಗಾ, ಬ್ರಹ್ಮಪುತ್ರ, ಭಾರತ ಇತ್ಯಾದಿ.

  7. **ಅನ್ವರ್ಥನಾಮ :** ರೂಪ, ಗುಣ, ವೃತ್ತಿ, ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥನಾಮಗಳು.

  8. ಉದಾ: ವ್ಯಾಪಾರಿ, ರೋಗಿ, ಯೋಗಿ, ಬಳೆಗಾರ, ಪೂಜಾರಿ, ಶಿಕ್ಷಕ, ವಿದ್ಯಾರ್ಥಿನಿ ಇತ್ಯಾದಿ.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ಅ) ನಾಮಪದ ಎಂದರೇನು? ಉದಾಹರಣೆ ಕೊಡಿ.

  2. ಆ) ನಾಮಪದಗಳಲ್ಲಿ ಎಷ್ಟು ವಿಧ?

  3. ಇ) ವಸ್ತುವಾಚಕ ನಾಮಪದ ಎಂದರೇನು? ಅವುಗಳಲ್ಲಿ ಎಷ್ಟು ವಿಧ?

ಆ. ಹೊಂದಿಸಿ ಬರೆಯಿರಿ.

  1. ‘ಅ’

  2. ೧. ಅಂಕಿತ ನಾಮ

  3. ೨. ರೂಢನಾಮ

  4. ೩. ಅನ್ವರ್ಥ ನಾಮ

  5. ‘ಬ’

  6. – ರೂಢಿಯಿಂದ ಬಂದ ಪದಗಳು

  7. – ರೂಪ, ಗುಣ, ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಬಂದ ಹೆಸರು

  8. – ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರು

ಇ. ಕೊಟ್ಟಿರುವ ಪದಗಳನ್ನು ರೂಢನಾಮ, ಅಂಕಿತ ನಾಮ ಹಾಗೂ ಅನ್ವರ್ಥನಾಮಗಳಾಗಿ ವಿಂಗಡಿಸಿ ಬರೆಯಿರಿ.

  1. ಮಾರ್ಲಿನ್, ಮಿಲ್ಲರ್, ವೈದ್ಯ, ರೋಗಿ, ಹೆಂಗಸು, ಶಿಶು, ಬಾರ್ಬರಾ, ಪ್ರವೀಣ, ಬಾಲಕಿ, ವಿದ್ಯಾರ್ಥಿ

ಈ. ಯೋಜನೆ

  1. ೧. ಕರಪತ್ರ, ಲಗ್ನಪತ್ರಿಕೆಗಳು ಹಾಗೂ ಸಾಹಿತಿಗಳ ಕೈಬರಹಗಳನ್ನು ಸಂಗ್ರಹಿಸಿ ಆಲ್ಬಂ ತಯಾರಿಸಿ.

ಉ. ಓದಿಗೆ ಮನ್ನಣೆ

  1. ೧. ಮುದ್ರಿತ ಕರಪತ್ರ ಹಾಗೂ ಲಗ್ನ ಪತ್ರಿಕೆಗಳನ್ನು ಸಂಗ್ರಹಿಸಿ ಓದಿರಿ.

  2. ೨. ಶಿಶು ಗೀತೆಗಳನ್ನು ಓದಿರಿ.

  3. ೩. ರಾಜರತ್ನಂ, ಡುಂಡಿರಾಜ್ ಮೊದಲಾದ ಲೇಖಕರು ಬರೆದ ಮಕ್ಕಳ ಕವಿತೆಗಳನ್ನು ಓದಿರಿ.

ಊ. ಶುಭನುಡಿ

  1. ೧. ಕನ್ನಡಿ ನಿನಗೆ ಬೇಡ, ಕನ್ನಡಿಯೇ ನೀನಾಗು.

  2. ೨. ನುಡಿದರೆ ಮುತ್ತಿನ ಹಾರದಂತಿರಬೇಕು.

  3. ೩. ಮಾತಿನ ರೀತಿಗೆ ಪ್ರೀತಿಯ ಬೆಸುಗೆ.

Interactive Lab