CRECT Education

Class 5 Kannada Lesson 16: Fox Grapes Tomato – Practice & Quiz | Savi Kannada Second Language

Description

Practice comprehension and language play from the fox, grapes, and tomato story. For Class 5 Second Language students.

ಗದ್ಯ (prose) · ಎಂ. ಜಿ. ನಾಗರಾಜರಾವ್

ಪಠ್ಯFull text

ಒಂದು ದಿನ ಶಾಲೆಯಲ್ಲಿ ಗುರುಗಳು ರಾಮುವನ್ನು ಕೇಳಿದರು “ನಿನಗೆ ‘ನರಿ-ದ್ರಾಕ್ಷಿ’ ಕತೆ ಗೊತ್ತಾ?” ಎಂದು. ಅದಕ್ಕೆ ರಾಮು, “ಅದೇ, ಒಂದು ನರಿ, ಕೈಗೆಟುಕದ ದ್ರಾಕ್ಷಿಯನ್ನು ಹುಳಿ ಎಂದು ಹೀಯಾಳಿಸಿದ ಕತೆ ಅಲ್ಲವಾ?” ಉತ್ತರಿಸಿದ. ಗುರುಗಳು, “ಹೌದು, ಅದೇ ಕತೆ. ನೀನು ಹೇಗೆ ಹೇಳುತ್ತೀಯೋ ಹೇಳು” ಎಂದರು. ರಾಮು ಕತೆ ಹೇಳಲು ಪ್ರಾರಂಭಿಸಿದ. ಹಸಿದಿದ್ದ ಒಂದು ನರಿ ಆಹಾರವನ್ನು ಹುಡುಕುತ್ತಾ ಒಂದು ತೋಟಕ್ಕೆ ಹೋಯಿತು. ಅಲ್ಲಿ ದ್ರಾಕ್ಷಿಯನ್ನು ಬೆಳೆದಿದ್ದರು. ದ್ರಾಕ್ಷಿ ಬಳ್ಳಿಗಳನ್ನು ಬಿದಿರುಗಳ ಹಂದರಗಳ ಮೇಲೆ ಹಬ್ಬಿಸಿದ್ದರು. ಬಳ್ಳಿಗಳಲ್ಲಿ ರಸವತ್ತಾದ ದ್ರಾಕ್ಷಿಗಳು ಗೊಂಚಲು ಗೊಂಚಲುಗಳಾಗಿ ನೇತು ಬಿದ್ದಿದ್ದವು.ಅವುಗಳನ್ನು ಕಂಡು ನರಿಯ ಬಾಯಲ್ಲಿ ನೀರೂರಿತು; ಅವನ್ನು ತಿನ್ನುವ ಬಯಕೆ ಮೂಡಿತು. ಆದರೆ ಯಾವ ಗೊಂಚಲೂ ಬಾಯಿಗೆ ಎಟುಕುತ್ತಿರಲಿಲ್ಲ. ನರಿ ನೆಗೆದು ನೆಗೆದು ಪ್ರಯತ್ನ ಪಟ್ಟಿತು. ಆದರೂ ಪ್ರಯೋಜನವಾಗಲಿಲ್ಲ. ಕೊನೆಯದಾಗಿ ದೂರದಿಂದ ಓಡಿಬಂದು ಹಾರುವ ಪ್ರಯತ್ನ ಮಾಡಿತು. ಅದೂ ವ್ಯರ್ಥವಾಯಿತು. ನರಿ ನಿರಾಸೆಯಿಂದ ಹೊರಕ್ಕೆ ಬಂತು. ಹೆಜ್ಜೆ ಹಾಕುತ್ತಾ ಹಾಕುತ್ತಾ ಅದು ಹೀಗೆ ಯೋಚಿಸಿತು. “ಈ ದ್ರಾಕ್ಷಿಗಳು ಹುಳಿ ಇರುತ್ತವೆ, ಇವನ್ನು ತಿಂದರೆ ನಾಲಿಗೆ ಕೆಡುತ್ತೆ, ಅಷ್ಟೆ. ಹೊಟ್ಟೆಯೊಳಕ್ಕೆ ಹೋದರೆ ರೋಗವೂ ಬರುತ್ತದೆ. ಈ ಹಣ್ಣುಗಳು ಕೈಗೆ ಎಟುಕದೆ ಹೋದದ್ದು ಒಳ್ಳೆಯದೇ ಆಯಿತು.” ಆದರೆ ಆ ದ್ರಾಕ್ಷಿಗಳು ನಿಜಕ್ಕೂ ರುಚಿಕರವಾಗಿದ್ದವು. ಪುಷ್ಟಿಕರವಾಗಿದ್ದವು. ಈ ಕತೆಯನ್ನು ಕೇಳಿಯೇ “ಎಟುಕದ ದ್ರಾಕ್ಷಿ ಹುಳಿ” ಎಂಬ ಗಾದೆ ಹುಟ್ಟಿಕೊಂಡಿದೆ ಅನ್ನಿಸುತ್ತದೆ. ಗುರುಗಳು ರಾಮುವಿನ ಬೆನ್ನು ತಟ್ಟಿ, “ಹೌದು, ಚೆನ್ನಾಗಿ ಹೇಳಿದೆ” ಎಂದು ಹೊಗಳಿದರು. ಆಗ ಇನ್ನೊಬ್ಬ ವಿದ್ಯಾರ್ಥಿನಿ ರೀಟ ಎದ್ದು ನಿಂತು ಕೇಳಿದಳು “ಗುರುಗಳೇ, ನರಿ ಹಸಿಡಿತ್ತು ಎಂದು ಹೇಳಿದಿರಿ, ಆಮೇಲೆ ಹೊಟ್ಟೆಪಾಡಿಗೆ ಏನು ಮಾಡಿತು?” ಗುರುಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ನುಡಿದರು “ಎಲ್ಲರೂ ಯೋಚನೆ ಮಾಡಿರಿ. ಅದು ಏನು ಮಾಡಿರಬಹುದು? ಊಹಿಸಿ ಹೇಳಿರಿ.” ಆಗ ರೀಟ ವಿಚಾರ ಮಾಡಿ ಹೇಳಿದಳು “ಆ ನರಿ ಹಸಿದಿತ್ತು. ಕಣ್ಣಿಗೆ ಕಾಣುವ ದ್ರಾಕ್ಷಿ ಎಟುಕಲಿಲ್ಲ. ಅಂದಮೇಲೆ ಅದು ಕೈಗೆ ಎಟುಕುವ ಹಣ್ಣನ್ನೇ ತಿಂದಿರಬೇಕು. ಅಂಥ ಹಣ್ಣು ಯಾವುದಿರಬಹುದು? ಯಾವುದಾದರೂ ಆಗಬಹುದು. ಹಾಂ! ಟೊಮೇಟೋ ಆಗಬಹುದು. ನರಿ ಮುಂದೆ ಹೋಯಿತು; ಅದಕ್ಕೆ ಟೊಮೇಟೋ ಗಿಡಗಳು ಕಾಣಿಸಿದವು. ಅವುಗಳಲ್ಲಿ ಎಲ್ಲೋ ಒಂದೊಂದು ಕಡೆ ಹಣ್ಣುಗಳಿದ್ದವು. ಕೆಲವು ಪೂರ್ತಿ ಹಣ್ಣಾಗಿದ್ದರೆ ಕೆಲವು ಅರ್ಧ ಹಣ್ಣು, ಮತ್ತೆ ಕೆಲವು ಕಾಯಿ, ಕಳಿತು ಕೊಳೆತ ಹಣ್ಣುಗಳೂ ಇದ್ದವು. ಅವು ನರಿಗೆ ಎಟುಕುತ್ತಿದ್ದವು. ನರಿ ಅವನ್ನು ಹೊಟ್ಟೆ ತುಂಬ ತಿಂದು ತೇಗಿತು. ಕೊಳೆತ ಹಣ್ಣನ್ನೂ ಬಿಡಲಿಲ್ಲ!” ಗುರುಗಳು ಪ್ರಶ್ನಿಸಿದರು, “ಆಗ ನರಿ ಏನೆಂದುಕೊಂಡಿರಬಹುದು?” ರಾಮು ಹೇಳಿದ, “ಆಗ ಅದು, ಈ ಹಣ್ಣುಗಳು ಅಮೃತ ಇದ್ದ ಹಾಗೆ ಇವೆ. ಇವು ಆರೋಗ್ಯಕ್ಕೂ ಒಳ್ಳೆಯವು ಎಂದುಕೊಂಡಿರಬಹುದು.” ಗುರುಗಳು ಮೆಚ್ಚಿಕೊಳ್ಳುತ್ತಾ ಹೇಳಿದರು. “ಹೌದು, ನಿನ್ನ ಕಲ್ಪನೆ ತುಂಬ ಚೆನ್ನಾಗಿದೆ. ಕೈಗೆ ಸಿಕ್ಕಿದ್ದೇ ಒಳ್ಳೆಯದು, ‘ಕನ್ನಡಿಯೊಳಗಿನ ಗಂಟಿಗಿಂತ, ಕೈಯೊಳಗಿನ ದಂಟೇ ಮೇಲು’, ‘ಪಾಲಿಗೆ ಬಂದದ್ದೇ ಪಂಚಾಮೃತ’ ಎಂದು ಸ್ವೀಕರಿಸಿ ಅಷ್ಟರಲ್ಲಿಯೇ ತೃಪ್ತಿ ಪಡುವುದರಲ್ಲಿ ಜಾಣತನವಿದೆ ಎಂದು ಕತೆಯ ನೀತಿಯನ್ನು ನಿರೂಪಿಸಬಹುದು. ಕತೆಗಳನ್ನು ಹೊರನೋಟಕ್ಕೆ ಕಾಣುವಂತೆ ಮಾತ್ರ ಗ್ರಹಿಸಿದರೆ ಸಾಲದು. ಅವುಗಳ ಹೂರಣವನ್ನು ಅಂದರೆ ಒಳಸತ್ವವನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಕೇಳಿದ ಕತೆಯನ್ನು ವಿಸ್ತರಿಸುವ ಹಾಗೂ ಅಂಥವೇ ಕತೆಗಳನ್ನು ಕಟ್ಟುವ ಕಲ್ಪನಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಅಂಥ ಶಕ್ತಿಯನ್ನು ಬೆಳೆಸಿಕೊಳ್ಳಿ. ನಿಮ್ಮ ಬುದ್ಧಿ ವಿಕಾಸಗೊಳ್ಳುತ್ತದೆ.” ರೀಟ ಎದ್ದು ನಿಂತು ಕೇಳಿದಳು. “ಗುರುಗಳೇ, ಈಗ ಹೇಳಿದ ಕತೆ ನಾವು ಕೇಳಿದ ಕತೆಯನ್ನು ವಿಸ್ತರಿಸಿದ ಹಾಗೆ ಆಯಿತಲ್ಲವೇ? ಇನ್ನು ಅಂಥದೇ ಕತೆಯನ್ನು ಕಟ್ಟುವ ರೀತಿಗೆ ಒಂದು ಉದಾಹರಣೆ ಕೊಡಿರಿ.” ಆಗ ಗುರುಗಳು ಹೇಳಿದರು, “ನಮಗೆಲ್ಲ ಗೊತ್ತಿರುವ ಒಂದು ಕತೆ, ಅದು ಯಾವುದಾದರೂ ಆಗಬಹುದು ಹೇಳು.” ರೀಟ ಹೇಳಿದಳು, “ಆಮೆ-ಮೊಲದ ಕತೆ ಆಗಬಹುದು. ಮೊಲ ವೇಗವಾಗಿ ಓಡುವ ಪ್ರಾಣಿ. ಆಮೆ ನಿಧಾನವಾಗಿ ಚಲಿಸುವ ಪ್ರಾಣಿ. ಅವುಗಳ ನಡುವೆ ಓಟದ ಸ್ಪರ್ಧೆ ಏರ್ಪಟ್ಟಾಗ ಸಹಜವಾಗಿ ಮೊಲವೇ ಗೆಲ್ಲಬೇಕು. ಆದರೆ ಕತೆಯಲ್ಲಿ ಆಮೆ ಗೆಲ್ಲುತ್ತದೆ. ಅದೇ ವಿಶೇಷ. ನಾನು ಕಲ್ಪಿಸಿಕೊಂಡ ಕತೆ ಹೀಗಿದೆ. ಕಾಡಿನಲ್ಲಿ ವೇಗವಾಗಿ ಓಡುವ ಪ್ರಾಣಿ ಎಂದರೆ ಜಿಂಕೆ, ನಿಧಾನವಾಗಿ ಚಲಿಸುವ ಪ್ರಾಣಿ ಎಂದರೆ ಆನೆ. ಆನೆಯ ನಡಿಗೆ ಮಂದ, ಗಜಗಮನ ಎನ್ನುತ್ತೇವಲ್ಲ! ಒಮ್ಮೆ ಅವುಗಳ ನಡುವೆ ಓಟದ ಸ್ಪರ್ಧೆ ನಡೆದರೆ ಹೇಗಿರಬಹುದು ಎನ್ನುವುದೇ ನನ್ನ ಕತೆ. ಒಂದು ಸಲ ಅವುಗಳಿಗೆ ಯಾವುದೋ ಕಾರಣಕ್ಕೆ ಓಟದ ಸ್ಪರ್ಧೆ ಏರ್ಪಟ್ಟಿತ್ತು ಎಂದು ಇಟ್ಟುಕೊಳ್ಳೋಣ. ಓಟದ ಸ್ಪರ್ಧೆ ಪ್ರಾರಂಭವಾಯಿತು. ಜಿಂಕೆ ಲೀಲಾಜಾಲವಾಗಿ ಓಡಿತು. ಮಾರ್ಗ ಮಧ್ಯೆ ಒಳ್ಳೆಯ ಹಸಿರು ಹುಲ್ಲು ಸೊಂಪಾಗಿ ಬೆಳೆದಿರುವುದನ್ನು ಕಂಡಿತು. ಹಸಿವಿಲ್ಲದಿದ್ದರೂ ಅದನ್ನು ಸವಿಯಬೇಕೆಂಬ ಚಪಲ ಹುಟ್ಟಿ ಅಲ್ಲಿಯೆ ನಿಂತು ಆನಂದವಾಗಿ ತಿನ್ನುವುದಕ್ಕೆ ತೊಡಗಿತು. ಆನೆ ಎಲ್ಲೋ ದೂರದಲ್ಲಿತ್ತು. ಜಿಂಕೆ ತಿನ್ನುವ ರಭಸದಲ್ಲಿ ತನ್ನ ಕೆಲಸವನ್ನೇ ಮರೆತುಬಿಟ್ಟಿತ್ತು. ಆನೆ ನಿಧಾನವಾಗಿಯಾದರೂ ತನ್ನ ಗುರಿಯತ್ತ ಸಾಗಿತು. ಮಾರ್ಗ ಮಧ್ಯೆ ಅದು ಸೊಂಪಾಗಿ ಬೆಳೆದ ಹುಲ್ಲನ್ನು ಕಂಡಿತು. ಅದಕ್ಕೆ ಹುಲ್ಲು ತಿನ್ನಬೇಕೆನಿಸಿದರೂ ಅದು ಚಪಲಕ್ಕೆ ಬಲಿಯಾಗಲಿಲ್ಲ. ಆನೆ ನಿಧಾನವಾಗಿ ನಡೆದರೂ ಗುರಿಯನ್ನು ಮುಟ್ಟಿಯೇ ಬಿಟ್ಟಿತು. ಜಿಂಕೆಗೆ ಸೋಲು, ಆನೆಗೆ ಗೆಲುವು!” ಕತೆಯನ್ನು ಕೇಳಿ ಗುರುಗಳು ಸಂತೋಷಪಟ್ಟರು. ರೀಟಾಳ ಬೆನ್ನುತಟ್ಟಿ ಪ್ರೋತ್ಸಾಹಿಸಿದರು, “ರಾಮು ನೀನು ಈಗ ಇದರ ನೀತಿಯನ್ನು ಹೇಳುತ್ತೀಯಾ” ಎಂದು ಕೇಳಿದರು. ರಾಮು ಎದ್ದು ನಿಂತು ಹೇಳಿದ, “ನಾವು ಯಾವುದೇ ಕೆಲಸಕ್ಕೆ ತೊಡಗಿದಾಗ ನಮ್ಮ ಪೂರ್ಣ ಧ್ಯಾನ-ಧ್ಯಾಸ ನಮ್ಮ ಗುರಿಯನ್ನು ಸಾಧಿಸುವ ಕಡೆಗೇ ಇರಬೇಕು. ಬೇರೆ ಯಾವುದೇ ಆಕರ್ಷಣೆಗೆ ಒಳಗಾಗಬಾರದು.” ಗುರುಗಳು “ಚೆನ್ನಾಗಿ ಹೇಳಿದೆ” ಎಂದರು. ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು. ಒಬ್ಬ ವಿದ್ಯಾರ್ಥಿ ಹುಮ್ಮಸ್ಸಿನಿಂದ ಹೇಳಿದ, “ಗುರುಗಳೇ ನೀವು ದಿನಾ ಇಂಥ ಕತೆಗಳನ್ನು ಹೇಳಿ, ನಮಗೆ ತುಂಬಾ ಇಷ್ಟವಾಗುತ್ತೆ.” ಗುರುಗಳು ಸಂತೋಷದಿಂದ ನಗುತ್ತಾ ಹೇಳಿದರು, “ನಿಮಗೆ ಇಷ್ಟವಾಗುತ್ತದೆ ಅಂತ ಹೇಳಿದರೆ ನಾನು ಇಲ್ಲ ಎನ್ನುತ್ತೇನೆಯೇ? ಖಂಡಿತ ಹೇಳುತ್ತೇನೆ. ಪುಟ್ಟ ಪುಟ್ಟ ಕತೆಗಳನ್ನೂ ಹೇಳುತ್ತೇನೆ, ದೊಡ್ಡ ಕತೆಗಳನ್ನೂ ಹೇಳುತ್ತೇನೆ. ನೀವು ಆ ಕತೆಗಳನ್ನು ಕೇಳಿ ಅಥವಾ ಓದಿ ಸಂತೋಷ ಪಡುತ್ತೀರಿ. ಆದರೆ ಅಷ್ಟೇ ಸಾಲದು, ಅಂತಹ ಇನ್ನಿತರ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಕತೆಗಳನ್ನು ವಿಸ್ತರಿಸಿ, ಮಾರ್ಪಡಿಸಿ ಸಂತೋಷ ಪಡಬೇಕು. ಇಂತಹ ಕಲ್ಪನೆಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನಸ್ಸು ವಿಕಾಸಗೊಳ್ಳುತ್ತದೆ. ನೀವು ಹೆಚ್ಚು ಬುದ್ಧಿವಂತರಾಗುತ್ತೀರಿ, ವಿವೇಕಿಗಳಾಗುತ್ತೀರಿ, ಸಜ್ಜನರಾಗುತ್ತೀರಿ. ಕತೆಗಳ ಮೂಲಕ ನಿಮ್ಮ ಭಾಷೆಯೂ ಶುದ್ಧವಾಗುತ್ತದೆ ಮತ್ತು ನೀವು ಭಾಷೆಯ ಮೇಲೆ ಒಳ್ಳೆಯ ಹಿಡಿತವನ್ನು ಸಾಧಿಸುತ್ತೀರಿ. ಆ ವಿದ್ಯಾಗಣಪತಿಯು ನಿಮಗೆ ಬುದ್ಧಿ-ಸಿದ್ಧಿಗಳನ್ನು ಕರುಣಿಸಲಿ.” **** **ಕೃತಿಕಾರರ ಪರಿಚಯ :** (Photo of Sri M. G. Nagarajarao is printed here) ಶ್ರೀ ಎಂ. ಜಿ. ನಾಗರಾಜರಾವ್ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪಾಧ್ಯಾಯರು. ಇವರು ಮಕ್ಕಳ ಬುದ್ಧಿಗೆ ಚುರುಕು ಮನಸ್ಸಿಗೆ ಆನಂದ ನೀಡುವ ಹಲವಾರು ಕತೆಗಳನ್ನು ಬರೆದಿದ್ದಾರೆ. ಪ್ರಸ್ತುತ ‘ನರಿ-ದ್ರಾಕ್ಷಿ-ಟೊಮೇಟೋ’ ಕತೆಯನ್ನು ಅವರ ‘ಚಿಕ್ಕ-ದೊಡ್ಡ ಕತೆಗಳು’ ಪುಸ್ತಕದಿಂದ ಆರಿಸಲಾಗಿದೆ.

"ಕೈಗೆ ಸಿಕ್ಕಿದ್ದೇ ಒಳ್ಳೆಯದು, ‘ಕನ್ನಡಿಯೊಳಗಿನ ಗಂಟಿಗಿಂತ, ಕೈಯೊಳಗಿನ ದಂಟೇ ಮೇಲು’, ‘ಪಾಲಿಗೆ ಬಂದದ್ದೇ ಪಂಚಾಮೃತ’" — A proverb meaning "What you actually hold in your hand is better than an inaccessible treasure," and "Whatever falls to your share is nectar." Similar to "A bird in the hand is worth two in the bush" — encouraging gratitude for what is attainable rather than pining over what is out of reach.

ಪದಗಳ ಅರ್ಥword meanings

KannadaPronunciationMeaning
ಅಮೃತಹಾಲು ಗಜ - ಆನೆ ಗ್ರಹಿಸು - ಅರ್ಥಮಾಡಿಕೊ; ತಿಳಿದುಕೊ
ನೀರೂರುಆಸೆ ಉಂಟಾಗು
ಪುಷ್ಟಿಶಕ್ತಿ; ಬೆಳವಣಿಗೆ
ಲೀಲಾಜಾಲಅತ್ಯಂತ ಸುಲಭವಾದದ್ದು
ಸೊಂಪುಸೊಗಸು; ಕಾಂತಿ
ಹೀಯಾಳಿಸುನಿಂದಿಸು; ತೆಗಳು
ಹೊಟ್ಟೆಪಾಡುಜೀವನೋಪಾಯ ಕೈಗೆಟುಕದ - ಕೈಗೆ ಸಿಗದ ಗಜಗಮನ - ನಿಧಾನವಾದ ನಡೆ ಧ್ಯಾಸ - ನೆನಪು; ಜ್ಞಾಪನ; ಸ್ಮೃತಿ
ಪಂಚಾಮೃತಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಗಳ ಮಿಶ್ರಣ
ವಿಕಾಸಅರಳು; ಪ್ರಕಟಗೊಳ್ಳು
ಹಂದರಚಪ್ಪರ ಹೂರಣ - ಕಡುಬಿಗೆ ಸೇರಿಸುವ ಬೆಲ್ಲ ಕೊಬ್ಬರಿ ಮಿಶ್ರಣ

ಅಭ್ಯಾಸexercises from the textbook

Model answers — a guide, not the only correct wording. Check with your teacher.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ರಾಮು ತರಗತಿಯಲ್ಲಿ ಹೇಳಿದ ಕತೆ ಯಾವುದು?

    Answer

    ರಾಮು ತರಗತಿಯಲ್ಲಿ ನರಿ-ದ್ರಾಕ್ಷಿ ಕತೆಯನ್ನು ಹೇಳಿದನು.

  2. ೨. ಹಸಿದಿದ್ದ ನರಿ ಆಹಾರ ಹುಡುಕುತ್ತ ಎಲ್ಲಿಗೆ ಬಂತು?

    Answer

    ಹಸಿದಿದ್ದ ನರಿ ಆಹಾರ ಹುಡುಕುತ್ತಾ ಒಂದು ತೋಟಕ್ಕೆ ಬಂತು.

  3. ೩. ನರಿ-ದ್ರಾಕ್ಷಿ ಕತೆಯಿಂದ ಹುಟ್ಟಿಕೊಂಡ ಗಾದೆ ಮಾತು ಯಾವುದು?

    Answer

    ನರಿ-ದ್ರಾಕ್ಷಿ ಕತೆಯಿಂದ “ಎಟುಕದ ದ್ರಾಕ್ಷಿ ಹುಳಿ” ಎಂಬ ಗಾದೆ ಮಾತು ಹುಟ್ಟಿಕೊಂಡಿದೆ.

  4. ೪. ನರಿಗೆ ಎಟುಕಿದ ಟೊಮೇಟೋ ಹಣ್ಣುಗಳು ಹೇಗಿದ್ದವು?

    Answer

    ನರಿಗೆ ಎಟುಕಿದ ಟೊಮೇಟೋ ಹಣ್ಣುಗಳು ಪೂರ್ತಿ ಹಣ್ಣು, ಅರ್ಧ ಹಣ್ಣು, ಕಾಯಿ ಮತ್ತು ಕಳಿತು ಕೊಳೆತ ಹಣ್ಣುಗಳಾಗಿದ್ದವು.

  5. ೫. ಆಮೆ ಮೊಲದ ಕತೆಯ ನೀತಿ ಏನು?

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ದ್ರಾಕ್ಷಿ ಗೊಂಚಲು ಸಿಗದೆ ಇದ್ದಾಗ ನರಿಯು ಏನೆಂದುಕೊಂಡಿತು?

    Answer

    ದ್ರಾಕ್ಷಿ ಗೊಂಚಲು ಸಿಗದೆ ಇದ್ದಾಗ ನರಿಯು ಆ ದ್ರಾಕ್ಷಿಗಳು ಹುಳಿ ಇರುತ್ತವೆ, ತಿಂದರೆ ನಾಲಿಗೆ ಕೆಡುತ್ತದೆ ಮತ್ತು ಹೊಟ್ಟೆಗೆ ಹೋದರೆ ರೋಗ ಬರುತ್ತದೆ ಎಂದುಕೊಂಡಿತು. ಅಲ್ಲದೆ, ಆ ಹಣ್ಣುಗಳು ಕೈಗೆ ಎಟುಕದೆ ಹೋದದ್ದು ಒಳ್ಳೆಯದೇ ಆಯಿತು ಎಂದು ಯೋಚಿಸಿತು.

  2. ೨. ರೀಟ ನರಿ ದ್ರಾಕ್ಷಿ ಕತೆಯನ್ನು ಯಾವ ರೀತಿ ವಿಸ್ತರಿಸಿದಳು?

    Answer

    ರೀಟ ನರಿ ದ್ರಾಕ್ಷಿ ಕತೆಯನ್ನು ವಿಸ್ತರಿಸಿ, ನರಿ ಮುಂದೆ ಹೋಗಿ ಟೊಮೇಟೋ ಗಿಡಗಳನ್ನು ಕಂಡಿತು ಎಂದು ಹೇಳಿದಳು. ಆ ಟೊಮೇಟೋ ಹಣ್ಣುಗಳು ನರಿಗೆ ಎಟುಕುತ್ತಿದ್ದವು, ಅದು ಅವನ್ನು ಹೊಟ್ಟೆ ತುಂಬ ತಿಂದು ತೇಗಿತು ಮತ್ತು ಕೊಳೆತ ಹಣ್ಣನ್ನೂ ಬಿಡಲಿಲ್ಲ ಎಂದು ಕತೆಯನ್ನು ಮುಂದುವರಿಸಿದಳು.

  3. ೩. ನರಿ ಟೊಮೇಟೋ ಕತೆಯ ನೀತಿ ಏನು?

    Answer

    ನರಿ ಟೊಮೇಟೋ ಕತೆಯ ನೀತಿ ಏನೆಂದರೆ, ಕೈಗೆ ಸಿಕ್ಕಿದ್ದೇ ಒಳ್ಳೆಯದು ಎಂದು ಸ್ವೀಕರಿಸಿ ಅದರಲ್ಲಿಯೇ ತೃಪ್ತಿ ಪಡುವುದರಲ್ಲಿ ಜಾಣತನವಿದೆ. ‘ಕನ್ನಡಿಯೊಳಗಿನ ಗಂಟಿಗಿಂತ, ಕೈಯೊಳಗಿನ ದಂಟೇ ಮೇಲು’ ಮತ್ತು ‘ಪಾಲಿಗೆ ಬಂದದ್ದೇ ಪಂಚಾಮೃತ’ ಎಂಬುದು ಇದರ ಸಾರಾಂಶ.

  4. ೪. ಕತೆಗಳನ್ನು ಹೇಗೆ ಗ್ರಹಿಸಬೇಕೆಂದು ಗುರುಗಳು ಮಕ್ಕಳಿಗೆ ಹೇಳಿದರು?

    Answer

    ಗುರುಗಳು ಕತೆಗಳನ್ನು ಹೊರನೋಟಕ್ಕೆ ಮಾತ್ರ ಗ್ರಹಿಸದೆ ಅವುಗಳ ಹೂರಣವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ಜೊತೆಗೆ, ಕೇಳಿದ ಕತೆಯನ್ನು ವಿಸ್ತರಿಸುವ ಮತ್ತು ಹೊಸ ಕತೆಗಳನ್ನು ಕಟ್ಟುವ ಕಲ್ಪನಾಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

  5. ೫. ರೀಟ ಹೇಳಿದ ಆನೆ ಜಿಂಕೆ ಕತೆಯ ವಿಶೇಷವೇನು?

    Answer

    ರೀಟ ಹೇಳಿದ ಆನೆ ಜಿಂಕೆ ಕತೆಯ ವಿಶೇಷವೆಂದರೆ, ವೇಗವಾಗಿ ಓಡುವ ಜಿಂಕೆ ದಾರಿಯಲ್ಲಿ ಹುಲ್ಲಿನ ಆಕರ್ಷಣೆಗೆ ಒಳಗಾಗಿ ಸೋತಿತು. ಆದರೆ ನಿಧಾನವಾಗಿ ನಡೆಯುವ ಆನೆ ತನ್ನ ಗುರಿಯ ಮೇಲೆ ಧ್ಯಾನವಿಟ್ಟು ಗೆದ್ದಿತು.

  6. ೬. ಕತೆಗಳನ್ನು ವಿಸ್ತರಿಸಿ ಹೇಳುವುದರಿಂದ ಆಗುವ ಪ್ರಯೋಜನಗಳೇನು?

    Answer

    ಕತೆಗಳನ್ನು ವಿಸ್ತರಿಸಿ ಹೇಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ, ಬುದ್ಧಿವಂತಿಕೆ, ವಿವೇಕ ಮತ್ತು ಸಜ್ಜನತೆ ಬೆಳೆಯುತ್ತದೆ. ಜೊತೆಗೆ ಭಾಷೆ ಶುದ್ಧವಾಗಿ ಭಾಷೆಯ ಮೇಲೆ ಒಳ್ಳೆಯ ಹಿಡಿತ ಸಿಗುತ್ತದೆ.

ಇ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. ಈ ದ್ರಾಕ್ಷಿಗಳು ಹುಳಿ ಇರುತ್ತವೆ. ಇವನ್ನು ತಿಂದರೆ ನಾಲಿಗೆ ಕೆಡುತ್ತದೆ.

    Answer

    ನರಿ ತನಗೆ ತಾನೇ ಹೇಳಿಕೊಂಡಿತು.

  2. ೨. ಎಲ್ಲರೂ ಯೋಚನೆ ಮಾಡಿರಿ. ಅದು ಏನು ಮಾಡಿರಬಹುದು?

    Answer

    ಗುರುಗಳು ವಿದ್ಯಾರ್ಥಿಗಳಿಗೆ ಹೇಳಿದರು.

  3. ೩. ನೀವು ಹೆಚ್ಚು ಬುದ್ಧಿವಂತರಾಗುತ್ತೀರಿ, ವಿವೇಕಿಗಳಾಗುತ್ತೀರಿ, ಸಜ್ಜನರಾಗುತ್ತೀರಿ.

    Answer

    ಗುರುಗಳು ವಿದ್ಯಾರ್ಥಿಗಳಿಗೆ ಹೇಳಿದರು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ನಿರಾಸೆ x \_\_\_\_\_\_\_\_\_

    Answer

    ಆಸೆ

  2. ೨. ಅಮೃತ x \_\_\_\_\_\_\_\_\_

    Answer

    ವಿಷ

  3. ೩. ತೃಪ್ತಿ x \_\_\_\_\_\_\_\_\_

    Answer

    ಅತೃಪ್ತಿ

  4. ೪. ಹೊರನೋಟ x \_\_\_\_\_\_\_\_\_

    Answer

    ಒಳನೋಟ

  5. ೫. ಪ್ರಯೋಜನ x \_\_\_\_\_\_\_\_\_

    Answer

    ಅಪ್ರಯೋಜನ

  6. ೬. ಸಜ್ಜನ x \_\_\_\_\_\_\_\_\_

    Answer

    ದುರ್ಜನ

  7. ೭. ವಿವೇಕಿ x \_\_\_\_\_\_\_\_\_

    Answer

    ಅವಿವೇಕಿ

ಆ) ಈ ಕೆಳಗಿನ ಗಾದೆ ಮಾತುಗಳನ್ನು ಪೂರ್ಣಗೊಳಿಸಿರಿ.

  1. ೧. ಕನ್ನಡಿಯೊಳಗಿನ ಗಂಟಿಗಿಂತ, ...................................... ದಂಟೇ ಮೇಲು.

    Answer

    ಕೈಯೊಳಗಿನ

  2. ೨. ಪಾಲಿಗೆ ಬಂದದ್ದೇ ......................................

    Answer

    ಪಂಚಾಮೃತ

  3. ೩. ಎಟುಕದ ದ್ರಾಕ್ಷಿ ......................................

    Answer

    ಹುಳಿ

ಇ) ಈ ಪಾಠದಲ್ಲಿ ಬಳಕೆಯಾಗಿರುವ ದ್ವಿರುಕ್ತಿ ಪದಗಳನ್ನು ಹುಡುಕಿ ಬರೆಯಿರಿ.

  1. ಮಾದರಿ : ಗೊಂಚಲು ಗೊಂಚಲು

  2. ೧. ......................................

    Answer

    ನೆಗೆದು ನೆಗೆದು

  3. ೨. ......................................

    Answer

    ಹಾಕುತ್ತಾ ಹಾಕುತ್ತಾ

  4. ೩. ......................................

    Answer

    ಪುಟ್ಟ ಪುಟ್ಟ

ಈ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ನೀರೂರು : ........................................................................................................

    Model sentence

    ಅಮ್ಮ ಮಾಡಿದ ಮಾವಿನಕಾಯಿ ಉಪ್ಪಿನಕಾಯಿ ನೋಡಿ ನನ್ನ ಬಾಯಲ್ಲಿ ನೀರೂರಿತು.

  2. ೨. ಪ್ರೋತ್ಸಾಹಿಸು : ........................................................................................................

    Model sentence

    ನನ್ನ ಗೆಳೆಯ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ನನ್ನನ್ನು ಪ್ರೋತ್ಸಾಹಿಸಿದನು.

  3. ೩. ಲೀಲಾಜಾಲ : ........................................................................................................

    Model sentence

    ನನಗೆ ಲೆಕ್ಕದ ಪ್ರಶ್ನೆಗಳು ಲೀಲಾಜಾಲವಾಗಿ ಬಂದವು.

  4. ೪. ಕಲ್ಪನಾಶಕ್ತಿ : ........................................................................................................

    Model sentence

    ನನ್ನ ತಂಗಿಗೆ ಕತೆ ಕೇಳುವಾಗ ಕಲ್ಪನಾಶಕ್ತಿ ತುಂಬಾ ಇದೆ.

  5. ೫. ಸಜ್ಜನ : ........................................................................................................

    Model sentence

    ನಮ್ಮ ನೆರೆಮನೆಯ ಅಂಕಲ್ ತುಂಬಾ ಸಜ್ಜನರು.

  6. ೬. ಆಕರ್ಷಣೆ : ........................................................................................................

    Model sentence

    ಜಾತ್ರೆಯಲ್ಲಿ ಆಟಿಕೆಗಳ ಅಂಗಡಿ ನನಗೆ ಆಕರ್ಷಣೆಯಾಗಿತ್ತು.

ಉ) ಕೆಳಗಿನ ಪದಗಳನ್ನು ಬಿಡಿಸಿ ಬರೆದಿದೆ ಅವುಗಳನ್ನು ಗಮನಿಸಿರಿ.

  1. ೧. ಕೈಗೆಟುಕು = ಕೈಗೆ + ಎಟುಕು

  2. ೨. ಪಂಚಾಮೃತ = ಪಂಚ + ಅಮೃತ

  3. ೩. ಕನ್ನಡಿಯೊಳಗಿನ = ಕನ್ನಡಿ + ಒಳಗಿನ

  4. ೪. ವಿದ್ಯಾರ್ಥಿ = ವಿದ್ಯಾ + ಅರ್ಥಿ

  5. ೫. ಸಜ್ಜನ = ಸತ್ + ಜನ

Interactive Lab

ಅಮೃತಹಾಲು ಗಜ - ಆನೆ ಗ್ರಹಿಸು - ಅರ್ಥಮಾಡಿಕೊ; ತಿಳಿದುಕೊ
ನೀರೂರುಆಸೆ ಉಂಟಾಗು
ಪುಷ್ಟಿಶಕ್ತಿ; ಬೆಳವಣಿಗೆ
ಲೀಲಾಜಾಲಅತ್ಯಂತ ಸುಲಭವಾದದ್ದು
ಸೊಂಪುಸೊಗಸು; ಕಾಂತಿ
ಹೀಯಾಳಿಸುನಿಂದಿಸು; ತೆಗಳು
ಹೊಟ್ಟೆಪಾಡುಜೀವನೋಪಾಯ ಕೈಗೆಟುಕದ - ಕೈಗೆ ಸಿಗದ ಗಜಗಮನ - ನಿಧಾನವಾದ ನಡೆ ಧ್ಯಾಸ - ನೆನಪು; ಜ್ಞಾಪನ; ಸ್ಮೃತಿ
ಪಂಚಾಮೃತಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಗಳ ಮಿಶ್ರಣ
ವಿಕಾಸಅರಳು; ಪ್ರಕಟಗೊಳ್ಳು
ಹಂದರಚಪ್ಪರ ಹೂರಣ - ಕಡುಬಿಗೆ ಸೇರಿಸುವ ಬೆಲ್ಲ ಕೊಬ್ಬರಿ ಮಿಶ್ರಣ