CRECT Education

Class 5 Kannada Lesson 18: True Incidents of Gandhiji | KTBS Second Language – Practice & Quiz

Description

Practice comprehension and word-play from Class 5 Kannada Second Language Lesson 18: True Incidents of Gandhiji (ಗಾಂಧೀಜಿ ಜೀವನದ ನೈಜ ಸಂಗತಿಗಳು). Six fun recall and language exercises from the KTBS textbook.

ಗದ್ಯ (prose) · ಉಮಾಶಂಕರ ಜೋಶಿ (Umashankar Joshi)

ಪಠ್ಯFull text

೧. ಬಾಪೂಜಿ ಅಂಗಿ ಏಕೆ ತೊಡುವುದಿಲ್ಲ? ಬಾಪೂಜಿಯನ್ನು ಭೇಟಿಯಾಗಲು ಅನೇಕ ಮಕ್ಕಳು ಆಗಾಗ ಬರುತ್ತಿದ್ದರು. ಒಂದು ದಿನ ಅಲ್ಲಿ ಬಂದ ಒಬ್ಬ ಬಾಲಕನಿಗೆ ಬಾಪೂಜಿಯ ವೇಷಭೂಷಣ ಕಂಡು ತುಂಬಾ ವ್ಯಸನವಾಯಿತು. ಇಷ್ಟೊಂದು ದೊಡ್ಡ ಬಾಪು, ಅವರ ಮೈಮೇಲೆ ಒಂದು ಅಂಗಿಯೂ ಇಲ್ಲವಲ್ಲ! ಅವನಿಂದ ತಡೆಯಲಾಗಲಿಲ್ಲ. ಕೇಳಿಯೇ ಬಿಟ್ಟ “ಬಾಪೂಜಿ, ತಾವು ಅಂಗಿ ಏಕೆ ತೊಡುವುದಿಲ್ಲ?” ಬಾಪು ಹುಡುಗನನ್ನು ಮುದ್ದಿಸುತ್ತಾ ನುಡಿದರು “ಮಗೂ, ನನ್ನ ಹತ್ತಿರ ಹಣ ಎಲ್ಲಿದೆ? ನಾನು ತುಂಬಾ ಬಡವ. ಅಂಗಿಗಾಗಿ ಹಣ ಎಲ್ಲಿಂದ ತರಲಿ?” ಹುಡುಗನ ಹೃದಯ ಕರಗಿ ನೀರಾಯಿತು. ಆತ ಹೇಳಿದ “ನನ್ನ ಅಮ್ಮನಿಗೆ ಹೊಲಿಗೆ ಬರುತ್ತದೆ. ನೋಡಿ! ಆಕೆಯೇ ನನ್ನ ಎಲ್ಲ ಅರಿವೆಗಳನ್ನು ಹೊಲಿಯುತ್ತಾಳೆ. ನಾನು ನನ್ನ ಅಮ್ಮನಿಗೆ ಹೇಳಿ ನಿಮಗಾಗಿ ಅಂಗಿ ಹೊಲಿಸಿ ಕೊಡುತ್ತೇನೆ. ಆಗ ನೀವು ಹಾಕಿಕೊಳ್ಳುವಿರಾ?” “ನಿನ್ನ ಅಮ್ಮ ಎಷ್ಟು ಅಂಗಿ ಹೊಲಿಯಬಲ್ಲಳು?” ಬಾಪು ಕೇಳಿದರು ಹುಡುಗ ನುಡಿದ “ನಿಮಗೆ ಎಷ್ಟು ಬೇಕು? ಒಂದು, ಎರಡು, ಮೂರು? ನೀವು ಕೇಳಿದಷ್ಟು ಹೊಲಿದು ಕೊಡುವಳು.” ಬಾಪು ವಿಚಾರ ಮಾಡುತ್ತಾ ನುಡಿದರು “ನಾನು ಒಬ್ಬನೇ ಇಲ್ಲ. ಒಬ್ಬನೇ ಅಂಗಿ ಹೇಗೆ ತೊಡಲಿ?” ಬಾಲಕ ನುಡಿದ “ಎಷ್ಟು ಅಂಗಿ ತಂದರೆ ನಿಮ್ಮ ಕೆಲಸವಾಗಬಹುದು, ನಾನು ನನ್ನ ಅಮ್ಮನಿಂದ ಅಷ್ಟೇ ಅಂಗಿ ಹೊಲಿಸಿ ತರುವೆ. ಹೇಳಿರಿ ಬಾಪೂ, ಎಷ್ಟು ಅಂಗಿ ಬೇಕು ನಿಮಗೆ?” ಹುಡುಗನ ಆಗ್ರಹ ಕಂಡು ಬಾಪು ನುಡಿದರು. “ಮಗೂ, ನನಗೆ ನಲವತ್ತು ಕೋಟಿ ಬಂಧು-ಭಗಿನಿಯರಿದ್ದಾರೆ. ಎಲ್ಲಿಯವರೆಗೆ ಎಲ್ಲರ ಮೈಮೇಲೆ ಅಂಗಿ ಇರುವುದಿಲ್ಲವೋ, ಅಲ್ಲಿಯವರೆಗೆ ನಾನೊಬ್ಬನೇ ಹೇಗೆ ಹಾಕಿಕೊಳ್ಳಲಿ? ನಿನ್ನ ಅಮ್ಮ ಎಲ್ಲರಿಗೂ ಹೊಲಿಯಬಲ್ಲಳೇ?” ಇಷ್ಟು ನುಡಿದ ಬಾಪು ಹುಡುಗನನ್ನು ನೋಡತೊಡಗಿದರು. ಹುಡುಗ ವಿಚಾರದಲ್ಲಿ ಬಿದ್ದ. 40 ಕೋಟಿ ಬಂಧು-ಭಗಿನಿಯರು! ನಿಜ, ಬಾಪು ಸರಿಯಾಗಿಯೇ ಹೇಳುತ್ತಿದ್ದಾರೆ. ಎಲ್ಲಿಯವರೆಗೆ ಅವರೆಲ್ಲರಿಗೂ ಅಂಗಿ ಸಿಗುವುದಿಲ್ಲವೋ, ಬಾಪು ಒಬ್ಬರೇ ಹೇಗೆ ಹಾಕಿಕೊಳ್ಳುವರು? ೨. ಅರ್ಧಾಣೆ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನದು. ಚರಕ ಸಂಘದ ಸಹಾಯಾರ್ಥವಾಗಿ ಹಣ ಶೇಖರಿಸುತ್ತಾ ಗಾಂಧೀಜಿ ಹಳ್ಳಿ-ಪಟ್ಟಣಗಳಲ್ಲಿ ಯಾತ್ರೆ ಮಾಡುತ್ತಿದ್ದರು. ಒಂದು ಸಲ ಒರಿಸ್ಸಾದಲ್ಲಿ ಪ್ರವಾಸ ಮಾಡುತ್ತಿದ್ದಾಗ ಒಂದು ಸಭೆಯಲ್ಲಿ ಗಾಂಧೀಜಿ ಭಾಷಣ ಮಾಡುತ್ತಾ ಇದ್ದರು. ಭಾಷಣ ಮುಗಿದೊಡನೆ ಒಬ್ಬ ಬಡ ಮುದುಕಿ ಸಭೆಯಿಂದ ಎದ್ದು ಬಂದಳು. ಅವಳ ಕೂದಲೆಲ್ಲ ಬೆಳ್ಳಗಾಗಿತ್ತು. ಸೊಂಟ ಬಗ್ಗಿತ್ತು. ಚಿಂದಿ ಚಿಂದಿ ವಸ್ತ್ರ ತೊಟ್ಟಿದ್ದಳು. ಸ್ವಯಂ ಸೇವಕರು ಅವಳನ್ನು ಗಾಂಧೀಜಿಯವರ ಬಳಿ ಬರಲು ಬಿಡಲಿಲ್ಲ. ಆದರೂ ಅವಳು ಹೇಗೋ ಜಗಳ ಮಾಡಿ ಗಾಂಧೀಜಿಯವರ ಬಳಿ ತಲುಪಿದಳು. “ದರ್ಶನ ಮಾಡಲು ಬಂದೆ” ಎನ್ನುತ್ತ ಆಕೆ ಬಾಪುವಿನ ಪಾದಗಳನ್ನು ಮುಟ್ಟಿ ಸೊಂಟದಿಂದ ಒಂದು ಅರ್ಧಾಣೆಯನ್ನು ಅವರ ಪಾದಗಳ ಬಳಿ ಇಟ್ಟು, ಹೊರಟು ಹೋದಳು. ಗಾಂಧೀಜಿ ಅದನ್ನು ತೆಗೆದುಕೊಂಡು ತಮ್ಮ ಬಳಿ ಇಟ್ಟುಕೊಂಡರು. ಸೇಠ ಜಮನಾಲಾಲ ಬಜಾಜರು ಚರಕ ಸಂಘದ ಲೆಕ್ಕಪತ್ರ ಇಡುವವರಾಗಿದ್ದರು. ಲೆಕ್ಕದಲ್ಲಿ ಕೂಡಿಸಲು ಅವರು ಬಾಪುವಿನ ಹತ್ತಿರವಿದ್ದ ಅರ್ಧಾಣೆಯನ್ನು ಕೇಳಿದರು. ಆದರೆ ಕೊಡಲು ಬಾಪು ಒಪ್ಪಲಿಲ್ಲ. ಜಮನಾಲಾಲರು ನಗುತ್ತಾ ನುಡಿದರು. “ಚರಕ ಸಂಘದ ಸಾವಿರಾರು ರೂಪಾಯಿಗಳ ಚೆಕ್ಕುಗಳನ್ನು ನಾನು ತೆಗೆದುಕೊಳ್ಳುತ್ತೇನೆ. ಈ ಅರ್ಧಾಣೆಗೆ ನಿಮಗೆ ನನ್ನಲ್ಲಿ ವಿಶ್ವಾಸವಿಲ್ಲವೇ?” ಗಾಂಧೀಜಿ ನುಡಿದರು. “ಆ ಸಾವಿರಾರು ರೂಪಾಯಿಗಳಿಗಿಂತ ಈ ಅರ್ಧಾಣೆ ಬೆಲೆ ಹೆಚ್ಚಿನದು. ಲಕ್ಷಗಟ್ಟಲೆ ಹಣವಿದ್ದವ ಒಂದೆರಡು ಸಾವಿರ ಕೊಟ್ಟರೆ ಅದೇನೂ ಅಷ್ಟು ದೊಡ್ಡ ಮಾತಲ್ಲ. ಆದರೆ ಈ ಅರ್ಧಾಣೆ ಆ ಮುದುಕಿಯ ಇಡೀ ಜೀವಮಾನದ ಗಳಿಕೆಯೇ ಆಗಿರಬಹುದು. ಆಕೆ ತನ್ನ ಸರ್ವಸ್ವವನ್ನೇ ಕೊಟ್ಟಿದ್ದಾಳೆ. ಎಷ್ಟೊಂದು ಉದಾರ, ಎಷ್ಟೊಂದು ದೊಡ್ಡ ಮನಸ್ಸು ಅವಳದು! ಎಷ್ಟು ದೊಡ್ಡ ತ್ಯಾಗ ಮಾಡಿದ್ದಾಳೆ ಆಕೆ! ಅದಕ್ಕೆ ನನ್ನ ಹೃದಯದಲ್ಲಿ ಈ ಅರ್ಧಾಣೆ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ್ದಾಗಿದೆ.” * * * * **ಕೃತಿಕಾರರ ಪರಿಚಯ :** ‘ಗಾಂಧೀಜಿ ಜೀವನದ ನೈಜ ಸಂಗತಿಗಳು’ ಪಾಠವನ್ನು ಉಮಾಶಂಕರ ಜೋಶಿ ಅವರು ಬರೆದಿರುವ ‘ಎಲ್ಲರ ಸಂಗಾತಿ ಎಲ್ಲರ ಮಿತ್ರ’ ಪುಸ್ತಕದಿಂದ ಆರಿಸಲಾಗಿದೆ. ಈ ಪುಸ್ತಕವನ್ನು ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ ಪ್ರಕಟಿಸಿದೆ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಅರಿವೆ – ಬಟ್ಟೆ

  2. ಅರ್ಧಾಣೆ – ಒಂದು ನಾಣ್ಯದ ಅರ್ಧ ಬೆಲೆ.

  3. ಉದಾರ – ಧಾರಾಳ

  4. ಚೆಕ್ಕು – ಬ್ಯಾಂಕ್ ಹುಂಡಿ ಚೀಟಿ.

  5. ಭಗಿನಿ – ಒಡಹುಟ್ಟಿದವಳು; ಸಹೋದರಿ.

  6. ಮೌಲ್ಯ – ಬೆಲೆ; ಕಿಮ್ಮತ್ತು.

  7. ವ್ಯಸನ – ಚಿಂತೆ; ದುಃಖ.

  8. ಹೃದಯ ಕರಗಿ ನೀರಾಯಿತು – ಕರುಣೆ; ಮರುಕ ಹುಟ್ಟಿತು.

  9. ಆಣೆ – ಒಂದು ನಾಣ್ಯ

  10. ಆಗ್ರಹ – ಬಲವಂತ; ಒತ್ತಾಯ.

  11. ಗಳಿಕೆ – ಸಂಪಾದನೆ; ಆದಾಯ.

  12. ಬಂಧು – ನೆಂಟು; ಸಂಬಂಧಿಕ.

  13. ಭೂಷಣ – ಅಲಂಕಾರ

  14. ವೇಷ – ಉಡುಗೆ

  15. ಸರ್ವಸ್ವ – ಸಮಸ್ತ ಸ್ವತ್ತು; ಸಮಸ್ತ ಆಸ್ತಿ.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಬಾಪೂಜಿಯ ವೇಷಭೂಷಣ ಕಂಡು ಬಾಲಕನಿಗೆ ಏಕೆ ವ್ಯಸನವಾಯಿತು?

    Answer

    ಬಾಪೂಜಿಯವರ ಮೈಮೇಲೆ ಒಂದು ಅಂಗಿಯೂ ಇಲ್ಲದಿದ್ದುದರಿಂದ ಬಾಲಕನಿಗೆ ವ್ಯಸನವಾಯಿತು.

  2. ೨. ಬಾಲಕ ಬಾಪೂಜಿಯ ವೇಷ ಭೂಷಣ ಕಂಡು ಏನೆಂದು ಕೇಳಿದನು?

    Answer

    ಬಾಲಕನು “ಬಾಪೂಜಿ, ತಾವು ಅಂಗಿ ಏಕೆ ತೊಡುವುದಿಲ್ಲ?” ಎಂದು ಕೇಳಿದನು.

  3. ೩. ಬಾಪೂಜಿಯ ಮಾತುಗಳಿಂದ ಹುಡುಗನ ಹೃದಯ ಕರಗಿ ನೀರಾಯಿತು ಏಕೆ?

    Answer

    ಬಾಪೂಜಿಯವರು ತಾವು ತುಂಬಾ ಬಡವರು, ಅಂಗಿಗಾಗಿ ಹಣವಿಲ್ಲ ಎಂದು ಹೇಳಿದ್ದರಿಂದ ಹುಡುಗನ ಹೃದಯ ಕರಗಿ ನೀರಾಯಿತು.

  4. ೪. ಹುಡುಗ ಬಾಪೂಜಿಗೆ ಯಾವ ರೀತಿ ಸಹಾಯ ಮಾಡುವುದಾಗಿ ಹೇಳಿದನು?

    Answer

    ಹುಡುಗನು ತನ್ನ ಅಮ್ಮನಿಂದ ಬಾಪೂಜಿಗಾಗಿ ಅಂಗಿ ಹೊಲಿಸಿ ಕೊಡುವುದಾಗಿ ಹೇಳಿದನು.

  5. ೫. ಗಾಂಧೀಜಿಯವರನ್ನು ಭೇಟಿ ಮಾಡಲು ಬಂದ ಮುದುಕಿ ಹೇಗಿದ್ದಳು?

    Answer

    ಮುದುಕಿಯ ಕೂದಲೆಲ್ಲ ಬೆಳ್ಳಗಾಗಿತ್ತು, ಸೊಂಟ ಬಗ್ಗಿತ್ತು ಮತ್ತು ಚಿಂದಿ ಚಿಂದಿ ವಸ್ತ್ರ ತೊಟ್ಟಿದ್ದಳು.

  6. ೬. ಗಾಂಧೀಜಿ ಹಣವನ್ನು ಏಕೆ ಸಂಗ್ರಹಿಸುತ್ತಿದ್ದರು?

    Answer

    ಗಾಂಧೀಜಿಯವರು ಚರಕ ಸಂಘದ ಸಹಾಯಾರ್ಥವಾಗಿ ಹಣ ಸಂಗ್ರಹಿಸುತ್ತಿದ್ದರು.

  7. ೭. ಗಾಂಧೀಜಿಯವರನ್ನು ಭೇಟಿಯಾದ ಮುದುಕಿ ಏನು ಮಾಡಿದಳು?

    Answer

    ಮುದುಕಿಯು ಗಾಂಧೀಜಿಯವರ ಪಾದಗಳನ್ನು ಮುಟ್ಟಿ, ಒಂದು ಅರ್ಧಾಣೆಯನ್ನು ಅವರ ಪಾದಗಳ ಬಳಿ ಇಟ್ಟು ಹೊರಟು ಹೋದಳು.

  8. ೮. ಚರಕ ಸಂಘದ ಲೆಕ್ಕಪತ್ರಗಳನ್ನು ಯಾರು ಇಡುತ್ತಿದ್ದರು?

    Answer

    ಚರಕ ಸಂಘದ ಲೆಕ್ಕಪತ್ರಗಳನ್ನು ಸೇಠ ಜಮನಾಲಾಲ ಬಜಾಜರು ಇಡುತ್ತಿದ್ದರು.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಬಾಪೂಜಿ ಅಂಗಿ ತೊಡದಿರುವುದಕ್ಕೆ ಕಾರಣಗಳಾವುವು?

    Answer

    ಬಾಪೂಜಿಯವರು ತಾವು ತುಂಬಾ ಬಡವರೆಂದೂ, ಅಂಗಿಗಾಗಿ ಹಣವಿಲ್ಲವೆಂದೂ ಹೇಳಿದರು. ಜೊತೆಗೆ, ತಮ್ಮ ನಲವತ್ತು ಕೋಟಿ ಬಂಧು-ಭಗಿನಿಯರ ಮೈಮೇಲೆ ಅಂಗಿ ಇರುವವರೆಗೂ ತಾವೊಬ್ಬರೇ ಅಂಗಿ ತೊಡುವುದಿಲ್ಲ ಎಂದರು.

  2. ೨. ಮುದುಕಿ ನೀಡಿದ ಅರ್ಧಾಣೆ ಗಾಂಧೀಜಿಯವರಲ್ಲಿ ಯಾವ ಭಾವನೆಗಳನ್ನು ಮೂಡಿಸಿತು?

    Answer

    ಆ ಅರ್ಧಾಣೆಯು ಆ ಮುದುಕಿಯ ಇಡೀ ಜೀವಮಾನದ ಗಳಿಕೆಯಾಗಿರಬಹುದು, ಆಕೆ ತನ್ನ ಸರ್ವಸ್ವವನ್ನೇ ಕೊಟ್ಟಿದ್ದಾಳೆ ಎಂದು ಗಾಂಧೀಜಿಯವರಿಗೆ ಅನ್ನಿಸಿತು. ಅವಳ ಉದಾರತೆ ಮತ್ತು ತ್ಯಾಗದ ಬಗ್ಗೆ ಅವರಲ್ಲಿ ಅಪಾರ ಗೌರವ ಮೂಡಿತು.

ಇ) ಈ ಕೆಳಗಿನ ವಾಕ್್ಯಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. “ಮಗೂ, ನನ್ನ ಹತ್ತಿರ ಹಣ ಎಲ್ಲಿದೆ? ನಾನು ತುಂಬಾ ಬಡವ.”

    Answer

    ಬಾಪೂಜಿಯವರು ಬಾಲಕನಿಗೆ ಹೇಳಿದರು.

  2. ೨. “ಮಗೂ, ನನಗೆ ನಲವತ್ತು ಕೋಟಿ ಬಂಧು ಭಗಿನಿಯರಿದ್ದಾರೆ.”

    Answer

    ಬಾಪೂಜಿಯವರು ಬಾಲಕನಿಗೆ ಹೇಳಿದರು.

  3. ೩. “ಈ ಅರ್ಧಾಣೆಗೆ ನಿಮಗೆ ನನ್ನಲ್ಲಿ ವಿಶ್ವಾಸವಿಲ್ಲವೇ?”

    Answer

    ಸೇಠ ಜಮನಾಲಾಲ ಬಜಾಜರು ಗಾಂಧೀಜಿಯವರಿಗೆ ಹೇಳಿದರು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ಸಹಾಯಾರ್ಥ : ..........................................................................

    Model sentence

    ಸಹಾಯಾರ್ಥ: ನಮ್ಮ ಶಾಲೆಯಲ್ಲಿ ಅನಾಥಾಶ್ರಮದ ಸಹಾಯಾರ್ಥ ಹಣ ಸಂಗ್ರಹಿಸಿದೆವು.

  2. ೨. ವಿಶ್ವಾಸ : ..........................................................................

    Model sentence

    ವಿಶ್ವಾಸ: ನನಗೆ ನನ್ನ ಗೆಳೆಯನ ಮೇಲೆ ತುಂಬಾ ವಿಶ್ವಾಸ ಇದೆ.

  3. ೩. ಸರ್ವಸ್ವ : ..........................................................................

    Model sentence

    ಸರ್ವಸ್ವ: ನನ್ನ ತಂಗಿ ತನ್ನ ಸರ್ವಸ್ವವನ್ನೂ ನನಗೆ ಕೊಟ್ಟಳು.

  4. ೪. ವೇಷಭೂಷಣ : ..........................................................................

    Model sentence

    ವೇಷಭೂಷಣ: ನಮ್ಮ ಶಾಲೆಯ ನಾಟಕದಲ್ಲಿ ನಾನು ರಾಜನ ವೇಷಭೂಷಣ ಧರಿಸಿದ್ದೆ.

  5. ೫. ಹೃದಯ ಕರಗಿತು : ..........................................................................

    Model sentence

    ಹೃದಯ ಕರಗಿತು: ಬಡ ಮಗುವನ್ನು ನೋಡಿ ನನ್ನ ಹೃದಯ ಕರಗಿತು.

ಆ) ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಬಡವ x ........................

    Answer

    ಶ್ರೀಮಂತ

  2. ೨. ವಿಶ್ವಾಸ x ........................

    Answer

    ಅವಿಶ್ವಾಸ

  3. ೩. ಉದಾರ x ........................

    Answer

    ಜಿಪುಣ

  4. ೪. ವಿಚಾರ x ........................

    Answer

    ಅವಿಚಾರ

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ಅರ್ಧಾಣೆ = ........................ + ........................

    Answer

    ಅರ್ಧ + ಆಣೆ

  2. ೨. ಸಹಾಯಾರ್ಥ = ........................ + ........................

    Answer

    ಸಹಾಯ + ಅರ್ಥ

  3. ೩. ನಾನೊಬ್ಬ = ........................ + ........................

    Answer

    ನಾನು + ಒಬ್ಬ

  4. ೪. ಆಗಾಗ = ........................ + ........................

    Answer

    ಆಗ + ಆಗ

  5. ೫. ಒಂದೆರಡು = ........................ + ........................

    Answer

    ಒಂದು + ಎರಡು

ಈ) ಪ್ರಸ್ತುತ ಪಾಠದಲ್ಲಿ ಬಳಕೆಯಾಗಿರುವ ಈ ಲೇಖನ ಚಿಹ್ನೆಗಳನ್ನು ಬಳಸಿ ವಾಕ್ಯ ರಚಿಸಿರಿ.

  1. ೧. !

    Answer

    ಅಮ್ಮಾ, ನಾನು ಪರೀಕ್ಷೆಯಲ್ಲಿ ಮೊದಲಿಗ ಬಂದೆ!

  2. ೨. ?

    Answer

    ನೀನು ನಾಳೆ ಶಾಲೆಗೆ ಬರುತ್ತೀಯಾ?

  3. ೩. “......”

    Answer

    ಗೆಳೆಯ, “ನಾನು ಊಟ ಮಾಡಿದೆ” ಎಂದನು.

  4. ೪. ,

    Answer

    ನಾನು, ರಾಮು ಮತ್ತು ಶ್ಯಾಮು ಆಟವಾಡಿದೆವು.

  5. ೧. .......................................................................................................................

    Answer

    ಅಪ್ಪಾ, ನನಗೆ ಹೊಸ ಸೈಕಲ್ ಕೊಡಿಸಿ!

  6. ೨. .......................................................................................................................

    Answer

    ನೀನು ನನ್ನ ಜೊತೆ ಆಡುವೆಯಾ?

  7. ೩. .......................................................................................................................

    Answer

    ಅವನು, “ನಾನು ಬರುವೆ” ಎಂದನು.

  8. ೪. .......................................................................................................................

    Answer

    ಅವನು ಹಣ್ಣು, ತರಕಾರಿ ತಂದನು.

Interactive Lab