CRECT Education

Class 5 Kannada Lesson 19: Shravanakumara – Practice & Play

Description

Test your knowledge of the moving story of Shravanakumara with comprehension questions and a fun sound-word activity — from the KTBS Class 5 Second Language Kannada textbook.

ಗದ್ಯ · ಸಂಪಾದಿತ

ಪಠ್ಯFull text

ಕಾಡು, ಸುತ್ತಲೂ ಗಿಡಮರಬಳ್ಳಿ. ಅದರ ನಡುವೆ ಒಂದು ಪುಟ್ಟ ಕುಟೀರ. ಅಲ್ಲಿ ತಾಂಡವ ಋಷಿ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು. ಅವರಿಗೆ ಒಬ್ಬನೇ ಮಗ. ಅವನ ಹೆಸರು ಶ್ರವಣಕುಮಾರ. ಅವರಿಗೆ ಮುಪ್ಪು ಆವರಿಸಿತ್ತು. ಪುಣ್ಯ ಕ್ಷೇತ್ರಗಳಿಗೆ ಹೋಗಬೇಕು, ತೀರ್ಥ ಸ್ನಾನ ಮಾಡಬೇಕು ಎಂದು ಅವರು ಚಡಪಡಿಸುತ್ತಿದ್ದರು. ಆದರೆ ಅವರಿಗೆ ಕಣ್ಣು ಕಾಣುತ್ತಿರಲಿಲ್ಲ. ಶ್ರವಣಕುಮಾರನಿಗೆ ತಂದೆ-ತಾಯಿಗಳ ಮೇಲೆ ಅಪಾರ ಪ್ರೀತಿ. ಶ್ರವಣಕುಮಾರ ಅವರ ಆಸೆಯನ್ನು ಅರಿತನು. ಅವರಿಗೆ ಹೇಗಾದರೂ ಮಾಡಿ ತೀರ್ಥಯಾತ್ರೆ ಮಾಡಿಸಬೇಕೆಂದು ಯೋಚಿಸತೊಡಗಿದ. ಈ ಮುದುಕರನ್ನು ಕಾವಡಿಯಲ್ಲಿ ಕುಳ್ಳಿರಿಸಿ ಕರೆದೊಯ್ಯುವ ಉಪಾಯ ಹೊಳೆಯಿತು. ಉದ್ದನೆಯ ಗಟ್ಟಿ ಬಿದಿರು ತೆಗೆದುಕೊಂಡನು. ಎರಡು ಬದಿಯಲ್ಲಿ ತಕ್ಕಡಿಯಂತೆ ಬುಟ್ಟಿಗಳನ್ನು ಕಟ್ಟಿದ. ಅದೇ ಕಾವಡಿ. ಅದರಲ್ಲಿ ತಂದೆ-ತಾಯಿಗಳನ್ನು ಕೂರಿಸಿದ. ಕಾವಡಿಯನ್ನು ಹೆಗಲ ಮೇಲೆ ಹೊತ್ತು ನಿಂತ. ಅವರ ಆಸೆ ಪೂರೈಸಲು ಹೊರಟೇಬಿಟ್ಟನು ! ಮಾರ್ಗ ಮಧ್ಯದಲ್ಲಿ ಅವರಿಗೆ ಹಣ್ಣುಗಳನ್ನು ತಂದುಕೊಡುತ್ತಿದ್ದ. ಬಾಯಾರಿದರೆ ನೀರನ್ನು ತರುತ್ತಿದ್ದ, ಆಯಾಸವರಿತು ವಿಶ್ರಮಿಸಲು ವ್ಯವಸ್ಥೆ ಮಾಡುತ್ತಿದ್ದನು. ಹೀಗೆ ತಂದೆ ತಾಯಿಯರನ್ನು ಹೊತ್ತು ನಡೆಯುತ್ತಲೇ ಇದ್ದ. ಅನೇಕ ಕಾಡು, ಗುಡ್ಡ, ನದಿಗಳನ್ನು ದಾಟುತ್ತ ಪುಣ್ಯ ಕ್ಷೇತ್ರಗಳಿಗೆ ಕರೆದೊಯ್ದನು. ಅವನ ಹೆತ್ತವರು ಇಂತಹ ಮಗನನ್ನು ಪಡೆದುದಕ್ಕೆ ಅಭಿಮಾನ ಪಡುತ್ತಿದ್ದರು. ಒಂದು ದಿನ ದಟ್ಟ ಕಾಡಿನಲ್ಲಿ ನಡೆಯುತ್ತಿದ್ದರು. "ಮಗು, ಹತ್ತಿರದಲ್ಲಿ ಎಲ್ಲಿಯಾದರೂ ನೀರಿದೆಯಾ? ನೋಡು" ಎಂದು ತಂದೆ ಕೇಳಿದರು. ಶ್ರವಣಕುಮಾರ ಕಾವಡಿಯನ್ನು ಇಳಿಸಿದನು. ವಿಶ್ರಮಿಸಲು ಕೇಳಿಕೊಂಡನು. ಕೈಯಲ್ಲಿ ತತ್ರಾಣಿಯನ್ನು ಹಿಡಿದು ನೀರನ್ನು ಅರಸುತ್ತ ಹೊರಟನು. ದೂರದಲ್ಲಿ ಸರೋವರ ಕಾಣಿಸಿತು. ಅತ್ತ ಕಡೆಗೆ ದಾಪುಗಾಲು ಹಾಕಿದನು. ತತ್ರಾಣಿಯಲ್ಲಿ ನೀರು ತುಂಬಲು ಮುಂದಾದನು. ನೀರು "ಬುಳು ಬುಳು ಬುಳು" ಶಬ್ದ ಮಾಡುತ್ತ ತುಂಬ ತೊಡಗಿತು. ಇತ್ತ ಅಯೋಧ್ಯೆಯ ಮಹಾರಾಜ ದಶರಥ ಕಾಡಿಗೆ ಬೇಟೆಗಾಗಿ ಬಂದಿದ್ದನು. ಪ್ರಶಾಂತ ಪರಿಸರದಲ್ಲಿ 'ಬುಳು ಬುಳು' ಶಬ್ದ ಕೇಳಿದ. ದಿಗ್ಗನೆ ಎದ್ದು ನಿಂತನು. ಯಾವುದೋ ಕಾಡುಪ್ರಾಣಿ ನೀರು ಕುಡಿಯುವ ಶಬ್ದವೆಂದು ಭಾವಿಸಿದನು. ಕೂಡಲೇ ಶಬ್ದವೇಧಿ ಬಾಣವನ್ನು ಬಿಟ್ಟನು. ತಕ್ಷಣವೇ 'ಅಯ್ಯೋ! ಅಮ್ಮಾ ! ನಾನು ಸತ್ತೆ' ಎನ್ನುವ ಚೀತ್ಕಾರ ಕೇಳಿ ಬಂತು. ಏನೋ ಅನರ್ಥವಾಯಿತು ಎಂದು ದಶರಥ ರಾಜನು ಗಾಬರಿಗೊಂಡನು. ಬಾಣ ಬಿಟ್ಟ ದಿಕ್ಕಿನ ಕಡೆಗೆ ಓಡಿದ. ಅಲ್ಲಿ ಮುನಿಕುಮಾರನೊಬ್ಬ ರಕ್ತದ ಮಡುವಿನಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದನು. ಬಾಣ ಮುನಿಕುಮಾರನ ಎದೆಯನ್ನು ಸೀಳಿತ್ತು. ಅದನ್ನು ಕಂಡು ರಾಜನಿಗೆ ದಿಕ್ಕೇ ತೋಚದಂತಾಯಿತು. ಮಹಾರಾಜನು ಆ ಮುನಿಕುಮಾರನ ಬಳಿಗೆ ಓಡಿ ಬಂದನು. ತಾನು ಕಾಡು ಪ್ರಾಣಿ ಎಂದು ಭಾವಿಸಿ ಬಾಣ ಬಿಟ್ಟದ್ದು ತಪ್ಪಾಯಿತು. ಕ್ಷಮಿಸಬೇಕೆಂದು ಗೋಗರೆದ. ಆಗ ಶ್ರವಣಕುಮಾರ "ನನ್ನ ಮುಪ್ಪಿನ ತಂದೆ-ತಾಯಿಗಳಿಗೆ ಇನ್ನಾರು ಗತಿ? ಅವರ ತೀರ್ಥಯಾತ್ರೆಯನ್ನು ಇನ್ನಾರು ನಡೆಸಿಕೊಡುವರು? ಯಾವ ತಪ್ಪಿಗೆ ನನಗೆ ಶಿಕ್ಷೆ?" ಎಂದು ರೋದಿಸಿದನು. ದಶರಥನಿಗೆ ತನ್ನ ತಪ್ಪಿನ ಅರಿವಾಯಿತು. ತನ್ನಿಂದಾಗಿ ವಯಸ್ಸಾದ ಜೀವಿಗಳಿಗೆ ಕಷ್ಟ ಬಂತಲ್ಲ ಎಂದು ದುಃಖಿಸಿದನು. ಆಗ ಶ್ರವಣಕುಮಾರನು ದಶರಥ ಮಹಾರಾಜನನ್ನು ಸಮಾಧಾನ ಪಡಿಸಿ, ತನ್ನ ತಂದೆ ತಾಯಿಗಳ ಪರಿಸ್ಥಿತಿಯನ್ನು ವಿವರಿಸಿದನು. ಮಹಾರಾಜನು ಅವರ ಆಸೆಯನ್ನು ಪೂರೈಸುವುದಾಗಿ ಭರವಸೆ ನೀಡಿದನು. ತನ್ನ ಹೆತ್ತವರ ಆಸೆಯನ್ನು ಪೂರೈಸುವಂತೆ ಹೇಳುತ್ತಾ ಆ ತರುಣ ಪ್ರಾಣಬಿಟ್ಟನು. * * * *

ಪದಗಳ ಅರ್ಥword meanings

KannadaPronunciationMeaning
**ಅನರ್ಥ**ಅರ್ಥವಲ್ಲದ; ಕೇಡು
**ಕಾವಡಿ**ಅಡ್ಡೆ; ಹೆಗಲಮೇಲೆ ಹೊತ್ತು ತರುವ ಬಿದಿರಿನ ದಬ್ಬೆ
**ಕುಟೀರ**ಗುಡಿಸಲು **ಗಾಬರಿ** - ಹೆದರಿಕೆ; ಭಯ
**ಗೋಗರೆ**ದೈನ್ಯದಿಂದ ಬೇಡಿಕೊಳ್ಳು
**ತತ್ರಾಣಿ**ನೀರು ಕುಡಿಯಲು ಬಳಸುವ ಚಪ್ಪಟೆಯಾದ ಮಣ್ಣಿನ ಪಾತ್ರೆ
**ತೀರ್ಥಯಾತ್ರೆ**ಪುಣ್ಯಕ್ಷೇತ್ರಗಳಿಗೆ ಹೋಗಿಬರುವುದು
**ದಾಪುಗಾಲು**ದೊಡ್ಡ ಹೆಜ್ಜೆ
**ಮಡು**ನದಿ; ಹೊಳೆ
**ರೋಧಿಸು**ಅಳು; ಗೋಳಾಡು
**ವೇಧಿ**ತಿಳಿದವನು; ಜ್ಞಾನಿ
**ಶಬ್ದವೇಧಿ**ಶಬ್ದಗ್ರಹಣ ಮಾತ್ರದಿಂದ ಗುರಿಹಿಡಿದು ಬಾಣ ಪ್ರಯೋಗಿಸುವ ವಿದ್ಯೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಶ್ರವಣಕುಮಾರನ ತಂದೆಯ ಹೆಸರು ಏನು?

    Answer

    ಶ್ರವಣಕುಮಾರನ ತಂದೆಯ ಹೆಸರು ತಾಂಡವ ಋಷಿ.

  2. ೨. ಶ್ರವಣಕುಮಾರನ ತಂದೆತಾಯಿ ಮುಪ್ಪಿನ ಕಾಲದಲ್ಲಿ ಯಾವುದಕ್ಕೆ ಚಡಪಡಿಸಿದರು?

    Answer

    ಶ್ರವಣಕುಮಾರನ ತಂದೆತಾಯಿ ಮುಪ್ಪಿನ ಕಾಲದಲ್ಲಿ ಪುಣ್ಯಕ್ಷೇತ್ರಗಳಿಗೆ ಹೋಗಿ ತೀರ್ಥಸ್ನಾನ ಮಾಡಬೇಕೆಂದು ಚಡಪಡಿಸಿದರು.

  3. ೩. ದಶರಥನು ಎಲ್ಲಿ ನೆಲೆಸಿದ್ದನು?

    Answer

    ದಶರಥನು ಅಯೋಧ್ಯೆಯಲ್ಲಿ ನೆಲೆಸಿದ್ದನು.

  4. ೪. ದಶರಥನು ಶ್ರವಣಕುಮಾರನ ಬಳಿ ಏನೆಂದು ಗೋಗರೆದನು?

    Answer

    ದಶರಥನು ಶ್ರವಣಕುಮಾರನ ಬಳಿ ತಾನು ಕಾಡುಪ್ರಾಣಿ ಎಂದು ಭಾವಿಸಿ ಬಾಣ ಬಿಟ್ಟದ್ದು ತಪ್ಪಾಯಿತು, ಕ್ಷಮಿಸಬೇಕೆಂದು ಗೋಗರೆದನು.

  5. ೫. ದಶರಥನು ಶ್ರವಣಕುಮಾರನಿಗೆ ಏನೆಂದು ಭರವಸೆ ನೀಡಿದನು?

    Answer

    ದಶರಥನು ಶ್ರವಣಕುಮಾರನಿಗೆ ಅವನ ಹೆತ್ತವರ ಆಸೆಯನ್ನು ಪೂರೈಸುವುದಾಗಿ ಭರವಸೆ ನೀಡಿದನು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಶ್ರವಣಕುಮಾರನು ತನ್ನ ತಂದೆ ತಾಯಿಗಳನ್ನು ತೀರ್ಥಯಾತ್ರೆಗೆ ಹೇಗೆ ಕರೆದೊಯ್ದನು?

    Answer

    ಶ್ರವಣಕುಮಾರನು ಗಟ್ಟಿ ಬಿದಿರಿನ ಎರಡೂ ಬದಿಗೆ ಬುಟ್ಟಿಗಳನ್ನು ಕಟ್ಟಿ ಕಾವಡಿ ಮಾಡಿದನು. ಅದರಲ್ಲಿ ತಂದೆತಾಯಿಗಳನ್ನು ಕೂರಿಸಿ, ಕಾವಡಿಯನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಕರೆದೊಯ್ದನು.

  2. ೨. ತೀರ್ಥಯಾತ್ರೆಯ ಸಮಯದಲ್ಲಿ ಶ್ರವಣಕುಮಾರನು ತನ್ನ ತಂದೆ ತಾಯಿಗಳನ್ನು ಹೇಗೆ ಉಪಚರಿಸಿದನು?

    Answer

    ತೀರ್ಥಯಾತ್ರೆಯ ಸಮಯದಲ್ಲಿ ಶ್ರವಣಕುಮಾರನು ತನ್ನ ತಂದೆತಾಯಿಗಳಿಗೆ ಹಣ್ಣುಗಳನ್ನು ತಂದುಕೊಡುತ್ತಿದ್ದ, ಬಾಯಾರಿದಾಗ ನೀರು ತರುತ್ತಿದ್ದ ಮತ್ತು ಆಯಾಸವಾದಾಗ ವಿಶ್ರಮಿಸಲು ವ್ಯವಸ್ಥೆ ಮಾಡುತ್ತಿದ್ದನು.

  3. ೩. ಶ್ರವಣಕುಮಾರನು ದಶರಥನ ಬಳಿ ಏನೆಂದು ರೋದಿಸಿದನು?

    Answer

    ಶ್ರವಣಕುಮಾರನು ದಶರಥನ ಬಳಿ, "ನನ್ನ ಮುಪ್ಪಿನ ತಂದೆ-ತಾಯಿಗಳಿಗೆ ಇನ್ನಾರು ಗತಿ? ಅವರ ತೀರ್ಥಯಾತ್ರೆಯನ್ನು ಇನ್ನಾರು ನಡೆಸಿಕೊಡುವರು? ಯಾವ ತಪ್ಪಿಗೆ ನನಗೆ ಶಿಕ್ಷೆ?" ಎಂದು ರೋದಿಸಿದನು.

  4. ೪. ಶ್ರವಣಕುಮಾರನು ದಶರಥನ ಬಾಣಕ್ಕೆ ಹೇಗೆ ಬಲಿಯಾದನು?

    Answer

    ದಶರಥನು ಸರೋವರದಲ್ಲಿ ನೀರು ತುಂಬುವ ಶಬ್ದವನ್ನು ಕಾಡುಪ್ರಾಣಿ ಎಂದು ಭಾವಿಸಿ ಶಬ್ದವೇಧಿ ಬಾಣ ಬಿಟ್ಟನು. ಆ ಬಾಣವು ಶ್ರವಣಕುಮಾರನ ಎದೆಯನ್ನು ಸೀಳಿತು. ಹೀಗೆ ಶ್ರವಣಕುಮಾರನು ದಶರಥನ ಬಾಣಕ್ಕೆ ಬಲಿಯಾದನು.

ಇ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. "ಮಗು, ಹತ್ತಿರದಲ್ಲಿ ಎಲ್ಲಿಯಾದರೂ ನೀರಿದೆಯಾ? ನೋಡು."

    Answer

    ಈ ಮಾತನ್ನು ಶ್ರವಣಕುಮಾರನ ತಂದೆ ಶ್ರವಣಕುಮಾರನಿಗೆ ಹೇಳಿದರು.

  2. ೨. "ಅಯ್ಯೋ! ಅಮ್ಮಾ! ನಾನು ಸತ್ತೆ"

    Answer

    ಈ ಮಾತನ್ನು ಶ್ರವಣಕುಮಾರನು (ತನ್ನಷ್ಟಕ್ಕೆ) ಹೇಳಿಕೊಂಡನು. (ಅಥವಾ ದಶರಥನಿಗೆ ಕೇಳಿಸಿತು)

  3. ೩. "ನನ್ನ ಮುಪ್ಪಿನ ತಂದೆ-ತಾಯಿಗಳಿಗೆ ಇನ್ನಾರು ಗತಿ?"

    Answer

    ಈ ಮಾತನ್ನು ಶ್ರವಣಕುಮಾರನು ದಶರಥನಿಗೆ ಹೇಳಿದನು.

ಈ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ಶ್ರವಣಕುಮಾರನ ತಂದೆ ತಾಯಿಗಳು __________________ ಆಗಿದ್ದರು.

    Answer

    ಶ್ರವಣಕುಮಾರನ ತಂದೆ ತಾಯಿಗಳು ಈ) ಕುರುಡರು ಆಗಿದ್ದರು.

  2. ಅ) ಕುಂಟರು

  3. ಆ) ಕಿವುಡರು

  4. ಇ) ಮೂಗರು

  5. ಈ) ಕುರುಡರು

  6. ೨. ದಶರಥನು __________________ ವಿದ್ಯೆಯಲ್ಲಿ ಪರಿಣತನಾಗಿದ್ದನು.

    Answer

    ದಶರಥನು ಆ) ಶಬ್ದವೇಧಿ ವಿದ್ಯೆಯಲ್ಲಿ ಪರಿಣತನಾಗಿದ್ದನು.

  7. ಅ) ಜಲಸ್ತಂಭನ

  8. ಆ) ಶಬ್ದವೇಧಿ

  9. ಇ) ದೃಷ್ಟಿಯುದ್ಧ

  10. ಈ) ಮಲ್ಲಯುದ್ಧ

  11. ೩. ಶ್ರವಣಕುಮಾರನು ತನ್ನ ತಂದೆ ತಾಯಿಗಳನ್ನು __________________ ಕರೆದೊಯ್ದನು.

    Answer

    ಶ್ರವಣಕುಮಾರನು ತನ್ನ ತಂದೆ ತಾಯಿಗಳನ್ನು ಆ) ತೀರ್ಥಯಾತ್ರೆಗೆ ಕರೆದೊಯ್ದನು.

  12. ಅ) ಕಾಡಿಗೆ

  13. ಆ) ತೀರ್ಥಯಾತ್ರೆಗೆ

  14. ಇ) ಬೇಟೆಗೆ

  15. ಈ) ರಾಜನಲ್ಲಿಗೆ

  16. ೪. ಶ್ರವಣಕುಮಾರನು ತಂದೆ ತಾಯಿಗಳನ್ನು ಪುಣ್ಯಕ್ಷೇತ್ರಗಳಿಗೆ __________________ ಕರೆದೊಯ್ದನು.

    Answer

    ಶ್ರವಣಕುಮಾರನು ತಂದೆ ತಾಯಿಗಳನ್ನು ಪುಣ್ಯಕ್ಷೇತ್ರಗಳಿಗೆ ಅ) ಹೆಗಲಲ್ಲಿ ಹೊತ್ತು ಕರೆದೊಯ್ದನು.

  17. ಅ) ಹೆಗಲಲ್ಲಿ ಹೊತ್ತು

  18. ಆ) ನಡೆಸಿಕೊಂಡು

  19. ಇ) ರಥದಲ್ಲಿ

  20. ಈ) ದೋಣಿಯಲ್ಲಿ

III. ಭಾಷಾಭ್ಯಾಸ :

ಅ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ಚಡಪಡಿಸು :...................................................................................

    Model sentence

    ಚಡಪಡಿಸು: ಪರೀಕ್ಷೆಯ ಫಲಿತಾಂಶಕ್ಕಾಗಿ ನಾನು ಚಡಪಡಿಸುತ್ತಿದ್ದೆ.

  2. ೨. ಅಭಿಮಾನ :...................................................................................

    Model sentence

    ಅಭಿಮಾನ: ನಮ್ಮ ಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಗೆದ್ದಿದ್ದಕ್ಕೆ ನನಗೆ ಅಭಿಮಾನವಾಯಿತು.

  3. ೩. ರೋದಿಸು :...................................................................................

    Model sentence

    ರೋದಿಸು: ಆಟವಾಡುವಾಗ ಕಾಲಿಗೆ ಪೆಟ್ಟಾಯಿತು, ಅಣ್ಣ ರೋದಿಸತೊಡಗಿದ.

  4. ೪. ಭರವಸೆ :...................................................................................

    Model sentence

    ಭರವಸೆ: ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ಅಪ್ಪ ನನಗೆ ಭರವಸೆ ನೀಡಿದರು.

  5. ೫. ಭಾವಿಸು :...................................................................................

    Model sentence

    ಭಾವಿಸು: ಮೋಡ ಕಂಡು ಮಳೆ ಬರುತ್ತದೆ ಎಂದು ನಾನು ಭಾವಿಸಿದೆ.

ಆ) ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಸಮಾಧಾನ x .......................

    Answer

    ಸಮಾಧಾನ x ಅಸಮಾಧಾನ

  2. ೨. ಆಸೆ x .......................

    Answer

    ಆಸೆ x ನಿರಾಸೆ

  3. ೩. ಉಪಾಯ x .......................

    Answer

    ಉಪಾಯ x ನಿರುಪಾಯ

  4. ೪. ಅಭಿಮಾನ x .......................

    Answer

    ಅಭಿಮಾನ x ಅವಮಾನ

  5. ೫. ತಪ್ಪು x .......................

    Answer

    ತಪ್ಪು x ಒಪ್ಪು

  6. ೬. ಅನರ್ಥ x .......................

    Answer

    ಅನರ್ಥ x ಅರ್ಥ

  7. ೭. ಪುಣ್ಯ x .......................

    Answer

    ಪುಣ್ಯ x ಪಾಪ

  8. ೮. ಶಬ್ದ x .......................

    Answer

    ಶಬ್ದ x ನಿಶ್ಶಬ್ದ

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ಆಸೆಯನ್ನು = ....................... + .......................

    Answer

    ಆಸೆಯನ್ನು = ಆಸೆ + ಎನ್ನು

  2. ೨. ಆಯಾಸವರಿತು = ....................... + .......................

    Answer

    ಆಯಾಸವರಿತು = ಆಯಾಸ + ಅರಿತು

  3. ೩. ಕರೆದೊಯ್ದನು = ....................... + .......................

    Answer

    ಕರೆದೊಯ್ದನು = ಕರೆದು + ಒಯ್ದನು

  4. ೪. ದಾಪುಗಾಲು = ....................... + .......................

    Answer

    ದಾಪುಗಾಲು = ದಾಪು + ಗಾಲು

ಈ) ಈ ಕೆಳಗಿನ ಪದಗಳನ್ನು ಗಮನಿಸಿರಿ.

  1. ಬುಳುಬುಳು, ದಿಗ್ಗನೆ, ವಿಲವಿಲನೆ.

  2. ಈ ಪದಗಳಿಗೆ ಅರ್ಥವಿರುವುದಿಲ್ಲ. ಹೀಗೆ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕೇಳಿದಂತೆ ಪುನಃ ಅನುಕರಣ ಮಾಡಿ ಹೇಳುವ ಶಬ್ದಗಳನ್ನು ಅನುಕರಣಾವ್ಯಯಗಳು ಎಂದು ಕರೆಯುತ್ತಾರೆ. ಈ ರೀತಿಯ ಹಲವು ಪದಗಳನ್ನು ಪಟ್ಟಿಮಾಡಿರಿ.

    Answer

    ಕೆಲವು ಉದಾಹರಣೆಗಳು: ಧೊಪ್ಪನೆ, ಬಡಬಡ, ಕುಪ್ಪಳಿಸು, ಢಣಢಣ, ಕಲಕಲ, ಗುಡುಗುಡು, ಪಟಪಟ, ಜುಳುಜುಳು.

Interactive Lab

**ಅನರ್ಥ**ಅರ್ಥವಲ್ಲದ; ಕೇಡು
**ಕಾವಡಿ**ಅಡ್ಡೆ; ಹೆಗಲಮೇಲೆ ಹೊತ್ತು ತರುವ ಬಿದಿರಿನ ದಬ್ಬೆ
**ಕುಟೀರ**ಗುಡಿಸಲು **ಗಾಬರಿ** - ಹೆದರಿಕೆ; ಭಯ
**ಗೋಗರೆ**ದೈನ್ಯದಿಂದ ಬೇಡಿಕೊಳ್ಳು
**ತತ್ರಾಣಿ**ನೀರು ಕುಡಿಯಲು ಬಳಸುವ ಚಪ್ಪಟೆಯಾದ ಮಣ್ಣಿನ ಪಾತ್ರೆ
**ತೀರ್ಥಯಾತ್ರೆ**ಪುಣ್ಯಕ್ಷೇತ್ರಗಳಿಗೆ ಹೋಗಿಬರುವುದು
**ದಾಪುಗಾಲು**ದೊಡ್ಡ ಹೆಜ್ಜೆ
**ಮಡು**ನದಿ; ಹೊಳೆ
**ರೋಧಿಸು**ಅಳು; ಗೋಳಾಡು
**ವೇಧಿ**ತಿಳಿದವನು; ಜ್ಞಾನಿ
**ಶಬ್ದವೇಧಿ**ಶಬ್ದಗ್ರಹಣ ಮಾತ್ರದಿಂದ ಗುರಿಹಿಡಿದು ಬಾಣ ಪ್ರಯೋಗಿಸುವ ವಿದ್ಯೆ