CRECT Education

Class 5 Kannada Lesson 20: Slaying of Bakasura | KTBS Second Language – Learn the Story

Description

Learn the story of Bhima defeating Bakasura, from the Class 5 Kannada Second Language textbook.

ಗದ್ಯ (prose) · ಸಂಪಾದಿತ (Edited/Compiled)

ಪಠ್ಯFull text

ಪಾಂಡವರು ಅರಗಿನ ಅರಮನೆಯ ಬೆಂಕಿಯಿಂದ ಪಾರಾದರು. ಏಕಚಕ್ರ ಎಂಬ ಊರಿಗೆ ಬಂದರು. ಅದೊಂದು ಅಗ್ರಹಾರ. ಅಲ್ಲಿ ಬ್ರಾಹ್ಮಣನೊಬ್ಬನ ಮನೆಯ ಪಕ್ಕದಲ್ಲಿ ವಾಸಿಸತೊಡಗಿದರು. ಒಂದು ದಿನ ಆ ಬ್ರಾಹ್ಮಣರ ಮನೆಯಿಂದ ಜೋರಾಗಿ ಅಳುವ ಧ್ವನಿ ಕೇಳಿಸಿತು. ಕುಂತಿ ಏನೆಂದು ವಿಚಾರಿಸಲು ಹೋದಳು. ಆ ಊರಿನ ಸಮೀಪದ ಬೆಟ್ಟದಲ್ಲಿ ಬಕಾಸುರನೆಂಬ ರಾಕ್ಷಸನು ವಾಸವಾಗಿದ್ದನು. ಅವನಿಗೆ ಹಸಿವಾದಾಗ ಊರಿನೊಳಗೆ ನುಗ್ಗಿ ಸಿಕ್ಕ ಸಿಕ್ಕ ಜನರನ್ನು ಕೊಂದು ತಿನ್ನುತ್ತಿದ್ದನು. ಅವರು ಸದಾ ಭಯದ ನೆರಳಿನಲ್ಲಿ ಬದುಕುತ್ತಿದ್ದರು. ಈ ಕಷ್ಟದಿಂದ ಪಾರಾಗಲು ಊರಿನ ಜನರು ಆ ರಾಕ್ಷಸನೊಂದಿಗೆ ಒಪ್ಪಂದವನ್ನು ಮಾಡಿಕೊಂಡರು. ದಿನ ದಿನವೂ ಸರದಿಯಂತೆ ಒಬ್ಬರ ಮನೆಯಿಂದ ಒಂದು ಬಂಡಿ ಅನ್ನ, ಎರಡು ಬಲಿಷ್ಠ ಹೋರಿಗಳು ಮತ್ತು ಒಬ್ಬ ಮನುಷ್ಯನನ್ನು ಒಪ್ಪಿಸಬೇಕಿತ್ತು. ಈಗ ಆ ಬ್ರಾಹ್ಮಣನ ಮನೆಯ ಸರದಿಯಿತ್ತು. ಅವರಿಗೆ ಒಬ್ಬನೇ ಮಗನು. ಅವನು ರಾಕ್ಷಸನ ಆಹಾರವಾಗಬೇಕಲ್ಲಾ ಎಂದು ದುಃಖಿಸುತ್ತಿದ್ದರು. ಆಗ ಕುಂತಿ ಅವರಿಗೆ ಸಮಾಧಾನ ಹೇಳಿದಳು. ಅವರ ಮಗನ ಬದಲು ತನ್ನ ಐವರು ಮಕ್ಕಳಲ್ಲಿ ಒಬ್ಬನನ್ನು ಕಳುಹಿಸಿ ಕೊಡುವುದಾಗಿ ಭರವಸೆ ನೀಡಿದಳು. ಇತರೆ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಿದಳು. ಕುಂತಿ ಮನೆಗೆ ಬಂದಳು. ಭೀಮನಿಗೆ ಎಲ್ಲಾ ವಿಷಯ ತಿಳಿಸಿದಳು. ನಾಳೆ ನಿನಗೆ ಮೃಷ್ಟಾನ್ನ ಭೋಜನ; ಹೊಟ್ಟೆ ತುಂಬ ಊಟ ಮಾಡಬಹುದೆಂದಳು. ಮರುದಿನ ಭೀಮ ನಸುಕಿನಲ್ಲಿಯೇ ಎದ್ದನು. ಬೇಗ ಬೇಗ ಸ್ನಾನಾದಿಗಳನ್ನು ಮಾಡಿ ವೀರಗಚ್ಚೆ ಹಾಕಿ ಸಿದ್ಧನಾದನು. ಬಂಡಿಯಲ್ಲಿ ಬಗೆಬಗೆಯ ಆಹಾರವನ್ನು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ತುಂಬಿ ಇಡಲಾಗಿತ್ತು. ಹಾಲು, ಮೊಸರು, ತುಪ್ಪದ ಗಡಿಗೆಗಳನ್ನು ಒಪ್ಪವಾಗಿ ಜೋಡಿಸಿದ್ದರು. ತಾಯಿ ಕುಂತಿಗೆ ನಮಸ್ಕರಿಸಿ ಭೀಮ ಬಂಡಿಯನ್ನು ಏರಿದನು. ಇನ್ನೊಬ್ಬರಿಗಾಗಿ ತನ್ನ ಪ್ರಾಣ ಕೊಡಲು ಭೀಮನು ಸಿದ್ಧನಾದನು. ಈ ತ್ಯಾಗಿಯನ್ನು ಊರಿನ ಜನರು ಅಚ್ಚರಿಯಿಂದ ನೋಡುತ್ತಿದ್ದರು. ಆದರೆ ಭೀಮ ಯಾವ ಭಯವೂ ಇಲ್ಲದೆ ನಗು ನಗುತ್ತ ನಾನು ಹೋಗಿ ಬರುವೆ. ನೀವು ಹೊರಡಿ ಎಂದು ಊರ ಜನರಿಗೆ ಸಮಾಧಾನ ಹೇಳಿದ. ಬಂಡಿಯನ್ನು ರಾಕ್ಷಸನಿದ್ದ ಕಡೆಗೆ ಓಡಿಸಿದ. ಬಂಡಿ ಊರಿನಿಂದ ದೂರ ಬಂದಿತು. ಅಡುಗೆಯ ಸುವಾಸನೆ ಭೀಮನ ಹಸಿವನ್ನು ಕೆರಳಿಸಿತು. ಹೋರಿಗಳನ್ನು ನಿಧಾನವಾಗಿ ಹೋಗಲು ಬಿಟ್ಟನು. ಒಂದೊಂದಾಗಿ ಭಕ್ಷ್ಯಗಳನ್ನು ಸವಿಯತೊಡಗಿದ. ದೊಡ್ಡ ದೊಡ್ಡ ತುತ್ತುಗಳನ್ನು ಮಾಡುತ್ತ ಚಂಡಿನಂತೆ ಹಾರಿಸುತ್ತ ಮೋಜಿನಿಂದ ಊಟ ಮಾಡಲು ತೊಡಗಿದ. ಮಧ್ಯ ಮಧ್ಯದಲ್ಲಿ ಹಾಲು ತುಪ್ಪದ ಗಡಿಗೆಗಳನ್ನು ಎತ್ತಿ ಎತ್ತಿ ಕುಡಿದನು. ಮುಕ್ಕಾಲು ಪಾಲು ಬಂಡಿಯ ಅನ್ನವನ್ನು ಭೀಮನೇ ಮುಗಿಸಿದನು. ಹೋರಿಗಳು ಬಂಡಿಯನ್ನು ಎಳೆಯುತ್ತಾ ಎಳೆಯುತ್ತಾ ರಾಕ್ಷಸನಿರುವ ಬೆಟ್ಟದ ಬುಡಕ್ಕೆ ಬಂದವು. ದಿನವೂ ಬೇಗ ಬರುವ ಬಂಡಿ ಇಂದು ತಡವಾಗಿ ಬಂದುದನ್ನು ಕಂಡು ರಾಕ್ಷಸನಿಗೆ ಕೋಪ ನೆತ್ತಿಗೇರಿತ್ತು. ಬಂಡಿಯನ್ನು ಕಂಡ ಕೂಡಲೇ ಬೆಟ್ಟದ ಮೇಲಿಂದ ದಡದಡನೆ ಕೆಳಗಿಳಿದು ಬಂದ. ಅವನನ್ನು ಕಂಡ ಭೀಮ ಅನ್ನ ಮೆತ್ತಿದ ಕೈಯನ್ನು ನೆಕ್ಕುತ್ತ, “ಎಲವೋ ಕುನ್ನಿ, ಕೂಳಿದೆ, ತಿನ್ನು ಬಾ” ಎಂದು ಕರೆದನು. ಇಲ್ಲಿಯವರೆಗೆ ಜನ ತನ್ನನ್ನು ಕಂಡ ಕೂಡಲೇ ಗಡಗಡ ನಡುಗುತ್ತಿದ್ದರು. ಆದರೆ ಇವನು ತಾನು ತಿಂದು ಮಿಕ್ಕಿದ್ದನ್ನು ತಿನ್ನು ಬಾ ಎಂದು ಏಕವಚನದಲ್ಲಿ ಕರೆದುದಕ್ಕೆ ಬಹಳ ಸಿಟ್ಟು ಬಂತು. ಮೊದಲು ಇವನನ್ನು ಮುಗಿಸಿ, ಅನ್ನ - ಹೋರಿಗಳನ್ನು ತಿನ್ನುವೆ. ನಂತರ ಊರಿನ ಜನರ ಪ್ರಾಣವನ್ನು ಹಿಂಡುವೆ ಎಂದು ಮುನ್ನಡೆದನು. ಆತ್ತ ಭೀಮ ರಾಕ್ಷಸನಿಗೆ ಸಿಟ್ಟು ತರಿಸಲು ಅನ್ನದ ದೊಡ್ಡ ದೊಡ್ಡ ತುತ್ತನ್ನು ಹಾರಿಸುತ್ತಾ ಬಾಯಲ್ಲಿ ಹಿಡಿಯುತ್ತಿದ್ದನು. ರಾಕ್ಷಸನನ್ನು ನೋಡಿ ಭಕ್ಷ್ಯಗಳನ್ನು ತೋರಿಸಿ ಅಣಕಿಸ ತೊಡಗಿದನು. ಬಕಾಸುರ ಕೋಪದಿಂದ ಎರಡು ಕೈ ಮುಷ್ಟಿಕಟ್ಟಿ, ಭೀಮನ ಬೆನ್ನಿಗೆ ಗುದ್ದನ್ನು ಕೊಟ್ಟನು. ಭೀಮ ಆ ಏಟಿಗೆ ನಗುತ್ತಾ “ಇಷ್ಟೇನಾ ನಿನ್ನ ಶಕ್ತಿ?” ಎಂದು ಹಂಗಿಸಿದನು. ಬಕಾಸುರನಿಗೆ ಎಲ್ಲಿಲ್ಲದ ಕೋಪ ಬಂತು. ಭೀಮನ ಮೇಲೆ ಏರಿ ಬಂದನು. ಒಬ್ಬರನ್ನೊಬ್ಬರು ಗುದ್ದಿದರು. ಬೆಟ್ಟದ ಬಂಡೆಗಲ್ಲುಗಳನ್ನು ಎತ್ತಿ ಬಿಸಾಡಿದರು. ಮರಗಳನ್ನು ಬೇರು ಸಹಿತ ಕಿತ್ತು ಒಬ್ಬರ ಮೇಲೊಬ್ಬರು ಎಸೆದರು. ಕೊನೆಗೆ ಭೀಮ ಬಕಾಸುರನ ಮುಖಕ್ಕೆ ಏಟನ್ನು ಕೊಟ್ಟನು. ಬಕಾಸುರ ರಕ್ತವನ್ನು ಕಾರುತ್ತ ಸತ್ತುಬಿದ್ದನು. ಆಗಲೆ ಸಂಜೆಯಾಗಿತ್ತು. ಭೀಮ ಬಕಾಸುರನ ಹೆಣದೊಂದಿಗೆ ಊರಿಗೆ ಬಂದನು. ಊರ ಮುಂದೆ ಬಂಡಿಯನ್ನು ನಿಲ್ಲಿಸಿ, ಮನೆಗೆ ಹೋಗಿ ಹಾಯಾಗಿ ನಿದ್ರಿಸಿದನು. ಮರುದಿನ ಬಂಡಿಯಲ್ಲಿರುವ ರಾಕ್ಷಸನನ್ನು ಕಂಡ ಜನ ಹೆದರಿದರು. ಆದರೆ ಸತ್ತಿರುವುದನ್ನು ಕಂಡು ಸಂತಸಪಟ್ಟರು. ಭೀಮನ ಧೈರ್ಯವನ್ನು ಮೆಚ್ಚಿ ಕೊಂಡಾಡಿದರು.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಅರಗು – ಕರಗುವ ಒಂದು ಬಗೆಯ ದ್ರವ್ಯ

  2. ಒಪ್ಪಂದ – ಕರಾರು

  3. ಕುನ್ನಿ – ನಾಯಿಮರಿ

  4. ನಸುಕು – ಬೆಳಗಿನ ಜಾವ

  5. ಬಂಡಿ – ಗಾಡಿ; ಚಕ್ಕಡಿ

  6. ಭೋಜನ – ಊಟ

  7. ಮಿಕ್ಕು – ಮೀರು; ಉಳಿದ

  8. ವಧೆ – ಸಂಹರಿಸು; ಕೊಲ್ಲು

  9. ಸರದಿ – ಪಾಳಿ; ಅನುಕ್ರಮ

  10. ಹಿಂಡು – ಪೀಡಿಸು; ತೊಂದರೆ ಕೊಡು

  11. ಅಗ್ರಹಾರ – ಬ್ರಾಹ್ಮಣರು ವಾಸಿಸುವ ಕೇರಿ

  12. ಕಾರು – ವಾಂತಿಮಾಡು

  13. ಕೊಂಡಾಡು – ಹೊಗಳು

  14. ನೆತ್ತಿಗೇರು – ಹೆಚ್ಚಾಗು

  15. ಭಕ್ಷ್ಯ – ಸಿಹಿ ತಿಂಡಿ

  16. ಮೃಷ್ಟಾನ್ನ – ರಸಕವಳ

  17. ಮುಷ್ಟಿ – ಮುಚ್ಚಿದ ಕೈ

  18. ವೀರಗಚ್ಚೆ – ವೀರರು ಹಾಕುವ ಕಚ್ಚೆ

  19. ಹಂಗಿಸು – ಮೂದಲಿಸು; ಹೀಯಾಳಿಸು

  20. ಹೋರಿ – ಎತ್ತು; ಗೂಳಿ; ವೃಷಭ

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಪಾಂಡವರು ಅರಗಿನ ಅರಮನೆಯಿಂದ ಪಾರಾಗಿ ಯಾವ ಊರಿಗೆ ಬಂದರು?

    Answer

    ಪಾಂಡವರು ಅರಗಿನ ಅರಮನೆಯಿಂದ ಪಾರಾಗಿ ಏಕಚಕ್ರ ಊರಿಗೆ ಬಂದರು.

  2. ೨. ಪಾಂಡವರ ತಾಯಿಯ ಹೆಸರೇನು?

    Answer

    ಪಾಂಡವರ ತಾಯಿಯ ಹೆಸರು ಕುಂತಿ.

  3. ೩. ಕುಂತಿ ಬ್ರಾಹ್ಮಣನ ಮನೆಗೆ ಏಕೆ ಹೋದಳು?

    Answer

    ಕುಂತಿ ಬ್ರಾಹ್ಮಣನ ಮನೆಯಿಂದ ಅಳುವ ಧ್ವನಿ ಕೇಳಿಸಿದ್ದರಿಂದ ಏನೆಂದು ವಿಚಾರಿಸಲು ಹೋದಳು.

  4. ೪. ಕುಂತಿ ಬ್ರಾಹ್ಮಣ ದಂಪತಿಗಳಿಗೆ ಏನೆಂದು ಸಮಾಧಾನಪಡಿಸಿದಳು?

    Answer

    ಕುಂತಿ ಬ್ರಾಹ್ಮಣ ದಂಪತಿಗಳಿಗೆ ತಮ್ಮ ಮಗನ ಬದಲು ತನ್ನ ಐವರು ಮಕ್ಕಳಲ್ಲಿ ಒಬ್ಬನನ್ನು ಕಳುಹಿಸಿಕೊಡುವುದಾಗಿ ಸಮಾಧಾನಪಡಿಸಿದಳು.

  5. ೫. ಕುಂತಿ ಭೀಮನಿಗೆ ಏನೆಂದು ಹೇಳಿದಳು?

    Answer

    ಕುಂತಿ ಭೀಮನಿಗೆ ನಾಳೆ ನಿನಗೆ ಮೃಷ್ಟಾನ್ನ ಭೋಜನ, ಹೊಟ್ಟೆ ತುಂಬ ಊಟ ಮಾಡಬಹುದು ಎಂದು ಹೇಳಿದಳು.

  6. ೬. ಭೀಮನು ರಾಕ್ಷಸನನ್ನು ಏನೆಂದು ಕೂಗಿ ಕರೆದನು?

    Answer

    ಭೀಮನು ರಾಕ್ಷಸನನ್ನು “ಎಲವೋ ಕುನ್ನಿ, ಕೂಳಿದೆ, ತಿನ್ನು ಬಾ” ಎಂದು ಕೂಗಿ ಕರೆದನು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಏಕಚಕ್ರ ಊರಿನ ಜನರು ಭಯದಲ್ಲಿ ಏಕೆ ಬದುಕುತ್ತಿದ್ದರು?

    Answer

    ಏಕಚಕ್ರ ಊರಿನ ಸಮೀಪದ ಬೆಟ್ಟದಲ್ಲಿ ಬಕಾಸುರನೆಂಬ ರಾಕ್ಷಸನಿದ್ದನು. ಅವನು ಹಸಿವಾದಾಗ ಊರಿಗೆ ನುಗ್ಗಿ ಜನರನ್ನು ಕೊಂದು ತಿನ್ನುತ್ತಿದ್ದನು. ಆದ್ದರಿಂದ ಜನರು ಸದಾ ಭಯದಲ್ಲಿ ಬದುಕುತ್ತಿದ್ದರು.

  2. ೨. ಏಕಚಕ್ರ ಊರಿನ ಜನರು ರಾಕ್ಷಸನೊಂದಿಗೆ ಯಾವ ಒಪ್ಪಂದ ಮಾಡಿಕೊಂಡಿದ್ದರು?

    Answer

    ಏಕಚಕ್ರ ಊರಿನ ಜನರು ರಾಕ್ಷಸನೊಂದಿಗೆ ದಿನವೂ ಸರದಿಯಂತೆ ಒಬ್ಬರ ಮನೆಯಿಂದ ಒಂದು ಬಂಡಿ ಅನ್ನ, ಎರಡು ಬಲಿಷ್ಠ ಹೋರಿಗಳು ಮತ್ತು ಒಬ್ಬ ಮನುಷ್ಯನನ್ನು ಒಪ್ಪಿಸುವ ಒಪ್ಪಂದ ಮಾಡಿಕೊಂಡಿದ್ದರು.

  3. ೩. ಭೀಮನು ರಾಕ್ಷಸನ ಬಳಿ ಯಾವ ಸಿದ್ಧತೆಗಳೊಂದಿಗೆ ಹೊರಟನು?

    Answer

    ಭೀಮನು ಸ್ನಾನಾದಿಗಳನ್ನು ಮಾಡಿ ವೀರಗಚ್ಚೆ ಹಾಕಿ ಸಿದ್ಧನಾದನು. ಬಂಡಿಯಲ್ಲಿ ಬಗೆಬಗೆಯ ಆಹಾರ, ಹಾಲು, ಮೊಸರು, ತುಪ್ಪದ ಗಡಿಗೆಗಳನ್ನು ತುಂಬಿಸಿಕೊಂಡು ತಾಯಿಗೆ ನಮಸ್ಕರಿಸಿ ಹೊರಟನು.

  4. ೪. ರಾಕ್ಷಸನ ಬಳಿಗೆ ಹೊರಟ ಭೀಮನು ತನ್ನ ಹಸಿವನ್ನು ಹೇಗೆ ನೀಗಿಸಿಕೊಂಡನು?

    Answer

    ಭೀಮನು ಬಂಡಿಯಲ್ಲಿದ್ದ ಭಕ್ಷ್ಯಗಳನ್ನು ಒಂದೊಂದಾಗಿ ಸವಿದು, ದೊಡ್ಡ ತುತ್ತುಗಳನ್ನು ಹಾರಿಸುತ್ತ ಊಟ ಮಾಡಿದನು. ಮಧ್ಯೆ ಹಾಲು ತುಪ್ಪದ ಗಡಿಗೆಗಳನ್ನು ಕುಡಿದು, ಮುಕ್ಕಾಲು ಪಾಲು ಅನ್ನವನ್ನು ತಿಂದು ಹಸಿವನ್ನು ನೀಗಿಸಿಕೊಂಡನು.

  5. ೫. ಭೀಮನು ರಾಕ್ಷಸನಿಗೆ ಹೇಗೆ ಕೋಪ ಬರಿಸಿದನು?

    Answer

    ಭೀಮನು ರಾಕ್ಷಸನನ್ನು “ಎಲವೋ ಕುನ್ನಿ, ಕೂಳಿದೆ, ತಿನ್ನು ಬಾ” ಎಂದು ಕರೆದನು. ಅನ್ನದ ತುತ್ತುಗಳನ್ನು ಹಾರಿಸುತ್ತಾ, ಭಕ್ಷ್ಯಗಳನ್ನು ತೋರಿಸಿ ಅಣಕಿಸಿ ಅವನಿಗೆ ಕೋಪ ಬರಿಸಿದನು.

  6. ೬. ಭೀಮನು ರಾಕ್ಷಸನೊಂದಿಗೆ ಹೇಗೆ ಹೋರಾಡಿದನು?

    Answer

    ಭೀಮನು ರಾಕ್ಷಸನೊಂದಿಗೆ ಮುಷ್ಟಿಯುದ್ಧ ಮಾಡಿದನು. ಬಂಡೆಗಲ್ಲುಗಳನ್ನು ಎತ್ತಿ ಎಸೆದು, ಮರಗಳನ್ನು ಕಿತ್ತು ಹೊಡೆದು, ಕೊನೆಗೆ ಅವನ ಮುಖಕ್ಕೆ ಏಟು ಕೊಟ್ಟು ಕೊಂದನು.

ಇ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ಬರೆಯಿರಿ.

  1. ೧. “ನಾಳೆ ನಿನಗೆ ಮೃಷ್ಟಾನ್ನ ಭೋಜನ; ಹೊಟ್ಟೆ ತುಂಬ ಊಟ ಮಾಡಬಹುದು.”

    Answer

    ಕುಂತಿಯು ಭೀಮನಿಗೆ ಹೇಳಿದಳು.

  2. ೨. “ಎಲವೋ ಕುನ್ನಿ, ಕೂಳಿದೆ ಬಾ”

    Answer

    ಭೀಮನು ಬಕಾಸುರನಿಗೆ ಹೇಳಿದನು.

  3. ೩. “ಇಷ್ಟೇನಾ ನಿನ್ನ ಶಕ್ತಿ?”

    Answer

    ಭೀಮನು ಬಕಾಸುರನಿಗೆ ಹೇಳಿದನು.

ಈ) ಬಿಟ್ಟ ಸ್ಥಳಗಳನ್ನು ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ಪಾಂಡವರ ಸಂಖ್ಯೆ ............................

    Answer

    ಪಾಂಡವರ ಸಂಖ್ಯೆ ಐದು.

  2. ಅ) ಮೂರು ಆ) ನಾಲ್ಕು ಇ) ಐದು ಈ) ಆರು

  3. ೨. ಬ್ರಾಹ್ಮಣ ದಂಪತಿಗಳು ............................ ಬಲಿ ಆಗುತ್ತಿರುವುದಕ್ಕೆ ದುಃಖಿಸಿದರು.

    Answer

    ಬ್ರಾಹ್ಮಣ ದಂಪತಿಗಳು ಮಗ ಬಲಿ ಆಗುತ್ತಿರುವುದಕ್ಕೆ ದುಃಖಿಸಿದರು.

  4. ಅ) ಮಗ ಆ) ಹೋರಿ ಇ) ಗಾಡಿ ಈ) ಭೀಮ

  5. ೩. ರಾಕ್ಷಸನ ಬಳಿಗೆ ಹೊರಟ ಭೀಮನನ್ನು ಜನರು .................... ನೋಡುತ್ತಿದ್ದರು.

    Answer

    ರಾಕ್ಷಸನ ಬಳಿಗೆ ಹೊರಟ ಭೀಮನನ್ನು ಜನರು ಅಚ್ಚರಿಯಿಂದ ನೋಡುತ್ತಿದ್ದರು.

  6. ಅ) ಭಯದಿಂದ ಆ) ಅಚ್ಚರಿಯಿಂದ ಇ) ದುಃಖದಿಂದ ಈ) ಸಂತೋಷದಿಂದ

  7. ೪. ಏಕಚಕ್ರ ಊರಿನ ಜನರು .................... ಜೊತೆ ಒಪ್ಪಂದ ಮಾಡಿಕೊಂಡಿದ್ದರು.

    Answer

    ಏಕಚಕ್ರ ಊರಿನ ಜನರು ರಾಕ್ಷಸನ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

  8. ಅ) ಕುಂತಿಯ ಆ) ರಾಕ್ಷಸನ ಇ) ಭೀಮನ ಈ) ಬ್ರಾಹ್ಮಣನ

III. ಭಾಷಾಭ್ಯಾಸ :

ಅ) ಈ ಕೆಳಗಿನ ಪದಗಳನ್ನು ಗಮನಿಸಿರಿ.

  1. ಸಿಕ್ಕಸಿಕ್ಕ, ದಿನದಿನವೂ, ಬೇಗಬೇಗ - ಈ ರೀತಿಯ ಪದಗಳನ್ನು ದ್ವಿರುಕ್ತಿ ಎಂದು ಕರೆಯಲಾಗುತ್ತದೆ. ನಾವು ಮಾತನಾಡುವಾಗ ಭಾವನೆಗಳ ತೀವ್ರತೆ ಹೆಚ್ಚಾದಾಗ ಈ ರೀತಿಯ ಪದಗಳನ್ನು ಬಳಸುತ್ತೇವೆ. ಪ್ರಸ್ತುತ ಪಾಠದಲ್ಲಿ ಈ ರೀತಿಯ ಪದಗಳು ಬಹಳಷ್ಟು ಬಾರಿ ಬಳಕೆ ಆಗಿವೆ. ಅವುಗಳನ್ನು ಗಮನಿಸಿ, ಪಟ್ಟಿಮಾಡಿರಿ.

    Answer

    ಸಿಕ್ಕಸಿಕ್ಕ ದಿನದಿನವೂ ಬೇಗಬೇಗ ದೊಡ್ಡ ದೊಡ್ಡ ಮಧ್ಯ ಮಧ್ಯದಲ್ಲಿ ಎತ್ತಿ ಎತ್ತಿ ನಗು ನಗುತ್ತ ಗಡಗಡ ದಡದಡನೆ ಒಂದೊಂದಾಗಿ

ಆ) ಈ ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ಸಿದ್ಧನಾಗು :....................................................................................................

    Model sentence

    ಸಿದ್ಧನಾಗು: ನಾನು ಶಾಲೆಗೆ ಹೋಗಲು ಬೇಗ ಸಿದ್ಧನಾಗುತ್ತೇನೆ.

  2. ೨. ತ್ಯಾಗಿ :....................................................................................................

    Model sentence

    ತ್ಯಾಗಿ: ನಮ್ಮ ಸೈನಿಕರು ದೇಶಕ್ಕಾಗಿ ತ್ಯಾಗಿಗಳು.

  3. ೩. ಸಂತಸಪಡು :....................................................................................................

    Model sentence

    ಸಂತಸಪಡು: ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ನಾನು ಸಂತಸಪಟ್ಟೆ.

  4. ೪. ಪಾರಾಗು :....................................................................................................

    Model sentence

    ಪಾರಾಗು: ಬೆಕ್ಕು ನಾಯಿಯಿಂದ ಪಾರಾಗಿ ಮರವೇರಿತು.

  5. ೫. ಕೊಂಡಾಡು :....................................................................................................

    Model sentence

    ಕೊಂಡಾಡು: ಶಿಕ್ಷಕರು ನನ್ನ ಒಳ್ಳೆಯ ಕೆಲಸವನ್ನು ಕೊಂಡಾಡಿದರು.

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ಸ್ನಾನಾದಿ = .......................... + ..........................

    Answer

    ಸ್ನಾನ + ಆದಿ

  2. ೨. ವೀರಗಚ್ಚೆ = .......................... + ..........................

    Answer

    ವೀರ + ಗಚ್ಚೆ

  3. ೩. ಇನ್ನೊಬ್ಬ = .......................... + ..........................

    Answer

    ಇನ್ನು + ಒಬ್ಬ

  4. ೪. ಕೆಳಗಿಳಿದು = .......................... + ..........................

    Answer

    ಕೆಳಗೆ + ಇಳಿದು

  5. ೫. ಬಂಡೆಗಲ್ಲು = .......................... + ..........................

    Answer

    ಬಂಡೆ + ಕಲ್ಲು

ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಭಯ x ..........................

    Answer

    ಧೈರ್ಯ

  2. ೨. ಬಲಿಷ್ಠ x ..........................

    Answer

    ದುರ್ಬಲ

  3. ೩. ದುಃಖ x ..........................

    Answer

    ಸಂತೋಷ

  4. ೪. ಸಮಾಧಾನ x ..........................

    Answer

    ಅಸಮಾಧಾನ

  5. ೫. ಧೈರ್ಯ x ..........................

    Answer

    ಭಯ

ಉ) ಈ ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

  1. ೧. ಬಂಡಿ : .......................... .......................... ..........................

    Answer

    ಗಾಡಿ ರಥ ಶಕಟ

  2. ೨. ಹಿಂಡು : .......................... .......................... ..........................

    Answer

    ಗುಂಪು ಸಮೂಹ ತಂಡ

  3. ೩. ಹೋರಿ : .......................... .......................... ..........................

    Answer

    ಎತ್ತು ಗೂಳಿ ವೃಷಭ

ಊ) ಈ ಕೆಳಗಿನ ಪದಗಳಿಗೆ ವಿಭಿನ್ನ ಅರ್ಥಬರುವ ಪದಗಳನ್ನು ಬರೆಯಿರಿ.

  1. ೧. ಹಿಂಡು : .......................... .......................... ..........................

    Answer

    ಗುಂಪು ಹಿಸುಕು ನುಲಿ

  2. ೨. ಕಾರು : .......................... .......................... ..........................

    Answer

    ವಾಂತಿ ಕಪ್ಪು ಮೋಟಾರು

Interactive Lab