CRECT Education

Class 5 Kannada Lesson 2: My Country My People | KTBS Second Language – Learn the Story

Description

Learn the story of India's geography, diversity, and pride – from the Himalayas to the tricolor flag – with key Kannada vocabulary. Part 1 of the KTBS Class 5 Second Language lesson.

ಗದ್ಯ · ಸಂಪಾದಿತ

ಪಠ್ಯFull text

ನಮ್ಮ ದೇಶ ಭಾರತ. ನಾವು ಭಾರತೀಯರು. ಇದೊಂದು ಉಪಖಂಡವೂ ಹೌದು. ಮೂರು ಕಡೆ ಸಮುದ್ರ, ಒಂದು ಕಡೆ ಮಹಾಪರ್ವತ ಇದೆ. ಅದುವೇ ಹಿಮಾಲಯ. ಈ ದೇಶವನ್ನು 'ಭರತ ಖಂಡ', 'ಹಿಂದೂಸ್ಥಾನ', 'ಇಂಡಿಯಾ' ಎಂದು ಕರೆಯುವರು. ನಮ್ಮ ದೇಶದ ವಿಸ್ತಾರ ೩೨,೮೭,೨೬೩ ಚದರ ಕಿಲೋಮೀಟರ್‌ಗಳು. ಇದು ಕಾಶ್ಮೀರದಿಂದ ಕನ್ಯಾಕುಮಾರಿ, ಪಂಜಾಬದಿಂದ ಮಣಿಪುರದವರೆಗೆ ಹಬ್ಬಿದೆ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಬೌದ್ಧ, ಜೈನ ಮುಂತಾದ ಮತದವರೂ ಇದ್ದಾರೆ. ಕನ್ನಡ, ಹಿಂದಿ, ಬಂಗಾಳಿ, ಪಂಜಾಬಿ, ಮರಾಠಿ, ತೆಲುಗು, ತಮಿಳು, ಮಲಯಾಳಿ ಮುಂತಾದ ಭಾಷೆಗಳನ್ನು ಮಾತನಾಡುವ ಜನರು ಇದ್ದಾರೆ. ಬಹುಧರ್ಮ, ಬಹುಭಾಷೆ, ಬಹುವೇಷ ಹೊಂದಿರುವ ದೊಡ್ಡದೇಶ ನಮ್ಮದು. ಈ ಜನ ಶಾಂತಿಪ್ರಿಯರು. ವಿಶಾಲ ಮನೋಭಾವದವರು. ಜಾತಿ-ಮತ-ಭಾಷೆ ಮೀರಿದವರು. ಈ ದೇಶದಲ್ಲಿ ಗಂಗಾ, ಯಮುನಾ, ಸಿಂಧೂ, ಕಾವೇರಿ, ಕೃಷ್ಣ, ಗೋದಾವರಿ ಮುಂತಾದ ನದಿಗಳು ಹರಿಯುತ್ತಿವೆ. ಬದುಕಿನ ಭೂಮಿಗೆ ನೀರುಣಿಸುತ್ತಿವೆ. ಕರಾವಳಿಯು ಸಾಗರದ ಚೆಲುವಿನಿಂದ ತುಂಬಿದೆ. ದಕ್ಷಿಣಪೀಠಭೂಮಿ ಫಲವತ್ತಾದ ನಾಡು. ಅದನ್ನು ಪಶ್ಚಿಮ ಘಟ್ಟಗಳು, ಪೂರ್ವಘಟ್ಟಗಳು ಸುತ್ತುವರಿದಿವೆ. ಇದು ಹಚ್ಚಹಸಿರಿನ ಕಾಡು. ಇಲ್ಲಿ ಹುಲಿ, ಸಿಂಹ, ಆನೆ, ಜಿಂಕೆ, ಚಿರತೆ ಮುಂತಾದ ವನ್ಯಜೀವಿಗಳು ಇವೆ. 'ಜನಗಣಮನ' ಇದು ನಮ್ಮ ರಾಷ್ಟ್ರಗೀತೆ. ಈ ಗೀತೆಯನ್ನು ಬರೆದವರು ರವೀಂದ್ರನಾಥ ಟಾಗೋರ್. ಇದು ಭಾರತ ದೇಶವನ್ನು ಬಣ್ಣಿಸುತ್ತದೆ ಮತ್ತು ಭಾರತೀಯರಿಗೆ ಜಯವನ್ನು ಕೋರುತ್ತದೆ. 'ವಂದೇ ಮಾತರಂ' ನಮ್ಮ ದೇಶಭಕ್ತಿಗೀತೆ. ಇದನ್ನು ಬರೆದವರು ಬಂಕಿಮಚಂದ್ರ ಚಟರ್ಜಿ. ಇದು ದೇಶ ಪ್ರೇಮ ಸಾರುವ ಗೀತೆಯಾಗಿದೆ. ನಮ್ಮ ದೇಶದ ಬಾವುಟ ಮೂರು ಬಣ್ಣಗಳಿಂದ ಕೂಡಿದೆ. 'ಕೇಸರಿ' ತ್ಯಾಗದ ಸಂಕೇತ. 'ಬಿಳಿ' ಶಾಂತಿಯ ಪ್ರತೀಕ ಮತ್ತು 'ಹಸಿರು' ಸಮೃದ್ಧಿಯ ಸೂಚಕ. ನಡುವೆ ಇರುವ 'ನೀಲಿ' ಬಣ್ಣದ ಚಕ್ರ ನಮ್ಮ ಧರ್ಮಚಕ್ರ, ಪ್ರಗತಿಯ ಸಂಕೇತ. ಇದುವೇ ನಮ್ಮ ಹೆಮ್ಮೆಯ ಬಾವುಟ. ಈ ನಾಡಿನ ರಕ್ಷಣೆಗಾಗಿ ಅನೇಕ ಜನ ಬಲಿದಾನ ಮಾಡಿದ್ದಾರೆ. ಅವರುಗಳಲ್ಲಿ ಕಿತ್ತೂರು ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ, ಟಿಪ್ಪು ಸುಲ್ತಾನ್, ಭಗತ್‌ಸಿಂಗ್, ಚಂದ್ರಶೇಖರ ಆಜಾದ ಪ್ರಮುಖರು. ಅನೇಕ ತಾಯಂದಿರು ದೇಶಕ್ಕಾಗಿ ತಮ್ಮ ಮಕ್ಕಳನ್ನೇ ಕೊಡುಗೆಯನ್ನಾಗಿ ನೀಡಿರುವರು. ವಾಲ್ಮೀಕಿ, ವ್ಯಾಸ, ಪಂಪ, ಹರಿಹರ, ರಾಘವಾಂಕ, ಕುಮಾರವ್ಯಾಸ, ಕಬೀರ್ ಮೊದಲಾದ ಕವಿಗಳ ಬೀಡು ಭಾರತ. ಬುದ್ಧ, ಬಸವ, ಅಲ್ಲಮ, ಗಾಂಧಿ, ಅಂಬೇಡ್ಕರ್ ಮೊದಲಾದ ಮಹಾತ್ಮರ ನಾಡಿದು. ವಿವೇಕಾನಂದ, ಅರವಿಂದರ ಗೂಡಿದು. ಈ ನಾಡಿನ ರೈತ, ಈ ನಾಡಿನ ಸೈನಿಕ ನಮ್ಮ ದೇಶದ ಆಧಾರ ಸ್ತಂಭಗಳು. * * * *

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಕರಾವಳಿ - ಸಮುದ್ರದಂಡೆ

  2. ಘಟ್ಟ - ಬೆಟ್ಟಗಳ ಸಾಲು

  3. ಪರ್ವತ - ದೊಡ್ಡ ಬೆಟ್ಟ

  4. ಪ್ರತೀಕ - ಪ್ರತಿರೂಪ; ಚಿಹ್ನೆ.

  5. ಬಣ್ಣಿಸು - ಹೊಗಳು

  6. ಬಾವುಟ - ಪತಾಕೆ; ಧ್ವಜ.

  7. ಮನೋಭಾವ - ಮನಸ್ಸಿನ ಭಾವನೆ.

  8. ವಿಶಾಲ - ವಿಸ್ತಾರವಾದ; ಅಗಲವಾದ.

  9. ಸುಳಿವು - ಸುಳುಹು; ಕುರುಹು; ಜಾಡು.

  10. ಕೋರು - ವಿನಂತಿಸು

  11. ನಾಡು - ದೇಶ

  12. ಫಲವತ್ತಾದ - ಸಾರವತ್ತಾದ

  13. ಬಲಿದಾನ - ಆಹುತಿ

  14. ಬಹು - ಅಧಿಕ; ಅನೇಕ.

  15. ಬೀಡು - ನೆಲೆ; ಮನೆ.

  16. ಮೀರಿದ - ದಾಟಿದ

  17. ಸಂಕೇತ - ಗುರುತು

  18. ಹಬ್ಬು - ಹರಡು

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಭಾರತವನ್ನು ಯಾವ ಯಾವ ಹೆಸರುಗಳಿಂದ ಕರೆಯುತ್ತಾರೆ?

    Answer

    ಭಾರತವನ್ನು 'ಭರತ ಖಂಡ', 'ಹಿಂದೂಸ್ಥಾನ', 'ಇಂಡಿಯಾ' ಎಂದು ಕರೆಯುತ್ತಾರೆ.

  2. ೨. ಭಾರತದಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು?

    Answer

    ಭಾರತದಲ್ಲಿ ಹರಿಯುವ ಪ್ರಮುಖ ನದಿಗಳು ಗಂಗಾ, ಯಮುನಾ, ಸಿಂಧೂ, ಕಾವೇರಿ, ಕೃಷ್ಣ ಮತ್ತು ಗೋದಾವರಿ.

  3. ೩. ಭಾರತದಲ್ಲಿ ಕಂಡುಬರುವ ಪ್ರಮುಖ ಕಾಡುಪ್ರಾಣಿಗಳು ಯಾವುವು?

    Answer

    ಭಾರತದಲ್ಲಿ ಕಂಡುಬರುವ ಪ್ರಮುಖ ಕಾಡುಪ್ರಾಣಿಗಳು ಹುಲಿ, ಸಿಂಹ, ಆನೆ, ಜಿಂಕೆ ಮತ್ತು ಚಿರತೆ.

  4. ೪. ನಮ್ಮ ರಾಷ್ಟ್ರಗೀತೆ ಯಾವುದು? ಅದನ್ನು ರಚಿಸಿದ ಕವಿ ಯಾರು?

    Answer

    ನಮ್ಮ ರಾಷ್ಟ್ರಗೀತೆ 'ಜನಗಣಮನ'; ಅದನ್ನು ರಚಿಸಿದ ಕವಿ ರವೀಂದ್ರನಾಥ ಟಾಗೋರ್.

  5. ೫. 'ವಂದೇ ಮಾತರಂ' ಗೀತೆಯನ್ನು ರಚಿಸಿದವರು ಯಾರು?

    Answer

    'ವಂದೇ ಮಾತರಂ' ಗೀತೆಯನ್ನು ರಚಿಸಿದವರು ಬಂಕಿಮಚಂದ್ರ ಚಟರ್ಜಿ.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಭಾರತೀಯರಲ್ಲಿ ಎಂತಹ ಗುಣ ಸ್ವಭಾವಗಳಿವೆ?

    Answer

    ಭಾರತೀಯರು ಶಾಂತಿಪ್ರಿಯರು. ಅವರು ವಿಶಾಲ ಮನೋಭಾವದವರು. ಜಾತಿ-ಮತ-ಭಾಷೆ ಮೀರಿದವರಾಗಿದ್ದಾರೆ.

  2. ೨. ನಮ್ಮ ರಾಷ್ಟ್ರಧ್ವಜದ ವಿಶೇಷತೆಗಳೇನು?

    Answer

    ನಮ್ಮ ರಾಷ್ಟ್ರಧ್ವಜವು ಕೇಸರಿ, ಬಿಳಿ ಮತ್ತು ಹಸಿರು ಎಂಬ ಮೂರು ಬಣ್ಣಗಳಿಂದ ಕೂಡಿದೆ. ಕೇಸರಿ ತ್ಯಾಗದ ಸಂಕೇತ, ಬಿಳಿ ಶಾಂತಿಯ ಪ್ರತೀಕ ಮತ್ತು ಹಸಿರು ಸಮೃದ್ಧಿಯ ಸೂಚಕ. ನಡುವೆ ಇರುವ ನೀಲಿ ಬಣ್ಣದ ಚಕ್ರವು ಧರ್ಮಚಕ್ರ ಹಾಗೂ ಪ್ರಗತಿಯ ಸಂಕೇತವಾಗಿದೆ.

  3. ೩. ದೇಶದ ರಕ್ಷಣೆಗಾಗಿ ಮಡಿದ ವೀರಯೋಧರ ಹೆಸರುಗಳನ್ನು ಬರೆಯಿರಿ.

    Answer

    ದೇಶದ ರಕ್ಷಣೆಗಾಗಿ ಮಡಿದ ವೀರಯೋಧರಲ್ಲಿ ಕಿತ್ತೂರು ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ, ಟಿಪ್ಪು ಸುಲ್ತಾನ್, ಭಗತ್‌ಸಿಂಗ್ ಮತ್ತು ಚಂದ್ರಶೇಖರ ಆಜಾದ ಪ್ರಮುಖರು.

  4. ೪. ದೇಶದ ಪ್ರಮುಖ ಕವಿಗಳು ಹಾಗೂ ಮಹಾತ್ಮರ ಹೆಸರುಗಳನ್ನು ಪಟ್ಟಿಮಾಡಿ.

    Answer

    ದೇಶದ ಪ್ರಮುಖ ಕವಿಗಳು ವಾಲ್ಮೀಕಿ, ವ್ಯಾಸ, ಪಂಪ, ಹರಿಹರ, ರಾಘವಾಂಕ, ಕುಮಾರವ್ಯಾಸ ಮತ್ತು ಕಬೀರ್. ಪ್ರಮುಖ ಮಹಾತ್ಮರು ಬುದ್ಧ, ಬಸವ, ಅಲ್ಲಮ, ಗಾಂಧಿ ಮತ್ತು ಅಂಬೇಡ್ಕರ್.

ಇ) ಈ ಕೆಳಗಿನ ವಾಕ್ಯಗಳಲ್ಲಿರುವ ದೋಷಗಳನ್ನು ಸರಿಪಡಿಸಿ ಬರೆಯಿರಿ.

  1. ೧. ಭಾರತ ದೇಶದ ದಕ್ಷಿಣಕ್ಕೆ ಹಿಮಾಲಯ ಪರ್ವತ ಇದೆ.

  2. ೨. ದಕ್ಷಿಣಪೀಠ ಭೂಮಿಯನ್ನು ಸಮುದ್ರಗಳು ಸುತ್ತುವರಿದಿವೆ.

    Answer

    ದಕ್ಷಿಣಪೀಠಭೂಮಿಯನ್ನು ಪಶ್ಚಿಮ ಘಟ್ಟಗಳು ಮತ್ತು ಪೂರ್ವಘಟ್ಟಗಳು ಸುತ್ತುವರಿದಿವೆ.

  3. ೩. ನಮ್ಮದು ಬಹುಭಾಷೆ ಹೊಂದಿರುವ ಸಣ್ಣ ದೇಶ.

    Answer

    ನಮ್ಮದು ಬಹುಭಾಷೆ ಹೊಂದಿರುವ ದೊಡ್ಡ ದೇಶ.

ಈ) 'ಅ' ಪಟ್ಟಿಗೆ 'ಬ' ಪಟ್ಟಿಯನ್ನು ಹೊಂದಿಸಿ ಬರೆಯಿರಿ.

  1. | 'ಅ' ಪಟ್ಟಿ | 'ಬ' ಪಟ್ಟಿ |

  2. |---|---|

  3. | ಅ) ಹಿಮಾಲಯ | ೧) ಸಮುದ್ರ | ................................... |

    Answer

    ಅ) ಹಿಮಾಲಯ - ೩) ಪರ್ವತ

  4. | ಆ) ಕನ್ನಡ | ೨) ಕವಿ | ................................... |

    Answer

    ಆ) ಕನ್ನಡ - ೫) ಭಾಷೆ

  5. | ಇ) ಕಾವೇರಿ | ೩) ಪರ್ವತ | ................................... |

    Answer

    ಇ) ಕಾವೇರಿ - ೬) ನದಿ

  6. | ಈ) ಪಂಪ | ೪) ಧರ್ಮ | ................................... |

    Answer

    ಈ) ಪಂಪ - ೨) ಕವಿ

  7. | ಉ) ಕ್ರೈಸ್ತ | ೫) ಭಾಷೆ | ................................... |

    Answer

    ಉ) ಕ್ರೈಸ್ತ - ೪) ಧರ್ಮ

  8. | | ೬) ನದಿ | ................................... |

ಉ) ಬಿಟ್ಟಸ್ಥಳಗಳನ್ನು ಆವರಣದಲ್ಲಿ ನೀಡಿರುವ ಪದಗಳಿಂದ ಸರಿಯಾದುದನ್ನು ಆರಿಸಿ ಬರೆಯಿರಿ.

  1. (ತ್ಯಾಗ, ಮೂರು, ಶಾಂತಿ, ಸಮೃದ್ಧಿ)

  2. ೧. ನಮ್ಮ ರಾಷ್ಟ್ರಧ್ವಜವು .................................... ಬಣ್ಣಗಳಿಂದ ಕೂಡಿದೆ.

    Answer

    ನಮ್ಮ ರಾಷ್ಟ್ರಧ್ವಜವು ಮೂರು ಬಣ್ಣಗಳಿಂದ ಕೂಡಿದೆ.

  3. ೨. ಕೇಸರಿ ಬಣ್ಣದ ಸಂಕೇತ ....................................

    Answer

    ಕೇಸರಿ ಬಣ್ಣದ ಸಂಕೇತ ತ್ಯಾಗ.

  4. ೩. ಬಿಳಿಯ ಬಣ್ಣದ ಪ್ರತೀಕ ....................................

    Answer

    ಬಿಳಿಯ ಬಣ್ಣದ ಪ್ರತೀಕ ಶಾಂತಿ.

  5. ೪. ಹಸಿರು ಬಣ್ಣದ ಸೂಚಕ ....................................

    Answer

    ಹಸಿರು ಬಣ್ಣದ ಸೂಚಕ ಸಮೃದ್ಧಿ.

ಊ) ಇವು ನಮ್ಮ ರಾಷ್ಟ್ರೀಯ ಚಿಹ್ನೆಗಳು, ಅವುಗಳ ಹೆಸರನ್ನು ಬರೆಯಿರಿ.

  1. (Images of: National Emblem of India, National Flag of India, Lotus, Peacock, Tiger. Below each row of images is a blank line for writing the names.)

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಸ್ವಂತವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ಪ್ರಗತಿ : ....................................................................................................

    Answer

    ಪ್ರಗತಿ: ನಾನು ಓದಿನಲ್ಲಿ ಪ್ರಗತಿ ಸಾಧಿಸುತ್ತಿದ್ದೇನೆ.

  2. ೨. ಸುತ್ತುವರೆ : ....................................................................................................

    Answer

    ಸುತ್ತುವರೆ: ನಮ್ಮ ಶಾಲೆಯ ಸುತ್ತಲೂ ಹೂವಿನ ಗಿಡಗಳು ಸುತ್ತುವರೆದಿವೆ.

  3. ೩. ಹಚ್ಚಹಸಿರು : ....................................................................................................

    Answer

    ಹಚ್ಚಹಸಿರು: ಮಳೆಗಾಲದಲ್ಲಿ ನಮ್ಮ ಊರಿನ ಗದ್ದೆಗಳು ಹಚ್ಚಹಸಿರಾಗಿ ಕಾಣುತ್ತವೆ.

  4. ೪. ಬಲಿದಾನ : ....................................................................................................

    Answer

    ಬಲಿದಾನ: ದೇಶಕ್ಕಾಗಿ ಬಲಿದಾನ ಮಾಡಿದ ಯೋಧರನ್ನು ನಾವು ಗೌರವಿಸುತ್ತೇವೆ.

  5. ೫. ಬೀಡು : ....................................................................................................

    Answer

    ಬೀಡು: ನಮ್ಮ ಮನೆಯ ಹಿತ್ತಲಿನ ಮಾವಿನ ಮರ ಪಕ್ಷಿಗಳ ಬೀಡಾಗಿದೆ.

ಆ) ಈ ಪದಗಳನ್ನು ಓದುತ್ತಾ ಬರೆಯಿರಿ.

  1. (A grid to copy/practice writing the following words multiple times:)

  2. ೧. ಉಪಖಂಡ, ಹಿಂದೂಸ್ಥಾನ, ಸಂಕೇತ, ಘಟ್ಟ, ಸಮೃದ್ಧಿ

  3. ೨. ರಾಘವಾಂಕ, ಅಲ್ಲಮ, ಅಬ್ಬಕ್ಕ, ಹಚ್ಚಹಸಿರು, ಕಿತ್ತೂರು

  4. ೩. ಕಾಶ್ಮೀರ, ಕನ್ಯಾಕುಮಾರಿ, ಧರ್ಮ, ಕೃಷ್ಣ, ರಾಷ್ಟ್ರ

ಪೂರಕ ಓದು :

  1. (ಈ ಪದ್ಯವನ್ನು ರಾಗಬದ್ಧವಾಗಿ ಹಾಡಿರಿ ಹಾಗೂ ಪ್ರಸ್ತುತ ಗದ್ಯದಲ್ಲಿನ ವಿಚಾರಗಳೊಂದಿಗೆ ಇರುವ ಸಾಮ್ಯತೆಯನ್ನು ಗಮನಿಸಿರಿ.)

ದೇಶ ಪ್ರೇಮ

  1. ಭರತದೇಶ ನನ್ನ ದೇಶ

  2. ಭಕ್ತಿಯಿಂದ ನಮಿಸುವೆ

  3. ವೈರಿಜನರ ಬಗ್ಗುಬಡಿದು

  4. ದೇಶ ಹಿತವ ಕಾಯುವೆ ॥ ೧ ॥

  5. ದೇಶಕ್ಕಾಗಿ ಪ್ರಾಣತೆತ್ತ

  6. ಯೋಧರನ್ನು ನೆನೆಯುವೆ ।

  7. ಬುದ್ಧ, ಗಾಂಧಿ ಹಾಕಿಕೊಟ್ಟ

  8. ಮಾರ್ಗದಲ್ಲಿ ನಡೆಯುವೆ ॥ ೨ ॥

  9. ದೇಶದೇಳ್ಗೆಗಾಗಿ ದುಡಿವ

  10. ಜನರ ಜೊತೆ ಸೇರುವೆ ।

  11. ಭಾಷೆ ದ್ವೇಷ ಬೇಡವೆಂದು

  12. ಎಲ್ಲರೊಂದೆ ಎನ್ನುವೆ ॥ ೩ ॥

  13. ಸತ್ಯ ಶಾಂತಿ ನಾಡು ಎಂದು

  14. ಎದೆಯ ತಟ್ಟಿ ಹೇಳುವೆ ।

  15. ದೇಶ ಸೇವೆಗಾಗಿ ನಾನು

  16. ಪ್ರಾಣ ತ್ಯಾಗ ಮಾಡುವೆ ॥ ೪ ॥

  17. – ನೀಲಾವರ ಸುರೇಂದ್ರ ಅಡಿಗ

IV. ಸೈದ್ಧಾಂತಿಕ ವ್ಯಾಕರಣ :

೧. ಕನ್ನಡ ವರ್ಣಮಾಲೆ.

  1. ಮಕ್ಕಳೇ.... ನಾವು ಮಾತನಾಡುವ ಭಾಷೆ ಕನ್ನಡ. ಈ ಕನ್ನಡ ಭಾಷೆಯಲ್ಲಿ ೪೯ ಅಕ್ಷರಗಳಿವೆ. ಅವುಗಳನ್ನು ನೀವು ಸರಿಯಾಗಿ ಬರೆಯುವುದನ್ನು ಹಾಗೂ ಉಚ್ಚಾರಣೆ ಮಾಡುವುದನ್ನು ಕಲಿತರೆ ಕನ್ನಡ ಭಾಷೆಯನ್ನು ಬಹು ಸುಲಭವಾಗಿ ಕಲಿಯಬಹುದು. ಕೆಳಗೆ ನೀಡಲಾಗಿರುವ ಕನ್ನಡ ವರ್ಣಮಾಲೆಯನ್ನು ಗಮನಿಸಿ, ಅವುಗಳನ್ನು ಸರಿಯಾಗಿ ಉಚ್ಚರಿಸಿರಿ.

  2. ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

  3. ಕ ಖ ಗ ಘ ಙ

  4. ಚ ಛ ಜ ಝ ಞ

  5. ಟ ಠ ಡ ಢ ಣ

  6. ತ ಥ ದ ಧ ನ

  7. ಪ ಫ ಬ ಭ ಮ

  8. ಯ ರ ಲ ವ ಶ ಷ ಸ ಹ ಳ

೨. ಕನ್ನಡ ವರ್ಣಮಾಲೆಯ ಮೂಲಾಕ್ಷರಗಳನ್ನು ಸರಿಯಾಗಿ ಗಮನಿಸಿ ಉಚ್ಚರಿಸಿರಿ.

  1. ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

  2. – ಇವು ಸ್ವರಗಳು = ೧೩

  3. ಅಂ ಅಃ

  4. – ಯೋಗವಾಹಗಳು = ೦೨

  5. ಕ್ ಖ್ ಗ್ ಘ್ ಙ್

  6. ಚ್ ಛ್ ಜ್ ಝ್ ಞ್

  7. ಟ್ ಠ್ ಡ್ ಢ್ ಣ್

  8. ತ್ ಥ್ ದ್ ಧ್ ನ್

  9. ಪ್ ಫ್ ಬ್ ಭ್ ಮ್

  10. – ವರ್ಗೀಯ ವ್ಯಂಜನಗಳು = ೨೫

  11. ಯ್ ರ್ ಲ್ ವ್ ಶ್ ಷ್ ಸ್ ಹ್ ಳ್ – ಅವರ್ಗೀಯ ವ್ಯಂಜನಗಳು = ೦೯

  12. ಕನ್ನಡ ವರ್ಣಮಾಲೆಯ ಮೂಲಾಕ್ಷರಗಳು ಒಟ್ಟು = ೪೯

Interactive Lab