ಪದ್ಯ · ಲಲಿತಾ ಕೆ. ಹೊಸಪ್ಯಾಟೆ
ಪಠ್ಯFull text
ಬೊಗಸೆ ತುಂಬ ಹೂವ ತಂದು
ಪಾದಕಮಲಕೆರಗುವೆ
ನಿನ್ನ ಅಡಿಗೆ ಮಣಿದು ಮತ್ತೆ
ಭಾಗ್ಯವನ್ನೆ ಬೇಡುವೆ ||೧||
ಗರ್ಭದಲ್ಲಿ ಮಾಂಸ ಮುದ್ದೆ
ಅ ಆ ಇ ಈ ತಿಳಿಯದು
ಜನಿಸಿ ಧರೆಗೆ ಬಿದ್ದ ಕ್ಷಣವೆ
‘ಅವ್ವ’ ಅಂತು ಕೊರಳು ||೨||
ನೋವ ನುಂಗಿ ನನ್ನ ನಂಬಿ
ಹಾಲ ನೀನು ಕುಡಿಸಿದೆ
ಕಣ್ಣ ನೀರ ಒರೆಸಿ ನೀನು
ಎದೆಗವಚಿ ರಮಿಸಿದೆ ||೩||
ಬಿದ್ದರಂತು ಓಡಿಬಂದು
ಎತ್ತಿಕೊಂಡು ರಮಿಸಿದೆ
ಗೆದ್ದರಂತು ಖುಷಿಯು ನಿನಗೆ
ಹೊತ್ತುಕೊಂಡು ಸಾರಿದೆ ||೪||
ವಿದ್ಯೆ ಕಲಿಸಿ ಬುದ್ಧಿನೀಡಿ
ಸಿದ್ಧಿಪಡೆಯೆ ಕಲಿಸಿದೆ
ಯಶದ ಹಿಂದೆ ಹರಕೆ ನೀಡಿ
ಜೀವತ್ಯಾಗ ಮಾಡಿದೆ ||೫||
ರೊಕ್ಕಕೆಲ್ಲ ಲೆಕ್ಕವಿಲ್ಲ
ನಿನ್ನ ಋಣ ಅಗಣಿತ.
ಪಾದಕಮಲಕೊಂದೆ ಹೂವು
ನನ್ನ ಪ್ರೀತಿ ಸೀಮಿತ ||೬||
ತಾಯಿ ಹರಕೆ ಮುಂದೆ ಜಗದಿ
ಯಾವುದಿಲ್ಲ ಮಿಗಿಲು ತಾನು
ಕಾಯೊ ಗುಣದ ದೇವರವ್ವ
ಅವ್ವ ನಿನ್ನ ಹೆಸರು ||೭||