CRECT Education

Class 6 Kannada Lesson 11: The Grateful Crane | KTBS Part 1 – Learn the Story

Description

Learn the story of Hari and the grateful crane from the Class 6 Kannada textbook. Follow the tale beat by beat, then master 5 key vocabulary words with practice loops.

ಗದ್ಯ (prose) · ಡಾ. ಅನುಪಮಾ ನಿರಂಜನ

ಪಠ್ಯFull text

ಒಂದೂರಿನಲ್ಲಿ ಬಡ ರೈತ ದಂಪತಿಗಳು ಇದ್ದರು. ಅವರಿಗೆ ಹರಿ ಎಂಬ ಮಗನು ಇದ್ದನು. ಅವನು ಸದ್ಗುಣವುಳ್ಳವನು ಮತ್ತು ಕರುಣಾಳುವೂ ಆಗಿದ್ದನು. ಒಂದು ದಿನ ಅವನು ಕೊಳವೊಂದರ ಬಳಿ ಹೋಗುತ್ತಿದ್ದಾಗ ಹುಲ್ಲಿನ ಮೇಲೆ ಬಿಳಿ ಕೊಕ್ಕರೆಯೊಂದು ಬಿದ್ದಿತ್ತು. ಅವನು ಕನಿಕರದಿಂದ ಬಾಗಿ ನೋಡಿದಾಗ ಕೊಕ್ಕರೆಯ ಮೈಯೊಳಗೆ ಚುಚ್ಚಿದ್ದ ಬಾಣವೊಂದು ಕಂಡಿತು. ಹರಿಯು ಮೆಲ್ಲನೆ ಆ ಬಾಣವನ್ನು ಹೊರತೆಗೆದನು. ಗಾಯಕ್ಕೆ ತನಗೆ ತಿಳಿದ ರಸಮೂಲಿಕೆಯನ್ನು ಹಾಕಿದನು. ಕೊಕ್ಕರೆಯ ನೋವು ಕಡಿಮೆಯಾಯಿತು. ಅದು ಆತನಿಗೆ ಮೂರು ಬಾರಿ ತಲೆಬಾಗಿ ನಮಸ್ಕರಿಸಿ ಹೊರಟು ಹೋಯಿತು. ದಿನಗಳು ಕಳೆದವು ಹರಿಯು ಕೊಕ್ಕರೆಯ ವಿಷಯವನ್ನೇ ಮರೆತುಬಿಟ್ಟನು. ಒಂದು ದಿನ ಸುಂದರಿಯಾದ ಹುಡುಗಿಯೊಬ್ಬಳು ಅವನಲ್ಲಿಗೆ ಬಂದು “ನನಗೆ ತಂದೆ-ತಾಯಿ ಇಲ್ಲ. ಮುಂದಿನ ಊರಿನಲ್ಲಿ ನನ್ನ ಚಿಕ್ಕಪ್ಪನು ಇದ್ದಾನಂತೆ, ಅವನನ್ನು ಹುಡುಕಿಕೊಂಡು ಹೊರಟಿದ್ದೇನೆ. ಇವತ್ತು ರಾತ್ರಿ ನಿಮ್ಮ ಮನೆಯಲ್ಲಿ ಇರಲು ಜಾಗ ಕೊಡ್ತೀರಾ?” ಎಂದು ಕೇಳಿದಳು. ಹುಡುಗಿ ರಾತ್ರಿಯ ಅಡುಗೆ ಮಾಡಲು ರೈತನ ವೃದ್ಧ ಹೆಂಡತಿಗೆ ನೆರವಾದಳು. ಮನೆಯನ್ನು ಗುಡಿಸಿ, ಸಾರಿಸಿ ಚೊಕ್ಕಟ ಮಾಡಿದಳು. ಮರುದಿನ ಆ ವೃದ್ಧ ದಂಪತಿಗಳು “ಹುಡುಗಿ, ನೀನು ನಮ್ಮಲ್ಲೇ ಇದ್ದುಬಿಡು, ನಮ್ಮ ಮಗಳ ಹಾಗೆ ನೋಡ್ಕೋತೇವೆ” ಎಂದರು. ಹುಡುಗಿಯು ಒಪ್ಪಿ ಅಲ್ಲಿಯೇ ಉಳಿದಳು. ಹರಿಗೆ ಅವಳಲ್ಲಿ ಪ್ರೀತಿ ಹುಟ್ಟಿತು. ಈ ವರ್ಷ ಮಳೆ ಬಾರದುದರಿಂದ ಕ್ಷಾಮ ಬಂತು. ರೈತ ದಂಪತಿಗಳು ಕಷ್ಟದಲ್ಲಿ ತೊಳಲಾಡುತ್ತಿದ್ದಾಗ ಹುಡುಗಿ ಅಂದಳು “ಮೂರು ದಿವಸ ನನ್ನನ್ನು ಒಂದು ಕೊಠಡಿಯಲ್ಲಿ ಬಿಡಿ, ಪೀತಾಂಬರ ನೇಯ್ದು ಕೊಡ್ತೀನಿ. ನೀವ್ಯಾರೂ ಒಳಗೆ ಬರಬಾರದು, ಊಟವನ್ನು ಬಾಗಿಲ ಬಳಿಯಿಟ್ಟರೆ ರಾತ್ರಿಯ ಹೊತ್ತು ಬಂದು ತಿನ್ನೋತೇನೆ”. ಅಂತೆಯೇ ಹುಡುಗಿ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಳು. ಅವಳ ಆದೇಶದ ಪ್ರಕಾರ ಯಾರೂ ಒಳಗೆ ಹೋಗಲಿಲ್ಲ. ಪ್ರತಿದಿನ ರಾತ್ರಿ ಬಾಗಿಲ ಬಳಿ ಅನ್ನಸಾರುಗಳ ತಟ್ಟೆಯನ್ನು ಇಡುತ್ತಿದ್ದ ಹರಿ, ಬೆಳಗಿದ್ದು ಖಾಲಿಯಾದ ತಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದನು. ಮೂರು ದಿನಗಳ ಬಳಿಕ ಹುಡುಗಿ ಹೊರಬಂದಾಗ ಅವಳ ಕೈಯಲ್ಲಿ ಪೀತಾಂಬರವಿತ್ತು. “ಇದನ್ನು ಶ್ರೀಮಂತ ವರ್ತಕನಿಗೆ ಮಾರಿ ಬನ್ನಿ” ಎಂದಳು ಹುಡುಗಿ. ಹರಿ ಅದನ್ನು ಮಾರಿ ಬಂದನು. ಪೀತಾಂಬರಕ್ಕೆ ನೂರಾರುವರಹಗಳು ಸಿಕ್ಕಿದವು. ಒಂದು ವರ್ಷ ಅವರೆಲ್ಲ ಸುಖವಾಗಿದ್ದರು. ಮರುವರ್ಷವೂ ಕ್ಷಾಮ ಬಂತು ಮತ್ತೆ ಹುಡುಗಿ, "ಮೂರು ದಿನ ಯಾರೂ ಒಳಗೆ ಬರಬೇಡಿ" ಎಂದು ಹೇಳಿ ಕೊಠಡಿಯ ಬಾಗಿಲು ಹಾಕಿಕೊಂಡಳು. ಒಂದು ದಿನ ಕಳೆಯಿತು, ಎರಡು ದಿನ ಕಳೆಯಿತು. ಹರಿ ಅವಳನ್ನು ನೋಡದೆ ಇರಲಾರದಾದನು. ಕೊಠಡಿಯೊಳಗೆ ಹುಡುಗಿಯನ್ನು ಕಂಡು ಅವಳಿಗೆ ತನ್ನ ಪ್ರೇಮದ ವಿಷಯವನ್ನು ಹೇಳಬೇಕು ಎಂದುಕೊಂಡನು. ಬಾಗಿಲನು ನೂಕಿ ಒಳಗೆ ಹೋದನು. ಆಶ್ಚರ್ಯ! ಅಲ್ಲಿ ಹುಡುಗಿ ಇರಲಿಲ್ಲ, ಚಿನ್ನ ಬೆಳ್ಳಿ ದಾರಗಳನ್ನು ಕೂಡಿಸಿ ಕೊಕ್ಕರೆಯೊಂದು ಪೀತಾಂಬರವನ್ನು ನೇಯುತ್ತಿತ್ತು. ಅದು ತಾನು ಕಾಪಾಡಿದ ಹಕ್ಕಿ ಎಂಬುದರಲ್ಲಿ ಹರಿಗೆ ಸಂಶಯವಿರಲಿಲ್ಲ. ಕೊಕ್ಕರೆ ಎಂದಿತು “ನಾನು ಬೇಡ ಎಂದು ಹೇಳಿದರೂ ನೀನ್ಯಾಕೆ ಒಳಗೆ ಬಂದೆ? ಈಗ ಎಲ್ಲಾ ಹಾಳಾಯಿತಲ್ಲಾ!” ಹರಿ ತಲೆತಗ್ಗಿಸಿ ನಿಂತನು. “ನಿಜ ಹುಡುಗಿಯಾಗಿದ್ದ ನಾನು ನೀನು ಕಾಪಾಡಿದ ಕೊಕ್ಕರೆಯೇ! ನಿನಗೆ ಉಪಕಾರ ಮಾಡಬೇಕೆಂದು ನಾನು ಹುಡುಗಿಯಾಗಿದ್ದೆ, ನೀನೀಗ ಒಳ ಬರದಿದ್ದರೆ ಪೀತಾಂಬರದೊಂದಿಗೆ ನಾನು ಹುಡುಗಿಯಾಗಿ ಹೊರಬಂದು ನಿನ್ನ ಹೆಂಡತಿಯಾಗ್ತಿದ್ದೆ, ನೀನು ಕೊಟ್ಟ ಮಾತಿಗೆ ತಪ್ಪಿದ್ದರಿಂದ ಇನ್ನು ನಾನು ಹುಡುಗಿಯಾಗುವಂತಿಲ್ಲ. ಹೋಗು, ಈಗ ಮುಗಿಯುತ್ತ ಬಂದಿರೋ ಪೀತಾಂಬರ ಮಾರು, ನಿಮ್ಮ ಜೀವಮಾನವಿಡಿ ಸಾಕಾಗುವಷ್ಟು ಹಣ ಸಿಗ್ತದೆ” ಎನ್ನುತ್ತಾ ಕೊಕ್ಕರೆ ಹಾರಿಹೋಯಿತು. **ಕೌಶಲ : ಮಾತನಾಡುವುದು.** **ಸಾಮರ್ಥ್ಯ : ಕೊಟ್ಟಿರುವ ವಿಷಯ ಕುರಿತು ನಿರರ್ಗಳವಾಗಿ ಚರ್ಚಿಸುವುದು.**

ಪದಗಳ ಅರ್ಥword meanings

KannadaPronunciationMeaning
ರಸಮೂಲಿಕೆಗಿಡಮೂಲಿಕೆ, ಔಷಧಿ; ಕೊಳ-ಸರೋವರ; ನೆರವು-ಸಹಾಯ; ವೃದ್ಧ-ವಯಸ್ಸಾದ; ಕ್ಷಾಮ-ಬರಗಾಲ; ಆದೇಶ-ಆಜ್ಞೆ; ವರಹ-ಚಿನ್ನದ ನಾಣ್ಯ; ನೇಯುವುದು-ತಯಾರಿಸು, ಹೆಣೆಯುವುದು; ಕರುಣಾಳು-ಕನಿಕರವುಳ್ಳವನು; ಪೀತಾಂಬರ-ರೇಷ್ಮೆಬಟ್ಟೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಹರಿಯ ಗುಣ ಎಂತಹದು?

    Answer

    ಹರಿಯು ಸದ್ಗುಣವುಳ್ಳವನು ಮತ್ತು ಕರುಣಾಳುವೂ ಆಗಿದ್ದನು.

  2. ೨. ಕೊಕ್ಕರೆಗೆ ಏನಾಗಿತ್ತು?

    Answer

    ಕೊಕ್ಕರೆಯ ಮೈಯೊಳಗೆ ಬಾಣವೊಂದು ಚುಚ್ಚಿಕೊಂಡು ಅದು ಹುಲ್ಲಿನ ಮೇಲೆ ಬಿದ್ದಿತ್ತು.

  3. ೩. ಹರಿಯು ಕೊಕ್ಕರೆಯನ್ನು ಹೇಗೆ ಉಪಚರಿಸಿದನು?

    Answer

    ಹರಿಯು ಕೊಕ್ಕರೆಯ ಮೈಯಿಂದ ಬಾಣವನ್ನು ಮೆಲ್ಲನೆ ಹೊರತೆಗೆದು ಗಾಯಕ್ಕೆ ರಸಮೂಲಿಕೆಯನ್ನು ಹಾಕಿದನು.

  4. ೪. ವೃದ್ಧ ತಂದೆ ತಾಯಿಗಳು ಹುಡುಗಿಗೆ ಏನು ಹೇಳಿದರು?

    Answer

    ವೃದ್ಧ ತಂದೆ ತಾಯಿಗಳು ಹುಡುಗಿಗೆ “ನೀನು ನಮ್ಮಲ್ಲೇ ಇದ್ದುಬಿಡು, ನಮ್ಮ ಮಗಳ ಹಾಗೆ ನೋಡ್ಕೋತೇವೆ” ಎಂದು ಹೇಳಿದರು.

  5. ೫. ಹರಿಗೆ ಪೀತಾಂಬರ ಮಾರಿದಾಗ ಬಂದ ಹಣವೆಷ್ಟು?

    Answer

    ಹರಿಗೆ ಪೀತಾಂಬರ ಮಾರಿದಾಗ ನೂರಾರುವರಹಗಳು ಸಿಕ್ಕಿದವು.

ಆ. ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯದಲ್ಲಿ ಉತ್ತರಿಸಿ.

  1. ೧. ಹುಡುಗಿ ಕೊಠಡಿಯೊಳಗೆ ಏನು ಮಾಡುತ್ತಿದ್ದಳು?

    Answer

    ಹುಡುಗಿ ಕೊಠಡಿಯೊಳಗೆ ಪೀತಾಂಬರ ನೇಯುತ್ತಿದ್ದಳು. ಮೊದಲ ಬಾರಿ ಅವಳು ಮೂರು ದಿನಗಳಲ್ಲಿ ಪೀತಾಂಬರ ನೇಯ್ದು ಹೊರಬಂದಳು. ಎರಡನೇ ಬಾರಿ ಅವಳು ಕೊಕ್ಕರೆಯ ರೂಪದಲ್ಲಿ ಚಿನ್ನ ಬೆಳ್ಳಿ ದಾರಗಳಿಂದ ಪೀತಾಂಬರ ನೇಯುತ್ತಿದ್ದಳು.

  2. ೨. ಹರಿಯು ಕೊಠಡಿಯೊಳಗೆ ಹೋದಾಗ ಉಂಟಾದ ಆಶ್ಚರ್ಯವೇನು?

    Answer

    ಹರಿಯು ಕೊಠಡಿಯೊಳಗೆ ಹೋದಾಗ ಅಲ್ಲಿ ಹುಡುಗಿ ಇರಲಿಲ್ಲ. ಅಲ್ಲಿ ಚಿನ್ನ ಬೆಳ್ಳಿ ದಾರಗಳನ್ನು ಕೂಡಿಸಿ ಒಂದು ಕೊಕ್ಕರೆ ಪೀತಾಂಬರ ನೇಯುತ್ತಿತ್ತು. ಆ ಕೊಕ್ಕರೆ ತಾನು ಮೊದಲು ಕಾಪಾಡಿದ ಹಕ್ಕಿ ಎಂದು ತಿಳಿದು ಹರಿಗೆ ಆಶ್ಚರ್ಯವಾಯಿತು.

ಇ. ಈ ಮಾತುಗಳ ಸಂದರ್ಭವನ್ನು ವಿವರಿಸಿರಿ.

  1. ೧. “ನಮ್ಮ ಮಗಳ ಹಾಗೆ ನೋಡ್ಕೋತೇವೆ.”

    Answer

    ಹುಡುಗಿ ರಾತ್ರಿಯ ಅಡುಗೆ ಮಾಡಿ, ಮನೆಯನ್ನು ಗುಡಿಸಿ ಸಾರಿಸಿ ಚೊಕ್ಕಟ ಮಾಡಿದ ನಂತರ, ವೃದ್ಧ ದಂಪತಿಗಳು ಅವಳನ್ನು ತಮ್ಮ ಮಗಳಂತೆ ನೋಡಿಕೊಳ್ಳುವುದಾಗಿ ಹೇಳಿ ಮನೆಯಲ್ಲೇ ಇರಲು ಕೇಳಿಕೊಂಡ ಸಂದರ್ಭದಲ್ಲಿ ಈ ಮಾತು ಬಂದಿತು.

  2. ೨. “ಶ್ರೀಮಂತ ವರ್ತಕರಿಗೆ ಮಾರಿ ಬನ್ನಿ.”

    Answer

    ಹುಡುಗಿ ಮೂರು ದಿನಗಳ ನಂತರ ಕೊಠಡಿಯಿಂದ ಹೊರಬಂದು ಪೀತಾಂಬರವನ್ನು ಕೊಟ್ಟಾಗ, ಅದನ್ನು ಶ್ರೀಮಂತ ವರ್ತಕನಿಗೆ ಮಾರಲು ಹರಿಗೆ ಹೇಳಿದ ಸಂದರ್ಭದಲ್ಲಿ ಈ ಮಾತು ಬಂದಿತು.

  3. ೩. “ನಾನು ನೀನು ಕಾಪಾಡಿದ ಕೊಕ್ಕರೆಯೇ!”

    Answer

    ಹರಿಯು ಕೊಠಡಿಯೊಳಗೆ ಹೋಗಿ ಕೊಕ್ಕರೆಯನ್ನು ನೋಡಿದಾಗ, ಆ ಕೊಕ್ಕರೆ ತಾನು ಹರಿಯು ಮೊದಲು ಕಾಪಾಡಿದ ಕೊಕ್ಕರೆಯೇ ಎಂದು ಹೇಳಿದ ಸಂದರ್ಭದಲ್ಲಿ ಈ ಮಾತು ಬಂದಿತು.

Interactive Lab

ರಸಮೂಲಿಕೆಗಿಡಮೂಲಿಕೆ, ಔಷಧಿ; ಕೊಳ-ಸರೋವರ; ನೆರವು-ಸಹಾಯ; ವೃದ್ಧ-ವಯಸ್ಸಾದ; ಕ್ಷಾಮ-ಬರಗಾಲ; ಆದೇಶ-ಆಜ್ಞೆ; ವರಹ-ಚಿನ್ನದ ನಾಣ್ಯ; ನೇಯುವುದು-ತಯಾರಿಸು, ಹೆಣೆಯುವುದು; ಕರುಣಾಳು-ಕನಿಕರವುಳ್ಳವನು; ಪೀತಾಂಬರ-ರೇಷ್ಮೆಬಟ್ಟೆ