CRECT Education

Class 6 Kannada Lesson 14: Unification of Karnataka | KTBS Savi Kannada – Practice & Quiz

Description

Practice & Play video for Lesson 14 (ಕರ್ನಾಟಕ ಏಕೀಕರಣ) from the Class 6 First Language Savi Kannada textbook — quizzes and vocabulary fun.

ಗದ್ಯ (prose) · ಸಮಿತಿ ರಚನೆ

ಪಠ್ಯFull text

ಮಕ್ಕಳೆಲ್ಲ ತರಗತಿ ಕೋಣೆಯಲ್ಲಿ ಕುಳಿತಿದ್ದಾರೆ. ರೇಡಿಯೋ ಸಿದ್ಧವಾಗಿದೆ. ಶಿಕ್ಷಕರು "ಮಕ್ಕಳೇ, ಇದೀಗ ರೇಡಿಯೋದಲ್ಲಿ ನಮ್ಮ ಕನ್ನಡನಾಡು ಹೇಗೆ ಉದಯವಾಯಿತು ಎಂಬುದರ ಬಗ್ಗೆ ಹಿರಿಯರೊಬ್ಬರು ಮಾತನಾಡುತ್ತಾರೆ. ಯಾರೂ ಗಲಾಟೆ ಮಾಡಬಾರದು. ಸುಮ್ಮನಿದ್ದು ಆಲಿಸಿರಿ. ಬಳಿಕ ನಿಮ್ಮ ಅನಿಸಿಕೆಗಳನ್ನು ಹೇಳಬಹುದು" ಎಂದು ರೇಡಿಯೋ ಕೀಲಿ ತಿರುಗಿಸಿದರು. ಸರಿಯಾದ ಸಮಯಕ್ಕೆ ರೇಡಿಯೋದಲ್ಲಿ "ಆಕಾಶವಾಣಿ, ಇದೀಗ ಮಕ್ಕಳ ಕಾರ್ಯಕ್ರಮ. ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ ಹಿರಿಯರೊಬ್ಬರು ತಮ್ಮ ಅನುಭವಗಳನ್ನು ನಿಮ್ಮ ಮುಂದೆ ಇದೀಗ ಪ್ರಸ್ತುತಪಡಿಸುತ್ತಾರೆ. ಆಲಿಸಿರಿ" ಎಂಬ ನುಡಿ ಹರಿದುಬಂತು. "ಪ್ರೀತಿಯ ಮುದ್ದು ಮಕ್ಕಳೇ, ನೀವೀಗ ಕರ್ನಾಟಕ ಏಕೀಕರಣದ ಬಗ್ಗೆ ಆಲಿಸಲು ಬಹಳ ಕುತೂಹಲಭರಿತರಾಗಿದ್ದೀರಿ, ಅಲ್ಲವೇ? ನಮ್ಮ ಕರ್ನಾಟಕದ ಕನ್ನಡ ಮಾತನಾಡುವ ಜನರೆಲ್ಲ ಒಂದೇ ಪ್ರದೇಶಕ್ಕೆ ಸೇರಬೇಕೆಂಬ ಇಚ್ಛೆ ನಮ್ಮೆಲ್ಲರದಾಗಿತ್ತು. ಇದು ನಮ್ಮದೇ ನೆಲ ಎಂದು ಹೇಳಿಕೊಳ್ಳಲು ಎಲ್ಲ ಕನ್ನಡಿಗರಿಗೆ ಅವಕಾಶವಿರಲಿಲ್ಲ. ಕಾರಣವೇನೆಂದರೆ ಮೈಸೂರು ಸಂಸ್ಥಾನ ಹೊರತುಪಡಿಸಿ ಉಳಿದ ಕನ್ನಡದ ಪ್ರದೇಶಗಳೆಲ್ಲ ಮುಂಬೈ, ಮದ್ರಾಸ್, ಕೊಡಗು ಮತ್ತು ಇತರ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು. ಆಗ ಬ್ರಿಟಿಷರ ಆಡಳಿತವಿತ್ತು. ಅವರ ಆಡಳಿತದಲ್ಲಿ ನಮಗೆ ಒಟ್ಟಾಗಲು ಅವಕಾಶವೇ ಇರಲಿಲ್ಲ. ನಮ್ಮ ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಎದುರಾಗಿತ್ತು. ಮಕ್ಕಳೇ, ನಮ್ಮ ಕನ್ನಡ, ಕರ್ನಾಟಕ ಸುಮಾರು ಎರಡುಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಹಲವು ಸಾಮ್ರಾಜ್ಯಗಳ ಆಳ್ವಿಕೆಯ ಅನಂತರ ಕನ್ನಡದ ಅಸ್ತಿತ್ವ ಮೈಸೂರು ಸಂಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ಆ ಸಂದರ್ಭದಲ್ಲಿ ಸಮಗ್ರ ಕನ್ನಡಕ್ಕಾಗಿ ಕೆಲವು ಮಹನೀಯರು ಹೋರಾಟ ನಡೆಸಿದರು. ಇಂಥವರಲ್ಲಿ ರಾ.ಹ.ದೇಶಪಾಂಡೆ, ರೊದ್ದ ಶ್ರೀನಿವಾಸ ರಾವ್, ಆಲೂರು ವೆಂಕಟರಾಯ, ಡೆಪ್ಯೂಟಿ ಚೆನ್ನಬಸಪ್ಪ ಮೊದಲಾದವರು ಅಗ್ರಗಣ್ಯರು. ಮಕ್ಕಳೇ, ಈ ಕನ್ನಡನಾಡು ಏಕೀಕರಣಗೊಳ್ಳಲು ಮತ್ತು ಬ್ರಿಟಿಷರ ವಿರುದ್ಧ ಹೋರಾಡಲು ಕನ್ನಡಿಗರಿಗೆ ಪ್ರೇರಣೆಯಾದ ಘಟನೆಯ ಬಗ್ಗೆ ಹೇಳುತ್ತೇನೆ. ಬ್ರಿಟಿಷರದ್ದು ಒಡೆದು ಆಳುವ ನೀತಿ. ಅದರಂತೆಯೇ ೧೯೦೫ರ ಆಗಸ್ಟ್ ೧೬ರಂದು ಬ್ರಿಟಿಷ್ ಸರ್ಕಾರ ಬಂಗಾಳ ರಾಜ್ಯ ವಿಭಜನೆಗೆ ಮುಂದಾಯಿತು. ಇದನ್ನು ಪ್ರತಿಭಟಿಸಿದ ಬಂಗಾಳಿಗಳು 'ವಂಗಭಂಗ' ಎನ್ನುವ ಬೃಹತ್ತಾದ ಚಳುವಳಿಯನ್ನು ನಡೆಸಿದರು. ಇದಕ್ಕೆ ಮಣಿದ ಸರ್ಕಾರ ೧೯೧೧ರಲ್ಲಿ ಪುನಃ ಬಂಗಾಳವನ್ನು ಒಂದು ಮಾಡಿತು. ನೋಡಿ ಮಕ್ಕಳೇ, ಈ ಘಟನೆಯಿಂದ ಪ್ರೇರಿತರಾಗಿ ಕನ್ನಡದ ಕಟ್ಟಾಳುಗಳು ಕನ್ನಡಿಗರನ್ನು ಒಂದು ಮಾಡುವ ಹೋರಾಟವನ್ನು ಪ್ರಾರಂಭಿಸಿದರು. ಇದಕ್ಕಾಗಿ ಕಾರ್ಯಪ್ರವೃತ್ತರಾದ ರಾ.ಹ.ದೇಶಪಾಂಡೆ ಹಾಗೂ ಸಮಾನ ಮನಸ್ಕ ಕನ್ನಡಿಗರು ಧಾರವಾಡದಲ್ಲಿ ೨೦-೦೭-೧೮೯೦ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. ಈ ಸಂಘವು ಕನ್ನಡದಲ್ಲಿ ಶಿಕ್ಷಣ, ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ ಹಾಗೂ ೧೮೯೬ರಲ್ಲಿ 'ವಾಗ್ಭೂಷಣ' ಎಂಬ ಮಾಸ ಪತ್ರಿಕೆಯನ್ನು ಆರಂಭಿಸಿತು. ಇದು ಕನ್ನಡಿಗರೆಲ್ಲ ಒಂದಾಗಲು ಪ್ರೇರಣೆ ನೀಡಿತು. ಇದೇ ಸಮಯದಲ್ಲಿ ಆಲೂರು ವೆಂಕಟರಾಯರು, ಗದಿಗೆಯ್ಯ ಹೊನ್ನಾಪುರಮಠ, ಕಡಪಾ ರಾಘವೇಂದ್ರರಾಯ ಮುಂತಾದವರು ಸೇರಿಕೊಂಡು ೧೯೧೬ರಲ್ಲಿ 'ಕರ್ನಾಟಕ ಸಭೆ' ಎಂಬ ಸಂಸ್ಥೆಯನ್ನು ಕಟ್ಟಿದರು. ಇದಕ್ಕೆ ರಾಜಕೀಯ ಬೆಂಬಲವೂ ಇತ್ತು. ಆ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಬಿರುಸಿನ ಚಳುವಳಿ ನಡೆಯುತ್ತಿತ್ತು. ಅದರ ನಡುವೆಯೂ ನಮ್ಮ ಕರ್ನಾಟಕ ಏಕೀಕರಣದ ಚಳುವಳಿಯು ಕಾವು ಪಡೆಯುತ್ತಿತ್ತು. ಈ ಹೋರಾಟದಲ್ಲಿ ನಾನೂ ಕೂಡ ಪಾಲ್ಗೊಂಡಿದ್ದೆ. ಮಕ್ಕಳೇ, ಕರ್ನಾಟಕ ವಿದ್ಯಾವರ್ಧಕ ಸಂಘ ಆಗ ಮುಂಬೈ ಪ್ರಾಂತ್ಯದ ಧಾರವಾಡದಲ್ಲಿ ಕೆಲಸ ಮಾಡುತ್ತಿತ್ತು. ದಕ್ಷಿಣ ಭಾಗದಲ್ಲಿ ಅಂದಿನ ಮೈಸೂರು ಸಂಸ್ಥಾನದ ಕೆಲವು ಹಿರಿಯರು, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರು ಕನ್ನಡದ ಬಗ್ಗೆ ಚಿಂತಿಸಿದರು. ೧೯೧೫ರಲ್ಲಿ 'ಕರ್ನಾಟಕ ಸಾಹಿತ್ಯ ಪರಿಷತ್ತು' ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. (ಇದರ ಹೆಸರು ೧೯೩೮ರಲ್ಲಿ 'ಕನ್ನಡ ಸಾಹಿತ್ಯ ಪರಿಷತ್ತು' ಎಂದು ಬದಲಾಯಿತು.) ಕನ್ನಡ ನಾಡು -ನುಡಿಯ ಬೆಳವಣಿಗೆ, ಸಂರಕ್ಷಣೆ ಮತ್ತು ಕರ್ನಾಟಕ ಏಕೀಕರಣವೇ ಸಾಹಿತ್ಯ ಪರಿಷತ್ತಿನ ಧೈಯೋದ್ದೇಶವಾಯಿತು. ಕನ್ನಡ ಗ್ರಂಥಗಳ ಪ್ರಕಟಣೆ, ಸಂಶೋಧನೆ, ನಿಘಂಟು ರಚನೆ ಮುಂತಾದ ಸವಾಲುಗಳನ್ನು ಗಟ್ಟಿತನದಿಂದ ಎದುರಿಸಿ ಕನ್ನಡಕ್ಕೊಂದು ನೆಲೆ ಕಲ್ಪಿಸುವಲ್ಲಿ ಸಾಹಿತ್ಯ ಪರಿಷತ್ತಿನ ಸಾಧನೆ ಅಗಾಧವಾದುದು. ಪರಭಾಷೆ ಹಾಗೂ ಸಂಸ್ಕೃತಿಯ ಕಬಂಧಬಾಹುವಿನಲ್ಲಿ ಸಿಕ್ಕಿದ್ದ ಜನಮನವನ್ನು ಒಗ್ಗೂಡಿಸಿ ಕನ್ನಡ ಮನ-ಮನೆ ಮುಟ್ಟಲು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಯಿತು. ಕನ್ನಡಿಗರನ್ನು ಒಂದುಗೂಡಿಸಿ ಕರ್ನಾಟಕದ ಏಕೀಕರಣಕ್ಕೆ ದನಿ ಎತ್ತುವ ಮೂಲಕ ಏಕೀಕರಣದ ಬೇಡಿಕೆಗೆ ವೇದಿಕೆ ಕಲ್ಪಿಸಿತು. ಮಕ್ಕಳೇ, ೧೯೨೪ರಲ್ಲಿ ಬೆಳಗಾವಿಗೆ ಮಹಾತ್ಮ ಗಾಂಧೀಜಿಯವರು ಆಗಮಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಧಿವೇಶನ ನಡೆಯಿತು. ದೇಶೀಯ ಭಾಷೆಗಳನ್ನು ಆಧರಿಸಿ ಪ್ರಾಂತ್ಯಗಳ ವಿಂಗಡಣೆ ಆಗಬೇಕು ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿತ್ತು. ಆಗ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರವ್ಯಾಪಿ ಆಂದೋಲನ ರೂಪಿಸುತ್ತಿದ್ದ ಕಾಂಗ್ರೆಸ್ ನಾಯಕರಲ್ಲಿಯೂ ಇದರ ಬಗ್ಗೆ ಒಮ್ಮತ ಮೂಡಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೂ ವಿಶೇಷ ಚಾಲನೆ ದೊರೆಯಿತು. ೨೫-೧೨-೧೯೨೪ರಂದು ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ 'ಕರ್ನಾಟಕ ಸಭೆ'ಯ ಮೊದಲ ಕಾರ್ಯಕ್ರಮ ನಡೆಯಿತು. ಅವತ್ತು ಅಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಎಂಬ ಗೀತೆಯನ್ನು ಮೊದಲಬಾರಿಗೆ ಹಾಡಲಾಯಿತು. ಈ ಸಭೆಯ ಪರಿಣಾಮವಾಗಿ ಮದ್ರಾಸ್ ಮತ್ತು ಮುಂಬೈ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಿತಗೊಂಡಿತು. ಮಕ್ಕಳೇ, ಕರ್ನಾಟಕ ಏಕೀಕರಣಕ್ಕೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಿಂದಲೂ ಬೆಂಬಲ ವ್ಯಕ್ತವಾಯಿತು. ಸಮಗ್ರ ಕರ್ನಾಟಕದ ಕನಸು ಹೊತ್ತ ಏಕೀಕರಣ ಚಳುವಳಿ ಕೆಲವು ವರ್ಷಗಳಲ್ಲಿ ಹೊಸ ರೂಪ ಪಡೆದುಕೊಂಡಿತು. ಹೋರಾಟಗಾರರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತು. ನಾಯಕರ ಸಂಖ್ಯೆಯೇ ನೂರಕ್ಕೂ ಮಿಕ್ಕಿತು. ಇದರ ಫಲವಾಗಿ ಮದ್ರಾಸ್ ಮತ್ತು ಮುಂಬೈ ಪ್ರಾಂತ್ಯಗಳಲ್ಲಿ ಚಳುವಳಿ ಬಿರುಸುಗೊಂಡಿತು. ಹೀಗೆ ಚಳುವಳಿ ಮುಂದುವರೆದಿತ್ತು. ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಅನಂತರ ಭಾರತ ಸರ್ಕಾರವು ಭಾಷಾವಾರು ಪ್ರಾಂತ್ಯಗಳ ರಚನೆಗೆ ನಿರ್ಧರಿಸಿತು. ಅದರಂತೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು ೧೯೫೬ರ ನವೆಂಬರ್ ೧ ರಂದು ಒಂದೇ ರಾಜ್ಯದ ಆಡಳಿತ ವ್ಯಾಪ್ತಿಗೆ ಬಂದರು. ಆಗ ಅದನ್ನು 'ಮೈಸೂರು ರಾಜ್ಯ' ಎಂದು ಕರೆಯಲಾಯಿತು. ಆದರೆ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ಆದ ಎಡವಟ್ಟುಗಳ ನಿಮಿತ್ತವಾಗಿ ಕನ್ನಡದ ಕೆಲವು ಭಾಗಗಳು ಈಗಲೂ ಹೊರಗಡೆಯೇ ಉಳಿದಿವೆ. ಮುಂದೆ ೧೯೭೩ರ ನವೆಂಬರ್ ೧ ರಂದು ಕನ್ನಡಿಗರೆಲ್ಲರ ಆಶಯದಂತೆ ಮೈಸೂರು ರಾಜ್ಯವು 'ಕರ್ನಾಟಕ ರಾಜ್ಯ' ಎಂಬ ಹೆಸರು ಪಡೆಯಿತು. ಮಕ್ಕಳೇ ಕೇಳಿದಿರಲ್ಲ, ನಾನು ನಿಮಗೆ ಸಂಕ್ಷಿಪ್ತವಾಗಿ ಇದರ ಕಥೆ ಹೇಳಿದ್ದೇನೆ. ನೀವು ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬೇಕು. ಕರ್ನಾಟಕ ಏಕೀಕರಣದ ಕನಸನ್ನು ನನಸು ಮಾಡಲು ಇನ್ನೂ ಅನೇಕ ಕಡೆ ಚಳುವಳಿಗಳು ನಡೆದಿವೆ. ಇದಕ್ಕಾಗಿ ಹೋರಾಡಿದ ಮಹಾತ್ಮರನ್ನು ನಾವು ನೆನೆಯಬೇಕು. ಅವರ ಹಾದಿಯಲ್ಲಿ ಸಾಗಿ ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಅಖಂಡವಾಗಿರಿಸಿಕೊಳ್ಳೋಣ ಮಕ್ಕಳೇ. ನಮಸ್ಕಾರ." (ರೇಡಿಯೋ ಕಾರ್ಯಕ್ರಮ ಮುಗಿದ ನಂತರ ಮಕ್ಕಳು ಶಿಕ್ಷಕರೊಂದಿಗೆ ಚರ್ಚೆ ನಡೆಸಿದರು.)

"ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು." — "Wherever you are, whatever you are, always be a Kannadiga." A reminder to carry your roots and identity with you everywhere.

ಪದಗಳ ಅರ್ಥword meanings

KannadaPronunciationMeaning
ಉದಯಹುಟ್ಟು, ಮೂಡು
ಆಕಾಶವಾಣಿರೇಡಿಯೋ, ಬಾನುಲಿ
ಪ್ರಸ್ತುತಪಡಿಸುಪ್ರಕಟಿಸು, ಸಾದರಪಡಿಸು
ಆಲಿಸುಕೇಳು
ಹೊರತುಪಡಿಸಿಬಿಟ್ಟು
ಕುತೂಹಲಅಚ್ಚರಿ, ವಿಸ್ಮಯ
ಸಂಸ್ಥಾನರಾಜ್ಯ, ದೇಶದ ಒಂದು ಭಾಗ
ಪರಕೀಯಬೇರೆಯ, ಹೊರಗಿನ, ಅನ್ಯ
ಅಸಹನೀಯಸಹಿಸಲು ಸಾಧ್ಯವಿಲ್ಲದ, ತಡೆಯಲಾಗದ
ಅಸ್ತಿತ್ವಇರುವಿಕೆ
ಅಗ್ರಗಣ್ಯಮೊಟ್ಟಮೊದಲಿನ, ಸರ್ವಶ್ರೇಷ್ಠ
ಪ್ರೇರಣೆಪ್ರಚೋದನೆ, ಮುಂದಕ್ಕೆ ಹೋಗುವಂತೆ ಉತ್ತೇಜಿಸುವಿಕೆ
ವಿಭಜನೆವಿಂಗಡಣೆ, ಬೇರ್ಪಡಿಸುವಿಕೆ
ಸಮಾನ ಮನಸ್ಕಒಂದೇ ಬಗೆಯಲ್ಲಿ ಯೋಚನೆ ಮಾಡುವವನು, ತನ್ನಂತೆಯೇ ಅಭಿಪ್ರಾಯ ಉಳ್ಳವನು
ಕಾರ್ಯಪ್ರವೃತ್ತಕೆಲಸ ಮಾಡಲು ಮುಂದಾಗು
ಧೈಯೋದ್ದೇಶಗುರಿ
ನಿಘಂಟುಶಬ್ದಕೋಶ, ಶಬ್ದಾರ್ಥ ಸಂಗ್ರಹ
ನೆಲೆಕಲ್ಪಿಸುವೇದಿಕೆ ಒದಗಿಸು, ಅವಕಾಶ ಮಾಡಿಕೊಡು
ಆಯೋಜಿಸುಏರ್ಪಾಡುಮಾಡು, ವ್ಯವಸ್ಥೆಗೊಳಿಸು
ಆಂದೋಲನಚಳುವಳಿ, ಕ್ರಾಂತಿ
ವ್ಯಾಪ್ತಿವಿಸ್ತಾರ, ಮಿತಿ
ಎಡವಟ್ಟುರೂಢಿಗೆ ವಿರೋಧವಾದುದು, ಉಚಿತವಲ್ಲದ್ದು, ಕ್ರಮತಪ್ಪಿದ್ದು
ಅಖಂಡಅವಿಚ್ಛಿನ್ನ, ಪೂರ್ಣ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಹೊಂದಿಸಿ ಬರೆಯಿರಿ.

  1. 'ಅ' | 'ಬ'

  2. ೧. ೧೮೯೦ | ಅ. ಕರ್ನಾಟಕ ರಾಜ್ಯ ಎಂಬ ಹೆಸರು ಬಂದಿದ್ದು

    Answer

    ೧. ೧೮೯೦ - ಇ. ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ

  3. ೨. ೧೯೧೫ | ಆ. ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆ

    Answer

    ೨. ೧೯೧೫ - ಆ. ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆ

  4. ೩. ೧೯೧೬ | ಇ. ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ

    Answer

    ೩. ೧೯೧೬ - ಈ. ಕರ್ನಾಟಕ ಸಭೆ ಸಂಸ್ಥೆ ಪ್ರಾರಂಭ

  5. ೪. ೧೯೫೬ | ಈ. ಕರ್ನಾಟಕ ಸಭೆ ಸಂಸ್ಥೆ ಪ್ರಾರಂಭ

    Answer

    ೪. ೧೯೫೬ - ಉ. ಮೈಸೂರು ರಾಜ್ಯ ಉದಯ

  6. ೫. ೧೯೭೩ | ಉ. ಮೈಸೂರು ರಾಜ್ಯ ಉದಯ

    Answer

    ೫. ೧೯೭೩ - ಅ. ಕರ್ನಾಟಕ ರಾಜ್ಯ ಎಂಬ ಹೆಸರು ಬಂದಿದ್ದು

ಆ. ಕೆಳಗಿನ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.

  1. ೧. ಹೋರಾಟ

    Model sentence

    ಹೋರಾಟ: ಕ್ರಿಕೆಟ್ ಪಂದ್ಯದಲ್ಲಿ ನಮ್ಮ ತಂಡ ಕೊನೆಯವರೆಗೂ ಹೋರಾಟ ನಡೆಸಿತು.

  2. ೨. ಸವಾಲು

    Model sentence

    ಸವಾಲು: ಲೆಕ್ಕದ ಸಮಸ್ಯೆಯನ್ನು ಬಿಡಿಸುವುದು ನನಗೆ ದೊಡ್ಡ ಸವಾಲಾಗಿತ್ತು.

  3. ೩. ಕಲ್ಪಿಸು

    Model sentence

    ಕಲ್ಪಿಸು: ಶಿಕ್ಷಕರು ನಮಗೆ ಆಟವಾಡಲು ವಿಶೇಷ ಅವಕಾಶ ಕಲ್ಪಿಸಿದರು.

  4. ೪. ಅಗ್ರಗಣ್ಯ

    Model sentence

    ಅಗ್ರಗಣ್ಯ: ನಮ್ಮ ಶಾಲೆಯಲ್ಲಿ ರಮೇಶ ಓಟದ ಸ್ಪರ್ಧೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದ.

  5. ೫. ಪ್ರತಿಭೆ

    Model sentence

    ಪ್ರತಿಭೆ: ನನ್ನ ಅಕ್ಕನಿಗೆ ಚೆನ್ನಾಗಿ ಚಿತ್ರ ಬಿಡಿಸುವ ಪ್ರತಿಭೆ ಇದೆ.

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ರೇಡಿಯೋದಲ್ಲಿ ಯಾವ ನುಡಿ ಹರಿದು ಬಂತು?

    Answer

    ರೇಡಿಯೋದಲ್ಲಿ "ಆಕಾಶವಾಣಿ, ಇದೀಗ ಮಕ್ಕಳ ಕಾರ್ಯಕ್ರಮ. ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ ಹಿರಿಯರೊಬ್ಬರು ತಮ್ಮ ಅನುಭವಗಳನ್ನು ಪ್ರಸ್ತುತಪಡಿಸುತ್ತಾರೆ" ಎಂಬ ನುಡಿ ಹರಿದುಬಂತು.

  2. ೨. ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ. ಯಾಕೆ?

    Answer

    ಬ್ರಿಟಿಷರ ಆಡಳಿತದಲ್ಲಿ ಮೈಸೂರು ಸಂಸ್ಥಾನ ಹೊರತುಪಡಿಸಿ ಉಳಿದ ಕನ್ನಡ ಪ್ರದೇಶಗಳು ಮುಂಬೈ, ಮದ್ರಾಸ್, ಕೊಡಗು ಮುಂತಾದ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದರಿಂದ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ.

  3. ೩. ಕನ್ನಡದ ಪರವಾಗಿ ಹೋರಾಟ ಮಾಡಿದವರಲ್ಲಿ ಕೆಲವರ ಹೆಸರು ತಿಳಿಸಿರಿ.

    Answer

    ಕನ್ನಡದ ಪರವಾಗಿ ಹೋರಾಟ ಮಾಡಿದವರಲ್ಲಿ ರಾ.ಹ.ದೇಶಪಾಂಡೆ, ರೊದ್ದ ಶ್ರೀನಿವಾಸ ರಾವ್, ಆಲೂರು ವೆಂಕಟರಾಯ, ಡೆಪ್ಯೂಟಿ ಚೆನ್ನಬಸಪ್ಪ ಮೊದಲಾದವರು ಪ್ರಮುಖರು.

  4. ೪. ವಂಗಭಂಗ ಚಳುವಳಿಯನ್ನು ಯಾರು ನಡೆಸಿದರು?

    Answer

    ವಂಗಭಂಗ ಚಳುವಳಿಯನ್ನು ಬಂಗಾಳಿಗಳು ನಡೆಸಿದರು.

  5. ೫. ವಿದ್ಯಾವರ್ಧಕ ಸಂಘದ ಕೆಲಸವೇನಾಗಿತ್ತು?

    Answer

    ವಿದ್ಯಾವರ್ಧಕ ಸಂಘವು ಕನ್ನಡದಲ್ಲಿ ಶಿಕ್ಷಣ, ಸ್ವತಂತ್ರ ಕೃತಿಗಳ ರಚನೆ, ಮತ್ತು 'ವಾಗ್ಭೂಷಣ' ಎಂಬ ಮಾಸ ಪತ್ರಿಕೆಯನ್ನು ಆರಂಭಿಸಿತು.

  6. ೬. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಯಾವಾಗ ಬಂದಿತು?

    Answer

    ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ೧೯೭೩ರ ನವೆಂಬರ್ ೧ ರಂದು ಬಂದಿತು.

ಈ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಕನ್ನಡನಾಡು ಏಕೀಕರಣಗೊಳ್ಳಲು ಕನ್ನಡಿಗರಿಗೆ ಪ್ರೇರಣೆಯಾದ ಘಟನೆ ಯಾವುದು?

    Answer

    ಕನ್ನಡನಾಡು ಏಕೀಕರಣಗೊಳ್ಳಲು ಕನ್ನಡಿಗರಿಗೆ ಪ್ರೇರಣೆಯಾದ ಘಟನೆ 'ವಂಗಭಂಗ' ಚಳುವಳಿ. ೧೯೦೫ರಲ್ಲಿ ಬ್ರಿಟಿಷರು ಬಂಗಾಳವನ್ನು ವಿಭಜಿಸಿದಾಗ, ಬಂಗಾಳಿಗಳು ನಡೆಸಿದ ಈ ಚಳುವಳಿಯಿಂದ ಪ್ರೇರಿತರಾಗಿ ಕನ್ನಡಿಗರು ಏಕೀಕರಣದ ಹೋರಾಟವನ್ನು ಪ್ರಾರಂಭಿಸಿದರು.

  2. ೨. 'ಕನ್ನಡ ಸಾಹಿತ್ಯ ಪರಿಷತ್ತು' ಕರ್ನಾಟಕ ಏಕೀಕರಣದ ಬೇಡಿಕೆಗೆ ವೇದಿಕೆ ಕಲ್ಪಿಸಿದ್ದು ಹೇಗೆ?

    Answer

    ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಕನ್ನಡಿಗರನ್ನು ಒಂದುಗೂಡಿಸಿತು. ಅದು ಕರ್ನಾಟಕ ಏಕೀಕರಣಕ್ಕೆ ದನಿ ಎತ್ತುವ ಮೂಲಕ ಏಕೀಕರಣದ ಬೇಡಿಕೆಗೆ ವೇದಿಕೆ ಕಲ್ಪಿಸಿತು.

  3. ೩. ಕರ್ನಾಟಕ ಸಭೆಯ ಮೊದಲ ಕಾರ್ಯಕ್ರಮದಲ್ಲಿ ಏನೆಲ್ಲಾ ಘಟನೆಗಳು ನಡೆದವು?

    Answer

    ಕರ್ನಾಟಕ ಸಭೆಯ ಮೊದಲ ಕಾರ್ಯಕ್ರಮವು ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಎಂಬ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು.

ಉ. ಕೆಳಗಿನ ಪ್ರಶ್ನೆಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಬಂಗಾಳದಲ್ಲಿ ನಡೆದ 'ವಂಗ ಭಂಗ' ಚಳುವಳಿಯ ಬಗ್ಗೆ ಬರೆಯಿರಿ?

    Answer

    ಬ್ರಿಟಿಷರದ್ದು ಒಡೆದು ಆಳುವ ನೀತಿಯಾಗಿತ್ತು. ೧೯೦೫ರ ಆಗಸ್ಟ್ ೧೬ರಂದು ಬ್ರಿಟಿಷ್ ಸರ್ಕಾರ ಬಂಗಾಳ ರಾಜ್ಯವನ್ನು ವಿಭಜನೆ ಮಾಡಲು ಮುಂದಾಯಿತು. ಇದನ್ನು ಪ್ರತಿಭಟಿಸಿ ಬಂಗಾಳಿಗಳು 'ವಂಗಭಂಗ' ಎಂಬ ಬೃಹತ್ ಚಳುವಳಿಯನ್ನು ನಡೆಸಿದರು. ಈ ಚಳುವಳಿಯು ತೀವ್ರವಾಗಿ ನಡೆದು, ಅದಕ್ಕೆ ಮಣಿದ ಸರ್ಕಾರ ೧೯೧೧ರಲ್ಲಿ ಬಂಗಾಳವನ್ನು ಪುನಃ ಒಂದುಗೂಡಿಸಿತು. ಈ ಘಟನೆಯು ಕನ್ನಡಿಗರಿಗೆ ಕರ್ನಾಟಕ ಏಕೀಕರಣದ ಹೋರಾಟಕ್ಕೆ ಪ್ರೇರಣೆಯಾಯಿತು.

ಊ. ಕೆಳಗಿನ ಪರಿಚ್ಛೇದವನ್ನು ಓದಿ ಪ್ರಶ್ನೆಗಳಿಗೆ ಉತ್ತರಿಸಿರಿ.

  1. ಭಾರತದ ಜನಮಾನಸದಲ್ಲಿ ಇಂದಿಗೂ ಮುಕ್ಕಾಗದೇ ಇರುವವರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ವ್ಯಕ್ತಿತ್ವವೂ ಒಂದು. ಕಡುಬಡತನದ ಮನೆಯಲ್ಲಿ ಜನಿಸಿದ ಅವರು ರಾಷ್ಟ್ರದ ಉನ್ನತ ಹುದ್ದೆಯಾದ ಪ್ರಧಾನಿ ಪದವಿಗೇರಿದರು. ಅಧಿಕಾರಾವಧಿಯಲ್ಲಿ ಸ್ವಂತಕ್ಕೊಂದು ಮನೆ ಮಾಡಿಕೊಳ್ಳಲಿಲ್ಲ. ರಾಷ್ಟ್ರದ ಜನತೆಗೆ ಅವರ ಮೇಲೆ ಅಪಾರ ವಿಶ್ವಾಸವಿತ್ತು.

  2. ಲಾಲ್ ಬಹಾದ್ದೂರ್ ಶಾಸ್ತ್ರಿಗಳು ೧೯೦೪ ಅಕ್ಟೋಬರ್ ೨ರಂದು ವಾರಣಾಸಿ ಹತ್ತಿರದ ಮೊಗಲ್‌ಸರಾಯಿಯಲ್ಲಿ ಶಾರದಾ ಪ್ರಸಾದ, ರಾಮದುಲಾರಿ ದೇವಿಯವರ ಮಗನಾಗಿ ಜನಿಸಿದರು.

  3. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ತಂದೆ ತೀರಿಕೊಂಡರು. ತಾಯಿಯ ಆರೈಕೆಯಲ್ಲಿ ಅಜ್ಜನ ಮನೆಯಲ್ಲಿ ಬೆಳೆದರು. ವಿದ್ಯಾರ್ಥಿಯಾಗಿದ್ದಾಗ ಸ್ನೇಹಿತರೊಂದಿಗೆ ಜಾತ್ರೆಗೆ ಹೋಗಿದ್ದರು. ಹಿಂತಿರುಗಿ ಬರುವಾಗ ದೋಣಿ ದಾಟಿಸುವವನಿಗೆ ಕೊಡಲು ಹಣವಿರಲಿಲ್ಲ. ಗೆಳೆಯರಲ್ಲಿ ಕೈಚಾಚಲು ಮನಸ್ಸಿರಲಿಲ್ಲ. ಗಂಗಾನದಿಯನ್ನು ದಾಟಲೇಬೇಕು ಆಗ ಏನು ಮಾಡಿದರು ಗೊತ್ತೇ? ಗೆಳೆಯರ ಬಳಿ ತಡವಾಗಿ ಬರುವೆನೆಂದು ಹೇಳಿ ಸಂಜೆಯಾಗುತ್ತಿದ್ದಂತೆ ತುಂಬಿ ಹರಿಯುತ್ತಿದ್ದ ಗಂಗಾ ನದಿಯಲ್ಲಿ ಧುಮುಕಿ ಈಜಿ ಮನೆ ಸೇರಿದರು. ಜೀವನದ ಕೊನೆಯುಸಿರಿರುವವರೆಗೂ ಯಾರ ಬಳಿಯೂ ಕೈಚಾಚಲಿಲ್ಲ ನಮ್ಮ ಲಾಲ್ ಬಹಾದ್ದೂರ್ ಶಾಸ್ತ್ರಿಗಳು.

೧. ಪ್ರಶ್ನೆಗಳಿಗೆ ಉತ್ತರಿಸಿರಿ.

  1. ಅ. ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಯಾವ ಉನ್ನತ ಪದವಿಗೇರಿದರು?

    Answer

    ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರಧಾನಿ ಪದವಿಗೇರಿದರು.

  2. ಆ. ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಎಲ್ಲಿ, ಯಾವಾಗ ಜನಿಸಿದರು?

    Answer

    ಲಾಲ್ ಬಹಾದ್ದೂರ್ ಶಾಸ್ತ್ರಿಯವರು ೧೯೦೪ ಅಕ್ಟೋಬರ್ ೨ರಂದು ವಾರಣಾಸಿ ಹತ್ತಿರದ ಮೊಗಲ್‌ಸರಾಯಿಯಲ್ಲಿ ಜನಿಸಿದರು.

  3. ಇ. ತಂದೆ ತೀರಿಕೊಂಡ ಬಳಿಕ ಶಾಸ್ತ್ರಿಯವರು ಹೇಗೆ ಬೆಳೆದರು?

    Answer

    ತಂದೆ ತೀರಿಕೊಂಡ ಬಳಿಕ ಶಾಸ್ತ್ರಿಯವರು ತಾಯಿಯ ಆರೈಕೆಯಲ್ಲಿ ಅಜ್ಜನ ಮನೆಯಲ್ಲಿ ಬೆಳೆದರು.

  4. ಈ. 'ಅಕ್ಟೋಬರ್ ೨' ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮದಿನ. ಅವರ ಹೆಸರೇನು?

  5. ಉ. ದೋಣಿ ದಾಟಿಸುವವನಿಗೆ ಕೊಡಲು ಹಣವಿಲ್ಲದಾಗ ಶಾಸ್ತ್ರಿ ಏನು ಮಾಡಿದರು?

    Answer

    ದೋಣಿ ದಾಟಿಸುವವನಿಗೆ ಕೊಡಲು ಹಣವಿಲ್ಲದಾಗ ಶಾಸ್ತ್ರಿಯವರು ಗಂಗಾ ನದಿಯಲ್ಲಿ ಈಜಿ ದಾಟಿ ಮನೆ ಸೇರಿದರು.

ಋ. ದೂರದರ್ಶನ ವೀಕ್ಷಣೆಯ ಸಾಧಕ ಬಾಧಕಗಳ ಬಗ್ಗೆ ಒಂದು ಚಿಕ್ಕ ಪ್ರಬಂಧ ಬರೆಯಿರಿ.

Interactive Lab

ಉದಯಹುಟ್ಟು, ಮೂಡು
ಆಕಾಶವಾಣಿರೇಡಿಯೋ, ಬಾನುಲಿ
ಪ್ರಸ್ತುತಪಡಿಸುಪ್ರಕಟಿಸು, ಸಾದರಪಡಿಸು
ಆಲಿಸುಕೇಳು
ಹೊರತುಪಡಿಸಿಬಿಟ್ಟು
ಕುತೂಹಲಅಚ್ಚರಿ, ವಿಸ್ಮಯ
ಸಂಸ್ಥಾನರಾಜ್ಯ, ದೇಶದ ಒಂದು ಭಾಗ
ಪರಕೀಯಬೇರೆಯ, ಹೊರಗಿನ, ಅನ್ಯ
ಅಸಹನೀಯಸಹಿಸಲು ಸಾಧ್ಯವಿಲ್ಲದ, ತಡೆಯಲಾಗದ
ಅಸ್ತಿತ್ವಇರುವಿಕೆ
ಅಗ್ರಗಣ್ಯಮೊಟ್ಟಮೊದಲಿನ, ಸರ್ವಶ್ರೇಷ್ಠ
ಪ್ರೇರಣೆಪ್ರಚೋದನೆ, ಮುಂದಕ್ಕೆ ಹೋಗುವಂತೆ ಉತ್ತೇಜಿಸುವಿಕೆ
ವಿಭಜನೆವಿಂಗಡಣೆ, ಬೇರ್ಪಡಿಸುವಿಕೆ
ಸಮಾನ ಮನಸ್ಕಒಂದೇ ಬಗೆಯಲ್ಲಿ ಯೋಚನೆ ಮಾಡುವವನು, ತನ್ನಂತೆಯೇ ಅಭಿಪ್ರಾಯ ಉಳ್ಳವನು
ಕಾರ್ಯಪ್ರವೃತ್ತಕೆಲಸ ಮಾಡಲು ಮುಂದಾಗು
ಧೈಯೋದ್ದೇಶಗುರಿ
ನಿಘಂಟುಶಬ್ದಕೋಶ, ಶಬ್ದಾರ್ಥ ಸಂಗ್ರಹ
ನೆಲೆಕಲ್ಪಿಸುವೇದಿಕೆ ಒದಗಿಸು, ಅವಕಾಶ ಮಾಡಿಕೊಡು
ಆಯೋಜಿಸುಏರ್ಪಾಡುಮಾಡು, ವ್ಯವಸ್ಥೆಗೊಳಿಸು
ಆಂದೋಲನಚಳುವಳಿ, ಕ್ರಾಂತಿ
ವ್ಯಾಪ್ತಿವಿಸ್ತಾರ, ಮಿತಿ
ಎಡವಟ್ಟುರೂಢಿಗೆ ವಿರೋಧವಾದುದು, ಉಚಿತವಲ್ಲದ್ದು, ಕ್ರಮತಪ್ಪಿದ್ದು
ಅಖಂಡಅವಿಚ್ಛಿನ್ನ, ಪೂರ್ಣ