CRECT Education

Class 6 Kannada Lesson 19: Deep Darkness and Ghosts | KTBS First Language – Learn the Story

Description

Part 1 of the story: Viji's journey from fear of darkness to love for the night, with key vocabulary.

ಗದ್ಯ (prose) · ವಿಜಯಶ್ರೀ ಹಾಲಾಡಿ (Vijayashree Haladi)

ಪಠ್ಯFull text

ವಿಜಿಯ ಕಲ್ಪನೆಯಲ್ಲಿ ಕತ್ತಲೆಂದರೆ ಗುಮ್ಮ; ಗುಮ್ಮ ಎಂದರೆ ಕತ್ತಲು. ಅವಳು ತೀರಾ ಸಣ್ಣವಳಿರುವಾಗ ಅಕ್ಕಂದಿರು, ಅಣ್ಣ "ಗುಮ್ಮನ ಚಿತ್ರ ಬಿಡಿಸು" ಎಂದರೆ ದೊಡ್ಡ ಕಣ್ಣು ಬಿಡಿಸಿ, ಮುಸುಕುಧಾರಿ ವೇಷವನ್ನು ಬರೆಯುತ್ತಿದ್ದಳು. ಗುಮ್ಮನಿಗೆ ಅದರ ಗೊಗ್ಗರು ಗಂಟಲ ತರಹವೇ ಭಯಾನಕ ಕಣ್ಣು, ದೇಹ ಇರುತ್ತದೆ ಎನ್ನುವುದು ಅವಳ ತಿಳಿವಳಿಕೆಯಾಗಿತ್ತು. 'ಗುಮ್ಮ' ಎಂದರೆ ಗೂಬೆ ಎನ್ನುವ ಒಂದು ಹಕ್ಕಿ ಎಂದು ಅವಳಿಗೆ ಗೊತ್ತಿರಲೇ ಇಲ್ಲ! ಕ್ರಮೇಣ ದೊಡ್ಡವಳಾದ ನಂತರವೇ ಆ ಸತ್ಯಸಂಗತಿ ಅವಳಿಗೆ ಅರಿವಾದದ್ದು. ಅವಳು ಚಿಕ್ಕವಳಿದ್ದಾಗ ಹಾಲು ಕುಡಿಯದಿದ್ದರೆ, ಊಟ ಮಾಡದಿದ್ದರೆ "ಗುಮ್ಮ ಬರುತ್ತದೆ ಬೇಗ ಬೇಗ ತಿನ್ನು" ಎಂದು ಹೆದರಿಸುವುದನ್ನು ಕೇಳಿ ಮತ್ತು ಅವರ ಮನೆಯ ಹತ್ತಿರವೇ ಮಳೆಗಾಲದ ರಾತ್ರಿಗಳಲ್ಲಿ ಗುಮ್ಮಗಳು 'ಊಂ ಹೂಂ' ಎಂದು ಸತತವಾಗಿ ಕೂಗುವುದು ಕೇಳಿ ಗುಮ್ಮನ ಕುರಿತು ಭೀತಿಯೊಂದು ಅವಳೊಳಗೆ ಇಳಿದಿತ್ತು. ನಿಜವಾದ "ಕತ್ತಲು" ಎಂದರೆ ಏನೆಂದು ಹಳ್ಳಿಯಲ್ಲಿ ಬೆಳೆದ ಮಕ್ಕಳಿಗೆ ಚೆನ್ನಾಗಿ ಗೊತ್ತಿರುತ್ತದೆ. ವಿದ್ಯುತ್ತೇ ಇಲ್ಲದ ಊರಿನಲ್ಲಿ ಸುತ್ತಲೂ ದಟ್ಟ ಕಾಡು - ಗದ್ದೆ, ತೋಟ ಹೊಂದಿದ ಹಳ್ಳಿಮನೆಯಲ್ಲಿ ಬೆಳೆದವಳು ವಿಜಿ. ಮನೆಯೊಳಗೆ ಉರಿಯುವ ಚಿಮಣಿ ದೀಪ ಬಿಟ್ಟರೆ ಹೊರಗೆಲ್ಲ ದಟ್ಟ ಕತ್ತಲು. ಆ ಕತ್ತಲು ಹೇಗೆಂದರೆ ಜಗವೆಲ್ಲವೂ ಮಸಿಯಲ್ಲಿ ಅದ್ದಿಟ್ಟಂತೆ! ಕಣ್ಣಿಗೆ ಕಣ್ಣು ತಾಗಿಸಿದರೂ ಕತ್ತಲಲ್ಲದೆ ಬೇರೇನೂ ಕಾಣುವುದಿಲ್ಲ. ಅದರಲ್ಲೂ ಮೋಡಗಳು ತುಂಬಿದ ಮಳೆಗಾಲ ಮತ್ತು ಅಮಾವಾಸ್ಯೆಯ ಸಂದರ್ಭದಲ್ಲಿ ಕತ್ತಲು ಮತ್ತಷ್ಟು ಕಟುವಾಗಿರುತ್ತದೆ. ಹುಣ್ಣಿಮೆ ಮತ್ತು ಅದರ ಆಸುಪಾಸಿನ ದಿನಗಳಲ್ಲಿ; ಅದರಲ್ಲೂ ಬೇಸಿಗೆಯ ಸಮಯದಲ್ಲಾದರೆ ಒಳ್ಳೆ ತಿಂಗಳ ಬೆಳಕು ಚೆಲ್ಲಿಕೊಂಡು ಹೊರಗಿನ ಗದ್ದೆ, ಗಿಡಮರಗಳು ಕಾಣುತ್ತಿರುತ್ತವೆ. ಮಳೆಗಾಲದಲ್ಲಿ ಕೆಲವೊಮ್ಮೆ ಹಗಲಲ್ಲೇ ಪದರ ಪದರ ಮೋಡಗಳು ಕವುಚಿಕೊಂಡು ಕತ್ತಲಾಗಿಬಿಡುವ ಸನ್ನಿವೇಶವಂತೂ ಒಂಥರಾ ನಿಗೂಢ ಭಾವವನ್ನು ಬಿತ್ತುತ್ತದೆ. ಸಂಜೆಯಾದೊಡನೆ ಚಿಮಣಿದೀಪಗಳು, ಒಂದೆರಡು ಲ್ಯಾಂಪುಗಳನ್ನು, ದೇವರ ದೀಪವನ್ನು ಹಚ್ಚಿಬಿಡುತ್ತಿದ್ದರು. ಉಪ್ಪರಿಗೆಗೋ, ಕೋಣೆಗೋ, ಬಚ್ಚಲುಮನೆಗೋ, ಬಾವಿಕಟ್ಟೆಗೋ, ಕೊಟ್ಟಿಗೆಗೋ ಹೋಗಬೇಕಾದರೆ ಚಿಮಣಿಯನ್ನೂ ಜೊತೆಗೆ ತೆಗೆದುಕೊಂಡು ಹೋಗಬೇಕಿತ್ತು. ತೋಟ ಅಥವಾ ದೂರ ಎಲ್ಲಾದರೂ ಹೋಗುವುದಿದ್ದರೆ ಮಾತ್ರ ಬ್ಯಾಟರಿಯನ್ನು ಬಳಸುತ್ತಿದ್ದರು. ಅದರಲ್ಲೂ ಎಲ್ಲರ ಮನೆಯಲ್ಲಿ ಬ್ಯಾಟರಿ ಇರಲಿಲ್ಲ. ಹೆಚ್ಚಿನವರು ದೂರದ ಪ್ರಯಾಣಕ್ಕೆ ಸೂಡಿಯನ್ನು ಬಳಸುತ್ತಿದ್ದರು. ಸೂಡಿಯನ್ನು ತೆಂಗು, ಅಡಿಕೆಯ ಗರಿಗಳಲ್ಲಿ ತಯಾರಿಸಲಾಗುತ್ತಿತ್ತು. ಗರಿಗಳನ್ನು ಕಡಿದು ಒಟ್ಟುಗೂಡಿಸಿ ಅಲ್ಲಲ್ಲಿ ಬಲವಾಗಿ ಬಾಳೆನಾರಿನಿಂದ ಕಟ್ಟಿ ಸೂಡಿ ತಯಾರಿಸುತ್ತಿದ್ದರು. ಮಾರುದ್ದ ಇರುತ್ತಿದ್ದ ಈ ಸೂಡಿಯ ತುದಿಗೆ ಬೆಂಕಿ ಹಚ್ಚಿಕೊಂಡರೆ ಅದನ್ನು ಬೀಸುತ್ತಾ ಸುಮಾರು ಮೈಲಿಗಟ್ಟಲೆ ಆ ಬೆಳಕಲ್ಲಿ ನಡೆಯಬಹುದಿತ್ತು! ಆಗಲ್ಲ ಮನೆಯೊಳಗೆ ಬಹುತೇಕ ಕತ್ತಲು. ಹಾಗಾಗಿಯೋ ಏನೋ, ರಾತ್ರಿ ಎಂಟು ಗಂಟೆಗೆಲ್ಲ ನಿದ್ದೆ ಬರುವ ಹಾಗಾಗುತ್ತಿತ್ತು. ವಿಜಿ ಮತ್ತು ಅವಳ ಅಜ್ಜಿ ಪ್ರತಿ ರಾತ್ರಿಯೂ ಮಲಗುತ್ತಿದ್ದುದು ಸರಿಯಾಗಿ ಒಂಬತ್ತು ಗಂಟೆಗೆ. ಇನ್ನೇನು ಗಡಿಯಾರ ಒಂಬತ್ತು ಹೊಡೆಯುವುದರಲ್ಲಿ ಅಜ್ಜಿಯ ಪಕ್ಕ ಹಾಸಿಗೆಯಲ್ಲಿ ಮಲಗಿಬಿಡುತ್ತಿದ್ದಳು. ಇಲ್ಲವಾದರೆ ಅಜ್ಜಿಗೆ ಸಿಟ್ಟುಬರುತ್ತಿತ್ತು. ಬೆಳಿಗ್ಗೆ ಕೂಡಾ ಅಷ್ಟೇ; ಆರು ಗಂಟೆಗೆಲ್ಲ ಎದ್ದುಬಿಡುತ್ತಿದ್ದರು. ಅದಕ್ಕಿಂತ ಜಾಸ್ತಿ ಹೊತ್ತು ಅವರ ಮನೆಯಲ್ಲಿ ಯಾರೂ ಮಲಗುತ್ತಿರಲಿಲ್ಲ. ಅಜ್ಜಿ ಹೇಳುತ್ತಿದ್ದರು... ಒಂದು ಸಲ ದಟ್ಟ ಕತ್ತಲಿನ ಅಮಾವಾಸ್ಯೆಯ ರಾತ್ರಿಯಲ್ಲಿ ಒಂದು ಗುಮ್ಮ ಮನೆ ಎದುರಿನ ತೆಂಗಿನಮರದಲ್ಲೇ ಕುಳಿತು ಕೂಗಲು ಶುರುಮಾಡಿತಂತೆ. ಆಗ ಮನೆಯಲ್ಲಿದ್ದದ್ದು ಅಜ್ಜಿಯೊಬ್ಬರೇ. 'ಈ ಗುಮ್ಮ ಮನೆಯ ಮೇಲೇ ಬಂದು ಕುಳಿತು ಕೂಗಿದರೆ...?' ಎಂದು ಯೋಚಿಸಿ ಅಜ್ಜಿಗೆ ಭಯವಾಯಿತು. ಹಾಗೆ ಮನೆ ಮೇಲೆ ಗುಮ್ಮ ಬಂದು ಕುಳಿತರೆ ಅದು ಅಪಶಕುನ ಎಂಬುದು ನಂಬಿಕೆ. ಆ ಗುಮ್ಮನನ್ನು ಓಡಿಸಿಬಿಡುವ ಎಂದರೆ ಆ ಕತ್ತಲಲ್ಲಿ ಅದು ಅಸಾಧ್ಯ. ಕೊನೆಗೆ ಗಟ್ಟಿ ನಿರ್ಧಾರ ಮಾಡಿದರಂತೆ; 'ಬೇಕಾದರೆ ಆ ಗುಮ್ಮ ಮನೆ ಮಾಡಿನ ಮೇಲೇ ಕುಳಿತು ಕೂಗಲಿ, ತಾನೇನೂ ಹೆದರುವುದಿಲ್ಲ... ಅಪಶಕುನ ಮುಂತಾದುವೆಲ್ಲ ಸುಳ್ಳು, ನಮ್ಮ ನಡೆನುಡಿ ಸರಿಯಿದ್ದರೆ, ಒಳ್ಳೆತನವಿದ್ದರೆ ಯಾವ ಕೆಟ್ಟದ್ದೂ ಘಟಿಸುವುದಿಲ್ಲ' ಎಂದು ಧೈರ್ಯ ಮಾಡಿ ರಾತ್ರಿ ಕಳೆದರಂತೆ. ಇದನ್ನು ಕೇಳಿದಾಗ ವಿಜಿಗೆ ಪಕ್ಕದ ತೋಟದಲ್ಲಿ ಗುಮ್ಮ ಕೂಗಿದರೇ ಇಷ್ಟು ಭಯಾನಕವಾಗಿ ಕೇಳಿಸುತ್ತದೆ. ಇನ್ನು ಮನೆ ಮೇಲೆ ಕುಳಿತು ಕೂಗಿದರೆ ಏನು ಮಾಡುವುದಪ್ಪಾ ಎಂದು ಚಿಂತೆಯಾಯಿತು. ಅವಳಿಗೆ ತಡವಾಗಿ ತಿಳಿದ ಇನ್ನೊಂದು ಸ್ವಾರಸ್ಯದ ವಿಷಯವೆಂದರೆ ಆಚೆಮನೆ ದೊಡ್ಡಮ್ಮನೇ ಕೆಲವೊಮ್ಮೆ ಗುಮ್ಮನಾಗುತ್ತಿದ್ದರು ಎಂಬುದು! ವಿಜಿ ಅತ್ತು ಹಟ ಮಾಡಿದಾಗೆಲ್ಲ ಆಚೆಮನೆ ದೊಡ್ಡಮ್ಮ ಅವರ ಮನೆಯಿಂದಲೇ "ಮಕ್ಕಳು ಹಟ ಮಾಡಿದರೆ ಗುಮ್ಮ ಬರುತ್ತದೆ ಈಗ" ಎನ್ನುತ್ತಿದ್ದರು. ಅವರು ಹಾಗೆ ಹೇಳಿದ ತುಸು ಹೊತ್ತಿಗೇ ಗುಮ್ಮಗಳು ಕೂಗುತ್ತಿದ್ದವು. ವಿಜಿ ಹೆದರಿಕೊಂಡು ಮುಸುಕು ಹಾಕಿ ಮಲಗಿ ಅಲ್ಲೇ ನಿದ್ದೆ ಹೋಗುತ್ತಿದ್ದಳು. ಕೆಲವೊಮ್ಮೆ ದೊಡ್ಡಮ್ಮನೇ ಗುಮ್ಮನ ಹಾಗೆ "ಊಂ, ಹೂಂ" ಕೂಗುತ್ತಿದ್ದರು ಎಂದು ಸ್ವಲ್ಪ ದೊಡ್ಡವಳಾದ ಮೇಲೆ ವಿಜಿಗೆ ಸತ್ಯ ತಿಳಿಯಿತು! ಸ್ವಲ್ಪ ಬೆಳೆದು ದೊಡ್ಡವಳಾಗಿ ಗುಮ್ಮನ ಹೆದರಿಕೆ ದೂರಾದ ನಂತರ ಕಗ್ಗತ್ತಲ ರಾತ್ರಿಗಳಲ್ಲಿ ಎಲ್ಲಿಗಾದರೂ ಹೋಗುವುದು ವಿಜಿಗೆ ಇಷ್ಟವಾಗತೊಡಗಿತು. ಅಮ್ಮ, ದೊಡ್ಡಮ್ಮ, ವಿಜಿ, ತಂಗಿ ನೀಲಿಮಾ ಕೆಲವೊಮ್ಮೆ ಯಕ್ಷಗಾನಗಳಿಗೆ ಹೋಗುವುದುಂಟು. ಅಕ್ಕಂದಿರು ಮನೆಗೆ ಬಂದಾಗಲೂ ಹೀಗೆ ರಾತ್ರಿ ಯಕ್ಷಗಾನಕ್ಕೆ ಹೋಗುತ್ತಿದ್ದರು. ಆಗಿನ ಖುಷಿ ವರ್ಣಿಸಲು ಅಸಾಧ್ಯ. ಆ ನೀರವ ರಾತ್ರಿಯಲ್ಲಿ ಬ್ಯಾಟರಿ ಹಿಡಿದು ಕಾಡುಗಳಲ್ಲಿ ನಡೆದುಹೋಗುವಾಗ ಕಾಡಿನ ಗಾಳಿಯನ್ನು ಹೀರಿಕೊಳ್ಳುತ್ತಿದ್ದಳು ವಿಜಿ. ಹಾಗೆ ಯಕ್ಷಗಾನಕ್ಕೆ ಹೋಗುವಾಗ 'ಅವತ್ತಿನ ಯಕ್ಷಗಾನ ಹೇಗಿರಬಹುದು?' ಎಂದು ಚರ್ಚೆಯಾದರೆ, ವಾಪಸ್ಸು ಬರುವಾಗ ನೋಡಿದ ಯಕ್ಷಗಾನದ ಕುರಿತು ವಿಮರ್ಶೆಗಳು, ಟೀಕೆ ಟಿಪ್ಪಣಿಗಳು ಇರುತ್ತಿದ್ದವು. ಕಾಡು ಮತ್ತು ಕತ್ತಲು ವಿಜಿಯನ್ನು ಹೆದರಿಸಲಿಲ್ಲ. ಅದೇ ವಾತಾವರಣದಲ್ಲಿ ಬಾಲ್ಯದಿಂದಲೂ ಬೆಳೆದಿದ್ದರಿಂದ ತೋಟದ ತನಕ ಕತ್ತಲಲ್ಲಿ ಒಬ್ಬಳೇ ಬ್ಯಾಟರಿ ಹಿಡಿದು ಹೋಗಿ ಬರುವ ಧೈರ್ಯ ಬೆಳೆಸಿಕೊಂಡಳು. ಒಂಬತ್ತನೆ ತರಗತಿಗೆ ಬಂದಾಗ ಅವಳು ರಾತ್ರಿ ಒಬ್ಬಳೇ ಉಪ್ಪರಿಗೆಯಲ್ಲಿ ಮಲಗುತ್ತಿದ್ದಳು. ನಿದ್ದೆ ಬರುವವರೇಗೆ ಕತ್ತಲನ್ನು ದಿಟ್ಟಿಸುತ್ತಾ ಮಲಗುವುದು ಅವಳ ಅಭ್ಯಾಸವಾಗಿತ್ತು. ಹೀಗೆ ಗಾಢಕತ್ತಲು, ರಾತ್ರಿ ಮತ್ತು ಮಳೆ ಇವೆಲ್ಲ ಅವಳಿಗೆ ಸದಾ ಇಷ್ಟವಾಗಿ ಹೋಯಿತು. ಮಳೆಗಾಲದ ರಾತ್ರಿಗಳಂತೂ ವಿಜಿ - ನೀಲಿಮಾಗೆ ತುಂಬಾ ಇಷ್ಟ. ರಾತ್ರಿ ಮಲಗುವ ಹೊತ್ತಲ್ಲಿ ಅವರಿಬ್ಬರೂ "ಜೋರಾಗಿ ಮಳೆ ಬರಲಿ ದೇವರೇ" ಎಂದು ಪ್ರಾರ್ಥಿಸುತ್ತಿದ್ದರು. ಏಕೆಂದರೆ ಜೋಗುಳದಂತೆ ಸುರಿಯುವ ಆ ಮಳೆಗೆ ಒಳ್ಳೆ ಗಡದ್ದಾಗಿ ನಿದ್ದೆ ಬರುತ್ತಿತ್ತು. ಅದೂ ಅಲ್ಲದೆ ಮಳೆಯ ಸದ್ದನ್ನು ಕೇಳಿಸಿಕೊಳ್ಳುತ್ತಾ ಮಲಗುವುದೇ ಒಂದು ದೊಡ್ಡ ಸಂಭ್ರಮವಾಗಿತ್ತು ಆ ಮಕ್ಕಳಿಗೆ!

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

  1. ೧. ವಿಜಿಗೆ ಗುಮ್ಮಗಳ ಬಗ್ಗೆ ಭಯ ಹುಟ್ಟಿದ್ದೇಕೆ?

    Answer

    ವಿಜಿ ಚಿಕ್ಕವಳಿದ್ದಾಗ ಹಾಲು ಅಥವಾ ಊಟ ಮಾಡದಿದ್ದರೆ 'ಗುಮ್ಮ ಬರುತ್ತದೆ' ಎಂದು ಹೆದರಿಸುವುದನ್ನು ಕೇಳಿ ಮತ್ತು ಮಳೆಗಾಲದ ರಾತ್ರಿಗಳಲ್ಲಿ ಗುಮ್ಮಗಳು 'ಊಂ ಹೂಂ' ಎಂದು ಕೂಗುವುದನ್ನು ಕೇಳಿ ಅವಳಿಗೆ ಗುಮ್ಮಗಳ ಬಗ್ಗೆ ಭಯ ಹುಟ್ಟಿತು.

  2. ೨. ಹಳ್ಳಿಯಲ್ಲಿ ರಾತ್ರಿಯ ಕತ್ತಲು ಹೇಗಿರುತ್ತದೆ?

    Answer

    ಹಳ್ಳಿಯಲ್ಲಿ ರಾತ್ರಿಯ ಕತ್ತಲು ಜಗವೆಲ್ಲವೂ ಮಸಿಯಲ್ಲಿ ಅದ್ದಿಟ್ಟಂತೆ ದಟ್ಟವಾಗಿರುತ್ತದೆ. ಕಣ್ಣಿಗೆ ಕಣ್ಣು ತಾಗಿಸಿದರೂ ಕತ್ತಲಲ್ಲದೆ ಬೇರೇನೂ ಕಾಣುವುದಿಲ್ಲ.

  3. ೩. ರಾತ್ರಿಯ ಕತ್ತಲಿನಲ್ಲಿ ಬೆಳಕು ಹುಟ್ಟಿಸಿಕೊಳ್ಳಲು ಹಳ್ಳಿಗರು ಏನೇನು ಉಪಾಯಗಳನ್ನು ಮಾಡುತ್ತಾರೆ?

    Answer

    ರಾತ್ರಿಯ ಕತ್ತಲಿನಲ್ಲಿ ಬೆಳಕು ಹುಟ್ಟಿಸಿಕೊಳ್ಳಲು ಹಳ್ಳಿಗರು ಚಿಮಣಿದೀಪ, ಲ್ಯಾಂಪು, ಬ್ಯಾಟರಿ ಮತ್ತು ಸೂಡಿಯನ್ನು ಬಳಸುತ್ತಿದ್ದರು.

  4. ೪. ಯಕ್ಷಗಾನ ನೋಡಲು ಹೋಗಿಬರುವ ರಾತ್ರಿಗಳ ಅನುಭವಗಳೇನು?

    Answer

    ಯಕ್ಷಗಾನ ನೋಡಲು ಹೋಗುವಾಗ ಅದು ಹೇಗಿರಬಹುದು ಎಂದು ಚರ್ಚೆಯಾಗುತ್ತಿತ್ತು. ವಾಪಸ್ಸು ಬರುವಾಗ ನೋಡಿದ ಯಕ್ಷಗಾನದ ಕುರಿತು ವಿಮರ್ಶೆಗಳು ಮತ್ತು ಟೀಕೆ ಟಿಪ್ಪಣಿಗಳು ಇರುತ್ತಿದ್ದವು.

  5. ೫. ವಿಜಿ ಕತ್ತಲಿನ ಭಯವನ್ನು ಹೇಗೆ ಗೆದ್ದಳು?

    Answer

    ವಿಜಿ ಬಾಲ್ಯದಿಂದಲೂ ಕಾಡು ಮತ್ತು ಕತ್ತಲಿನ ವಾತಾವರಣದಲ್ಲಿ ಬೆಳೆದಿದ್ದರಿಂದ ಕತ್ತಲಲ್ಲಿ ಒಬ್ಬಳೇ ಬ್ಯಾಟರಿ ಹಿಡಿದು ತೋಟದ ತನಕ ಹೋಗಿ ಬರುವ ಧೈರ್ಯ ಬೆಳೆಸಿಕೊಂಡಳು. ಹೀಗೆ ಅವಳು ಕತ್ತಲಿನ ಭಯವನ್ನು ಗೆದ್ದಳು.

Interactive Lab