ಪದ್ಯ · ಸಂಪಾದಿತ
ಪಠ್ಯFull text
ಈ ಭೂಮಂಡಲದ ಮಧ್ಯದಲ್ಲಿ, ಹಸಿರು ವನಗಳಿಂದ ಕೂಡಿದ ಸುಂದರ ನಾಡು ಕರ್ನಾಟಕ. ಈ ನಾಡಿನಲ್ಲಿ ಕಾಳಿಂಗನೆಂಬ ಗೊಲ್ಲನು ದನಗಳನ್ನು ಕಾಯುತ್ತಿದ್ದನು. ಪ್ರತಿದಿನ ಎಳೆಯ ಮಾವಿನ ಮರದ ಕೆಳಗೆ ಕುಳಿತು ಕೊಳಲನೂದಿ ಹಸುಗಳನ್ನು ಹೀಗೆ ಕರೆಯುತ್ತಿದ್ದನು.
ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು.
ಗೊಲ್ಲನ ಕೊಳಲ ಗಾನವನ್ನು ಕೇಳಿ ಎಲ್ಲ ಹಸುಗಳು ಬರುತ್ತಿದ್ದವು. ಅವನು ಅವುಗಳ ಹಾಲು ಕರೆಯುತ್ತಿದ್ದನು. ಅನಂತರ ಹಸುಗಳನ್ನು ಮೇಯಿಸಲು ಅಡವಿಯ ಬೆಟ್ಟ ಪ್ರದೇಶಕ್ಕೆ ತೆರಳುತ್ತಿದ್ದನು. ಗೋವುಗಳು ಹುಲ್ಲು ಮೇಯ್ದು ಸಂಜೆ ಮನೆಗೆ ಮರಳುತ್ತಿದ್ದವು. ಗೊಲ್ಲನು ಆ ಹಸುಗಳನ್ನು ದೊಡ್ಡಿಯೊಳಗೆ ಕಟ್ಟುತ್ತಿದ್ದನು.
ಆ ಬೆಟ್ಟ ಪ್ರದೇಶದಲ್ಲಿ ಅರ್ಬುದನೆಂಬ ಹುಲಿ ವಾಸವಾಗಿತ್ತು. ಒಮ್ಮೆ ಏಳು ದಿನವಾದರೂ ಅದಕ್ಕೆ ಆಹಾರ ದೊರೆಯಲಿಲ್ಲ. ಅದು ತನ್ನ ಗವಿಯ ಬಾಗಿಲಲ್ಲಿ ನಿಂತು ಕಾಯುತ್ತಿತ್ತು. ಹಸುಗಳ ಗಂಟೆಯ ಸದ್ದು ಕೇಳಿ ಎಚ್ಚರವಾಯಿತು. ಗುಡುಗು ಸಿಡಿಲಿನಂತೆ ರಭಸದಿಂದ ಬಂದಿತು. ಹಸುಗಳ ಮೇಲೆ ಬಿದ್ದಿತು. ಹಸುಗಳು ಹೆದರಿ ಓಡಿದವು. ಹುಲಿ ತನಗೆ ಆಹಾರ ಸಿಗಲಿಲ್ಲವೆಂದು ಹಲ್ಲು ಕಡಿಯಿತು.
ಅದೇ ಸಮಯಕ್ಕೆ ಸರಿಯಾಗಿ ಪುಣ್ಯಕೋಟಿ ಎಂಬ ಹಸು ತನ್ನ ಕಂದನನ್ನು ನೆನೆದು ಮೆಲ್ಲಮೆಲ್ಲನೆ ಬರುತ್ತಿತ್ತು. ಹುಲಿ ಪುಣ್ಯಕೋಟಿಯನ್ನು ಅಡ್ಡಗಟ್ಟಿ ನಿಂತಿತು. ನಿನ್ನನ್ನು ತಿಂದುಬಿಡುವೆ ಎಂದು ಹೇಳಿತು.
ಪುಣ್ಯಕೋಟಿಯು ವಿನಯದಿಂದ ದೊಡ್ಡಿಯಲಿರುವ ತನ್ನ ಕಂದನಿಗೆ ಹಾಲುಣಿಸಿ ಬರುವೆನೆಂದು ಹುಲಿಗೆ ಹೇಳಿತು. ಹಸಿದ ವೇಳೆಯಲ್ಲಿ ಸಿಕ್ಕಿರುವ ಆಹಾರವನ್ನು ಬಿಡುವುದು ಮೂರ್ಖತನ, ಅಲ್ಲದೆ ಜಗತ್ತಿನಲ್ಲಿ ಹುಲಿಗೆ ಆಹಾರವಾಗಲು ಯಾರಾದರೂ ಬರುತ್ತಾರೆಯೇ? ಎಂದು ಗಹಗಹಿಸಿತು. ಆಗ ಆ ಹಸು ದೈನ್ಯದಿಂದ ಹೀಗೆ ಹೇಳಿತು.
ಸತ್ಯವೇ ನಮ್ಮ ತಾಯಿತಂದೆ
ಸತ್ಯವೇ ನಮ್ಮ ಬಂಧುಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.
ಎಂದು ಹಸು ಹೇಳಿತು. ಹಸು ಹೇಳುವ ರೀತಿಯಿಂದ ಹುಲಿಗೂ ಕರುಣೆ ಬಂದಿತು. ಹಸುವಿಗೆ ಹೋಗಿ ಬರಲು ಅನುಮತಿ ಕೊಟ್ಟಿತು. ಪುಣ್ಯಕೋಟಿ ತನ್ನ ಕಂದನಿಗೆ ಹಾಲುಣಿಸಿತು. ಹುಲಿಗೆ ಆಹಾರವಾಗಿ ಹೋಗುವ ವಿಚಾರ ಕರುವಿಗೆ ತಿಳಿಸಿತು. ಆಗ ಕರು ತಾಯಿಯನ್ನು ತಬ್ಬಿಕೊಂಡು ಹೀಗೆ ಗೋಳಾಡಿತು.
ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು
ಪುಣ್ಯಕೋಟಿ ತಾನು ಕೊಟ್ಟ ಭಾಷೆಗೆ ತಪ್ಪಲಾರೆನು, ಬೇರೆ ಯಾವ ಯೋಚನೆಯನ್ನು ಮಾಡಲಾರೆನು. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಆ ಭಗವಂತನು ಮೆಚ್ಚುವುದಿಲ್ಲ ಎಂದು ಕರುವನ್ನು ತಬ್ಬಿ ಕಣ್ಣೀರಿಟ್ಟಿತು. ಇತರ ಹಸುಗಳಿಗೆ ಕರುವಿನ ರಕ್ಷಣೆಯನ್ನು ವಹಿಸಿ ಈ ರೀತಿ ಮೊರೆಯಿಟ್ಟಿತು.
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು.
ಪುಣ್ಯಕೋಟಿ ಕಡೆಯ ಬಾರಿ ತನ್ನ ಕಂದನನ್ನು ತಬ್ಬಿಕೊಂಡಿತು. ನಂತರ ಬೇಗ ಬೇಗ ಹುಲಿಯ ಗವಿಯ ಬಾಗಿಲೊಳು ಬಂದು ನಿಂತು
ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ಉಂಡು ಸಂತಸದಿಂದಿರು.
ಕೊಟ್ಟ ಮಾತಿಗೆ ತಪ್ಪದೆ, ಹಿಂತಿರುಗಿ ಬಂದ ಹಸುವನ್ನು ಕಂಡು, ಹುಲಿಗೆ ಆಶ್ಚರ್ಯವಾಯಿತು. ಅದು ಮರಳಿ ಬರುವುದೆಂಬ ನಿರೀಕ್ಷೆ ಹುಲಿಗೆ ಇರಲಿಲ್ಲ. ಹಸುವಿನ ನಿಷ್ಠೆ, ಪ್ರಾಮಾಣಿಕತೆಯನ್ನು ಕಂಡ ಹುಲಿ ಈ ರೀತಿ ನುಡಿಯಿತು.
ನನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನ ಪಡೆವೆನು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು.
ಎಂದು ಹುಲಿ ಬೆಟ್ಟದಿಂದ ಹಾರಿ ನೆಗೆದು ತನ್ನ ಪ್ರಾಣ ಬಿಟ್ಟಿತು.
* * * * *