CRECT Education

Class 6 Kannada Lesson 11: Undaunted Brave Hearts | KTBS Second Language – Learn the Story

Description

Walk through the inspiring stories of Julio Iglesias and Malathi Holla from the KTBS Class 6 Kannada Second Language textbook. Learn key vocabulary and hear the original Kannada text.

ಗದ್ಯ (prose) · ಎಂ.ಎನ್. ಸುಂದರರಾಜ್

ಪಠ್ಯFull text

**ಪಾಠ ಪ್ರವೇಶ :** ಪ್ರತಿಯೊಬ್ಬ ಮನುಷ್ಯನ ಜೀವನ ಬೆಲೆ ಬಾಳುವಂತಹದು. ಜೀವನದಲ್ಲಿ ಕಷ್ಟ, ಅಪಾಯ ತೊಂದರೆಗಳು ಬರುವುದು ಸಹಜ. ಅದಕ್ಕೆ ಧೈರ್ಯಗೆಡದೆ ವಿಚಾರ ಮಾಡಬೇಕು. ಸಮಯಪ್ರಜ್ಞೆ ಬಳಸಬೇಕು. ಜಾಣ್ಮೆಯನ್ನು ಪ್ರದರ್ಶಿಸಿ ಕಷ್ಟದಿಂದ ಹೊರಬರಬೇಕು. ಅದುವೇ ಜೀವನ. ಬಸ್ ಅಪಘಾತದಲ್ಲಿ ಸುಧಾಚಂದ್ರನ್ ಎಂಬ ಹುಡುಗಿ ಕಾಲು ಕಳೆದುಕೊಂಡಳು. ಧೈರ್ಯಗೆಡದೆ ಕೃತಕ ಕಾಲು ಹಾಕಿಸಿಕೊಂಡಳು. ನೃತ್ಯ ಮಾಡಿದಳು. ಸಾಹಸ ಮೆರೆದಳು. ಅವಳ ಮಯೂರಿ ನೃತ್ಯ ಜನಪ್ರಿಯತೆ ಹಾಗೂ ಅಪಾರಕೀರ್ತಿ ತಂದುಕೊಟ್ಟಿತು. ನನಗೆ ಕಾಲಿಲ್ಲವೆಂದು ಅವಳು ಕುಳಿತಿದ್ದರೆ, ಅವಳ ಬದುಕು ಅವಳಿಗೆ ಹೊರೆಯಾಗುತ್ತಿತ್ತು. ಆದ್ದರಿಂದ ಜೀವನದಲ್ಲಿ ಎಂತಹ ತೊಂದರೆಗಳು ಬಂದರೂ ಎದೆಗುಂದದೆ ಧೈರ್ಯದಿಂದ ಮುನ್ನುಗ್ಗಬೇಕು. ಅಂತಹ ಎದೆಗುಂದದ ಧೀರರ ಪರಿಚಯ ಇಲ್ಲಿದೆ. **೧. ಜೂಲಿಯೋ ಇಗ್ಲೇಶಿಯಸ್:** (Illustration: ಜೂಲಿಯೋ ಇಗ್ಲೇಶಿಯಸ್ - A man in a wheelchair playing a guitar) ಸ್ಪೇನ್ ದೇಶದ ಬಾಲಕ ಜೂಲಿಯೋ ಇಗ್ಲೇಶಿಯಸ್. ತನ್ನ ಹತ್ತನೆಯ ವಯಸ್ಸಿನಲ್ಲಿಯೇ ಫುಟ್‌ಬಾಲ್ ಆಟಗಾರನಾಗುವ ಕನಸು ಕಂಡನು. ದಿನದ ಹೆಚ್ಚಿನ ಭಾಗವನ್ನು ಫುಟ್‌ಬಾಲ್ ಆಡುವುದರಲ್ಲಿಯೇ ಕಳೆದನು. ತಾನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಬೇಕೆಂಬ ಆಸೆ. ದೇಶಕ್ಕೆ ಕೀರ್ತಿ ತರಬೇಕೆಂಬ ಹಂಬಲ. ಅದಕ್ಕಾಗಿ 'ರಿಯಲ್ ಮ್ಯಾಡ್ರಿಡ್ ಕ್ಲಬ್' ಸೇರಿದ. ನಿರಂತರ ಅಭ್ಯಾಸ ಮಾಡಿದ. ತನ್ನ ಇಪ್ಪತ್ತನೆಯ ವಯಸ್ಸಿಗೆ ಉತ್ತಮ ಗೋಲ್ ಕೀಪರ್ ಎಂಬ ಖ್ಯಾತಿ ಪಡೆದನು. ರಾಷ್ಟ್ರಮಟ್ಟಕ್ಕೆ ಬೆಳೆದನು. ಆದರೆ ೧೯೬೩ ರಲ್ಲಿ ಸ್ನೇಹಿತರ ಜೊತೆ ಕಾರಿನಲ್ಲಿ ಹೋಗುವಾಗ ಭೀಕರ ಅಪಘಾತಕ್ಕೆ ಒಳಗಾದ. ಆಸ್ಪತ್ರೆ ಸೇರಿದ. ಅಲ್ಲಿ ಚಿಕಿತ್ಸೆಯೇನೋ ನಡೆಯಿತು. ಆದರೆ ಸೊಂಟದ ಕೆಳಭಾಗ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿತು. ಇದರಿಂದ ವಿಶ್ವದ ಗೋಲ್‌ಕೀಪರನಾಗುವ ಅವನ ಕನಸು ನುಚ್ಚುನೂರಾಯಿತು. ಜೂಲಿಯೋ ಗುಣಮುಖನಾಗಲು ತುಂಬ ದಿನಗಳು ಬೇಕಾದವು. ಇದರಿಂದ ಅವನಲ್ಲಿ ದುಃಖ, ಕೋಪ ಮನೆಮಾಡಿತು. ಮನನೊಂದನು. ನೋವು ಮರೆಯಲು ಹಾಡುಗಳನ್ನು ಬರೆದು ತಾನೇ ಹಾಡತೊಡಗಿದ. ಅವನ ಇಂಪಾದ ಧ್ವನಿ ಗಮನಿಸಿದ ದಾದಿಯೊಬ್ಬಳು ಗಿಟಾರೊಂದನ್ನು ತಂದು ಕೊಟ್ಟಳು. ಅವನೆಂದೂ ಅದುವರೆಗೆ ಗಿಟಾರನ್ನು ಮುಟ್ಟಿರಲಿಲ್ಲ. ಆದರೂ ಗಿಟಾರನ್ನು ನುಡಿಸುತ್ತ ಹಾಡತೊಡಗಿದ. ಹೀಗೆ ೧೮ ತಿಂಗಳು ಆಸ್ಪತ್ರೆಯಲ್ಲಿ ಕಳೆದನು. ಈಗ ಜೂಲಿಯೋ ಹಾಡುವುದರಲ್ಲಿ ಮತ್ತು ಗಿಟಾರ್ ನುಡಿಸುವುದರಲ್ಲಿ ಪರಿಣತಿ ಪಡೆದನು. ಅದು ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ತಾನೇ ಹಾಡುಗಳನ್ನು ಬರೆದ. ಹಾಡಿನಲ್ಲಿ ತಲ್ಲೀನನಾದ. “ಜೀವನ ಹೀಗೆ ಸಾಗುತ್ತಿದೆ” ಎಂಬ ಹೆಸರಿನ ಹಾಡುಗಳ ಆಲ್ಬಂಗಳನ್ನು ಹೊರತಂದನು. ಅದು ವಿಶ್ವಾದ್ಯಂತ ಜನಪ್ರಿಯವಾಗಿ ೩೦೦ ಮಿಲಿಯನ್ ಆಲ್ಬಂಗಳು ಮಾರಾಟವಾದವು. ವಿಶ್ವದ ಹತ್ತು ಪ್ರಮುಖ ಗಾಯಕರಲ್ಲಿ ಜೂಲಿಯೋ ಸಹ ಒಬ್ಬನಾದನು. ಅವನು ಈಗ ಶ್ರೇಷ್ಠ ಕಲಾವಿದನಾಗಿ ಕೋಟ್ಯಂತರ ಸಂಗೀತ ಪ್ರೇಮಿಗಳ ಕಣ್ಮಣಿಯಾದನು. ಜೀವನದಲ್ಲಿ ವಿಫಲತೆಯಿಂದ ಎದೆಗುಂದಬಾರದು. ಅದೃಷ್ಟದ ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ದಾರಿ ತೆರೆದುಕೊಳ್ಳುತ್ತದೆ ಎಂದು ಹೇಳಿದನು. ಅದಕ್ಕೆ ಅವನ ಜೀವನವೇ ಸಾಕ್ಷಿ. * * * * * **೨. ಮಾಲತಿ ಹೊಳ್ಳ :** – ಸಂಪಾದಿತ (Illustration: A woman smiling in a wheelchair - ಮಾಲತಿ ಹೊಳ್ಳ) 'ಎಲ್ಲಾ ಬಾಗಿಲುಗಳು ಮುಚ್ಚಿದ್ದರೂ, ಎಲ್ಲೋ ಒಂದು ಸಣ್ಣ ಕಿಂಡಿಯಿಂದ ಬೆಳಕು ಹರಿದುಬರುತ್ತದೆ' - ಇದು ಮಾಲತಿ ಹೊಳ್ಳರ ಬದುಕಿನ ಸತ್ಯ. ಪೋಲಿಯೋ ಎಂಬ ಭಯಂಕರ ವ್ಯಾಧಿಗೆ ತುತ್ತಾಗಿ, ಕಾಲುಗಳು ಶಕ್ತಿಹೀನವಾದರೂ, ಕ್ರೀಡಾಲೋಕದಲ್ಲಿ ವಿಶ್ವವೇ ಬೆರಗಾಗುವಂಥ ಸಾಧನೆಯನ್ನು ಮಾಡಿದವರು ಮಾಲತಿ ಹೊಳ್ಳ. ವಿಧಿ ನೀಡಿದ ಅಂಗವಿಕಲತೆ ಈ ಸಾಧಕಿಯ ಪಾಲಿಗೆ ವರವಾಯಿತು. ಮಾಲತಿ ಹೊಳ್ಳರ ತಂದೆ ಕೃಷ್ಣಮೂರ್ತಿ ಹೊಳ್ಳ, ತಾಯಿ ಪದ್ಮಾವತಿ. ಹೋಟೆಲ್ ವೃತ್ತಿಗಾಗಿ ಉಡುಪಿ ಜಿಲ್ಲೆಯ ಮಣ್ಣೂರು ಗ್ರಾಮದಿಂದ ಬೆಂಗಳೂರಿಗೆ ಬಂದವರು. ಇವರ ನಾಲ್ಕನೆಯ ಮಗುವಾಗಿ, ಜುಲೈ ೬, ೧೯೫೮ ರಂದು ಮಾಲತಿ ಜನಿಸಿದರು. ದುರದೃಷ್ಟವಶಾತ್ ಒಂದು ವರ್ಷದ ಮಗು ಮಾಲತಿಗೆ ಪೋಲಿಯೋ ಆಗಿದ್ದರಿಂದ, ಮಗುವನ್ನು ಚೆನ್ನೈನಲ್ಲಿರುವ ದತ್ತಾತ್ರೇಯ ಮೆಡಿಕಲ್ ಸೆಂಟರ್ ಎಂಬ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಸೇರಿಸಿದರು. ಆಕೆಯ ಬಾಲ್ಯದ ಬಹುಭಾಗ ಅಲ್ಲಿಯೇ ಕಳೆಯಿತು. ದೇಹದ ನರಗಳೆಲ್ಲ ಚೆಂಡಿನಂತೆ ಒಂದುಗೂಡುವುದು ಇವರ ಕಾಯಿಲೆಯ ಸ್ವರೂಪ. ಇದನ್ನು ತಪ್ಪಿಸಲು ಪ್ರತಿ ಆರು ತಿಂಗಳಿಗೊಮ್ಮೆ ಮಾಲತಿಗೆ ಶಸ್ತ್ರಚಿಕಿತ್ಸೆ ಆಗುತ್ತಿತ್ತು. ಇಂತಹ ೩೨ ಶಸ್ತ್ರಚಿಕಿತ್ಸೆಗಳನ್ನು ಅವರು ಎದುರಿಸಿದರು. ಆದಾಗ್ಯೂ, ಪ್ರತಿ ಪರೀಕ್ಷೆಯಲ್ಲೂ ಮಾಲತಿ ತರಗತಿಗೆ ಪ್ರಥಮಳಾಗಿರುತ್ತಿದ್ದರು. ೧೯೭೫ ರಲ್ಲಿ, ಬೆಂಗಳೂರಿಗೆ ಹಿಂತಿರುಗಿದ ನಂತರ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ತಂದೆಯ ಪ್ರೋತ್ಸಾಹದ ನುಡಿಗಳು ಮಾಲತಿಗೆ ಧೈರ್ಯ ನೀಡಿದವು. ಅದೇ ವರ್ಷ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ, ಎರಡು ಬೆಳ್ಳಿಯ ಪದಕಗಳನ್ನು ಗಳಿಸಿದ ಮಾಲತಿ ಹೊಳ್ಳ ಸಾಧನೆಯ ಹಾದಿಯಲ್ಲಿ ಮುಂದುವರೆದರು. ಈ ಯಶಸ್ಸು ಕ್ರೀಡೆಗಳತ್ತ ಅವರ ಒಲವು ಬೆಳೆಯಲು ಕಾರಣವಾಯಿತು. ಒಮ್ಮೆ ಅಹಮದಾಬಾದಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಗಾಲಿಕುರ್ಚಿಯ ಓಟದ ಸ್ಪರ್ಧೆಗೆ ಬೇರೆ ಮಹಿಳಾ ಸ್ಪರ್ಧಿಗಳೇ ಇರಲಿಲ್ಲ. ಆಗ ಮಾಲತಿ ಪುರುಷ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಬೇಕಾಯಿತು. ಅವರೆಲ್ಲ ಆಗಲೇ ಹೆಸರು ಮಾಡಿದವರು. ಅದ್ಭುತ! ಮಾಲತಿಯೇ ಗೆದ್ದರು! ಒಬ್ಬ ಮಹಿಳೆ ಪುರುಷರನ್ನು ಹಿಮ್ಮೆಟ್ಟಿಸಿ, ಬಹುಮಾನ ಪಡೆದಾಗ ಅಭಿನಂದನೆಗಳ ಸುರಿಮಳೆಯೇ ಆಯಿತು. ಕೊರಿಯಾ, ಡೆನ್ಮಾರ್ಕ್, ಬೀಜಿಂಗ್, ಬ್ಯಾಂಕಾಕ್, ಬೆಲ್ಜಿಯಂ, ಬರ್ಮಿಂಗ್‌ಹ್ಯಾಂ, ಮ್ಯಾಂಚೆಸ್ಟರ್‌ಗಳಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಏಷಿಯಾಡ್ ಕ್ರೀಡಾ ಕೂಟಗಳಲ್ಲಿ ಗಾಲಿಕುರ್ಚಿ ಓಟ, ಗುಂಡು ಎಸೆತ, ತಟ್ಟೆ ಎಸೆತ, ಈಟಿ ಎಸೆತ ಸ್ಪರ್ಧೆಗಳಲ್ಲಿ ಮಾಲತಿ ಹೊಳ್ಳ ಭಾಗವಹಿಸಿ, ವಿಜಯಿಯಾದಾಗ ಇಡೀ ವಿಶ್ವವೇ ಅವರತ್ತ ತಿರುಗಿತು. ಬರ್ಮಿಂಗ್‌ಹ್ಯಾಂಗೆ ಹೋದಾಗ, ಬಸ್‌ನಿಂದ ಬಿದ್ದು ಮೂಳೆ ಮುರಿದರೂ ಅವರ ಉತ್ಸಾಹ ಮಾತ್ರ ತಗ್ಗಲಿಲ್ಲ. ಇದು ಅವರಿಗೆ ೧೭ ನೇ ಮೂಳೆ ಮುರಿತ! ಕ್ರೀಡಾ ಜಗತ್ತಿನಲ್ಲಿ ಮಾಲತಿ ಹೊಳ್ಳರ ಸಾಧನೆಯನ್ನು ಪರಿಗಣಿಸಿ, ಭಾರತ ಸರ್ಕಾರ ಅರ್ಜುನ ಪ್ರಶಸ್ತಿ (೧೯೯೫), ಪದ್ಮಶ್ರೀ ಪ್ರಶಸ್ತಿ (೨೦೦೧) ನೀಡಿ ಗೌರವಿಸಿತು. ಕೆ.ಕೆ. ಬಿರ್ಲಾ ಪ್ರಶಸ್ತಿ, ಅಮೆರಿಕನ್ ಬಯೋಗ್ರಾಫಿಕಲ್ ಇನ್‌ಸ್ಟಿಟ್ಯೂಟ್‌ನ ವರ್ಷದ ಮಹಿಳಾ ಪ್ರಶಸ್ತಿ, ಇಂಗ್ಲೆಂಡಿನ ಅಂತಾರಾಷ್ಟ್ರೀಯ ಬಯೋಗ್ರಾಫಿಕಲ್ ಕೇಂದ್ರದ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ, ಮುಂತಾದ ೩೦ ಕ್ಕೂ ಮೀರಿ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮಾಲತಿ ಹೊಳ್ಳ ಭಾಜನರಾಗಿದ್ದಾರೆ. ಅಭಿನಯ ಜಗತ್ತಿಗೂ ಮಾಲತಿ ಹೊಳ್ಳ ಹೊರತಾಗಿಲ್ಲ. ಡಾ. ರಾಜ್‌ಕುಮಾರ್ ಅವರೊಡನೆ 'ಕಾಮನಬಿಲ್ಲು' ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾಲತಿ ಹೊಳ್ಳ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ. ವಿಧಿ ಬದುಕಿನಲ್ಲಿ ಕೊಟ್ಟ ನೋವನ್ನು ನುಂಗಿ, ವಿಶ್ವವೇ ಬೆರಗಾಗುವಂತೆ ಬೆಳೆದಿರುವುದರಲ್ಲಿ ಅವರ ಪರಿಶ್ರಮವಿದೆ. ಅವರ ಸಾಧನೆಯನ್ನು ಕುರಿತು ಬರೆಯಲಾದ ಪ್ರೌಢ ಪ್ರಬಂಧವೊಂದಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ತಮ್ಮಂತೆಯೇ ವಿಕಲಚೇತನರಾದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಆಶ್ರಯ, ಶಿಕ್ಷಣ, ವೈದ್ಯಕೀಯ ನೆರವು ನೀಡುವ ಸಲುವಾಗಿ 'ಮಾತೃ ಫೌಂಡೇಶನ್' ಎಂಬ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಸದಾ ಚಟುವಟಿಕೆ ಅವರ ಯಶಸ್ಸಿನ ಗುಟ್ಟು. ಕೀಳರಿಮೆಗಿಂತ ಮಿಗಿಲಾದ ಅಂಗವೈಕಲ್ಯವಿಲ್ಲ. ನಾವು ನಗುತ್ತಲೇ ಜೀವನವನ್ನು ಎದುರಿಸಬೇಕು ಎನ್ನುವುದು ಅವರ ಸಿದ್ಧಾಂತ. ಮಾಲತಿ ಹೊಳ್ಳರ ಜೀವನ ವಿಶೇಷ ಚೇತನರಿಗೆ (ವಿಭಿನ್ನ ಸಾಮರ್ಥ್ಯವುಳ್ಳವರು) ಮಾತ್ರವಲ್ಲ, ಎಲ್ಲ ಮಹಿಳೆಯರಿಗೂ ಸ್ಫೂರ್ತಿದಾಯಕ. ಛಲಗಾತಿ ಮಾಲತಿ ವಿಶೇಷ ಚೇತನರ ಕ್ರೀಡಾಪ್ರಪಂಚದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ, ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. * * * * * **ಕೃತಿಕಾರರ ಪರಿಚಯ:** (Illustration: A portrait of a man - ಎಂ.ಎನ್. ಸುಂದರರಾಜ್) ಎಂ.ಎನ್. ಸುಂದರರಾಜ್ ಅವರು ನಿವೃತ್ತ ಪ್ರಾಧ್ಯಾಪಕರು. ಇವರು ಚಿತ್ರದುರ್ಗ ಜಿಲ್ಲೆಯ ದುಮ್ಮಿಯವರು. ಅವರು ಅಂಕಣ ಬರಹಗಾರರಾಗಿ, ಲೇಖಕರಾಗಿ ಪ್ರಸಿದ್ಧರಾಗಿದ್ದಾರೆ. ಇಲ್ಲಿ ನೀಡಿರುವ 'ಜೂಲಿಯೋ ಇಗ್ಲೇಶಿಯಸ್' ವ್ಯಕ್ತಿ ಚಿತ್ರಣವನ್ನು ಅವರ 'ಹಿರಿಯರ ಹಾದಿ' ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. ಇವರ ಕೃತಿಗಳೆಂದರೆ 'ಹುಡುಕಾಟ' ಮತ್ತು 'ನನ್ನ ಜೀವನ ಮತ್ತು ನನ್ನ ಹಾದಿ'.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. | | |

  2. |---|---|

  3. | ಅನಿವಾರ್ಯ - ತಪ್ಪಿಸಲಾಗದ | ಅದೃಷ್ಟ - ಭಾಗ್ಯ |

  4. | ಆಲ್ಬಂ - ಹಾಡುಗಳ ಧ್ವನಿ ಸುರುಳಿ | ಎದೆಗುಂದು - ಭಯಪಡು |

  5. | ಕಣ್ಮಣಿ - ಅಚ್ಚುಮೆಚ್ಚಾದ | ಗಿಟಾರ್ - ಸಂಗೀತದ ಒಂದು ತಂತಿ ವಾದ್ಯ. |

  6. | ಚಿಕಿತ್ಸೆ - ವೈದ್ಯೋಪಚಾರ | ತಲ್ಲೀನ - ಮಗ್ನವಾಗು; ಆಸಕ್ತನಾಗು. |

  7. | ದಾಖಲೆ - ಯಾರೂ ಮಾಡಿರದ | ದಾದಿ - ಸೇವಕಿ |

  8. | ಪರಿಣತಿ - ಕುಶಲತೆ | ಪರಿಶ್ರಮ - ವಿಶೇಷ ಶ್ರಮ |

  9. | ಭಾಜನ - ಪಾತ್ರ | ಭೀಕರ - ಭಯಂಕರ |

  10. | ಮಿನುಗು - ಹೊಳೆಯುವುದು | ಯಶಸ್ಸು - ಗೆಲವು |

  11. | ವ್ಯಾಧಿ - ರೋಗ | ವೃತ್ತಿ - ಉದ್ಯೋಗ |

  12. | ಸಿದ್ಧಾಂತ - ನಿರ್ಧರಿಸಲ್ಪಟ್ಟ ತತ್ತ್ವ | ಸ್ಫೂರ್ತಿ - ಪ್ರೇರಣೆ |

  13. | ಸ್ವಾಭಿಮಾನ - ಆತ್ಮಗೌರವ | ಸ್ವಾವಲಂಬನೆ - ಇನ್ನೊಬ್ಬರನ್ನು ಆಶ್ರಯಿಸದಿರು |

ಟಿಪ್ಪಣಿ :

  1. ೧. ಸ್ಪೇನ್ - ಯುರೋಪ್ ಖಂಡದ ಒಂದು ದೇಶ.

  2. ೨. ರಿಯಲ್ ಮ್ಯಾಡ್ರಿಡ್ ಕ್ಲಬ್ - ಸ್ಪೇನ್ ದೇಶದ ಒಂದು ಪ್ರಸಿದ್ಧ ಫುಟ್ಬಾಲ್ ಕ್ಲಬ್.

  3. ೩. ಪೋಲಿಯೋ - ಮಕ್ಕಳಿಗೆ ಬರುವ ಈ ವ್ಯಾಧಿಯಿಂದ ಕೈಕಾಲುಗಳು ಶಕ್ತಿಹೀನವಾಗಿ, ಶರೀರ ದುರ್ಬಲತೆಯನ್ನು ಹೊಂದುತ್ತದೆ.

  4. ೪. ಪುನರ್ವಸತಿ ಕೇಂದ್ರ - ಚಿಕಿತ್ಸೆ ಹಾಗೂ ವಸತಿ ವ್ಯವಸ್ಥೆ ಇರುವ ಸೇವಾಕೇಂದ್ರ. ಮನೆಯಲ್ಲಿ ಕೊಡಿಸಲಾಗದ ಚಿಕಿತ್ಸೆ ಹಾಗೂ ಸೇವಾಸೌಲಭ್ಯಗಳನ್ನು ಇಂತಹ ಕೇಂದ್ರಗಳು ನಿರ್ವಹಿಸುತ್ತವೆ.

  5. ೫. ಅಭಿನಂದನೆ - ಯಶಸ್ಸು ಸಾಧಿಸಿದಾಗ ಪ್ರಶಂಸಿಸುವ ರೀತಿ.

  6. ೬. ಸಂಶೋಧನಾ ಪ್ರಬಂಧ - ಯಾವುದಾದರೊಂದು ವಿಷಯ ಕುರಿತು ದೀರ್ಘ ವಿವರಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಬರೆದ ಅಧ್ಯಯನಪೂರ್ಣ ಬರಹ.

  7. ೭. ಗಾಲಿಕುರ್ಚಿ - ನಡೆಯಲಾಗದವರಿಗಾಗಿ ನಿರ್ಮಿಸಿರುವ ಚಕ್ರಗಳುಳ್ಳ ಕುರ್ಚಿ.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಜೂಲಿಯೋ ಇಗ್ಲೇಶಿಯಸ್ ಯಾವ ದೇಶದವನು?

    Answer

    ಜೂಲಿಯೋ ಇಗ್ಲೇಶಿಯಸ್ ಸ್ಪೇನ್ ದೇಶದವನು.

  2. ೨. ಬಾಲಕ ಜೂಲಿಯೋ ಇಗ್ಲೇಶಿಯಸ್ ತಾನು ಮುಂದೆ ಏನಾಗಬೇಕೆಂದು ಬಯಸಿದ್ದನು?

    Answer

    ಬಾಲಕ ಜೂಲಿಯೋ ಇಗ್ಲೇಶಿಯಸ್ ಫುಟ್‌ಬಾಲ್ ಆಟಗಾರನಾಗಬೇಕೆಂದು ಬಯಸಿದ್ದನು.

  3. ೩. ಜೂಲಿಯೋ ಇಗ್ಲೇಶಿಯಸ್ ತನ್ನ ದುಃಖವನ್ನು ಹೇಗೆ ಮರೆತನು?

    Answer

    ಜೂಲಿಯೋ ಇಗ್ಲೇಶಿಯಸ್ ಹಾಡುಗಳನ್ನು ಬರೆದು ಹಾಡುವ ಮೂಲಕ ತನ್ನ ದುಃಖವನ್ನು ಮರೆತನು.

  4. ೪. ಮಾಲತಿ ಹೊಳ್ಳ ಅವರ ತಂದೆ ತಾಯಿಗಳ ಹೆಸರೇನು?

    Answer

    ಮಾಲತಿ ಹೊಳ್ಳ ಅವರ ತಂದೆ ಕೃಷ್ಣಮೂರ್ತಿ ಹೊಳ್ಳ ಮತ್ತು ತಾಯಿ ಪದ್ಮಾವತಿ.

  5. ೫. ಮಾಲತಿ ಅವರಿಗೆ ಬಾಲ್ಯದಲ್ಲೇ ತಗುಲಿದ ರೋಗ ಯಾವುದು?

    Answer

    ಮಾಲತಿ ಅವರಿಗೆ ಬಾಲ್ಯದಲ್ಲಿ ಪೋಲಿಯೋ ರೋಗ ತಗುಲಿತು.

  6. ೬. ಮಾಲತಿ ಅವರು ಚೆನ್ನೈನಲ್ಲಿ ಚಿಕಿತ್ಸೆ ಪಡೆದ ಪುನರ್ವಸತಿ ಕೇಂದ್ರ ಯಾವುದು?

    Answer

    ಮಾಲತಿ ಅವರು ಚೆನ್ನೈನಲ್ಲಿರುವ ದತ್ತಾತ್ರೇಯ ಮೆಡಿಕಲ್ ಸೆಂಟರ್ ಎಂಬ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು.

  7. ೭. ಮಾಲತಿ ಹೊಳ್ಳ ಗಳಿಸಿದ ಮೂರು ಮುಖ್ಯ ಪ್ರಶಸ್ತಿಗಳು ಯಾವುವು?

    Answer

    ಮಾಲತಿ ಹೊಳ್ಳ ಗಳಿಸಿದ ಮೂರು ಮುಖ್ಯ ಪ್ರಶಸ್ತಿಗಳೆಂದರೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಮತ್ತು ಏಕಲವ್ಯ ಪ್ರಶಸ್ತಿ.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಜೂಲಿಯೋ ಇಗ್ಲೇಶಿಯಸ್ ಫುಟ್ಬಾಲ್ ಆಟದಲ್ಲಿ ಯಾವ ರೀತಿ ಯಶಸ್ಸು ಸಾಧಿಸಿದರು?

    Answer

    ಜೂಲಿಯೋ ಇಗ್ಲೇಶಿಯಸ್ 'ರಿಯಲ್ ಮ್ಯಾಡ್ರಿಡ್ ಕ್ಲಬ್' ಸೇರಿ ನಿರಂತರ ಅಭ್ಯಾಸ ಮಾಡಿದರು. ತಮ್ಮ ಇಪ್ಪತ್ತನೆಯ ವಯಸ್ಸಿಗೆ ಉತ್ತಮ ಗೋಲ್ ಕೀಪರ್ ಎಂಬ ಖ್ಯಾತಿ ಪಡೆದು ರಾಷ್ಟ್ರಮಟ್ಟಕ್ಕೆ ಬೆಳೆದರು.

  2. ೨. ಜೂಲಿಯೋ ಯಾವ ಕನಸು ಹೊಂದಿದ್ದನು? ಅದು ನುಚ್ಚುನೂರಾದುದು ಹೇಗೆ?

    Answer

    ಜೂಲಿಯೋ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ ದೇಶಕ್ಕೆ ಕೀರ್ತಿ ತರಬೇಕೆಂಬ ಕನಸು ಹೊಂದಿದ್ದನು. ೧೯೬೩ ರಲ್ಲಿ ಸ್ನೇಹಿತರೊಂದಿಗೆ ಕಾರಿನಲ್ಲಿ ಹೋಗುವಾಗ ಭೀಕರ ಅಪಘಾತಕ್ಕೆ ಒಳಗಾಗಿ ಸೊಂಟದ ಕೆಳಭಾಗ ಶಕ್ತಿಹೀನವಾದ್ದರಿಂದ ಅವನ ಕನಸು ನುಚ್ಚುನೂರಾಯಿತು.

  3. ೩. ಜೂಲಿಯೋ ಇಗ್ಲೇಶಿಯಸ್ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳೇನು?

    Answer

    ಜೂಲಿಯೋ ಇಗ್ಲೇಶಿಯಸ್ ಹಾಡುಗಳನ್ನು ಬರೆದು 'ಜೀವನ ಹೀಗೆ ಸಾಗುತ್ತಿದೆ' ಎಂಬ ಆಲ್ಬಂ ಹೊರತಂದರು. ಅದು ವಿಶ್ವಾದ್ಯಂತ ಜನಪ್ರಿಯವಾಗಿ ೩೦೦ ಮಿಲಿಯನ್ ಆಲ್ಬಂಗಳು ಮಾರಾಟವಾದವು ಮತ್ತು ಅವರು ವಿಶ್ವದ ಹತ್ತು ಪ್ರಮುಖ ಗಾಯಕರಲ್ಲಿ ಒಬ್ಬರಾದರು.

  4. ೪. ಮಾಲತಿ ಅವರನ್ನು ಆಕ್ರಮಿಸಿದ ರೋಗದ ಲಕ್ಷಣವೇನು?

    Answer

    ಮಾಲತಿ ಅವರನ್ನು ಆಕ್ರಮಿಸಿದ ಪೋಲಿಯೋ ರೋಗದ ಲಕ್ಷಣವೆಂದರೆ ದೇಹದ ನರಗಳೆಲ್ಲ ಚೆಂಡಿನಂತೆ ಒಂದುಗೂಡುವುದು. ಇದರಿಂದ ಕಾಲುಗಳು ಶಕ್ತಿಹೀನವಾಗುತ್ತವೆ.

  5. ೫. ಅಹಮದಾಬಾದ್‌ನಲ್ಲಿ ನಡೆದ ಗಾಲಿಕುರ್ಚಿಯ ಓಟದ ಸ್ಪರ್ಧೆಯಲ್ಲಿ ಮಾಲತಿ ಹೊಳ್ಳ ಜಯಗಳಿಸಿದುದರ ವಿಶೇಷವೇನು?

    Answer

    ಅಹಮದಾಬಾದ್‌ನಲ್ಲಿ ನಡೆದ ಗಾಲಿಕುರ್ಚಿಯ ಓಟದ ಸ್ಪರ್ಧೆಯಲ್ಲಿ ಬೇರೆ ಮಹಿಳಾ ಸ್ಪರ್ಧಿಗಳಿಲ್ಲದ ಕಾರಣ ಮಾಲತಿ ಹೊಳ್ಳ ಪುರುಷ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಬೇಕಾಯಿತು. ಆಗಲೇ ಹೆಸರು ಮಾಡಿದ್ದ ಪುರುಷರನ್ನು ಹಿಮ್ಮೆಟ್ಟಿಸಿ ಅವರು ಗೆದ್ದದ್ದು ವಿಶೇಷವಾಗಿತ್ತು.

  6. ೬. ಕ್ರೀಡೆಗಳತ್ತ ಮಾಲತಿಯವರಿಗೆ ಒಲವು ಬೆಳೆಯಲು ಕಾರಣವೇನು?

    Answer

    ೧೯೭೫ ರಲ್ಲಿ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಮತ್ತು ಎರಡು ಬೆಳ್ಳಿಯ ಪದಕಗಳನ್ನು ಗಳಿಸಿದ ಯಶಸ್ಸು ಕ್ರೀಡೆಗಳತ್ತ ಮಾಲತಿಯವರಿಗೆ ಒಲವು ಬೆಳೆಯಲು ಕಾರಣವಾಯಿತು.

  7. ೭. ಸಾಮಾಜಿಕ ಸೇವೆಯಲ್ಲಿ ಮಾಲತಿ ಹೇಗೆ ಕ್ರಿಯಾಶೀಲರಾಗಿದ್ದಾರೆ?

    Answer

    ಮಾಲತಿ ಹೊಳ್ಳ ಅವರು ವಿಕಲಚೇತನರಾದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಆಶ್ರಯ, ಶಿಕ್ಷಣ, ವೈದ್ಯಕೀಯ ನೆರವು ನೀಡಲು 'ಮಾತೃ ಫೌಂಡೇಶನ್' ಎಂಬ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿ ಸಾಮಾಜಿಕ ಸೇವೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

  8. ೮. ಮಾಲತಿ ಹೊಳ್ಳ ಜೀವನದಲ್ಲಿ ಕಂಡುಕೊಂಡ ಸಿದ್ಧಾಂತವೇನು?

    Answer

    ಕೀಳರಿಮೆಗಿಂತ ಮಿಗಿಲಾದ ಅಂಗವೈಕಲ್ಯವಿಲ್ಲ ಮತ್ತು ನಾವು ನಗುತ್ತಲೇ ಜೀವನವನ್ನು ಎದುರಿಸಬೇಕು ಎಂಬುದು ಮಾಲತಿ ಹೊಳ್ಳ ಅವರ ಸಿದ್ಧಾಂತವಾಗಿದೆ.

ಇ) ಬಿಟ್ಟ ಸ್ಥಳಗಳನ್ನು ನೀಡಿರುವ ಆಯ್ಕೆಯ ಉತ್ತರಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ಪೋಲಿಯೋ ಎಂಬುದು ....................... ಬರುವ ವ್ಯಾಧಿ.

    Answer

    ಪೋಲಿಯೋ ಎಂಬುದು ಮಕ್ಕಳಿಗೆ ಬರುವ ವ್ಯಾಧಿ.

  2. (ಮಕ್ಕಳಿಗೆ, ವಯಸ್ಕರಿಗೆ)

  3. ೨. ಮಾತೃ ಫೌಂಡೇಶನ್ ....................... ಪ್ರದೇಶದ ಮಕ್ಕಳಿಗಾಗಿ ಸ್ಥಾಪಿಸಿದ ಸೇವಾಸಂಸ್ಥೆ.

    Answer

    ಮಾತೃ ಫೌಂಡೇಶನ್ ಗ್ರಾಮಾಂತರ ಪ್ರದೇಶದ ಮಕ್ಕಳಿಗಾಗಿ ಸ್ಥಾಪಿಸಿದ ಸೇವಾಸಂಸ್ಥೆ.

  4. (ನಗರ, ಗ್ರಾಮಾಂತರ)

  5. ೩. ಭಾರತ ಸರ್ಕಾರ ಮಾಲತಿ ಅವರಿಗೆ ....................... ಪ್ರಶಸ್ತಿಯನ್ನು ೨೦೦೧ ರಲ್ಲಿ ನೀಡಿತು.

    Answer

    ಭಾರತ ಸರ್ಕಾರ ಮಾಲತಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ೨೦೦೧ ರಲ್ಲಿ ನೀಡಿತು.

  6. (ಪದ್ಮಭೂಷಣ, ಪದ್ಮಶ್ರೀ)

  7. ೪. ಮಾಲತಿ ಹೊಳ್ಳ ಅವರ ಕಾಲೇಜು ಶಿಕ್ಷಣ ....................... ನಲ್ಲಿ ನಡೆಯಿತು.

    Answer

    ಮಾಲತಿ ಹೊಳ್ಳ ಅವರ ಕಾಲೇಜು ಶಿಕ್ಷಣ ಮಹಾರಾಣಿ ಕಾಲೇಜಿನಲ್ಲಿ ನಡೆಯಿತು.

  8. (ಬೆಂಗಳೂರು, ಮದ್ರಾಸು)

  9. ೫. ಮಾಲತಿ ಹೊಳ್ಳರ ತಂದೆ ತಾಯಿಗಳ ಊರು ....................... ಜಿಲ್ಲೆಯಲ್ಲಿದೆ.

    Answer

    ಮಾಲತಿ ಹೊಳ್ಳರ ತಂದೆ ತಾಯಿಗಳ ಊರು ಉಡುಪಿ ಜಿಲ್ಲೆಯಲ್ಲಿದೆ.

  10. (ಶಿವಮೊಗ್ಗ, ಉಡುಪಿ)

  11. ೬. ಜೂಲಿಯೋ ಆಸ್ಪತ್ರೆಯಲ್ಲಿದ್ದಾಗ ದಾದಿಯೊಬ್ಬಳು ....................... ಒಂದನ್ನು ತಂದು ಕೊಟ್ಟಳು.

    Answer

    ಜೂಲಿಯೋ ಆಸ್ಪತ್ರೆಯಲ್ಲಿದ್ದಾಗ ದಾದಿಯೊಬ್ಬಳು ಗಿಟಾರ್ ಒಂದನ್ನು ತಂದು ಕೊಟ್ಟಳು.

  12. (ಗಿಟಾರು, ಪಿಟೀಲು)

  13. ೭. ಜೂಲಿಯೋ ತನ್ನ ಇಪ್ಪತ್ತನೆಯ ವಯಸ್ಸಿಗೆ ಫುಟ್ಬಾಲ್ ಆಟದಲ್ಲಿ ಉತ್ತಮ ....................... ಎಂಬ ಖ್ಯಾತಿ ಪಡೆದನು.

    Answer

    ಜೂಲಿಯೋ ತನ್ನ ಇಪ್ಪತ್ತನೆಯ ವಯಸ್ಸಿಗೆ ಫುಟ್ಬಾಲ್ ಆಟದಲ್ಲಿ ಉತ್ತಮ ಗೋಲ್ ಕೀಪರ್ ಎಂಬ ಖ್ಯಾತಿ ಪಡೆದನು.

  14. (ಗೋಲ್ ಕೀಪರ್, ನಾಯಕ)

III. ಭಾಷಾಭ್ಯಾಸ :

ಅ) ಇಲ್ಲಿ ನೀಡಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ನುಚ್ಚುನೂರಾಗು : __________________________________________________

    Model sentence

    ನುಚ್ಚುನೂರಾಗು: ನನ್ನ ಆಟಿಕೆ ಕೆಳಗೆ ಬಿದ್ದು ನುಚ್ಚುನೂರಾಯಿತು.

  2. ೨. ಆತ್ಮವಿಶ್ವಾಸ : __________________________________________________

    Model sentence

    ಆತ್ಮವಿಶ್ವಾಸ: ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಆತ್ಮವಿಶ್ವಾಸ ಬೇಕು.

  3. ೩. ಕಣ್ಮಣಿ : __________________________________________________

    Model sentence

    ಕಣ್ಮಣಿ: ನನ್ನ ತಂಗಿ ಅಮ್ಮನ ಕಣ್ಮಣಿ.

  4. ೪. ಯಶಸ್ಸು : __________________________________________________

    Model sentence

    ಯಶಸ್ಸು: ಕಠಿಣ ಪರಿಶ್ರಮದಿಂದ ಯಶಸ್ಸು ಸಿಗುತ್ತದೆ.

  5. ೫. ಭಾಜನ : __________________________________________________

    Model sentence

    ಭಾಜನ: ನನ್ನ ಸ್ನೇಹಿತ ಉತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನನಾದನು.

  6. ೬. ಸ್ಫೂರ್ತಿ : __________________________________________________

    Model sentence

    ಸ್ಫೂರ್ತಿ: ನಮ್ಮ ಶಿಕ್ಷಕರು ನಮಗೆ ಸ್ಫೂರ್ತಿಯಾಗಿದ್ದಾರೆ.

ಆ) ಇಲ್ಲಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಆಸೆ x ................................. ೨. ಕೀರ್ತಿ x .................................

    Answer

    ಆಸೆ x ನಿರಾಸೆ ಕೀರ್ತಿ x ಅಪಕೀರ್ತಿ

  2. ೩. ಖ್ಯಾತಿ x ................................. ೪. ವಿಫಲತೆ x .................................

    Answer

    ಖ್ಯಾತಿ x ಅಪಖ್ಯಾತಿ ವಿಫಲತೆ x ಯಶಸ್ಸು

  3. ೫. ಸ್ವಾವಲಂಬನೆ x ................................. ೬. ಅದೃಷ್ಟ x .................................

    Answer

    ಸ್ವಾವಲಂಬನೆ x ಪರಾವಲಂಬನೆ ಅದೃಷ್ಟ x ದುರದೃಷ್ಟ

ಇ) ಇಲ್ಲಿರುವ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.

  1. ಮಾದರಿ : ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ

  2. ೧. ವಿಶ್ವಾದ್ಯಂತ = ................................. + .................................

    Answer

    ವಿಶ್ವಾದ್ಯಂತ = ವಿಶ್ವ + ಆದ್ಯಂತ

  3. ೨. ಕೋಟ್ಯಂತರ = ................................. + .................................

    Answer

    ಕೋಟ್ಯಂತರ = ಕೋಟಿ + ಅಂತರ

  4. ೩. ನೂರಾಯಿತು = ................................. + .................................

    Answer

    ನೂರಾಯಿತು = ನೂರು + ಆಯಿತು

  5. ೪. ಮುಟ್ಟಿರಲಿಲ್ಲ = ................................. + .................................

    Answer

    ಮುಟ್ಟಿರಲಿಲ್ಲ = ಮುಟ್ಟಿ + ಇರಲಿಲ್ಲ

  6. ೫. ತಿಂಗಳಿಗೊಮ್ಮೆ = ................................. + .................................

    Answer

    ತಿಂಗಳಿಗೊಮ್ಮೆ = ತಿಂಗಳಿಗೆ + ಒಮ್ಮೆ

IV. ಚಟುವಟಿಕೆಗಳು :

  1. ೧. ಕರ್ನಾಟಕದ ಕ್ರೀಡಾಪಟುಗಳ ವಿವರ ಸಂಗ್ರಹಿಸಿ.

  2. ೨. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವಿಶೇಷಚೇತನರ ಹೆಸರುಗಳನ್ನು ಸಂಗ್ರಹಿಸಿ.

  3. ೩. ವಿಶೇಷಚೇತನವುಳ್ಳ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ನಿಮ್ಮ ಅಧ್ಯಾಪಕರೊಂದಿಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳೊಂದಿಗೆ ಸಂಭಾಷಿಸಿ, ವರದಿ ಬರೆಯಿರಿ.

  4. ೪. ಇಲ್ಲಿ ಕೊಟ್ಟಿರುವ ವಿಷಯ ಹಾಗೂ ಗಾದೆಮಾತುಗಳ ನಡುವಿರುವ ಸಂಬಂಧವನ್ನು ಚರ್ಚಿಸಿರಿ.

  5. ಬಸಯ್ಯ ಕಡು ಬಡತನದ ಯುವಕ. ರೈತನಾಗಬೇಕೆಂಬ ಬಯಕೆ. ತಂದೆಯಿಂದ ಬಂದ ಎರಡು ಎಕರೆ ಭೂಮಿಯಿತ್ತು. ಅದು ಬಂಜರು ಗುಡ್ಡಗಳಿಂದ ಕೂಡಿದ ಭೂಮಿ. ನೀರಾವರಿ ಸೌಲಭ್ಯವಿಲ್ಲ. ಆದರೂ ಸಾಧಿಸುವ ಛಲವಿತ್ತು. ತನ್ನ ಭೂಮಿಯಲ್ಲಿದ್ದ ಗಿಡಗಂಟೆಗಳನ್ನು ತೆಗೆದ. ಅಲ್ಲಲ್ಲಿ ಇದ್ದ ಸಣ್ಣ ಪುಟ್ಟ ಬಂಡೆಗಲ್ಲುಗಳನ್ನು ಒಡೆಸಿ ಹೊರ ಹಾಕಿದ. ನೇಗಿಲಿನಿಂದ ಉಳುಮೆ ಮಾಡಿದ. ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿಯನ್ನು ಹದ ಮಾಡಿದನು.

  6. ಮಳೆಗಾಲದಲ್ಲಿ ತನ್ನ ಭೂಮಿಯ ಪಕ್ಕದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕಂಡನು. ಸರ್ಕಾರದಿಂದ ಹಣ ಸಹಾಯ ಪಡೆದು ಹೊಂಡ ತೆಗೆಸಿದ. ಮಳೆ ನೀರನ್ನು ಸಂಗ್ರಹಿಸಿದ. ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿದ. ಸಂಗ್ರಹಿಸಿದ ಮಳೆ ನೀರಿಗೆ ಹನಿ ನೀರಾವರಿ ಅಳವಡಿಸಿದನು. ವಿವಿಧ ಬೆಳೆ ಪದ್ಧತಿ ಅಳವಡಿಸಿಕೊಂಡನು. ದಾಳಿಂಬೆ, ಸಪೋಟ, ತೆಂಗು, ಹೂ ಬೆಳೆಗಳನ್ನು ಬೆಳೆದ. ಅಧಿಕ ಇಳುವರಿ ಪಡೆದನು. ಕೈತುಂಬ ಹಣ ಸಂಪಾದಿಸಿದನು. ಸುತ್ತಮುತ್ತಲಿನ ರೈತರು ಇವನ ಸಾಹಸ ಕಂಡು ಬೆರಗಾದರು. ಯುವಕನ ಸಾಧನೆ ಕಂಡು ಸರ್ಕಾರ 'ಕೃಷಿ ಪಂಡಿತ' ಪ್ರಶಸ್ತಿ ನೀಡಿ ಗೌರವಿಸಿತು.

ಗಾದೆಗಳು :

  1. ೧. ಕಾಯಕವೇ ಕೈಲಾಸ.

  2. ೨. ದುಡಿಮೆಯೇ ದುಡ್ಡಿನ ತಾಯಿ.

  3. ೩. ಕೈ ಕೆಸರಾದರೆ ಬಾಯಿ ಮೊಸರು.

  4. ೪. ಕಷ್ಟಪಟ್ಟರೆ ಫಲವುಂಟು.

Interactive Lab