CRECT Education

Class 6 Kannada Lesson 13: Courageous Monalisa | KTBS Second Language – Learn the Story

Description

The inspiring true story of 7-year-old Monalisa Debi, who risked her life to save a blind boy from raging bulls. Class 6 Second Language Kannada, Karnataka Textbook Society.

ಗದ್ಯ (prose) · ಸಂಪಾದಿತ

ಪಠ್ಯFull text

ಪಾಠ ಪ್ರವೇಶ : ಯುದ್ಧವನ್ನು ಗೆಲುವುದು ಸಾಹಸ. ಗಡಸು ಭೂಮಿಯನ್ನು ಉತ್ತು ಬಿತ್ತುವುದೂ ಸಾಹಸ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವುದೂ ಸಾಹಸ. ಇವು ಆಕಸ್ಮಿಕವಾಗಿ ದಿಢೀರನೆ ಬರುವುದಿಲ್ಲ. ಬಾಲ್ಯದಲ್ಲಿಯೇ ಈ ನಡತೆಯನ್ನು ಬೆಳೆಸಿಕೊಳ್ಳಬೇಕು. ಇದೇ ರೀತಿ ಪ್ರೀತಿ, ದಯೆ, ಅಂತಃಕರಣಗಳನ್ನು ಇನ್ನೊಬ್ಬರಿಗೆ ತೋರಿಸಲೇಬೇಕು. ಇನ್ನೊಬ್ಬರ ಕಷ್ಟದಲ್ಲಿ ಸಹಾಯ, ಅನುಕಂಪ ಇರಬೇಕು. ವಿಶೇಷಚೇತನರ ಬಗ್ಗೆ, ರೋಗಿಗಳ ಬಗ್ಗೆ, ಅಜ್ಜ-ಅಜ್ಜಿಯರಿಗೆ ನೀವು ಸಹಾಯ ಮಾಡಬೇಕು. ಚಿಕ್ಕ ಬಾಲಕಿಯೊಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ಕುರುಡ ಬಾಲಕನನ್ನು ರಕ್ಷಿಸಿದ ಸಾಹಸ ಕಥೆ ಇಲ್ಲಿದೆ. ಮಕ್ಕಳು ಇದರಿಂದ ಪ್ರೇರಣೆ ಪಡೆಯಬೇಕು. ಒಡಿಶಾ ರಾಜ್ಯದಲ್ಲಿ ಒಂದು ನಗರ ಗೋಪಬಂಧು. ಆ ನಗರದ ಯು.ಜಿ.ಎಂ.ಇ. ಶಾಲೆಯ ಗಂಟೆ ಬಾರಿಸಿತು. ಮಕ್ಕಳೆಲ್ಲ ಹೋ.. ಎನ್ನುತ್ತ ಮನೆಯ ಕಡೆ ಹೊರಟರು. ಎರಡನೆಯ ತರಗತಿಯ ಮೋನಾಲಿಸಾ ಮೆಲ್ಲನೆ ಮನೆಗೆ ಹೊರಟಿದ್ದಳು. ಆಕೆಯ ಹಿಂದೆ ಹತ್ತು ವರುಷದ ಕುರುಡ ಹುಡುಗನೂ ಹೊರಟಿದ್ದನು. ರಸ್ತೆಯ ಬದಿಯ ಹುಲ್ಲನ್ನು ಎರಡು ದಷ್ಟಪುಷ್ಟ ಹೋರಿಗಳು ಮೇಯುತ್ತಿದ್ದವು. ಚಿನ್ನಾಟವಾಡುತ್ತಿದ್ದವು. ಅವು ಒಮ್ಮಿಂದೊಮ್ಮೆಲೆ ಗುದ್ದಾಟಕ್ಕೆ ನಿಂತವು. ಒಂದನ್ನು ಇನ್ನೊಂದು ಕೊಂಬಿನಿಂದ ತಿವಿಯುತ್ತ, ಇರಿಯುತ್ತ ಮೆರೆದಾಡತೊಡಗಿದವು. ಅದನ್ನು ಮೋನಾಲಿಸಾ ನೋಡಿದಳು. ರಸ್ತೆಯ ಬದಿಗೆ ಸಾಗುತ್ತಿರುವಾಗ, ಅವು ಅವಳ ಕಡೆಗೆ ಜಿಗಿದು ಬಂದವು. ಆ ಕ್ಷಣ ಗಾಬರಿಗೊಂಡಳು. ಇನ್ನೇನು ತಿವಿಯಬೇಕೆನ್ನುವಷ್ಟರಲ್ಲಿ ಜೀವದ ಹಂಗಿಲ್ಲದೆ ಜೋರಾಗಿ ಆ ಬದಿಗೆ ಓಡಿದಳು. ಬದುಕಿದೆಯಾ ಬಡಜೀವ ಎನ್ನುವಷ್ಟರಲ್ಲಿ ಚಿಟ್ಟನೆ ಚೀರಿದ ಅಳುವ ಶಬ್ದ ಕೇಳಿತು. ಅದರ ಬೆನ್ನಹಿಂದೆಯೇ ‘ನನ್ನನ್ನು ಕಾಪಾಡಿ! ಕಾಪಾಡಿ’ ಎಂದು ಹುಡುಗನೊಬ್ಬ ಕಿರುಚುತ್ತಿದ್ದ. ಮೋನಾಲಿಸಾ ಧ್ವನಿಯತ್ತ ಹೊರಳಿ ನೋಡಿದಳು. ಆ ಕುರುಡು ಹುಡುಗ ದನಗಳ ತಿವಿತಕ್ಕೆ ಒಳಗಾಗಿ ಬಿದ್ದಿದ್ದನು. ರಕ್ತ ಸೋರುತ್ತಿತ್ತು. ಸಹಾಯಕ್ಕಾಗಿ ಅತ್ತ ಇತ್ತ ಕೈಯಾಡಿಸುತ್ತಿದ್ದನು. ಎದ್ದು ನಿಂತರೆ ಅವನು ಆ ದನಗಳ ತುಳಿತಕ್ಕೆ ಸಿಕ್ಕುಬೀಳುತ್ತಿದ್ದ. ಅದೇ ಸಮಯಕ್ಕೆ ಆ ರಸ್ತೆಯಲ್ಲಿ ಎರಡು ಕಾರುಗಳು ವೇಗವಾಗಿ ಎದುರು ಬದುರು ಬರುತ್ತಿದ್ದವು. ಕ್ಷಣ ತಡಮಾಡಿದರೆ ಹುಡುಗ ಸಾಯುತ್ತಾನೆಂದು ಮೋನಾಲಿಸಾ ಚಿಂತಿಸಿದಳು. ಹೋರಿಗಳಿಗೆ ಹೆದರದೆ, ಕಾರುಗಳಿಂದಾಗುವ ಅಪಾಯವನ್ನು ಲೆಕ್ಕಿಸದೆ ಓಡಿದಳು. ಆ ಕುರುಡ ಹುಡುಗನ ಕೈ ಹಿಡಿದಳು. ದರದರನೆ ಎಳೆದು ರಸ್ತೆಯ ಅಂಚಿಗೆ ತಂದಳು. ಆತನನ್ನು ಬದುಕಿಸಿದಳು. ತಾನು ಕುಸಿದು ಕುಳಿತಳು. ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನವನು ಇದನ್ನೆಲ್ಲ ನೋಡಿದ. ಅವನು ತನಗೇನೂ ಸಂಬಂಧವಿಲ್ಲದಂತೆ ಹೊರಟು ಹೋದನು. ಇನ್ನೊಬ್ಬ ಕಾರಿನ ಚಾಲಕ ಕಾರನ್ನು ನಿಲ್ಲಿಸಿದ. ಆ ದನಗಳನ್ನು ಓಡಿಸಿದ. ಬಿದ್ದ ಮಗುವನ್ನು ಎಬ್ಬಿಸಿದ. ಕಾರಿನಲ್ಲಿದ್ದ ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ತೆಗೆದ. ರಕ್ತ ಒಸರುತ್ತಿದ್ದ ಕಾಲನ್ನು ಡೆಟಾಲಿನಿಂದ ಒರೆಸಿದ. ಬ್ಯಾಂಡೇಜ್ ಕಟ್ಟಿದ. ಥರಥರನೆ ನಡುಗುತ್ತಿದ್ದ ಕುರುಡು ಹುಡುಗನಿಗೆ ಸಮಾಧಾನ ಹೇಳಿದನು. ಮೋನಾಲಿಸಾಳನ್ನು ಎಬ್ಬಿಸಿದ. “ಭೇಷ್ ಮಗು! ನಿನ್ನ ಧೈರ್ಯ ಮೆಚ್ಚಿದೆನು. ನಿನ್ನ ಸಮಯಪ್ರಜ್ಞೆ ಒಬ್ಬ ಕುರುಡನ ಜೀವ ಉಳಿಸಿತು. ನಿನ್ನ ಸಹಾನುಭೂತಿ ದೊಡ್ಡದು” ಎಂದು ಮಗುವನ್ನು ಎತ್ತಿ ಮುದ್ದಾಡಿದನು. ಆಗ ಮಗು “ಮಾಮಾ, ನೀನು ಬಹಳ ಒಳ್ಳೆಯವನು. ಆ ತುಂಟ ದನಗಳನ್ನು ಓಡಿಸಿದೆ. ಈ ಕಣ್ಣುಕಾಣದ ಹುಡುಗನ ಗಾಯದ ರಕ್ತ ಒರೆಸಿ ಬ್ಯಾಂಡೇಜ್ ಕಟ್ಟಿ ಸಂತೈಸಿರುವೆ. ಆಪತ್ತಿಗೆ ಆದವನೇ ನೆಂಟ. ಇತರರಿಗೆ ಸಹಾಯ ಮಾಡುವ ದೊಡ್ಡ ಗುಣವಿದೆ. ದೇವರು ನಿನ್ನನ್ನು ಚೆನ್ನಾಗಿಟ್ಟಿರಲಿ” ಎಂದು ಧನ್ಯವಾದ ಹೇಳಿದಳು. ಏಳು ವರುಷದ ಬಾಲಕಿಯ ಮುಗ್ಧ ಮಾತುಗಳಿಗೆ ಆತ ಬೆರಗಾದನು. “ಅಬ್ಬಾ! ನೀನೆಷ್ಟು ಜಾಣೆ! ನಿನ್ನ ಹೆತ್ತ ತಂದೆ ತಾಯಿಗಳು ಧನ್ಯರು. ನಿನ್ನ ಗುರುಗಳು ನಿನಗೆ ಒಳ್ಳೆಯ ಶಿಕ್ಷಣ ನೀಡಿದ್ದಾರೆ. ಪರರ ನೋವನ್ನು ತನ್ನ ನೋವೆಂದು ತಿಳಿಯುವ ನಿನ್ನ ಭಾವನೆ ಮೆಚ್ಚುವಂತಹದ್ದು. ನಿನ್ನ ಭವಿಷ್ಯ ಬೆಳಗಲಿ” ಎಂದನು. ಅಷ್ಟರಲ್ಲಿ ಹತ್ತಾರು ಜನ ಸೇರಿದರು. ಈ ಸುದ್ದಿ ಊರ ತುಂಬಾ ಹರಡಿತು. ಸಂಘ ಸಂಸ್ಥೆಗಳು ಸಾರ್ವಜನಿಕರು ಶಾಲೆಗೆ ಬಂದರು. ಅವಳಿಗೆ ಬಹುಮಾನ ನೀಡಿ ಸನ್ಮಾನಿಸಿದರು. ಅವಳ ಸಾಹಸವನ್ನು ಸೂಚನಾ ಫಲಕದ ಮೇಲೆ ಪ್ರಕಟಿಸಿದರು. ಮುಖ್ಯೋಪಾಧ್ಯಾಯರು ಚಿತ್ರ ಸಹಿತ ವಿವರಣೆ ನೀಡಿದರು. ಜಿಲ್ಲಾಧಿಕಾರಿಗಳು ಶಾಲೆಗೆ ಬಂದು ಮಗುವನ್ನು ಅಭಿನಂದಿಸಿದರು. “ದಯವೇ ಧರ್ಮದ ಮೂಲ” ಎಂದರು. ಅವಳ ಮಾನವೀಯತೆ ಹಾಗೂ ಸಹಾನುಭೂತಿಯನ್ನು ಹೊಗಳಿದರು. ಧೈರ್ಯ ಸಾಹಸಗಳೇ ಗೆಲುವಿನ ಮೆಟ್ಟಿಲು ಎಂದರು. ಅಬ್ದುಲ್ ಹಮೀದನ ಸಾಹಸದ ಕಥೆ ನೆನಪಿಸಿದರು. ಮಕ್ಕಳೆಲ್ಲರೂ ಖುಷಿಪಟ್ಟು ಚಪ್ಪಾಳೆ ತಟ್ಟಿದರು. ಎಲ್ಲರಿಗೂ ಸಿಹಿ ಹಂಚಿದರು. ಒಡಿಶಾ ರಾಜ್ಯ ಸರ್ಕಾರದ ಮಕ್ಕಳ ಕಲ್ಯಾಣ ಮಂಡಳಿ ಆಕೆಯನ್ನು ಗೌರವಿಸಿತು. ಅಪ್ರತಿಮ ಸಾಹಸಿಗಳಿಗೆ ಮೀಸಲಾದ “ಗೀತಾ ಘೋಪ್ರ” ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿತು. ಶಾಲೆಯಲ್ಲಿ ಇವಳ ಹೆಸರು ಮೋನಾಲಿಸಾದೇವಿ. ಇವಳು ಭುವನೇಶ್ವರದವಳು. ಈಕೆಯ ತಂದೆ ದಿಜರಾಜ ಮಲ್ಲಿಕ್. ಇವಳು ದಿನಾಂಕ ೨೫-೦೭-೧೯೮೦ ರಲ್ಲಿ ಜನಿಸಿದಳು. ಈ ಘಟನೆಯು ೧೯೮೭ ನೆಯ ಜನವರಿ ೧೬ ರಂದು ಜರುಗಿತು. ಆಗ ಅವಳು ಯು.ಜಿ.ಎಂ.ಇ. ಶಾಲೆಯ ಎರಡನೆಯ ತರಗತಿಯ ವಿದ್ಯಾರ್ಥಿನಿ. ಇವಳು ನೃತ್ಯ ಹಾಗೂ ಸಂಗೀತದಲ್ಲಿ ನಿಪುಣೆ. ಭಾರತ-ಜಪಾನ್ ಮೈತ್ರಿ ಸಂಘದ ವಾರ್ಷಿಕೋತ್ಸವದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದಳು. ಅಮೋಘ ನೃತ್ಯ ಪ್ರದರ್ಶನ ನೀಡಿದಳು. ಅಂದಿನ ಒಡಿಶಾ ರಾಜ್ಯದ ರಾಜ್ಯಪಾಲ ವಿಶ್ವಂಬರನಾಥ ಪಾಂಡೆಯವರಿಂದ ಪುರಸ್ಕಾರ ಪಡೆದಳು. ಆಗ ಇವಳು ನಾಲ್ಕನೆಯ ತರಗತಿ ವಿದ್ಯಾರ್ಥಿನಿ.

Interactive Lab