CRECT Education

Class 6 Kannada Lesson 12: Song of Unity | KTBS Second Language

Description

Learn the beautiful poem 'Aikyagana' (Song of Unity) by Rashtrakavi G.S. Shivarudrappa, teaching us that despite our many differences, we are all one.

ಪದ್ಯ · ಜಿ.ಎಸ್. ಶಿವರುದ್ರಪ್ಪ

ಪಠ್ಯFull text

ಒಂದೇ ಒಂದೇ, ನಾವೆಲ್ಲರು ಒಂದೇ, ಈ ದೇಶದೊಳೆಲ್ಲಿದ್ದರು ಭಾರತ ನಮಗೊಂದೇ- ಹಲವು ಕೊಂಬೆಗಳ ಚಾಚಿಕೊಂಡರೂ ಮರಕ್ಕೆ ಬುಡ ಒಂದೇ ಸಾವಿರ ನದಿಗಳು ಹೇಗೆ ಹರಿದರೂ ಕೂಡುವ ಕಡಲೊಂದೇ. ಇರುಳಿಗೆ ಸಾಸಿರ ಚಿಕ್ಕೆಗಳಿದ್ದರು ಹಗಲಿಗೆ ರವಿ ಒಂದೇ ಅಗಣಿತ ಗ್ರಹಮಂಡಲಗಳ ಚಲನೆಗೆ ಆಕಾಶವು ಒಂದೇ. ನೂರುಬಗೆಯ ಆರಾಧನೆಯಿದ್ದರು ದೇವರು ಎಲ್ಲರಿಗೊಂದೇ, ಹಲವು ಬಣ್ಣಗಳ ಹಸುಗಳು ಕರೆಯುವ ಹಾಲಿನ ಬಿಳುಪೊಂದೇ. ನಡೆ-ನುಡಿ ಭೇದಗಳೆಷ್ಟೇ ಇದ್ದರು ಬದುಕುವ ಜನ ಒಂದೇ, ನೆಳಲು-ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ಧ್ವಜ ಒಂದೇ. * * * * *

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಅಗಣಿತ - ಅಸಂಖ್ಯ; ಲೆಕ್ಕವಿಲ್ಲದಷ್ಟು.

  2. ಇರುಳು - ಕತ್ತಲೆ; ರಾತ್ರಿ.

  3. ಗ್ರಹಮಂಡಲ - ಗ್ರಹ ಮತ್ತು ಉಪಗ್ರಹಗಳ ಸಮೂಹ.

  4. ಚಿಕ್ಕೆ - ನಕ್ಷತ್ರ; ತಾರೆ.

  5. ಬುಡ - ಬೇರು; ತಳ; ಮೂಲ.

  6. ಚಾಚು - ಹರಡು; ವಿಸ್ತರಿಸು.

  7. ಆರಾಧನೆ - ಪೂಜೆ; ಧ್ಯಾನ.

  8. ಐಕ್ಯ - ಒಂದಾಗು; ಸೇರು.

  9. ಗಾನ - ಹಾಡು

  10. ನೆಳಲು - ನೆರಳು; ಛಾಯೆ.

  11. ಸಾಸಿರ - ಸಾವಿರ; ಸಹಸ್ರ.

II. ಪ್ರಶ್ನೆಗಳು :

ಅ) ಈ ಕೆಳಗೆ ನೀಡಿರುವ ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ.

  1. ೧. ಸಾವಿರ ನದಿಗಳು ಹೇಗೆ ಹರಿದರೂ __________________

    Answer

    ಸಾವಿರ ನದಿಗಳು ಹೇಗೆ ಹರಿದರೂ ಕೂಡುವ ಕಡಲೊಂದೇ.

  2. ೨. ಅಗಣಿತ __________________ ಚಲನೆಗೆ ಆಕಾಶವು ಒಂದೇ.

    Answer

    ಅಗಣಿತ ಗ್ರಹಮಂಡಲಗಳ ಚಲನೆಗೆ ಆಕಾಶವು ಒಂದೇ.

  3. ೩. ನೂರು ಬಗೆಯ ಆರಾಧನೆಯಿದ್ದರು __________________ ಎಲ್ಲರಿಗೊಂದೇ.

    Answer

    ನೂರು ಬಗೆಯ ಆರಾಧನೆಯಿದ್ದರು ದೇವರು ಎಲ್ಲರಿಗೊಂದೇ.

  4. ೪. ನಡೆನುಡಿ __________________ ಇದ್ದರು ಬದುಕುವ ಜನ ಒಂದೇ.

    Answer

    ನಡೆನುಡಿ ಭೇದಗಳೆಷ್ಟೇ ಇದ್ದರು ಬದುಕುವ ಜನ ಒಂದೇ.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಐಕ್ಯಗಾನ ಪದ್ಯದಲ್ಲಿ ಮರದ ಕೊಂಬೆ ಹಾಗೂ ಬುಡ ಏನನ್ನು ಸಂಕೇತಿಸುತ್ತವೆ?

    Answer

    ಮರದ ಕೊಂಬೆಗಳು ಅನೇಕತೆಯನ್ನು ಸಂಕೇತಿಸಿದರೆ, ಬುಡ ಏಕತೆಯನ್ನು ಸಂಕೇತಿಸುತ್ತದೆ.

  2. ೨. ಐಕ್ಯಗಾನ ಪದ್ಯದಲ್ಲಿ ಹಸುಗಳ ಬಣ್ಣ ಹಾಗೂ ಹಾಲಿನ ಬಿಳುಪು ಏನನ್ನು ಧ್ವನಿಸುತ್ತವೆ?

    Answer

    ಹಸುಗಳ ವಿವಿಧ ಬಣ್ಣಗಳು ಭಿನ್ನತೆಯನ್ನು ಸೂಚಿಸಿದರೆ, ಹಾಲಿನ ಬಿಳುಪು ಎಲ್ಲರಲ್ಲೂ ಒಂದೇ ಭಾವವನ್ನು ಧ್ವನಿಸುತ್ತದೆ.

  3. ೩. ಹಾರಾಡುವ ಧ್ವಜ ಯಾವುದರ ಸಂಕೇತವಾಗಿದೆ?

    Answer

    ಹಾರಾಡುವ ಧ್ವಜವು ಭಾರತೀಯರ ಏಕತೆಯ ಸಂಕೇತವಾಗಿದೆ.

  4. ೪. ಐಕ್ಯಗಾನ ಕವನದ ಆಕರ ಗ್ರಂಥ ಯಾವುದು?

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಅನೇಕತೆಯಲ್ಲಿ ಏಕತೆಯನ್ನು ಮರ ಮತ್ತು ನದಿಗಳು ಹೇಗೆ ತಿಳಿಸುತ್ತವೆ?

    Answer

    ಮರದಲ್ಲಿ ಹಲವು ಕೊಂಬೆಗಳಿದ್ದರೂ ಬುಡ ಒಂದೇ ಇರುವಂತೆ, ಸಾವಿರಾರು ನದಿಗಳು ಬೇರೆ ಬೇರೆ ಕಡೆ ಹರಿದರೂ ಅಂತಿಮವಾಗಿ ಸಮುದ್ರದಲ್ಲಿ ಒಂದಾಗುತ್ತವೆ. ಇದರಿಂದ ಅನೇಕತೆಯಲ್ಲಿ ಏಕತೆ ಇದೆ ಎಂದು ತಿಳಿಯುತ್ತದೆ.

  2. ೨. ಇರುಳಿಗೆ ಸಾಸಿರ ಚಿಕ್ಕೆಗಳಿದ್ದರು ಹಗಲಿಗೆ ರವಿ ಒಂದೇ ಎನ್ನುವಲ್ಲಿ ವ್ಯಕ್ತವಾಗಿರುವ ಕವಿಯ ಭಾವನೆಗಳೇನು?

    Answer

    ರಾತ್ರಿಯಲ್ಲಿ ಅಸಂಖ್ಯಾತ ನಕ್ಷತ್ರಗಳು ಕಂಡರೂ ಹಗಲಿನಲ್ಲಿ ಸೂರ್ಯ ಒಬ್ಬನೇ. ಇದರ ಮೂಲಕ ವೈವಿಧ್ಯತೆಯ ನಡುವೆಯೂ ಏಕತೆ ಇದೆ ಎಂಬ ಭಾವನೆಯನ್ನು ಕವಿ ವ್ಯಕ್ತಪಡಿಸಿದ್ದಾರೆ.

  3. ೩. ಭಾರತೀಯರ ಧರ್ಮಾಚರಣೆ ಹಾಗೂ ವೇಷಭೂಷಣಗಳು ಭಿನ್ನವಾಗಿದ್ದರೂ ಭಾವ ಒಂದೇ ಎಂಬುದಕ್ಕೆ ಕವಿ ಯಾವ ನಿದರ್ಶನಗಳನ್ನು ನೀಡಿದ್ದಾರೆ?

    Answer

    ನೂರು ಬಗೆಯ ಆರಾಧನೆಯಿದ್ದರೂ ದೇವರು ಎಲ್ಲರಿಗೂ ಒಂದೇ, ನಡೆ-ನುಡಿಗಳಲ್ಲಿ ಭೇದಗಳಿದ್ದರೂ ಬದುಕುವ ಜನ ಒಂದೇ, ಹಾಗೂ ಹಲವು ಬಣ್ಣದ ಹಸುಗಳ ಹಾಲೂ ಬಿಳುಪೇ ಆಗಿರುವುದು – ಇವುಗಳನ್ನು ನಿದರ್ಶನವಾಗಿ ಕವಿ ನೀಡಿದ್ದಾರೆ.

ಈ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ನಾವೆಲ್ಲರು ಒಂದೇ ಭಾರತ ನಮಗೊಂದೆ ಎನ್ನುವುದಕ್ಕೆ ಕವಿ ನೀಡುವ ನಿದರ್ಶನಗಳಾವುವು?

    Answer

    ಕವಿಯು ನಾವೆಲ್ಲರೂ ಒಂದೇ, ಭಾರತ ನಮಗೆಲ್ಲ ಒಂದೇ ಎಂಬುದಕ್ಕೆ ಹಲವು ನಿದರ್ಶನಗಳನ್ನು ನೀಡುತ್ತಾರೆ. ಮರದಲ್ಲಿ ಹಲವು ಕೊಂಬೆಗಳಿದ್ದರೂ ಬುಡ ಒಂದೇ. ಸಾವಿರಾರು ನದಿಗಳು ಹರಿದರೂ ಸೇರುವುದು ಒಂದೇ ಕಡಲಿಗೆ. ರಾತ್ರಿಯಲ್ಲಿ ಸಾವಿರಾರು ಚಿಕ್ಕೆಗಳಿದ್ದರೂ ಹಗಲಿಗೆ ಸೂರ್ಯ ಒಂದೇ. ಅಸಂಖ್ಯ ಗ್ರಹಮಂಡಲಗಳಿದ್ದರೂ ಆಕಾಶವು ಒಂದೇ. ನೂರು ಬಗೆಯ ಆರಾಧನೆಯಿದ್ದರೂ ದೇವರು ಎಲ್ಲರಿಗೂ ಒಂದೇ. ಹಲವು ಬಣ್ಣಗಳ ಹಸುಗಳಿದ್ದರೂ ಕರೆಯುವ ಹಾಲು ಬಿಳುಪೇ. ನಡೆ-ನುಡಿ ಭೇದಗಳಿದ್ದರೂ ಬದುಕುವ ಜನ ಒಂದೇ. ನೆಳಲು-ಬೆಳಕುಗಳ ನಡುವೆ ಹಾರಾಡುವ ಧ್ವಜ ಒಂದೇ. ಈ ಎಲ್ಲಾ ನಿದರ್ಶನಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುತ್ತವೆ.

  2. ೨. ಐಕ್ಯಗಾನ ಪದ್ಯದಲ್ಲಿ ಕವಿ ನೀಡಿರುವ ಸಂದೇಶವೇನು?

    Answer

    ಐಕ್ಯಗಾನ ಪದ್ಯದಲ್ಲಿ ಕವಿಯು ಭಾರತೀಯರಲ್ಲಿ ಏಕತೆ, ಗಾಢವಾದ ಐಕ್ಯತೆ ಇದೆ ಎಂಬ ಸಂದೇಶವನ್ನು ನೀಡಿದ್ದಾರೆ. ಹಲವು ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ, ಭಾರತ ನಮಗೆಲ್ಲ ಒಂದೇ ಎಂಬುದು ಇದರ ಮುಖ್ಯ ಆಶಯ. ಮರ, ನದಿ, ನಕ್ಷತ್ರ, ಸೂರ್ಯ ಮೊದಲಾದ ನಿಸರ್ಗದ ಉದಾಹರಣೆಗಳ ಮೂಲಕ ವೈವಿಧ್ಯತೆಯ ನಡುವೆಯೂ ಏಕತೆ ಇರುವುದನ್ನು ತೋರಿಸಿದ್ದಾರೆ. ಜನರ ಧಾರ್ಮಿಕ ಆಚರಣೆ ಹಾಗೂ ವೇಷಭೂಷಣಗಳು ಬೇರೆಯಾಗಿದ್ದರೂ ಅವರ ಮನಸ್ಸು ಒಂದೇ, ಭಾವ ಒಂದೇ ಎಂಬುದನ್ನು ಈ ಕವನ ಸಾರುತ್ತದೆ.

ಉ) ಸಂದರ್ಭದೊಡನೆ ವಿವರಿಸಿರಿ.

  1. ೧. ಹಲವು ಕೊಂಬೆಗಳ ಚಾಚಿಕೊಂಡರೂ ಮರಕ್ಕೆ ಬುಡ ಒಂದೇ.

    Answer

    ಈ ಸಾಲಿನಲ್ಲಿ ಕವಿಯು ಮರಕ್ಕೆ ಹಲವು ಕೊಂಬೆಗಳು ಚಾಚಿಕೊಂಡಿದ್ದರೂ ಅದರ ಬುಡ ಒಂದೇ ಇರುವಂತೆ, ಭಾರತದಲ್ಲಿ ವಿವಿಧ ಜನಾಂಗ, ಭಾಷೆ, ಸಂಸ್ಕೃತಿಗಳಿದ್ದರೂ ನಾವೆಲ್ಲರೂ ಒಂದೇ ಜನಾಂಗ ಎಂಬುದನ್ನು ಸಂಕೇತವಾಗಿ ತಿಳಿಸಿದ್ದಾರೆ.

  2. ೨. ಹಲವು ಬಣ್ಣಗಳ ಹಸುಗಳು ಕರೆಯುವ ಹಾಲಿನ ಬಿಳುಪೊಂದೇ.

    Answer

    ಹಲವು ಬಣ್ಣಗಳ ಹಸುಗಳು ಕರೆಯುವ ಹಾಲು ಬಿಳುಪೇ ಆಗಿರುತ್ತದೆ. ಅದೇ ರೀತಿ ಜನರ ನಡೆ-ನುಡಿ ಹಾಗೂ ಆಚಾರ-ವಿಚಾರಗಳಲ್ಲಿ ಭಿನ್ನತೆ ಕಂಡರೂ ಅವರ ಅಂತರಂಗದ ಭಾವ, ಮನಸ್ಸು ಎಲ್ಲರಲ್ಲೂ ಒಂದೇ ಆಗಿರುತ್ತದೆ ಎಂಬುದನ್ನು ಈ ಸಾಲು ಧ್ವನಿಸುತ್ತದೆ.

  3. ೩. ನೆಳಲು-ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ಧ್ವಜ ಒಂದೇ.

    Answer

    ನೆಳಲು ಮತ್ತು ಬೆಳಕುಗಳೆಂಬ ರೆಕ್ಕೆಗಳನ್ನು ಬಿಚ್ಚಿ ಹಾರಾಡುವ ಧ್ವಜ ಒಂದೇ ಇರುತ್ತದೆ. ಇದು ನಮ್ಮ ರಾಷ್ಟ್ರಧ್ವಜವನ್ನು ಸೂಚಿಸುತ್ತದೆ. ದೇಶದಲ್ಲಿ ಜನರು ವಿವಿಧ ರೀತಿಯ ಭಿನ್ನತೆಗಳನ್ನು ಹೊಂದಿದ್ದರೂ ನಮ್ಮೆಲ್ಲರನ್ನು ಒಂದುಗೂಡಿಸುವ ಧ್ವಜ ಒಂದೇ ಆಗಿದೆ ಎಂಬುದನ್ನು ಇದು ಸಂಕೇತಿಸುತ್ತದೆ.

ಊ) ಮರದ ಕೊಂಬೆಗಳು ವಿವಿಧತೆಯನ್ನು, ಬುಡ ಏಕತೆಯನ್ನು ಬಿಂಬಿಸುತ್ತದೆ. ಅದೇರೀತಿ ಐಕ್ಯಗಾನ ಪದ್ಯದಲ್ಲಿ ವಿವಿಧತೆ ಹಾಗೂ ಏಕತೆಯನ್ನು ಸಂಕೇತಿಸಿರುವ ಅಂಶಗಳನ್ನು ಪಟ್ಟಿಮಾಡಿರಿ.

  1. | ವಿವಿಧತೆ | ಏಕತೆ |

  2. |---|---|

  3. | ಮರದ ಕೊಂಬೆಗಳು | ಮರದ ಬುಡ |

  4. | | |

    Answer

    | ಹಲವು ನದಿಗಳು | ಕಡಲು ಒಂದೇ | | ಸಾವಿರ ಚಿಕ್ಕೆಗಳು | ರವಿ ಒಂದೇ | | ಅಗಣಿತ ಗ್ರಹಮಂಡಲಗಳು | ಆಕಾಶ ಒಂದೇ | | ನೂರು ಬಗೆಯ ಆರಾಧನೆ | ದೇವರು ಒಂದೇ | | ಹಲವು ಬಣ್ಣದ ಹಸುಗಳು | ಹಾಲಿನ ಬಿಳುಪು ಒಂದೇ | | ನಡೆ-ನುಡಿ ಭೇದಗಳು | ಬದುಕುವ ಜನ ಒಂದೇ | | ನೆಳಲು-ಬೆಳಕು | ಧ್ವಜ ಒಂದೇ |

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

  1. ೧. ಮರ -

    Answer

    ಮರ - ವೃಕ್ಷ

  2. ೨. ನಕ್ಷತ್ರ -

    Answer

    ನಕ್ಷತ್ರ - ತಾರೆ, ಚಿಕ್ಕೆ

  3. ೩. ರವಿ -

    Answer

    ರವಿ - ಸೂರ್ಯ

  4. ೪. ಕಡಲು -

    Answer

    ಕಡಲು - ಸಮುದ್ರ

  5. ೫. ಇರುಳು -

    Answer

    ಇರುಳು - ರಾತ್ರಿ

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.

  1. ೧. ಹಗಲು x .......................................... ೨. ಭೇದ x ..........................................

    Answer

    ಹಗಲು x ಇರುಳು ಭೇದ x ಅಭೇದ

  2. ೩. ನೆಳಲು x .......................................... ೪. ಹಲವು x ..........................................

    Answer

    ನೆಳಲು x ಬೆಳಕು ಹಲವು x ಒಂದು

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.

  1. ೧. ನಾವೆಲ್ಲರು : __________________________________________________

    Model sentence

    ನಾವೆಲ್ಲರು : ನಾವೆಲ್ಲರೂ ಶಾಲೆಗೆ ಹೋಗುತ್ತೇವೆ.

  2. ೨. ಅಗಣಿತ : __________________________________________________

    Model sentence

    ಅಗಣಿತ : ಅಗಣಿತ ಹುಡುಗಿಯರು ಹೂ ತರಲು ಹೋದರು.

  3. ೩. ನಡೆನುಡಿ : __________________________________________________

    Model sentence

    ನಡೆನುಡಿ : ನಮ್ಮ ಶಿಕ್ಷಕರು ನಡೆನುಡಿಯಲ್ಲಿ ಶ್ರೇಷ್ಠರು.

  4. ೪. ಆರಾಧನೆ : __________________________________________________

    Model sentence

    ಆರಾಧನೆ : ನನ್ನ ಅಕ್ಕ ಸಂಗೀತದ ಆರಾಧನೆ ಮಾಡುತ್ತಾಳೆ.

ಈ) ಇಲ್ಲಿರುವ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.

  1. ಮಾದರಿ : ನಾವೆಲ್ಲರು = ನಾವು + ಎಲ್ಲರು

  2. ೧. ದೇಶದೊಳೆಲ್ಲಿದ್ದರು = ______________ + ______________

    Answer

    ದೇಶದೊಳೆಲ್ಲಿದ್ದರು = ದೇಶದೊಳು + ಎಲ್ಲಿದ್ದರು

  3. ೨. ನಮಗೊಂದೆ = ______________ + ______________

    Answer

    ನಮಗೊಂದೆ = ನಮಗೆ + ಒಂದೇ

  4. ೩. ಕಡಲೊಂದೆ = ______________ + ______________

    Answer

    ಕಡಲೊಂದೆ = ಕಡಲು + ಒಂದೇ

  5. ೪. ಚಿಕ್ಕೆಗಳಿದ್ದರು = ______________ + ______________

    Answer

    ಚಿಕ್ಕೆಗಳಿದ್ದರು = ಚಿಕ್ಕೆಗಳು + ಇದ್ದರು

  6. ೫. ಬಿಳುಪೊಂದೆ = ______________ + ______________

    Answer

    ಬಿಳುಪೊಂದೆ = ಬಿಳುಪು + ಒಂದೇ

IV. ಚಟುವಟಿಕೆ :

  1. ೧. ಐಕ್ಯಗಾನ ಪದ್ಯವನ್ನು ಕಂಠಪಾಠ ಮಾಡಿ, ರಾಗವಾಗಿ ಹಾಡುವುದನ್ನು ಕಲಿಯಿರಿ.

  2. ೨. ನಮ್ಮ ರಾಷ್ಟ್ರಗೀತೆಯ ಪ್ರತಿ ಸಾಲು ನೀಡುವ ಅರ್ಥವನ್ನು ತಿಳಿಯಿರಿ.

  3. ೩. ಭಾರತದ ರಾಷ್ಟ್ರಧ್ವಜ, ಚಿಹ್ನೆ, ಪಕ್ಷಿ, ಪ್ರಾಣಿ, ಹೂವು, ಮರ ಹಾಗೂ ಹಣ್ಣು ಇವುಗಳ ಚಿತ್ರ ಸಂಗ್ರಹಿಸಿ, ಭಿತ್ತಿಪತ್ರದಲ್ಲಿ ಪ್ರಕಟಿಸಿ.

  4. ೪. ಭಾವೈಕ್ಯತೆಯ ಸಂದೇಶವಿರುವ ಕವಿತೆಗಳನ್ನು ಸಂಗ್ರಹಿಸಿ, ಶಾಲಾ ಕಾರ್ಯಕ್ರಮಗಳಲ್ಲಿ ಸಾಮೂಹಿಕವಾಗಿ ಹಾಡಿರಿ.

V. ಸೈದ್ಧಾಂತಿಕ ವ್ಯಾಕರಣ:

ವಿಧ್ಯರ್ಥಕ ವಾಕ್ಯಗಳು :

  1. ಮಕ್ಕಳೇ, ನೀವು ಈಗಾಗಲೇ ಹಲವು ರೀತಿಯ ವಾಕ್ಯಗಳನ್ನು ಗಮನಿಸಿದ್ದೀರಿ. ಈಗ ಇಲ್ಲಿರುವ ವಾಕ್ಯಗಳನ್ನು ಓದಿರಿ. ಆ ವಾಕ್ಯಗಳ ಹಿಂದಿರುವ ಭಾವವನ್ನು ಗಮನಿಸಿ. ಅವುಗಳನ್ನು ಆವರಣದಲ್ಲಿ ನೀಡಿದೆ.

  2. ೧. ಪ್ರಕಾಶ ಇತ್ತ ಕಡೆಗೆ ಬಾ. (ಆದೇಶ)

  3. ೨. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ. (ಪ್ರಾರ್ಥನೆ)

  4. ೩. ನೀನು ಅಂಗಡಿಗೆ ಹೋಗಿ ಸಕ್ಕರೆ ತೆಗೆದುಕೊಂಡು ಬರಬೇಕು. (ಆದೇಶ)

  5. ೪. ನೀನು ಸ್ವಲ್ಪ ನೀರು ಕೊಡುವೆಯಾ? (ಬೇಡಿಕೆ / ಕೋರಿಕೆ)

  6. ಈ ರೀತಿ ಆದೇಶ, ಪ್ರಾರ್ಥನೆ, ಕೋರಿಕೆ ಅಥವಾ ಬೇಡಿಕೆಗಳನ್ನು ಮಂಡಿಸುವ ವಾಕ್ಯಗಳಿಗೆ ವಿಧ್ಯರ್ಥಕ ವಾಕ್ಯಗಳೆಂದು ಕರೆಯುತ್ತಾರೆ.

Interactive Lab