CRECT Education

Class 6 Kannada Lesson 16: Brave Queen Keladi Chennamma | KTBS – Learn the Story

Description

Learn the courageous story of Queen Keladi Chennamma, who defied Mughal emperor Aurangzeb to protect Chhatrapati Shivaji's son. Part 1 of 2 for Class 6 Kannada Second Language, Lesson 16.

ನಾಟಕ · ಸಮಿತಿ ರಚನೆ

ಪಠ್ಯFull text

**ದೃಶ್ಯ-೧** (ರಾಜಾಸ್ಥಾನದ ದೃಶ್ಯ: ಆಸ್ಥಾನದಲ್ಲಿ ಚೆನ್ನಮ್ಮ ಪ್ರಜೆಗಳ ಕಷ್ಟ-ಸುಖ ಹಾಗೂ ದೂರು -ದುಮ್ಮಾನಗಳನ್ನು ಆಲಿಸುತ್ತಿದ್ದಾಳೆ. ಸರತಿ ಸಾಲಿನ ಕೊನೆಯಲ್ಲಿ ಇಬ್ಬರು ಜಂಗಮರು ನಿಂತಿದ್ದಾರೆ.) ಚೆನ್ನಮ್ಮ : ಏನು ಜಂಗಮರೆ, ಏನು ನಿಮ್ಮ ಸಮಸ್ಯೆ? ಜಂಗಮ ವೇಷಧಾರಿ : ನಾವು ಜಂಗಮರಲ್ಲ ತಾಯಿ! ನಾನು ಛತ್ರಪತಿ ಶಿವಾಜಿಯವರ ಮಗ ರಾಜಾರಾಮ. ಚೆನ್ನಮ್ಮ : (ಅಚ್ಚರಿಯಿಂದ) ಏನು? ನೀವು ಛತ್ರಪತಿ ಶಿವಾಜಿಯವರ ಮಕ್ಕಳೇ, ನನ್ನಿಂದೇನಾಗಬೇಕು? ಬನ್ನಿ ಕುಳಿತುಕೊಳ್ಳಿ. (ಆಸನ ತೋರಿಸುವಳು) (ರಾಜಾರಾಮ ಆಸನದಲ್ಲಿ ಕುಳಿತುಕೊಳ್ಳುತ್ತಾನೆ. ಇನ್ನುಳಿದವರು ಹಿಂದೆ ಹಾಗೆಯೇ ನಿಂತುಕೊಂಡಿದ್ದಾರೆ.) ರಾಜಾರಾಮ : ತಾಯಿ. ಆ ದುಷ್ಟ ಔರಂಗಜೇಬನು ನನ್ನ ಸೋದರ ಶಂಭಾಜಿಯನ್ನು ಸೆರೆ ಹಿಡಿದ. ಕ್ರೂರತನದಿಂದ ಕೊಲ್ಲಿಸಿಬಿಟ್ಟ. ಈಗ ನನ್ನನ್ನೂ ಕೊಲ್ಲಿಸಬೇಕೆಂದು ಹೊಂಚು ಹಾಕಿದ್ದಾನೆ. ನಮ್ಮ ರಾಜ್ಯವನ್ನು ವಶಪಡಿಸಿಕೊಳ್ಳಲು ಸೈನ್ಯವನ್ನು ಕಳುಹಿಸಿದ್ದಾನೆ. ಈಗಾಗಲೆ ಕೆಲವು ಕೋಟೆಗಳು ಅವನ ಕೈವಶವಾಗಿವೆ. ಶತ್ರುಗಳ ಕಣ್ಣುತಪ್ಪಿಸಿ ಇಲ್ಲಿಗೆ ಬಂದಿದ್ದೇವೆ. ನಮಗೆ ರಕ್ಷಣೆ ಕೊಡಿ. ಚೆನ್ನಮ್ಮ : ಬೇರೆ ರಾಜರಾರೂ ನಿಮಗೆ ರಕ್ಷಣೆ ನೀಡಲಿಲ್ಲವೇ? ರಾಜಾರಾಮ : ಇಲ್ಲ ತಾಯಿ! ಆ ದುಷ್ಟ ಔರಂಗಜೇಬನ ಕೋಪಕ್ಕೆ ಹೆದರಿ ರಕ್ಷಣೆ ನೀಡಲು ನಿರಾಕರಿಸಿದರು. ಆತನ ವೈರತ್ವ ಕಟ್ಟಿಕೊಳ್ಳುವುದು ಯಾರಿಗೂ ಸುಲಭದ ಮಾತಲ್ಲ. ಚೆನ್ನಮ್ಮ : ಇರಲಿ, ಶಿವಾಜಿ ಮಹಾರಾಜರ ಮಗನಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯವೆಂದು ಭಾವಿಸುತ್ತೇವೆ. ನಿಮಗೆ ಆಶ್ರಯ ನೀಡುವುದು ನಮ್ಮ ಧರ್ಮ! (ಚೆನ್ನಮ್ಮ ತಿಮ್ಮಣ್ಣ ನಾಯಕರತ್ತ ತಿರುಗಿ) ತಿಮ್ಮಣ್ಣ ನಾಯಕರೇ ಇವರನ್ನು ನಮ್ಮ ಅತಿಥಿ ಗೃಹಕ್ಕೆ ಕರೆದೊಯ್ಯಿರಿ. ತಕ್ಕ ವ್ಯವಸ್ಥೆಮಾಡಿರಿ. ತದನಂತರ ಆಲೋಚನೆ ಮಾಡೋಣ. ತಿಮ್ಮಣ್ಣ ನಾಯಕ : ಆಗಲಿ ತಾಯಿ. ರಾಜಾರಾಮ : ನಿಮ್ಮ ಔದಾರ್ಯ ದೊಡ್ಡದು ತಾಯಿ, ನಿಮಗೆ ನಾನು ಕೃತಜ್ಞ (ಎಲ್ಲರೂ ಹೊರಡುವರು. ತೆರೆ ಬೀಳುವುದು.) **ದೃಶ್ಯ -೨** (ಕೆಳದಿ ಸಂಸ್ಥಾನ, ರಾಜಸಭೆ ನಡೆಯುತ್ತಿರುವ ದೃಶ್ಯ. ಚೆನ್ನಮ್ಮ ಸಿಂಹಾಸನದಲ್ಲಿ ಆಸೀನಳಾಗಿದ್ದಾಳೆ) ಚೆನ್ನಮ್ಮ : ತಿಮ್ಮಣ್ಣ ನಾಯಕರೇ, ರಾಜಾರಾಮನಿಗೆ ಆಶ್ರಯ ನೀಡುವ ಬಗ್ಗೆ ನಿಮ್ಮ ಅಭಿಪ್ರಾಯ? ತಿಮ್ಮಣ್ಣನಾಯಕ : ಅಮ್ಮ, ನೆನಪು ಮಾಡಿಕೊಳ್ಳಿ, ಶಿವಾಜಿ ಮಹಾರಾಜರು ನಮ್ಮ ರಾಜ್ಯದ ವ್ಯಾಪಾರ ಕೇಂದ್ರಗಳಾದ ಕುಂದಾಪುರ, ಗೋಕರ್ಣಗಳ ಮೇಲೆ ದಾಳಿ ಮಾಡಿದ್ದರು. ಅಲ್ಲಿ ನಮಗೆ ಸೇರಬೇಕಾಗಿದ್ದ ತೆರಿಗೆ ಹಣವನ್ನು ಕಿತ್ತುಕೊಂಡು ಹೋಗಿದ್ದರು. ಚೆನ್ನಮ್ಮ : ನಿಜ. ತಿಮ್ಮಣ್ಣನಾಯಕರೇ, ಸಬ್ನವೀಸ ಕೃಷ್ಣಪ್ಪಯ್ಯನವರೇ ನಿಮ್ಮದೇನು ಅಭಿಪ್ರಾಯ? ಕೃಷ್ಣಪ್ಪಯ್ಯ : ತಾಯಿ, ನಾವೀಗ ರಾಜಾರಾಮನಿಗೆ ಆಶ್ರಯ ನೀಡುವುದು ಕಷ್ಟಕರ ಔರಂಗಜೇಬನಿಗೆ ತಿಳಿದರೆ ಆತ ನಮ್ಮ ಮೇಲೆ ಆಕ್ರಮಣ ಮಾಡುತ್ತಾನೆ ಆತನದು ಬಲಾಡ್ಯ ಸೈನ್ಯ, ನಮ್ಮದು ಚಿಕ್ಕ ಸೈನ್ಯ. ಚೆನ್ನಮ್ಮ : ನೀವೇನು ಹೇಳುತ್ತೀರಿ ಅಪ್ಪಾಜಿ? (ಸಿದ್ದಪ್ಪಶೆಟ್ಟಿಯವರತ್ತ ನೋಡಿ) ಸಿದ್ದಪ್ಪ ಶೆಟ್ಟಿ : ಶರಣು ಬಂದವರಿಗೆ ಆಶ್ರಯ ನೀಡುವುದು ನಮ್ಮ ಧರ್ಮ! ದುಷ್ಟರಿಗೆ ಹೆದರಿ ಹಿಂದೆ ಸರಿಯುವುದಕ್ಕಿಂತ ಮುಂದುವರಿದು ಹೋರಾಡುವುದೇ ಲೇಸು. ಚೆನ್ನಮ್ಮ : ಅಪ್ಪಾಜಿ ಹೇಳುವುದು ನಿಜ. ಈಗ ರಾಜಾರಾಮರು ನಮ್ಮಲ್ಲಿ ಆಶ್ರಯ ಬೇಡಿ ಬಂದಿದ್ದಾರೆ. ಅವರಿಗೆ ರಕ್ಷಣೆ ನೀಡುವುದು ನಮ್ಮ ರಾಜಧರ್ಮ! ಇದೇ ಕನ್ನಡಿಗರ ಪರಂಪರೆ! ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು. ನಮ್ಮ ಧರ್ಮವೇ ನಮ್ಮೆಲ್ಲರನ್ನು ರಕ್ಷಿಸುತ್ತದೆ. ತಿಮ್ಮಣ್ಣ ನಾಯಕ : ಹೌದು, ತಾಯಿ. ನಿಮ್ಮ ಮಾತು ನಿಜ! ಹಾಗೇ ಆಗಲಿ. ಸೈನಿಕ (ಬಂದು) ಮಹಾರಾಣಿಯವರಿಗೆ ಜಯವಾಗಲಿ, ತಮ್ಮನ್ನು ತುರ್ತಾಗಿ ಭೇಟಿಯಾಗಲು ಬೇಹುಗಾರನೊಬ್ಬ ಕಾಯುತ್ತಿದ್ದಾನೆ. ಕಳಿಸಿಕೊಡಲೇ? ಚೆನ್ನಮ್ಮ : ಕಳಿಸಿ. ಬೇಹುಗಾರ : (ನಮಸ್ಕಾರ ಮಾಡಿ) ತಾಯಿ ಒಂದು ಆಘಾತಕಾರಿ ಸುದ್ದಿ! ಚೆನ್ನಮ್ಮ : ಪರವಾಗಿಲ್ಲ ಹೇಳಿ. ಬೇಹುಗಾರ : ತಾವು ರಾಜಾರಾಮನಿಗೆ ಆಶ್ರಯಕೊಟ್ಟಿದ್ದನ್ನು ಕೇಳಿ ಔರಂಗಜೇಬನು ಬಹಳ ಕೋಪಗೊಂಡಿದ್ದಾನೆ. ರಾಜ್ಯವನ್ನು ಮುತ್ತಲು ಸೇನೆ ಕಳುಹಿಸಿದ್ದಾನೆ. ರಾಜಾರಾಮನನ್ನು ಔರಂಗಜೇಬನಿಗೆ ಒಪ್ಪಿಸಬೇಕಂತೆ ಇಲ್ಲವೇ ಯುದ್ಧಕ್ಕೆ ಸಿದ್ಧತೆ....................... ಚೆನ್ನಮ್ಮ : ಹೀಗೋ? ರಾಜಾರಾಮನಿಗೆ ಈಗಾಗಲೇ ಆಶ್ರಯ ನೀಡಿದ್ದಾಗಿದೆ ಅವರನ್ನು ಒಪ್ಪಿಸುವುದು ಸಾಧ್ಯವಿಲ್ಲ. ಶರಣಾಗತರನ್ನು ರಕ್ಷಿಸುವುದು ಕನ್ನಡಿಗರ ವೀರ ಪರಂಪರೆ. (ಕೃಷ್ಣಪ್ಪಯ್ಯನವರತ್ತ ತಿರುಗಿ) ಇದಕ್ಕೇನು ಮುಂದಿನ ದಾರಿ ಕೃಷ್ಣಪ್ಪಯ್ಯನವರೇ? ಕೃಷ್ಣಪ್ಪಯ್ಯ : ತಾಯಿ, ನಾವು ಕನ್ನಡಿಗರು. ಕಲಿತನದಿಂದ ಕಾದಾಡೋಣ. ಜಯಾಪಜಯಗಳು ಶಿವನಿಚ್ಛೆ. ಯುದ್ಧವೊಂದೇ ನಮಗೆ ಉಳಿದಿರುವ ದಾರಿ. ತಿಮ್ಮಣ್ಣ ನಾಯಕ : ಮಹಾರಾಣಿಯವರೇ, ಕೃಷ್ಣಪ್ಪಯ್ಯ ಹೇಳಿದ ಮಾತು ಸತ್ಯ. ಯುದ್ಧಕ್ಕೆ ಆದೇಶ ನೀಡಿರಿ. ಕನ್ನಡಿಗರ ಕಲಿತನ ತೋರಿಸೋಣ. ಸಿದ್ದಪ್ಪಶೆಟ್ಟಿ : ಮಗಳೇ, ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುವುದೇ ಸಭೆಯ ತೀರ್ಮಾನವೆಂದು ಕಾಣುತ್ತದೆ. ಚೆನ್ನಮ್ಮ : ಸೇನಾನಾಯಕರೇ, ಮಂತ್ರಿಗಳೇ ನಮ್ಮ ವೀರರಿಗೆ ಸಿದ್ಧರಾಗಲು ತಿಳಿಸಿ. ಯುದ್ಧಕ್ಕೆ ತಕ್ಕ ಸಿದ್ಧತೆಗಳಾಗಲಿ ಹರ ಹರ ಮಹಾದೇವ! (ಎಲ್ಲರೂ ಹರ ಹರ ಮಹಾದೇವ! ಹರ ಹರ ಮಹಾದೇವ ! ಎನ್ನುತ್ತಾ ಹೋಗುವರು.) **ದೃಶ್ಯ -೩** (ಕೆಳದಿ ಅರಮನೆಯ ಒಳಾಂಗಣ) ಚೆನ್ನಮ್ಮ : ಕೃಷ್ಣಪ್ಪಯ್ಯ ಮತ್ತು ತಿಮ್ಮಣ್ಣ ನಾಯಕರೇ ಯುದ್ಧದ ಸಮಾಚಾರವೇನು? ನೆರೆಯ ಅರಸರು ನಮಗೆ ನೆರವು ನೀಡುತ್ತಿರುವರೇ? ತಿಮ್ಮಣ್ಣ ನಾಯಕ : ಹೌದು ತಾಯಿ, ನಮ್ಮ ನೆರೆಯ ಅರಸರೆಲ್ಲರೂ ಸಹಾಯ ನೀಡುತ್ತಿದ್ದಾರೆ. ನಮ್ಮ ಸೈನಿಕರು, ತಂಡ - ತಂಡವಾಗಿ ಹೋಗುತ್ತಿದ್ದಾರೆ. ಮಾರ್ಗ ಮಧ್ಯದಲ್ಲಿಯೇ ಅವರ ಡೇರೆಗಳ ಮೇಲೆ ಹಠಾತ್ತಾಗಿ ದಾಳಿ ಮಾಡುತ್ತಿದ್ದಾರೆ. ನಮ್ಮವರ ಈ ಮಿಂಚಿನ ಆಕ್ರಮಣದಿಂದ ಮೊಗಲರ ಸೇನೆ ಹೌಹಾರಿದೆ. ಕೃಷ್ಣಪ್ಪಯ್ಯ : ಅಮ್ಮಾ, ಮಾರ್ಗ ಮಧ್ಯದಲ್ಲಿ ಜಡಿ ಮಳೆ ಸುರಿಯುತ್ತಿದೆ. ಅವರಿಗೆ ಅರಣ್ಯ ಮಾರ್ಗದಲ್ಲಿ ದಿಕ್ಕು ತಿಳಿಯುತ್ತಿಲ್ಲ. ಅದರ ಜೊತೆ ಆಹಾರ ಸಿಗದಂತೆ ಮಾಡಿದ್ದೇವೆ. ನಮ್ಮ ಕೂಟ ಕದನದಿಂದ ಮೊಗಲರು ಕಂಗೆಟ್ಟಿದ್ದಾರೆ. ತಿಮ್ಮಣ್ಣನಾಯಕ : ನಮ್ಮ ವಾವುತರು ಪಳಗಿದ ಆನೆಗಳ ಸಹಾಯದಿಂದ ನೂರಾರು ಕಾಡಾನೆಗಳನ್ನು ಅವರ ಬಿಡಾರಗಳತ್ತ ನುಗ್ಗಿಸುತ್ತಿದ್ದಾರೆ ಇದರಿಂದ ಔರಂಗಜೇಬನ ಸೈನಿಕರು ಮತ್ತಷ್ಟು ಭಯ-ಭೀತರಾಗಿದ್ದಾರೆ. ಪ್ರಾಣಭಯದಿಂದ ಶಸ್ತ್ರಾಸ್ತ್ರಗಳನ್ನು ಬಿಟ್ಟು ದಿಕ್ಕೆಟ್ಟು ಓಡಿ ಹೋಗುತ್ತಿದ್ದಾರೆ. ಸೇನಾಧಿಪತಿ : (ಮಧ್ಯದಲ್ಲಿ ಆಗಮಿಸಿ) ಮಹಾರಾಣಿಯವರಿಗೆ ಜಯವಾಗಲಿ! ... ಮೊಗಲರ ಸೇನೆ ಓಡಿ ಹೋಯಿತು. ಯುದ್ಧದಲ್ಲಿ ನಾವು ಗೆದ್ದೆವು! ಚೆನ್ನಮ್ಮ : ಹೌದೇ? ಕೆಳದಿ ವೀರರು ಕರ್ನಾಟಕದ ಪರಂಪರೆ ಕಾಯ್ದರು ತಾಯಿ ಭುವನೇಶ್ವರಿ ಕಾಪಾಡಿದಳು. (ಎಲ್ಲರೂ ಎದ್ದು ನಿಂತು ಜಯಘೋಷ ಮಾಡುವರು). (ತೆರೆಬೀಳುತ್ತದೆ)

"ಶರಣಾಗತರನ್ನು ರಕ್ಷಿಸುವುದು ಕನ್ನಡಿಗರ ವೀರ ಪರಂಪರೆ." — "Protecting those who seek refuge is the brave tradition of Kannadigas."

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಕೀರ್ತಿ - ಖ್ಯಾತಿ, ಸ್ತುತಿ; ದಶ - ಹತ್ತು; ಬಲಾಡ್ಯ- ಬಲಶಾಲಿ; ಕೃತಜ್ಞ - ಉಪಕಾರವನ್ನು ನೆನೆಯುವವನು; ಸಂಸ್ಥಾನ - ರಾಜ್ಯ, ದೇಶದ ಭಾಗ; ತೆರಿಗೆ-ಕರ, ಸುಂಕ, ಕಂದಾಯ; ಶರಣು - ರಕ್ಷಣೆ, ಮೊರೆಹೋಗು, ನಮಸ್ಕಾರ; ಘೋಷಿಸು- ಕೂಗಿ ಹೇಳು, ಏರುದ್ದನಿ; ತುರ್ತು - ಜರೂರು, ಜರೂರು ಪರಿಸ್ಥಿತಿ; ಬಿಡಾರ - ತಂಗುವ ಸ್ಥಳ; ಆಘಾತ - ಪೆಟ್ಟು, ಕೇಡು; ಆದೇಶ - ಅಪ್ಪಣೆ; ಮಾವುತ - ಮಾವಟಿಗ, ಆನೆಯನ್ನು ನಡೆಸುವವನು; ಶಸ್ತ್ರಾಸ್ತ್ರ - ಆಯುಧಗಳು; ಹೊಂಚು - ನಿರೀಕ್ಷಿಸು, ಯಾರಿಗೂ ಕಾಣದಂತೆ ಗುಪ್ತವಾಗಿರು; ದುಮ್ಮಾನ - ವ್ಯಸನ, ಚಿಂತೆ; ಆಸನ - ಕುಳಿತುಕೊಳ್ಳುವ ಸಾಧನ.

ಗಮನಿಸಿ - ತಿಳಿ

  1. ಕಣ್ಣುತಪ್ಪಿಸು - ಮರೆಮಾಚು; ಪರಂಪರೆ - ಹಿಂದಿನಿಂದ ನಡೆದು ಬಂದ ಸಂಪ್ರದಾಯ; ಬೇಹುಗಾರ - ಗೂಢಚಾರ, ಗುಪ್ತಚಾರ; ಹೌಹಾರು - ಗಾಬರಿಯಾಗು, ಬೆಚ್ಚಿಬೀಳು; ಎದೆಗುಂದು - ಧೈರ್ಯಗೆಡು; ಕಂಗೆಡು - ದಿಕ್ಕು ತೋಚದಂತಾಗುವುದು, ದಾರಿ ಕಾಣದಾಗುವುದು; ಸಬ್ನವೀಸ - ಕಂದಾಯ ಅಧಿಕಾರಿ; ಧರ್ಮ - ಸರ್ವಸಮ್ಮತವಾದ ಬದುಕುವ ಕ್ರಮ; ಕೋಟೆ - ಬಲವಾದ ರಕ್ಷಣಾ ಗೋಡೆ; ಕೂಟ ಯುದ್ಧ - ಹಠಾತ್ತಾಗಿ ಎರಗಿ ದಾಳಿ ಮಾಡುವ ಯುದ್ಧದ ತಂತ್ರಗಾರಿಕೆ.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಚೆನ್ನಮ್ಮ ಎಲ್ಲಿ ಆಳುತ್ತಿದ್ದಳು?

    Answer

    ಚೆನ್ನಮ್ಮಳು ಕೆಳದಿ ಸಂಸ್ಥಾನದಲ್ಲಿ ಆಳುತ್ತಿದ್ದಳು.

  2. ೨. ರಾಜಾರಾಮನು ಯಾರ ಮಗ?

    Answer

    ರಾಜಾರಾಮನು ಛತ್ರಪತಿ ಶಿವಾಜಿಯವರ ಮಗ.

  3. ೩. ಶಂಭಾಜಿಯನ್ನು ಸೆರೆ ಹಿಡಿದು ಕೊಲ್ಲಿಸಿದವನಾರು?

    Answer

    ದುಷ್ಟ ಔರಂಗಜೇಬನು ಶಂಭಾಜಿಯನ್ನು ಸೆರೆ ಹಿಡಿದು ಕೊಲ್ಲಿಸಿದನು.

  4. ೪. ರಾಜಾರಾಮನಿಗೆ ಯಾರೂ ರಕ್ಷಣೆ ನೀಡಲಿಲ್ಲ. ಏಕೆ?

    Answer

    ಬೇರೆ ರಾಜರು ಔರಂಗಜೇಬನ ಕೋಪಕ್ಕೆ ಹೆದರಿ ರಾಜಾರಾಮನಿಗೆ ರಕ್ಷಣೆ ನೀಡಲಿಲ್ಲ.

  5. ೫. ಔರಂಗಜೇಬ ಏಕೆ ಕೋಪಗೊಂಡನು?

    Answer

    ಚೆನ್ನಮ್ಮಳು ರಾಜಾರಾಮನಿಗೆ ಆಶ್ರಯ ಕೊಟ್ಟಿದ್ದನ್ನು ಕೇಳಿ ಔರಂಗಜೇಬನು ಕೋಪಗೊಂಡನು.

  6. ೬. ಸಿದ್ದಪ್ಪ ಶೆಟ್ಟರು ಸಭೆಯ ತೀರ್ಮಾನ ಏನೆಂದು ಹೇಳಿದರು?

    Answer

    ಸಿದ್ದಪ್ಪ ಶೆಟ್ಟರು ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುವುದೇ ಸಭೆಯ ತೀರ್ಮಾನವೆಂದು ಹೇಳಿದರು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ರಾಜಾರಾಮನು ರಾಣಿ ಚೆನ್ನಮ್ಮನಿಗೆ ಸಭೆಯಲ್ಲಿ ಏನೆಂದು ಕೇಳಿಕೊಂಡನು?

    Answer

    ರಾಜಾರಾಮನು ತನ್ನ ಸೋದರ ಶಂಭಾಜಿಯನ್ನು ಔರಂಗಜೇಬನು ಕೊಲ್ಲಿಸಿದ್ದಾಗಿಯೂ, ತನ್ನನ್ನೂ ಕೊಲ್ಲಿಸಲು ಹೊಂಚು ಹಾಕಿ ರಾಜ್ಯವನ್ನು ವಶಪಡಿಸಿಕೊಳ್ಳಲು ಸೈನ್ಯ ಕಳುಹಿಸಿದ್ದಾಗಿಯೂ ತಿಳಿಸಿದನು. ಶತ್ರುಗಳ ಕಣ್ಣು ತಪ್ಪಿಸಿ ಬಂದಿದ್ದೇವೆಂದು ಹೇಳಿ ತಮಗೆ ರಕ್ಷಣೆ ನೀಡಬೇಕೆಂದು ಕೇಳಿಕೊಂಡನು.

  2. ೨. ಬೇಹುಗಾರನು ಬಂದು ರಾಣಿಯವರಿಗೆ ಹೇಳಿದ್ದೇನು?

    Answer

    ಚೆನ್ನಮ್ಮಳು ರಾಜಾರಾಮನಿಗೆ ಆಶ್ರಯ ಕೊಟ್ಟಿದ್ದನ್ನು ಕೇಳಿ ಔರಂಗಜೇಬನು ಬಹಳ ಕೋಪಗೊಂಡಿದ್ದಾನೆಂದೂ, ರಾಜ್ಯವನ್ನು ಮುತ್ತಲು ಸೇನೆ ಕಳುಹಿಸಿದ್ದಾನೆಂದೂ ಬೇಹುಗಾರನು ತಿಳಿಸಿದನು. ರಾಜಾರಾಮನನ್ನು ಒಪ್ಪಿಸಬೇಕು ಇಲ್ಲವೇ ಯುದ್ಧಕ್ಕೆ ಸಿದ್ಧತೆ ನಡೆಸಬೇಕೆಂದೂ ಹೇಳಿದನು.

  3. ೩. ಮೊಗಲರ ಸೇನೆ ಕಾಡಿನಲ್ಲಿ ಭಯ-ಭೀತರಾಗಲು ಕಾರಣ ಹೇಳಿರಿ.

    Answer

    ಮಾರ್ಗ ಮಧ್ಯದಲ್ಲಿ ಜಡಿ ಮಳೆ ಸುರಿಯುತ್ತಿದ್ದು, ಅರಣ್ಯ ಮಾರ್ಗದಲ್ಲಿ ದಿಕ್ಕು ತಿಳಿಯದೆ ಮತ್ತು ಆಹಾರ ಸಿಗದಂತೆ ಮಾಡಿದ್ದರಿಂದ ಮೊಗಲರ ಸೇನೆ ಕಂಗೆಟ್ಟಿತ್ತು. ಜೊತೆಗೆ ಕೆಳದಿಯವರ ಕೂಟ ಕದನ ಹಾಗೂ ಪಳಗಿದ ಆನೆಗಳ ಸಹಾಯದಿಂದ ಕಾಡಾನೆಗಳನ್ನು ನುಗ್ಗಿಸಿದ್ದರಿಂದ ಅವರು ಭಯ-ಭೀತರಾದರು.

ಇ) ಈ ಮಾತನ್ನು ಯಾರು, ಯಾರಿಗೆ ಹೇಳಿದರು? ಬರೆಯಿರಿ.

  1. ೧. ನಾವು ಜಂಗಮರಲ್ಲ ತಾಯಿ!

    Answer

    ಈ ಮಾತನ್ನು ರಾಜಾರಾಮನು ಚೆನ್ನಮ್ಮಳಿಗೆ ಹೇಳಿದನು.

  2. ೨. ಆತನ ವೈರತ್ವ ಕಟ್ಟಿಕೊಳ್ಳುವುದು ಯಾರಿಗೂ ಸುಲಭದ ಮಾತಲ್ಲ.

    Answer

    ಈ ಮಾತನ್ನು ರಾಜಾರಾಮನು ಚೆನ್ನಮ್ಮಳಿಗೆ ಹೇಳಿದನು.

  3. ೩. ಶರಣು ಬಂದವರಿಗೆ ಆಶ್ರಯ ನೀಡುವುದು ನಮ್ಮ ಧರ್ಮ!

    Answer

    ಈ ಮಾತನ್ನು ಸಿದ್ದಪ್ಪ ಶೆಟ್ಟಿಯವರು ಚೆನ್ನಮ್ಮಳಿಗೆ ಹೇಳಿದರು.

  4. ೪. ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು.

    Answer

    ಈ ಮಾತನ್ನು ಚೆನ್ನಮ್ಮಳು ಸಭೆಯಲ್ಲಿದ್ದ ಎಲ್ಲರಿಗೂ ಹೇಳಿದಳು.

  5. ೫. ಕೆಳದಿ ವೀರರು ಕರ್ನಾಟಕದ ಪರಂಪರೆ ಕಾಯ್ದರು.

    Answer

    ಈ ಮಾತನ್ನು ಚೆನ್ನಮ್ಮಳು ಸಭೆಯಲ್ಲಿದ್ದ ಎಲ್ಲರಿಗೂ ಹೇಳಿದಳು.

ಈ) ಬಿಟ್ಟ ಸ್ಥಳ ತುಂಬಿರಿ.

  1. ೧. ಶರಣಾಗತರನ್ನು ರಕ್ಷಿಸುವುದು ಕನ್ನಡಿಗರ ........................ .

    Answer

    ಶರಣಾಗತರನ್ನು ರಕ್ಷಿಸುವುದು ಕನ್ನಡಿಗರ ವೀರ ಪರಂಪರೆ.

  2. ೨. ಕೊಲ್ಲುವವನಿಗಿಂತ ........................ ದೊಡ್ಡವನು.

    Answer

    ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು.

  3. ೩. ನಮ್ಮ ನೆರೆಯ ........................ ಸಹಾಯ ನೀಡುತ್ತಿದ್ದಾರೆ.

    Answer

    ನಮ್ಮ ನೆರೆಯ ಅರಸರು ಸಹಾಯ ನೀಡುತ್ತಿದ್ದಾರೆ.

  4. ೪. ಕೂಟ ಕದನದಿಂದ ........................ ಕಂಗೆಟ್ಟಿದ್ದಾರೆ.

    Answer

    ಕೂಟ ಕದನದಿಂದ ಮೊಗಲರು ಕಂಗೆಟ್ಟಿದ್ದಾರೆ.

  5. ೫. ಮೊಗಲರು ಪ್ರಾಣ ಭಯದಿಂದ ........................ ಬಿಟ್ಟು ದಿಕ್ಕೆಟ್ಟು ಓಡಿದರು.

    Answer

    ಮೊಗಲರು ಪ್ರಾಣ ಭಯದಿಂದ ಶಸ್ತ್ರಾಸ್ತ್ರಗಳನ್ನು ಬಿಟ್ಟು ದಿಕ್ಕೆಟ್ಟು ಓಡಿದರು.

ಉ) ಹೊಂದಿಸಿ ಬರೆಯಿರಿ.

  1. ೧. ಶಿವಾಜಿಯ ಮಗ ಕೃಷ್ಣಪ್ಪಯ್ಯ \_\_\_\_\_\_\_\_\_\_\_\_\_\_\_\_

    Answer

    ಶಿವಾಜಿಯ ಮಗ - ರಾಜಾರಾಮ

  2. ೨. ಸಿದ್ದಪ್ಪಶೆಟ್ಟಿ ಮಗಳು ಸೋಮಶೇಖರ ನಾಯಕ \_\_\_\_\_\_\_\_\_\_\_\_\_\_\_\_

    Answer

    ಸಿದ್ದಪ್ಪಶೆಟ್ಟಿ ಮಗಳು - ಕೆಳದಿಚೆನ್ನಮ್ಮ

  3. ೩. ಸಬ್ನವೀಸ ಕೆಳದಿಚೆನ್ನಮ್ಮ \_\_\_\_\_\_\_\_\_\_\_\_\_\_\_\_

    Answer

    ಸಬ್ನವೀಸ - ಕೃಷ್ಣಪ್ಪಯ್ಯ

  4. ೪. ಚೆನ್ನಮ್ಮನ ಪತಿ ರಾಜಾರಾಮ \_\_\_\_\_\_\_\_\_\_\_\_\_\_\_\_

    Answer

    ಚೆನ್ನಮ್ಮನ ಪತಿ - ಸೋಮಶೇಖರ ನಾಯಕ

III. ಭಾಷಾಭ್ಯಾಸ :

ಅ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿರಿ.

  1. ೧. ತುರ್ತು ........................................................................................

    Model sentence

    ತುರ್ತು: ಅಮ್ಮನಿಗೆ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಯಿತು.

  2. ೨. ಕಣ್ಣು ತಪ್ಪಿಸು ........................................................................................

    Model sentence

    ಕಣ್ಣು ತಪ್ಪಿಸು: ಇಲಿಯು ಬೆಕ್ಕಿನ ಕಣ್ಣು ತಪ್ಪಿಸಿ ಓಡಿಹೋಯಿತು.

  3. ೩. ದಾಳಿ ಮಾಡು ........................................................................................

    Model sentence

    ದಾಳಿ ಮಾಡು: ಗಿಡುಗವು ಕೋಳಿ ಮರಿಯ ಮೇಲೆ ದಾಳಿ ಮಾಡಿತು.

  4. ೪. ತಂಡ-ತಂಡವಾಗಿ ........................................................................................

    Model sentence

    ತಂಡ-ತಂಡವಾಗಿ: ಮಕ್ಕಳು ತಂಡ-ತಂಡವಾಗಿ ಆಟವಾಡಲು ಮೈದಾನಕ್ಕೆ ಹೋದರು.

  5. ೫. ಹಠಾತ್ತಾಗಿ ........................................................................................

    Model sentence

    ಹಠಾತ್ತಾಗಿ: ಹಠಾತ್ತಾಗಿ ಮಳೆ ಬಂದಿದ್ದರಿಂದ ನಾವು ನೆನೆದೆವು.

  6. ೬. ಭಯ-ಭೀತಿ ........................................................................................

    Model sentence

    ಭಯ-ಭೀತಿ: ಕತ್ತಲೆಯಲ್ಲಿ ನಾಯಿ ಬೊಗಳಿದ್ದರಿಂದ ಮಗುವಿಗೆ ಭಯ-ಭೀತಿಯಾಯಿತು.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಗಮನಿಸಿ ಓದಿರಿ. ಗಟ್ಟಿಯಾಗಿ ಹೇಳಿರಿ ಉಚ್ಚಾರ ದೋಷವಾಗದಿರಲಿ.

  1. ದುಷ್ಟ × ಶಿಷ್ಟ

  2. ಸತ್ಯ × ಅಸತ್ಯ

  3. ಕೃತಜ್ಞ × ಕೃತಘ್ನ

  4. ಆಶ್ರಯ × ನಿರಾಶ್ರಯ

  5. ಜಯ × ಅಪಜಯ

  6. ಧರ್ಮ × ಅಧರ್ಮ

IV. ಚಟುವಟಿಕೆಗಳು :

ಅ) ೧. ಕನ್ನಡನಾಡಿನ ವೀರ ಪುರುಷರ ಹೆಸರುಗಳನ್ನು ಪಟ್ಟಿ ಮಾಡಿರಿ.

  1. ೨. ವೀರರಾಣಿ ಕೆಳದಿ ಚೆನ್ನಮ್ಮ ನಾಟಕವನ್ನು ಕಲಿತು ನಿಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ಅಭಿನಯಿಸಿರಿ.

  2. ೩. ಕನ್ನಡ ನಾಡಿನ ವೀರ ಮಹಿಳೆಯರ ಕಥೆಗಳನ್ನು ಸಂಗ್ರಹಿಸಿ ಓದಿರಿ.

ಆ) ಕೆಳಗಿನ ಸಾಲುಗಳನ್ನು ಗಟ್ಟಿಯಾಗಿ ಓದಿ, ಪ್ರಶ್ನೆಗಳಿಗೆ ಉತ್ತರಿಸಿರಿ.

  1. ಕನ್ನಡ ಪರಂಪರೆ ಎಂಬುದು ಕನ್ನಡಿಗರ ಜೀವನ ಧರ್ಮ. ಇದು ನಡೆದು ಬಂದ ಹಾದಿ. ಮಹಾಕವಿ ಕುವೆಂಪುರವರು “ಕರ್ನಾಟಕವೆಂಬುದು ಬರಿ ಹೆಸರಲ್ಲ, ಮಂತ್ರಕಣಾ, ಶಕ್ತಿ ಕಣಾ, ದೇವಿ ಕಣಾ” ಎನ್ನುತ್ತಾರೆ.

  2. ಕರ್ನಾಟಕದ ಒಂದು ಶಾಸನವು ಕನ್ನಡಿಗರು ಸಾಧು ಜನರಿಗೆ ಸಾಧು. ಯಾರಾದರು ತೊಂದರೆ ಕೊಟ್ಟರೆ ಅವರನ್ನು ಬಂಧಿಸದೆ ಬಿಡರು ಎಂದು ಹೇಳುತ್ತದೆ. ಕನ್ನಡಿಗರು ವೀರರು. ಈ ಜನ ಕಾವೇರಿಯಿಂದ ಗೋದಾವರಿನದಿಯವರೆಗೆ, ಕರ್ನಾಟಕದಿಂದ ಬಂಗಾಳದವರೆಗೆ ಗೆದ್ದು ಬಂದಿದ್ದಾರೆ. ವೀರತನ ಮೆರೆದಿದ್ದಾರೆ.

  3. ಇಲ್ಲಿಯ ಶರಣರು ಇತರರನ್ನು “ಇವನಾರವ ಇವನಾರವ ಎಂದೆನ್ನದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ” ಎಂದು ತಮ್ಮ ಹಿರಿತನ ತೋರಿದ್ದಾರೆ. ಕನಕದಾಸರು ಕುಲ-ಕುಲವೆಂದು ಹೊಡೆದಾಡದಿರಿ ಎಂದು ಎಚ್ಚರಿಸಿದ್ದಾರೆ. “ಏನಾದರು ಆಗು ಮೊದಲು ಮಾನವನಾಗು” ಎಂದು ಸಿದ್ದಯ್ಯ ಪುರಾಣಿಕರವರು ಜಗತ್ತಿಗೆ ಹೇಳಿದ್ದಾರೆ. ಇದುವೆ ಕನ್ನಡದ ಪರಂಪರೆ.

  4. ೧. ಕನ್ನಡ ಪರಂಪರೆ ಎಂದರೆ ಏನು?

    Answer

    ಕನ್ನಡ ಪರಂಪರೆ ಎಂಬುದು ಕನ್ನಡಿಗರ ಜೀವನ ಧರ್ಮ ಮತ್ತು ನಡೆದು ಬಂದ ಹಾದಿಯಾಗಿದೆ.

  5. ೨. ಕುವೆಂಪುರವರು ಕರ್ನಾಟಕದ ಬಗ್ಗೆ ಏನು ಹೇಳುತ್ತಾರೆ?

    Answer

    ಕುವೆಂಪುರವರು ಕರ್ನಾಟಕವೆಂಬುದು ಬರಿ ಹೆಸರಲ್ಲ, ಅದು ಮಂತ್ರ, ಶಕ್ತಿ ಮತ್ತು ದೇವಿ ಎಂದು ಹೇಳುತ್ತಾರೆ.

  6. ೩. ಶರಣರು ಹೇಳಿದ್ದೇನು?

    Answer

    ಶರಣರು 'ಇವನಾರವ ಇವನಾರವ ಎಂದೆನ್ನದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ' ಎಂದು ಹೇಳಿದರು.

  7. ೪. ಸಿದ್ದಯ್ಯ ಪುರಾಣಿಕರವರು ಜಗತ್ತಿಗೆ ಹೇಳಿದ್ದೇನು?

    Answer

    ಸಿದ್ದಯ್ಯ ಪುರಾಣಿಕರವರು 'ಏನಾದರು ಆಗು ಮೊದಲು ಮಾನವನಾಗು' ಎಂದು ಜಗತ್ತಿಗೆ ಹೇಳಿದರು.

Interactive Lab