CRECT Education

Class 6 Kannada Lesson 18: Kattabomma | KTBS Second Language – Learn the Story

Description

The story of the fearless freedom fighter Veerapandya Kattabomma, who defied the British East India Company and sacrificed his life for his motherland.

ಗದ್ಯ (prose) · ಡಾ. ಬಾಬು ಕೃಷ್ಣಮೂರ್ತಿ

ಪಠ್ಯFull text

**ಪಾಠ ಪ್ರವೇಶ :** ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ ನೀಡಿದ ಮಹಾನ್ ಹೋರಾಟಗಾರರಲ್ಲಿ ಒಬ್ಬರಾದ ವೀರಪಾಂಡ್ಯ ಕಟ್ಟಬೊಮ್ಮು (ಕಟ್ಟಬೊಮ್ಮನ್ ಎಂದೂ ಹೇಳುತ್ತಾರೆ) 1760ರ ಜನವರಿ 3ರಂದು (ಈಗಿನ ತಮಿಳುನಾಡಿನ) ಪಾಂಚಾಲಂಕುರುಚ್ಚಿ ಎಂಬಲ್ಲಿ ಜನಿಸಿದರು. ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಆಗಮಿಸಿ ತನ್ನ ಬೇರು ಬಿಡಲು ಆರಂಭಿಸಿದ ದಿನಗಳಲ್ಲೇ ಅದರ ವಿರುದ್ಧ ಸಿಡಿದೆದ್ದು ಹೋರಾಟ ನಡೆಸಿ ಕೊನೆಗೆ ನೇಣು ಶಿಕ್ಷೆಗೆ ಗುರಿಯಾದ ಅಪ್ರತಿಮ ಹೋರಾಟಗಾರ ವೀರಪಾಂಡ್ಯ ಕಟ್ಟಬೊಮ್ಮು. ಮಕ್ಕಳೇ ಕೇಳಿ! ಕಟ್ಟಬೊಮ್ಮು ಆಂಧ್ರದವನಂತೆ. ಅವನ ಹೆಸರು “ಗಟ್ಟಿಬೊಮ್ಮು” ಅಂತೆ. ಅಂದರೆ ಬಲಶಾಲಿಯಾದವನು ಎಂದರ್ಥ. ಬಲಶಾಲಿಯಾಗಿ ಬೆಳೆದುನಿಂತ ಗಟ್ಟಿಬೊಮ್ಮುವನ್ನು ಪಾಂಡ್ಯರಾಜ ಜಗವೀರ, ದಳಪತಿಯನ್ನಾಗಿ ಮಾಡಿದ ಮತ್ತು ಜಗವೀರನಿಗೆ ಸಾವು ಸಮೀಪಿಸಿದಾಗ ಬೊಮ್ಮುವನ್ನು ಬಳಿ ಕರೆದು, “ಬೊಮ್ಮು! ನಾನು ಇನ್ನು ಹೆಚ್ಚು ಕಾಲ ಬದುಕಲಾರೆ. ಇನ್ನು ಈ ರಾಜ್ಯಕ್ಕೆ ನೀನೇ ದಿಕ್ಕು. ರಾಜ್ಯವನ್ನು ಚೆನ್ನಾಗಿ ನೋಡಿಕೋ. ಪ್ರಜೆಗಳನ್ನು ಸ್ವಂತ ಮಕ್ಕಳಂತೆ ಕಾಣು” ಎಂದು ರಾಜ್ಯವನ್ನು ಒಪ್ಪಿಸಿ ಅವನು ಸತ್ತುಹೋದ. ಬೊಮ್ಮು ಪಾಂಚಾಲಕುರುಚ್ಚಿ ಎಂಬ ಊರನ್ನು ರಾಜಧಾನಿಯನ್ನಾಗಿ ಮಾಡಿಕೊಂಡ. ಅಲ್ಲೊಂದು ಬಲವಾದ ಕೋಟೆ ಕಟ್ಟಿಸಿದ. ಬಹು ಜನಪ್ರಿಯನಾದ. ೧೭೯೦ರಲ್ಲಿ ಜನರು ಅವನಿಗೆ ಪಟ್ಟಕಟ್ಟಿದರು. ಇತ್ತ ದೇಶದಾದ್ಯಂತ ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಯು ತನ್ನ ಬಲೆಯನ್ನು ಹರಡುತ್ತಿತ್ತು. ಮೆಲ್ಲಮೆಲ್ಲನೆ ಅನೇಕ ರಾಜ್ಯಗಳನ್ನು ತಮ್ಮ ಹೊಟ್ಟೆಯೊಳಗೆ ಹಾಕಿಕೊಂಡ ಆಂಗ್ಲರು ಅಲ್ಲಿನ ರಾಜರನ್ನು ಸದೆಬಡಿದರು. ಬೊಮ್ಮುವಿನ ಬಳಿಗೆ ಬಂದ ಆಂಗ್ಲ ಪ್ರತಿನಿಧಿ ಕಪ್ಪಕಾಣಿಕೆ ಕೊಡಲು ಕೇಳಿದ. ಬೊಮ್ಮು ಅವನನ್ನು ಧಿಕ್ಕರಿಸಿ ಹಿಂದಕ್ಕಟ್ಟಿದ. ಇವನ ಗಂಡುಗಲಿತನವನ್ನು ಕಂಡು ಆಂಗ್ಲರಿಗೆ ನೆತ್ತಿಯ ಮೇಲೆ ಮೆಣಸು ಅರೆದಂತಾಯಿತು. ದಿಕ್ಕು ತೋರದಾಯಿತು. ಕೊನೆಗೆ ತಮ್ಮ ಸ್ವಭಾವಕ್ಕೆ ತಕ್ಕಂತೆ ಮೋಸದಿಂದ ಇವನನ್ನು ಬಂಧಿಸಲು ನಿರ್ಧರಿಸಿದರು. ಈ ಕೆಲಸಕ್ಕೆ ಆಂಗ್ಲರು ಜಾಕ್ಸನ್ ಎಂಬುವವನನ್ನು ನೇಮಿಸಿದರು. ಬೊಮ್ಮುವಿಗೆ ಜಾಕ್ಸನ್ ಒಂದು ಪತ್ರ ಬರೆದು ಬಹಳ ಗಹನವಾದ ವಿಷಯವನ್ನು ಚರ್ಚಿಸಲು ಬರಬೇಕೆಂದು, ತನ್ನನ್ನು ಕಾಣಬೇಕೆಂದು ತಿಳಿಸಿದ. ಒಬ್ಬನೇ ಬರಬೇಕೆಂದೂ ತಿಳಿಸಿದ್ದ. ಬೊಮ್ಮು ಬಹು ಶಾಂತಸ್ವಭಾವದವನು. ತಾಳ್ಮೆಯುಳ್ಳವ. ಅವನು ಹೋಗೋಣವೆಂದುಕೊಂಡ. ಆದರೆ ತಮ್ಮನಾದ ಕುಮಾರಸ್ವಾಮಿ ಅಣ್ಣನನ್ನು ಎಚ್ಚರಿಸಿದ. ಆಂಗ್ಲರು ಕುಟಿಲರು, ಅವರ ಜೊತೆ ವ್ಯವಹರಿಸುವಾಗ ಮೈಯೆಲ್ಲ ಕಣ್ಣಾಗಿರಬೇಕೆಂದು ಹೇಳಿದ. ಅಣ್ಣನನ್ನು ತಾನೂ ಹಿಂಬಾಲಿಸಿದ. ಜಾಕ್ಸನ್ನನನ್ನು ಕಾಣಲು ಬೊಮ್ಮು ಹೋಗಬೇಕೆಂದಿದ್ದ ಸ್ಥಳದಲ್ಲಿ ಜಾಕ್ಸನ್ ಇರಲಿಲ್ಲ. ಮೂರ್ನಾಲ್ಕು ಕಡೆ ಅಲೆಸಿ ಅಲೆಸಿ ಕೊನೆಗೆ ಆತ ಬೊಮ್ಮುವನ್ನು ಭೇಟಿಮಾಡಿದ. ಬೊಮ್ಮು ಏಕಾಕಿಯಾಗಿ ಶತ್ರುಪಾಳಯವನ್ನು ಪ್ರವೇಶಿಸಿದ. ತಮ್ಮನಿಗೆ ಅಪಾಯದ ಅರಿವಾಯಿತು. ಅವನು ಒಂದು ಗುಪ್ತಸ್ಥಾನದಲ್ಲಿ ಅವಿತುಕೊಂಡು ಎಲ್ಲವನ್ನೂ ವೀಕ್ಷಿಸಲಾರಂಭಿಸಿದ. ಅತ್ತ ಬೊಮ್ಮು, ಜಾಕ್ಸನ್ನರ ಭೇಟಿಯಾಯಿತು. ಜಾಕ್ಸನ್ ಬೊಮ್ಮುವಿಗೆ ‘ಕಪ್ಪ ಕೊಡು’ ಎಂದ. ಬೊಮ್ಮುವಿನ ರಕ್ತ ಕೊತಕೊತ ಕುದಿಯಿತು. ಮೈ ಧಗಧಗ ಉರಿಯಿತು. ಸನ್ನಿವೇಶ ಎಂಥಾದ್ದು! ಸುತ್ತಲೂ ಶಸ್ತ್ರ ಹಿಡಿದು ಹಸಿದ ತೋಳಗಳಂತೆ ಕಾದು ನಿಂತಿರುವ ಶತ್ರುಗಳು. ಬಳಿ ತನ್ನವರು ಎಂಬವರಿಲ್ಲ. ಅಂಗರಕ್ಷಕರಿಲ್ಲ. ಆದರೆ ಸಿಂಹ ಒಂಟಿಯಾದರೇನು? ಸಿಂಹ ಸಿಂಹವೇ! ಗಂಡುಗಲಿ ಬೊಮ್ಮು ರಪ್ಪನೆ ಉತ್ತರವನ್ನು ಅಪ್ಪಳಿಸಿದ. “ತೆರಿಗೆ ಬೇಕೆ ನಿನಗೆ? ನೀನಾರು? ಸಹಸ್ರಾರು ಮೈಲಿಯಿಂದ ಪುಡಿಗಾಸು ವ್ಯಾಪಾರಕ್ಕೆ ಬಂದ ಪರಕೀಯ ನೀನು! ನಿನಗೆ ತೆರಿಗೆ ಕೊಡಬೇಕೆ! ಛಿ! ಕುನ್ನಿ! ನೆನಪಿನಲ್ಲಿಡು. ನಿನ್ನ ಆಟ ಇಲ್ಲಿ ನಡೆಯದು. ಇದು ನನ್ನ ಪವಿತ್ರ ತಾಯಿನಾಡು! ಈ ನೆಲ ನನ್ನದು. ಇಲ್ಲಿಯ ಅಂಗುಲ ಅಂಗುಲವೂ ನನ್ನದು. ಕಣಕಣವೂ ನನ್ನದು. ಅದರ ರಕ್ಷಕ ನಾನು! ನೀನು ಪರದೇಶಿ! ನನ್ನ ಭೂಮಿಯಿಂದ ನೀನು ಈಗಲೇ ತೊಲಗಿ ಹೋಗು!” ಎಂದು ಅಬ್ಬರಿಸಿದ. ಜಾಕ್ಸನ್ನನಿಗೆ ಕೈಕಾಲು ಥರಥರ ನಡುಗಿತು. ಬೊಮ್ಮುವನ್ನು ಹಿಡಿದು ಬಂಧಿಸುವಂತೆ ತನ್ನ ಸೈನಿಕರಿಗೆ ಆಜ್ಞೆಕೊಟ್ಟ. ನೂರಾರು ಸೈನಿಕರು ಅವನೊಬ್ಬನ ಮೇಲೆ ಮುಗಿಬಿದ್ದರು. ಆಹಾ! ಮಕ್ಕಳೇ, ಕಲಿತನವೆಂದರೆ ಇದು! ಪರಾಕ್ರಮವೆಂದರೆ ಇದು! ಬೊಮ್ಮು ಮಿಂಚಿನ ವೇಗದಲ್ಲಿ ತನ್ನ ಒರೆಯಿಂದ ಖಡ್ಗವನ್ನು ಹೊರಸೆಳೆದಿದ್ದಾನೆ. ಶತ್ರು ಸೈನಿಕರ ಮೇಲೆ ಖಡ್ಗದಲುಗಿನ ಪಟ್ಟುಗಳನ್ನು ಬೀಸಲಾರಂಭಿಸಿದ್ದಾನೆ. ಒಂದೊಂದು ಏಟಿಗೂ ಶತ್ರುಗಳು ತತ್ತರಿಸುತ್ತಿದ್ದಾರೆ. ಕ್ಲಾರ್ಕ್ ಎಂಬ ಸೈನ್ಯಾಧಿಕಾರಿ ರಕ್ತಕಾರಿಕೊಂಡು ಸತ್ತುಬಿದ್ದ! ಅಷ್ಟರಲ್ಲೇ, ಅದೋ, ಬಂದಿದ್ದಾನೆ ಅಣ್ಣನ ರಕ್ಷಣೆಗೆ ಸೋದರ! ಮರೆಯಿಂದ ಹೊರ ಬಂದು ಅಣ್ಣನ ಸುತ್ತ ಓಡಾಡುತ್ತಾ, ಖಡ್ಗವನ್ನು ಬೀಸುತ್ತಾ, ಶತ್ರುಗಳನ್ನು ಕೆಡವುತ್ತಿದ್ದಾನೆ. ಅಣ್ಣ-ತಮ್ಮಂದಿರಿಬ್ಬರು ಶತ್ರುವ್ಯೂಹವನ್ನು ಭೇದಿಸಿಕೊಂಡು ಹೊರಬಂದರು. ಕಾದುನಿಂತಿದ್ದ ಅವರ ಸೈನ್ಯ ಮುಂದೆ ಬಂತು. ಆಂಗ್ಲರಿಗೂ ಇವರಿಗೂ ಹೋರಾಟ ನಡೆಯಿತು. ಅಣ್ಣ-ತಮ್ಮಂದಿರಿಬ್ಬರು ರೋಮಾಂಚಕಾರಿಯಾಗಿ ಪಾರಾಗಿ ಬಂದರು. ಈ ಘಟನೆಯ ನಂತರ ಜಾಕ್ಸನ್ ಹೊರಟುಹೋಗಿ ಲೂಷಿಂಗ್‌ಟನ್ ಎಂಬುವನು ಬಂದ. ಅವನೂ ಕಪ್ಪ ಕೇಳಲು ಬಂದ. ಆಗ ಬೊಮ್ಮು “ಹಿಂದಿನ ಸಲ ನೀವು ನನ್ನ ಪಲ್ಲಕ್ಕಿಯನ್ನು ಅಪಹರಿಸಿದ್ದೀರಿ, ಮೊದಲು ಅದನ್ನು ಹಿಂದಿರುಗಿಸಿ. ನಿಮಗೆ ಕಪ್ಪ ಕೊಡುವ ಮಾತು ಅನಂತರ!” ಎಂದು ಉತ್ತರಕೊಟ್ಟ. ಬೊಮ್ಮುವಿನ ಈ ಉತ್ತರದಿಂದ ಲೂಷಿಂಗ್‌ಟನ್ನನ ಮೈಮೇಲೆ ಕಾದ ಸಲಾಕೆಯಿಂದ ಬರೆ ಎಳೆದಂತಾಯಿತು. ಪಾಂಚಾಲಕುರುಚ್ಚಿಯನ್ನು ನೆಲಸಮ ಮಾಡಬೇಕು. ಬೊಮ್ಮುವನ್ನು ತೀರಿಸಿಬಿಡಬೇಕು ಎಂದು ಲೂಷಿಂಗ್‌ಟನ್ ಆಕ್ರಮಣದ ಸಿದ್ಧತೆ ನಡೆಸಿದ. ಯುದ್ಧದ ಕಹಳೆ ಮೊಳಗಿಸಿದ! ಮೇಜರ್ ಬ್ಯಾನರ್‌ಮನ್ನನ ನೇತೃತ್ವದಲ್ಲಿ ಪಾಂಚಾಲಕುರುಚ್ಚಿಯ ಮೇಲೆ ಆಂಗ್ಲರ ಸೈನ್ಯ ನುಗ್ಗಿ ಬಂತು. ಬೊಮ್ಮು ಮೈಕೊಡವಿ ಮೇಲೆದ್ದು ನಿಂತ. ಗ್ರಾಮದೇವತೆ ವೀರಜಕ್ಕಮ್ಮನ ಪೂಜೆ ಮಾಡಿದ. ಪಾಂಚಾಲಕುರುಚ್ಚಿಯ ಕೋಟೆಯ ಗೋಡೆಯ ಮೇಲಿಂದ ರಣದುಂದುಭಿ ಮೊಳಗಿತು. ರಣಕಹಳೆ ಭೋರ್ಗರೆಯಿತು. ರಣಘೋಷ ನಾಲ್ಕುದಿಕ್ಕುಗಳಲ್ಲೂ ಪ್ರತಿಧ್ವನಿಸಿತು - “ವೀರಜಕ್ಕಮ್ಮನಿಗೆ ಜಯವಾಗಲಿ! ಸ್ವಾತಂತ್ರ್ಯದೇವಿಗೆ ಜಯವಾಗಲಿ!” ಬೊಮ್ಮುವೇ ತನ್ನ ಸೈನ್ಯದ ಸೇನಾನಿ! ಎಡಬಲಗಳಲ್ಲಿ ಅವನ ಸೇನಾಪತಿ ಹಾಗೂ ಸೋದರ! ಯುದ್ಧ ಆರಂಭವಾಯಿತು. ಬಿಚ್ಚುಗತ್ತಿಯ ನಮ್ಮವರು ವೀರಾವೇಶದಿಂದ ಕಾದಾಡಿದರು. ನಮ್ಮವರ ಬಳಿ ಕೇವಲ ಖಡ್ಗಗಳು, ಈಟಿಗಳು, ಬಿಲ್ಲು-ಬಾಣಗಳು. ಶತ್ರುಗಳ ಬಳಿ ಆಧುನಿಕ ಫಿರಂಗಿಗಳು. ಯುದ್ಧ ದೀರ್ಘಕಾಲ ನಡೆಯಿತು. ದುರದೃಷ್ಟದಿಂದ ನಮ್ಮ ಕಡೆ ಸೋಲಾಗಲಾರಂಭಿಸಿತು. ಸೇನಾಪತಿಯು ರಣರಂಗದಲ್ಲೇ ಬೊಮ್ಮುವನ್ನು ಹುಡುಕಿಕೊಂಡು ಬಂದ. “ಮಹಾರಾಜ! ತಾವು ಇಲ್ಲಿಂದ ತಪ್ಪಿಸಿಕೊಂಡು ಹೋಗಬೇಕು” ಎಂದ. “ಒಲ್ಲೆ. ಅದು ದುಸ್ಸಾಧ್ಯ! ನಾನು ರಣಹೇಡಿಯಲ್ಲ. ಕಾದಾಡಿ ನನ್ನ ಸೈನಿಕರೊಂದಿಗೆ ಮಡಿಯುವೆ! ಬಲಿದಾನ ನೀಡುವೆ” ಎಂದ ಬೊಮ್ಮು. ಸೇನಾಪತಿ ಹೇಳಿದ, “ಮಹಾರಾಜ! ಓಡಿಹೋಗುವುದರಲ್ಲಿ ತಪ್ಪಿಲ್ಲ. ನೀವಿನ್ನೂ ಬದುಕಬೇಕು. ಜನಸಂಘಟನೆ ಮಾಡಿ ಆಂಗ್ಲರನ್ನು ಈ ಮಣ್ಣಿನಿಂದ ಹೊರಹಾಕಬೇಕು. ಈ ಹಿರಿಯ ಹೊಣೆ ನಿಮ್ಮದು.” ಅಂತೆಯೇ ಬೊಮ್ಮುವು ಸೇನಾಪತಿ ಮತ್ತು ತನ್ನ ಸೋದರನ ಜೊತೆಗೂಡಿ ಪಾಂಚಾಲಕುರುಚ್ಚಿಯಿಂದ ತಪ್ಪಿಸಿಕೊಂಡು ಹೋದ. ತಪ್ಪಿಸಿಕೊಂಡ ಬೊಮ್ಮು ನೇರವಾಗಿ ರಾಜಗೋಪಾಲ ನಾಯಕ ಎಂಬ ಒಬ್ಬ ಪಾಳೆಗಾರನ ಬಳಿ ಹೋಗಿ ತಂಗಿದ. ಆತ ಬೊಮ್ಮುವನ್ನು ಬಹು ಗೌರವದಿಂದ ಕಾಣುತ್ತಿದ್ದ. ಬೊಮ್ಮು ಅಲ್ಲಿಗೆ ಬಂದಿರುವ ಸುದ್ದಿ ಹೇಗೋ ಎಟ್ಟಪ್ಪ ಎಂಬ ಒಬ್ಬ ದೇಶದ್ರೋಹಿಯ ಕಿವಿಗೆ ಬಿತ್ತು. ಅವನೊಬ್ಬ ಹೇಡಿ. ಆದರೆ ದುರ್ವಿದ್ಯೆಗಳಿಗೇನೂ ಕಡಿಮೆ ಇರಲಿಲ್ಲ. ಅವನಿಗೆ ಈ ಸುದ್ದಿ ತಿಳಿದಕೂಡಲೆ ಆಂಗ್ಲರು ಎಸೆಯುವ ಹಣದ ಆಸೆಯಿಂದ ನಾಲಿಗೆಯಿಂದ ನೀರು ಸುರಿಯಿತು. ಅವನು ಆಂಗ್ಲರಿಗೆ ಸುದ್ದಿ ಮುಟ್ಟಿಸಿದ. ಈ ಸುದ್ದಿ ರಾಜಗೋಪಾಲ ನಾಯಕನಿಗೂ ತಿಳಿಯಿತು. ಕೂಡಲೆ ಬೊಮ್ಮು ಅಲ್ಲಿಂದ ಹೋಗಿ ಪುದುಕೋಟೆ ಬಳಿಯ ಅರಣ್ಯದಲ್ಲಿ ಅಡಗಿಕೊಳ್ಳಬೇಕೆಂದು ಸೂಚಿಸಿದರು. ಆಂಗ್ಲರು ಅಲ್ಲಿಗೆ ಬರುವ ವೇಳೆಗೆ ಬೊಮ್ಮು ಅಲ್ಲಿಂದ ಜಾರಿಕೊಂಡಿದ್ದ. ಬೊಮ್ಮುವನ್ನು ಹಿಡಿಯಲು ತಿಪ್ಪರಲಾಗ ಹಾಕುತ್ತಿತ್ತು ಆಂಗ್ಲ ಸರಕಾರ. ಆದರೆ ಅವರಿಗೆ ಫಲ ಸಿಕ್ಕಿರಲಿಲ್ಲ. ಒಂದು ದಿನ ಪುದುಕೋಟೆಯ ಪಾಳೆಗಾರ ತೊಂಡಮಾನನ ಗೆಳೆಯ ಮುತ್ತುವೈರವ ಎನ್ನುವನು ಬೊಮ್ಮುವನ್ನು ಭೇಟಿ ಮಾಡಿದ. ಬೊಮ್ಮು ತನ್ನ ಮನೆಗೆ ಬರಬೇಕೆಂದು, ತನ್ನಲ್ಲಿ ಸುಖವಾಗಿ ತಂಗಿರಬಹುದೆಂದು ಹೇಳಿದ. ಪಾಪ! ಬೊಮ್ಮು ನಂಬಿಬಿಟ್ಟ. ತಮ್ಮನು ತಡೆದರೂ ಬೊಮ್ಮು ಮುತ್ತುವೈರವನ ಮನೆಗೆ ಹೋದ. ಮುತ್ತುವೈರವ ಬೊಮ್ಮುವಿಗೆ ಏಳು ದಿನಗಳು ವೈಭವೋಪೇತ ಆತಿಥ್ಯ ನೀಡಿದ. ಏಳನೆಯ ದಿನ ಅವನ ಆತಿಥ್ಯದ ಕೊನೆಯ ದಿನ! ಪುಷ್ಕಳವಾದ ಭೋಜನ. ವಿಶ್ರಾಂತಿಗಾಗಿ ಹಂಸತೂಲಿಕಾತಲ್ಪ. ಎಲ್ಲವೂ ಸಾಂಗವಾಗಿ ಜರುಗಿತು. ಬೊಮ್ಮು ಉಲ್ಲಾಸದಿಂದ ಮಲಗಿದ. ಬೊಮ್ಮು ಕಣ್ಣು ಬಿಟ್ಟಾಗ ಅವನ ಕಣ್ಣಿಗೆ ಘೋರ ದೃಶ್ಯ ಕಂಡಿತು. ಸುತ್ತಲೂ ಕತ್ತಿ ಹಿರಿದು ನಿಂತಿದ್ದ ಶತ್ರುಗಳು. ಜೊತೆಯಲ್ಲಿ ತೊಂಡಮಾನ, ಮುತ್ತುವೈರವರೂ ಇದ್ದರು. ಮಾನವ ಜನಾಂಗದ ಕಳಂಕ ಅವರು! ಮಿತ್ರದ್ರೋಹಿಗಳವರು! ನಾಚಿಕೆ ಇಲ್ಲದೆ ಅವರಿಬ್ಬರು ಅಲ್ಲೇ ನಿಂತಿದ್ದರು. ಬೊಮ್ಮು ಶಾಂತವಾಗಿ ಮಂಚದಿಂದ ಕೆಳಗಿಳಿದ. ಕೆಂಪುಮೂತಿಯವರು ತನ್ನನ್ನು ಸ್ಪರ್ಶಿಸದಂತೆ ತಾನೇ ಕೈಗೆ ಸಂಕೋಲೆ ತೊಡಿಸಿಕೊಂಡ. ಆಚೆ ಹೊರಡುವ ಮುಂಚೆ ತೊಂಡಮಾನ, ಮುತ್ತುವೈರವರ ಕಡೆ ನೋಡಿ ನಂತರ ಆಂಗ್ಲರನ್ನು ಉದ್ದೇಶಿಸಿ, “ಕೆಂಪುಮೂತಿಯವರೇ, ಎಂದಿನವರೆಗೂ ಈ ನಾಡಿನಲ್ಲಿ ತೊಂಡಮಾನ, ಮುತ್ತು ವೈರವ, ಎಟ್ಟಪ್ಪನಂತಹವರು ಇರುತ್ತಾರೋ ಅಲ್ಲಿಯವರೆಗೂ ನಿಮ್ಮ ಆಡಳಿತಕ್ಕೆ ಚ್ಯುತಿ ಬರದು. ಇದು ನಮ್ಮ ನಾಡಿನ ದುರದೃಷ್ಟ!”ಎಂದು ಹೇಳಿ ಸೈನಿಕರೊಂದಿಗೆ ಹೊರಟ. ಮುಂದೆ ನಡೆದದ್ದೆಲ್ಲ ಏಕಮುಖವಾದ ನ್ಯಾಯತೀರ್ಮಾನ. ಅದರಲ್ಲಿದ್ದುದು ನ್ಯಾಯವಲ್ಲ, ಪರಮ ಅನ್ಯಾಯವೊಂದೇ. ಪರಂಗಿಗಳ ನ್ಯಾಯಾಲಯದಲ್ಲಿ ಬೊಮ್ಮುವಿಗೆ ಗಲ್ಲಾಯಿತು. ಶಿಕ್ಷೆಯ ತೀರ್ಮಾನ ಪ್ರಕಟವಾದಾಗ ಬೊಮ್ಮು ನಸುನಕ್ಕ. ತಾನೇ ಪುಣ್ಯವಂತ. ಮಾತೃಭೂಮಿಯ ಬಿಡುಗಡೆ ಸಂಗ್ರಾಮದ ಬಲಿದಾನಿ ನಾನು. ಈ ಪುಣ್ಯ ಇನ್ನಾರಿಗೆ ತಾನೇ ಸಿಕ್ಕೀತು ಎಂದು ಹೆಮ್ಮೆಪಟ್ಟುಕೊಂಡ. ಬೊಮ್ಮು ನೇಣುಗಂಬದೆಡೆಗೆ ನಡೆದುಹೊರಟ. ಕಿರೀಟವನ್ನು ಹೊರುತ್ತಿದ್ದ ಶಿರ ಇಂದು ಬರಿದಾಗಿತ್ತು. ಕೂದಲು ಜಡೆಗಟ್ಟಿತ್ತು. ಕೆನ್ನೆಯ ತುಂಬಾ ಕಪ್ಪುಗಡ್ಡ ಆವರಿಸಿತ್ತು. ಆದರೂ ಮುಖದಲ್ಲಿ ಸಂತೃಪ್ತಿಯ ಮಂದಹಾಸ ಮಿಂಚುತ್ತಿತ್ತು. ಕಯತ್ತಾರಿನ ಒಂದು ಹುಣಿಸೆಮರಕ್ಕೆ ಹಗ್ಗ ಕಟ್ಟಿದ್ದರು. ಅಲ್ಲಿಗೆ ಬೊಮ್ಮು ನಡೆದುಬಂದ. ಜನ ಈ ದೃಶ್ಯವನ್ನು ನೋಡಲಾರದೆ ಬೊಬ್ಬಿಡಲಾರಂಭಿಸಿದರು. ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. ಹುಣಿಸೆಮರದ ಕೆಳಗೆ ಬೊಮ್ಮುವನ್ನು ನಿಲ್ಲಿಸಿ ಬಂಧನ ಬಿಡಿಸಿದರು. ಬೊಮ್ಮು ಚಟಕ್ಕನೆ ಬಗ್ಗಿ ನೆಲದ ಮೇಲಿನ ಮಣ್ಣನ್ನು ಎತ್ತಿಕೊಂಡ. ಪವಿತ್ರ ಮಣ್ಣನ್ನು ಹಣೆಗೆ ಬಳಿದುಕೊಂಡು ಹೇಳಿದ, “ಅಮ್ಮಾ! ನನಗೆ ನಿನ್ನ ಬಂಧವಿಮುಕ್ತಿಯ ದೃಶ್ಯ ಕಾಣುವ ಅಭಿಲಾಷೆಯಿತ್ತು. ಆದರೆ ಅದು ನಮ್ಮವರ ದ್ರೋಹದಿಂದಲೇ ಕೈಗೂಡಲಿಲ್ಲ. ಆದರೂ ಚಿಂತೆ ಇಲ್ಲ. ನನ್ನ ಆಸೆ ಬತ್ತಿಹೋಗಿಲ್ಲ. ನಾನು ಮತ್ತೊಮ್ಮೆ ಇದೇ ಮಣ್ಣಿನಲ್ಲಿ ಹುಟ್ಟುತ್ತೇನೆ. ನಾಡಿಗಾಗಿ ದುಡಿಯುತ್ತೇನೆ” ಚಟಕ್ಕನೆ ನೇಣ್ಗಾರವನ್ನು ಹಿಡಿದುಕೊಂಡ. ಅದಕ್ಕೆ ಮುತ್ತಿಟ್ಟ. ಕುತ್ತಿಗೆಯೊಳಕ್ಕೆ ಧರಿಸಿಕೊಂಡ. “ಅಯ್ಯೋ!” ವಾತಾವರಣ ಜನರ ಅಳುವಿನಿಂದ ತುಂಬಿತು. ಗಗನ ಮುಟ್ಟಿತು. ಬೊಮ್ಮು ಶಾಂತವಾಗಿ ಕಣ್ಣುಮುಚ್ಚಿಕೊಂಡು ವೀರಜಕ್ಕಮ್ಮನ ಪ್ರಾರ್ಥನೆ ಮಾಡಿದ. ಸಾವಿನ ಸಮಯ ಸಮೀಪಿಸಿತು. ಕಾಲಕೆಳಗಿನ ಆಸರೆಯನ್ನು ದೂರಕ್ಕೊದ್ದು ತನ್ನಷ್ಟಕ್ಕೆ ತಾನೇ ನೇಣುಹಗ್ಗಕ್ಕೆ ಇಳಿಬಿದ್ದು ತೂಗಾಡಲಾರಂಭಿಸಿದ. ಅವನು ದೇಶಕ್ಕಾಗಿ ಪ್ರಾಣಕೊಟ್ಟಿದ್ದ. ಈಗಲೂ ಪಾಂಚಾಲಕುರುಚ್ಚಿಯಲ್ಲಿ ಸ್ತ್ರೀಯರು ಅಲ್ಲಿಯ ಮಣ್ಣನ್ನು ಹಾಲಿನಲ್ಲಿ ಹಾಕಿ ಮಕ್ಕಳಿಗೆ ಕುಡಿಸುತ್ತಾರೆ. ಅದರಿಂದ ತಮ್ಮ ಮಕ್ಕಳೂ ಬೊಮ್ಮುವಂತೆ ಪರಾಕ್ರಮಿಗಳಾಗುವರೆಂಬುದೇ ಅವರ ನಂಬಿಕೆ. **ಕೃತಿಕಾರರ ಪರಿಚಯ :** ಡಾ. ಬಾಬು ಕೃಷ್ಣಮೂರ್ತಿ ಇವರು ಕನ್ನಡ ಭಾಷೆಯಲ್ಲಿ ಭಾರತೀಯ ಇತಿಹಾಸವನ್ನು ಬರೆದಿರುವ ಹಿರಿಯ ಸಾಹಿತಿಗಳು. ಇವರು 1944ರ ಮೇ 11ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಪದವಿಯನ್ನು ಪಡೆದ ನಂತರ ಪತ್ರಿಕೋದ್ಯಮದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಂಗಳ ಸಾಪ್ತಾಹಿಕ ಹಾಗೂ ಬಾಲಮಂಗಳ ಮಕ್ಕಳ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕೆಲಸ ಮಾಡಿದರು. ಕೆಲಕಾಲ ಕರ್ಮವೀರ ಕನ್ನಡ ಸಾಪ್ತಾಹಿಕದ ಸಂಪಾದಕರಾಗಿದ್ದರು. ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಇವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. ಇವರು ಅಜೇಯ, ಅದಮ್ಯ, ರುಧಿರಾಭಿಷೇಕ, ವಿಶಿಷ್ಟ, ಮಹಾಸಾಧಕ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ. 'ಸಿಡಿಮದ್ದು ನೆತ್ತರು ನೇಣುಗಂಬ' ಕೃತಿಯು ಹದಿನೆಂಟು ಸ್ವಾತಂತ್ರ್ಯ ಯೋಧರ ಕುರಿತಾದ ವ್ಯಕ್ತಿಚಿತ್ರಗಳನ್ನು ಒಳಗೊಂಡಿದೆ. ಬಹುಮುಖ ಪ್ರತಿಭೆಯ ಇವರು ಚಲನಚಿತ್ರಗಳಿಗೆ ಚಿತ್ರಕತೆ, ಸಂಭಾಷಣಾಕಾರರಾಗಿ, ಚಿತ್ರ ನಿರ್ದೇಶಕರಾಗಿ, ವಸ್ತ್ರ-ವಿನ್ಯಾಸದ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಇವರು ಹವ್ಯಾಸಿ ವ್ಯಂಗ್ಯಚಿತ್ರಕಾರರೂ ಹೌದು. ಸಾಹಿತ್ಯ ಮತ್ತು ರಂಗಭೂಮಿಯ ಅವರ ಸಾಧನೆಗಳನ್ನು ಪರಿಗಣಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಪ್ರಸ್ತುತ ಬರಹವನ್ನು ಅವರ 'ಮಿಲ್ಟ್ರಿ ತಾತ ಕಥೆ ಹೇಳ್ತಾರೆ' ಕೃತಿಯಿಂದ ಆರಿಸಿಕೊಳ್ಳಲಾಗಿದೆ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. | | |

  2. |---|---|

  3. | ಸದೆಬಡಿ – ಹೊಡೆ, ಸೋಲಿಸು | ಪರಕೀಯ – ಹೊರಗಿನ |

  4. | ಧಿಕ್ಕರಿಸು – ಕಟುವಾಗಿ ವಿರೋಧಿಸು | ಪರದೇಶಿ – ಅನ್ಯ ದೇಶದ |

  5. | ಗಂಡುಗಲಿ – ವೀರ, ಪರಾಕ್ರಮಿ | ಸಲಾಕೆ – ಲೋಹದ ದಂಡ |

  6. | ದಳಪತಿ – ಸೇನಾ ಮುಖ್ಯಸ್ಥ, ಒಂದು ಪ್ರಾಂತ್ಯದ ನಾಯಕ | ಸಾಂಗವಾಗಿ – ಸುಸೂತ್ರವಾಗಿ |

  7. | ಹಂಸತೂಲಿಕಾತಲ್ಪ – ಅತ್ಯಂತ ಮೆತ್ತನೆಯ ಹಾಸಿಗೆ | ಕುಟಿಲ – ಮೋಸ |

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಕಟ್ಟಬೊಮ್ಮುವಿನ ಹೆಸರಿನ ಅರ್ಥವೇನು?

    Answer

    ಕಟ್ಟಬೊಮ್ಮುವಿನ ಹೆಸರಿನ ಅರ್ಥ ಬಲಶಾಲಿಯಾದವನು ಎಂದು.

  2. ೨. ಆಂಗ್ಲ ಪ್ರತಿನಿಧಿಯು ಕಪ್ಪ ಕೊಡಲು ಹೇಳಿದಾಗ ಕಟ್ಟಬೊಮ್ಮು ಹೇಗೆ ಪ್ರತಿಕ್ರಿಯಿಸಿದ?

    Answer

    ಕಟ್ಟಬೊಮ್ಮು ಆಂಗ್ಲ ಪ್ರತಿನಿಧಿಯನ್ನು ಧಿಕ್ಕರಿಸಿ ಹಿಂದಕ್ಕಟ್ಟಿದ.

  3. ೩. ಕಟ್ಟಬೊಮ್ಮುವಿಗೆ ತಮ್ಮನು ಕೊಟ್ಟ ಎಚ್ಚರಿಕೆಯೇನು?

    Answer

    ಆಂಗ್ಲರು ಕುಟಿಲರು, ಅವರ ಜೊತೆ ವ್ಯವಹರಿಸುವಾಗ ಮೈಯೆಲ್ಲ ಕಣ್ಣಾಗಿರಬೇಕೆಂದು ತಮ್ಮನು ಕಟ್ಟಬೊಮ್ಮುವಿಗೆ ಎಚ್ಚರಿಸಿದ.

  4. ೪. ಯುದ್ಧದಲ್ಲಿ ಕಟ್ಟಬೊಮ್ಮುವಿನ ಕಡೆಯವರಲ್ಲಿ ಇದ್ದ ಆಯುಧಗಳು ಯಾವುವು?

    Answer

    ಕಟ್ಟಬೊಮ್ಮುವಿನ ಕಡೆಯವರಲ್ಲಿ ಖಡ್ಗಗಳು, ಈಟಿಗಳು, ಬಿಲ್ಲು-ಬಾಣಗಳು ಇದ್ದವು.

  5. ೫. ಲೂಷಿಂಗ್‌ಟನ್‌ಗೆ ಕಟ್ಟಬೊಮ್ಮು ಕೊಟ್ಟ ಉತ್ತರವೇನು?

    Answer

    ಹಿಂದಿನ ಸಲ ನೀವು ನನ್ನ ಪಲ್ಲಕ್ಕಿಯನ್ನು ಅಪಹರಿಸಿದ್ದೀರಿ, ಮೊದಲು ಅದನ್ನು ಹಿಂದಿರುಗಿಸಿ, ನಂತರ ಕಪ್ಪದ ಮಾತು ಎಂದು ಕಟ್ಟಬೊಮ್ಮು ಲೂಷಿಂಗ್‌ಟನ್‌ಗೆ ಉತ್ತರಿಸಿದ.

  6. ೬. ಪಾಂಚಾಲಕುರುಚ್ಚಿಯ ಸ್ತ್ರೀಯರ ನಂಬಿಕೆ ಏನು?

    Answer

    ಪಾಂಚಾಲಕುರುಚ್ಚಿಯ ಸ್ತ್ರೀಯರು ಅಲ್ಲಿಯ ಮಣ್ಣನ್ನು ಹಾಲಿನಲ್ಲಿ ಹಾಕಿ ಮಕ್ಕಳಿಗೆ ಕುಡಿಸಿದರೆ ಅವರು ಬೊಮ್ಮುವಂತೆ ಪರಾಕ್ರಮಿಗಳಾಗುತ್ತಾರೆ ಎಂದು ನಂಬುತ್ತಾರೆ.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಯುದ್ಧದಲ್ಲಿ ಸೋಲತೊಡಗಿದಾಗ ಸೇನಾಪತಿಯು ಕಟ್ಟಬೊಮ್ಮುವಿಗೆ ಏನೆಂದು ಸಲಹೆ ಕೊಟ್ಟನು?

    Answer

    ಸೇನಾಪತಿಯು ಕಟ್ಟಬೊಮ್ಮುವಿಗೆ ಯುದ್ಧದಿಂದ ತಪ್ಪಿಸಿಕೊಂಡು ಹೋಗಬೇಕೆಂದು ಸಲಹೆ ಕೊಟ್ಟನು. ಓಡಿಹೋಗುವುದರಲ್ಲಿ ತಪ್ಪಿಲ್ಲ, ನೀವಿನ್ನೂ ಬದುಕಿ ಜನಸಂಘಟನೆ ಮಾಡಿ ಆಂಗ್ಲರನ್ನು ಈ ಮಣ್ಣಿನಿಂದ ಹೊರಹಾಕಬೇಕೆಂದು ಹೇಳಿದನು.

  2. ೨. ಮುತ್ತುವೈರವನ ಮನೆಯಲ್ಲಿ ನಿದ್ರೆಯಿಂದೆದ್ದ ಕಟ್ಟಬೊಮ್ಮುವಿಗೆ ಕಂಡ ದೃಶ್ಯ ಯಾವುದು?

    Answer

    ಕಟ್ಟಬೊಮ್ಮು ನಿದ್ರೆಯಿಂದೆದ್ದಾಗ ಸುತ್ತಲೂ ಕತ್ತಿ ಹಿಡಿದ ಶತ್ರುಗಳು ಮತ್ತು ತೊಂಡಮಾನ, ಮುತ್ತುವೈರವರು ಇದ್ದ ಘೋರ ದೃಶ್ಯ ಕಂಡಿತು.

  3. ೩. ಹುಣಿಸೆಮರದ ಕೆಳಗೆ ಕಟ್ಟಬೊಮ್ಮು ಭೂಮಿತಾಯಿಗೆ ಏನೆಂದು ಹೇಳಿದನು?

    Answer

    ಕಟ್ಟಬೊಮ್ಮು ಭೂಮಿತಾಯಿಗೆ, ತನಗೆ ನಿನ್ನ ಬಂಧವಿಮುಕ್ತಿಯ ದೃಶ್ಯ ಕಾಣುವ ಆಸೆ ಇತ್ತು, ಆದರೆ ದ್ರೋಹದಿಂದ ಕೈಗೂಡಲಿಲ್ಲ, ಆದರೂ ಚಿಂತೆ ಇಲ್ಲ, ನಾನು ಮತ್ತೆ ಈ ಮಣ್ಣಿನಲ್ಲಿ ಹುಟ್ಟಿ ನಾಡಿಗಾಗಿ ದುಡಿಯುತ್ತೇನೆ ಎಂದು ಹೇಳಿದನು.

  4. ೪. ಜನರು ಯಾವ ದೃಶ್ಯವನ್ನು ನೋಡಲಾರದೆ ಬೊಬ್ಬಿಡಲಾರಂಭಿಸಿದರು?

    Answer

    ಕಟ್ಟಬೊಮ್ಮು ನೇಣುಗಂಬದೆಡೆಗೆ ನಡೆದುಬಂದ ದೃಶ್ಯವನ್ನು ನೋಡಲಾರದೆ ಜನರು ಬೊಬ್ಬಿಡಲಾರಂಭಿಸಿದರು.

ಇ) ಈ ಕೆಳಗಿನ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಕಪ್ಪ ಕೊಡು ಎಂದ ಜಾಕ್ಸನ್‌ಗೆ ಕಟ್ಟಬೊಮ್ಮು ಕೊಟ್ಟ ಉತ್ತರವೇನು?

    Answer

    ಕಟ್ಟಬೊಮ್ಮು ಜಾಕ್ಸನ್‌ಗೆ, "ನಿನಗೆ ತೆರಿಗೆ ಬೇಕೆ? ನೀನಾರು? ಸಹಸ್ರಾರು ಮೈಲಿಯಿಂದ ಪುಡಿಗಾಸು ವ್ಯಾಪಾರಕ್ಕೆ ಬಂದ ಪರಕೀಯ ನೀನು! ನಿನಗೆ ತೆರಿಗೆ ಕೊಡಬೇಕೆ? ಛಿ! ಕುನ್ನಿ! ನೆನಪಿನಲ್ಲಿಡು. ನಿನ್ನ ಆಟ ಇಲ್ಲಿ ನಡೆಯದು. ಇದು ನನ್ನ ಪವಿತ್ರ ತಾಯಿನಾಡು! ಈ ನೆಲ ನನ್ನದು. ಇಲ್ಲಿಯ ಅಂಗುಲ ಅಂಗುಲವೂ ನನ್ನದು. ಕಣಕಣವೂ ನನ್ನದು. ಅದರ ರಕ್ಷಕ ನಾನು! ನೀನು ಪರದೇಶಿ! ನನ್ನ ಭೂಮಿಯಿಂದ ನೀನು ಈಗಲೇ ತೊಲಗಿ ಹೋಗು!" ಎಂದು ಅಬ್ಬರಿಸಿದ.

  2. ೨. ಕಟ್ಟಬೊಮ್ಮು ನೇಣುಶಿಕ್ಷೆಯನ್ನು ಹೇಗೆ ಸ್ವೀಕರಿಸಿದನು?

    Answer

    ಕಟ್ಟಬೊಮ್ಮು ನೇಣುಶಿಕ್ಷೆಯನ್ನು ಶಾಂತವಾಗಿ ಸ್ವೀಕರಿಸಿದನು. ಶಿಕ್ಷೆಯ ತೀರ್ಮಾನ ಪ್ರಕಟವಾದಾಗ ನಸುನಕ್ಕನು. ನೇಣುಗಂಬದೆಡೆಗೆ ನಡೆದುಹೋದನು. ಅಲ್ಲಿ ನೆಲದ ಮಣ್ಣನ್ನು ಹಣೆಗೆ ಬಳಿದುಕೊಂಡು ಭೂಮಿತಾಯಿಗೆ ವಂದಿಸಿದನು. ನೇಣುಹಗ್ಗಕ್ಕೆ ಮುತ್ತಿಟ್ಟು, ಅದನ್ನು ಕುತ್ತಿಗೆಗೆ ಧರಿಸಿಕೊಂಡನು. ಕಣ್ಣುಮುಚ್ಚಿ ವೀರಜಕ್ಕಮ್ಮನ ಪ್ರಾರ್ಥನೆ ಮಾಡಿ, ತಾನೇ ಕಾಲಕೆಳಗಿನ ಆಸರೆಯನ್ನು ಒದ್ದು ನೇಣಿಗೆ ಇಳಿಬಿದ್ದನು.

  3. ೩. ಕಟ್ಟಬೊಮ್ಮುವಿಗೆ ಮೋಸವಾದ ಬಗೆಯನ್ನು ತಿಳಿಸಿ.

    Answer

    ಮುತ್ತುವೈರವನು ಕಟ್ಟಬೊಮ್ಮುವಿಗೆ ತನ್ನ ಮನೆಗೆ ಬರಬೇಕೆಂದು ಆಹ್ವಾನಿಸಿದನು. ಏಳು ದಿನಗಳ ಕಾಲ ವೈಭವೋಪೇತ ಆತಿಥ್ಯ ನೀಡಿದನು. ಏಳನೆಯ ದಿನ ಪುಷ್ಕಳ ಭೋಜನ ಮತ್ತು ಹಂಸತೂಲಿಕಾತಲ್ಪದ ವಿಶ್ರಾಂತಿಯ ನಂತರ ಕಟ್ಟಬೊಮ್ಮು ಮಲಗಿದನು. ಅವನು ಕಣ್ಣು ಬಿಟ್ಟಾಗ ಸುತ್ತಲೂ ಶತ್ರುಗಳು ಕತ್ತಿ ಹಿಡಿದು ನಿಂತಿದ್ದರು. ಜೊತೆಯಲ್ಲಿ ತೊಂಡಮಾನ ಮತ್ತು ಮುತ್ತುವೈರವರೂ ಇದ್ದರು. ಹೀಗೆ ಮಿತ್ರದ್ರೋಹಿಗಳಾದ ಅವರಿಂದ ಕಟ್ಟಬೊಮ್ಮುವಿಗೆ ಮೋಸವಾಯಿತು.

  4. ೪. ಕಟ್ಟಬೊಮ್ಮುವನ್ನು ಸೋಲಿಸಲು ಆಂಗ್ಲರು ಹೂಡಿದ ತಂತ್ರಗಳನ್ನು ತಿಳಿಸಿ.

    Answer

    ಆಂಗ್ಲರು ಮೊದಲು ಜಾಕ್ಸನ್ ಮೂಲಕ ಮೋಸದಿಂದ ಕಟ್ಟಬೊಮ್ಮುವನ್ನು ಒಬ್ಬನೇ ಬರುವಂತೆ ಪತ್ರ ಬರೆದು ಬಂಧಿಸಲು ಪ್ರಯತ್ನಿಸಿದರು. ಅದು ವಿಫಲವಾದ ನಂತರ ಲೂಷಿಂಗ್‌ಟನ್ ನೇತೃತ್ವದಲ್ಲಿ ಸೈನ್ಯ ಕಳುಹಿಸಿ ಯುದ್ಧ ಮಾಡಿದರು. ಕಟ್ಟಬೊಮ್ಮು ತಪ್ಪಿಸಿಕೊಂಡಾಗ, ದೇಶದ್ರೋಹಿ ಎಟ್ಟಪ್ಪನ ಮೂಲಕ ಅವನ ಇರುವಿಕೆಯನ್ನು ಪತ್ತೆಹಚ್ಚಿದರು. ಕೊನೆಗೆ ತೊಂಡಮಾನ ಮತ್ತು ಮುತ್ತುವೈರವರಂತಹ ಮಿತ್ರದ್ರೋಹಿಗಳ ಸಹಾಯದಿಂದ ಅವನನ್ನು ಬಂಧಿಸಿದರು.

ಈ) ಈ ಕೆಳಗಿನ ಮಾತುಗಳ ಸ್ವಾರಸ್ಯವನ್ನು ಐದು-ಆರು ವಾಕ್ಯಗಳಲ್ಲಿ ಬರೆಯಿರಿ.

  1. ೧. ಸಿಂಹ ಒಂಟಿಯಾದರೇನು? ಸಿಂಹ ಸಿಂಹವೇ!

    Answer

    ಕಟ್ಟಬೊಮ್ಮು ಜಾಕ್ಸನ್‌ನನ್ನು ಭೇಟಿಯಾಗಲು ಶತ್ರುಪಾಳಯಕ್ಕೆ ಒಬ್ಬನೇ ಹೋದ ಸಂದರ್ಭದಲ್ಲಿ ಈ ಮಾತು ಬಂದಿದೆ. ಸಿಂಹವು ಒಂಟಿಯಾಗಿದ್ದರೂ ತನ್ನ ಶೌರ್ಯವನ್ನು ಕಳೆದುಕೊಳ್ಳುವುದಿಲ್ಲ. ಅದು ಯಾವಾಗಲೂ ಸಿಂಹವೇ. ಅಂತೆಯೇ ಕಟ್ಟಬೊಮ್ಮುವು ಒಬ್ಬನೇ ಇದ್ದರೂ ಅವನ ಪರಾಕ್ರಮಕ್ಕೆ ಕುಂದಿಲ್ಲ. ಶತ್ರುಗಳ ಮಧ್ಯೆ ಏಕಾಕಿಯಾಗಿದ್ದರೂ ಅವನು ಎದೆಗುಂದದೆ ತನ್ನ ಶೌರ್ಯವನ್ನು ಮೆರೆದನು. ಈ ಮಾತು ಅವನ ಅದಮ್ಯ ಸಾಹಸವನ್ನು ಎತ್ತಿ ತೋರಿಸುತ್ತದೆ.

  2. ೨. ಓಡಿಹೋಗುವುದರಲ್ಲಿ ತಪ್ಪಿಲ್ಲ. ನೀವಿನ್ನೂ ಬದುಕಬೇಕು.

    Answer

    ಯುದ್ಧದಲ್ಲಿ ಸೋಲು ಕಾಣುತ್ತಿದ್ದಾಗ ಸೇನಾಪತಿಯು ಕಟ್ಟಬೊಮ್ಮುವಿಗೆ ಈ ಸಲಹೆ ನೀಡಿದನು. ಓಡಿಹೋಗುವುದು ಹೇಡಿತನವಲ್ಲ, ಬದಲಾಗಿ ಬದುಕುಳಿದು ಮುಂದೆ ಹೋರಾಟ ಮುಂದುವರಿಸುವ ತಂತ್ರ ಎಂದು ಅವನು ತಿಳಿಸಿದನು. ಕಟ್ಟಬೊಮ್ಮು ಸತ್ತರೆ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಆದ್ದರಿಂದ ಅವನು ಬದುಕಿ, ಜನರನ್ನು ಸಂಘಟಿಸಿ, ಆಂಗ್ಲರನ್ನು ಹೊರಹಾಕುವ ಹಿರಿಯ ಹೊಣೆ ನಿರ್ವಹಿಸಬೇಕಾಗಿತ್ತು. ಈ ಮಾತು ದೂರದೃಷ್ಟಿಯಿಂದ ಕೂಡಿದ ಸಲಹೆಯಾಗಿದೆ.

  3. ೩. ಹಣದ ಆಸೆಯಿಂದ ನಾಲಿಗೆಯಿಂದ ನೀರು ಸುರಿಯಿತು.

    Answer

    ಎಟ್ಟಪ್ಪ ಎಂಬ ದೇಶದ್ರೋಹಿಗೆ ಕಟ್ಟಬೊಮ್ಮುವಿನ ಸುದ್ದಿ ತಿಳಿದಾಗ, ಅವನು ಆಂಗ್ಲರಿಂದ ಹಣ ಪಡೆಯುವ ಆಸೆಯಿಂದ ಈ ರೀತಿ ಪ್ರತಿಕ್ರಿಯಿಸಿದನು. ಹಣದ ಆಸೆಯು ಅವನ ನಾಲಿಗೆಯಲ್ಲಿ ನೀರು ಸುರಿಸಿತು ಎಂದರೆ, ಅವನ ದುರಾಸೆ ಎಷ್ಟು ತೀವ್ರವಾಗಿತ್ತೆಂದು ತೋರಿಸುತ್ತದೆ. ಇದು ದ್ರೋಹಿಯ ಸ್ವಭಾವವನ್ನು ವ್ಯಂಗ್ಯವಾಗಿ ಚಿತ್ರಿಸುತ್ತದೆ. ಸ್ವಂತ ಲಾಭಕ್ಕಾಗಿ ದೇಶವನ್ನೇ ಮಾರುವ ನೀಚತನವನ್ನು ಈ ನುಡಿಗಟ್ಟು ಎತ್ತಿ ತೋರಿಸುತ್ತದೆ.

  4. ೪. ಇದು ನಮ್ಮ ನಾಡಿನ ದುರದೃಷ್ಟ

    Answer

    ಕಟ್ಟಬೊಮ್ಮುವನ್ನು ಬಂಧಿಸಿದ ನಂತರ, ತೊಂಡಮಾನ ಮತ್ತು ಮುತ್ತುವೈರವರನ್ನು ನೋಡಿ ಅವನು ಈ ಮಾತನ್ನು ಹೇಳಿದನು. ತನ್ನ ನಾಡಿನಲ್ಲಿ ಇಂತಹ ದ್ರೋಹಿಗಳು ಇರುವವರೆಗೂ ಆಂಗ್ಲರ ಆಡಳಿತಕ್ಕೆ ಚ್ಯುತಿ ಬರುವುದಿಲ್ಲ ಎಂದು ಅವನು ವಿಷಾದಿಸಿದನು. ಇದು ನಮ್ಮ ನಾಡಿನ ದುರದೃಷ್ಟ ಎಂದು ಅವನು ಭಾವಿಸಿದನು. ಸ್ವಾತಂತ್ರ್ಯ ಹೋರಾಟಕ್ಕೆ ಒಳಗಿನ ದ್ರೋಹಿಗಳೇ ದೊಡ್ಡ ಅಡಚಣೆ ಎಂಬ ಕಹಿ ಸತ್ಯವನ್ನು ಈ ಮಾತು ಸಾರುತ್ತದೆ.

  5. ೫. ನಾನು ಮತ್ತೊಮ್ಮೆ ಇದೇ ಮಣ್ಣಿನಲ್ಲಿ ಹುಟ್ಟುತ್ತೇನೆ. ನಾಡಿಗಾಗಿ ದುಡಿಯುತ್ತೇನೆ.

    Answer

    ನೇಣುಗಂಬದ ಕೆಳಗೆ ನಿಂತು ಕಟ್ಟಬೊಮ್ಮು ಭೂಮಿತಾಯಿಗೆ ಈ ಮಾತುಗಳನ್ನು ಹೇಳಿದನು. ತನಗೆ ದೇಶದ ಸ್ವಾತಂತ್ರ್ಯವನ್ನು ಕಾಣುವ ಆಸೆ ಇತ್ತು, ಆದರೆ ಅದು ಈಡೇರಲಿಲ್ಲ. ಆದರೂ ಅವನು ನಿರಾಸೆಗೊಳ್ಳಲಿಲ್ಲ. ಮತ್ತೊಮ್ಮೆ ಇದೇ ಮಣ್ಣಿನಲ್ಲಿ ಹುಟ್ಟಿ ನಾಡಿಗಾಗಿ ದುಡಿಯುವೆನೆಂದು ಪ್ರತಿಜ್ಞೆ ಮಾಡಿದನು. ಇದು ಅವನ ಅಚಲ ದೇಶಭಕ್ತಿ ಮತ್ತು ಪುನರ್ಜನ್ಮದ ನಂಬಿಕೆಯನ್ನು ತೋರಿಸುತ್ತದೆ. ಸಾವಿನಲ್ಲೂ ಅವನ ಹೋರಾಟದ ಚೇತನ ಅಳಿಯಲಿಲ್ಲ ಎಂಬುದನ್ನು ಈ ಮಾತು ಸಾಬೀತುಪಡಿಸುತ್ತದೆ.

ಉ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

  1. ೧. ಪಾಂಡ್ಯರಾಜನು ಕಟ್ಟಬೊಮ್ಮುವಿಗೆ ಪ್ರಜೆಗಳನ್ನು _________________ ನೋಡಿಕೊಳ್ಳಲು ಹೇಳಿದ. (ಸ್ವಂತ ಮಕ್ಕಳಂತೆ, ಶಿಷ್ಯರಂತೆ, ಸೇವಕರಂತೆ)

    Answer

    ಪಾಂಡ್ಯರಾಜನು ಕಟ್ಟಬೊಮ್ಮುವಿಗೆ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಲು ಹೇಳಿದ.

  2. ೨. ________ ಮಾಡುವುದು ಆಂಗ್ಲ ದೊರೆಗಳ ಸ್ವಭಾವ. (ಮೋಸ, ಸಹಾಯ, ಜಗಳ)

    Answer

    ಮೋಸ ಮಾಡುವುದು ಆಂಗ್ಲ ದೊರೆಗಳ ಸ್ವಭಾವ.

  3. ೩. ಕಿರೀಟವನ್ನು ಹೊರುತ್ತಿದ್ದ _________ ಇಂದು ಬರಿದಾಗಿತ್ತು. (ಸಿಂಹಾಸನ, ಪಲ್ಲಕ್ಕಿ, ಶಿರ)

    Answer

    ಕಿರೀಟವನ್ನು ಹೊರುತ್ತಿದ್ದ ಶಿರ ಇಂದು ಬರಿದಾಗಿತ್ತು.

ಊ) “ಅ” ಪಟ್ಟಿಯ ಪದಗಳಿಗೆ “ಬ” ಪಟ್ಟಿಯ ಪದಗಳನ್ನು ಹೊಂದಿಸಿ ಬರೆಯಿರಿ.

  1. ಅ ಪಟ್ಟಿ | ಬ ಪಟ್ಟಿ

  2. --- | ---

  3. ೧. ಜಾಕ್ಸನ್ | ೧. ಗ್ರಾಮದೇವತೆ

    Answer

    ೧. ಜಾಕ್ಸನ್ - ೪. ಆಂಗ್ಲ ಪ್ರತಿನಿಧಿ

  4. ೨. ಕುಮಾರಸ್ವಾಮಿ | ೨. ಮಿತ್ರದ್ರೋಹಿ

    Answer

    ೨. ಕುಮಾರಸ್ವಾಮಿ - ೩. ಕಟ್ಟಬೊಮ್ಮನ ತಮ್ಮ

  5. ೩. ವೀರಜಕ್ಕಮ್ಮ | ೩. ಕಟ್ಟಬೊಮ್ಮನ ತಮ್ಮ

    Answer

    ೩. ವೀರಜಕ್ಕಮ್ಮ - ೧. ಗ್ರಾಮದೇವತೆ

  6. ೪. ಮುತ್ತುವೈರವ | ೪. ಆಂಗ್ಲ ಪ್ರತಿನಿಧಿ

    Answer

    ೪. ಮುತ್ತುವೈರವ - ೨. ಮಿತ್ರದ್ರೋಹಿ

III. ಭಾಷಾಭ್ಯಾಸ :

ಅ) ಈ ವಿಶೇಷ ನುಡಿಗಟ್ಟುಗಳ ಅರ್ಥಗಳನ್ನು ಶಿಕ್ಷಕರಿಂದ ಕೇಳಿ ಬರೆಯಿರಿ:

  1. ೧. ಹೊಟ್ಟೆಯೊಳಗೆ ಹಾಕಿಕೋ : ________________________________________

    Answer

    ಹೊಟ್ಟೆಯೊಳಗೆ ಹಾಕಿಕೋ : ತನ್ನ ವಶಕ್ಕೆ ತೆಗೆದುಕೊಳ್ಳುವುದು, ಸ್ವಾಧೀನಪಡಿಸಿಕೊಳ್ಳುವುದು.

  2. ೨. ಮೆಣಸು ಅರೆದಂತಾಗು : ________________________________________

    Answer

    ಮೆಣಸು ಅರೆದಂತಾಗು : ತೀವ್ರ ಸಂಕಟ ಅಥವಾ ಕಿರಿಕಿರಿ ಉಂಟಾಗು.

  3. ೩. ದಿಕ್ಕು ತೋರದಂತಾಗು : ________________________________________

    Answer

    ದಿಕ್ಕು ತೋರದಂತಾಗು : ಏನು ಮಾಡಬೇಕೆಂದು ತೋಚದಂತಹ ಸ್ಥಿತಿ.

  4. ೪. ಮೈಯೆಲ್ಲ ಕಣ್ಣಾಗಿರು : ________________________________________

    Answer

    ಮೈಯೆಲ್ಲ ಕಣ್ಣಾಗಿರು : ತುಂಬಾ ಜಾಗರೂಕತೆಯಿಂದ ಇರು, ಎಚ್ಚರಿಕೆಯಿಂದ ವ್ಯವಹರಿಸು.

ಆ) ಈ ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ಮಿಂಚಿನ ವೇಗ : ________________________________________

    Model sentence

    ಮಿಂಚಿನ ವೇಗ: ನಮ್ಮ ಶಾಲೆಯ ರಾಮು ಮಿಂಚಿನ ವೇಗದಲ್ಲಿ ಓಡುತ್ತಾನೆ.

  2. ೨. ಆತಿಥ್ಯ : ________________________________________

    Model sentence

    ಆತಿಥ್ಯ: ನಮ್ಮ ಮನೆಗೆ ಬಂದ ಅತಿಥಿಗಳಿಗೆ ಅಮ್ಮ ಚೆನ್ನಾಗಿ ಆತಿಥ್ಯ ನೀಡಿದಳು.

  3. ೩. ಮಿತ್ರದ್ರೋಹಿ : ________________________________________

    Model sentence

    ಮಿತ್ರದ್ರೋಹಿ: ಗೆಳೆಯನ ರಹಸ್ಯವನ್ನು ಹೊರಗೆಡಹಿದವನು ಮಿತ್ರದ್ರೋಹಿ.

  4. ೪. ಮಂದಹಾಸ : ________________________________________

    Model sentence

    ಮಂದಹಾಸ: ಅಜ್ಜಿ ನನ್ನನ್ನು ನೋಡಿ ಮಂದಹಾಸ ಬೀರಿದಳು.

ಇ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

  1. ಮಾದರಿ: ಭೂಮಿ - ಪೃಥ್ವಿ, ಭುವಿ, ಇಳೆ, ವಸುಂಧರೆ, ಧರೆ

  2. ೧. ಶೂರ : ________________________________________

    Answer

    ೧. ಶೂರ : ವೀರ, ಪರಾಕ್ರಮಿ, ಧೀರ, ಕಲಿ

  3. ೨. ಗುಪ್ತ : ________________________________________

    Answer

    ೨. ಗುಪ್ತ : ರಹಸ್ಯ, ಗುಟ್ಟು, ಅಡಗಿದ, ಮರೆಯಾದ

  4. ೩. ಸಾವು : ________________________________________

    Answer

    ೩. ಸಾವು : ಮರಣ, ನಿಧನ, ಅಂತ್ಯ, ಮೃತ್ಯು

  5. ೪. ಹೇಡಿ : ________________________________________

    Answer

    ೪. ಹೇಡಿ : ಪುಕ್ಕ, ಅಧೀರ, ಭಯಗ್ರಸ್ತ, ಪಲಾಯನಪ್ರಿಯ

IV. ಸೈದ್ಧಾಂತಿಕ ವ್ಯಾಕರಣ :

ಅ) ನಾಮಪದಗಳು :

  1. ೧) <u>ರಹೀಮ</u> <u>ಪುಸ್ತಕ</u> ಓದುತ್ತಿದ್ದಾನೆ.

    Answer

    ೧) ರಹೀಮ ಪುಸ್ತಕ ಓದುತ್ತಿದ್ದಾನೆ.

  2. ೨) <u>ಬೇಲೂರಿನಲ್ಲಿ</u> <u>ಸುಂದರ</u> <u>ದೇವಾಲಯವಿದೆ</u>.

    Answer

    ೨) ಬೇಲೂರಿನಲ್ಲಿ ಸುಂದರ ದೇವಾಲಯವಿದೆ.

  3. ೩) <u>ಮೇಜಿನ</u> <u>ಮೇಲೆ</u> <u>ಹೂಗುಚ್ಛವಿದೆ</u>.

    Answer

    ೩) ಮೇಜಿನ ಮೇಲೆ ಹೂಗುಚ್ಛವಿದೆ.

  4. ಈ ವಾಕ್ಯಗಳಲ್ಲಿ ಗೆರೆ ಎಳೆದ ಪದಗಳು ವ್ಯಕ್ತಿ, ಸ್ಥಳ ಹಾಗೂ ವಸ್ತುವಿನ ಹೆಸರನ್ನು ಸೂಚಿಸುತ್ತವೆ. ಇಂತಹ ಪದಗಳನ್ನು 'ನಾಮಪದ' ಎನ್ನುವರು.

ಆ) ನಾಮಪದದ ವಿಧಗಳು :

  1. ೧. ಪರ್ವತ, ಶಾಲೆ, ನಗರ, ನದಿ, ಹಳ್ಳಿ - ಇವು ರೂಢಿಯಿಂದ ಬಂದ ಹೆಸರುಗಳು. ಆದುದರಿಂದ ಇವು ರೂಢನಾಮಗಳು.

  2. ೨. ರಮೇಶ, ರುಕ್ಕಿಣಿ, ಬೆಂಗಳೂರು, ಹಿಮಾಲಯ - ಇವು ಇಟ್ಟ ಹೆಸರುಗಳು. ಆದುದರಿಂದ ಇವು ಅಂಕಿತನಾಮಗಳು.

  3. ೩. ವ್ಯಾಪಾರಿ, ಶಿಕ್ಷಕ, ವೈದ್ಯ - ಇವು ಅರ್ಥಕ್ಕೆ ಅನುಗುಣವಾಗಿ ಬರುವ ಹೆಸರುಗಳು. ಆದುದರಿಂದ ಇವು ಅನ್ವರ್ಥಕ ನಾಮಗಳು.

ಇ) ಕೆಳಗಿನ ಪದಗಳಲ್ಲಿ ರೂಢನಾಮ, ಅಂಕಿತನಾಮ ಹಾಗೂ ಅನ್ವರ್ಥನಾಮ ಪದಗಳನ್ನು ವಿಂಗಡಿಸಿ ಬರೆಯಿರಿ.

  1. ಕೃಷ್ಣ | ಕೋಲಾರ | ಪಟ್ಟಣ | ಮರ

    Answer

    ಕೃಷ್ಣ - ಅಂಕಿತನಾಮ ಕೋಲಾರ - ಅಂಕಿತನಾಮ ಪಟ್ಟಣ - ರೂಢನಾಮ ಮರ - ರೂಢನಾಮ

  2. ಬಂಡೆಗಲ್ಲು | ಮೂಕ | ಕಾಡು | ವಿದ್ವಾಂಸ

    Answer

    ಬಂಡೆಗಲ್ಲು - ರೂಢನಾಮ ಮೂಕ - ಅನ್ವರ್ಥನಾಮ ಕಾಡು - ರೂಢನಾಮ ವಿದ್ವಾಂಸ - ಅನ್ವರ್ಥನಾಮ

  3. ಕಾವೇರಿ | ನದಿ | ಹೊಳೆ | ಕುರುಡ

    Answer

    ಕಾವೇರಿ - ಅಂಕಿತನಾಮ ನದಿ - ರೂಢನಾಮ ಹೊಳೆ - ರೂಢನಾಮ ಕುರುಡ - ಅನ್ವರ್ಥನಾಮ

V. ಚಟುವಟಿಕೆಗಳು :

  1. ೧. ಭಾರತದಲ್ಲಿ ಆಂಗ್ಲರ ವಿರುದ್ಧ ಹೋರಾಡಿದ ಸ್ವಾತಂತ್ರ್ಯವೀರರ ಚಿತ್ರಗಳನ್ನು ಸಂಗ್ರಹಿಸಿರಿ.

  2. ೨. ಡಾ. ಬಾಬು ಕೃಷ್ಣಮೂರ್ತಿಯವರ “ಮಿಲ್ಟ್ರಿ ತಾತ ಕಥೆ ಹೇಳ್ತಾರೆ” ಕೃತಿಯನ್ನು ಓದಿರಿ.

Interactive Lab