CRECT Education

Class 6 Kannada Lesson 19: You Too Have Wonderful Power | KTBS Second Language – Practice & Quiz

Description

Practice comprehension & language games from the story of Hanuman's self-doubt and hidden power. Part 2 of Lesson 19, Class 6 Kannada Second Language.

ಗದ್ಯ (prose) · ಸಂಪಾದಿತ

ಪಠ್ಯFull text

ಪಾಠ ಪ್ರವೇಶ : ಕೆಲವರಲ್ಲಿ ವಿಶಿಷ್ಟ ಶಕ್ತಿ ಇರುತ್ತದೆ. ಆ ಶಕ್ತಿಯ ಪ್ರದರ್ಶನ ಆಗುವುದು ಇತರರು ಅವರನ್ನು ಹುರಿದುಂಬಿಸಿದಾಗ. ಇತರರ ಪ್ರೇರಕ ಮಾತುಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಹಾಗೂ ಎಂತಹ ಕಠಿಣ ಕೆಲಸವನ್ನಾದರೂ ಮಾಡಲು ಮನಸ್ಸು ಉತ್ಸುಕವಾಗುತ್ತದೆ. ನೀವು ಕ್ರೀಡೆಗಳಲ್ಲಿ ಕ್ರೀಡಾಪಟುಗಳನ್ನು ಹುರಿದುಂಬಿಸುವ ಪರಿಯನ್ನು ನೋಡಿರಬಹುದು. ಇಂತಹ ಹಲವು ಪ್ರಸಂಗಗಳು ಪುರಾಣ, ಇತಿಹಾಸಗಳಲ್ಲೂ ಕಾಣಸಿಗುತ್ತವೆ. ನೀವು ರಾಮಾಯಣದ ಕಥೆಯನ್ನು ಕೇಳಿದ್ದೀರಿ. ರಾವಣ ಸೀತೆಯನ್ನು ಕದ್ದು ಲಂಕೆಯಲ್ಲಿ ಬಂಧಿಸಿರುತ್ತಾನೆ. ಆಗ ರಾಮ ಲಕ್ಷ್ಮಣರು ವಾನರ ಸೇನೆಯೊಂದಿಗೆ ಸಮುದ್ರದ ಬಳಿ ಬರುತ್ತಾರೆ. ಆದರೆ ಸಮುದ್ರವನ್ನು ದಾಟಿ ಲಂಕೆಯನ್ನು ತಲುಪುವುದು ಹೇಗೆ? ಎಂದು ಚಿಂತಿತರಾಗುತ್ತಾರೆ. ಆಗ ಹನುಮ ಸಮುದ್ರವನ್ನು ಜಿಗಿದು ಲಂಕೆಯನ್ನು ತಲುಪುತ್ತಾನೆ. ಹನುಮಂತನ ಈ ಸಾಹಸಕ್ಕೆ ಪ್ರೇರಣೆ ದೊರೆತದ್ದು ಹೇಗೆ? ಇಲ್ಲಿರುವ ಕಥೆಯನ್ನು ಓದಿ.... ಕಣ್ಣು ನಿಲುಕುವವರೆಗೂ ಎಲ್ಲೆಡೆ ನೀರು. ನೀಲ ಸಾಗರ. ಆಕಾಶವೂ ನೀಲಿ. ಸಮುದ್ರವೂ ನೀಲಿ. ಬೆಳ್ಳಂಬೆಳದಿಂಗಳು ಸಹ ನೀಲಿಯಂತೆ ಭಾಸವಾಗುತ್ತಿತ್ತು. ಅದರ ಮಧ್ಯೆ ಪುಟಿದೇಳುವ ಆನೆಯಾಕಾರದ ಅಲೆಗಳು ದಂಡೆಗೆ ಅಪ್ಪಳಿಸುತ್ತಿವೆ. ಅಬ್ಬಾ! ಏನಿದರ ರುದ್ರ ನರ್ತನ! ಏನಿದರ ಭಯಂಕರ ಧ್ವನಿ! ಭೀತಿ ಹುಟ್ಟಿಸುತ್ತಿತ್ತು. ಕಪಿವೀರರು ಲಂಕೆಗೆ ಹಾರಿ ಸೀತಾಮಾತೆಯನ್ನು ಕಾಣಬೇಕೆಂಬ ಉತ್ಸಾಹದಿಂದ ಬಂದಿದ್ದರು. ಆದರೆ ಭಯಾನಕ ಕಡಲನ್ನು ಕಂಡರು. ಈ ಸಮುದ್ರ ಈಜಲು ಸಾಧ್ಯವಿಲ್ಲ. ಹಾರಲು ಸಾಧ್ಯವಿಲ್ಲ. ಅವರಿಗೆ ದಿಕ್ಕು ತೋಚದಾಯಿತು. ಮುಂದಿನ ದಾರಿ ಯೋಚಿಸುತ್ತಾ ವಿಶ್ರಮಿಸಿದರು. ಬೆಳಕು ಹರಿಯಿತು. ಅರುಣೋದಯ. ಕಪಿಗಳೆಲ್ಲ ದಿನಚರಿ ಮುಗಿಸಿ ಫಲಾಹಾರ ಮಾಡಿದವು. ಮತ್ತೆ ಸಮುದ್ರದ ಬಳಿಗೆ ಬಂದವು. ಜಾಂಬವಂತನು, ಆಹಾ ! ಕಡಲು ಶಾಂತವಾಗಿದೆ. ಆದರೆ ಲಂಕೆಯೇ ಕಾಣದು. ದಕ್ಷಿಣ ದಿಕ್ಕಿಗೆ ಲಂಕೆ ಇದೆ ಎಂಬ ಕಲ್ಪನೆ ಬಿಟ್ಟರೆ, ಬೇರೇನೂ ತಿಳಿಯದು. ಹೇಗೆ ಹೋಗುವುದು? ಎಂದು ಯೋಚಿಸಹತ್ತಿದ. ಹನುಮ ಸಾಗರವನ್ನು ದಿಟ್ಟಿಸಿ ನೋಡಿದ. ನಿರಾಸೆ ಕವಿಯಿತು. ಅಲ್ಲಿಂದ ಮುಂದೆ ನಡೆದು ಒಂದು ಕೋಡುಗಲ್ಲನ್ನು ಏರಿ ಚಿಂತಿತನಾದನು. ಇತ್ತ ಕಪಿಗಳು ಸೇರಿದವು. ಸಮುದ್ರವನ್ನು ಜಿಗಿಯಲು ತಮಗಿರುವ ಶಕ್ತಿ-ಸಾಮರ್ಥ್ಯವನ್ನು ಹೇಳತೊಡಗಿದವು. ನಾನು ಹತ್ತು ಯೋಜನ ಜಿಗಿಯಬಲ್ಲೆನೆಂದು ಮರಕಪಿಯೊಂದು ಹೇಳಿದರೆ, ಇನ್ನೊಂದು ಕಪಿ ಮೂವತ್ತು ಯೋಜನ ಹಾರಬಲ್ಲೆ ಎಂದಿತು. ಮಗದೊಂದು ನಲವತ್ತು ಯೋಜನ ಎಂದಿತು. ಅಂಗದ ಹಾಗೂ ಜಾಂಬವರಿಗೆ ಕಪಿಗಳ ಮಾತುಗಳನ್ನು ಕೇಳಿ ಹೆಮ್ಮೆಯೆನಿಸಿತು. ಆ ಕಠಿಣ ಪ್ರಸಂಗದಲ್ಲಿಯೂ ಅವರಾಡುವ ಮಾತುಗಳು ಆಶಾದಾಯಕವಾಗಿದ್ದವು. ಆದರೆ ಲಂಕೆಗೆ ಅವರೆಲ್ಲರೂ ಸೇರಿ ಹನುಮನ ಹತ್ತಿರ ಬಂದರು “ಹನುಮ ಸಮುದ್ರ ಜಿಗಿಯುವ ಬದಲು ಇಲ್ಲಿ ಏಕೆ ಸುಮ್ಮನೆ ಕುಳಿತಿರುವೆ” ಎಂದಾಗ ಹನುಮನು “ಜಾಂಬವಂತರೆ ನಾನೊಂದು ಕಪಿ, ಚಿಕ್ಕವನು. ಟೊಂಗೆಯಿಂದ ಟೊಂಗೆಗೆ ಹಾರಬಲ್ಲೆ, ಮರದಿಂದ ಮರಕ್ಕೆ ಜಿಗಿಯಬಹುದು. ಆದರೆ ಈ ಮಹಾಸಾಗರವನ್ನು ನಾನು ಹೇಗೆ ಹಾರಬಲ್ಲೆ. ಗೇಲಿ ಮಾಡದಿರಿ ಎಂದನು.” “ಹನುಮ, ನೀನು ಚಿಕ್ಕವನಾದರೂ ನೀನೊಬ್ಬ ಕಪಿರಾಜನ ಮಗ. ನಿನ್ನಪ್ಪ ಬಹಳ ಶೂರ” ಎಂದ ಅಂಗದ. “ಅಪ್ಪ ರಾಜನಾದ ಮಾತ್ರಕ್ಕೆ ಮಗನಿಗೆ ಆ ಶಕ್ತಿ ಇರಲು ಸಾಧ್ಯವೇ? ನನ್ನ ಶಕ್ತಿಯನ್ನು ನಾನು ಬಲ್ಲೆ. ಅಂಗದರೆ, ನಾನೊಂದು ಕೋತಿ. ಹಲವು ಸ್ನೇಹಿತರೊಡನೆ ಸೇರಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಜಿಗಿದಿರಬಹುದು. ಮರವನ್ನು ಏರಿ ಕೊಂಬೆಯ ತುದಿಯಲ್ಲಿಯ ಹಣ್ಣನ್ನು ತಿಂದಿರಬಹುದು. ಹಲವರನ್ನು ಬಾಲಬೀಸಿ ಹೊಡೆದಿರಬಹುದು. ಕೆಲವರನ್ನು ಕಂಡು ಅಣಕಿಸಿ ದಕ್ಕಿಸಿಕೊಂಡಿರಬಹುದು. ಇಷ್ಟು ಮಾತ್ರಕ್ಕೆ ನಾನು ಶಕ್ತಿವಂತನೆಂದು ಭಾವಿಸುವುದು ಸರಿಯಲ್ಲ.” “ಹನುಮ, ನಿನ್ನ ಶಕ್ತಿ ಸಾಮರ್ಥ್ಯ ನಿನಗಿಂತ ನಾವು ಚೆನ್ನಾಗಿ ಬಲ್ಲೆವು. ನೀನು ಮಗುವಾಗಿದ್ದಾಗ ಅರುಣನನ್ನು ಕೆಂಪು ಹಣ್ಣೆಂದು ಭಾವಿಸಿದೆ. ಅದನ್ನು ತಿನ್ನಲು ಆಕಾಶಕ್ಕೆ ಜಿಗಿದೆ. ಸೂರ್ಯನ ನೆತ್ತಿಗೆ ಹಾರಿದ್ದೆ. ನಿನಗೆ ಬಹಳ ಶಕ್ತಿಯಿದೆ. ನೀನು ಮನಸ್ಸು ಮಾಡಿದರೆ ಸಪ್ತ ಸಾಗರವನ್ನು ಈಜಬಲ್ಲೆ. ಹಿಮಾಲಯವನ್ನೆತ್ತಿ ಕುಕ್ಕಬಲ್ಲೆ. ಪಾತಾಳವನ್ನು ಕಲಕಬಲ್ಲೆ. ನಿನಗೆ ಈ ಚಿಕ್ಕ ಸಮುದ್ರ ಸಮಸ್ಯೆಯಾಗದು.” “ಹಿರಿಯರಾದ ಜಾಂಬವರೇ ! ನಾನು ಮಗುವಾಗಿದ್ದಾಗ ಅರುಣನನ್ನು ಕೆಂಪು ಹಣ್ಣೆಂದು ಬಗೆದು ಆಕಾಶಕ್ಕೆ ಹಾರಿದ್ದು ನಿಜ! ಆದರೆ ಸಾಧಿಸಿದ್ದೇನು? ಇಂದ್ರನಿಂದ ಹೊಡೆತ ತಿಂದು ಭೂಮಿಗೆ ಬೀಳಲಿಲ್ಲವೆ? ಇಂದು ಎಲ್ಲಿದೆ ನನಗೆ ಅಂದಿನ ಶಕ್ತಿ? ಸುಮ್ಮನೆ ಹೊಗಳಬೇಡಿ. ನನ್ನಿಂದ ಸಮುದ್ರ ಉಲ್ಲಂಘಿಸುವುದು ಆಗದು. ನಾನೊಬ್ಬ ಸಾಮಾನ್ಯ.” “ಆಂಜನೇಯ, ನಿನ್ನ ಶಕ್ತಿ ನಿನಗೆ ತಿಳಿಯದು. ಸೂರ್ಯದೇವನಿಂದ ಶಸ್ತ್ರವಿದ್ಯೆ ಕಲಿತೆ. ಗುರು ದಕ್ಷಿಣೆಯಲ್ಲಿ ಅವನ ಮಗ ಸುಗ್ರೀವನ ಪ್ರಾಣ ರಕ್ಷಣೆ ಮಾಡಿದೆ. ಋಷ್ಯಮೂಕ ಪರ್ವತದಲ್ಲಿ ಶ್ರೀರಾಮನನ್ನು ಸಂಧಿಸಿ ಮೈತ್ರಿ ಸ್ಥಾಪಿಸಿದೆ. ಶ್ರೀರಾಮನ ಆಶೀರ್ವಾದ ನಿನಗಿದೆ.” “ವರ್ಣನೆ ಸಾಕು ಮಾಡಿ ಅಂಗದರೆ. ಆಶೀರ್ವಾದ ಮಾತ್ರಕ್ಕೆ ಎಲ್ಲ ಸಾಧನೆ ಸಾಧ್ಯವಿಲ್ಲ. ನೀವೇಕೆ ಪ್ರಯತ್ನಿಸಬಾರದು? ತಮಗೂ ದೇವರ ಆಶೀರ್ವಾದವಿದೆ.” “ಸತ್ಯ ಖಂಡಿತ ನಮಗೆಲ್ಲ ದೇವರ ಆಶೀರ್ವಾದವಿದೆ. ಆದರೆ ಆ ಕೆಲಸಕ್ಕೆ ಬೇಕಾದ ದೈಹಿಕ ಶಕ್ತಿ ಇಲ್ಲ. ಅದಕ್ಕಿಂತ ಹೆಚ್ಚಾಗಿ ಮಾನಸಿಕ ಸಾಮರ್ಥ್ಯ ಬೇಕು. ಅದಿಲ್ಲ ನಮ್ಮಲ್ಲಿ” “ಮಾನಸಿಕ ಸಾಮರ್ಥ್ಯ ಏನು ಹಾಗೆಂದರೆ?” ಹನುಮ ಕೇಳಿದ. “ಹುಟ್ಟಿನಿಂದ ಎಲ್ಲರಿಗೂ ಮಾನಸಿಕ ಸಾಮರ್ಥ್ಯವಿರುತ್ತದೆ. ಅದನ್ನು ಕೆಲವರು ಬೆಳೆಸಿಕೊಳ್ಳುತ್ತಾರೆ, ದುಡಿಸಿಕೊಳ್ಳುತ್ತಾರೆ. ಹೊಸಹೊಸ ಪ್ರಯೋಗಗಳಿಗೆ ಒಡ್ಡಿಕೊಂಡು ಗಟ್ಟಿಗೊಳಿಸಿಕೊಳ್ಳುತ್ತಾರೆ. ನಿನಗೆ ಆ ಸಾಧನೆ ಇದೆ. ಆತ್ಮವಿಶ್ವಾಸ ಹೊಂದು. ನಿನ್ನಲ್ಲಿ ಶಕ್ತಿಯಿದೆ. ಆದಕಾರಣ ಕೋಡುಗಲ್ಲಿನ ಮೇಲೆ ಕುಳಿತು ಯೋಚನೆ ಮಾಡುತ್ತಿರುವ” “ಅದು ನಿರಾಶೆಯ ಸೂಚಕವಲ್ಲವೇ?” “ಹುಚ್ಚಪ್ಪ, ಅದು ನಿರಾಶೆಯಲ್ಲ, ಚಿಂತನೆ! ನೀನಾರೆಂಬುದನ್ನು ಅರಿತುಕೋ. ನಿನ್ನಲ್ಲಿ ಪರಮಶಕ್ತಿಯಿದೆ. ಒಮ್ಮೆ ಮೈಕೊಡವಿ ಸೆಟೆದು ನಿಲ್ಲು. ನನ್ನಲ್ಲೂ ಸಮುದ್ರ ಉಲ್ಲಂಘಿಸುವ ಶಕ್ತಿಯಿದೆ ಎಂದು ಒಮ್ಮೆ ಕೂಗು. ದೊಡ್ಡ ಹೆಜ್ಜೆಯಿಡು. ನೀನು ಬೆಳೆಯುವೆ. ಶ್ರೀರಾಮನ ಆದೇಶ ನೆನಪಿಸಿಕೊ. ಸೀತಾಮಾತೆಯನ್ನು ಕಾಣುವ ಹಂಬಲ ತೀವ್ರವಾಗಲಿ. ಜಗಜ್ಜನನಿಗೆ ಮಹಾ ಮಾಂಗಲ್ಯ ಮುದ್ರಿಕೆ ಕೊಡುವುದು ಬೇಡವೇ? ಇದು ನಿನ್ನ ಕರ್ತವ್ಯವಲ್ಲವೇ? ನಿನ್ನ ಬಗ್ಗೆ ಅವಿಶ್ವಾಸ ಬೇಡ” ಎಂದು ಅಂಗದ ಉತ್ತೇಜನ ನೀಡಿದ. “ಆಂಜನೇಯ, ನೀನು ಮಾನಸಿಕವಾಗಿ ಸಿದ್ಧನಾಗು, ನೀನು ಕಿಂಕರ ಅಲ್ಲ. ಶಂಕರ. ಏಳು ಎದ್ದೇಳು ಜಾಗೃತನಾಗು. ಅಂತರಂಗದ ಕೀಳರಿಮೆ ತೊರೆ. ನೋಡು ಆಗಸದೆಡೆಗೆ, ಆ ನಿನ್ನ ಅರುಣ ಕ್ಷಣ ಕ್ಷಣಕ್ಕೂ ಬೆಳೆದು ಸೂರ್ಯನಾಗಿದ್ದಾನೆ. ಅವನ ಪ್ರಖರತೆ ಗಮನಿಸು. ಸಾವಿರಪಟ್ಟು ಹೆಚ್ಚಿಸಿದ್ದಾನೆ. ನೀನೋ ಬಲಶಾಲಿ ಮನಸ್ಸಿದ್ದರೆ ಮಾರ್ಗವಿದೆ. ಏಳು ಎಚ್ಚರಾಗು” ಎಂದು ಜಾಂಬವನು ತಿಳಿ ಹೇಳಿದನು. ಆಗ ಹನುಮಂತನು “ಹೌದು! ಹೌದು! ಕರ್ತವ್ಯಕ್ಕೆ ನನ್ನನ್ನು ಎಚ್ಚರಿಸಿದಿರಿ. ಧನ್ಯವಾದ”. ಎಂದು ಎದ್ದು ನಿಂತನು. ಶ್ರೀರಾಮನನ್ನು ನೆನಪಿಸಿಕೊಂಡನು. ವಾನರ ನಾಯಕರನ್ನು ವಂದಿಸಿದ. ನನ್ನಲ್ಲೂ ಶಕ್ತಿಯಿದೆ ಎಂದು ವಿಶ್ವಾಸದಿಂದ ಮನಸ್ಸಿನಲ್ಲಿ ಹೇಳಿಕೊಂಡನು. ನೋಡು ನೋಡುವಷ್ಟರಲ್ಲಿ ತ್ರಿವಿಕ್ರಮನಾಗಿ ಬೆಳೆದ. ಅವನ ಬಾಲ ಬೆಟ್ಟದಂತೆ ಹಬ್ಬಿತು. ಅದರ ಮೇಲೆ ಕುಳಿತು, ಆ ಮಹಾಸಾಗರ ನೋಡಿದ. ಅದೊಂದು ಪುಟ್ಟ ಸರೋವರದಂತೆ ಕಂಡಿತು. ಅದರಲ್ಲೊಂದು ಲಂಕೆ ಚಿಕ್ಕ ನಡುಗಡ್ಡೆ, ಸುತ್ತಲೂ ದಟ್ಟ ಕಾಡು. ಆ ಅರಣ್ಯದಲ್ಲಿ ರಾಕ್ಷಸಿಯರ ನಡುವೆ ತಾಯಿ ಸೀತಾದೇವಿಯನ್ನು ನೋಡಿದ. ತಕ್ಷಣ ಹೋ ಎಂದು ಕೂಗಿದ. 'ಅಮ್ಮ ನಾನು ಬಂದೆ' ಎಂದು ಸಾಗರ ಉಲ್ಲಂಘನಗಾಗಿ ಜಿಗಿದ. ಇದನ್ನು ಕಂಡು ಅಂಗದ ಜಾಂಬವರು ಜೈ ಶ್ರೀರಾಮ ಎಂದರು. “ಜಯ ಹನುಮಾನ್” ಎಂದು ಜಯಕಾರ ಹಾಕಿದರು.

ಅಭ್ಯಾಸexercises from the textbook

Model answers — a guide, not the only correct wording. Check with your teacher.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಸಮುದ್ರದ ಅಲೆಗಳು ಯಾವ ಗಾತ್ರದಲ್ಲಿದ್ದವು?

    Answer

    ಸಮುದ್ರದ ಅಲೆಗಳು ಆನೆಯಾಕಾರದಲ್ಲಿದ್ದವು.

  2. ೨. ಕಪಿವೀರರು ಲಂಕೆಯಲ್ಲಿ ಯಾರನ್ನು ಕಾಣುವ ಉತ್ಸಾಹದಲ್ಲಿದ್ದರು?

    Answer

    ಕಪಿವೀರರು ಲಂಕೆಯಲ್ಲಿ ಸೀತಾಮಾತೆಯನ್ನು ಕಾಣುವ ಉತ್ಸಾಹದಲ್ಲಿದ್ದರು.

  3. ೩. ಮಗುವಾಗಿದ್ದಾಗ ಹನುಮನು ಅರುಣನನ್ನು ಏನೆಂದು ಭಾವಿಸಿದನು?

    Answer

    ಮಗುವಾಗಿದ್ದಾಗ ಹನುಮನು ಅರುಣನನ್ನು ಕೆಂಪು ಹಣ್ಣೆಂದು ಭಾವಿಸಿದನು.

  4. ೪. ಆಂಜನೇಯನು ಸೂರ್ಯದೇವನಿಂದ ಯಾವ ವಿದ್ಯೆ ಕಲಿತನು?

    Answer

    ಆಂಜನೇಯನು ಸೂರ್ಯದೇವನಿಂದ ಶಸ್ತ್ರವಿದ್ಯೆ ಕಲಿತನು.

  5. ೫. ಹನುಮನು ನೋಡು ನೋಡುವಷ್ಟರಲ್ಲಿ ಯಾವ ರೀತಿ ಬೆಳೆದನು?

    Answer

    ಹನುಮನು ನೋಡು ನೋಡುವಷ್ಟರಲ್ಲಿ ತ್ರಿವಿಕ್ರಮನಾಗಿ ಬೆಳೆದನು.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಸಮುದ್ರ ಅಲೆಗಳ ರುದ್ರ ನರ್ತನವನ್ನು ವರ್ಣಿಸಿರಿ.

    Answer

    ಸಮುದ್ರದಲ್ಲಿ ಪುಟಿದೇಳುವ ಆನೆಯಾಕಾರದ ಅಲೆಗಳು ದಂಡೆಗೆ ಅಪ್ಪಳಿಸುತ್ತಿದ್ದವು. ಅದರ ಭಯಂಕರ ಧ್ವನಿಯು ಭೀತಿ ಹುಟ್ಟಿಸುತ್ತಿತ್ತು. ಇದನ್ನು ರುದ್ರ ನರ್ತನ ಎಂದು ವರ್ಣಿಸಲಾಗಿದೆ.

  2. ೨. ಜಾಂಬವಂತನು ಕಡಲನ್ನು ನೋಡಿ ಏನೆಂದು ಯೋಚಿಸಿದನು?

    Answer

    ಜಾಂಬವಂತನು ಕಡಲು ಶಾಂತವಾಗಿದೆ ಎಂದು ಗಮನಿಸಿದನು. ಆದರೆ ಲಂಕೆಯು ಕಾಣದೆ, ದಕ್ಷಿಣ ದಿಕ್ಕಿಗೆ ಲಂಕೆ ಇದೆ ಎಂಬ ಕಲ್ಪನೆಯ ಹೊರತು ಬೇರೇನೂ ತಿಳಿಯದೆ, ಹೇಗೆ ಹೋಗುವುದು ಎಂದು ಯೋಚಿಸತೊಡಗಿದನು.

  3. ೩. ಕಪಿಗಳು ತಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಏನೆಂದು ಮಾತನಾಡುತ್ತಿದ್ದವು?

    Answer

    ಕಪಿಗಳು ಸಮುದ್ರವನ್ನು ಜಿಗಿಯಲು ತಮ್ಮ ಶಕ್ತಿ-ಸಾಮರ್ಥ್ಯವನ್ನು ಹೇಳತೊಡಗಿದವು. ಒಂದು ಕಪಿ ಹತ್ತು ಯೋಜನ ಜಿಗಿಯಬಲ್ಲೆ ಎಂದರೆ, ಇನ್ನೊಂದು ಮೂವತ್ತು ಯೋಜನ ಹಾರಬಲ್ಲೆ ಎಂದಿತು. ಮತ್ತೊಂದು ನಲವತ್ತು ಯೋಜನ ಎಂದಿತು.

  4. ೪. ಮಾನಸಿಕ ಸಾಮರ್ಥ್ಯದ ಬಗ್ಗೆ ಹನುಮಂತನಿಗೆ ಏನು ಹೇಳಲಾಯಿತು?

    Answer

    ಹುಟ್ಟಿನಿಂದ ಎಲ್ಲರಿಗೂ ಮಾನಸಿಕ ಸಾಮರ್ಥ್ಯವಿರುತ್ತದೆ. ಅದನ್ನು ಕೆಲವರು ಬೆಳೆಸಿಕೊಂಡು, ಹೊಸ ಪ್ರಯೋಗಗಳಿಗೆ ಒಡ್ಡಿಕೊಂಡು ಗಟ್ಟಿಗೊಳಿಸಿಕೊಳ್ಳುತ್ತಾರೆ. ಹನುಮಂತನಿಗೆ ಆ ಸಾಧನೆ ಇದೆ ಎಂದು ಹೇಳಿ ಆತ್ಮವಿಶ್ವಾಸ ಹೊಂದಲು ತಿಳಿಸಲಾಯಿತು.

  5. ೫. ತ್ರಿವಿಕ್ರಮನಾಗಿ ಬೆಳೆದ ಹನುಮನಿಗೆ ಸಾಗರ ಹಾಗೂ ಲಂಕೆ ಹೇಗೆ ಕಂಡವು?

    Answer

    ತ್ರಿವಿಕ್ರಮನಾಗಿ ಬೆಳೆದ ಹನುಮನಿಗೆ ಮಹಾಸಾಗರವು ಒಂದು ಪುಟ್ಟ ಸರೋವರದಂತೆ ಕಂಡಿತು. ಲಂಕೆಯು ಒಂದು ಚಿಕ್ಕ ನಡುಗಡ್ಡೆಯಂತೆ ಕಂಡಿತು, ಸುತ್ತಲೂ ದಟ್ಟ ಕಾಡು ಇತ್ತು.

ಇ) ಈ ಕೆಳಗಿನ ಪ್ರಶ್ನೆಗಳಿಗೆ ಆರು-ಏಳು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಹನುಮಂತನು ತನ್ನ ಶಕ್ತಿ ಸಾಮರ್ಥ್ಯದ ಬಗ್ಗೆ ಅಂಗದನಿಗೆ ಏನು ಹೇಳಿದನು?

    Answer

    ಹನುಮಂತನು ತಾನು ಒಂದು ಚಿಕ್ಕ ಕಪಿ ಎಂದು ಹೇಳಿದನು. ತಾನು ಟೊಂಗೆಯಿಂದ ಟೊಂಗೆಗೆ ಹಾರಬಲ್ಲೆ, ಮರದಿಂದ ಮರಕ್ಕೆ ಜಿಗಿಯಬಲ್ಲೆ ಎಂದನು. ಆದರೆ ಮಹಾಸಾಗರವನ್ನು ಹಾರಲು ತನಗೆ ಸಾಧ್ಯವಿಲ್ಲ ಎಂದನು. ಅಪ್ಪ ರಾಜನಾದ ಮಾತ್ರಕ್ಕೆ ಮಗನಿಗೆ ಆ ಶಕ್ತಿ ಬರುವುದಿಲ್ಲ ಎಂದು ಹೇಳಿದನು. ತಾನು ಸ್ನೇಹಿತರೊಡನೆ ಜಿಗಿದು, ಮರ ಏರಿ ಹಣ್ಣು ತಿಂದಿರಬಹುದು ಎಂದನು. ಬಾಲದಿಂದ ಹೊಡೆದು, ಅಣಕಿಸಿ ದಕ್ಕಿಸಿಕೊಂಡಿರಬಹುದು ಎಂದನು. ಇಷ್ಟು ಮಾತ್ರಕ್ಕೆ ತಾನು ಶಕ್ತಿವಂತನೆಂದು ಭಾವಿಸುವುದು ಸರಿಯಲ್ಲ ಎಂದು ಹನುಮಂತನು ಹೇಳಿದನು.

  2. ೨. ಅಂಗದನು ಹನುಮಂತನನ್ನು ಯಾವ ಮಾತುಗಳಿಂದ ಉತ್ತೇಜಿಸಿದನು?

    Answer

    ಅಂಗದನು ಹನುಮಂತನನ್ನು ಕಪಿರಾಜನ ಮಗನೆಂದು ಹೇಳಿ, ಅವನ ತಂದೆ ಶೂರನೆಂದು ಉತ್ತೇಜಿಸಿದನು. ಹನುಮನು ಮಗುವಾಗಿದ್ದಾಗ ಅರುಣನನ್ನು ಹಣ್ಣೆಂದು ಭಾವಿಸಿ ಆಕಾಶಕ್ಕೆ ಜಿಗಿದಿದ್ದನ್ನು ನೆನಪಿಸಿದನು. ಹನುಮನಿಗೆ ಬಹಳ ಶಕ್ತಿಯಿದ್ದು, ಮನಸ್ಸು ಮಾಡಿದರೆ ಸಪ್ತ ಸಾಗರ ಈಜಬಲ್ಲೆ, ಹಿಮಾಲಯ ಎತ್ತಬಲ್ಲೆ ಎಂದನು. ಸೂರ್ಯದೇವನಿಂದ ಶಸ್ತ್ರವಿದ್ಯೆ ಕಲಿತು, ಸುಗ್ರೀವನ ಪ್ರಾಣ ರಕ್ಷಣೆ ಮಾಡಿದ ಸಾಧನೆಗಳನ್ನು ಹೇಳಿದನು. ಶ್ರೀರಾಮನ ಆಶೀರ್ವಾದವಿರುವುದನ್ನು ನೆನಪಿಸಿದನು. ನಿನ್ನಲ್ಲಿ ಪರಮಶಕ್ತಿಯಿದೆ, ಮೈಕೊಡವಿ ನಿಲ್ಲು, ನಿನ್ನಲ್ಲೂ ಸಮುದ್ರ ಉಲ್ಲಂಘಿಸುವ ಶಕ್ತಿಯಿದೆ ಎಂದು ಕೂಗು ಎಂದು ಹುರಿದುಂಬಿಸಿದನು. ಸೀತಾಮಾತೆಯನ್ನು ಕಾಣುವ ಹಂಬಲ ತೀವ್ರವಾಗಲಿ, ಇದು ನಿನ್ನ ಕರ್ತವ್ಯ ಎಂದು ಅಂಗದನು ಉತ್ತೇಜಿಸಿದನು.

  3. ೩. ಜಾಂಬವಂತನು ಆಂಜನೇಯನಿಗೆ ಏನೆಂದು ತಿಳಿ ಹೇಳಿದನು?

    Answer

    ಜಾಂಬವಂತನು ಆಂಜನೇಯನಿಗೆ ಮಾನಸಿಕವಾಗಿ ಸಿದ್ಧನಾಗಲು ಹೇಳಿದನು. ನೀನು ಕಿಂಕರನಲ್ಲ, ಶಂಕರನು ಎಂದು ಹೇಳಿದನು. ಎದ್ದೇಳು, ಜಾಗೃತನಾಗು, ಅಂತರಂಗದ ಕೀಳರಿಮೆ ತೊರೆ ಎಂದನು. ಅರುಣನು ಬೆಳೆದು ಸೂರ್ಯನಾಗಿ ಪ್ರಖರತೆ ಹೆಚ್ಚಿಸಿದಂತೆ ನೀನೂ ಬೆಳೆಯಬೇಕು ಎಂದನು. ಬಲಶಾಲಿ ಮನಸ್ಸಿದ್ದರೆ ಮಾರ್ಗವಿದೆ ಎಂದು ತಿಳಿ ಹೇಳಿದನು.

ಈ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ಬರೆಯಿರಿ.

  1. ೧. “ಹನುಮ ಸಮುದ್ರ ಜಿಗಿಯುವ ಬದಲು ಇಲ್ಲಿ ಏಕೆ ಸುಮ್ಮನೆ ಕುಳಿತಿರುವೆ.”

  2. ಯಾರು ಹೇಳಿದರು? ................................................................

    Answer

    ಎಲ್ಲ ಕಪಿಗಳು (ಅಂಗದ, ಜಾಂಬವಂತ ಮೊದಲಾದವರು)

  3. ಯಾರಿಗೆ ಹೇಳಿದರು? ................................................................

    Answer

    ಹನುಮನಿಗೆ

  4. ೨. “ನಿನ್ನಲ್ಲಿ ಪರಮಶಕ್ತಿಯಿದೆ.”

  5. ಯಾರು ಹೇಳಿದರು? ................................................................

    Answer

    ಅಂಗದನು

  6. ಯಾರಿಗೆ ಹೇಳಿದರು? ................................................................

    Answer

    ಹನುಮಂತನಿಗೆ

  7. ೩. “ಏಳು ಎದ್ದೇಳು ಜಾಗೃತನಾಗು.”

  8. ಯಾರು ಹೇಳಿದರು? ................................................................

    Answer

    ಜಾಂಬವಂತನು

  9. ಯಾರಿಗೆ ಹೇಳಿದರು? ................................................................

    Answer

    ಆಂಜನೇಯನಿಗೆ (ಹನುಮಂತನಿಗೆ)

III. ಭಾಷಾಭ್ಯಾಸ :

ಅ) ಕೆಳಗಿನ ವಾಕ್ಯಗಳಲ್ಲಿರುವ ಪದಗಳನ್ನು ಹಿಂದೆ ಮುಂದೆ ಮಾಡಿದೆ. ನೀವು ಅವುಗಳನ್ನು ಸರಿಪಡಿಸಿ ಬರೆಯಿರಿ.

  1. ೧. ಅಪ್ಪಳಿಸುತ್ತಿವೆ ಆನೆಯಾಕಾರದ ದಂಡೆಗೆ ಅಲೆಗಳು

    Answer

    ಆನೆಯಾಕಾರದ ಅಲೆಗಳು ದಂಡೆಗೆ ಅಪ್ಪಳಿಸುತ್ತಿವೆ.

  2. ೨. ಮಾತ್ರಕ್ಕೆ ಅಪ್ಪ ಇರಲು ರಾಜನಾದ ಮಗನಿಗೆ ಸಾಧ್ಯವೇ? ಆ ಶಕ್ತಿ

    Answer

    ಅಪ್ಪ ರಾಜನಾದ ಮಾತ್ರಕ್ಕೆ ಮಗನಿಗೆ ಆ ಶಕ್ತಿ ಇರಲು ಸಾಧ್ಯವೇ?

  3. ೩. ಸಾಮರ್ಥ್ಯವಿರುತ್ತದೆ ಹುಟ್ಟಿನಿಂದ ಮಾನಸಿಕ ಎಲ್ಲರಿಗೂ

    Answer

    ಹುಟ್ಟಿನಿಂದ ಎಲ್ಲರಿಗೂ ಮಾನಸಿಕ ಸಾಮರ್ಥ್ಯವಿರುತ್ತದೆ.

  4. ೪. ಮಾರ್ಗವಿದೆ ನೀನೋ ಏಳು ಬಲಶಾಲಿ ಎಚ್ಚರಾಗು ಮನಸ್ಸಿದ್ದರೆ

    Answer

    ನೀನೋ ಬಲಶಾಲಿ ಮನಸ್ಸಿದ್ದರೆ ಮಾರ್ಗವಿದೆ. ಏಳು ಎಚ್ಚರಾಗು.

ಆ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ದಿಟ್ಟಿಸಿ : ........................................................................................

    Model sentence

    ದಿಟ್ಟಿಸಿ: ನಾನು ಗಿಡದ ಮೇಲಿನ ಹೂವನ್ನು ದಿಟ್ಟಿಸಿ ನೋಡಿದೆ.

  2. ೨. ಅರುಣೋದಯ : ........................................................................................

    Model sentence

    ಅರುಣೋದಯ: ಅರುಣೋದಯದಲ್ಲಿ ಪಕ್ಷಿಗಳು ಹಾಡುತ್ತವೆ.

  3. ೩. ಹೆಮ್ಮೆ : ........................................................................................

    Model sentence

    ಹೆಮ್ಮೆ: ನನ್ನ ತಂದೆಗೆ ನನ್ನ ಮೇಲೆ ಹೆಮ್ಮೆ ಇದೆ.

  4. ೪. ಆಶಾದಾಯಕ : ........................................................................................

    Model sentence

    ಆಶಾದಾಯಕ: ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಆಶಾದಾಯಕವಾಗಿವೆ.

  5. ೫. ಕೀಳರಿಮೆ : ........................................................................................

    Model sentence

    ಕೀಳರಿಮೆ: ನಮ್ಮಲ್ಲಿ ಕೀಳರಿಮೆ ಇರಬಾರದು.

ಇ) ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

  1. ಮಾದರಿ : ದಂಡೆ - ತೀರ ; ದಡ ; ತಡಿ.

  2. ೧. ಸಮುದ್ರ - ................................................................

    Answer

    ಸಮುದ್ರ - ಸಾಗರ, ಕಡಲು, ಅಬ್ಧಿ

  3. ೨. ಆಕಾಶ - ................................................................

    Answer

    ಆಕಾಶ - ಗಗನ, ಬಾನು, ಅಂಬರ

  4. ೩. ತಾಯಿ - ................................................................

    Answer

    ತಾಯಿ - ಅಮ್ಮ, ಮಾತೆ, ಜನನಿ

  5. ೪. ಸೂರ್ಯ - ................................................................

    Answer

    ಸೂರ್ಯ - ರವಿ, ಭಾನು, ದಿನಕರ

  6. ೫. ಗೆಳೆಯ - ................................................................

    Answer

    ಗೆಳೆಯ - ಸ್ನೇಹಿತ, ಮಿತ್ರ, ಸಖ

ಈ) ಟಿಪ್ಪಣಿ ಬರೆಯಿರಿ.

  1. ೧. ಮಾನಸಿಕ ಸಾಮರ್ಥ್ಯ :

  2. .......................................................................................................

  3. .......................................................................................................

  4. .......................................................................................................

  5. .......................................................................................................

  6. .......................................................................................................

  7. ೨. ಉತ್ತೇಜನ :

  8. .......................................................................................................

  9. .......................................................................................................

  10. .......................................................................................................

  11. .......................................................................................................

  12. .......................................................................................................

ಉ) ವಿರುದ್ಧ ಪದ ಹೇಳುವ ಆಟ. ಒಬ್ಬರು ಒಂದು ಪದ ಹೇಳಬೇಕು, ಇನ್ನೊಬ್ಬರು ಅದಕ್ಕೆ ವಿರುದ್ಧಪದ ಹೇಳಬೇಕು.

  1. ಮಾದರಿ : (ಒಬ್ಬನು) (ಇನ್ನೊಬ್ಬನು)

  2. ಕತ್ತಲು X ಬೆಳಕು

  3. ತಂಪು X .................

    Answer

    ತಂಪು X ಬಿಸಿ

  4. ಹತ್ತಿರ X .................

    Answer

    ಹತ್ತಿರ X ದೂರ

  5. ................. X .................

    Answer

    ದೊಡ್ಡ X ಚಿಕ್ಕ

  6. ................. X .................

    Answer

    ಮೇಲೆ X ಕೆಳಗೆ

ಊ) ಪದ ಕಟ್ಟುವ ಆಟ. ಪ್ರತಿ ಪದದ ಕೊನೆಯ ಅಕ್ಷರದಿಂದ ಹೊಸದೊಂದು ಪದ ಕಟ್ಟಿರಿ.

  1. ಮಾದರಿ : ರಾಮ > ಮರ > ರಜ > ಜನ > ನಮನ > ನಗು > ಗುಣ

  2. ೧. ರಾಜ >

    Answer

    ರಾಜ > ಜನ > ನಗು > ಗುಣ

  3. ೨. ಹನುಮ >

    Answer

    ಹನುಮ > ಮರ > ರಜ > ಜನ > ನಗು > ಗುಣ

  4. ೩. ಆನೆ >

    Answer

    ಆನೆ > ನೆಲ > ಲತೆ > ತೆರೆ

  5. ೪. ಆಕಾಶ >

    Answer

    ಆಕಾಶ > ಶಾಲೆ > ಲೆಕ್ಕ

  6. ೫. ನಾಯಕ >

    Answer

    ನಾಯಕ > ಕರ > ರಜ > ಜನ > ನಗು

ಋ) ಆವರಣದಲ್ಲಿ ಸೂಚಿಸಿರುವಂತೆ ಉತ್ತರಿಸಿರಿ.

  1. (A table with two columns, the first containing the instruction and the second left blank for the student's answer)

  2. | ೧. ಅವನು ಶಾಲೆಗೆ ಹೋಗುತ್ತಾನೆ (ಸ್ತ್ರೀಲಿಂಗ ರೂಪದಲ್ಲಿ ಬರೆಯಿರಿ) | |

    Answer

    ಅವಳು ಶಾಲೆಗೆ ಹೋಗುತ್ತಾಳೆ.

  3. | ೨. ಕಣ್ಣು ಕಾಣಿಸದವನು (ಒಂದೇ ಪದದಲ್ಲಿ ಹೇಳಿರಿ) | |

    Answer

    ಕುರುಡ

  4. | ೩. ಅದು ನಿರಾಶೆಯ ಸೂಚಕವಲ್ಲವೇ (ಸೂಕ್ತ ಲೇಖನ ಚಿಹ್ನೆ ಹಾಕಿರಿ.) | |

    Answer

    ಅದು ನಿರಾಶೆಯ ಸೂಚಕವಲ್ಲವೇ?

  5. | ೪. ನಾನು ಬೆಂಗಳೂರಿಗೆ ಹೋಗುತ್ತೇನೆ (ಪ್ರಶ್ನಾರ್ಥಕ ವಾಕ್ಯ ಮಾಡಿರಿ) | |

    Answer

    ನಾನು ಬೆಂಗಳೂರಿಗೆ ಹೋಗುತ್ತೇನೆಯೇ?

ಎ) ಕೆಳಗೆ ನೀಡಿರುವ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ಆನೆಯಾಕಾರ = ...................................... + ......................................

    Answer

    ಆನೆ + ಆಕಾರ

  2. ೨. ಪುಟಿದೇಳು = ...................................... + ......................................

    Answer

    ಪುಟಿದು + ಏಳು

  3. ೩. ಫಲಾಹಾರ = ...................................... + ......................................

    Answer

    ಫಲ + ಆಹಾರ

  4. ೪. ಕೋಡುಗಲ್ಲು = ...................................... + ......................................

    Answer

    ಕೋಡು + ಕಲ್ಲು

  5. ೫. ಅರುಣೋದಯ = ...................................... + ......................................

    Answer

    ಅರುಣ + ಉದಯ

IV. ಸೈದ್ಧಾಂತಿಕ ವ್ಯಾಕರಣ :

ಅ) ಭಾವಸೂಚಕ ವಾಕ್ಯಗಳು :

  1. ಸಂತೋಷ, ಸಿಟ್ಟು, ಕೋಪ, ದುಃಖ, ನಿರಾಸೆ, ಜುಗುಪ್ಸೆ, ಆಶ್ಚರ್ಯ, ಭಯ, ಆತಂಕ ಇವೆಲ್ಲವೂ ನಮ್ಮ ಮನಸ್ಸಿನ ಭಾವನೆಗಳು. ಈ ಭಾವನೆಗಳು ಉಂಟಾದಾಗ ಅದನ್ನು ಮಾತಿನಲ್ಲಿ ಹೇಗೆ ವ್ಯಕ್ತಪಡಿಸುತ್ತೇವೆ? ಈ ಕೆಳಗಿನ ವಾಕ್ಯಗಳನ್ನು ಹಾಗೂ ಲೇಖನ ಚಿಹ್ನೆಗಳನ್ನು ಗಮನಿಸಿರಿ.

  2. ೧. ಆಹಾ! ಆಗುಂಬೆಯ ಸೂರ್ಯಾಸ್ತ ಎಷ್ಟು ಚೆಂದ!

  3. ೨. ಅಯ್ಯೋ! ಸಮುದ್ರದಲ್ಲಿ ಸೂರ್ಯ ಜಿಗಿದೆ ಬಿಟ್ಟ.

  4. ೩. ಹೋ! ಅವರೇ ಗೆದ್ದು ಬಂದರು.

  5. ೪. ಸತ್ಯವನ್ನು ಕೊಂದರು ಈ ಜನ!

  6. ೫. ಅಬ್ಬಾ ! ಏನಿದರ ರುದ್ರ ನರ್ತನ ! ಏನಿದರ ಭಯಂಕರ ಧ್ವನಿ!

  7. ಈ ರೀತಿಯ ವಾಕ್ಯಗಳನ್ನು ಭಾವಸೂಚಕ ವಾಕ್ಯಗಳು ಎಂದು ಕರೆಯುತ್ತೇವೆ. ಇದೇರೀತಿ ಇನ್ನೂ ಹಲವು ಭಾವಸೂಚಕ ವಾಕ್ಯಗಳನ್ನು ನೀವು ಪಟ್ಟಿಮಾಡಿರಿ.

    Answer

    ಆಹಾ! ಎಷ್ಟು ಸುಂದರವಾದ ಹೂವು! ಅಯ್ಯೋ! ನನ್ನ ಪೆನ್ನು ಕೆಳಗೆ ಬಿತ್ತು! ಛೇ! ಇದು ತುಂಬಾ ಕೆಟ್ಟ ವಾಸನೆ! ಓಹ್! ನೀನು ಬಂದೆಯಾ? ಶಾಭಾಶ್! ನೀನು ಚೆನ್ನಾಗಿ ಮಾಡಿದೆ.

V. ಚಟುವಟಿಕೆಗಳು :

  1. ೧. ಭಾರತದಲ್ಲಿ ಹಲವು ವ್ಯಕ್ತಿಗಳು ಮೌಲ್ಯಗಳಿಗೆ ಹೆಸರಾಗಿದ್ದಾರೆ. ಅವರನ್ನು ನೆನಪಲ್ಲಿಡಿ.

  2. (A table matching persons to their values)

  3. | ವ್ಯಕ್ತಿ | ಮೌಲ್ಯ |

  4. |---|---|

  5. | ಶ್ರವಣಕುಮಾರ | ಪಿತೃಭಕ್ತಿ |

  6. | ಹರಿಶ್ಚಂದ್ರ | ಸತ್ಯ |

  7. | ದುರ್ಯೋಧನ | ಛಲ |

  8. | ಭೀಮ | ಬಲ |

  9. | ದಧೀಚಿ | ತ್ಯಾಗ |

  10. | ಕರ್ಣ | ದಾನ |

  11. | ಮೀರಾ | ಭಕ್ತಿ |

  12. | ಕೃಷ್ಣ-ಕುಚೇಲ | ಸ್ನೇಹ |

  13. | ಮಹಾವೀರ | ಅಹಿಂಸೆ |

  14. ೨. ಮಕ್ಕಳ ರಾಮಾಯಣ ಕಥಾ ಪುಸ್ತಕಗಳನ್ನು ಓದಿರಿ.

  15. ೩. ಮಕ್ಕಳಿಗೆ ಹನುಮ, ಅಂಗದ, ಜಾಂಬವಂತರ ವೇಷ ಹಾಕಿಸಿ ಹನುಮಂತನೊಡನೆ ನಡೆಯುವ ಸಂಭಾಷಣೆ ಹೇಳಿಸಿ.

Interactive Lab