CRECT Education

Class 6 Kannada Lesson 3: The Calling Bird | KTBS Second Language – Learn the Story

Description

Learn Class 6 Kannada Lesson 3 – The Calling Bird (ಕೂಗುತಿದೆ ಪಕ್ಷಿ) from the KTBS Second Language textbook. Beat-by-beat narration with vocabulary.

ಗದ್ಯ (prose) · ಸಂಪಾದಿತ (Edited)

ಪಠ್ಯFull text

**ಪಾಠ ಪ್ರವೇಶ :** ಒಂದು ಸುಂದರ ಕಾಡು. ಅಲ್ಲೊಂದು ಮೊಲ ಬೇಟೆಗಾರನ ಬಲೆಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಈಗ ನೀವೇನು ಮಾಡುತ್ತೀರಿ? ಚರ್ಚಿಸಿರಿ. ಶಾಲಾ ಮೈದಾನದಲ್ಲಿ ಹುಡುಗನೊಬ್ಬ ಬಿದ್ದಿದ್ದಾನೆ. ಕಾಲಿನ ಚರ್ಮ ಕಿತ್ತು ರಕ್ತ ಸೋರಿ ಬಂದಿದೆ. ಆಗ ನೀವೇನು ಮಾಡಬಹುದು? ತಿಳಿಸಿ. ಇಂತಹ ಸಹಾಯ ಮನೋಭಾವ, ಪರಿಸರ ಪ್ರೇಮ, ಸಹಜೀವನ, ದೇಶಪ್ರೇಮದ ಭಾವನಾತ್ಮಕ ಬದುಕು ಈ ಪಾಠದಲ್ಲಿ ಗರಿಗೆದರಿ ನಿಂತಿದೆ. ಇಲ್ಲಿ ಪಕ್ಷಿಗಳು ಮರವನ್ನು ಪ್ರೀತಿಸುವ ಪರಿಯನ್ನು ಓದಿ ನೋಡಿ! ಕೃಷ್ಣೆ ಮೈದುಂಬಿ ಹರಿಯುತ್ತಿದ್ದಾಳೆ. ಅವಳ ಭೋರ್ಗರೆತ, ತೂರಾಟ, ಚೆಲ್ಲಾಟ, ಹರಿಯುವ ಓಟ ನಯನ ಮನೋಹರ. ಬೆಳ್ಳನೆಯ ನೊರೆ ಬಲು ಚೆಂದ. ಸುಳಿಗಳಲ್ಲಿ ಸುತ್ತುವ ನೀರಿನ ಸೊಬಗೇ ಸೊಬಗು. ಬೆಳಗಿನ ಎಳೆ ಬಿಸಿಲಿನ ಹೊಳಪಿಗೆ ಮಿನಮಿನ ಮಿರುಗುವ ನದಿ ಬಲು ಅಂದ. ಸೂರ್ಯನ ಹೊಂಬಣ್ಣದ ಕಿರಣಗಳು ನದಿಯ ಮೇಲೆ ಬಿದ್ದಿವೆ. ಅಲ್ಲಿ ಹನಿ ಹನಿಗೂ ಮುತ್ತಿನ ಮಣಿಯ ರೂಪ. ಅಬ್ಬಬ್ಬಾ ! ಅದೆಷ್ಟು ಸುಂದರ. ಈ ಕೃಷ್ಣಾ ನದಿಯಲ್ಲಿ ಹಲವಾರು ನಡುಗಡ್ಡೆಗಳಿವೆ. ಅವುಗಳಲ್ಲಿ ಸುಂದರವಾದ ಗಡ್ಡೆ ‘ನಾರದ ಗಡ್ಡೆ’. ಅದು ರಾಯಚೂರು ಸಮೀಪವಿದೆ. ಬಹಳ ಹಿಂದೆ ಇಲ್ಲಿ ನಾರದ ಮುನಿ ತಪಸ್ಸು ಮಾಡಿದ್ದರೆಂಬ ಪ್ರತೀತಿ. ಇಲ್ಲೊಂದು ಶಿವದೇವಾಲಯವೂ ಇದೆ. ಸದಾ ಹಚ್ಚಹಸುರಿನಿಂದ ಕೂಡಿ, ಗಿಡ ಮರಗಳಿಂದ ಕಂಗೊಳಿಸುತ್ತಿದೆ. ಈ ನಡುಗಡ್ಡೆ ಪ್ರವಾಸಿ ತಾಣವೂ ಹೌದು. ಈ ಸುಂದರ ತಾಣವನ್ನು ನೋಡಲು ಮಕ್ಕಳು ಪ್ರವಾಸ ಹೊರಟಿದ್ದರು. ಕುಹೂ ಕುಹೂ ಹಕ್ಕಿಗಳ ಕಲರವ ಕಿವಿಗೆ ಇಂಪಾಗಿತ್ತು. ಮನಕೆ ತಂಪೆರೆಯುತ್ತಿತ್ತು. ಚಿಲಿಪಿಲಿ ಹಕ್ಕಿಗಳ ಇಂಚರ ಸಂಗೀತಮಯ. ಮಕ್ಕಳು ಈ ಸುಂದರ ತಾಣದ ಸವಿ ಉಣ್ಣುತ್ತಿದ್ದರು. ಇದ್ದಕ್ಕಿದ್ದಂತೆ ಹಕ್ಕಿಯೊಂದರ ನೋವಿನ ಕೂಗು ಕೇಳಿಸಿತು. ಅತ್ತ ತಿರುಗಿ ನೋಡಿದಾಗ ಅನೇಕ ಟೊಂಗೆಗಳನ್ನು ಹರಡಿಕೊಂಡಿರುವ ಬೋಳುಮರ. ಎಲೆಗಳಿಲ್ಲದ, ಹೂಗಳಿಲ್ಲದ, ಹಣ್ಣುಕಾಯಿಗಳಿಲ್ಲದ ಒಣಗುತ್ತಿರುವ ಮರ. ಅದರೊಳಗೆ ಕುಳಿತ ಪಕ್ಷಿಯೊಂದು ನೋವಿನಿಂದ ಕೂಗುತ್ತಿತ್ತು. ಮಕ್ಕಳು ಕುತೂಹಲದಿಂದ ಆ ಮರದ ಬಳಿ ತೆರಳಿದರು. “ಏ! ಸುಂದರ ಪಕ್ಷಿಯೇ, ಎಲ್ಲರೂ ಸಂತೋಷದಿಂದ ಇದ್ದಾರೆ. ನೀನೇಕೆ ನೋವಿನಿಂದ ಕೂಗುತ್ತಿದ್ದೀಯಾ? ಏನದು ನಿನ್ನ ಅಳಲು?” ಎಂದು ಗಣೇಶ ಪಕ್ಷಿಯನ್ನು ಪ್ರಶ್ನಿಸಿದನು. “ಅಣ್ಣಾ! ನೋಡಿಲ್ಲಿ ನನ್ನ ಮರವನ್ನು. ಎಲೆಗಳೆಲ್ಲಾ ಉದುರಿಹೋಗಿವೆ. ಟೊಂಗೆಗಳು ಬೋಳಾಗಿವೆ. ಶಕ್ತಿಯಿಲ್ಲದೆ ಮರ ಸೊರಗಿದೆ. ಆಗಲೋ ಈಗಲೋ ಬೀಳುವಂತಿದೆ” ಎಂದಿತು ಪಕ್ಷಿ. “ಹೌದೌದು ! ಅದರಿಂದ ನಿನಗೇನು ತೊಂದರೆ?” ಜೂಲಿ ಪಕ್ಷಿಯನ್ನು ಪ್ರಶ್ನಿಸಿದಳು. “ಹಿಂದೆ ಈ ಮರವನ್ನು ನೀನು ನೋಡಿದ್ದೆಯಾ? ಆಗ ಏನಿದರ ಸೊಬಗು! ಮರದ ತುಂಬಾ ಹಸಿರೆಲೆಗಳು. ಟೊಂಗೆ ಟೊಂಗೆಗೂ ಹೂ, ಹಣ್ಣು ಸಾವಿರಾರು. ತಂಪಾದ ನೆರಳು ಮನೆ ಮಾಡಿತ್ತು. ನೂರಾರು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು. ಅದೇನು ಕಾರಣವೊ ತಿಳಿಯದು. ಎಲೆಗಳೆಲ್ಲ ಒಮ್ಮಿಂದೊಮ್ಮೆಲೆ ಉದುರಲು ಆರಂಭಿಸಿದವು. ಮತ್ತೆ ಚಿಗುರೊಡೆಯಲಿಲ್ಲ, ಮರ ಬಣ್ಣಗೆಟ್ಟಿತು, ಸೊರಗಿತು. ಈಗ ಒಣಗುತ್ತಿದೆ” ಎಂದಿತು ಪಕ್ಷಿ. “ನಿನಗೆ ಈ ಮರದ ಮೇಲೆ ಅಷ್ಟೊಂದು ಪ್ರೀತಿಯೇ? ಏಕೆ?” ಎಂದು ಲತಾ ಪ್ರಶ್ನಿಸಿದಳು. “ನನ್ನ ಅಜ್ಜ-ಅಜ್ಜಿ , ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ ಎಲ್ಲರೂ ಇಲ್ಲಿಯೇ ಹುಟ್ಟಿ ಬೆಳೆದರು. ನಾನೂ ಇಲ್ಲಿಯೇ ಜನ್ಮ ತಳೆದೆ. ಆದರೆ ........... ಈ ಮರ ಈಗ ಸಾಯಲು ಸಿದ್ಧವಾದಂತಿದೆ. ಹಾಗೇನಾದರೂ ಆದರೆ ನನಗೆ ತಾಣವೆಲ್ಲಿದೆ?” ಎಂದು ನೋವಿನಿಂದ ಉಸುರಿತು. ಪಕ್ಷಿಯ ಈ ಮಾತು ಕೇಳಿ ಮಕ್ಕಳಿಗೆ ಕನಿಕರ ಉಂಟಾಯಿತು. ಪಕ್ಷಿಯ ನೋವನ್ನು ಅರ್ಥಮಾಡಿಕೊಂಡರು. ಅದನ್ನು ಹೋಗಲಾಡಿಸುವ ಬಗ್ಗೆ ವಿಚಾರ ಮಾಡಿದರು. ಪಕ್ಷಿಯು ಈ ಮರದ ಬಗ್ಗೆ ಹೊಂದಿರುವ ಭಾವುಕತೆ, ಅಭಿಮಾನದ ಬಗ್ಗೆ ಅಚ್ಚರಿ ಉಂಟಾಗುತ್ತಿದೆ ಎಂದನು ಬಷೀರ್. ನಾವೆಲ್ಲ ಊರಿಗೆ ಹೋಗಿ ಸಸ್ಯ ವೈದ್ಯರನ್ನು ಕಾಣೋಣ. ಮರದ ಬಗ್ಗೆ ವಿವರಿಸೋಣ. ಸೂಕ್ತ ಚಿಕಿತ್ಸೆ ಕೊಡಿಸಿ ಮರವನ್ನು ಉಳಿಸೋಣ. ಹಸಿರೇ ನಮ್ಮ ಉಸಿರು ಎಂಬ ನಾಣ್ಣುಡಿಯನ್ನು ಎಲ್ಲೆಡೆ ಸಾರೋಣ ಎಂದಳು ದಿವ್ಯಾ. ಎಲ್ಲ ಮಕ್ಕಳು ಊರಿಗೆ ಹಿಂದಿರುಗಿದರು. ಸಸ್ಯ ವೈದ್ಯರನ್ನು ಮರದ ಬಳಿಗೆ ಕರೆತಂದರು. ವೈದ್ಯರು ಮರವನ್ನು ಸಂಪೂರ್ಣವಾಗಿ ನೋಡಿದರು. ಟೊಂಗೆಯನ್ನು ಗಮನಿಸಿದರು. ಏನೇನೋ ವಿಚಾರಮಾಡಿ ಬೇರುಗಳಿಗೆ ಚುಚ್ಚುಮದ್ದು ನೀಡಿದರು. ಒಣಗಿದ ಭಾಗಕ್ಕೆ ಔಷಧಿ ಸವರಿದರು. ಮಕ್ಕಳು ವೈದ್ಯರ ಸಲಹೆಯಂತೆ ಮರದ ಬುಡಕ್ಕೆ ಗೊಬ್ಬರ ಹಾಕಿ ನೀರುಣಿಸಿದರು. ಕೆಲವು ದಿನಗಳು ಕಳೆದವು. ಮಳೆಗಾಲ ಬಂತು. ಮರ ಚಿಗುರೊಡೆಯಿತು. ಎಲೆಗಳು ಮೈದಳೆದವು. ಟೊಂಗೆ ಟೊಂಗೆಗಳಲ್ಲಿ ಹೂಗಳು ರಾರಾಜಿಸಿದವು. ಹೀಚು, ಕಾಯಿ, ಹಣ್ಣುಗಳು ಜೀವತಳೆದವು. ಆ ಮರಕ್ಕೆ ನೂರಾರು ಹಕ್ಕಿಗಳು ಬಂದವು. ಪಕ್ಷಿಗಳ ಕಲರವ ತುಂಬಿತು. ಮತ್ತೆ ಮಕ್ಕಳು ಪ್ರವಾಸಕ್ಕೆ ಬಂದರು. ಮರದ ಸೊಬಗು ಮಕ್ಕಳ ಮನಸ್ಸಿಗೆ ಉಲ್ಲಾಸ ತಂದಿತು. ಮಕ್ಕಳು ಕುಣಿದು ಕುಪ್ಪಳಿಸಿದರು. ಮಕ್ಕಳು ಮಾಡಿದ ಸತ್ಕಾರ್ಯವನ್ನು ಮೆಚ್ಚಿ ಪಕ್ಷಿಗಳು ಹಾಡಿದವು. ಮರವು ಮೆಲುಗಾಳಿಗೆ ಎಲೆಗಳನ್ನು ಅಲುಗಾಡಿಸಿ ಸಂಗೀತ ನೀಡಿತು. ಋಣ ತೀರಿಸಿತು. ಮಕ್ಕಳು ಹೋ ಎಂದು ಕೂಗಿದರು. ಹಸಿರೇ ಉಸಿರು ಎಂದರು.

"ಹಸಿರೇ ನಮ್ಮ ಉಸಿರು" — "Greenery is our breath."

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. | | |

  2. |---|---|

  3. | ಅಳಲು – ನೋವು; ದುಃಖ. | ಅಭಿಮಾನ – ಹೆಮ್ಮೆ |

  4. | ಇಂಚರ – ಇಂಪಾದ ದನಿ; ಮಧುರ ದನಿ. | ಉಲ್ಲಾಸ – ಆನಂದ; ಲವಲವಿಕೆ. |

  5. | ಋಣ – ಸಾಲ; ಹಂಗು; ರಿಣ. | ಕಂಗೊಳಿಸು – ಕಣ್ಣಿಗೆ ಅಂದವಾಗಿ ಕಾಣು |

  6. | ಚೆಲ್ಲಾಟ – ವಿನೋದ; ವಿಲಾಸ. | ಜೀವತಳೆ – ಜೀವಪಡೆ; ಜೀವಹೊಂದು. |

  7. | ತಂಪೆರೆ – ತೃಪ್ತಿ ನೀಡು | ತೂರಾಟ – ಮೇಲಕ್ಕೆ ಚಿಮ್ಮುವ ಆಟ. |

  8. | ನಡುಗಡ್ಡೆ – ನೀರ ನಡುವಿರುವ ಚಿಕ್ಕ ಭೂಪ್ರದೇಶ. | ನಯನ – ಕಣ್ಣು; ನೇತ್ರ; ಅಕ್ಷಿ. |

  9. | ನೀರುಣಿಸು – ನೀರುಹಾಕು | ನೊರೆ – ಬುರುಗು |

  10. | ಪ್ರತೀತಿ – ಪ್ರಸಿದ್ಧಿ; ಜನಜನಿತ. | ಪ್ರವಾಸಿ ತಾಣ – ಪ್ರವಾಸಿಗರು ಬರುವ ಜಾಗ; ಪ್ರವಾಸಕ್ಕೆ ಯೋಗ್ಯವಾದ ಸ್ಥಳ. |

  11. | ಬಣ್ಣಗೆಡು – ಕಳಾಹೀನವಾಗು; ಕಳೆಕುಂದು. | ಬೋಳುಮರ – ಎಲೆಗಳು ಸಂಪೂರ್ಣವಾಗಿ ಉದುರಿಹೋಗಿರುವ ಮರ. |

  12. | ಮನೋಹರ – ಮನಸ್ಸಿಗೆ ಹಿತವಾದ | ಮಿನ ಮಿನ – ಫಳ ಫಳ |

  13. | ಮಿರುಗು – ಹೊಳೆಯುವುದು | ಮೆಲುಗಾಳಿ – ಮೆಲ್ಲಗೆ ಬೀಸುವ ಗಾಳಿ |

  14. | ಮೈದಳೆ – ಆಕಾರಹೊಂದು; ದೇಹ ಧರಿಸು. | ರಾರಾಜಿಸು – ಪ್ರಕಾಶಿಸು; ಶೋಭಿಸು; ಮಿರುಗು. |

  15. | ಸೊರಗು – ಬಾಡು; ಕ್ಷೀಣವಾಗು. | ಹೊಂಬಣ್ಣ – ಚಿನ್ನದ ಬಣ್ಣ |

  16. | ತಾಣ – ನೆಲೆ; ಜಾಗ. | ಸವರು- ಹಚ್ಚು; ಲೇಪಿಸು. |

  17. | ಸತ್ಕಾರ್ಯ – ಒಳ್ಳೆಯ ಕೆಲಸ | ಸುಳಿ – ನದಿಯಲ್ಲಿ ನೀರು ವೃತ್ತಾಕಾರವಾಗಿ ಸುತ್ತುವ ರೀತಿ. |

  18. ಹಸಿರೇ ಉಸಿರು – ನಾಣ್ಣುಡಿ, ಮರಗಿಡಗಳನ್ನು ಬೆಳೆಸಬೇಕು. ಅವು ಜೀವನಾಧಾರ, ಅವುಗಳಿಂದ ಜೀವ ಜಗತ್ತಿಗೆ ಆಮ್ಲಜನಕ ದೊರೆಯುತ್ತದೆ.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ನಾರದ ಗಡ್ಡೆ ಎಲ್ಲಿದೆ?

    Answer

    ನಾರದ ಗಡ್ಡೆಯು ರಾಯಚೂರು ಸಮೀಪದ ಕೃಷ್ಣಾ ನದಿಯಲ್ಲಿದೆ.

  2. ೨. ಪಕ್ಷಿ ಕೂಗುತ್ತಿದ್ದ ಬೋಳುಮರ ಯಾವ ರೀತಿ ಇತ್ತು?

    Answer

    ಪಕ್ಷಿ ಕೂಗುತ್ತಿದ್ದ ಬೋಳುಮರವು ಎಲೆಗಳಿಲ್ಲದ, ಹೂಗಳಿಲ್ಲದ, ಹಣ್ಣುಕಾಯಿಗಳಿಲ್ಲದ ಒಣಗುತ್ತಿರುವ ಮರವಾಗಿತ್ತು.

  3. ೩. ಮಕ್ಕಳು ಮಾಡಿದ ಸತ್ಕಾರ್ಯವನ್ನು ಪಕ್ಷಿಗಳು ಹೇಗೆ ಮೆಚ್ಚಿಕೊಂಡವು?

    Answer

    ಮಕ್ಕಳು ಮಾಡಿದ ಸತ್ಕಾರ್ಯವನ್ನು ಮೆಚ್ಚಿ ಪಕ್ಷಿಗಳು ಹಾಡಿದವು.

  4. ೪. ಮಕ್ಕಳ ಮನಸ್ಸಿಗೆ ಉಲ್ಲಾಸ ತಂದ ಸಂಗತಿ ಯಾವುದು?

    Answer

    ಮರದ ಸೊಬಗು ಮಕ್ಕಳ ಮನಸ್ಸಿಗೆ ಉಲ್ಲಾಸ ತಂದಿತು.

  5. ೫. ಪಕ್ಷಿಯ ಮಾತುಗಳಿಗೆ ಬಷೀರ್ ಏನೆಂದು ಪ್ರತಿಕ್ರಿಯಿಸಿದನು?

    Answer

    ಪಕ್ಷಿಯು ಮರದ ಬಗ್ಗೆ ಹೊಂದಿರುವ ಭಾವುಕತೆ ಮತ್ತು ಅಭಿಮಾನದ ಬಗ್ಗೆ ತನಗೆ ಅಚ್ಚರಿ ಉಂಟಾಗುತ್ತಿದೆ ಎಂದು ಬಷೀರ್ ಹೇಳಿದನು.

  6. ೬. ಪಕ್ಷಿಯ ಮಾತುಗಳನ್ನು ಕೇಳಿದ ದಿವ್ಯ ಯಾವ ತೀರ್ಮಾನಕ್ಕೆ ಬಂದಳು?

    Answer

    ಊರಿಗೆ ಹೋಗಿ ಸಸ್ಯ ವೈದ್ಯರನ್ನು ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಿ ಮರವನ್ನು ಉಳಿಸಬೇಕು ಮತ್ತು ಹಸಿರೇ ನಮ್ಮ ಉಸಿರು ಎಂಬ ನಾಣ್ಣುಡಿಯನ್ನು ಎಲ್ಲೆಡೆ ಸಾರಬೇಕು ಎಂದು ದಿವ್ಯಾ ತೀರ್ಮಾನಿಸಿದಳು.

  7. ೭. ಬೋಳುಮರ ಮೊದಲಿನಂತೆ ಹೇಗೆ ಜೀವ ತಳೆಯಿತು?

    Answer

    ಸಸ್ಯ ವೈದ್ಯರ ಚಿಕಿತ್ಸೆ ಮತ್ತು ಮಕ್ಕಳ ಆರೈಕೆಯಿಂದ ಮಳೆಗಾಲದಲ್ಲಿ ಮರವು ಚಿಗುರೊಡೆದು ಎಲೆ, ಹೂ, ಹಣ್ಣುಗಳನ್ನು ಪಡೆದು ಜೀವ ತಳೆಯಿತು.

  8. ೮. ಪಕ್ಷಿಗಳು ಯಾವುದನ್ನು ಮೆಚ್ಚಿ ಹಾಡು ಹಾಡಿದವು?

    Answer

    ಪಕ್ಷಿಗಳು ಮಕ್ಕಳು ಮಾಡಿದ ಸತ್ಕಾರ್ಯವನ್ನು ಮೆಚ್ಚಿ ಹಾಡು ಹಾಡಿದವು.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಕೃಷ್ಣಾ ನದಿಯ ಓಟ ಯಾವ ರೀತಿ ನಯನ ಮನೋಹರವಾಗಿದೆ?

    Answer

    ಕೃಷ್ಣಾ ನದಿಯು ಮೈದುಂಬಿ ಹರಿಯುತ್ತಾಳೆ; ಅವಳ ಭೋರ್ಗರೆತ, ತೂರಾಟ, ಚೆಲ್ಲಾಟ ಮತ್ತು ಹರಿಯುವ ಓಟ ನಯನ ಮನೋಹರ. ಬೆಳ್ಳನೆಯ ನೊರೆ ಚೆಂದವಾಗಿದ್ದು, ಸುಳಿಗಳಲ್ಲಿ ಸುತ್ತುವ ನೀರು ಸೊಬಗಾಗಿದೆ; ಬೆಳಗಿನ ಎಳೆ ಬಿಸಿಲಿನ ಹೊಳಪಿಗೆ ನದಿ ಮಿನಮಿನ ಮಿರುಗುತ್ತದೆ.

  2. ೨. ನಾರದ ಗಡ್ಡೆಯ ವಿಶೇಷತೆಗಳೇನು?

    Answer

    ನಾರದ ಗಡ್ಡೆಯು ಕೃಷ್ಣಾ ನದಿಯಲ್ಲಿರುವ ಸುಂದರ ನಡುಗಡ್ಡೆಯಾಗಿದ್ದು ರಾಯಚೂರು ಸಮೀಪವಿದೆ. ಬಹಳ ಹಿಂದೆ ಇಲ್ಲಿ ನಾರದ ಮುನಿ ತಪಸ್ಸು ಮಾಡಿದ್ದರೆಂಬ ಪ್ರತೀತಿ ಇದೆ; ಇಲ್ಲಿ ಶಿವದೇವಾಲಯವೂ ಇದೆ. ಅದು ಸದಾ ಹಚ್ಚಹಸುರಿನಿಂದ ಕೂಡಿ ಗಿಡಮರಗಳಿಂದ ಕಂಗೊಳಿಸುತ್ತಿದ್ದು ಪ್ರವಾಸಿ ತಾಣವಾಗಿದೆ.

  3. ೩. ಗಣೇಶನು ಪಕ್ಷಿಯನ್ನು ಏನೆಂದು ಪ್ರಶ್ನಿಸಿದನು?

    Answer

    ಗಣೇಶನು ಪಕ್ಷಿಯನ್ನು, “ಏ! ಸುಂದರ ಪಕ್ಷಿಯೇ, ಎಲ್ಲರೂ ಸಂತೋಷದಿಂದ ಇದ್ದಾರೆ. ನೀನೇಕೆ ನೋವಿನಿಂದ ಕೂಗುತ್ತಿದ್ದೀಯಾ? ಏನದು ನಿನ್ನ ಅಳಲು?” ಎಂದು ಪ್ರಶ್ನಿಸಿದನು.

  4. ೪. ಬೋಳಾಗುವುದಕ್ಕೆ ಮೊದಲು ಮರದ ಸೊಬಗು ಹೇಗಿತ್ತೆಂದು ಪಕ್ಷಿ ವಿವರಿಸಿತು?

    Answer

    ಬೋಳಾಗುವುದಕ್ಕೆ ಮೊದಲು ಮರದ ತುಂಬಾ ಹಸಿರೆಲೆಗಳಿದ್ದವು; ಟೊಂಗೆ ಟೊಂಗೆಗೂ ಸಾವಿರಾರು ಹೂ ಮತ್ತು ಹಣ್ಣುಗಳಿದ್ದವು. ಅದು ತಂಪಾದ ನೆರಳು ನೀಡುತ್ತಿದ್ದು ನೂರಾರು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು.

  5. ೫. ಪಕ್ಷಿಗೆ ಮರದ ಮೇಲೆ ಪ್ರೀತಿ ಬೆಳೆಯಲು ಕಾರಣವೇನು?

    Answer

    ಪಕ್ಷಿಯ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ ಎಲ್ಲರೂ ಆ ಮರದಲ್ಲಿಯೇ ಹುಟ್ಟಿ ಬೆಳೆದಿದ್ದರು. ಪಕ್ಷಿಯೂ ಅಲ್ಲಿಯೇ ಜನ್ಮ ತಳೆದಿತ್ತು; ಆದ್ದರಿಂದ ಅದಕ್ಕೆ ಮರದ ಮೇಲೆ ಪ್ರೀತಿ ಬೆಳೆಯಿತು.

  6. ೬. ಸಸ್ಯ ವೈದ್ಯರು ಮರವನ್ನು ಹೇಗೆ ಉಪಚರಿಸಿದರು?

    Answer

    ಸಸ್ಯ ವೈದ್ಯರು ಮರವನ್ನು ಸಂಪೂರ್ಣವಾಗಿ ನೋಡಿ, ಟೊಂಗೆಯನ್ನು ಗಮನಿಸಿ, ಬೇರುಗಳಿಗೆ ಚುಚ್ಚುಮದ್ದು ನೀಡಿದರು. ಒಣಗಿದ ಭಾಗಕ್ಕೆ ಔಷಧಿ ಸವರಿದರು.

ಇ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. “ನೀನೇಕೆ ನೋವಿನಿಂದ ಕೂಗುತ್ತಿದ್ದೀಯಾ?”

    Answer

    ಗಣೇಶನು ಪಕ್ಷಿಗೆ ಹೇಳಿದನು.

  2. ೨. “ಈ ಮರದ ಮೇಲೆ ಅಷ್ಟೊಂದು ಪ್ರೀತಿಯೇ?”

    Answer

    ಲತಾ ಪಕ್ಷಿಗೆ ಹೇಳಿದಳು.

  3. ೩. “ನಾನೂ ಇಲ್ಲಿಯೇ ಜನ್ಮ ತಳೆದೆ”.

    Answer

    ಪಕ್ಷಿಯು ಮಕ್ಕಳಿಗೆ ಹೇಳಿತು.

ಈ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

  1. ೧. ನಾರದ ಗಡ್ಡೆಯು ................................... ನದಿಯಲ್ಲಿದೆ.

    Answer

    ನಾರದ ಗಡ್ಡೆಯು ಕೃಷ್ಣಾ ನದಿಯಲ್ಲಿದೆ.

  2. ೨. ಹಕ್ಕಿಗಳ ................................... ಕಿವಿಗೆ ಇಂಪಾಗಿತ್ತು.

    Answer

    ಹಕ್ಕಿಗಳ ಕಲರವ ಕಿವಿಗೆ ಇಂಪಾಗಿತ್ತು.

  3. ೩. ಮರವು ನೂರಾರು ಪಕ್ಷಿಗಳಿಗೆ ................................... ಆಗಿತ್ತು.

    Answer

    ಮರವು ನೂರಾರು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು.

  4. ೪. ಹಸಿರೇ ................................... ಎಂದು ಎಲ್ಲೆಡೆ ಸಾರೋಣ.

    Answer

    ಹಸಿರೇ ನಮ್ಮ ಉಸಿರು ಎಂದು ಎಲ್ಲೆಡೆ ಸಾರೋಣ.

III. ಭಾಷಾಭ್ಯಾಸ :

ಅ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ಇಂಚರ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

    Model sentence

    ಇಂಚರ: ಬೆಳಿಗ್ಗೆ ನಮ್ಮ ಮನೆಯ ಹಿಂದೆ ಹಕ್ಕಿಗಳ ಇಂಚರ ಕೇಳಿಸುತ್ತದೆ.

  2. ಕಂಗೊಳಿಸು : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

    Model sentence

    ಕಂಗೊಳಿಸು: ಹಬ್ಬದ ದಿನ ನಮ್ಮ ಮನೆ ದೀಪಗಳಿಂದ ಕಂಗೊಳಿಸಿತು.

  3. ಬಣ್ಣಗೆಡು : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

    Model sentence

    ಬಣ್ಣಗೆಡು: ಮಳೆಯಲ್ಲಿ ತೋಯ್ದ ನನ್ನ ಚಿತ್ರದ ಬಣ್ಣಗೆಟ್ಟಿತು.

  4. ಪ್ರವಾಸ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

    Model sentence

    ಪ್ರವಾಸ: ನಮ್ಮ ಶಾಲೆಯಿಂದ ಮೈಸೂರಿಗೆ ಪ್ರವಾಸ ಹೋದೆವು.

  5. ಉಲ್ಲಾಸ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

    Model sentence

    ಉಲ್ಲಾಸ: ಆಟದಲ್ಲಿ ಗೆದ್ದಾಗ ನನಗೆ ತುಂಬಾ ಉಲ್ಲಾಸವಾಯಿತು.

  6. ಕನಿಕರ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

    Model sentence

    ಕನಿಕರ: ಬಿದ್ದು ಅಳುತ್ತಿದ್ದ ಚಿಕ್ಕ ಮಗುವನ್ನು ನೋಡಿ ನನಗೆ ಕನಿಕರವಾಯಿತು.

  7. ಸತ್ಕಾರ್ಯ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

    Model sentence

    ಸತ್ಕಾರ್ಯ: ನಾವು ಹಳೆಯ ಪುಸ್ತಕಗಳನ್ನು ಬಡ ಮಕ್ಕಳಿಗೆ ಕೊಡುವ ಸತ್ಕಾರ್ಯ ಮಾಡಿದೆವು.

ಆ) ಗೆರೆ ಹಾಕಿದ ಪದಗಳ ಬದಲಾಗಿ ಬೇರೆ ಪದಗಳನ್ನು ಬಳಸಿ ಬರೆಯಿರಿ.

  1. ಮಾದರಿ : ಆ ವನವು ಗಿಡ ಮರಗಳಿಂದ **ಕಂಗೊಳಿಸುತ್ತಿದೆ**.

    Answer

    ಆ ವನವು ಗಿಡ ಮರಗಳಿಂದ ಕಂಗೊಳಿಸುತ್ತಿದೆ.

  2. ಆ ವನವು ಗಿಡಮರಗಳಿಂದ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿದೆ.

  3. ೧. ಎಲೆಗಳು ಉದುರಿ ಮರದ ಸೊಬಗು **ಬಣ್ಣಗೆಟ್ಟಿತ್ತು**.

    Answer

    ಎಲೆಗಳು ಉದುರಿ ಮರದ ಸೊಬಗು ಕಳೆಗುಂದಿತ್ತು.

  4. \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

  5. ೨. ಜುಳುಜುಳು ಹರಿಯುವ ನೀರಿನ **ಸೊಬಗೇ** ಸೊಬಗು.

    Answer

    ಜುಳುಜುಳು ಹರಿಯುವ ನೀರಿನ ಅಂದವೇ ಅಂದ.

  6. \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

  7. ೩. ಮರದ ಟೊಂಗೆಟೊಂಗೆಗಳಲ್ಲಿ ಹೂವು **ರಾರಾಜಿಸಿದವು**.

    Answer

    ಮರದ ಟೊಂಗೆಟೊಂಗೆಗಳಲ್ಲಿ ಹೂವು ಮೆರೆದವು.

  8. \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

  9. ೪. ನೀರು ಹಾಕಿದ್ದರಿಂದ ಮರದಲ್ಲಿನ ಹೀಚುಕಾಯಿ ಹಣ್ಣುಗಳು **ಜೀವತಳೆದವು**.

    Answer

    ನೀರು ಹಾಕಿದ್ದರಿಂದ ಮರದಲ್ಲಿನ ಹೀಚುಕಾಯಿ ಹಣ್ಣುಗಳು ಬೆಳೆದವು.

  10. \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_

ಇ) ಈ ಪದಗಳಲ್ಲಿ ಸ್ವರಾಕ್ಷರಗಳನ್ನು ಗುರುತಿಸಿ ಬರೆಯಿರಿ.

  1. ಅಬ್ದುಲ್

    Answer

    ಅ, ಉ

  2. ಇಲಿ

    Answer

    ಇ, ಇ

  3. ಊರು

    Answer

    ಊ, ಉ

  4. ಓತಿಕ್ಯಾತ

    Answer

    ಓ, ಇ, ಆ, ಅ

  5. ಐರಾವತ

    Answer

    ಐ, ಆ, ಅ

  6. \_\_\_\_\_

  7. \_\_\_\_\_

  8. \_\_\_\_\_

  9. \_\_\_\_\_

  10. \_\_\_\_\_

ಈ) ಕೆಳಗಿನ ಪದಗಳಲ್ಲಿ ಅನುಸ್ವಾರ ಇರುವ ಪದಗಳಿಗೆ ⬜ ಈ ರೀತಿಯ ಚೌಕವನ್ನು ಹಾಗೂ ವಿಸರ್ಗ ಇರುವ ಪದಗಳಿಗೆ ◯ ಈ ರೀತಿಯ ವೃತ್ತವನ್ನು ಹಾಕಿರಿ.

  1. (A list of words to mark with square or circle based on anusvara or visarga):

  2. ಹೊಂಬಣ್ಣ

    Answer

    ಹೊಂಬಣ್ಣ – ⬜

  3. ದುಃಖ

    Answer

    ದುಃಖ – ◯

  4. ಕಂಗೊಳಿಸು

    Answer

    ಕಂಗೊಳಿಸು – ⬜

  5. ಕಂಬನಿ

    Answer

    ಕಂಬನಿ – ⬜

  6. ಒಂದು

    Answer

    ಒಂದು – ⬜

  7. ಭಾಗಶಃ

    Answer

    ಭಾಗಶಃ – ◯

  8. ಅಂತಃಪುರ

    Answer

    ಅಂತಃಪುರ – ⬜ ಮತ್ತು ◯

  9. ಟೊಂಗೆ

    Answer

    ಟೊಂಗೆ – ⬜

ಉ) ಪದಗಳನ್ನು ಹೇಳುತ್ತ ನೋಡಿ ಬರೆಯಿರಿ.

  1. (A table with 4 blank rows under each of these headings for the student to copy the words: ಕೃಷ್ಣೆ, ಭೋರ್ಗರೆತ, ತೂರಾಟ, ಚೆಲ್ಲಾಟ, ನಡುಗಡ್ಡೆ, ಪಕ್ಷಿಗಳು, ಭಾವುಕತೆ, ಅಭಿಮಾನ, ಸಂಪೂರ್ಣ, ಸಸ್ಯವೈದ್ಯ, ಸತ್ಕಾರ್ಯ, ಸನ್ನಿವೇಶ)

ಊ) ಈ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ಸುಂದರ x ................................... ಅರ್ಥ x ...................................

    Answer

    ಸುಂದರ x ಅಸುಂದರ ಅರ್ಥ x ಅನರ್ಥ

  2. ಮೆಲ್ಲಗೆ x ................................... ಅಭಿಮಾನ x ...................................

    Answer

    ಮೆಲ್ಲಗೆ x ಬೇಗ ಅಭಿಮಾನ x ಅವಮಾನ

  3. ಬುಡ x ................................... ಸಂತೋಷ x ...................................

    Answer

    ಬುಡ x ತುದಿ ಸಂತೋಷ x ದುಃಖ

IV. ಸೈದ್ಧಾಂತಿಕ ವ್ಯಾಕರಣ :

ಅ) ನಾವು ಮಾತನಾಡುವ ಕನ್ನಡ ಭಾಷೆಯ ಅಕ್ಷರಗಳನ್ನು ತಿಳಿಯೋಣ.

  1. ಅ. ಆ. ಇ. ಈ. ಉ. ಊ. ಋ. ಎ. ಏ. ಐ. ಒ. ಓ. ಔ. - ಇವು ಹದಿಮೂರು ಸ್ವರಾಕ್ಷರಗಳು

  2. ಅ .ಇ. ಉ. ಋ. ಎ. ಒ. - ಇವು ಹ್ರಸ್ವ ಸ್ವರಗಳು.

  3. ಆ. ಈ. ಊ. ಏ. ಐ. ಓ. ಔ - ಇವು ದೀರ್ಘ ಸ್ವರಗಳು.

  4. ಅನುಸ್ವಾರ (೦), ವಿಸರ್ಗ (ಃ) – ಇವು ಎರಡು ಯೋಗವಾಹಗಳು.

  5. ಕ್ ಖ್ ಗ್ ಘ್ ಙ್

  6. ಚ್ ಛ್ ಜ್ ಝ್ ಞ್

  7. ಟ್ ಠ್ ಡ್ ಢ್ ಣ್

  8. ತ್ ಥ್ ದ್ ಧ್ ನ್

  9. ಪ್ ಫ್ ಬ್ ಭ್ ಮ್ - ಇವು (ಇಪ್ಪತ್ತೈದು) ವರ್ಗೀಯ ವ್ಯಂಜನಗಳು.

  10. ಯ್ ರ್ ಲ್ ವ್ ಶ್ ಷ್ ಸ್ ಹ್ ಳ್ - ಇವು (ಒಂಬತ್ತು) ಅವರ್ಗೀಯ ವ್ಯಂಜನಗಳು

  11. ಕನ್ನಡ ವರ್ಣಮಾಲೆಯ ಮೂಲಾಕ್ಷರಗಳು ಒಟ್ಟು = ೪೯

ಆ) ವ್ಯಂಜನ ಮತ್ತು ಸ್ವರಾಕ್ಷರಗಳು ಸೇರುವುದನ್ನು ಓದಿ ತಿಳಿಯಿರಿ.

  1. ಕ್ + ಅ = ಕ

  2. ಕ್ + ಆ = ಕಾ

  3. ಕ್ + ಇ = ಕಿ

  4. ಕ್ + ಈ = ಕೀ

  5. ಕ್ + ಉ = ಕು

  6. ಕ್ + ಊ = ಕೂ

  7. ಕ್ + ಋ = ಕೃ

  8. ಕ್ + ಎ = ಕೆ

  9. ಕ್ + ಏ = ಕೇ

  10. ಕ್ + ಐ = ಕೈ

  11. ಕ್ + ಒ = ಕೊ

  12. ಕ್ + ಓ = ಕೋ

  13. ಕ್ + ಔ = ಕೌ

  14. ಕ್ + ಅಂ = ಕಂ

  15. ಕ್ + ಅಃ = ಕಃ

  16. ಈ ಮೇಲಿನಂತೆ ಉಳಿದ ವ್ಯಂಜನಾಕ್ಷರಗಳಿಗೆ ಸ್ವರಾಕ್ಷರಗಳನ್ನು ಸೇರಿಸಿ ಬರೆಯಿರಿ.

ಇ) ಒತ್ತಕ್ಷರ / ಸಂಯುಕ್ತಾಕ್ಷರಗಳು.

  1. ವ್ಯಂಜನಕ್ಕೆ ವ್ಯಂಜನ ಸೇರಿಕೊಂಡು (ಸ್ವರದ ಸಹಾಯದಿಂದ) ಉಂಟಾಗುವ ಅಕ್ಷರಕ್ಕೆ ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯುವರು.

  2. ಉದಾ:

  3. ಅ + ಪ್ + ಪ್ + ಅ = ಅಪ್ಪ

  4. ಶ್ + ಅ + ಕ್ + ತ್ + ಇ = ಶಕ್ತಿ

  5. ಅ + ಮ್ + ಮ್ + ಅ = ಅಮ್ಮ

  6. ಪ್ + ಅ + ಕ್ + ಷ್ + ಇ = ಪಕ್ಷಿ

V. ಪೂರಕ ಓದು :

ಗಿಡ ಬೆಳೆಸಿ ಜೀವ ಉಳಿಸಿ

  1. ಬಾ ಗೆಳತಿ ಹೋಗುವ

  2. ಗಿಡ ತಂದು ನೆಡುವ

  3. ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಿ

  4. ನೀರು ಗೊಬ್ಬರ ಹಾಕಿ ಗಿಡ ಬೆಳೆಸಿ ಜೀವ ಉಳಿಸುವ

  5. ಕಾಂಕ್ರೀಟು ಇಟ್ಟಿಗೆಯ ಮಹಲು ಬೇಡ

  6. ಓಡಾಡಲು ಮೋಟಾರು ಕಾರು ಬೇಡ

  7. ಗಿಡ ಮರವೆಲ್ಲಾ ಕಡಿದು ರಸ್ತೆ ಮಾಡುವುದು ಬೇಡ

  8. ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ

  9. ಮಳೆಯಿಲ್ಲಾ ಬೆಳೆಯಿಲ್ಲಾ

  10. ಊರ ತುಂಬೆಲ್ಲ ಬರಗಾಲ

  11. ಹಸಿದ ಕಂದನ ತುಟಿಗೆ ಹಾಲಿಲ್ಲಾ

  12. ತಾಯಿ ಹಾಲಿಗೂ ನಂಜೇರಿದೆ

  13. ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ

  14. ತುತ್ತನರಸಿ ಎತ್ತಲೋ

  15. ಗುಳೇ ಹೊರಟಿದ್ದಾರೆ ನನ್ನವರು

  16. ಗುಳಿ ಬಿದ್ದ ಕಣ್ಣುಗಳಲ್ಲಿ ನಿರಾಸೆ ಜಿನುಗಿದೆ

  17. ಹೊಸ ಭರವಸೆಯ ಚಿಗುರಿಸು

  18. ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ.

  19. – ರೇಣುಕಾ ಎಚ್.

  20. ಸೂಚನೆ : ಈ ಪದ್ಯದಲ್ಲಿರುವ ಭಾವ ಹಾಗೂ ಪಾಠದಲ್ಲಿರುವ ಭಾವವನ್ನು ಗಮನಿಸಿ, ಎಲ್ಲರೂ ಕೂಡಿ ಹಾಡಿರಿ.

VI. ಚಟುವಟಿಕೆಗಳು :

  1. ೧. ನೀವು ನೋಡಿದ ಮಳೆ, ಹಳ್ಳ, ಹೊಳೆ ಅಥವಾ ಸಮುದ್ರ ಯಾವುದಾದರೂ ಒಂದನ್ನು ಕುರಿತು ನಾಲ್ಕು ವಾಕ್ಯಗಳನ್ನು ವರ್ಣಿಸಿ ಬರೆಯಿರಿ.

  2. ೨. ‘ಹಸಿರೇ ಉಸಿರು’ - ವಿಷಯದ ಮೇಲೆ ತರಗತಿಯಲ್ಲಿ ಚರ್ಚೆ ನಡೆಸಿರಿ.

  3. ೩. ಮನೆ ಹಾಗೂ ಶಾಲೆಯ ಸುತ್ತಲು ಮರಗಿಡಗಳಿಗೆ ನೀರು ಹಾಕಿ ಬೆಳೆಸಿರಿ.

  4. ೪. ‘ಕೂಗುತಿದೆ ಪಕ್ಷಿ’ ಪಾಠದಲ್ಲಿ ಬರುವ ಪಾತ್ರಗಳನ್ನು ಹಂಚಿಕೊಂಡು ಸಂಭಾಷಣೆ ನಡೆಸಿರಿ.

Interactive Lab