CRECT Education

Class 6 Kannada Lesson 5: Birth of the Rain God | KTBS Second Language – Learn the Story

Description

Learn the folk tale of how the Ocean King, Sun, cloud, and wind gave birth to the Rain God. Story beat-by-beat + key vocabulary.

ಗದ್ಯ (prose) · ಬಿ. ಎಸ್. ಪಾಂಡುರಂಗರಾವ್

ಪಠ್ಯFull text

ಸಮುದ್ರರಾಜ ತುಂಟನೆಂದರೆ ತುಂಟ. ಒಂದು ದಿವಸ ಅವನು ಹುಚ್ಚೆದ್ದು ಕುಣಿದ. ರೇಗಿ ಭೂಮಿಯ ಮೇಲೆ ನುಗ್ಗಿದ. ಅವಳ ಮನೆಮಠಗಳನ್ನು ನೀರಿನಲ್ಲಿ ಮುಳುಗಿಸಿದ. ದನಕರುಗಳೆಲ್ಲಾ ನೀರಿನ ಪಾಲಾದವು. ಮನುಷ್ಯರೆಲ್ಲಾ ಅವನ ಪ್ರವಾಹದಲ್ಲಿ ತೇಲಿಹೋದರು. ಭೂದೇವಿಯು ಗೊಳೋ ಎಂದು ಅತ್ತಳು. ಅವಳ ಗೋಳು ಆಕಾಶವನ್ನು ಮುಟ್ಟಿತು. ಆಕಾಶದಲ್ಲಿ ಸೂರ್ಯ ಸಂಚಾರ ಹೊರಟಿದ್ದ. ಭೂದೇವಿಯ ಅಳುವನ್ನು ಅವನು ಕೇಳಿ ಏನೆಂದು ಕೆಳಗೆ ನೋಡಿದ. ಸಮುದ್ರರಾಜನ ಹಾವಳಿ ಅವನಿಗೆ ತಿಳಿಯಿತು. ಸೂರ್ಯ ಅವನ ಮೇಲೆ ಕಿಡಿಕಿಡಿಯಾದ. ಸೂರ್ಯ ಬೆಂಕಿಯ ಮುದ್ದೆ. ಯಾವಾಗಲೂ ಧಗಧಗ ಉರಿಯುತ್ತಿರುತ್ತಾನೆ. ಅವನ ಹತ್ತಿರ ಯಾರಾದರೂ ಹೋದರೆ ಸಾಕು ಅವರು ಸುಟ್ಟು ಬೂದಿಯಾಗುತ್ತಾರೆ. ಅವನು ಮೈಯಿಂದ ಕಿರಣಗಳನ್ನು ಬಿಟ್ಟರೆ ಸಾಕು. ದೂರವಿರುವವರು ಕೂಡಾ ಹಾ! ಹಾ! ಎನ್ನುತ್ತಾರೆ. ಹೀಗಿರುವಾಗ ಅವನು ರೇಗಿದರೆ ದೇವರೇ ಗತಿ. ಸೂರ್ಯ ಸಮುದ್ರರಾಜನ ಮೇಲೆ ರೇಗಿ ಒಂದು ಸಲ ತಿರನೆ ತಿರುಗಿದ. ಅವನ ತಿರುಗಿಗೆ ಲೋಕಗಳೆಲ್ಲಾ ನಡುಗಿದವು. ಸೂರ್ಯನ ಕಿರಣಗಳೇ ಬಿಸಿಲು. ಕಿರಣಗಳ ಕಾವಿನಿಂದ ಸಮುದ್ರರಾಜ ತತ್ತರಿಸಿಹೋದ. ಅವನ ಮೈಯೆಲ್ಲಾ ಕುದಿದುಹೋಯಿತು. ಅವನು ನೋವಿನಿಂದ 'ಹಾ! ಹಾ!' ಎಂದು ಚೀರತೊಡಗಿದ. ಎಲ್ಲೆಲ್ಲಿಯೂ ಅವನ ಚೀರಾಟ ಕೇಳಿಸಿತು. 'ಭರೋ' ಎಂದು ಕೂಗು ಮೊಳಗಿತು. ಬಿಸಿಲಿನ ತಾಪಕ್ಕೆ ಸಮುದ್ರರಾಜನ ಮೈ ಬೆವರಿತು. ಒಳಗಿನಿಂದ ಬೆವರಿನ ನೀರು ಹಬೆಯಾಗಿ ಹೊರಟಿತು. ಆವಿಯಾಗಿ ಮೇಲೆ ಹೋಗಿ ಆಕಾಶದಲ್ಲಿ ಒಂದು ಕಡೆ ಸೇರತೊಡಗಿತು. ತುಸು ಹೊತ್ತಿನೊಳಗಾಗಿ ಬೆಟ್ಟಗಳ ಸಾಲಿನಂತೆ ಕಪ್ಪಗೆ ಹೆಪ್ಪುಗಟ್ಟಿತು. ಈ ವಿಚಿತ್ರ ನೋಡಿ ಭೂದೇವಿ ನಡುಗಿಹೋದಳು. ಕತ್ತಲು ಎಲ್ಲಿಂದ ಬಂತು? ಕತ್ತಲು ಹೇಗೆ ಕವಿಯಿತು? ಹೀಗೆಂದು ಯೋಚಿಸುತ್ತ ಸಮುದ್ರರಾಜ ಮೇಲೆ ನೋಡಿದ. ಹಾಗೆಯೇ ಯೋಚಿಸಿದ. ಸೂರ್ಯನೇ ಇದಕ್ಕೆ ಕಾರಣವೆಂದು ತಿಳಿದುಕೊಳ್ಳುವುದಕ್ಕೆ ಅವನಿಗೆ ಬಹಳ ಹೊತ್ತು ಬೇಕಾಗಲಿಲ್ಲ. ಕೂಡಲೇ ಅವನಿಗೊಂದು ಯುಕ್ತಿ ಹೊಳೆಯಿತು. 'ಸೇಡಿಗೆ ಸೇಡು' ಎಂದು ಕಟಕಟ ಹಲ್ಲುಕಡಿದ. ತನ್ನಿಂದ ಹುಟ್ಟಿದ ಆ ಕಾಡಿಗೆಕಪ್ಪನ್ನು 'ಮೋಡಣ್ಣ' ಎಂದು ಕರೆದ. ಮೋಡಣ್ಣನನ್ನು ಕರೆದು “ಮಗು ನೋಡು, ಸೂರ್ಯ ನನಗೆ ಹಗೆ. ಅದರಿಂದ ನೀನು ಅವನನ್ನು ಕಾಡು. ಅವನು ಹೋದಲ್ಲೆಲ್ಲೆ ಹೋಗಿ ಅವನ ಮುಖದ ಕಾಂತಿಯನ್ನು ನಿನ್ನ ದೊಡ್ಡ ದೇಹದಿಂದ ಮರೆಮಾಡು!” ಎಂದು ಹೇಳಿದ. ಮೋಡಣ್ಣ ತಂದೆಯ ಮಾತು ಕೇಳಿ ಸೂರ್ಯನನ್ನು ತನ್ನ ಮೈಯಿಂದ ಮರೆಮಾಡಿದ. ಭೂದೇವಿಗೆ ಸೂರ್ಯನಿಂದ ಬರುತ್ತಿದ್ದ ಬೆಳಕು ನಿಂತಿತು. ಗಿಡಮರಗಳು ಬಾಡಿ ಮುದುಡಿದುವು. ಮನುಷ್ಯ – ಪ್ರಾಣಿ ಸಾಯುವಂತಾಯಿತು. ಈಗ ಸೂರ್ಯನಿಗೆ ಕೋಪ ಮಿತಿಮೀರಿತು. 'ಆನೆಯ ಮುಂದೆ ಆದೇ' ಎಂದುಕೊಂಡು ಗೆಳೆಯ ಗಾಳಿರಾಯನನ್ನು ಸಹಾಯಕ್ಕೆ ಕರೆದ. “ಸಮುದ್ರರಾಜನ ತುಂಟತನ ನೋಡಿದೆಯಾ! ಮೋಡಣ್ಣನ ಕೀಟಲೆ ಕಂಡೆಯಾ! ದುರುಳರಿಬ್ಬರನ್ನೂ ನೋಡಿಕೋ” ಎಂದ. ಗಾಳಿರಾಯ ಇನ್ನು ಸುಮ್ಮನಿರುವನೆ? ಭರೋ ಎಂದು ಒಂದು ಸಲ ಗರ್ಜಿಸಿ ಮೇಲಿನಿಂದ ಧುಮ್ಮನೆ ಸಮುದ್ರರಾಜನ ಮೇಲೆ ಕುಕ್ಕರಿಸಿ ಆಕಾಶಕ್ಕೆ ಪುಟ ನೆಗೆದ. ಮೋಡಣ್ಣನಂತೂ ಏನೋ ಬಂತು ಪ್ರಳಯ ಎಂದು ಭಯದಿಂದ ಅಲ್ಲಾಡಿ ಹೋದ. ಗಾಳಿರಾಯ ಮೋಡಣ್ಣನನ್ನು ಬೆನ್ನಟ್ಟಿದ. ಮೋಡಣ್ಣ ಸತ್ತೆನಪ್ಪಾ ಎಂದು ಕಾಲಿಗೆ ಬುದ್ದಿ ಹೇಳಿದ. ಗಾಳಿರಾಯನ ಕೈಯಿಂದ ತಪ್ಪಿಸಿಕೊಳ್ಳೋಣ ಎಂದು ಮೈ ಹಗುರಮಾಡಿಕೊಂಡು ಓಡಿದ. ಮೋಡಣ್ಣ ಓಡಿದರೆ ಅಡ್ಡ ಸಿಕ್ಕಿತು ಒಂದು ಪೆಡಂಭೂತ. ನೂರಾನೆ ಗಾತ್ರ ಆಕಾರದ ಬಂಡೆಗಳ ಬೆಟ್ಟ ಆಕಾಶವನ್ನು ಮುಟ್ಟುವಷ್ಟು ಎತ್ತರ ಬೆಳೆದು ಅಡ್ಡ ನಿಂತಿದೆ. ಗಾಳಿರಾಯ ಮೋಡಣ್ಣನನ್ನು ಆ ಬೆಟ್ಟಕ್ಕೆ ಡಿಕ್ಕಿ ಹೊಡೆಸಿದ. ಅಯ್ಯಯ್ಯೋ ಎಂದು ಮೋಡಣ್ಣ ಅಳುತ್ತಾ ದಮ್ಮಯ್ಯಗುಡ್ಡೆ ಹಾಕಿದ. ಕೇಳುವವರು ಯಾರು? ಅವನ ಅಳುವಿನ ನೀರು ಬೆಟ್ಟದಿಂದ ನದಿಯಾಗಿ ಜಾರಿತು. ಬಿಡಬೇಕಲ್ಲಾ ಗಾಳಿರಾಯ! ಬಿಡಲೇ ಇಲ್ಲ. ಮೋಡಣ್ಣನನ್ನು ಹಿಂಬಾಲಿಸಿದ. ಹೆಮ್ಮರಗಳು ಎತ್ತರವಾಗಿ ಬೆಳೆದು ಆಕಾಶವನ್ನು ಮುತ್ತಿಡುತ್ತ ಎದುರಿಗೆ ನಿಂತಿವೆ. ಮೋಡಣ್ಣ ಕಕ್ಕಾಬಿಕ್ಕಿಯಾದ. ಹಾಳುಮರಗಳು ಎಂದು ಗೊಣಗಿದ, ರೇಗಿದ. ಗಾಳಿರಾಯ ಅಲ್ಲಿಗೂ ಬಂದು ಮೋಡಣ್ಣನನ್ನು ಮರಗಳ ಮೇಲೆ ನೂಕಿಬಿಟ್ಟ. ಈಗಂತೂ ಮೋಡಣ್ಣನ ಮೈ ತಾತೂತಾಯಿತು. ಎಲ್ಲೆಲ್ಲಿಂದಲೂ ನೀರು ಹೊರ ಬಂದಿತು. ಆಕಾಶದಿಂದ ಮಳೆಯಾಗಿ ಸುರಿಯಿತು. ನೆಲದ ಮೇಲೆ ಹೊಳೆಯಾಗಿ ಹರಿಯಿತು. ನದಿಯಾಗಿ ಹರಿದು ಸಮುದ್ರ ಸೇರಿ ಮಹಾ ಸಾಗರವಾಯಿತು. ಅಂದಿನಿಂದ ಮೋಡಣ್ಣ ಗಾಳಿರಾಯನಿಗೆ ಹೆದರುತ್ತಾನೆ. ಸಮುದ್ರರಾಜ ಸೂರ್ಯನಿಗೆ ಭಯಪಡುತ್ತಾನೆ. ಇವರಿಬ್ಬರ ಜಗಳದಲ್ಲಿ ಮಳೆರಾಯ ಹುಟ್ಟಿದ. ಜೊತೆಗೆ ಈ ಹಾಡೂ ಹುಟ್ಟಿಕೊಂಡಿತು. ಹುಯ್ಯೋ! ಹುಯ್ಯೋ! ಮಳೆರಾಯ; ಹೂವಿನ ತೋಟಕ್ಕೆ ನೀರಿಲ್ಲ. ಬಾರೋ! ಬಾರೋ! ಮಳೆರಾಯ; ಬಾಳೆಯ ತೋಟಕ್ಕೆ ನೀರಿಲ್ಲ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. | | |

  2. |---|---|

  3. | ಪ್ರವಾಹ – ನೆರೆ, ಉಕ್ಕೇರಿದ ನೀರು | ಸೇಡು – ದ್ವೇಷ |

  4. | ಚೀರು – ಕೂಗು | ಯುಕ್ತಿ – ಉಪಾಯ |

  5. | ತಾಪ – ಬಿಸಿ | ಕೀಟಲೆ – ತುಂಟಬುದ್ಧಿ |

  6. | ಗರ್ಜಿಸು – ಜೋರಾಗಿ ಕೂಗು | ತಾತೂತಾಯಿತು – ತಾಕಿ ತೂತಾಯಿತು |

  7. | ಹೆಪ್ಪುಗಟ್ಟು – ಸಾಂದ್ರವಾಗು, ಒಂದೆಡೆ ಸೇರು, ಗಟ್ಟಿಯಾಗು. | |

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಭೂದೇವಿಯ ಗೋಳು ಎಲ್ಲಿಗೆ ಮುಟ್ಟಿತು?

    Answer

    ಭೂದೇವಿಯ ಗೋಳು ಆಕಾಶವನ್ನು ಮುಟ್ಟಿತು.

  2. ೨. ಲೋಕವೆಲ್ಲ ಏಕೆ ನಡುಗಿತು?

    Answer

    ಸೂರ್ಯ ಸಮುದ್ರರಾಜನ ಮೇಲೆ ರೇಗಿ ಒಂದು ಸಲ ತಿರನೆ ತಿರುಗಿದ್ದರಿಂದ ಲೋಕವೆಲ್ಲ ನಡುಗಿತು.

  3. ೩. ಸಮುದ್ರರಾಜ ಚೀರತೊಡಗಿದ್ದೇಕೆ?

    Answer

    ಸೂರ್ಯನ ಕಿರಣಗಳ ಕಾವಿನಿಂದ ಮೈಯೆಲ್ಲಾ ಕುದಿದು ನೋವಾದ್ದರಿಂದ ಸಮುದ್ರರಾಜ ಚೀರತೊಡಗಿದ.

  4. ೪. ಮೋಡಣ್ಣ ಸೂರ್ಯನನ್ನು ಮರೆಮಾಡಿದಾಗ ಏನಾಯಿತು?

    Answer

    ಮೋಡಣ್ಣ ಸೂರ್ಯನನ್ನು ಮರೆಮಾಡಿದಾಗ ಭೂದೇವಿಗೆ ಸೂರ್ಯನ ಬೆಳಕು ನಿಂತು ಗಿಡಮರಗಳು ಬಾಡಿ ಮುದುಡಿದವು; ಮನುಷ್ಯ–ಪ್ರಾಣಿ ಸಾಯುವಂತಾಯಿತು.

  5. ೫. ಮೋಡಣ್ಣನಿಗೆ ಬುದ್ಧಿ ಕಲಿಸಲು ಸೂರ್ಯ ಯಾರಲ್ಲಿ ಕೇಳಿಕೊಂಡ?

    Answer

    ಮೋಡಣ್ಣನಿಗೆ ಬುದ್ಧಿ ಕಲಿಸಲು ಸೂರ್ಯ ತನ್ನ ಗೆಳೆಯ ಗಾಳಿರಾಯನಲ್ಲಿ ಸಹಾಯ ಕೇಳಿಕೊಂಡ.

  6. ೬. ನದಿ ಹೇಗೆ ಹುಟ್ಟಿತು?

    Answer

    ಗಾಳಿರಾಯ ಮೋಡಣ್ಣನನ್ನು ಬೆಟ್ಟಕ್ಕೆ ಡಿಕ್ಕಿ ಹೊಡೆಸಿದಾಗ ಮೋಡಣ್ಣನ ಅಳುವಿನ ನೀರು ಬೆಟ್ಟದಿಂದ ನದಿಯಾಗಿ ಜಾರಿದ್ದರಿಂದ ನದಿ ಹುಟ್ಟಿತು.

  7. ೭. ಸಮುದ್ರರಾಜ ಯಾರಿಗೆ ಭಯಪಡುತ್ತಾನೆ?

    Answer

    ಸಮುದ್ರರಾಜ ಸೂರ್ಯನಿಗೆ ಭಯಪಡುತ್ತಾನೆ.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಭೂದೇವಿಯ ಅಳುವನ್ನು ಕಂಡ ಸೂರ್ಯ ಏನು ಮಾಡಿದ?

    Answer

    ಭೂದೇವಿಯ ಅಳುವನ್ನು ಕೇಳಿ ಸೂರ್ಯ ಕೆಳಗೆ ನೋಡಿದನು. ಸಮುದ್ರರಾಜನ ಹಾವಳಿ ತಿಳಿದು ಅವನ ಮೇಲೆ ಕಿಡಿಕಿಡಿಯಾಗಿ ರೇಗಿದನು. ನಂತರ ಒಂದು ಸಲ ತಿರನೆ ತಿರುಗಿದನು.

  2. ೨. ಮೋಡ ಹೇಗೆ ಹುಟ್ಟಿತು?

    Answer

    ಬಿಸಿಲಿನ ತಾಪದಿಂದ ಸಮುದ್ರರಾಜನ ಮೈ ಬೆವರಿತು. ಆ ಬೆವರಿನ ನೀರು ಹಬೆಯಾಗಿ ಮೇಲೆ ಹೋಗಿ ಆಕಾಶದಲ್ಲಿ ಒಂದು ಕಡೆ ಸೇರಿ ಕಪ್ಪಗೆ ಹೆಪ್ಪುಗಟ್ಟಿತು. ಹೀಗೆ ಮೋಡ ಹುಟ್ಟಿತು.

  3. ೩. ಸೂರ್ಯನ ಕೋಪ ಮೋಡದತ್ತ ತಿರುಗಲು ಕಾರಣವೇನು?

    Answer

    ಸಮುದ್ರರಾಜನ ಮಾತಿನಂತೆ ಮೋಡಣ್ಣ ಸೂರ್ಯನ ಮುಖದ ಕಾಂತಿಯನ್ನು ತನ್ನ ದೊಡ್ಡ ದೇಹದಿಂದ ಮರೆಮಾಡಿದನು. ಇದರಿಂದ ಸೂರ್ಯನ ಕೋಪ ಮೋಡದತ್ತ ತಿರುಗಿತು.

  4. ೪. ಗಾಳಿ ಮೋಡಣ್ಣನನ್ನು ಎಲ್ಲೆಲ್ಲಿ ಓಡಾಡಿಸಿತು?

    Answer

    ಗಾಳಿರಾಯ ಮೋಡಣ್ಣನನ್ನು ಆಕಾಶದಲ್ಲಿದ್ದ ಬೆಟ್ಟಕ್ಕೆ ಡಿಕ್ಕಿ ಹೊಡೆಸಿದನು. ನಂತರ ಹೆಮ್ಮರಗಳ ಮೇಲೆ ನೂಕಿಬಿಟ್ಟನು.

  5. ೫. ಗಾಳಿ ಮೋಡಗಳ ಯುದ್ಧದಿಂದ ಕೊನೆಗೆ ಯಾವ ಹಾಡು ಹುಟ್ಟಿತು?

    Answer

    ಗಾಳಿ-ಮೋಡಗಳ ಯುದ್ಧದಿಂದ ಕೊನೆಗೆ ಹುಯ್ಯೋ! ಹುಯ್ಯೋ! ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ, ಬಾರೋ! ಬಾರೋ! ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ ಎಂಬ ಹಾಡು ಹುಟ್ಟಿತು.

ಇ) ಈ ಕೆಳಗಿನ ಮಾತನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. “ಮಗು ನೋಡು, ಸೂರ್ಯ ನನಗೆ ಹಗೆ”

    Answer

    ಸಮುದ್ರರಾಜನು ಮೋಡಣ್ಣನಿಗೆ ಹೇಳಿದ.

  2. ೨. ಆನೆಯ ಮುಂದೆ ಆದೇ?

    Answer

    ಸೂರ್ಯನು ತನಗೆ ತಾನೇ ಹೇಳಿಕೊಂಡನು.

  3. ೩. “ದುರುಳರಿಬ್ಬರನ್ನೂ ನೋಡಿಕೋ”

    Answer

    ಸೂರ್ಯನು ಗಾಳಿರಾಯನಿಗೆ ಹೇಳಿದ.

ಈ) ಬಿಟ್ಟ ಸ್ಥಳಗಳನ್ನು ತುಂಬಿರಿ.

  1. ೧. ಸೂರ್ಯ ......................... ಮುದ್ದೆ.

    Answer

    ಸೂರ್ಯ ಬೆಂಕಿಯ ಮುದ್ದೆ.

  2. ೨. ಸೂರ್ಯನ ಕಿರಣಗಳೇ ......................... .

    Answer

    ಸೂರ್ಯನ ಕಿರಣಗಳೇ ಬಿಸಿಲು.

  3. ೩. ಭೂದೇವಿಗೆ ಸೂರ್ಯನಿಂದ ಬರುತ್ತಿದ್ದ ......................... ನಿಂತಾಗ ಗಿಡಮರಗಳು ಬಾಡಿ ಮುದುಡಿದವು.

    Answer

    ಭೂದೇವಿಗೆ ಸೂರ್ಯನಿಂದ ಬರುತ್ತಿದ್ದ ಬೆಳಕು ನಿಂತಾಗ ಗಿಡಮರಗಳು ಬಾಡಿ ಮುದುಡಿದವು.

  4. ೪. ಗಾಳಿರಾಯ ಮೋಡಣ್ಣನನ್ನು ......................... ಡಿಕ್ಕಿ ಹೊಡೆಸಿದ.

    Answer

    ಗಾಳಿರಾಯ ಮೋಡಣ್ಣನನ್ನು ಆ ಬೆಟ್ಟಕ್ಕೆ ಡಿಕ್ಕಿ ಹೊಡೆಸಿದ.

  5. ೫. ಆಕಾಶದಿಂದ ಮಳೆಯಾಗಿ ಸುರಿದ ನೀರು ......................... ಹರಿಯಿತು.

    Answer

    ಆಕಾಶದಿಂದ ಮಳೆಯಾಗಿ ಸುರಿದ ನೀರು ನೆಲದ ಮೇಲೆ ಹೊಳೆಯಾಗಿ ಹರಿಯಿತು.

  6. ೬. ಬಾರೋ ಬಾರೋ ಮಳೆರಾಯ, ......................... ತೋಟಕೆ ನೀರಿಲ್ಲ.

    Answer

    ಬಾರೋ ಬಾರೋ ಮಳೆರಾಯ, ಬಾಳೆಯ ತೋಟಕೆ ನೀರಿಲ್ಲ.

III. ಭಾಷಾಭ್ಯಾಸ :

ಅ) ಪ್ರಸ್ತುತ ಪಾಠದಲ್ಲಿ ಬಳಕೆಯಾಗಿರುವ, ಭಾವಾಭಿನಯವನ್ನು ಸೂಚಿಸುವ ಶಬ್ದಗಳನ್ನು ಪಟ್ಟಿಮಾಡಿ ಅವುಗಳ ಅರ್ಥಗಳನ್ನು ಬರೆಯಿರಿ.

  1. ಮಾದರಿ : ಹುಚ್ಚೆದ್ದು ಕುಣಿ – ಅಂಕೆಯಿಲ್ಲದೆ ಕುಣಿ, ನಿಯಂತ್ರಣವಿಲ್ಲದೆ ಕುಣಿದಾಡು

  2. ೧. ಗೊಳೋ ಎಂದು ಅಳು

    Answer

    ಗೊಳೋ ಎಂದು ಅಳು – ಜೋರಾಗಿ ಬಿಕ್ಕಿಬಿಕ್ಕಿ ಅಳುವುದು.

  3. ೨. ಕಿಡಿಕಿಡಿಯಾಗು

    Answer

    ಕಿಡಿಕಿಡಿಯಾಗು – ಬಹಳ ಕೋಪಗೊಳ್ಳುವುದು.

  4. ೩. ಧಗಧಗ ಉರಿ

    Answer

    ಧಗಧಗ ಉರಿ – ಬೆಂಕಿಯಂತೆ ಬಿಸಿಯಾಗಿ ಉರಿಯುವುದು.

  5. ೪. ತಿರನೆ ತಿರುಗು

    Answer

    ತಿರನೆ ತಿರುಗು – ಬಿರುಸಾಗಿ ಗರ್ರನೆ ತಿರುಗುವುದು.

  6. ೫. ತತ್ತರಿಸಿಹೋಗು

    Answer

    ತತ್ತರಿಸಿಹೋಗು – ಅಲ್ಲಾಡಿ ಚೈತನ್ಯಗುಂದುವುದು.

  7. ೬. ಕುದಿದುಹೋಗು

    Answer

    ಕುದಿದುಹೋಗು – ಬಹಳವಾಗಿ ಕಾದುಹೋಗುವುದು.

  8. ೭. ನೋವಿನಿಂದ ಚೀರು

    Answer

    ನೋವಿನಿಂದ ಚೀರು – ನೋವು ತಡೆಯಲಾಗದೆ ಜೋರಾಗಿ ಅರಚುವುದು.

  9. ೮. ಕಟಕಟ ಹಲ್ಲುಕಡಿ

    Answer

    ಕಟಕಟ ಹಲ್ಲುಕಡಿ – ಕೋಪದಿಂದ ಹಲ್ಲುಗಳನ್ನು ಒತ್ತಿ ಶಬ್ದಮಾಡುವುದು.

  10. ೯. ಆಕಾಶಕ್ಕೆ ನೆಗೆ

    Answer

    ಆಕಾಶಕ್ಕೆ ನೆಗೆ – ಬಹಳ ಎತ್ತರಕ್ಕೆ ಜಿಗಿಯುವುದು.

  11. ೧೦. ದಮ್ಮಯ್ಯಗುಡ್ಡೆ ಹಾಕು

    Answer

    ದಮ್ಮಯ್ಯಗುಡ್ಡೆ ಹಾಕು – ಸೋತು ಕುಸಿದು ಬೀಳುವುದು.

  12. ೧೧. ಕಕ್ಕಾಬಿಕ್ಕಿಯಾಗು

    Answer

    ಕಕ್ಕಾಬಿಕ್ಕಿಯಾಗು – ಏನು ಮಾಡಬೇಕೆಂದು ತೋಚದೆ ತಬ್ಬಿಬ್ಬಾಗುವುದು.

  13. ೧೨. ನೂಕಿಬಿಡು

    Answer

    ನೂಕಿಬಿಡು – ಬಲವಾಗಿ ತಳ್ಳಿಬಿಡುವುದು.

ಆ) ಇಲ್ಲಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ಪ್ರವಾಹ : ........................................................................................

    Model sentence

    ಪ್ರವಾಹ: ಮಳೆಗಾಲದಲ್ಲಿ ನಮ್ಮ ಹಳ್ಳದಲ್ಲಿ ಪ್ರವಾಹ ಬರುತ್ತದೆ.

  2. ೨. ಹಾವಳಿ : ........................................................................................

    Model sentence

    ಹಾವಳಿ: ಗಾಳಿಯ ಹಾವಳಿಗೆ ಶಾಲೆಯ ಮರದ ಕೊಂಬೆ ಮುರಿಯಿತು.

  3. ೩. ಕಾಂತಿ : ........................................................................................

    Model sentence

    ಕಾಂತಿ: ಹಬ್ಬದ ದಿನ ನಮ್ಮ ಮನೆಯ ದೀಪಗಳ ಕಾಂತಿ ತುಂಬಾ ಸುಂದರವಾಗಿತ್ತು.

  4. ೪. ವಿಚಿತ್ರ : ........................................................................................

    Model sentence

    ವಿಚಿತ್ರ: ನಿನ್ನೆ ರಾತ್ರಿ ನಾನು ಒಂದು ವಿಚಿತ್ರ ಕನಸು ಕಂಡೆ.

  5. ೫. ಹಿಂಬಾಲಿಸು : ........................................................................................

    Model sentence

    ಹಿಂಬಾಲಿಸು: ನಮ್ಮ ಮನೆಯ ಬೆಕ್ಕು ಇಲಿಯನ್ನು ಹಿಂಬಾಲಿಸಿತು.

IV. ಸೈದ್ಧಾಂತಿಕ ವ್ಯಾಕರಣ :

  1. **ಪದ :** ಕೆಲವು ಅಕ್ಷರಗಳು ಸೇರಿ ಒಂದು ಪದವಾಗುತ್ತದೆ. ಈ ರೀತಿಯ ಪದ ನಿರ್ದಿಷ್ಟ ಅರ್ಥವನ್ನು ಹೊಂದಿರಬೇಕು.

  2. ಉದಾ :

  3. ವೀ, ರ = ವೀರ (ಇದರ ಅರ್ಥ ಶೂರ)

  4. ಕೆ, ಳ, ದಿ = ಕೆಳದಿ (ಇದು ಊರ ಹೆಸರು)

  5. ಹೋ, ರಾ, ಡು = ಹೋರಾಡು (ಇದರ ಅರ್ಥ ಯುದ್ಧ)

  6. ಇಂತಹ ಅನೇಕ ಪದಗಳು ಕೂಡಿ ಸಂಪೂರ್ಣ ಅರ್ಥಕೊಡುವ ಪದಗಳ ಗುಂಪಿಗೆ ವಾಕ್ಯ ಎನ್ನುವರು.

  7. ಉದಾ : ೧. ರಾಧೆ ಶಾಲೆಗೆ ಹೋಗುತ್ತಾಳೆ.

  8. ೨. ಆಕಳು ಕರುವಿಗೆ ಹಾಲು ಉಣಿಸಿತು.

  9. ೩. ಔರಂಗಜೇಬನ ಕೋಪಕ್ಕೆ ಹೆದರಿ ರಾಜರು ರಕ್ಷಣೆ ನೀಡಲು ನಿರಾಕರಿಸಿದರು.

ವಾಕ್ಯಗಳ ಪ್ರಕಾರಗಳು:

  1. ೧. ಶ್ರೀಮತಿ ಸಾವಿತ್ರಿ ಯಾವ ಜಿಲ್ಲೆಯ ಅಧಿಕಾರಿಯಾಗಿದ್ದಾರೆ? (ಪ್ರಶ್ನಾರ್ಥಕ ವಾಕ್ಯ)

  2. ೨. ಶ್ರೀಮತಿ ಸಾವಿತ್ರಿ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ. (ಸಾಮಾನ್ಯ ವಾಕ್ಯ)

  3. ೩. ಓಹೋ! ಅವರು ಜಿಲ್ಲಾಧಿಕಾರಿ. (ಭಾವ ಸೂಚಕ ವಾಕ್ಯ)

  4. ೪. ನೀನು ಮನೆಗೆ ಹೋಗು. (ಆಜ್ಞಾರ್ಥಕ ವಾಕ್ಯ)

ಇಂತಹ ೪ ವಾಕ್ಯಗಳನ್ನು ನೀವು ರಚಿಸಿರಿ.

  1. ೧. ..............................................................................................................

    Answer

    ನೀನು ನಾಳೆ ಶಾಲೆಗೆ ಬರುವೆಯಾ?

  2. ೨. ..............................................................................................................

    Answer

    ನಾನು ಸಂಜೆ ಆಟವಾಡಲು ಹೋಗುತ್ತೇನೆ.

  3. ೩. ..............................................................................................................

    Answer

    ಆಹಾ! ಎಷ್ಟು ಸುಂದರವಾದ ಹೂವು!

  4. ೪. ..............................................................................................................

    Answer

    ದಯವಿಟ್ಟು ನನಗೆ ನೀರು ಕೊಡು.

V. ಚಟುವಟಿಕೆ :

  1. ೧. ಈ ಕತೆಯಲ್ಲಿ ಬರುವ ಸನ್ನಿವೇಶವನ್ನು ಒಂದು ನಾಟಕದಂತೆ ಅಭಿನಯಿಸಿ.

  2. ೨. ಮಳೆಗೆ ಸಂಬಂಧಿಸಿದ ಜನಪದ ಕತೆಗಳನ್ನು, ಮಕ್ಕಳ ಕತೆಗಳನ್ನು ಸಂಗ್ರಹಿಸಿ.

  3. ೩. ಮಳೆ ಬರಲು ವೈಜ್ಞಾನಿಕ ಕಾರಣ ಏನು ಎಂಬುದನ್ನು ಶಿಕ್ಷಕರಿಂದ ಕೇಳಿ ತಿಳಿಯಿರಿ.

Interactive Lab