CRECT Education

Class 6 Kannada Lesson 9: Letter Writing | KTBS Second Language – Learn the Story

Description

Learn the art of Kannada letter writing through a heartfelt exchange between a mother and daughter, based on the KTBS Class 6 Second Language textbook.

ಗದ್ಯ · ಸಮಿತಿ ರಚನೆ

ಪಠ್ಯFull text

**ಪಾಠ ಪ್ರವೇಶ :** ಮಕ್ಕಳೇ, ಇಂದು ಆಧುನಿಕ ಮಾಧ್ಯಮಗಳಾದ ಮೊಬೈಲ್ ಫೋನ್, ಇಂಟರ್‌ನೆಟ್ ಇದ್ದರೂ ಪತ್ರದ ಮೂಲಕ ನಮ್ಮ ಭಾವನೆಗಳನ್ನು, ವಿಚಾರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ರೂಢಿ ಇದೆ. ನಾವು ಪತ್ರಗಳನ್ನು ಬರೆಯುವ ಅಭ್ಯಾಸವನ್ನು ಬಿಡಬಾರದು. ಪತ್ರಗಳು ವಿಶಿಷ್ಟವಾದ ಆನಂದವನ್ನು ನೀಡುತ್ತವೆ. ನಮ್ಮ ಬರವಣಿಗೆಯ ಸಾಮರ್ಥ್ಯವನ್ನು ವೃದ್ಧಿಸುತ್ತವೆ. ಒಳ್ಳೆಯ ಬರಹಗಾರರು ಆಗುವುದಕ್ಕೆ ಸಹಾಯಮಾಡುತ್ತವೆ. ಇಲ್ಲಿರುವ ಪತ್ರಗಳನ್ನು ಓದಿರಿ..... **ಅಮ್ಮನಿಗೊಂದು ಪತ್ರ** ಬೆಂಗಳೂರು ದಿನಾಂಕ ೧೦-೦೮-೨೦೨೪ ಮಾತೃಶ್ರೀಯವರಿಗೆ, ನಿಮ್ಮ ಮಗಳಾದ ತೇಜಸ್ವಿನಿ ಮಾಡುವ ನಮಸ್ಕಾರಗಳು. ಇಲ್ಲಿ ನಾನು ಆರೋಗ್ಯವಾಗಿದ್ದೇನೆ. ನಿಮ್ಮ ಆರೋಗ್ಯದ ಬಗ್ಗೆ ಆಗಾಗ ಪತ್ರ ಬರೆಯುತ್ತಿರಿ. ಕಳೆದ ಶನಿವಾರ ಡಿಸೆಂಬರ್ ೨೪ ರಂದು ಶಾಲಾ ಪ್ರವಾಸ ಏರ್ಪಡಿಸಿದ್ದರು. ಬೆಳಗಿನ ಜಾವ ೪.೦೦ ಗಂಟೆಗೆ ಬಸ್ಸು ಹತ್ತಿದೆವು. ಎಲ್ಲರಲ್ಲೂ ಉತ್ಸಾಹ ಸಡಗರ ತುಂಬಿತ್ತು. ಪ್ರವಾಸಿ ಬಸ್ ನಮ್ಮೆಲ್ಲರನ್ನು ಹೊತ್ತು ಬೆಂಗಳೂರಿನಿಂದ ಹೊರಟಿತು. ಸುಮಾರು ೧೭೫ ಕಿ.ಮೀ. ದೂರದಲ್ಲಿರುವ ಶ್ರವಣಬೆಳಗೊಳವನ್ನು ತಲುಪಿತು. ಆಗ ಬೆಳಗಿನ ೮.೦೦ ಗಂಟೆಯ ಸಮಯ. ಅಲ್ಲಿನ ಅತಿಥಿ ಗೃಹವೊಂದರಲ್ಲಿ ನಮ್ಮ ನಿತ್ಯ ಕರ್ಮಗಳನ್ನು ಮುಗಿಸಿದೆವು. ಉಪಾಹಾರ ಸೇವಿಸಿ ಬೆಟ್ಟದತ್ತ ಹೆಜ್ಜೆ ಹಾಕಿದೆವು. ಸುಮಾರು ೬೫೦ ಕ್ಕೂ ಹೆಚ್ಚು ಮೆಟ್ಟಿಲುಗಳು. ಭೂ ಮಟ್ಟದಿಂದ ಸುಮಾರು ೪೭೦ ಅಡಿಗಳಷ್ಟು ಎತ್ತರ. ನಾವೆಲ್ಲರೂ ಜಿಂಕೆಯಂತೆ ಓಡುತ್ತಾ-ಜಿಗಿಯುತ್ತಾ ಬೆಟ್ಟ ಹತ್ತಿದೆವು. ಬೆಟ್ಟದ ತುದಿಯನ್ನು ಏರಿದಾಗ ೫೮ ಅಡಿ ಎತ್ತರದ ಭವ್ಯವಾದ ಗೊಮ್ಮಟೇಶ್ವರನ ವಿಗ್ರಹ. ಚಾವುಂಡರಾಯನು ಅದನ್ನು ಕೆತ್ತಿಸಿರುವನೆಂದು ಹೇಳುತ್ತಾರೆ. ಅದು ಏಕಶಿಲಾ ಸುಂದರ ಮೂರ್ತಿ. ತಲೆ ಎತ್ತಿ ನೋಡಬೇಕು. ಬಾಹುಬಲಿ ವಿಗ್ರಹದ ಮುಂದೆ ನಾವು ಬಹಳ ಚಿಕ್ಕವರಾಗಿ ಕಾಣುತ್ತೇವೆ. ಮುಗುಳ್ನಗೆಯನ್ನು ಸೂಸುತ್ತಿರುವ ಆ ಮುಖ ಅದ್ಭುತವಾಗಿದೆ. ಗೊಮ್ಮಟನ ಮೂರ್ತಿಗೆ ಹಬ್ಬಿದ ಶಿಲಾಲತೆ ವಿಶೇಷ ಸೌಂದರ್ಯ ನೀಡಿದೆ. ನೋಡಿದಷ್ಟೂ ನೋಡಬೇಕು ಎನಿಸುತ್ತದೆ. ಕಣ್ಣು ತಣಿಯದು, ಮನಸ್ಸು ಮಾಗದು. ಆ ಬೃಹತ್ ವಿಗ್ರಹ ಕೆತ್ತಿದ ಶಿಲ್ಪಿಗೆ ನಾವೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಮನಸ್ಸಿಲ್ಲದ ಮನಸ್ಸಿನಿಂದ ಬೆಟ್ಟ ಇಳಿದೆವು. ಮಧ್ಯಾಹ್ನ ಊಟ ಮಾಡಿದ ನಂತರ ಮರದ ಕೆಳಗೆ ಒಂದಿಷ್ಟು ವಿಶ್ರಾಂತಿ ಪಡೆದೆವು. ನಾನು ನನ್ನ ಗೆಳತಿಯರು ಕೆಲವು ಅಪರೂಪದ ಕಲಾಕೃತಿಗಳನ್ನು ಕೊಂಡುಕೊಂಡೆವು. ನಂತರ ಬಸ್ಸನ್ನು ಏರಿ ಕುಳಿತ ನಮಗೆ ಬೆಂಗಳೂರು ತಲುಪಿದ್ದು ಗೊತ್ತಾಗಲೇ ಇಲ್ಲ. ಗೊಮ್ಮಟ ಮೂರ್ತಿಯ ಹಸನ್ಮುಖತೆ ದಿವ್ಯ ಸಂದೇಶವನ್ನು ನೀಡುತ್ತಿತ್ತು. ಅಮ್ಮ ಇದೊಂದು ಅಪರೂಪದ ಯಾತ್ರಾ ಸ್ಥಳ. ಮತ್ತೊಮ್ಮೆ ನಿಮ್ಮ ಜೊತೆ ಶ್ರವಣಬೆಳಗೊಳಕ್ಕೆ ಹೋಗಬೇಕು ಅನಿಸುತ್ತಿದೆ. ಈ ಪತ್ರದ ಜೊತೆಗೆ ಕೆಲವು ಫೋಟೋಗಳನ್ನು ಕಳಿಸಿರುವೆನು. ಅಪ್ಪನಿಗೆ ವಂದನೆಗಳನ್ನು ತಿಳಿಸು. ನಮಸ್ಕಾರಗಳೊಂದಿಗೆ, ನಿಮ್ಮ ಪ್ರೀತಿಯ ಮಗಳು ತೇಜಸ್ವಿನಿ ಬನಶಂಕರಿ ಸರ್ಕಾರಿ ಹಿ.ಪ್ರಾ.ಶಾಲೆ ಹೊಸಕೆರೆಹಳ್ಳಿ, ಬೆಂಗಳೂರು-೮೫ ಇವರಿಗೆ : ಶ್ರೀಮತಿ ರಾಜೇಶ್ವರಿ ಮನೆ ನಂ. ೧೦, ಜಿ.ಎಸ್.ಶಿವರುದ್ರಪ್ಪ ರಸ್ತೆ, ಶಿಕಾರಿಪುರ, ಶಿವಮೊಗ್ಗ ಜಿಲ್ಲೆ - ೫೭೭೪೨೭ *(Photo of Gommateshwara statue)* **ಅಮ್ಮನಿಂದ ಮಗಳಿಗೆ ಮರುಪತ್ರ** ರಾಜೇಶ್ವರಿ ಶಿಕಾರಿಪುರ ದಿನಾಂಕ : ೧೫-೦೮-೨೦೨೪ ಪ್ರೀತಿಯ ತೇಜಸ್ವಿನಿಗೆ, ನಾವು ಇಲ್ಲಿ ಆರೋಗ್ಯದಿಂದ ಇದ್ದೇವೆ. ನಿನ್ನೆ ದಿನ ನಿನ್ನ ಪತ್ರ ಬಂದು ತಲುಪಿತು. ನೀವು ಶಾಲೆಯಿಂದ ಪ್ರವಾಸಕ್ಕೆ ಹೋದ ವಿಚಾರ ತಿಳಿದು ಸಂತೋಷವಾಯಿತು. ನೀನು ಶ್ರವಣಬೆಳಗೊಳ ನೋಡಿದ ಬಗ್ಗೆ ತುಂಬಾ ಚೆನ್ನಾಗಿ ಬರೆದಿರುವೆ. ನೀನು ಕಳಿಸಿದ ಫೋಟೋಗಳನ್ನು ಮತ್ತು ನೀನು ಬರೆದ ಪತ್ರವನ್ನು ನೋಡಿದ ನಿನ್ನ ಅಪ್ಪ “ನೋಡು, ನಮ್ಮ ಮಗಳು ಎಷ್ಟು ಚೆನ್ನಾಗಿ ಪತ್ರ ಬರೆದಿದ್ದಾಳೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೀನು ಪತ್ರವನ್ನು ಬರೆಯುತ್ತಾ ಇರು. ನಿನ್ನ ಬರವಣಿಗೆ ಬಹಳಷ್ಟು ಸುಧಾರಿಸುತ್ತದೆ. ಆರೋಗ್ಯದ ಕಡೆ ಗಮನ ಕೊಡು. ಅಭ್ಯಾಸದತ್ತ ಒಲವು ಇರಲಿ. ವ್ಯರ್ಥವಾಗಿ ಸಮಯ ಕಳೆಯಬೇಡ. ಚೆನ್ನಾಗಿ ಊಟಮಾಡು, ಆಟ ಆಡು, ನಿದ್ರೆಮಾಡು. ಅದೇ ರೀತಿ ಚೆನ್ನಾಗಿ ಓದಿ ಕೀರ್ತಿ ಸಂಪಾದಿಸಬೇಕು. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಇರುತ್ತದೆ ಎಂಬುದನ್ನು ನೆನಪಿಡು. ನಿನಗೆ ಒಳ್ಳೆಯದಾಗಲಿ.....ಆಗಾಗ ಪತ್ರ ಬರೆಯುತ್ತಿರು. ಶುಭಾಶೀರ್ವಾದಗಳೊಂದಿಗೆ, ನಿನ್ನ ಪ್ರೀತಿಯ ಅಮ್ಮ ರಾಜೇಶ್ವರಿ ಇವರಿಗೆ, ಕು|| ತೇಜಸ್ವಿನಿ ೬ ನೇ ತರಗತಿ ಬನಶಂಕರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಕೆರೆಹಳ್ಳಿ, ಬೆಂಗಳೂರು - ೫೬೦ ೦೮೫. **ಮೇಲಿನ ಪತ್ರವನ್ನು ಗಮನಿಸಿ, ಅದರಂತೆ ನೀವೂ ಭೇಟಿಕೊಟ್ಟ ಸ್ಥಳದ ಬಗ್ಗೆ, ನಿಮಗಾದ ಅನುಭಗಳನ್ನು ನಿಮ್ಮ ಅಮ್ಮನಿಗೆ ಇಲ್ಲವೇ ಅಣ್ಣನಿಗೆ ಪತ್ರ ಬರೆದು ತಿಳಿಸಿರಿ.**

Interactive Lab