CRECT Education

Class 7 Kannada Lesson 11: Ecological Balance | KTBS First Language – Learn the Story

Description

Learn the story of ಪರಿಸರ ಸಮತೋಲನ (Ecological Balance) from the KTBS Class 7 Kannada First Language textbook. We walk through the science article beat by beat.

ಗದ್ಯ (prose) · ಕೃಷ್ಣಾನಂದ ಕಾಮತ್

ಪಠ್ಯFull text

(Illustration of horses, camels, and giraffes eating from trees) ಭೂಮಂಡಲದಲ್ಲಿ ಪ್ರತಿಯೊಂದು ಪ್ರಾಣಿಯೂ ತನಗಿರುವ ಸಂತಾನ ಸಾಮರ್ಥ್ಯವನ್ನು ಬಳಸಿದ್ದರೆ, ಇಲ್ಲವೇ ಅವುಗಳ ಮರಿಗಳೆಲ್ಲಾ ಬದುಕಿ ಇರುವಂತಾಗಿದ್ದರೆ, ಯಾವ ಪ್ರಾಣಿಗೂ ಹೊಟ್ಟೆತುಂಬ ಆಹಾರ ಸಿಗುತ್ತಿರಲಿಲ್ಲ. ಐದು ವರ್ಷಕ್ಕೊಮ್ಮೆ ಒಂದು ಮರಿಗೆ ಜನ್ಮಕೊಡುವ ಆನೆ, ಸಂತತಿ ನಿರ್ಮಿತಿಯಲ್ಲಿ ಅತಿ ಮಂದಗತಿಯದು ಎಂದು ಪರಿಗಣಿಸಿದೆ. ಹೀಗಿದ್ದರೂ ಆನೆಯ ಎಲ್ಲ ಮರಿಗಳೂ ಸರಿಯಾಗಿ ಬೆಳೆದು ಐದು ವರ್ಷಕ್ಕೆ ಒಂದು ಮರಿಗೆ ಜನ್ಮ ಕೊಡುತ್ತಾ ಹೋದರೆ ಒಂದೇ ಶತಮಾನದಲ್ಲಿ ಜಗತ್ತೆಲ್ಲಾ ಆನೆಮಯವಾಗಿ ಹೋಗುತ್ತಿತ್ತು. ಪ್ರತಿಯೊಂದು ಪ್ರಾಣಿಯೂ ತನ್ನ ವಂಶಜರೂ ಬಾಳಬೇಕೆಂದು ಹೆಚ್ಚೆಚ್ಚು ಪ್ರಮಾಣದಲ್ಲಿ ಸಂತಾನ ಅಭಿವೃದ್ಧಿ ಮಾಡುತ್ತದೆ. ಇದರಿಂದಾಗಿ ಆಹಾರ ಆಚ್ಛಾದನಗಳಿಗಾಗಿ ಸ್ಪರ್ಧೆ ಏರ್ಪಡುವುದು. ಸಾಮರ್ಥ್ಯವುಳ್ಳ ವರ್ಗ ಬದುಕಿ ಬಾಳಿದರೆ ಅಸಮರ್ಥ ಗುಂಪು ನಿರ್ನಾಮವಾಗುತ್ತದೆ. ಉದಾಹರಣೆಗೆ ಒಂದು ಪ್ರದೇಶದಲ್ಲಿ ಕುದುರೆ, ಒಂಟೆ, ಜಿರಾಫೆಗಳು ಬದುಕುತ್ತವೆ ಎಂದಿಟ್ಟುಕೊಳ್ಳೋಣ. ಈ ಮೂರೂ ಪ್ರಾಣಿಗಳು ಹೆಚ್ಚಿನ ಸಂತಾನ ನಿರ್ಮಾಣ ಮಾಡಿದ್ದರಿಂದ ಅಲ್ಲಿದ್ದ ಆಹಾರ ಕಡಿಮೆಯಾಗುತ್ತಾ ಹೋಗುತ್ತದೆ. ಐದಾರು ಅಡಿ ಎತ್ತರದಲ್ಲಿದ್ದ ಪರ್ಣ(ಎಲೆ)ಗಳು ತೀರಿದವೆಂದರೆ ಕುದುರೆಗಳು ಹಸಿವೆಯಿಂದ ಬಳಲಿ ಸಾಯುತ್ತವೆ. ಆದರೆ ಉದ್ದಕುತ್ತುಳ್ಳ ಒಂಟೆ-ಜಿರಾಫೆಗಳು ಎಂಟು-ಹತ್ತು ಅಡಿ ಎತ್ತರದಲ್ಲಿರುವ ಪರ್ಣಗಳನ್ನು ತಿಂದು ಬದುಕುತ್ತವೆ. ಅಲ್ಲಿಯ ಆಹಾರ ತೀರಲು ಒಂಟೆಗೂ ಉಪವಾಸ ಕಟ್ಟಿಟ್ಟದ್ದೇ. ಆದರೆ ಜಿರಾಫೆ ಹನ್ನೆರಡು ಅಡಿಗೂ ಎತ್ತರದಲ್ಲಿದ್ದ ಪರ್ಣ ತಿನ್ನುವಷ್ಟು ಉದ್ದ ಕಾಲು, ಗೋಣು ಪಡೆದಿದ್ದರಿಂದ ಆಹಾರ-ಸ್ಪರ್ಧೆಯಲ್ಲಿ ಕೊನೆಗೆ ಇದೇ ವರ್ಗ ಯಶಸ್ವಿಯಾಗುವುದೆಂದು ಒಂದು ಸಿದ್ದಾಂತ. ಈ ಶತಮಾನದಲ್ಲಿ ಪ್ರಾಣಿ-ಪರಿಸರಗಳ ಸಂಬಂಧ ಕೂಲಂಕಷವಾಗಿ ಅಭ್ಯಸಿಸಿದ್ದರಿಂದ ಮಾನವನು ಅದರ ಸಂಪೂರ್ಣ ಲಾಭ ಪಡೆದುಕೊಳ್ಳಬಹುದು. ಜಿರಾಫೆ ವರ್ಗದಲ್ಲಿಯೂ ಅತಿಸಂತಾನ ಇರುವುದರಿಂದ ಇವುಗಳಲ್ಲಿಯೂ ಸ್ಪರ್ಧೆ ಇದ್ದೇ ಇರುತ್ತದೆ. ಇಲ್ಲಿ ಜಿರಾಫೆಗಳಿಗೂ ಉದ್ದಕಾಲು, ಉದ್ದಗೋಣು ಇರುವುದರಿಂದ ಅವುಗಳಲ್ಲಿಯ ಸ್ಪರ್ಧೆ, ಕುದುರೆ, ಒಂಟೆಗಳೊಡನೆ ಇರುವ ಸ್ಪರ್ಧೆಗಿಂತ ತೀಕ್ಷ್ಣವಾಗಿರುತ್ತದೆ. ಆದ್ದರಿಂದ ಜಿರಾಫೆಗಳಲ್ಲಿಯೇ ಸ್ವಲ್ಪ ಉದ್ದಕಾಲು, ಗೋಣುಗಳು ಇದ್ದವುಗಳ ವಂಶ ಮುಂದುವರಿಯುವುದೆಂದೂ ಉಳಿದವು ಅಳಿದು ಹೋಗುವುದೆಂದೂ ನಂಬಿದೆ. ಆದರೆ ಆ ಪಿತೃಗಳ ಸಾಧನೆ ವಂಶ ಪರಂಪರಾಗತವಾಗಿ ಮಕ್ಕಳಿಗೆ ಬರುತ್ತದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಶತಮಾನಗಳಿಂದ ಕನ್ನಡಿಗರು ವೀಳ್ಯ ಚರ್ವಣದಿಂದ ತುಟಿಗಳನ್ನು ಕೆಂಪು ಮಾಡಿಕೊಂಡರೂ ಅವರ ಮಕ್ಕಳು ಕೆಂದುಟಿ ಪಡೆದೇನು ಹುಟ್ಟುವುದಿಲ್ಲ. ಅದರಂತೆ ಹಿಂದಿನ ಚೀನೀ ಹೆಂಗಳೆಯರು ಶತಮಾನಗಳಿಂದ ತಮ್ಮ ಕಾಲುಗಳನ್ನು ಕೃತಕವಾಗಿ ಕಿರಿದು ಮಾಡಿಕೊಳ್ಳುತ್ತ ಬಂದಿದ್ದರೂ ಅವರ ಮಕ್ಕಳ ಕಾಲು ಕಿರಿದಾಗಲೇ ಇಲ್ಲ! ಇದರಂತೆ ಪ್ರಯೋಗಾಲಯದಲ್ಲಿ ಇಲಿಗಳ ನೂರು ತಲೆಮಾರಿನವರೆಗೆ ಬಾಲಕಡಿದರೂ ಯಾವ ತಲೆಮಾರಿನ ಇಲಿಗಳೂ ಬಾಲವಿಲ್ಲದೆ ಜನಿಸಲೇ ಇಲ್ಲ, ಬಹಳ ಆಳವಾದ ಸಂಶೋಧನೆಯ ಅನಂತರ ಇದಕ್ಕೆ ಉತ್ತರ ಕಂಡುಹಿಡಿಯಲಾಗಿದೆ. ಪ್ರತಿಯೊಂದು ಪ್ರಾಣಿಯ ವ್ಯಕ್ತಿತ್ವವನ್ನು ಅದರ ಪ್ರತಿಯೊಂದು ಜೀವಾಣುವಿನಲ್ಲಿ ಇರುವ ಕ್ರೋಮೋಷೋಮುಗಳು ನಿಯಂತ್ರಿಸುತ್ತವೆ. ಪ್ರಾಣಿಗಳಂತೆ ಸಸ್ಯಗಳೂ ತಮ್ಮ ವಂಶ ಮುಂದುವರಿಯಬೇಕೆಂದು ಯತ್ನಿಸುವ ವರ್ಗಕ್ಕೆ ಸೇರಿವೆ. ಕೀಟ, ವಾಯು, ನೀರು ಮೊದಲಾದವುಗಳ ಮೂಲಕ ಬೀಜಗಳನ್ನು ವಿತರಣೆ ಮಾಡುತ್ತವೆ. ಈ ಬೀಜಗಳು ಎಲ್ಲ ಭೂಜಲ-ಪ್ರದೇಶದಲ್ಲಿ ಹರಡಿಕೊಂಡರೂ ಅವು ತಮಗೆ ಅನುಕೂಲವಾದ ವಾತಾವರಣ ದೊರೆತರೆ ಮಾತ್ರ ಬೆಳವಣಿಗೆ ಹೊಂದುತ್ತವೆ. ವಿಪುಲವಾದ ನೀರು, ಆರ್ದ್ರತೆ ಇರುವಲ್ಲಿ ದಟ್ಟವಾದ ಕಾಡು ಬೆಳೆದರೆ, ಬಯಲು ಪ್ರದೇಶದಲ್ಲಿ ಜಾಲೀ ಗಿಡಗಳೇ ವೃಕ್ಷರಾಜ ಎನಿಸಿಕೊಳ್ಳುವುವು. ಇವೇ ಬೀಜಗಳು ಮರುಭೂಮಿ, ರಸ್ತೆ, ಕಟ್ಟಡಗಳ ಮೇಲೆ ಬಿದ್ದರೆ ಅವುಗಳ ಬೆಳವಣಿಗೆಗೆ ಅವಕಾಶವೇ ದೊರೆಯುವುದಿಲ್ಲವಾದ್ದರಿಂದ ನಾಶವಾಗುವುವು. (Illustration of various animals in a forest being hunted by a human, along with cut trees) ಮಾನವ ತನ್ನ ಸ್ವಾರ್ಥಕ್ಕಾಗಿ ಎಷ್ಟೋ ಪ್ರಾಣಿಗಳನ್ನು ನಿರ್ನಾಮ ಮಾಡಿದ್ದಾನೆ, ಮಾಡುತ್ತಿದ್ದಾನೆ. ಜೀವಿತ ಪ್ರಾಣಿಗಳಲ್ಲಿಯೇ ದೊಡ್ಡದು ಎನಿಸಿಕೊಂಡ ದೇಹ-ಆಕಾರ ದೊಡ್ಡದಿದ್ದರೂ ಅತಿ ಸಣ್ಣದಾಗಿರುವ ಸಸ್ಯಾಹಾರವನ್ನೇ ಭಕ್ಷಿಸುವ ಮಾನವನಿಗೆ ಯಾವ ರೀತಿಯಿಂದಲೂ ಕೇಡು ಮಾಡದ ತಿಮಿಂಗಿಲಗಳನ್ನು ಅದರ ಕೊಬ್ಬಿಗಾಗಿ ಬೇಟೆಯಾಡಿ ಇಂದು ಅದರ ಜಾತಿಯೇ ನಿರ್ನಾಮವಾಗುವಷ್ಟು ಕಡಿಮೆ ತಿಮಿಂಗಿಲಗಳು ಉಳಿದಿವೆ. ಮೊಸಳೆಗಳ ಚರ್ಮಕ್ಕೆ ಪಾಶ್ಚಾತ್ಯ ಮಹಿಳೆಯರು ಮನಸೋತಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಮೊಸಳೆಗಳನ್ನು ಅತಿಯಾಗಿ ಬೇಟೆಯಾಡಿ ಇಂದು ಕರ್ನಾಟಕದ ಬನ್ನೇರುಘಟ್ಟದಲ್ಲಿ ಮೊಸಳೆಗಳಿಗಾಗಿಯೇ ಮಾಡಿದ ಆಲಯದಲ್ಲಿ ಹೆಚ್ಚಿನ ದಕ್ಷತೆಯಿಂದ ಪಾಲನೆ-ಪೋಷಣೆ ಮಾಡುವ ಪ್ರಸಂಗ ಬರಲಿಲ್ಲವೇ? ಅದರಂತೆ ಹುಲಿ, ಸಿಂಹ, ಚಿರತೆಗಳ ಮೈದೊಗಲು, ಅಪಾರ ಧನ ತರುವುದರಿಂದ ಅವುಗಳನ್ನು ಹೆಚ್ಚಾಗಿ ಬೇಟೆಯಾಡಿದ್ದರಿಂದ ಅವುಗಳ ಸಂತತಿ ಕಡಿಮೆಯಾಗಿದೆ. ಹಾವುಗಳನ್ನಂತೂ ಆಜನ್ಮ ವೈರಿಗಳಂತೆ ಭಾವಿಸಿ ಸಿಕ್ಕಲ್ಲಿ ಕೊಂದು ಕೆಲವು ಜಾತಿಯ ಹಾವುಗಳು ಇಂದು ನಶಿಸಿ ಹೋಗಿದ್ದರಿಂದ ವಿಷಕಾರಿ ಹಾವುಗಳನ್ನು ಸಾಕುವ ಕೇಂದ್ರಗಳನ್ನು ಮುಂಬಯಿ ಮತ್ತು ಮದ್ರಾಸ್‌ನಲ್ಲಿ ಪ್ರಾರಂಭಿಸಬೇಕಾದ ಪ್ರಸಂಗ ಬಂತು. ಹೊಲಗಳಲ್ಲಿ ಹಾವುಗಳು ಇಲಿಗಳನ್ನು ತಿಂದು ಜೀವಿಸುತ್ತಿದ್ದವು. ಅವುಗಳನ್ನು ನಾಶ ಮಾಡಿದ್ದರಿಂದ ವಿನಾಯಕನ-ವಾಹನಗಳು ಅತಿಯಾಗಿ ಬೆಳೆದು ಗುಲ್ಬರ್ಗಾ ಜಿಲ್ಲೆಯಲ್ಲಿ ಮಾನವನ ಆಹಾರವನ್ನೇ ಭಕ್ಷಿಸಿ ಅವನು ಹೌಹಾರುವಂತೆ ಮಾಡಿವೆ. ಟ್ರಾಂವ್ ಟ್ರಾಂವ್ ಎಂದು ಹಾಡಿ ಮಳೆರಾಯನನ್ನು ಬರ ಮಾಡಿಕೊಳ್ಳುವ ಕಪ್ಪೆಯರಸನ ಮೇಲೆ ಮಾನವನು ಕೊಲೆಗಡುಕನ ಕತ್ತಿಯನ್ನೆತ್ತಿದ್ದಾನೆ. ಅವುಗಳ ಕಾಲುಗಳಿಗೆ ಪಾಶ್ಚಾತ್ಯ ದೇಶದಲ್ಲಿ ಬೇಡಿಕೆ ಇರುವುದರಿಂದ ಅವುಗಳನ್ನು ಸಿಕ್ಕಲ್ಲಿ ಹಿಡಿದು ಕೊಂದು ಕಿಸೆ ತುಂಬಿಸಿಕೊಳ್ಳುತ್ತಿದ್ದಾನೆ. ಮಾನವನು ಬೆಳೆದ ಆಹಾರ ಧಾನ್ಯದಲ್ಲಿ ಶೇಕಡ ೧೦-೧೫ರಷ್ಟು ಬೆಳೆಗಳನ್ನು ಕ್ರಿಮಿಕೀಟಗಳು ನಾಶ ಮಾಡುತ್ತವೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಒಂದು ಕಪ್ಪೆ ದಿನವೊಂದಕ್ಕೆ ೧೦೦-೨೦೦ತನಕ ಕ್ರಿಮಿಕೀಟಗಳನ್ನು ಭಕ್ಷಿಸಿ ಎಷ್ಟೋ ಆಹಾರ ಧಾನ್ಯವನ್ನು ಸಂರಕ್ಷಿಸುತ್ತದೆ. ಈಗ ಅವುಗಳ ಹತ್ಯೆಯನ್ನು ಪ್ರಾರಂಭಿಸಿದರೆ ಅನ್ನದೇವರು ಮೆಚ್ಚುವನೇ? ಒಂದು ದಟ್ಟವಾದ ಕಾಡನ್ನು ಮಾನವ ಕಡಿದನೆಂದು ಇಟ್ಟುಕೊಳ್ಳೋಣ. ಅಲ್ಲಿದ್ದ ಹಕ್ಕಿಗಳು ಬೇರೆ ತಾಣ ಹುಡುಕಿಕೊಳ್ಳಬೇಕಾಗುತ್ತದೆ. ಮೇವು ಇಲ್ಲದ್ದರಿಂದ ಚಿಗರೆಗಳು ಮಾಯವಾಗುತ್ತವೆ. ಚಿಗರೆಗಳನ್ನು ಬೇಟೆಯಾಡಿ ಜೀವಿಸಿದ್ದ ಹುಲಿ, ಚಿರತೆ, ಸಿಂಹಗಳೂ ತೊಲಗಬೇಕಾಗುತ್ತದೆ. ಅವಿತುಕೊಳ್ಳಲು ಮರೆ ಇಲ್ಲದ್ದರಿಂದ ತೋಳ-ಕರಡಿಗಳು ಓಡಿಹೋಗುತ್ತವೆ. ಹಣ್ಣು-ಹಂಪಲುಗಳು ಸಿಗದಿದ್ದರಿಂದ ಇಣಚಿ-ಕಣ್ಣ ಕಪ್ಪಡಿಗಳು ಪ್ರಯಾಣ ಬೆಳೆಸುತ್ತವೆ. ಬೋಳು ಮಾಡಿದ ಕಾಡಿನಲ್ಲಿ ವಾಸಿಸಿ ಏನು ಪ್ರಯೋಜನವೆಂದು ಇಲಿಗಳೂ ಹೊರಡುತ್ತವೆ. ಇಲಿಗಳನ್ನು ನಂಬಿದ್ದ ಹಾವೂ ಹಿಂಬಾಲಿಸುತ್ತದೆ. ಕೊರೆಯುವ ಚಳಿ, ಸುಡುವ ಬಿಸಿಲು, ಹರಿವ ನೀರಿಗೆ ನೆಲದೊಳಗಿನ ಪ್ರಾಣಿಗಳು ಸಾವಿಗೀಡಾಗುತ್ತವೆ. ಇಂತಹ ಭೂಮಿಯನ್ನು ಹೊಲಗಳಿಗೆ ಬಳಸಿದರೆ ಅಲ್ಲಿ ಹೊಸ ಪ್ರಾಣಿಗಳು ಬೀಡು ಬಿಡುವುವು. ಮಾನವನು ವಿಮಾನ, ರೈಲ್ವೇ, ಮೋಟಾರು ನಿಲ್ದಾಣಗಳನ್ನು ಕಟ್ಟುವುದರಿಂದ, ಹೆದ್ದಾರಿಗಳನ್ನು ಮಾಡುವುದರಿಂದ ಬಹಳ ಕಾಲದಿಂದ ಇದ್ದ ಸರೋವರ, ಕೆರೆ, ಹೊಂಡಗಳನ್ನು ಬೇರೆಯೇ ಕೆಲಸಕ್ಕೆ ಬಳಸುವುದು ವಾಡಿಕೆ. ಆದ್ದರಿಂದ ಕಾರ್ಖಾನೆ-ಊರುಗಳನ್ನು ಬೆಳೆಸುವುದಕ್ಕೆ ಕಾಡು-ಗಿಡ-ಗಂಟಿಗಳನ್ನು ಕಡಿಯುವುದರಿಂದ ಆಗುವ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುದು ಜನಸಾಮಾನ್ಯರಿಗೆ ಅರಿವಾಗುವುದೇ ಇಲ್ಲ. ಆದ್ದರಿಂದ ಅಧಿಕಾರದಲ್ಲಿದ್ದವರು, ಅದಕ್ಕಿಂತ ಮಿಗಿಲಾಗಿ ಮುಂದಿನ ಪೀಳಿಗೆಗೆ ಇಂದೇ ಯೋಜನೆಯನ್ನು ತಯಾರಿಸುವ ವಿಜ್ಞಾನಿಗಳು ನಿಸರ್ಗದ ಆಗುಹೋಗುಗಳನ್ನು ವಿವರವಾಗಿ ಅಭ್ಯಸಿಸಿ ಮಾನವನ ಚಟುವಟಿಕೆ ಮಾನವನಿಗೆ ಕಂಟಕಪ್ರಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ, ವಿಧಾಯಕವಾಗಿ ಕಾರ್ಯಕ್ರಮಗಳನ್ನು ಕೈಗೊಂಡರೆ ಮಾತ್ರ ಈ ಹಿಂದೆ ಮಾಡಿದ ತಪ್ಪುಗಳೆಲ್ಲಾ ಮುಂದೆಯೂ ಆಗುವುದು ನಿಂತೀತು. **ಕೌಶಲ :** ಮಾತನಾಡುವುದು. **ಸಾಮರ್ಥ್ಯ :** ವಿಷಯಾನುಸಾರ ಸಹಜ ಚರ್ಚೆ, ಸಂವಾದ ವಿವರಣೆಗಳೊಂದಿಗೆ ಮಾತನಾಡುವುದು. **ಆಶಯ :** ಪ್ರಕೃತಿ ಒಂದು ಅದ್ಭುತ ಸೃಷ್ಟಿ. ಪ್ರಕೃತಿಯಲ್ಲಿ ಕ್ರಿಮಿ, ಕೀಟ, ಪ್ರಾಣಿ, ಪಕ್ಷಿಗಳು ಒಂದು ಮಿತಿಯಲ್ಲಿದ್ದರೆ ಮಾತ್ರ ಪರಿಸರ ಸಮತೋಲನವಾಗಿರತ್ತದೆ, ಇಲ್ಲದಿದ್ದರೆ ಪರಿಸರದಲ್ಲಿ ಅಸಮತೋಲನವುಂಟಾಗಿ ಜೀವರಾಶಿಗಳಿಗೆಲ್ಲ ಅಪಾಯ ಕಟ್ಟಿಟ್ಟದ್ದು. ಎಲ್ಲಾ ಪ್ರಾಣಿ ಪಕ್ಷಿಗಳು ತಮ್ಮ ಸಂತತಿ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತವೆ. ಜನಿಸಿದ ಎಲ್ಲಾ ಪ್ರಾಣಿ ಪಕ್ಷಿಗಳು ಉಳಿಯುವುದಿಲ್ಲ. ಅವು ಬದುಕಿಗಾಗಿ ಇತರ ಪ್ರಾಣಿ ಪಕ್ಷಿಗಳೊಂದಿಗೆ ಹೋರಾಟ ನಡೆಸಿ, ಶಕ್ತಿಯುತವಾದವು ಉಳಿಯುತ್ತವೆ. ದುರ್ಬಲ ಪ್ರಾಣಿಗಳು ನಶಿಸಿ ಹೋಗುತ್ತವೆ. ಬದುಕುಳಿದ ಪ್ರಾಣಿ ಪಕ್ಷಿಗಳನ್ನು ಮಾನವ ದುರಾಸೆ, ಮೋಜು ಅಥವಾ ಹೊಟ್ಟೆಪಾಡಿಗಾಗಿ ನಾಶಮಾಡುತ್ತಿದ್ದಾನೆ. ಜನಸಂಖ್ಯಾ ಏರಿಕೆ, ಕೈಗಾರಿಕೀಕರಣ, ನಗರೀಕರಣ, ಆಧುನೀಕರಣಗಳ ಭರಾಟೆಯಲ್ಲಿ ಸುಂದರ ಸಸ್ಯ - ಪ್ರಾಣಿ - ಪಕ್ಷಿಸಂಕುಲ ನಶಿಸಿ ಹೋಗುತ್ತಿದೆ. ನಾವು ಬದುಕಿ ಇತರರನ್ನು ಬದುಕಲು ಬಿಡಬೇಕು. ನಾಳಿನ ಸುಂದರ ಬದುಕನ್ನು ಮುಂದಿನ ಪೀಳಿಗೆ ಕಾಣಬೇಕೆಂಬುದು ಎಲ್ಲರ ಸದಾಶಯವಾಗಬೇಕು. ಇದೇ ಪಾಠದ ಮುಖ್ಯ ಭಾವ. **ಕೃತಿಕಾರರ ಪರಿಚಯ** (Portrait of Dr. Krishnananda Kamat is shown) ಡಾ. ಕೃಷ್ಣಾನಂದ ಕಾಮತ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ೨೯.೦೯.೧೯೩೪ ರಲ್ಲಿ ಜನಿಸಿದರು. ೧೯೫೯ ರಲ್ಲಿ ಎಂ.ಎಸ್ಸಿ. ಪದವಿಯಲ್ಲಿ ಉತ್ತೀರ್ಣರಾದ ಕಾಮತ್ ಅವರು ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು. ೧೯೬೧ ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಉದಯಪುರ ಮತ್ತು ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ಆಫ್ ಬಯಲಾಜಿಕಲ್ ಕಂಟ್ರೋಲ್ ಸಂಸ್ಥೆಯ ಕೀಟ ಸಂಶೋಧನಾಧಿಕಾರಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವರು. ಬೆಂಗಳೂರಿನಲ್ಲಿ ವೈಜ್ಞಾನಿಕ ಛಾಯಾಗ್ರಹಣ ಲ್ಯಾಬೊರೇಟರಿ ಪ್ರಾರಂಭಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳ ಛಾಯಾಗ್ರಹಣ ಮಾಡಿದ್ದಾರೆ. ಡಾ. ಕೃಷ್ಣಾನಂದ ಕಾಮತ್ ಅವರ ಕೃತಿಗಳೆಂದರೆ - ನಾನೂ ಅಮೆರಿಕಾಗೆ ಹೋಗಿದ್ದೆ, ಪ್ರಾಣಿ ಪರಿಸರ, ಕೀಟ ಜಗತ್ತು, ಪಶು ಪಕ್ಷಿ ಪ್ರಪಂಚ, ಸಸ್ಯ ಪರಿಸರ, ಇರುವೆಯ ಇರವು, ಸರ್ಪ ಸಂಕುಲ ಮತ್ತು ಕಾವಿ ಕಲೆ ಇತ್ಯಾದಿ. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೨೦.೦೨. ೨೦೦೨ ರಂದು ಇಹಲೋಕ ತ್ಯಜಿಸಿದರು.

ಪದಗಳ ಅರ್ಥword meanings

KannadaPronunciationMeaning
ಆಚ್ಛಾದನಬಟ್ಟೆ, ವಸ್ತ್ರ; ಪರ್ಣ - ಎಲೆ; ಗೋಣು - ಕುತ್ತಿಗೆ; ಪಿತೃ - ತಂದೆ; ವೀಳ್ಯ - ತಾಂಬೂಲ (ಎಲೆ, ಅಡಿಕೆ); ಚರ್ವಣ - ಅಗಿದು ತಿನ್ನುವುದು; ಶತಮಾನ - ನೂರು ವರ್ಷಗಳು; ಕ್ರೋಮೋಷೋಮು - ವರ್ಣತಂತು; ರಾಜಿ - ಗುಂಪು; ವಿಪುಲ - ಹೆಚ್ಚು, ಜಾಸ್ತಿ; ಆರ್ದ್ರತೆ - ನೀರಿನ ಅಂಶ, ತೇವಾಂಶ; ಪಾಶ್ಚಾತ್ಯ - ಪಶ್ಚಿಮದೇಶ; ಕಿಸೆ- ಜೇಬು; ತಾಣ- ಜಾಗ, ಸ್ಥಳ; ಚಿಗರೆ - ಜಿಂಕೆ; ಅವಿತು - ಬಚ್ಚಿಟ್ಟುಕೊಳ್ಳುವುದು; ಕಣ್ಣ ಕಪ್ಪಡಿ - ಬಾವಲಿ; ವಿಧಾಯಕ- ರಚನಾತ್ಮಕ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ವಾಕ್ಯಗಳಲ್ಲಿ ಸಂಧಿಯಾಗಿರುವ ಪದಗಳನ್ನು ಗುರುತಿಸಿ, ಸಂಧಿಯ ಹೆಸರು ತಿಳಿಸಿ.

  1. ಉದಾ: ನೀನೇಕೆ ನಮ್ಮೊಡನೆ ಊರಿಗೆ ಬರುವುದಿಲ್ಲ?

  2. ನೀನೇಕೆ, ನಮ್ಮೊಡನೆ, ಊರಿಗೆ - ಲೋಪಸಂಧಿ

  3. ೧ ಹಾಸಿಗೆಯಿದ್ದಷ್ಟು ಕಾಲನ್ನು ಚಾಚು.

    Answer

    ಹಾಸಿಗೆಯಿದ್ದಷ್ಟು - ಆಗಮ ಸಂಧಿ, ಕಾಲನ್ನು - ಲೋಪ ಸಂಧಿ

  4. ೨ ದೇವನೊಲಿದಾತನೇ ಜಾತ ಸರ್ವಜ್ಞ.

    Answer

    ದೇವನೊಲಿದಾತನೇ - ಲೋಪ ಸಂಧಿ

  5. ೩ ಬಾಯಿದ್ದವರು ಬರದಲ್ಲೂ ಬದುಕಿದರು.

    Answer

    ಬಾಯಿದ್ದವರು - ಲೋಪ ಸಂಧಿ, ಬರದಲ್ಲೂ - ಆಗಮ ಸಂಧಿ

Interactive Lab

ಆಚ್ಛಾದನಬಟ್ಟೆ, ವಸ್ತ್ರ; ಪರ್ಣ - ಎಲೆ; ಗೋಣು - ಕುತ್ತಿಗೆ; ಪಿತೃ - ತಂದೆ; ವೀಳ್ಯ - ತಾಂಬೂಲ (ಎಲೆ, ಅಡಿಕೆ); ಚರ್ವಣ - ಅಗಿದು ತಿನ್ನುವುದು; ಶತಮಾನ - ನೂರು ವರ್ಷಗಳು; ಕ್ರೋಮೋಷೋಮು - ವರ್ಣತಂತು; ರಾಜಿ - ಗುಂಪು; ವಿಪುಲ - ಹೆಚ್ಚು, ಜಾಸ್ತಿ; ಆರ್ದ್ರತೆ - ನೀರಿನ ಅಂಶ, ತೇವಾಂಶ; ಪಾಶ್ಚಾತ್ಯ - ಪಶ್ಚಿಮದೇಶ; ಕಿಸೆ- ಜೇಬು; ತಾಣ- ಜಾಗ, ಸ್ಥಳ; ಚಿಗರೆ - ಜಿಂಕೆ; ಅವಿತು - ಬಚ್ಚಿಟ್ಟುಕೊಳ್ಳುವುದು; ಕಣ್ಣ ಕಪ್ಪಡಿ - ಬಾವಲಿ; ವಿಧಾಯಕ- ರಚನಾತ್ಮಕ