CRECT Education

Class 7 Kannada Lesson 14: Joys and Sorrows on Sankranti | KTBS First Language – Learn the Story

Description

Learn Class 7 Kannada Lesson 14 — Joys and Sorrows on Sankranti (ಸಂಕ್ರಾಂತಿಯಂದು ಸುಖ-ದುಃಖ) from the KTBS First Language textbook. Discover the science and tradition behind the Sankranti festival.

ಗದ್ಯ (prose) · ಎ.ಆರ್. ಮಣಿಕಾಂತ್

ಪಠ್ಯFull text

(Illustration of decorated bulls jumping over a fire, guided by people) ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡಿ. ಸಂಕ್ರಾಂತಿ ಅಂದಾಕ್ಷಣ ನೆನಪಾಗುವ ಮಾತಿದು. ಎಳ್ಳು, ಬೆಲ್ಲ ಇಲ್ಲದ ಸಂಕ್ರಾಂತಿಯನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ನಿಮಗೆ ಗೊತ್ತೆ? ಸಂಕ್ರಾಂತಿಯಲ್ಲಿ ಪುರಾಣ ಕಾಣಿಸುತ್ತದೆ. ವಿಜ್ಞಾನ ಇಣುಕು ಹಾಕುತ್ತದೆ. ಸಂಪ್ರದಾಯ ಮಾತಾಡುತ್ತದೆ. ಕೃತಜ್ಞತಾಭಾವ ಕೈಹಿಡಿಯುತ್ತದೆ. ನಮಗೆ ಒಳಿತಾಗಲಿ, ನಮ್ಮ ಬದುಕಲ್ಲಿ ಸಂ-ಕ್ರಾಂತಿಯಾಗಲಿ ಎಂಬ ಆಶಾವಾದ ಜೊತೆಗೇ ಇರುತ್ತದೆ. ಯುಗಾದಿ, ದೀಪಾವಳಿ, ಮೊಹರಂ, ಈದ್-ಮಿಲಾದ್, ಕ್ರಿಸ್‌ಮಸ್, ಗೌರಿ-ಗಣೇಶ, ಮಹಾಲಯ ಅಮಾವಾಸ್ಯೆ ಮುಂತಾದುವೆಲ್ಲ ಜನಗಳ ಹಬ್ಬ. ಆದರೆ, ಸಂಕ್ರಾಂತಿಯ ಸೊಗಸೇ ಬೇರೆ. ಇದು ದನಗಳ ಹಬ್ಬ! ಉಳಿದೆಲ್ಲ ಹಬ್ಬಗಳಲ್ಲೂ ತಾನು ಹೊಸ ಬಟ್ಟೆ ಧರಿಸಿ ಮೆರೆವ ಮನುಷ್ಯ ಸಂಕ್ರಾಂತಿಯಲ್ಲಿ ಜಾನುವಾರುಗಳ ಅಲಂಕಾರಕ್ಕೆ ನಿಲ್ಲುತ್ತಾನೆ. ವರ್ಷವಿಡೀ ದುಡಿಮೆಯಲ್ಲಿ ತೊಡಗಿದ್ದ ದನ-ಕರುಗಳಿಗೆ ಪೂಜೆ ಮಾಡುತ್ತಾನೆ. ಸಂಕ್ರಾಂತಿಯ ವೇಳೆಗೆ ಇಡೀ ವರ್ಷದ ದುಡಿಮೆ ರೈತಾಪಿ ಜನರ ಕೈಗೆ ಬಂದಿರುತ್ತದಲ್ಲ? ಹಾಗೆ ದುಡಿದದ್ದಕ್ಕೆ ದನ-ಕರುಗಳಿಗೆ ಥ್ಯಾಂಕ್ಸ್(ವಂದನೆ)ಹೇಳಲಿಕ್ಕೆ ಅವುಗಳನ್ನು ಸಿಂಗರಿಸಿ, ಮೆರವಣಿಗೆ ಮಾಡಿ, ಕಿಚ್ಚು ಹಾಯಿಸಿ ರೈತ ಖುಷಿಪಡುತ್ತಾನೆ! ಕಿಚ್ಚು ಹಾಯಿಸುವುದು ಎಂದರೆ ದನಕರುಗಳನ್ನು ಬೆಂಕಿಯಲ್ಲಿ ಜಿಗಿಸುವುದು. ಈ ಆಚರಣೆಯ ಗುಟ್ಟು ಗೊತ್ತೆ? ಸಂಕ್ರಾಂತಿ ಬರುವುದು ಗಡಗಡ ಚಳಿಯ ಸಂದರ್ಭದಲ್ಲಿ. ಆ ವೇಳೆಗೆ ಕೃಷಿ ಕೆಲಸವೂ ಅಷ್ಟಾಗಿ ಇರುವುದಿಲ್ಲವಲ್ಲ? ದನ-ಕರುಗಳಿಗೆ ಸ್ವಲ್ಪ ವಿಶ್ರಾಂತಿ ಸಿಕ್ಕಿರುತ್ತೆ. ಅವುಗಳ ಮೈಯಲ್ಲಿ ಜಿಗಣೆಯಂಥ ಕ್ರಿಮಿಗಳು ಅದು ಹೇಗೋ ಸೇರಿರುತ್ತವೆ. ಗುಟ್ಟಾಗಿ ಅಡಗಿ ಕೂತು ಕಾಟ ಕೊಡುತ್ತಿರುತ್ತವೆ. ಇವುಗಳನ್ನು ತೊಲಗಿಸುವ ನೆಪದಲ್ಲೇ ಕಿಚ್ಚು ಹಾಯಿಸಲಾಗುತ್ತದೆ. ಬೆಂಕಿಯ ತಾಪ ಚೂರೇ ಚೂರು ತಾಗಿದರೂ ಸಾಕು, ಜಿಗಣೆಗಳು ತೊಪ್ಪನೆ ಬೆಂಕಿಗೆ ಬೀಳುತ್ತವೆ. ಮರುಕ್ಷಣದಿಂದಲೇ ಜಾನುವಾರುಗಳ ಬದುಕು ನೆಮ್ಮದಿಯ ಹಾಡಾಗುತ್ತದೆ! ಸಂಕ್ರಾಂತಿಯಂದು ಎಳ್ಳು-ಬೆಲ್ಲ-ಕಡಲೆ ಮತ್ತು ಕೊಬ್ಬರಿಯನ್ನೇ ಯಾಕೆ ತಿನ್ನಬೇಕು ಅಂದರೆ, ಚಳಿಗಾಲದ ಅವಧಿಯಲ್ಲಿ ಚರ್ಮ ಒಡೆದಿರತ್ತಲ್ಲ? ಆಗ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತೆ. ಚರ್ಮ ಮತ್ತೆ ಹುರುಪುಗೊಳ್ಳಬೇಕಾದರೆ, ಕಳೆದುಹೋದ ಕೊಬ್ಬಿನ ಅಂಶ ಬೇಗನೆ ಸಿಗಲೇಬೇಕು. ಎಳ್ಳು-ಕೊಬ್ಬರಿ-ಕಡಲೆಯಲ್ಲಿ ಕೊಬ್ಬಿನ ಅಂಶ ವಿಪರೀತ ಎಂಬಷ್ಟಿದೆ. ಸಂಕ್ರಾಂತಿಯ ನೆಪದಲ್ಲಿ ಎಲ್ಲರೂ ಎಳ್ಳು-ಬೆಲ್ಲದ ಮಿಶ್ರಣ ತಿನ್ನುತ್ತಾರಲ್ಲ? ಆಗ ದೇಹವೆಂಬುದು ತಂತಾನೇ ಸರಿಯಾಗಿ ಬಿಡುತ್ತದೆ. ಸಂಕ್ರಾಂತಿ ಹಳ್ಳಿಗರ ಮಧ್ಯೆಯೇ ಸೃಷ್ಟಿಯಾದ ಹಬ್ಬ. ಆಗಿಂದಾಗ್ಗೆ ಜಗಳವಾಡಿ 'ಟೊ'ಬಿಡುವುದು ಹಳ್ಳಿಗರ ಹುಟ್ಟುಗುಣ ತಾನೆ? ಊರಿನ ಪಟೇಲರು ವರ್ಷದ ಕೊನೆಯಲ್ಲಿ ಜಗಳಾಡಿದವರನ್ನು ಒಂದೆಡೆ ಸೇರಿಸಿ, ಅವರಿಂದ ಇವರಿಗೆ, ಇವರಿಂದ ಅವರಿಗೆ ಎಳ್ಳು ಬೆಲ್ಲ ಕೊಡಿಸಿ ರಾಜಿ ಮಾಡಿಸುತ್ತಿದ್ದರಂತೆ. ಅನಂತರ ಇನ್ನು ಮುಂದೆ ಕಿತ್ತಾಡುತ್ತ ಬದುಕಬೇಡಿ ಎಂದು ಒರಟಾಗಿ ಹೇಳುವ ಬದಲು 'ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ' ಅನ್ನುತ್ತಿದ್ದರಂತೆ! ಪರಿಣಾಮ, ಸಂಕ್ರಾಂತಿ ಬಾಯಿಗೆ ಸಿಹಿ ಕೊಡುತ್ತಿತ್ತು. ದ್ವೇಷ ಮರೆಸುತ್ತಿತ್ತು! ಸಂಕ್ರಾಂತಿ ದಿನದಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸ್ವಲ್ಪ ಸ್ವಲ್ಪ ಸಂಚರಿಸಲು ಶುರುವಿಡುತ್ತಾನೆ. ಸಂಕ್ರಾಂತಿಯ ಮರುದಿನದಿಂದಲೇ ಹಗಲು ದೀರ್ಘವಾಗುತ್ತದೆ. ರಾತ್ರಿಯ ಅವಧಿ ಸಹಜವಾಗಿಯೇ ಕಡಿಮೆಯಾಗುತ್ತದೆ. ಉತ್ತರಾಯಣ ಪುಣ್ಯಕಾಲ ಬರೋದು ವರ್ಷದಲ್ಲಿ ಒಂದು ದಿನ ಮಾತ್ರ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿದೆ. *** ಇದು ಸಂಕ್ರಾಂತಿಯ ಸೊಗಸಿನ ಮಹತ್ವ, ಹೌದಲ್ಲ? ಈಗ ಅಪ್ಪ-ಅಮ್ಮ ಆಗಿರುವವರು; ಅಂಕಲ್-ಆಂಟಿ ಅನಿಸಿಕೊಂಡಿರುವವರು, ಚಿಕ್ಕವರಿದ್ದಾಗ ಸಂಕ್ರಾಂತಿಯ ಸಡಗರದಲ್ಲಿ ಮೀಯುತ್ತಿದ್ದರು. ದನ-ಕರುಗಳ ಮೈ ತೊಳೆದು, ಕೊರಳಿಗೆ ಗೆಜ್ಜೆ ಕಟ್ಟಿ ಕೊಂಬಿಗೆ ಬಣ್ಣ ಬಳಿದು, ಟೇಪು ಕಟ್ಟಿ, ಹೂ ಮುಡಿಸಿ, ತರಹೇವಾರಿ ಬಲೂನು ಕಟ್ಟಿ ಕುಣಿಯುತ್ತಿದ್ದರು. ಹಬ್ಬದ ನೆಪದಲ್ಲಿ ಪರಿಚಿತರು ಬಂಧುಗಳಿಗೆಲ್ಲ ಎಳ್ಳು ಬೆಲ್ಲ ಕೊಟ್ಟು ಖುಷಿಪಡುತ್ತಿದ್ದರು. ಈಗ ಏನಾಗಿದೆ ಹೇಳಿ? ಹಬ್ಬವೇನೋ ವರ್ಷವರ್ಷವೂ ಬರುತ್ತಿದೆ. ಆದರೆ ಅವರಲ್ಲಿ ಸಂಭ್ರಮವಿಲ್ಲ. ಸಂಭ್ರಮ ಎಂಬುದು ಎದೆಯಾಳದಿಂದ ಹುಟ್ಟಿಬರುವುದಿಲ್ಲ. ಕೃಷಿಕರ ಮನೆಗಳಲ್ಲಿ ದನ-ಕರುಗಳೇ ನಾಪತ್ತೆ! ಆ ಜಾಗಕ್ಕೆ ಟ್ರ್ಯಾಕ್ಟರ್‌ಗಳು ಬಂದುನಿಂತಿವೆ! ಕಿಚ್ಚುಹಾಯಿಸುವ ಸಂಪ್ರದಾಯ ಕಣ್ಮರೆಯಾಗುತ್ತಿದೆ. ಯಾಂತ್ರಿಕವಾಗುತ್ತಿದೆ. ನೌಕರಿಯ ನೆಪದಲ್ಲಿ ಪಟ್ಟಣ ಸೇರಿರುವವರು ವಿಪರೀತ ಬ್ಯುಸಿಯಾಗಿದ್ದಾರೆ. ಕಾಸಿಗೆ ಪರದಾಡುತ್ತಿದ್ದಾರೆ. ಸಂಕ್ರಾಂತಿಗೆಂದು ಊರಿಗೆ ಹೋಗಿಬಂದರೆ ಐನೂರು ರೂಪಾಯಿಗೆ ನಾಮ ಬೀಳೋದು ಖಂಡಿತಾ. ಅದರ ಬದಲು ಇನ್ನೂರು ರೂಪಾಯಿ ಖರ್ಚು ಮಾಡಿ ಹೋಟೆಲಿಗೆ ಹೋಗಿ ತಿಂದುಬರೋದೇ ಸರಿ ಎಂದು ಲೆಕ್ಕ ಹಾಕಿ ಹಾಗೆಯೇ ಬದುಕುತ್ತಿದ್ದಾರೆ. ಕೇಳಿ: ಒಂದು ಕಾಲದಲ್ಲಿ ಎಳ್ಳು-ಬೆಲ್ಲ ನೀಡುವುದು ಬಾಂಧವ್ಯದ ಸಂಕೇತವಾಗಿತ್ತು. ಆದರೆ ಅದೀಗ ಪ್ರತಿಷ್ಠೆಯ ವಿಚಾರವಾಗಿದೆ. ಜಾಸ್ತಿ-ಎಳ್ಳು ಬೆಲ್ಲ ಕೊಟ್ಟವರೇ ಶ್ರೀಮಂತರು ಎಂಬಂತಾಗಿದೆ! ನಾನೇ ಮೇಲು, ನಾನೇ ಶ್ರೇಷ್ಠ ಎಂದು ತೋರಿಸಿಕೊಳ್ಳಲು ಎಲ್ಲರೂ ಮುಂದಾಗಿದ್ದಾರೆ. ದೊಡ್ಡದಾಗಿ ಕಾಣಲೆಂದು ದಪ್ಪ ದಪ್ಪ ಸಕ್ಕರೆ ಅಚ್ಚು ಸೇರಿಸಿ ಎಳ್ಳು-ಬೆಲ್ಲ ಪ್ಯಾಕ್ ಮಾಡುತ್ತಿದ್ದಾರೆ. ರೆಡಿಮೇಡ್ ಎಳ್ಳು ಬೆಲ್ಲದ ಪ್ಯಾಕ್‌ಗಳು ಫ್ಯಾಬ್ ಮಾಲ್‌ಗಳಲ್ಲಿ ಧಾರಾಳವಾಗಿ ದೊರಕುತ್ತಿವೆ. ಕಳಪೆ ಮಾಲು ಎಂಬುದು ಎಳ್ಳು-ಬೆಲ್ಲದ ರೂಪದಲ್ಲೂ ಮಾರುಕಟ್ಟೆಗೆ ಬಂದಿದೆ. ಸದಾ ಮುಖವಾಡದೊಂದಿಗೇ ಬದುಕುವ ನಾವು ಈ ಬದಲಾವಣೆಯನ್ನೂ ಒಪ್ಪಿಕೊಂಡಿದ್ದೇವೆ! ಇಲ್ಲ. ನಾವೆಲ್ಲ ಬಯಸುವ, ಸಂಕ್ರಾಂತಿ ಇದಲ್ಲವೇ ಅಲ್ಲ. ನಮ್ಮ ಆಚರಣೆಯ ಸಂಕ್ರಾಂತಿಯಲ್ಲಿ ಸಂಸ್ಕೃತಿ ಇರಬೇಕು. ಸಂಪ್ರದಾಯ ಇರಬೇಕು, ಪ್ರೀತಿ ಇರಬೇಕು. ವಿಶ್ವಾಸ-ಕೃತಜ್ಞತೆ ಜೊತೆಯಾಗಬೇಕು. ಹಬ್ಬದ ನೆಪದಲ್ಲಿ ಸಂ-ಕ್ರಾಂತಿ ನಮ್ಮ ಬದುಕಲ್ಲಿ ನಡೆದು ಹೋಗಬೇಕು. ಸಂಕ್ರಾಂತಿ ಅಂಥದ್ದೇ ಆಗಿರಲಿ. ಐಶ್ವರ್ಯ, ನೆಮ್ಮದಿ, ಖುಷಿ, ರಂಗು, ಆರೋಗ್ಯ, ನಲಿವು, ತೃಪ್ತಿ, ಹುಮ್ಮಸ್ಸು, ಇಷ್ಟಾರ್ಥ ಎಲ್ಲರಿಗೂ ಸಿದ್ಧಿಸಲಿ. ಸಂಭ್ರಮ, ಸೊಬಗು, ಸಮೃದ್ಧಿ ಎಲ್ಲರ ಬಾಳಿನಲ್ಲೂ ತುಂಬಿ ತುಳುಕಲಿ. ಎಲ್ಲರ ಒಳಿತಿಗಾಗಿ ಹರಕೆ-ಹಾರೈಕೆ. **ಕೌಶಲ :** ಬರೆಯುವುದು. **ಸಾಮರ್ಥ್ಯ :** ಸರಳ, ಕ್ರಿಯಾತ್ಮಕ ಸಾಂದರ್ಭಿಕ ಭಾಷಾಂಶ ನಿಯಮಗಳನ್ನು ಅರ್ಥಮಾಡಿಕೊಂಡು ಬರವಣಿಗೆಯಲ್ಲಿ ಬಳಸುವುದು. **ಆಶಯ :** ನಮ್ಮ ಆಚರಣೆಗಳನ್ನು ಅರ್ಥಪೂರ್ಣವಾಗಿ ಮಾಡಬೇಕು. ಯಾವುದೇ ಹಬ್ಬದಲ್ಲಿ ಸಂಸ್ಕೃತಿ ಇರಬೇಕು. ಅರ್ಥಪೂರ್ಣವಾದ ವಿಚಾರ ಇರಬೇಕು, ಪ್ರೀತಿ ಇರಬೇಕು. ಹೀಗೆ ಮಾಡಿದಾಗಲೇ ನಮ್ಮ ಆಚರಣೆಗಳಿಗೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಎಲ್ಲವೂ ಯಾಂತ್ರಿಕವಾಗುತ್ತದೆ. ಆಧುನಿಕ ಬದುಕು ನಮ್ಮ ಆಚರಣೆಗಳ ಮೂಲಸತ್ವವನ್ನು ಮರೆಮಾಚುತ್ತಿದೆ. ಹಾಗಾಗಬಾರದು. ಮನೆಯ ಹಬ್ಬಗಳಿರಲಿ, ಊರಿನ ಹಬ್ಬಗಳಿರಲಿ, ರಾಷ್ಟ್ರೀಯ ಹಬ್ಬಗಳಿರಲಿ, ನಾಡಹಬ್ಬಗಳಿರಲಿ ಇವೆಲ್ಲದರ ಅರ್ಥಪೂರ್ಣ ಆಚರಣೆ ನಡೆಯಲಿ.

ಪದಗಳ ಅರ್ಥword meanings

KannadaPronunciationMeaning
ಸಂಕ್ರಾಂತಿದಾಟುವಿಕೆ, ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವ ದಿನ; ಕಿಚ್ಚು-ಬೆಂಕಿ; 'ಟೊ' ಬಿಡು-ವಾತುಬಿಡು; ಪಟೇಲ-ಹಿಂದೆ ಊರಿನ ಕ್ಷೇಮಸಮಾಚಾರಗಳನ್ನು ನೋಡಿಕೊಳ್ಳುತ್ತಿದ್ದ ಹಿರಿಯ; ಮೀಯು-ಸ್ನಾನ ವಾಡು; ತರಹೇವಾರಿ-ವಿಧವಿಧವಾದ; ಬ್ಯುಸಿ-ಬಿಡುವಿಲ್ಲದಿರುವುದು (ಇಂಗ್ಲೀಷ್ ಪದ); ಪ್ಯಾಕ್ ಮಾಡು-ಪೊಟ್ಟಣ ಕಟ್ಟು; ರೆಡಿಮೇಡ್-ಸಿದ್ಧವಾದ; ಫ್ಯಾಬ್ ಮಾಲ್-ಆಧುನಿಕ ಮಾರುಕಟ್ಟೆಯ ಒಂದು ರೂಪ
**'ಸಂಕ್ರಾಂತಿಯಂದು ಸುಖದುಃಖ'** ಈ ಪ್ರಬಂಧವನ್ನು ಮಣಿಕಾಂತ್ ಅವರ **'ಅಮ್ಮ ಹೇಳಿದ ಎಂಟು ಸುಳ್ಳುಗಳು'** ಎಂಬ ಕೃತಿಯಿಂದ ಆರಿಸಲಾಗಿದೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಸಂಕ್ರಾಂತಿ ಯಾವ ರೀತಿಯ ಹಬ್ಬ?

    Answer

    ಸಂಕ್ರಾಂತಿ ದನಗಳ ಹಬ್ಬ.

  2. ೨. ಕಿಚ್ಚು ಹಾಯಿಸುವುದು ಎಂದರೆ ಏನು?

    Answer

    ಕಿಚ್ಚು ಹಾಯಿಸುವುದು ಎಂದರೆ ದನಕರುಗಳನ್ನು ಬೆಂಕಿಯಲ್ಲಿ ಜಿಗಿಸುವುದು.

  3. ೩. ಹಳ್ಳಿಗಳಲ್ಲಿ ಪಟೇಲರು ಏನು ಕೊಡಿಸಿ ರಾಜಿ ಮಾಡುತ್ತಿದ್ದರು?

    Answer

    ಹಳ್ಳಿಗಳಲ್ಲಿ ಪಟೇಲರು ಎಳ್ಳು ಬೆಲ್ಲ ಕೊಡಿಸಿ ರಾಜಿ ಮಾಡಿಸುತ್ತಿದ್ದರು.

  4. ೪. ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಏನು ಬಂದು ನಿಂತಿವೆ?

    Answer

    ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಟ್ರ್ಯಾಕ್ಟರ್‌ಗಳು ಬಂದು ನಿಂತಿವೆ.

  5. ೫. ನಮ್ಮ ಸಂಕ್ರಾಂತಿಯಲ್ಲಿ ಏನು ಇರಬೇಕು?

    Answer

    ನಮ್ಮ ಸಂಕ್ರಾಂತಿಯಲ್ಲಿ ಸಂಸ್ಕೃತಿ, ಸಂಪ್ರದಾಯ, ಪ್ರೀತಿ, ವಿಶ್ವಾಸ ಮತ್ತು ಕೃತಜ್ಞತೆ ಇರಬೇಕು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಸಂಕ್ರಾಂತಿಯಲ್ಲಿ ದನಗಳಿಗೆ ಏನು ಮಾಡಲಾಗುತ್ತದೆ?

    Answer

    ಸಂಕ್ರಾಂತಿಯಲ್ಲಿ ದನಗಳಿಗೆ ಪೂಜೆ ಮಾಡಲಾಗುತ್ತದೆ. ಅವುಗಳನ್ನು ಸಿಂಗರಿಸಿ, ಮೆರವಣಿಗೆ ಮಾಡಿ, ಕಿಚ್ಚು ಹಾಯಿಸಲಾಗುತ್ತದೆ. ಹಿಂದೆ ಅವುಗಳ ಮೈ ತೊಳೆದು, ಕೊಂಬಿಗೆ ಬಣ್ಣ ಬಳಿದು, ಹೂ ಮುಡಿಸಿ ಅಲಂಕರಿಸುತ್ತಿದ್ದರು.

  2. ೨. ಸಂಕ್ರಾಂತಿಯಲ್ಲಿ ಎಳ್ಳು, ಬೆಲ್ಲ, ಕೊಬ್ಬರಿ ಏಕೆ ತಿನ್ನಬೇಕು?

    Answer

    ಚಳಿಗಾಲದಲ್ಲಿ ಚರ್ಮ ಒಡೆದು ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಎಳ್ಳು, ಕೊಬ್ಬರಿ, ಕಡಲೆಯಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುವುದರಿಂದ ಅವುಗಳನ್ನು ತಿನ್ನುವುದರಿಂದ ದೇಹ ಸರಿಯಾಗುತ್ತದೆ. ಹೀಗಾಗಿ ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ-ಕೊಬ್ಬರಿ ತಿನ್ನಬೇಕು.

  3. ೩. ಸಂಕ್ರಾಂತಿಯ ದಿನದಿಂದ ಸೂರ್ಯನ ಚಲನೆ ಹೇಗಿರುತ್ತದೆ?

    Answer

    ಸಂಕ್ರಾಂತಿಯ ದಿನದಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸಂಚರಿಸಲು ಪ್ರಾರಂಭಿಸುತ್ತಾನೆ. ಆಗ ಹಗಲು ದೀರ್ಘವಾಗಿ ರಾತ್ರಿಯ ಅವಧಿ ಕಡಿಮೆಯಾಗುತ್ತದೆ.

  4. ೪. ಎಳ್ಳು-ಬೆಲ್ಲ ನೀಡುವುದು ಇಂದಿನ ಕಾಲದಲ್ಲಿ ಹೇಗಿದೆ?

    Answer

    ಇಂದು ಎಳ್ಳು-ಬೆಲ್ಲ ನೀಡುವುದು ಪ್ರತಿಷ್ಠೆಯ ವಿಚಾರವಾಗಿದೆ. ಜಾಸ್ತಿ ಕೊಟ್ಟವರು ಶ್ರೀಮಂತರು ಎಂಬ ಭಾವನೆ ಬಂದಿದೆ. ದಪ್ಪ ಸಕ್ಕರೆ ಅಚ್ಚು ಸೇರಿಸಿ ಪ್ಯಾಕ್ ಮಾಡಲಾಗುತ್ತದೆ, ರೆಡಿಮೇಡ್ ಪ್ಯಾಕ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ, ಕಳಪೆ ಮಾಲೂ ಬಂದಿದೆ.

ಇ. ಹೊಂದಿಸಿ ಬರೆಯಿರಿ.

  1. ಅ - ಆ

  2. ಯುಗಾದಿ - ಎಳ್ಳು-ಬೆಲ್ಲ

  3. ದೀಪಾವಳಿ - ದಸರಾ

  4. ರಂಜಾನ್ - ಯೇಸು ಹುಟ್ಟಿದ ದಿನ

  5. ಕ್ರಿಸ್‌ಮಸ್ - ಬೇವು-ಬೆಲ್ಲ

  6. ವಿಜಯದಶಮಿ - ಬೆಳಕಿನ ಹಬ್ಬ

  7. ಮಕರ ಸಂಕ್ರಾಂತಿ - ಉಪವಾಸದ ಪರ್ವದಿನ

ಈ. ಕೆಳಗೆ ನೀಡಿರುವ ಪಟ್ಟಿಯಲ್ಲಿ ರಾಷ್ಟ್ರೀಯ/ನಾಡ ಹಬ್ಬಗಳ ಮಹತ್ವವನ್ನು ಐದು-ಆರು ವಾಕ್ಯಗಳಲ್ಲಿ ತಿಳಿಸಿ.

  1. ೧. ಸ್ವಾತಂತ್ರ್ಯೋತ್ಸವ

  2. ೨. ಗಣರಾಜ್ಯದಿನ

  3. ೩. ಕನ್ನಡ ರಾಜ್ಯೋತ್ಸವ

ವ್ಯಾಕರಣ ಮಾಹಿತಿ

ಲೇಖನ ಚಿಹ್ನೆಗಳು

  1. ನಾವು ಬರೆದ ವಿಚಾರಗಳು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗಲೆಂದು ಅಲ್ಲಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನ ಚಿಹ್ನೆಗಳೆಂದು ಕರೆಯುವರು.

ಅ) ಪೂರ್ಣವಿರಾಮ (.)

  1. * ಅರ್ಥಪೂರ್ಣವಾಕ್ಯದ ಕೊನೆಯನ್ನು ಸೂಚಿಸಲು ಬಳಸುವ ಚಿಹ್ನೆ.

  2. ಉದಾ : ನನ್ನ ಊರು ಚೆಂದ.

  3. * ಅಂಕಿ, ಅಕ್ಷರಗಳನ್ನು ಒಂದೊಂದಾಗಿ ಪಟ್ಟಿ ಮಾಡುವಾಗ ಅಂಕಿ, ಅಕ್ಷರದ ನಂತರ ಪೂರ್ಣವಿರಾಮ ಹಾಕಬೇಕು.

  4. ೧. ಅ. ೨. ಇ. ೩. ಉ.

  5. * ಸಂಕ್ಷೇಪಗಳನ್ನು ಬಳಸುವಾಗ ಪ್ರತಿ ಸಂಕ್ಷೇಪಾಕ್ಷರದ ನಂತರ ಪೂರ್ಣವಿರಾಮ ಬಳಸುವುದು ವಾಡಿಕೆ.

  6. ಕ.ಸಾ.ಪ. (ಕನ್ನಡ ಸಾಹಿತ್ಯ ಪರಿಷತ್ತು) ಸಾ.ಶ. (ಸಾಮಾನ್ಯ ಶಕ)

  7. * ಕೆಲವು ಸಂಕ್ಷೇಪಗಳನ್ನು ಪೂರ್ಣವಿರಾಮವಿಲ್ಲದೇ ಬರೆಯುವುದೂ ರೂಢಿಯಲ್ಲಿದೆ.

  8. ಕುವೆಂಪು - (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ)

  9. ಚಂಪಾ - (ಚಂದ್ರಶೇಖರ ಪಾಟೀಲ)

  10. ವಿಸೀ - (ವಿ.ಸೀತಾರಾಮಯ್ಯ)

  11. ಪಾಪ - (ಪಾಟೀಲ ಪುಟ್ಟಪ್ಪ)

ಆ) ಅಲ್ಪವಿರಾಮ (,)

  1. * ಮಾತಿನಲ್ಲಿ ಧ್ವನಿವಿರಾಮ ಇರುವ ಕಡೆ, ವಾಕ್ಯಗಳಲ್ಲಿ ಅರ್ಥಸ್ಪಷ್ಟತೆಗಾಗಿ, ದೀರ್ಘ ವಾಕ್ಯದಲ್ಲಿ ಅರ್ಥದ ಗೊಂದಲವನ್ನು ಹೋಗಲಾಡಿಸಲು, ಸರಿಯಾದ ಅರ್ಥ ತಿಳಿಯುವಂತೆ ಮಾಡಲು ಬಳಸುವ ಚಿಹ್ನೆ.

  2. ಉದಾ: ಬಲಮುರಿ ಪುಟ್ಟದಾದ, ಸುಂದರ, ಆಕರ್ಷಣೀಯ ಸ್ಥಳ.

  3. * ಸಂಬೋಧನೆಯ ಅನಂತರ ಅಲ್ಪವಿರಾಮ ಬಳಸಬೇಕು.

  4. ಮಾನ್ಯರೆ, ನಿಮ್ಮ ಪತ್ರ ತಲುಪಿದೆ.

  5. ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಬರೆಯಲು ಸಿದ್ಧರಾಗಿರಿ.

ಇ) ಅರ್ಧ ವಿರಾಮ (;)

  1. * ಇದು ಅಲ್ಪವಿರಾಮದಂತೆ ಬಳಕೆಯಾದರೂ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ವಾಕ್ಯ ಅಥವಾ ವಾಕ್ಯಾಂಶ ದೊಡ್ಡ ವಾಕ್ಯವೊಂದರ ಭಾಗವಾಗಿದ್ದು, ಅರ್ಥಪೂರ್ಣತೆ ಹೊಂದಿ ಮುಂದುವರಿಯುವಂತಿದ್ದರೆ ಅಂತಹ ವಾಕ್ಯ ಅಥವಾ ವಾಕ್ಯಾಂಶದ ಅನಂತರ ಅರ್ಧವಿರಾಮ ಬಳಸುವುದು ರೂಢಿ.

  2. ಉದಾ: ಸಾಲುಮರದ ತಿಮ್ಮಕ್ಕ ಮರಗಳನ್ನು ಬೆಳೆಸಿದರು; ಈಗ ಅವರಿಗೆ ವಯಸ್ಸಾಗಿದೆ; ಮರವನ್ನು ನೋಡುವುದರಲ್ಲಿ ಅವರಿಗೆ ಸಂತೋಷ; ಮುಂದೆ ಹೀಗೆ ಮರಗಳನ್ನು ನೆಡುವವರು ಯಾರು ಎಂಬುದೇ ಯೋಚನೆ; ಮುಂದಿನ ಜನಾಂಗ ಈ ಬಗ್ಗೆ ಚಿಂತಿಸಬೇಕು.

ಈ) ವಿವರಣ ಚಿಹ್ನೆ (:)

  1. * ವಿಷಯಕ್ಕೆ ವಿವರಣೆ ನೀಡಲು ವಿವರಣ ಚಿಹ್ನೆ ಬಳಕೆಯಾಗುತ್ತದೆ. ಇದು ಪೂರ್ಣವಿರಾಮದಂತೆ ವಾಕ್ಯದ ಕೊನೆಯಲ್ಲಿ ಬಳಕೆಯಾಗುತ್ತದೆ.

  2. ನಗರ ಜೀವನ ಹಾಳಾಗಲು ಕಾರಣಗಳು : ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಾನೂನುಬಾಹಿರವಾಗಿ ನಡೆಯುವ ನಿರ್ಮಾಣಗಳು ಮುಂತಾದವು.

  3. * ಕೆಲವು ನಮೂನೆ, ವೈಯಕ್ತಿಕ ವಿವರ ಮುಂತಾದ ಬಳಕೆಯಲ್ಲಿ ವಿವರಣ ಚಿಹ್ನೆ ನೀಡಬೇಕು.

  4. ಹೆಸರು :

  5. ಸ್ಥಳ :

  6. ಹುಟ್ಟಿದ ದಿನಾಂಕ :

  7. ಸೂಚನೆ :

ಉ) ಪ್ರಶ್ನೆಸೂಚಕ (?)

  1. * ಪ್ರಶ್ನಾರ್ಥಕ ವಾಕ್ಯದ ಕೊನೆಯಲ್ಲಿ ಬಳಸಬೇಕು.

  2. ಉದಾ : ನೀವು ಯಾರು? ನಿಮ್ಮ ಹೆಸರೇನು?

  3. * ಪ್ರಶ್ನಾರ್ಥಕ ವಾಕ್ಯದ ರೂಪದಲ್ಲಿಲ್ಲದಿದ್ದರೂ ಅರ್ಥದ ದೃಷ್ಟಿಯಿಂದ ಪ್ರಶ್ನೆ ಅಡಕವಾಗಿದ್ದರೆ ಅಲ್ಲಿ ಪ್ರಶ್ನೆಸೂಚಕ ಬಳಸಬಹುದು.

  4. ಜನವರಿಯಲ್ಲಿ ಏಳನೆಯ ತರಗತಿ ಪರೀಕ್ಷೆ?

ಊ) ಭಾವಸೂಚಕ (!)

  1. * ಸಂತೋಷ, ದುಃಖ, ಆಶ್ಚರ್ಯ, ಕೋಪ ಮುಂತಾದ ಭಾವನೆಗಳನ್ನು ಸೂಚಿಸುವ ಪದ ಅಥವಾ ವಾಕ್ಯದ ಕೊನೆಯಲ್ಲಿ ಭಾವಸೂಚಕ ಬಳಕೆಯಾಗುತ್ತದೆ

  2. ಓ ಬನ್ನೀ, ಬನ್ನೀ !

  3. ಹೌದಾ !

  4. ಛೇ !

  5. ಭಾರತದಲ್ಲಿ ಎಷ್ಟೊಂದು ಭಾಷೆಗಳು!

ಋ) ವಾಕ್ಯವೇಷ್ಟನ (‘ ’)

  1. * ವಾಕ್ಯದಲ್ಲಿ ಯಾವುದಾದರೂ ಅಕ್ಷರ, ಪ್ರತ್ಯಯ, ಪದ, ಪದಪುಂಜವನ್ನು ವಿಶೇಷವಾಗಿ ಹೇಳಬೇಕಾದಾಗ ವಾಕ್ಯವೇಷ್ಟನ ಚಿಹ್ನೆ ಬಳಸಬೇಕು. ಉದಾ : ಶಾಲೆಯ ಮುಂಭಾಗ ರಸ್ತೆಯಲ್ಲಿ ‘ನಿಧಾನವಾಗಿ ಚಲಿಸಿ’ ಎಂಬ ಫಲಕವನ್ನು ಅಳವಡಿಸಬೇಕು.

  2. * ಬರವಣಿಗೆಯಲ್ಲಿ ವಿಷಯದ ಭಾಗವಾಗಿ ಬರುವ ವಿಶಿಷ್ಟ ಪದ, ಪದಪುಂಜ, ಲೇಖನ, ಪುಸ್ತಕ, ಪತ್ರಿಕೆ ಮುಂತಾದುವುಗಳನ್ನು ವಾಕ್ಯವೇಷ್ಟನ ಚಿಹ್ನೆಯೊಳಗೆ ಬರೆಯಬೇಕು.

  3. ‘ನೆನಪಿನ ದೋಣಿಯಲ್ಲಿ’ ಎಂಬ ‘ಆತ್ಮಕಥನ’ದ ಕರ್ತೃ ಕುವೆಂಪುರವರು. ಇವರು ‘ಮಲೆಗಳಲ್ಲಿ ಮದುಮಗಳು’, ‘ಕಾನೂರು ಹೆಗ್ಗಡಿತಿ’ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ.

  4. * ಬರವಣಿಗೆಯಲ್ಲಿ ಯಾವುದಾದರೂ ಭಾಗವೊಂದನ್ನು ಅಳವಡಿಸಿದಾಗ ಅದರ ಪ್ರತ್ಯೇಕತೆ ಸೂಚಿಸಲು ಆ ಭಾಗವನ್ನು ವಾಕ್ಯವೇಷ್ಟನ ಚಿಹ್ನೆಯೊಳಗೆ ಬರೆಯಬೇಕು.

  5. ‘ಭಾರತ ಜನನಿಯ ತನುಜಾತೆ’ಯಾದ ‘ಕರ್ನಾಟಕ ಮಾತೆ’ ಇಂದು ಭಾರತದ ಭೂಪಟದಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳಿಂದ ರಾರಾಜಿಸುತ್ತಿದ್ದಾಳೆ.

ಎ) ಉದ್ಧರಣ ಚಿಹ್ನೆ (“ ”)

  1. * ನಮ್ಮ ಬರವಣಿಗೆಯಲ್ಲಿ ಮತ್ತೊಬ್ಬರ ಮಾತುಗಳನ್ನು ಬಳಸಿದಾಗ ಅವರ ಮಾತುಗಳನ್ನು ಎಂದು ಎಂಬ ಪದದ ಸಹಾಯದಿಂದ ಅವರ ಮಾತುಗಳನ್ನು ಉದ್ಧರಿಸಬಹುದು.

  2. ದುಃಖ ಮತ್ತು ಸುಖದ ಬಗ್ಗೆ ಹೇಳುವಾಗ “ದುಃಖಕ್ಕೆ ಕಾರಣ ಸಿಕ್ಕಷ್ಟು ಬೇಗ ಸುಖಕ್ಕೆ ಕಾರಣ ಸಿಗುವುದಿಲ್ಲ” ಎಂದು ಸಾಹಿತಿ ಪಿ. ಲಂಕೇಶ್ ಅವರು ಹೇಳಿದ್ದಾರೆ.

Interactive Lab

ಸಂಕ್ರಾಂತಿದಾಟುವಿಕೆ, ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವ ದಿನ; ಕಿಚ್ಚು-ಬೆಂಕಿ; 'ಟೊ' ಬಿಡು-ವಾತುಬಿಡು; ಪಟೇಲ-ಹಿಂದೆ ಊರಿನ ಕ್ಷೇಮಸಮಾಚಾರಗಳನ್ನು ನೋಡಿಕೊಳ್ಳುತ್ತಿದ್ದ ಹಿರಿಯ; ಮೀಯು-ಸ್ನಾನ ವಾಡು; ತರಹೇವಾರಿ-ವಿಧವಿಧವಾದ; ಬ್ಯುಸಿ-ಬಿಡುವಿಲ್ಲದಿರುವುದು (ಇಂಗ್ಲೀಷ್ ಪದ); ಪ್ಯಾಕ್ ಮಾಡು-ಪೊಟ್ಟಣ ಕಟ್ಟು; ರೆಡಿಮೇಡ್-ಸಿದ್ಧವಾದ; ಫ್ಯಾಬ್ ಮಾಲ್-ಆಧುನಿಕ ಮಾರುಕಟ್ಟೆಯ ಒಂದು ರೂಪ
**'ಸಂಕ್ರಾಂತಿಯಂದು ಸುಖದುಃಖ'** ಈ ಪ್ರಬಂಧವನ್ನು ಮಣಿಕಾಂತ್ ಅವರ **'ಅಮ್ಮ ಹೇಳಿದ ಎಂಟು ಸುಳ್ಳುಗಳು'** ಎಂಬ ಕೃತಿಯಿಂದ ಆರಿಸಲಾಗಿದೆ