CRECT Education

Class 7 Kannada Lesson 19: Savitribai Phule – Practice & Play | KTBS First Language

Description

Practice & Play for Class 7 Kannada, Lesson 19: Savitribai Phule. Five comprehension questions about the first female teacher of India — question in English, answer in Kannada. From the KTBS Class 7 First Language textbook.

ಗದ್ಯ (prose) · ಡಾ. ಎಚ್.ಎಸ್. ಅನುಪಮ

ಪಠ್ಯFull text

ಒಂದೂವರೆ ಶತಮಾನದ ಹಿಂದೆ.. ಅದಿನ್ನೂ ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳದಿದ್ದ ಕಾಲ. ಗಾಂಧಿ, ಅಂಬೇಡ್ಕರ್‌ರಂಥ ದೂರದೃಷ್ಟಿಯ ಜನನಾಯಕರು ಹುಟ್ಟಿರದಿದ್ದ ಕಾಲ. ಆಳುವವರ ನಿರಂತರ ಬದಲಾವಣೆಯಿಂದ ಕ್ಷೋಭೆಗೊಂಡ ಸಮಾಜ ಸ್ವವಿಮರ್ಶೆಯನ್ನು ಮರೆತಂಥ ಕಾಲ. ಬಂಗಾಲ ಮತ್ತು ಉತ್ತರ ಭಾರತದ ಕೆಲ ಸಮಾಜ ಸುಧಾರಕರು ಇಂಗ್ಲಿಷ್ ಶಿಕ್ಷಣ ಪಡೆದು ಆಗಷ್ಟೇ ಭಾರತದ ಸಾಮಾಜಿಕ ಅನಿಷ್ಟಗಳ ಬಗೆಗೆ ಮಾತನಾಡತೊಡಗಿದ್ದರು. ಬಾಲ್ಯವಿವಾಹ ಹಾಗೂ ಸತಿಪದ್ಧತಿಯ ರದ್ದತಿ ಕುರಿತು ಕೇಳಿ ಬರತೊಡಗಿದ್ದವು. ಅಕ್ಷರ ಕಲಿಯಲು ತಾವು ಮಾತ್ರ ಅರ್ಹ ಎಂದುಕೊಂಡ ಜಾತಿಗಳ ಹೊರತು ಮತ್ತಾರಿಗೂ ಕಲಿಕೆಗೆ ಅವಕಾಶವಿರಲಿಲ್ಲ. ಆ ಕಾಲದ ಮಹಿಳೆಯರ ಶಿಕ್ಷಣ ಕುರಿತು ಹೇಳುವಂತೆಯೇ ಇಲ್ಲ. “ಹೆಣ್ಣು ಅಕ್ಷರ ಕಲಿತರೆ ಎಲ್ಲರಿಗೂ ಪತ್ರ ಬರೆಯತೊಡಗುತ್ತಾಳೆ, ಆಗ ಅವಳ ಗಂಡ ತಿನ್ನುವ ಅನ್ನದ ಅಗುಳು ಹುಳವಾಗಿ ಅವನು ಕಾಯಿಲೆ ಹಿಡಿದು ಬೇಗ ತೀರಿಕೊಳ್ಳುತ್ತಾನೆ” ಎಂದು ಹೇಳಲಾಗುತ್ತಿತ್ತು. ಹೆಣ್ಣು ಮಗು ತನ್ನ ಬಾಲ್ಯದ ಮುಗ್ಧತೆಯಲ್ಲಿ ಈ ಜಗತ್ತಿಗೆ ಕಣ್ಣಿಡುವ ಹೊತ್ತಿಗೆ ಅವಳ ಮದುವೆಯಾಗಿ, ಯಾರದೋ ಹೆಂಡತಿಯಾಗಿ, ಸೊಸೆಯಾಗಿ ಕೊನೆಗೆ ಅಮ್ಮನಾಗಿ ಬಿಟ್ಟಿರುತ್ತಿದ್ದಳು. ಕುಟುಂಬ ನಿರ್ವಹಣೆಗಾಗಿ, ಕುಟುಂಬ ನಿರ್ವಹಣೆಯಿಂದಲೇ ಅವಳ ವ್ಯಕ್ತಿತ್ವ ರೂಪುಗೊಂಡು ಅಲ್ಲೇ ಕಳೆದುಹೋಗುತ್ತಿತ್ತು. ಹೆಣ್ಣು ಮಕ್ಕಳು ಯಾವತ್ತೂ ಪ್ರಶ್ನಿಸಬಾರದಂತೆ ಹೊರುವ, ಹೆರುವ, ಪೊರೆಯುವ ಕೊನೆಮೊದಲಿಲ್ಲದ ಕೆಲಸಗಳಲ್ಲಿ ಅವರನ್ನು ತೊಡಗಿಸಲಾಗುತ್ತಿತ್ತು. ಒಟ್ಟಾರೆ ಹೇಳುವುದಾದರೆ ದಲಿತ-ಶೂದ್ರ, ಮಹಿಳೆಯರಿಗೆ ಶಾಲೆ ಎನ್ನುವುದು ಕನಸಿನಲ್ಲೂ ಮೂಡಲಾಗದ ಅಸ್ಪಷ್ಟ ಕಲ್ಪನೆಯಾಗಿಯೇ ಉಳಿದಿತ್ತು. (Portrait of Savitribai Phule is shown) ಈ ಪರಿಸ್ಥಿತಿ ಇರುವ ಕಾಲದಲ್ಲಿಯೇ ಸಾವಿತ್ರಿಬಾಯಿ ಫುಲೆಯವರು ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಹಳ್ಳಿಯಲ್ಲಿ ೧೮೩೧ ಜನವರಿ ೩ ರಲ್ಲಿ ಜನಿಸಿದರು. ಸಾವಿತ್ರಿ ಬಾಯಿಯವರಿಗೆ ೯ ವರ್ಷವಾದಾಗ ಮದುವೆಯಾಯಿತು. ಅವರನ್ನು ಮದುವೆಯಾದ ಹುಡುಗ ಸಾಮಾನ್ಯ ವರನಾಗಿರಲಿಲ್ಲ. ಅವರು ಇಂಗ್ಲಿಷ್ ಕಲಿತು ಅರಿವಿನ ಸ್ಫೋಟಕ್ಕೆ ಒಳಗಾಗಿದ್ದ ಜ್ಯೋತಿಬಾ ಫುಲೆ. ಶಾಲೆ ಕಲಿಯದ ಹೆಂಡತಿ ಸಾವಿತ್ರಿರವರಿಗೆ ಗಂಡನೇ ಮೊದಲ ಶಿಕ್ಷಕರಾಗಿ ಅಕ್ಷರ ಕಲಿಸಿದರು. ನಂತರ ಜ್ಯೋತಿಬಾ ಫುಲೆಯವರು ಅಸ್ಪೃಶ್ಯ ಹಾಗೂ ತಳ ಸಮುದಾಯದ ಮಕ್ಕಳಿಗೆಂದು ಶಾಲೆ ತೆರೆದಾಗ ಗಂಡುಮಕ್ಕಳಂತೆಯೇ ಹೆಣ್ಣುಮಕ್ಕಳಿಗೂ ಶಿಕ್ಷಣದ ಅವಶ್ಯಕತೆ ಇದೆ ಎಂದು ಅರಿತರು. ಹೆಣ್ಣುಮಕ್ಕಳ ಶಾಲೆ ತೆರೆಯಲು ಶಿಕ್ಷಕಿಯರ ಕೊರತೆಯಿತ್ತು. ಆಗ ಜ್ಯೋತಿಬಾ ಫುಲೆ ರವರು ಶಿಕ್ಷಕ ತರಬೇತಿ ಪಡೆಯಲೆಂದು ಸಾವಿತ್ರಿಬಾಯಿಯವರನ್ನು ಅಹ್ಮದ್ ನಗರದ ಫಾರ್ಮಲ್ ಸ್ಕೂಲಿಗೆ ಕಳಿಸಿದರು. ಸಾವಿತ್ರಿಬಾಯಿಯವರ ಜೊತೆಗೆ ಫಾತಿಮಾ ಶೇಕ್ ಎನ್ನುವ ಮಹಿಳೆಯೂ ತರಬೇತಿ ಪಡೆದು ನಂತರ ಜ್ಯೋತಿಬಾ ಫುಲೆಯವರ ಶಾಲೆಗಳಲ್ಲಿ ಕೆಲಸ ಮಾಡಿದರು. ತರಬೇತಿ ಮುಗಿಸಿ ಸಾವಿತ್ರಿಬಾಯಿಯವರು ಬಂದ ಮೇಲೆ ೯ ವಿದ್ಯಾರ್ಥಿಗಳೊಂದಿಗೆ ಪುಣೆಯಲ್ಲಿ ೧೮೪೮ರಲ್ಲಿ ಮೊದಲ ಶಾಲೆ ಶುರುಮಾಡಿದರು. ಅಹ್ಮದ್ ನಗರದ ಸದಾಶಿವ ಗೋವಂದೆ ಮಕ್ಕಳಿಗೆ ಉಚಿತ ಪುಸ್ತಕ ಒದಗಿಸಿದರು. ಆದರೆ ಶಾಲೆಗಾಗಿ ಸ್ಥಳ ಕೊಡುವವರು ಮನಸ್ಸು ಬದಲಾಯಿಸುತ್ತ ಇದ್ದುದರಿಂದ ಶಾಲೆಯೂ ನಿರಂತರ ಸ್ಥಳ ಬದಲಾಯಿಸುತ್ತ, ಮುಚ್ಚುತ್ತ-ತೆರೆಯುತ್ತ ಹೋಯಿತು. ೧೮೫೧ರಲ್ಲಿ ಎರಡನೇ ಶಾಲೆ ಶುರುವಾಯಿತು. ೧೮೫೨ರಲ್ಲಿ ಮಹಿಳಾ ಸೇವಾಮಂಡಲ ಶುರುವಾಯಿತು. ಧಾರ್ಮಿಕ, ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ ಸಾವಿತ್ರಿಬಾಯಿಯವರು ತಾವು ಮಾಡುತ್ತಿರುವ ಕೆಲಸದ ಬಗೆಗೆ ಅಚಲ ಶ್ರದ್ಧೆಯನ್ನಿಟ್ಟುಕೊಂಡಿದ್ದರು. ಶಾಲೆಗೆ ಹೋಗುವಾಗ ದಾರಿ ಮೇಲೆ ತೂರಿ ಬರುವ ಕಲ್ಲು, ಮಣ್ಣು, ಸಗಣಿಗಳ ದಾಳಿಗೆ ಎದೆಗುಂದದೇ ಪಾಠ ಹೇಳಿದರು. ಫುಲೆ ದಂಪತಿಗಳು ಒಂದಾದ ಮೇಲೊಂದು ಶಾಲೆ ತೆರೆಯತೊಡಗಿದಾಗ ಅಕ್ಷರ ಕಲಿಯಬಾರದವರಿಗೆ ಕಲಿಸುತ್ತ ಧರ್ಮದ್ರೋಹ ಮಾಡುತ್ತಿದ್ದಾರೆ ಎಂಬ ಆಪಾದನೆಗಳು ಬಂದವು. ಬೆದರಿಕೆಗಳೂ ಬಂದವು. ಅದೆಲ್ಲದರಿಂದ ಒತ್ತಡಕ್ಕೊಳಗಾದ ಜ್ಯೋತಿಬಾ ಫುಲೆಯವರ ತಂದೆ ಮಗಸೊಸೆಯನ್ನು ಮನೆಯಿಂದ ಹೊರಕಳಿಸಿದರು. ಯುವದಂಪತಿ ಅಂಜದೆ ಬೇರೆ ಮನೆ ಮಾಡಿಕೊಂಡರು. ಸಾವಿತ್ರಿ ಬಾಯಿಯವರ ಅಣ್ಣ ಕೂಡಾ ಅಸ್ಪೃಶ್ಯರಿಗೇಕೆ ಶಿಕ್ಷಣ ಕೊಡುತ್ತಿದ್ದೀ ಎಂದು ಅವರ ಬಳಿ ವಾದಿಸಿದ್ದರು. ಬಂಧುಬಳಗಕ್ಕೂ ಹಿತೈಷಿಗಳಿಗೂ ಉತ್ತರಿಸುತ್ತ, ಮನವೊಲಿಸುತ್ತ ಫುಲೆ ದಂಪತಿಗಳು ತಮ್ಮ ಕೆಲಸ ಮುಂದುವರೆಸಿದರು. ಬೋಧಿಸುವವರು ಎಷ್ಟು ಯಶಸ್ವಿ ಎಂದು ತಿಳಿಯಬೇಕಾದರೆ ಅವರ ಶಿಷ್ಯಗಣವನ್ನು ನೋಡಬೇಕಲ್ಲವೇ? ಫುಲೆ ಶಾಲೆಯಲ್ಲಿ ಕಲಿತ ಹೆಣ್ಣುಮಕ್ಕಳು ವೈಚಾರಿಕ ಜಾಗೃತಿ ಪಡೆದು ಕೆಲವರು ಬರಹಗಾರರಾದರು. ಭಾರತದ ಮೊತ್ತಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಇವರ ಶಿಷ್ಯೆ. ಅವರು ಬರೆದ ‘ಸ್ತ್ರೀ-ಪುರುಷ ತುಲನ’ ಎಂಬ ಪುಟ್ಟ ಹೊತ್ತಗೆ ಇವತ್ತಿಗೂ ದಿಟ್ಟವಾಗಿ ಯುವತಿಯೊಬ್ಬಳು ಬರೆದ ಮೊದಲ ಭಾರತೀಯ ಸ್ತ್ರೀವಾದಿ ಬರಹವಾಗಿದೆ. ಮತ್ತೊಬ್ಬ ದಲಿತ ವಿದ್ಯಾರ್ಥಿನಿ ಮುಕ್ತಾಬಾಯಿಯವರು ಪ್ರಬಂಧಗಳು, ಹುಡುಗಿಯರು ಪಡೆಯುತ್ತಿದ್ದ ಅರಿವಿನ ಶಿಕ್ಷಣದ ಗುಣಮಟ್ಟ ತಿಳಿಸುತ್ತದೆ. ಅದುವರೆಗೂ ಅಸ್ಪೃಶ್ಯ ಸಮುದಾಯದ ಜನ ಬಾಯಾರಿದಾಗ ಹನಿ ನೀರನ್ನು ತಂತಾವೇ ಕೆರೆ, ಬಾವಿ, ನದಿಗಳಿಂದ ತೆಗೆದುಕೊಳ್ಳುವಂತಿರಲಿಲ್ಲ. ಫುಲೆ ದಂಪತಿಗಳು ೧೮೬೮ರಲ್ಲಿ ಎಲ್ಲರಿಗೂ ಬಳಕೆಗೆ ಮುಕ್ತವಾದ ನೀರಿನ ತೊಟ್ಟಿ ಕಟ್ಟಿದರು. ಜಾತಿ ತಾರತಮ್ಯ ಮತ್ತು ಶೋಷಣೆಯನ್ನು ಕೊನೆಗೊಳಿಸಬೇಕೆಂದರೆ ಚಿಂತನಾಶೀಲತೆಯನ್ನು, ಸತ್ಯ ತಿಳಿಯಬೇಕೆಂಬ ಹಂಬಲವನ್ನು ಜನರಲ್ಲಿ ಬಿತ್ತಬೇಕೆಂಬ ಮಹದಾಸೆಯಿಂದ ೧೮೭೩ ರಲ್ಲಿ ‘ಸತ್ಯಶೋಧಕ ಸಮಾಜ’ ಕಟ್ಟಿದರು. ಅದರ ಮೂಲತತ್ವ ‘ನಾವೆಲ್ಲರೂ ದೇವರ ಮಕ್ಕಳು; ದೇವರಿಗೂ ನಮಗೂ ಯಾವ ಮಧ್ಯವರ್ತಿಯ ಅವಶ್ಯಕತೆಯೂ ಇಲ್ಲ’ ಎನ್ನುವುದು. ಅದೇ ವರ್ಷ ಪುರೋಹಿತರಿಲ್ಲದೆ ಮೊದಲ ಮದುವೆ ಮಾಡಿಸಿದರು. ೧೮೭೪ರಲ್ಲಿ ಬ್ರಾಹ್ಮಣ ವಿಧವೆ ಕಾಶೀಬಾಯಿಯವರ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಸಾಕಿದರು. ಮುಂದೆ ಆತ ಓದಿ ವೈದ್ಯನಾದ. ಇಂಥ ಸಂಕಟಕಾಲದಲ್ಲಿ ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಸುವ, ಜಾತ್ಯತೀತ ಮೌಲ್ಯ ತುಂಬುವ ಅವಶ್ಯಕತೆಯಿದೆ. ನೆಲದಾಳದಲ್ಲಿ ಇಂದಿಗೂ ಅಲ್ಲೆಲ್ಲೋ ಇರುವ ಶುದ್ಧಜಲವನ್ನು, ಜಲದ ಕಣ್ಣನ್ನು ಅರಸಬೇಕಿದೆ. ಅಲ್ಪಸೂಚಿಯ ಕೆಲಸವನ್ನು ಶಿಕ್ಷಕಬಂಧುಗಳು ನಿಭಾಯಿಸಬೇಕಾಗಿದೆ. ದಿಕ್ಸೂಚಿಯಾಗಬಲ್ಲ, ಸತ್ಯದರ್ಶಿಯಾಗಬಲ್ಲ ಶಿಕ್ಷಣ ನೀಡುವಂಥ ಅತಿ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. **ಕೃತಿಕಾರರ ಪರಿಚಯ** (Portrait of Dr. H.S. Anupama is shown) ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವೇದಿಕೆ ‘ಮಂಥನ’ದ ಸಂಚಾಲಕರಾದ ಡಾ. ಎಚ್.ಎಸ್. ಅನುಪಮ ವೃತ್ತಿಯಲ್ಲಿ ವೈದ್ಯರು. ಇವರ ಸ್ಥಳ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲು. ಜನಿಸಿದ್ದು ೬-೨-೧೯೭೦ರಲ್ಲಿ. ‘ಕಾಡುಹಕ್ಕಿಯ ಹಾಡು’ ಮತ್ತು ‘ಸಹಗಮನ’ (ಕವನ ಸಂಕಲನ), ‘ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?’ (ಕಥಾ ಸಂಕಲನ), ‘ಜೀವಕೋಶ’ ವೈದ್ಯಲೋಕದ ಕಥನ (ಚಿಂತನ ಬರಹ), ‘ನೈಲ್ ನದಿಯಗುಂಟ ಶರಾವತಿಯನರಸುತ್ತ’ ಮತ್ತು ‘ಅಂಡಮಾನ್: ಕಂಡ ಹಾಗೆ’ (ಪ್ರವಾಸ ಕಥನ), ‘ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ’ ಮತ್ತು ‘ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ’ (ಜೀವನ ಚರಿತ್ರೆ)- ಇವು ಪ್ರಮುಖ ಕೃತಿಗಳು. ಇವರ ‘ನೋಯುವ ಹಲ್ಲಿಗೆ ಹೊರಳುವ ನಾಲಿಗೆ’ ಎಂಬ ಅಂಕಣ ಬರಹ ಜನಪ್ರಿಯವಾಗಿದೆ. ಇವರಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ದೊರೆತಿದೆ. ಪ್ರಸ್ತುತ ಗದ್ಯಭಾಗವನ್ನು ಡಾ. ಎಚ್.ಎಸ್. ಅನುಪಮ ಅವರ ‘ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ’ ಎಂಬ ಜೀವನ ಚರಿತ್ರೆಯಿಂದ ಆರಿಸಿಕೊಳ್ಳಲಾಗಿದೆ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಸಾವಿತ್ರಿಬಾಯಿಯವರು ಯಾವ ಊರಿನಲ್ಲಿ ಜನಿಸಿದರು?

    Answer

    ಸಾವಿತ್ರಿಬಾಯಿಯವರು ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಹಳ್ಳಿಯಲ್ಲಿ ಜನಿಸಿದರು.

  2. ೨. ಸಾವಿತ್ರಿಬಾಯಿಯವರ ಮೊದಲನೆಯ ಗುರು ಯಾರಾಗಿದ್ದರು?

    Answer

    ಸಾವಿತ್ರಿಬಾಯಿಯವರ ಮೊದಲ ಗುರು ಅವರ ಪತಿ ಜ್ಯೋತಿಬಾ ಫುಲೆಯವರಾಗಿದ್ದರು.

  3. ೩. ಭಾರತದ ಮೊತ್ತಮೊದಲ ಸ್ತ್ರೀವಾದಿ ಲೇಖಕಿ ಯಾರು?

    Answer

    ಭಾರತದ ಮೊತ್ತಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ.

  4. ೪. ಸತ್ಯಶೋಧಕ ಸಮಾಜದ ಮೂಲತತ್ವವೇನು?

    Answer

    ಸತ್ಯಶೋಧಕ ಸಮಾಜದ ಮೂಲತತ್ವ ‘ನಾವೆಲ್ಲರೂ ದೇವರ ಮಕ್ಕಳು; ದೇವರಿಗೂ ನಮಗೂ ಯಾವ ಮಧ್ಯವರ್ತಿಯ ಅವಶ್ಯಕತೆಯೂ ಇಲ್ಲ’ ಎಂಬುದಾಗಿದೆ.

  5. ೫. ಫುಲೆ ದಂಪತಿಗಳು ಯಾರನ್ನು ದತ್ತು ಪಡೆದರು?

    Answer

    ಫುಲೆ ದಂಪತಿಗಳು ಬ್ರಾಹ್ಮಣ ವಿಧವೆ ಕಾಶೀಬಾಯಿಯವರ ಮಗ ಯಶವಂತನನ್ನು ದತ್ತು ಪಡೆದರು.

Interactive Lab