CRECT Education

Class 7 Kannada Lesson 21: My Childhood Memories & Experiences | KTBS – Learn the Story

Description

Walk through the inspiring childhood memories of legendary Kannada theatre artist Yenagi Balappa, from rural poverty to finding his voice on stage.

ಗದ್ಯ (prose) · ಏಣಗಿ ಬಾಳಪ್ಪ (ನಿರೂಪಣೆ : ಡಾ. ಗಣೇಶ ಅಮೀನಗಡ)

ಪಠ್ಯFull text

ನಾನೊಬ್ಬ ರಂಗಭೂಮಿಯ ಸಾಮಾನ್ಯ ನಟ. ನಟನು ಯಾವಾಗಲೂ ಸಮುದಾಯದ ಎದುರಿನಲ್ಲಿಯೇ ನಟನಾಗಿ ಬಾಳುತ್ತಾನೆ. ಈ ಸಮುದಾಯದ ಆಶ್ರಯ ತಪ್ಪಿದರೆ ನಟ ಬದುಕಿರಲಾರ. ಮೀನಿಗೆ ನೀರಿನ ಸಂಗವಿದ್ದಂತೆ ನಟನಿಗೆ ಪ್ರೇಕ್ಷಕರ ಸಂಗವಿರುತ್ತದೆ. (Portrait of Yenagi Balappa) ನಟನಾಗಿರುವುದು ನಿಂತು ಹೋಗಿ ಪ್ರೇಕ್ಷಕರ ಸಮ್ಮುಖತೆ ತಪ್ಪಿ ಬಹಳ ದಿನಗಳಾಗಿದ್ದರೂ ನನ್ನನ್ನು ಇಂದಿಗೂ ಸಮುದಾಯದ ಎದುರಿಗೆ ರಂಗಕರ್ಮಿಯಾಗಿ ನಿಲ್ಲಿಸುತ್ತಿರುವುದರಿಂದ ಜೀವನವು ನನ್ನ ಪಾಲಿಗೆ ಎಷ್ಟೊಂದು ಉದಾರವಾಗಿ ವರ್ತಿಸಿದೆ ಎಂದು ಗೊತ್ತಾಗುತ್ತದೆ. ಜನರು ನನಗೆ ತೋರಿರುವ ಮತ್ತು ಈಗಲೂ ತೋರುತ್ತಿರುವ ಪ್ರೀತಿಯಿಂದ ನನ್ನ ಕಂಠ ಕೃತಜ್ಞತೆಯಿಂದ ಬಿಗಿದು ಬರುತ್ತದೆ. ಈ ಪ್ರಸಂಗದಲ್ಲಿ ಏನೇನೋ ಹೇಳಬೇಕು ಎನಿಸಿದರೂ ಸಮಾಜದ ಋಣಭಾರದಿಂದ ನನಗೆ ಮಾತೇ ಬರದಂತಾಗಿದೆ. ಎಷ್ಟೊಂದು ಜನರ ಋಣ ನನ್ನ ಮೇಲಿದೆ. ಅವರ ಪ್ರೀತಿ ಅಪಾರವಾದುದು. ಅದನ್ನು ಸ್ವೀಕರಿಸಲು ನನ್ನ ಜೋಳಿಗೆ ಚಿಕ್ಕದು. ನನ್ನನ್ನು ಕಲಾವಿದನನ್ನಾಗಿ ಮಾಡಿದ ಪರಿಯು ಚಿತ್ರಪಟದಂತೆ ನನ್ನ ಕಣ್ಮುಂದೆ ನಿಂತಿದೆ. ನಾನು ಒಂದು ತೀರ ಸಾದಾ ಕುಟುಂಬದಲ್ಲಿ ೧೯೧೪ರಲ್ಲಿ ಹುಟ್ಟಿದವ. ತಾರೀಖು ಗೊತ್ತಿಲ್ಲ. ಅವ್ವ ಬಾಳಮ್ಮ, ತಂದೆ ಕರಿಬಸಪ್ಪ. ಇವರಿಗೆ ನಾವು ಮೂರು ಮಕ್ಕಳು. ಅಣ್ಣ ಬಸಪ್ಪ, ಅಕ್ಕ ವೀರವ್ವ ಮತ್ತು ನಾನು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ನನ್ನೂರು. ನಮಗೆ ಪೂರ್ವಾರ್ಜಿತವಾಗಿ ಹದಿನಾಲ್ಕು ಎಕರೆ ಹೊಲವಿತ್ತು. ಅದು ಬಾಗಾಯತಲ್ಲ ಅಥವಾ ನೀರಾವರಿಯಲ್ಲ. ತಂದೆ ಇದ್ದಿದ್ದರೆ ಅಷ್ಟರಲ್ಲಿಯೇ ಉಂಡುಟ್ಟು ಬದುಕಬಹುದಿತ್ತೇನೋ. ಆದರೆ ನನ್ನ ಬಾಲ್ಯದಲ್ಲಿ ಆ ಭಾಗ್ಯ ನನಗಿಲ್ಲವಾಯಿತು. ನಾನು ಹುಟ್ಟಿದ ಮೂರು ವರ್ಷಕ್ಕೆ ತಂದೆ ತೀರಿಕೊಂಡರು. ೧೨-೧೩ ವರ್ಷದವನಿದ್ದಾಗ ಅಕ್ಕ, ಅಣ್ಣನು ತೀರಿಕೊಂಡರು. ಹೊಲವು ಸಾಲದಲ್ಲಿ ಒತ್ತೆ ಬಿತ್ತು. ನನ್ನ ತಾಯಿ ಸ್ವಲ್ಪ ಸ್ಥಿತಿವಂತರ ಮನೆಯಿಂದ ಬಂದವಳು. ಅದರಿಂದ ಅವಳಿಗೆ ಹೊಲದಲ್ಲಿ ಕೂಲಿಮಾಡುವ ಅಭ್ಯಾಸವಿರಲಿಲ್ಲ. ಆದರೆ ದುರ್ದೈವ ಆಕೆಯಿಂದ ಅದನ್ನೂ ಮಾಡಿಸಿತು. ನನ್ನ ಅವ್ವ ಬೇರೆಯವರ ಹೊಲದಲ್ಲಿ ಕೆಲಸಕ್ಕೆ ಹೋಗಲು ಮನಸ್ಸು ಗಟ್ಟಿ ಮಾಡಿದಳು. ದುಡೀಲಿಕ್ಕೂ ಹೋದಳು. ಆದರೆ ಬೇರೆ ಆಳುಗಳಂತೆ ಇವಳಿಂದ ಕೆಲಸವಾಗುವುದಿಲ್ಲವೆಂದು ಕಂಡ ಸಾಹುಕಾರರು ನಾಳೆಯಿಂದ ಕೆಲಸಕ್ಕೆ ಬರಬೇಡವೆಂದು ಹೇಳಿದರು. ಕಣ್ಣೀರು ಹಾಕುತ್ತಿದ್ದ ಅವ್ವನಿಗೆ ಆಗ ನಾನು ನನ್ನ ಬಾಲಬುದ್ಧಿಗೆ ತಕ್ಕಂತೆ ಹೇಳಿದೆ. ‘ಅವ್ವ, ನಾನೂ ನಿನ್ನ ಕೂಡ ಕೆಲಸಕ್ಕೆ ಬರ್ತೀನಿ. ಇಬ್ಬರೂ ದುಡಿದ್ರೆ ಒಂದೇ ಆಳಿನ ಲೆಕ್ಕ ಸಾಹುಕಾರರು ಕೊಡ್ಲಿ’ ಎಂದೆ. ಅವ್ವನಿಗೆ ನನ್ನನ್ನು ದುಡಿಸಲು ಮನಸ್ಸಿರಲಿಲ್ಲ. ನನ್ನ ಒತ್ತಾಯಕ್ಕೆ ಒಪ್ಪಿದಳು. ಇಬ್ಬರೂ ದುಡಿಯಲು ಯತ್ನಿಸಿದೆವು. ಆದರೆ ದುಡಿದು ಗೊತ್ತೇ ಇಲ್ಲದ ನನ್ನ ಕೈ ತುಂಬ ಗುಳ್ಳೆಗಳೆದ್ದವು. ಹಾಗಾಗಿ ಅದೂ ಸಾಗಲಿಲ್ಲ. ಒಮ್ಮೆಯಂತೂ ಕಿತ್ತು ತಿನ್ನುವ ಬಡತನ ನಮ್ಮ ಮೇಲೆ ಎಂತಹ ಸ್ಥಿತಿ ತಂದಿತೆಂದರೆ ಅದು ನೆನಪಾದರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ಒಂದು ದಿನ ರಾತ್ರಿ ಅವ್ವ ನನಗೆ ಊಟ ಬಡಿಸಿದಳು. ನಾನು ಉಂಡೆ. ಕೂಡಲೆ ಆಕೆ ಮಲಗಲು ಹಾಸಿಗೆ ತಯಾರಿಸಿದಳು. ಆಗ ನಾನು ‘ಅವ್ವಾ ನೀ ಊಟಮಾಡುವಂಗಿಲ್ಲೇನು?’ ಅಂತ ಕೇಳಿದೆ. ಆಕೆ ಏನೇನೋ ಹಾರಿಕೆ ಉತ್ತರ ಕೊಟ್ಟಳು. ಅಂದು ಇಬ್ಬರಿಗೂ ಆಗುವಷ್ಟು ರೊಟ್ಟಿ ಮನೆಯಲ್ಲಿರಲಿಲ್ಲವೆಂಬ ಸತ್ಯ ಸಂಗತಿ ನನಗೆ ತಿಳಿಯಿತು. ‘ಅವ್ವಾ, ನಾಳೆಯಿಂದ ನಾವಿಬ್ರೂ ಕೂಡಿಯೇ ಊಟ ಮಾಡೋಣ. ಒಂದೇ ರೊಟ್ಟಿ ಇದ್ದರೆ ಅರ್ಧ ಅರ್ಧ ತಿನ್ನೋಣ’ ಎಂದು ಹೇಳಿದೆ. ಆಗ ಆಕೆ ನನ್ನನ್ನು ತಬ್ಬಿಕೊಂಡು ಅತ್ತಾಗ ನಾನೂ ಅತ್ತುಬಿಟ್ಟೆ. ಇದಕ್ಕೂ ಮೊದಲು ಒಂದು ಘಟನೆ ಹೇಳ್ತೀನಿ. ನಾನು ಆರೇಳು ವರ್ಷದವನಿದ್ದಾಗ ನಡೆದ ಘಟನೆಯಿದು. ನಮ್ಮೂರಿನ ಸಮೀಪ ಸಂತಿಯಾಗೋ ಊರು ಅಂದ್ರೆ ಬೈಲಹೊಂಗಲ. ಆ ಸಂತಿಗೆ ಪ್ರತಿ ಶುಕ್ರವಾರ ಎಲ್ಲಾರೂ ಹೋಗ್ತಿದ್ರು. ಅದ್ರಂತೆ ನಮ್ಮವ್ವನೂ ಹೋಗಿದ್ಲು. ಸಂತಿಯಿಂದ ಬರೋವಾಗ ಮಕ್ಕಳಿಗೆ ತಿನ್ನಲಾಕ ಏನಾದ್ರೂ ತರ್ತಾಳೆಂಬ ಆಸೆಯಿಂದ ಕಾಣಲು ಹೊಂಟೆ. ಆದರೆ ದೊಡ್ಡ ಮಳೆಯಿಂದಾಗಿ ಮುಂದೆ ಹೋಗಲಾರದೆ ಕಾಲುವೆಯಲ್ಲಿ ಜಾರಿ ಬಿದ್ದೆನಂತೆ. ಮ್ಯಾಲೆ ಬರಾಕ ತ್ರಾಣವುಳಿದಿರಲಿಲ್ಲ. ತೇಲುತ್ತ ತೇಲುತ್ತ ಹೊಂಟಾಗ ಹಿರಿಯರೆಲ್ಲ ಕೂಡುವ ಮಠಪತಿಯವರ ಕಟ್ಟೆಯಲ್ಲಿ ಕುಂತವರು ನೋಡಿ ಮ್ಯಾಲ ಎತ್ತಿ ಉಪಚರಿಸಿದರಂತೆ. ಇಂತಹ ಅನೇಕ ಪ್ರಸಂಗಗಳನ್ನು ದಾಟಿ ಬಂದಿರುವ ನನ್ನ ಬದುಕಿನಲ್ಲಿ ನನಗೆ ಐಶ್ವರ್ಯವೂ ಲಭಿಸಿತು. ಆದರೆ ಗರ್ವ ಬರಲಿಲ್ಲ. ದುಡ್ಡಿನಿಂದ ನನಗೆ ಮದ ಬರಲಿಲ್ಲ. ಅದರಿಂದ ಯಾವ ವ್ಯಸನಕ್ಕೂ ನಾನು ತುತ್ತಾಗಲಿಲ್ಲ. ಇದು ನನ್ನ ಅವ್ವಳ ಸ್ಮರಣೆಯ ಫಲ ಎಂದು ಇಲ್ಲಿ ನೆನಸಿಕೊಳ್ಳಲಾರದೆ ಇರಲಾರೆ. ಇನ್ನು ನಾನು ಓದಿದ್ದು ನಾಲ್ಕನೇ ಇಯತ್ತೆಯವರೆಗೆ ಮಾತ್ರ. ನನ್ನ ಬಡತನ, ಅಜ್ಞಾನ- ಇವನ್ನು ಮುಚ್ಚಿಡಲು ನಾನು ಬಯಸುವುದಿಲ್ಲ. ಇಂಥಾದ್ದರಲ್ಲಿ ದೈವದತ್ತವಾಗಿ ನನಗೆ ಇದ್ದದ್ದು ಒಳ್ಳೆಯ ಕಂಠ. ಅದರಿಂದ ಶಾಲೆಯಲ್ಲಿ ನನ್ನಿಂದ ಕವಿತೆಗಳನ್ನು ಹಾಡಿಸಿ, ಗುರುಗಳು ಸಂತೋಷಪಡುತ್ತಿದ್ದರು. ಭಜನೀ ಮೇಳದಲ್ಲಿ ನನ್ನಿಂದ ಹಾಡಿಸಿ ನಮ್ಮೂರವರು ಸಂತೋಷ ಪಡುತ್ತಿದ್ದರು. ನಮ್ಮೂರ ರಸಿಕರು ಬಯಲಾಟ ಮಾಡಿದರೆ ಅದರಲ್ಲಿ ನನಗೆ ಬಾಲ ಪಾತ್ರ ಕೊಡುತ್ತಿದ್ದರು. ನನ್ನ ಬಾಲಪಾತ್ರವನ್ನು ಮೆಚ್ಚಿ ಬೆನ್ನು ತಟ್ಟುತ್ತಿದ್ದರು. ಅಲ್ಲಿಯವರೆಗೂ ಆಟ ಆಡ್ತಿದ್ರು. ನಾಟಕ ಆಡಿರಲಿಲ್ಲ. ಗರುಡ ಸದಾಶಿವರಾಯರು ಬರೆದ ‘ಪಾದುಕಾ ಪಟ್ಟಾಭಿಷೇಕ’ ನಾಟಕ ಪ್ರಾರಂಭ ಮಾಡಿದ್ರು. ಅದರಲ್ಲಿ ನನಗೆ ಭರತನ ಪಾತ್ರ ಕಟ್ಟಿಟ್ಟಿದ್ದು, ಜನರ ಮೆಚ್ಚಿಗೆಯಂತೂ ಇದ್ದದ್ದೇ. ಈ ಮೆಚ್ಚಿಗೆಯಿಂದ ಆಗ ನನ್ನನ್ನು ಕಂಪನಿಯವರು ಪಾತ್ರ ಮಾಡಾಕ ಕರ್ಯಾಕ ಬಂದ್ರು. ನಮ್ಮೂರವರೆಲ್ಲರಿಗೂ ಸಂತೋಷ. ಹೆಮ್ಮೆ. ನಮ್ಮೂರ ಹಿರಿಯರ ಜೊತೆಗೆ ಹೋಗಿ ಭರತನ ಪಾತ್ರ ಮಾಡಿದೆ. ಜನ ಮೆಚ್ಚಿದರು. ವಿಶೇಷವೆಂದರೆ, ಆ ನಾಟಕದಲ್ಲಿ ದಶರಥನ ಪಾತ್ರ ವಹಿಸಿದವರು ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು. ನನ್ನ ಪಾತ್ರ ನೋಡಿ ಬೆನ್ನು ತಟ್ಟಿದರು. ಮುಂದೆ ಕೆಲವು ದಿನಗಳ ನಂತರ ಧಾರವಾಡದಿಂದ ಶಿವಲಿಂಗ ಸ್ವಾಮಿಗಳು ನನ್ನನ್ನು ತಮ್ಮ ಲಿಂಗರಾಜ ನಾಟ್ಯ ಸಂಘಕ್ಕೆ ಕರೆಸಿಕೊಂಡರು. ಅದು ೧೯೨೮ನೇ ಇಸವಿ. ಅವರು ಕಲ್ಲಾಗಿದ್ದ ನನ್ನನ್ನು ಕಟೆದು ಮೂರ್ತಿ ಮಾಡಿದರು. ಎಲ್ಲೋ ಬಿದ್ದು ಹೋಗಬಾರದೆಂದು ರಂಗಭೂಮಿ ಗುಡಿಯ ಒಂದು ಮೂಲೆಯಲ್ಲಿ ನನ್ನನ್ನು ನಿಲ್ಲಿಸಿದರು. **ಕೃತಿಕಾರರ ಪರಿಚಯ** (Portrait of Dr. Ganesha Ameenagada) ಡಾ. ಗಣೇಶ ಅಮೀನಗಡ ಅವರು ಬಾಗಲಕೋಟೆ ಜಿಲ್ಲೆಯ ಅಮೀನಗಡದವರು. ಹಂಪಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯುಳ್ಳ ಇವರು ಪ್ರಸ್ತುತ ಮೈಸೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ಮುಖ್ಯ ವರದಿಗಾರರಾಗಿರುತ್ತಾರೆ. ‘ಕೈದಿಗಳ ಕಥನ’ ಮುಂತಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ‘ಏಣೆಯಿಂದ ರಂಗದ ಏಣಿಗೆ’ ಎಂಬ ಕೃತಿಯಿಂದ ಪ್ರಸ್ತುತ ಭಾಗವನ್ನು ಆರಿಸಲಾಗಿದೆ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಏಣಗಿ ಬಾಳಪ್ಪನವರು ತಮ್ಮನ್ನು ಏನೆಂದು ಗುರುತಿಸಿಕೊಂಡಿದ್ದಾರೆ?

    Answer

    ಏಣಗಿ ಬಾಳಪ್ಪನವರು ತಮ್ಮನ್ನು ರಂಗಭೂಮಿಯ ಸಾಮಾನ್ಯ ನಟನೆಂದು ಗುರುತಿಸಿಕೊಂಡಿದ್ದಾರೆ.

  2. ೨. ‘ಪಾದುಕಾ ಪಟ್ಟಾಭಿಷೇಕ’ ನಾಟಕವನ್ನು ಬರೆದವರು ಯಾರು?

    Answer

    ‘ಪಾದುಕಾ ಪಟ್ಟಾಭಿಷೇಕ’ ನಾಟಕವನ್ನು ಗರುಡ ಸದಾಶಿವರಾಯರು ಬರೆದರು.

  3. ೩. ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಏಣಗಿಯವರು ಯಾವ ಪಾತ್ರ ವಹಿಸುತ್ತಿದ್ದರು?

    Answer

    ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಏಣಗಿಯವರು ಭರತನ ಪಾತ್ರ ವಹಿಸುತ್ತಿದ್ದರು.

  4. ೪. ರಂಗಕಲಾವಿದ ಬಾಳಪ್ಪನವರ ಹುಟ್ಟೂರು ಎಲ್ಲಿದೆ?

    Answer

    ರಂಗಕಲಾವಿದ ಬಾಳಪ್ಪನವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ.

Interactive Lab