CRECT Education

Class 7 Kannada Lesson 10: Letter to a Friend | KTBS Second Language – Learn the Story

Description

Sarala writes to Sahana about an unforgettable trip to Belagavi's waterfalls – Gokak, Godachinamalki, and Vajrapoha. Part 1: learn five new Kannada words from the letter.

ಗದ್ಯ (prose) · ಸಂಪಾದಿತ

ಪಠ್ಯFull text

ಆಳಂದ, ೫ನೇ ಸೆಪ್ಟೆಂಬರ್ ೨೦೨೪ ನಲ್ಮೆಯ ಗೆಳತಿ ಸಹನಾಳಿಗೆ, ನಾನು ಇಲ್ಲಿ ಆರೋಗ್ಯವಾಗಿದ್ದೇನೆ. ನನ್ನ ವ್ಯಾಸಂಗವೂ ಚೆನ್ನಾಗಿ ನಡೆಯುತ್ತಿದೆ. ನಿನ್ನ ಅಭ್ಯಾಸ, ಆರೋಗ್ಯ ಕುರಿತು ಪತ್ರವನ್ನು ಬರೆಯುತ್ತಾ ಇರು. ಅಂದ ಹಾಗೆ, ನನ್ನ ತಂದೆ ತಾಯಿ ಜೊತೆ ನಾಲ್ಕು ದಿನ ಬೆಳಗಾವಿಗೆ ಹೋಗಬೇಕಾದ ಆಕಸ್ಮಿಕ ಅವಕಾಶ ನನಗೆ ಬಂತು. ಆ ಕುರಿತು ನಿನಗೆ ತಿಳಿಸೋಣ ಎಂದು ಪತ್ರ ಬರೆಯುತ್ತಿದ್ದೇನೆ. ನನಗೆ ಸಿಕ್ಕ ಮಾಹಿತಿ ಪ್ರಕಾರ, ಬೆಳಗಾವಿ ಪುರಾತನ ಕುಂತಳ ದೇಶದ ಭಾಗ. ಇಲ್ಲಿ ಅನೇಕ ಐತಿಹಾಸಿಕ ಕೋಟೆಗಳಿವೆ. ನಿಸರ್ಗ ರಮಣೀಯ ಸ್ಥಳಗಳಿವೆ. ಇಲ್ಲಿಯ ಬೆಟ್ಟ, ನದಿ, ಜಲಪಾತಗಳು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಈ ಪ್ರವಾಸದಲ್ಲಿ ನನಗೆ ಇಲ್ಲಿಯ ಜಲಪಾತಗಳು ಹೆಚ್ಚು ಆಕರ್ಷಣೀಯವಾಗಿದ್ದವು. ಮೊದಲಿಗೆ ನಾವು ಕರ್ನಾಟಕದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಗೋಕಾಕ್ ಜಲಪಾತವನ್ನು ನೋಡಿದೆವು. ಇದು ಗೋಕಾಕ್ ಪಟ್ಟಣದಿಂದ ೬ ಕಿ.ಮೀ. ದೂರದಲ್ಲಿದೆ. ಜಲಪಾತವನ್ನು ‘ದಬದಬೆ’, ‘ತಡಸಲು’ ಎಂತಲೂ ಕರೆಯುತ್ತಾರೆ. ಈ ಜಲಪಾತವನ್ನು ನೋಡಲು ಎರಡು ಕಣ್ಣುಗಳೂ ಸಾಲದು. ಇಲ್ಲಿ ಘಟಪ್ರಭೆ ಕಲ್ಲು ಬಂಡೆಗಳನ್ನು ದಾಟುತ್ತಾ, ಬಳುಕುತ್ತಾ ಬರುತ್ತಾಳೆ. ಇದೊಂದು ನಯನ ಮನೋಹರ ದೃಶ್ಯ. ಕುದುರೆ ಲಾಳಾಕಾರದಲ್ಲಿ ಸುಮಾರು ೧೮೦ ಅಡಿಗಳ ಎತ್ತರದಿಂದ ಧುಮುಕುವ ನೋಟವಂತೂ ನನ್ನನ್ನು ರೋಮಾಂಚನಗೊಳಿಸಿತು. ಇದು ‘ಕರ್ನಾಟಕದ ನಯಾಗರ’ ಎಂದು ಪ್ರಸಿದ್ಧವಾಗಿದೆ. ಕಪ್ಪುಬಂಡೆಗಳ ಮೇಲೆ ಹಾಲಿನಂತೆ ಬಿಳಿನೊರೆಯಾಗಿ, ತುಂತುರು ತುಂತುರಾಗಿ ಮೇಲೆದ್ದು, ಹಿಂಜಿದ ಅರಳಿಯಂತೆ ಕಾಣುವ ದೃಶ್ಯ ನನ್ನನ್ನು ಮೂಕವಿಸ್ಮಿತಳನ್ನಾಗಿಸಿತು. ಈ ಜಲಪಾತದ ನೆತ್ತಿಯ ಮೇಲೆ ಸುಮಾರು ೨೦೧ ಮೀಟರ್ ಉದ್ದದ ತೂಗುಸೇತುವೆ ಇದೆ. ಅದರ ಮೇಲೆ ನಡೆದುಕೊಂಡು ಹೋಗುತ್ತ ಕೆಳಗೆ ಹರಿಯುವ ಘಟಪ್ರಭಾ ನದಿಯನ್ನು ನೋಡುವುದಂತೂ ವರ್ಣಿಸಲಾಗದ ಅನುಭವ. ಗೋಕಾಕ್‌ನಿಂದ ಸುಮಾರು ೮ ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಜಲಪಾತ ಯಾವುದು ಗೊತ್ತೆ? ಅದೆ ಗೊಡಚಿನಮಲ್ಕಿ ಜಲಪಾತ. ಇದು ಮಾರ್ಕಂಡೇಯ ನದಿಯಿಂದ ಉಂಟಾದುದರಿಂದ ಇದಕ್ಕೆ ಮಾರ್ಕಂಡೇಯ ಜಲಪಾತವೆಂದು ಹೆಸರಿದೆ. ಇದನ್ನು ತಲುಪಲು ಮುಖ್ಯ ರಸ್ತೆಯಿಂದ ಸುಮಾರು ೨.೫ ಕಿ.ಮೀ. ಕಾಡಿನ ಮಧ್ಯೆ ಹೋಗಬೇಕು. ಸಣ್ಣ ಪುಟ್ಟ ಸಾರಿಗೆ ವ್ಯವಸ್ಥೆ ಇದ್ದರೂ ನಾವು ನಿಸರ್ಗದ ಸೊಬಗನ್ನು ಸವಿಯಲು ನಡೆದುಕೊಂಡೇ ಹೋದೆವು. ಇಲ್ಲಿ ಮಾರ್ಕಂಡೇಯ ನದಿಯು ಎರಡು ಬಾರಿ ಧುಮುಕುತ್ತದೆ. ಮೊದಲನೆಯದು ೨೫ ಮೀಟರ್, ಎರಡನೆಯದು ೧೮ ಮೀಟರ್ ಎತ್ತರದಿಂದ ಧುಮುಕಿ ವಿಶಾಲವಾಗಿ ಹರಡಿ ಮೆಟ್ಟಿಲು ಮೆಟ್ಟಿಲುಗಳಾಗಿ ಇಳಿಯುತ್ತದೆ. ಹಾಲಿನ ನೊರೆಯನ್ನು ಸೃಷ್ಟಿಸುತ್ತಾ ಹರಿಯುವ ನೋಟ ನನ್ನ ಕಣ್ಣನ ಸೆಳೆದು ಮೈಮರೆಯುವಂತೆ ಮಾಡಿತು. ಎಷ್ಟು ನೋಡಿದರೂ ಸಾಲದೆನಿಸುವ ಈ ಜಲಪಾತ ಘೋಡಗೇರಿ ಬಳಿ ಘಟಪ್ರಭಾ ನದಿಯನ್ನು ಸೇರಿಕೊಳ್ಳುತ್ತದೆ. (Photograph of a waterfall flowing over rocky steps, likely Godachinamalki Falls) ಮಧ್ಯಾಹ್ನ ನಾವು ಗೋಕಾಕ್ ಜಲಪಾತದ ಬಳಿಯಲ್ಲಿಯೇ ಊಟ ಮಾಡಿದೆವು. ನಂತರ ನಾವು ವಜ್ರಪೋಹ ಜಲಪಾತ ನೋಡಲು ಪ್ರಯಾಣ ಬೆಳೆಸಿದೆವು. ಮಹಾದಾಯಿ ನದಿಯಿಂದ ಉಂಟಾದ ವಜ್ರಪೋಹ ಜಲಪಾತವು ಬೆಳಗಾವಿ ನಗರದಿಂದ ಸುಮಾರು ೫೮ ಕಿ.ಮೀ. ದೂರದಲ್ಲಿದೆ. ಪಶ್ಚಿಮ ಘಟ್ಟದ ದಟ್ಟ ಹಸಿರು ಕಾಡಿನ ನಡುವೆ ಸಾಗಿ ಬರುವ ಮಹಾದಾಯಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಸುಮಾರು ೨೦೦ ಅಡಿಗಳ ಆಳಕ್ಕೆ ಧುಮುಕುವಾಗ ಬಂಡೆಗಳಿಗೆ ಅಪ್ಪಳಿಸಿ ತುಂತುರು ತುಂತುರು ಹನಿಗಳಾಗಿ ಚಿಮ್ಮುತ್ತದೆ. ಪ್ರತಿಯೊಂದು ಹನಿಯ ಮೇಲೂ ಸೂರ್ಯನ ಕಿರಣಗಳು ಬಿದ್ದು, ಪ್ರತಿ ಹನಿಗೂ ವಜ್ರದ ಕಾಂತಿಯನ್ನು ತುಂಬುತ್ತಾನೆ. ಇಲ್ಲಿ ಸಹಸ್ರ ಹನಿಗಳು ವಜ್ರದಂತೆ ಥಳಥಳ ಹೊಳೆಯುತ್ತವೆ. ಈ ಕಾರಣದಿಂದ ಇದನ್ನು ವಜ್ರಪೋಹ ಜಲಪಾತವೆಂದು ಕರೆಯುವರು. ಇದು ಚಿತ್ತಾಕರ್ಷಕ ಸುಂದರ ಕಾಮನಬಿಲ್ಲನ್ನು ಸೃಷ್ಟಿಸಿ ನಿಸರ್ಗದ ಸೊಬಗಿಗೆ ಸರಿಸಮ ಮತ್ತೊಂದಿಲ್ಲ ಎಂಬುದನ್ನು ಸಾರುತ್ತದೆ. ಈ ಜಲಪಾತದ ಸುಂದರ ನೋಟವನ್ನು ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಈ ಜಲಪಾತಗಳ ನಿಸರ್ಗದ ಸವಿನೋಟವನ್ನು ನೋಡಿ ಮನಸ್ಸು ನವಿಲಿನಂತೆ ಗರಿಗೆದರಿ ಕುಣಿದಾಡಿ ವರ್ಣಿಸಲಾಗದ ಆನಂದವನ್ನು ಉಂಟುಮಾಡಿತು. ನಮ್ಮ ಕನ್ನಡ ನಾಡಿನಲ್ಲಿ ಇನ್ನೂ ಅನೇಕ ಪ್ರಸಿದ್ಧ ಜಲಪಾತಗಳಿವೆ. ಅವಕಾಶ ಸಿಕ್ಕಾಗ ಅವುಗಳನ್ನು ವೀಕ್ಷಿಸಬೇಕು. ಮುಂಬರುವ ಬೇಸಿಗೆಯ ರಜೆಯಲ್ಲಿ ಇಬ್ಬರೂ ಸೇರಿ ಪ್ರವಾಸ ಹೋಗೋಣ. ಯಾವುದಕ್ಕೂ ನೀನು ಸಿದ್ಧವಾಗಿರು. ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ನಿಮ್ಮ ತಂದೆ ತಾಯಿಗಳಿಗೆ ನನ್ನ ನಮಸ್ಕಾರಗಳನ್ನು ತಿಳಿಸು. ಮುಂದಿನ ಬಾರಿ ಖಂಡಿತ ನಿಮ್ಮ ಊರಿಗೆ ಬರುತ್ತೇನೆ. ಇಂತಿ ನಿನ್ನ ಪ್ರೀತಿಯ ಗೆಳತಿ ಸರಳಾ ಕೆ. ೭ ನೇ ತರಗತಿ, ಸ.ಹಿ.ಪ್ರಾ. ಶಾಲೆ, ಆಳಂದ, ಕಲಬುರಗಿ ಜಿಲ್ಲೆ. ಇವರಿಗೆ, ಕು. ಸಹನಾ ಎಂ. ೭ ನೇ ತರಗತಿ, ಅ ವಿಭಾಗ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಯಚೂರು

Interactive Lab