CRECT Education

Class 7 Kannada Lesson 12: The Flute Yogi | KTBS Second Language – Learn the Story

Description

Learn the story of ಕೊಳಲ ಜೋಗಿ (The Flute Yogi) from Class 7 Kannada Second Language textbook. A wandering yogi with a magic flute saves a town from rats, but when the headman cheats him, he teaches a lesson about promises.

ಗದ್ಯ (prose) · ಪಂಜೆ ಮಂಗೇಶರಾಯ

ಪಠ್ಯFull text

ಕನ್ನಡ ನಾಡಿನಲ್ಲಿ ಇಲಿಯೂರು ಎಂಬ ಊರು ಇತ್ತು. ಕೆಲವು ವರ್ಷಗಳ ಹಿಂದೆ ಅಲ್ಲಿ ಒಮ್ಮೆ ಇಲಿಗಳ ಕಾಟವು ಬಹಳ ಹೆಚ್ಚಾಯಿತು. ಅಡಿಗೆ ಮನೆಗಳಲ್ಲಿ ತುಪ್ಪ, ಬೆಣ್ಣೆ, ಮೊಸರುಗಳನ್ನು ನೇಲುವುಗಳಲ್ಲಿ ಇಟ್ಟರೂ ಇಲಿಗಳು ಸಾಲುಸಾಲಾಗಿ ಇಳಿದು ಬಂದು, ಅವನ್ನು ತಿಂದುಬಿಡುವುವು. ಸಣ್ಣ ಮಕ್ಕಳು ಊಟಕ್ಕೆ ಕುಳಿತರೆ ಒಂದು ತುತ್ತನ್ನು ಬಾಯಿಗೆ ಎತ್ತಿ ಇನ್ನೊಂದು ತುತ್ತಿಗೆ ಕೈ ಹಾಕುವಷ್ಟರಲ್ಲಿ ಬಟ್ಟಲು ಬರಿದಾಗುತ್ತಿತ್ತು. ಪಲ್ಯ ಬಡಿಸಲಿಕ್ಕೆ ಬಂದ ಅಡಿಗೆಯವನು ಅನ್ನದ ಪಾತ್ರೆಯನ್ನು ತರುವಷ್ಟರಲ್ಲಿ ಅನ್ನದ ಪಾತ್ರೆಗೆ ಇಲಿಗಳು ಮುತ್ತಿಕೊಂಡು ಅರೆವಾಸಿ ಪಾತ್ರೆಯನ್ನು ಖಾಲಿ ಮಾಡುತ್ತಿದ್ದವು. ಒಂದು ಮನೆಯಲ್ಲಿ ಆಳು ಹಾಸಿಗೆಯನ್ನು ಹಾಸಿ ಮಲಗುವ ಕೋಣೆಯ ಬಾಗಿಲನ್ನು ಹಾಕಿದನು. ಅಲ್ಲಿ ಮಲಗಲಿಕ್ಕೆ ಮನೆಯವರು ಬರುವಷ್ಟರಲ್ಲಿ ಇಲಿಗಳು ಹಾಸಿಗೆಯ ಬಟ್ಟೆಯನ್ನು ಕಡಿದು ಅದರೊಳಗಿನ ಹತ್ತಿಯನ್ನು ಕೋಣೆಯಲ್ಲಿ ಚದರಿಬಿಟ್ಟಿದ್ದವು. ಇನ್ನೊಂದು ಮನೆಯವರು ದೇವಸ್ಥಾನದ ಉತ್ಸವವನ್ನು ನೋಡಲಿಕ್ಕೆ ನಿಶ್ಚಯಿಸಿದ್ದರು. ಪೆಟ್ಟಿಗೆಯೊಳಗಿನ ಪಟ್ಟೆ ಬಟ್ಟೆಗಳನ್ನೂ, ಜರಿ ಬಟ್ಟೆಗಳನ್ನೂ ತೆಗೆದಿಟ್ಟು ಒಂದೊಂದನ್ನೇ ಧರಿಸಿಕೊಳ್ಳತೊಡಗಿದರು. ಅಷ್ಟರಲ್ಲಿ ಇಲಿಗಳು ಉಳಿದ ಬಟ್ಟೆಗಳನ್ನು ಕತ್ತರಿಸಿ ಚೂರು ಚೂರಾಗಿ ಮಾಡಿದವು. ರಾತ್ರಿಯಲ್ಲಿ ಮಲಗಿದವರ ಕೈಕಾಲುಗಳ ಚರ್ಮವನ್ನು ಕೂಡಾ ಇಲಿಗಳು ಹರಿತವಾದ ಹಲ್ಲುಗಳಿಂದ ಕತ್ತರಿಸಿಬಿಡುತ್ತಿದ್ದವು. ಇಲಿಗಳು ಮಾಡಿದ ಗಳಗಳನ್ನು ಕತ್ತರಿಸಿದ್ದರಿಂದ ಮಾಡುಗಳು ಈಗಲೇ ತಲೆಯ ಮೇಲೆ ಕಳಚಿ ಬೀಳುತ್ತವೋ ಎಂಬಂತೆ ಜೋಲುತ್ತಿದ್ದವು. ಕಿಟಕಿ ಬಾಗಿಲುಗಳ ಕದಗಳನ್ನು ಕೊರೆದುಬಿಟ್ಟಿದ್ದರಿಂದ ಹಲಗೆಗಳು ಬಳೆಗಳಂತೆ ಕಾಣುತ್ತಿದ್ದವು. ಈ ಇಲಿಗಳನ್ನು ಓಡಿಸಬೇಕೆಂದು ಊರಿನವರು ಬೋನುಗಳನ್ನು ತರಿಸಿದರು. ಆ ಬೋನುಗಳ ಬಿಲ್ಲಿನ ಸರಿಗೆಗಳನ್ನು ಇಲಿಗಳು ಕಡಿದುಬಿಟ್ಟವು. ಬೆಕ್ಕು ನಾಯಿಗಳನ್ನು ಜನರು ಸಾಕಿದರು. ಆದರೆ ಇಲಿಗಳು ಬೆಕ್ಕು ನಾಯಿಗಳಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದವು. ಹೀಗಾಗಿ ಎಲ್ಲರೂ ಬಹಳ ಕಷ್ಟಪಟ್ಟರು. ಕಡೆಗೆ ಒಂದುದಿನ ಊರಿನ ಜನರೆಲ್ಲ ಆ ಊರ ಗೌಡನ ಚಾವಡಿಯಲ್ಲಿ ಸಭೆ ಸೇರಿದರು. ಬಹಳ ಹೊತ್ತು ಎಲ್ಲರೂ ಆಲೋಚನೆ ಮಾಡಿದ ಮೇಲೆ ಈ ಅವಾಂತರದಿಂದ ತಪ್ಪಿಸುವವರಿಗೆ ಇನ್ನೂರು ರೂಪಾಯಿಯ ಚಿನ್ನದ ಕಡಗವನ್ನು ಇನಾಮು ಕೊಡುವುದಾಗಿ ಗೌಡನು ಹೇಳಿದನು. ಎಲ್ಲರೂ ಆದೀತೆಂದು ಒಪ್ಪಿದರು. ಆ ಸಮಯದಲ್ಲಿ ಅಲ್ಲಿ ಒಬ್ಬ ಜೋಗಿ ಬಂದನು. ಅವನು ಯಾವಾಗಲೂ ಒಂದೇ ಊರಿನಲ್ಲಿ ಇರುವವನಲ್ಲ. ಅವನಿಗೆ ಮನೆಮಾರು ಇರಲಿಲ್ಲ. ಹಗಲೆಲ್ಲ ತಿರುಪೆ ಎತ್ತುವನು; ಒಂದು ಮರದ ನೆರಳಲ್ಲಿ ಅನ್ನ ಬೇಯಿಸಿ ಊಟ ಮಾಡುವನು. ರಾತ್ರಿಯಾದೊಡನೆ ಮರದ ಅಡಿಯಲ್ಲಿಯೇ ಬಿದ್ದುಕೊಳ್ಳುವನು. ಬೆಳಕು ಹರಿದ ಕೂಡಲೇ ಹೊರಟು ಇನ್ನೊಂದು ಊರಿಗೆ ಹೋಗುವನು. ಅವನ ಮೈಮೇಲೆ ಬಟ್ಟೆ ಇರಲಿಲ್ಲ; ಉಡಲಿಕ್ಕೆ ಅರಿವೆ ಇರಲಿಲ್ಲ. ಒಂದು ಹುಲಿಯ ತೊಗಲನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದನು. ಇನ್ನೊಂದನ್ನು ಹಗಲಿನಲ್ಲಿ ಹೊದ್ದುಕೊಳ್ಳುತ್ತಿದ್ದನು. ರಾತ್ರಿಯಲ್ಲಿ ಅದನ್ನೇ ಹಾಸಿಕೊಳ್ಳುತ್ತಿದ್ದನು. ಅವನ ಬಳಿಯಲ್ಲಿ ಬಿದಿರಿನ ಒಂದು ಕೊಳಲು ಇತ್ತು. ಅದನ್ನು ಬಾರಿಸುತ್ತ ಅವನು ಮನೆ ಮನೆ ತಿರುಗುವನು. ಅದರ ಸ್ವರವನ್ನು ಕೇಳಿದವರು ಅವನಿಗೆ ಏನಾದರೂ ಕೊಡದೆ ಹೋಗುತ್ತಿರಲಿಲ್ಲ. ಈ ಕೊಳಲ ಜೋಗಿಯು ಗೌಡನ ಚಾವಡಿಯಲ್ಲಿ ಕೂಡಿದವರನ್ನು ಕಂಡನು. ಅವರ ಮಾತನ್ನು ಕೇಳಿ ತಾನು ಈ ಇಲಿಗಳ ಕಾಟವನ್ನು ತಪ್ಪಿಸುವೆನೆಂದು ಒಪ್ಪಿಕೊಂಡನು. ಅವನ ಮಾತನ್ನು ಯಾರೂ ಮೊದಲು ನಂಬಲಿಲ್ಲ. ಅವನು ಒಂದು ವಿಚಿತ್ರ ರೀತಿಯಿಂದ ಕೊಳಲನ್ನು ಬಾರಿಸಲು ತೊಡಗಿದನು. ಯಾರೂ ಆ ರಾಗವನ್ನು ಅದುವರೆಗೆ ಕೇಳಿದ್ದಿಲ್ಲ. ಆದರೆ ಅವನು ಬಾರಿಸುತ್ತಿದ್ದ ಹಾಗೆ ಇಲಿಗಳು ಒಂದು, ಎರಡು, ಹತ್ತು, ಇಪ್ಪತ್ತು, ಐವತ್ತು, ನೂರು, ಸಾವಿರ, ಲಕ್ಷ ಹೀಗೆ ಸಾಲುಕಟ್ಟಿ ಅವನ ಸುತ್ತು ಬಂದು ಸೇರಿದವು. ಅಲ್ಲಿ ಕುಣಿದಾಡತೊಡಗಿದವು. ಆಮೇಲೆ ಅವನು ಗೌಡನ ಅಂಗಳದಿಂದ ಬೀದಿಗೆ ಇಳಿದನು. ಅವನ ಕೊಳಲಿನ ಸ್ವರವನ್ನು ಕೇಳಿ ನೆರೆಮನೆಯ ಇಲಿಗಳೂ ಬಂದು ಸೇರಿದವು. ಹೀಗೆ ಬೀದಿಯ ಉದ್ದಕ್ಕೆ ಅವನು ಹೋಗುವಷ್ಟರಲ್ಲಿ ಊರಿನ ಇಲಿಗಳೆಲ್ಲ ಬೀದಿಗೆ ಇಳಿದಿದ್ದವು. ಮನೆ ಮಾಡುಗಳಲ್ಲಿ, ಗೋಡೆ ಸಂದುಗಳಲ್ಲಿ, ಜಗಲಿಯ ಬಿಲಗಳಲ್ಲಿ, ಕತ್ತಲಾದ ಕೋಣೆಗಳಲ್ಲಿ, ಹಳೆ ಮರಗಳ ಪೊಟರೆಗಳಲ್ಲಿ ಇರುವ ಒಂದೇ ಒಂದು ಇಲಿಯಾದರೂ ಹಿಂದೆ ನಿಲ್ಲಲಿಲ್ಲ. ಬೀದಿ ತುಂಬಾ ಇಲಿಗಳು ಇದ್ದು ಸೂಜಿಮೊನೆಗೆ ಕೂಡಾ ಸ್ಥಳ ಸಿಗಲಿಲ್ಲ. ಜೋಗಿ ಕೊಳಲನ್ನು ಬಾರಿಸುತ್ತ ಊರಿನ ಹೊರಗೆ ಹೋದನು. ಊರ ಜನರು ನೋಡುತ್ತಿದ್ದ ಹಾಗೆ ಇಲಿಗಳೆಲ್ಲ ಅವನನ್ನು ಹಿಂಬಾಲಿಸಿದವು. ಕಡೆಗೆ ಸ್ವಲ್ಪ ದೂರದಲ್ಲಿರುವ ಹಳ್ಳದ ಕಡೆಗೆ ಹೋದನು. ಆಗಲೂ ಆ ಇಲಿಗಳ ಗುಂಪು ಅವನ ಹಿಂದೆಯೇ ಬಂತು. ಕೊಳಲನ್ನು ಬಾರಿಸುತ್ತ ಅವನು ಹಳ್ಳದಲ್ಲಿ ಇಳಿದನು. ಕೊಳಲಿನ ಸ್ವರದಿಂದ ಮಂಕಾದ ಇಲಿಗಳು ನೀರಿಗೆ ಇಳಿದವು. ಧಾರಾಳವಾಗಿ ತಿಂದು ಹೊಟ್ಟೆ ಬೆಳೆದ ಇಲಿಗಳಿಗೆ ಈಸಲಿಕ್ಕೆ ಗೊತ್ತಿದ್ದಿಲ್ಲ. ಅವೆಲ್ಲವೂ ನೀರಿನಲ್ಲಿ ಮುಳುಗಿ ಸತ್ತುಹೋದವು. ಕೊಳಲ ಜೋಗಿಯು ಹಳ್ಳದಿಂದ ಮೇಲಕ್ಕೆ ಬಂದು ಊರಿನ ಕಡೆಗೆ ತಿರುಗಿದನು. ಅಲ್ಲಿ ಸಂತೆ ಮೈದಾನದಲ್ಲಿ ಊರ ಜನರು, ಹೆಂಗಸರು, ಮಕ್ಕಳು ಸಮೇತ ಜೋಗಿಯ ಈ ಆಟವನ್ನು ನೋಡಲು ಕೂಡಿದ್ದರು. ಗೌಡನು ಅಲ್ಲಿ ದೂರದಲ್ಲಿ ನಿಂತಿದ್ದನು. ಜೋಗಿಯು ಅವನ ಬಳಿಗೆ ಬಂದು, “ಒಡೆಯಾ! ನನ್ನ ಕೆಲಸ ತೀರಿತು. ನನ್ನ ಇನಾಮು ಕೊಡೋಣಾಗಲಿ” ಎಂದು ಕೈ ಜೋಡಿಸಿದನು. ಜೋಗಿಯ ವೇಷವನ್ನು ನೋಡಿದ ಗೌಡನಿಗೆ ಅಷ್ಟು ಬೆಲೆಯ ಇನಾಮನ್ನು ಕೊಡುವ ಮನಸ್ಸಿದ್ದಿಲ್ಲ. ಏನಾದರೂ ಉಪಾಯದಿಂದ ಜೋಗಿಗೆ ಬೆದರಿಸಬೇಕೆಂದು ಸ್ವಲ್ಪ ಹೊತ್ತು ಆಲೋಚಿಸಿ “ಎಲೋ, ತಿರುಕ ಜೋಗಿ! ಬಟ್ಟೆ ಬರೆಯಿಲ್ಲದವನಿಗೆ ೨೦೦ ರೂಪಾಯಿ ಬೆಲೆಯ ಕಡಗ ಕೊಟ್ಟರೆ ಯಾರಾದರೂ ಅದನ್ನು ಕದ್ದುಬಿಟ್ಟಾರು. ನಿನಗೆ ಯಾಕೆ ಅದರ ಗಲಾಟೆ? ನಿನಗೆ ಹೊಟ್ಟೆ ತುಂಬಾ ಒಂದು ಊಟ ಸಿಕ್ಕಿದರೆ ಸಾಲದೆ? ಹೋಗು, ಸುಮ್ಮನೆ ಕಡಗದ ಆಸೆ ಮಾಡಬೇಡ. ನಮ್ಮ ಬಚ್ಚಲ ಮನೆಯಲ್ಲಿ ಕುಳಿತುಕೋ, ಮನೆಯವರ ಊಟ ಆದೊಡನೆ ನಿನಗೂ ಒಂದು ಹಿಡಿ ಅನ್ನ ಇಕ್ಕಬಹುದು” ಎಂದನು. ಆಗ ಹಳ್ಳಿ ಗೌಡನು ಆ ಊರಿನ ದೊಡ್ಡ ಮನುಷ್ಯನಾದ್ದರಿಂದ ಅವನ ಮಾತಿಗೆ ಎಲ್ಲರೂ ನಕ್ಕು “ಸೈ, ಸೈ, ತಿರುಕನಿಗೆ ಅಷ್ಟೆ ಸಾಕು” ಎಂದರು. ಕೊಳಲ ಜೋಗಿಗೆ ತುಂಬಾ ವ್ಯಸನವಾಯಿತು. “ಹೇಳಿದ ಮಾತನ್ನು ನಡೆಸುವುದಕ್ಕೆ ದೊಡ್ಡ ಮನುಷ್ಯರಿಗೆ ಮನಸ್ಸಿಲ್ಲ, ಅಲ್ಲವೇ!” ಎಂದು ಹೇಳಿ ಜೋಗಿ ಕೊಳಲನ್ನು ಪುನಃ ಬಾಯಿಗೆ ಇಟ್ಟನು. ಈಗ ಕೊಳಲಿನಿಂದ ಹೊರಟ ಸ್ವರವೇ ಬೇರೆಯಾಗಿತ್ತು. ಅದನ್ನು ಕೇಳಿದೊಡನೆ ಜೋಗಿಯನ್ನು ಎವೆಯಿಕ್ಕದೆ ನೋಡುತ್ತ ಸಂತೆಯಲ್ಲಿ ಕೂಡಿದ ಜನರು ತಟಸ್ಥರಾದರು. ಕಡೆಗೆ ಕೊಳಲಿನ ಸ್ವರವು ಹೇಗೆ ಜೋರಾಯಿತೋ ಹಾಗೆ ಮೊದಲು ಊರ ಗೌಡನು, ಆಮೇಲೆ ಬೇರೆ ಜನರು ತಾಳಹಾಕಿ ಕುಣಿಯತೊಡಗಿದರು. (Illustration of a yogi in tiger skin playing a flute while men, women, and children dance around him in a market field) ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಕೈಯಿಂದ ತಾಳ ಹಾಕುತ್ತ ಸಂತೆಯ ಮೈದಾನದಲ್ಲಿ ಕುಣಿಯುತ್ತಿದ್ದರು. ಆಗ ಕೆಲವರು ಹಾಡಲಿಕ್ಕೂ ತೊಡಗಿದರು. ಸಂತೆ ಮೈದಾನದಲ್ಲಿ ಬಹಳ ಗದ್ದಲವಾಯಿತು. ಕಡೆಗೆ ಎಲ್ಲರಿಗೂ ಹಾಡಿ ಹಾಡಿ ಗಂಟಲು ಆರಿತು; ಕಾಲುಗಳು ದಣಿದವು; ಮೈ ಮೇಲಿಂದ ಬೆವರು ಸುರಿಯುತ್ತಿತ್ತು. ಆದರೂ ಕೊಳಲ ಜೋಗಿ ಕೊಳಲು ಬಾರಿಸುವುದನ್ನು ನಿಲ್ಲಿಸಲಿಲ್ಲ. ಜನರು ಹಾಡುವುದನ್ನೂ ಕುಣಿಯುವುದನ್ನೂ ನಿಲ್ಲಿಸಲಾರದೆ ಹೋದರು. ಮಕ್ಕಳು ಕಾಲು ಸೋತು ನೆಲದ ಮೇಲೆ ಬಿದ್ದವು. ಆದರೂ ಬಿದ್ದಲ್ಲಿಯೇ ಕೈಗಳಿಂದ ತಾಳ ಹಾಕುವುದನ್ನು ನೋಡಿ ಊರಿನ ಮುಖಂಡರು “ನಿನ್ನ ಕೊಳಲು ಸಾಕುಮಾಡೋ, ಮಹಾರಾಯಾ! ಇನ್ನು ತಾಳ ಹಾಕಲಿಕ್ಕೆ ಬರುವುದಿಲ್ಲ. ಕೈಗಳಿಗೆ ಗುಳ್ಳೆ ಎದ್ದಿತು, ಕಾಲುಗಳು ಸೋತು ಹೋದವು” ಎಂದು ಮೊರೆಯಿಟ್ಟರು. ಊರ ಗೌಡನಿಗೆ ದೊಡ್ಡ ಹೊಟ್ಟೆಯಿತ್ತು. ಅವನು ಇನ್ನು ಕುಣಿಯಲಾರದೆ ಕಡೆಗೆ ಧೊಪ್ಪನೆ ಕೆಳಗೆ ಬಿದ್ದುಬಿಟ್ಟನು. ಎರಡು ಕೈಗಳನ್ನು ಜೋಡಿಸಿ “ಮಹಾರಾಯಾ! ನಿನ್ನ ಕಡಗವನ್ನು ಕೊಡುತ್ತೇವೆ. ನಿನ್ನ ಕೊಳಲು ಬಾರಿಸುವುದನ್ನು ಒಮ್ಮೆ ನಿಲ್ಲಿಸು” ಎಂದನು. ಕೊಳಲ ಜೋಗಿಗೆ ಇವನ ಸ್ಥಿತಿಯನ್ನು ನೋಡಿ ಕನಿಕರ ಹುಟ್ಟಿತು. ಕೊಳಲು ಬಾರಿಸುವುದನ್ನು ಅವನು ನಿಲ್ಲಿಸಿದನು. ಸ್ವಲ್ಪ ದಣಿವಾರಿದ ಮೇಲೆ ಎಲ್ಲರೂ ಕುಳಿತುಕೊಂಡು ಕೊಳಲ ಜೋಗಿಗೆ ಇನಾಮು ಕೊಡಲಿಕ್ಕಾಗಿ ೨೦೦ ರೂಪಾಯಿ ವಂತಿಗೆ ಮಾಡಿ ಕೂಡಲೇ ಅವನ ಮುಂದಿಟ್ಟರು. ಆಗ ಜೋಗಿಯು ಅದನ್ನು ಕಂಡು ನಸುನಕ್ಕು, “ತಿರುಕನಾದ ನನಗೆ ಈ ಹಣವೇನೂ ಬೇಕಿಲ್ಲ, ಇದರಿಂದ ನಿಮ್ಮ ಊರ ಹೊರಗಿನ ಹಾಳು ಗುಡಿಯನ್ನು ಸರಿಮಾಡಿಸಿರಿ. ನನಗೆ ಮಾತುಕೊಟ್ಟು ಮೋಸ ಮಾಡಿದ್ದರಿಂದ ನೀವು ಈ ರೀತಿಯ ಕಷ್ಟದಲ್ಲಿ ಬೀಳಬೇಕಾಯಿತು. ಇನ್ನಾದರೂ ಆಡಿ ತಪ್ಪಬೇಡಿ” ಎಂದು ಹೇಳಿ ಹೊರಟು ಹೋದನು. ಅಂದಿನಿಂದ ಆ ಊರಿಗೆ ಇಲಿಯೂರು ಎಂಬ ಹೆಸರು ಹೋಗಿ ಕೊಳಲೂರು ಎಂಬ ಹೆಸರು ಬಂದಿದೆ. **ಕೃತಿಕಾರರ ಪರಿಚಯ :** (Portrait of ಪಂಜೆ ಮಂಗೇಶರಾಯ) **ಪಂಜೆ ಮಂಗೇಶರಾಯ** ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ ೧೮೭೪ ರಲ್ಲಿ ಜನಿಸಿದರು. 'ಪಂಜೆ' ಎಂಬುದು ಅವರ ಪೂರ್ವಜರ ವಾಸಸ್ಥಳ. ಇವರು ಕನ್ನಡದ ಅಧ್ಯಾಪಕರಾಗಿ, ಶಾಲಾ ತನಿಖಾಧಿಕಾರಿಯಾಗಿ, ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇವರು 'ಪಂಚ ಕಜ್ಜಾಯ', 'ಹುತ್ತರಿ ಹಾಡು', 'ತೆಂಕಣಗಾಳಿಯಾಟ', 'ಐತಿಹಾಸಿಕ ಕಥಾವಳಿ', 'ಕೋಟಿ ಚನ್ನಯ್ಯ', 'ಅಜ್ಜಿ ಸಾಕಿದ ಮಗ' ಮುಂತಾದ ಕೃತಿಗಳನ್ನು 'ಕವಿಶಿಷ್ಯ' ಎನ್ನುವ ಕಾವ್ಯನಾಮದಿಂದ ರಚಿಸಿದ್ದಾರೆ. ಇವರು ೧೯೩೭ ರಲ್ಲಿ ನಿಧನರಾದರು.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ ತಿಳಿಯಿರಿ :

  1. ಅರಿವೆ – ಬಟ್ಟೆ; ವಸ್ತ್ರ.

  2. ಅವಾಂತರ – ಗಡಿಬಿಡಿ

  3. ಇನಾಮು – ಬಹುಮಾನ

  4. ಕಡಗ – ಕೈಗೆ ಹಾಕಿಕೊಳ್ಳುವ ಬಳೆ.

  5. ಚಾವಡಿ – ಹಳ್ಳಿಯಲ್ಲಿ ಸಭೆ ಸೇರುವ ಸ್ಥಳ.

  6. ಜೋಗಿ – ಯೋಗಿ; ತಪಸ್ವಿ; ಬೈರಾಗಿ.

  7. ತಿರುಕ – ಭಿಕ್ಷುಕ

  8. ಅರೆವಾಸಿ – ಅರ್ಧದಷ್ಟು

  9. ಆಳು – ಸೇವಕ

  10. ಎವೆಯಿಕ್ಕದೆ – ಕಣ್ಣು ಮಿಟುಕಿಸದೆ ನೋಡುವುದು.

  11. ಕಾಟ – ತೊಂದರೆ

  12. ಜಗಲಿ – ಕಟ್ಟೆ; ವೇದಿಕೆ.

  13. ತಟಸ್ಥ – ಚಲನೆ ಇಲ್ಲದಿರುವುದು.

  14. ತಿರುಪೆ – ಭಿಕ್ಷೆ; ಯಾಚನೆ.

  15. ತೊಗಲು – ಚರ್ಮ

  16. ಬಿಲ – ಡೋಗರು

  17. ಮಾಡು – ಛಾವಣಿ

  18. ಮೊರೆ – ಬೇಡು

  19. ವ್ಯಸನ – ಚಿಂತೆ; ದುಃಖ.

  20. ನೇಲುವು – ಪಾತ್ರೆಗಳನ್ನು ಇಡುವುದಕ್ಕೆ ಇಳಿಬಿಡುವ ಹಗ್ಗದ ಜಾಳಿಗೆ.

  21. ಮಂಕು – ಮಬ್ಬು; ಕಾಂತಿ ಇಲ್ಲದಿರುವಿಕೆ.

  22. ಮೊನೆ – ತುದಿ; ಚೂಪಾದ.

  23. ವಂತಿಗೆ – ಚಂದಾ ಹಣ.

  24. ಸರಿಗೆ – ಲೋಹದ ತಂತಿ.

II. ಪ್ರಶ್ನೆಗಳು :

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಇಲಿಗಳು ಹಾಸಿಗೆಯನ್ನು ಯಾವ ರೀತಿ ಹಾಳು ಮಾಡಿದವು?

    Answer

    ಇಲಿಗಳು ಹಾಸಿಗೆಯ ಬಟ್ಟೆಯನ್ನು ಕಡಿದು ಅದರೊಳಗಿನ ಹತ್ತಿಯನ್ನು ಕೋಣೆಯಲ್ಲಿ ಚದರಿಬಿಟ್ಟು ಹಾಳು ಮಾಡಿದವು.

  2. ೨. ದೇವಸ್ಥಾನದ ಉತ್ಸವಕ್ಕೆ ಹೊರಟವರಿಗೆ ಇಲಿಗಳು ಯಾವ ರೀತಿ ತೊಂದರೆ ಮಾಡಿದವು?

    Answer

    ದೇವಸ್ಥಾನದ ಉತ್ಸವಕ್ಕೆ ಹೊರಟವರು ತೆಗೆದಿಟ್ಟಿದ್ದ ಉಳಿದ ಬಟ್ಟೆಗಳನ್ನು ಇಲಿಗಳು ಕತ್ತರಿಸಿ ಚೂರು ಚೂರಾಗಿ ಮಾಡಿದವು.

  3. ೩. ಜೋಗಿಯ ಕೊಳಲ ರಾಗಕ್ಕೆ ಇಲಿಗಳು ಹೇಗೆ ಸಾಲುಗಟ್ಟಿ ಬಂದವು?

    Answer

    ಜೋಗಿಯ ಕೊಳಲ ರಾಗಕ್ಕೆ ಇಲಿಗಳು ಒಂದು, ಎರಡು, ಹತ್ತು, ಇಪ್ಪತ್ತು, ಐವತ್ತು, ನೂರು, ಸಾವಿರ, ಲಕ್ಷ ಹೀಗೆ ಸಾಲುಕಟ್ಟಿ ಬಂದವು.

  4. ೪. ಇಲಿಗಳ ಕಾಟ ತಪ್ಪಿಸಿದ ಜೋಗಿಯು ಊರ ಗೌಡನ ಬಳಿ ಬಂದು ಏನೆಂದು ಕೇಳಿದನು?

    Answer

    ಇಲಿಗಳ ಕಾಟ ತಪ್ಪಿಸಿದ ಜೋಗಿಯು ಊರ ಗೌಡನ ಬಳಿ ಬಂದು, “ಒಡೆಯಾ! ನನ್ನ ಕೆಲಸ ತೀರಿತು. ನನ್ನ ಇನಾಮು ಕೊಡೋಣಾಗಲಿ” ಎಂದು ಕೇಳಿದನು.

  5. ೫. ಕೊಳಲ ಜೋಗಿ ಕತೆಯ ನೀತಿ ಏನು?

    Answer

    ಮಾತುಕೊಟ್ಟು ಮೋಸ ಮಾಡಬಾರದು; ಹೇಳಿದ ಮಾತನ್ನು ತಪ್ಪದೆ ನಡೆಸಬೇಕು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಅಡಿಗೆ ಮನೆಯಲ್ಲಿ ಇಲಿಗಳಿಂದ ಯಾವ ತೊಂದರೆಗಳಾಗುತ್ತಿದ್ದವು?

    Answer

    ಅಡಿಗೆ ಮನೆಗಳಲ್ಲಿ ನೇಲುವುಗಳಲ್ಲಿ ಇಟ್ಟ ತುಪ್ಪ, ಬೆಣ್ಣೆ, ಮೊಸರುಗಳನ್ನು ಇಲಿಗಳು ಸಾಲುಸಾಲಾಗಿ ಇಳಿದು ಬಂದು ತಿಂದುಬಿಡುತ್ತಿದ್ದವು. ಸಣ್ಣ ಮಕ್ಕಳು ಊಟಕ್ಕೆ ಕುಳಿತಾಗ ಅವರ ಬಟ್ಟಲು ಬರಿದಾಗುತ್ತಿತ್ತು. ಪಲ್ಯ ಬಡಿಸಲು ಹೋದ ಅಡಿಗೆಯವನು ಅನ್ನದ ಪಾತ್ರೆಯನ್ನು ತರುವಷ್ಟರಲ್ಲಿ ಇಲಿಗಳು ಪಾತ್ರೆಗೆ ಮುತ್ತಿಕೊಂಡು ಅರೆವಾಸಿ ಪಾತ್ರೆಯನ್ನು ಖಾಲಿ ಮಾಡುತ್ತಿದ್ದವು.

  2. ೨. ಇಲಿಗಳಿಂದ ಹಾಳಾದ ಮನೆಯ ಮಾಡು, ಕಿಟಕಿ, ಬಾಗಿಲುಗಳು ಹೇಗೆ ಕಾಣುತ್ತಿದ್ದವು?

    Answer

    ಇಲಿಗಳು ಮಾಡುಗಳ ಗಳಗಳನ್ನು ಕತ್ತರಿಸಿದ್ದರಿಂದ ಅವು ತಲೆಯ ಮೇಲೆ ಕಳಚಿ ಬೀಳುತ್ತವೋ ಎಂಬಂತೆ ಜೋಲುತ್ತಿದ್ದವು. ಕಿಟಕಿ ಬಾಗಿಲುಗಳ ಕದಗಳನ್ನು ಕೊರೆದಿದ್ದರಿಂದ ಹಲಗೆಗಳು ಬಳೆಗಳಂತೆ ಕಾಣುತ್ತಿದ್ದವು.

  3. ೩. ಜನರು ಇಲಿಗಳನ್ನು ಹಿಡಿಯಲು ಯಾವ ಯಾವ ಪ್ರಯತ್ನಗಳನ್ನು ಮಾಡಿದರು?

    Answer

    ಜನರು ಇಲಿಗಳನ್ನು ಹಿಡಿಯಲು ಬೋನುಗಳನ್ನು ತರಿಸಿದರು. ಆದರೆ ಇಲಿಗಳು ಬೋನುಗಳ ಬಿಲ್ಲಿನ ಸರಿಗೆಗಳನ್ನು ಕಡಿದುಬಿಟ್ಟವು. ಜನರು ಬೆಕ್ಕು ನಾಯಿಗಳನ್ನು ಸಾಕಿದರು; ಆದರೆ ಇಲಿಗಳು ಅವುಗಳಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದವು.

  4. ೪. ಇಲಿಗಳ ಕಾಟ ತಪ್ಪಿಸಲು ಊರ ಗೌಡನು ಯಾವ ತೀರ್ಮಾನ ಕೈಗೊಂಡನು?

    Answer

    ಇಲಿಗಳ ಕಾಟ ತಪ್ಪಿಸುವವರಿಗೆ ಇನ್ನೂರು ರೂಪಾಯಿಯ ಚಿನ್ನದ ಕಡಗವನ್ನು ಇನಾಮು ಕೊಡುವುದಾಗಿ ಊರ ಗೌಡನು ತೀರ್ಮಾನಿಸಿದನು; ಊರಿನವರೆಲ್ಲರೂ ಅದನ್ನು ಒಪ್ಪಿದರು.

  5. ೫. ಜೋಗಿಯು ಯಾವ ರೀತಿಯ ಜೀವನ ನಡೆಸುತ್ತಿದ್ದನು?

    Answer

    ಜೋಗಿಯು ಒಂದೇ ಊರಿನಲ್ಲಿ ಇರುವವನಲ್ಲ; ಅವನಿಗೆ ಮನೆಮಾರು ಇರಲಿಲ್ಲ. ಹಗಲೆಲ್ಲ ತಿರುಪೆ ಎತ್ತಿ, ಮರದ ನೆರಳಲ್ಲಿ ಅನ್ನ ಬೇಯಿಸಿ ಊಟ ಮಾಡುತ್ತಿದ್ದನು. ರಾತ್ರಿ ಮರದ ಅಡಿಯಲ್ಲೇ ಮಲಗಿ, ಬೆಳಕು ಹರಿದ ಕೂಡಲೇ ಇನ್ನೊಂದು ಊರಿಗೆ ಹೊರಟುಹೋಗುತ್ತಿದ್ದನು.

  6. ೬. ಜೋಗಿಯ ಉಡುಗೆ ತೊಡುಗೆಗಳು ಹೇಗಿದ್ದವು?

    Answer

    ಜೋಗಿಯ ಮೈಮೇಲೆ ಬಟ್ಟೆ ಇರಲಿಲ್ಲ; ಉಡಲು ಅರಿವೆ ಇರಲಿಲ್ಲ. ಅವನು ಒಂದು ಹುಲಿಯ ತೊಗಲನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದನು ಮತ್ತು ಇನ್ನೊಂದನ್ನು ಹಗಲಲ್ಲಿ ಹೊದ್ದುಕೊಂಡು ರಾತ್ರಿ ಹಾಸಿಕೊಳ್ಳುತ್ತಿದ್ದನು.

  7. ೭. ಜೋಗಿಯ ಯಾವ ಗುಣ ಇಷ್ಟವಾಯಿತು? ಏಕೆ?

    Answer

    ಜೋಗಿಯ ಕನಿಕರದ ಗುಣ ಇಷ್ಟವಾಯಿತು; ಏಕೆಂದರೆ ಕಷ್ಟದಲ್ಲಿ ಬಿದ್ದ ಗೌಡನನ್ನು ನೋಡಿ ಅವನು ಕನಿಕರದಿಂದ ಕೊಳಲು ಬಾರಿಸುವುದನ್ನು ನಿಲ್ಲಿಸಿದನು.

ಇ. ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಇಲಿಯೂರಿನಲ್ಲಿ ಇಲಿಗಳ ಕಾಟ ಯಾವ ಯಾವ ರೀತಿ ಇತ್ತು?

    Answer

    ಇಲಿಯೂರಿನಲ್ಲಿ ಇಲಿಗಳ ಕಾಟ ಬಹಳ ಹೆಚ್ಚಾಯಿತು. ಅಡಿಗೆ ಮನೆಗಳಲ್ಲಿ ನೇಲುವುಗಳಲ್ಲಿ ಇಟ್ಟ ತುಪ್ಪ, ಬೆಣ್ಣೆ, ಮೊಸರುಗಳನ್ನು ಇಲಿಗಳು ಸಾಲುಸಾಲಾಗಿ ಇಳಿದು ಬಂದು ತಿಂದುಬಿಡುತ್ತಿದ್ದವು. ಸಣ್ಣ ಮಕ್ಕಳು ಊಟಕ್ಕೆ ಕುಳಿತಾಗ ಒಂದು ತುತ್ತನ್ನು ಬಾಯಿಗೆ ಎತ್ತಿ ಇನ್ನೊಂದು ತುತ್ತಿಗೆ ಕೈ ಹಾಕುವಷ್ಟರಲ್ಲಿ ಬಟ್ಟಲು ಬರಿದಾಗುತ್ತಿತ್ತು. ಪಲ್ಯ ಬಡಿಸಲು ಹೋದ ಅಡಿಗೆಯವನು ಅನ್ನದ ಪಾತ್ರೆಯನ್ನು ತರುವಷ್ಟರಲ್ಲಿ ಇಲಿಗಳು ಪಾತ್ರೆಗೆ ಮುತ್ತಿಕೊಂಡು ಅರೆವಾಸಿ ಖಾಲಿ ಮಾಡುತ್ತಿದ್ದವು. ಒಂದು ಮನೆಯಲ್ಲಿ ಆಳು ಹಾಸಿಗೆ ಹಾಸಿ ಬಾಗಿಲು ಹಾಕಿದರೂ ಇಲಿಗಳು ಹಾಸಿಗೆಯ ಬಟ್ಟೆಯನ್ನು ಕಡಿದು ಹತ್ತಿಯನ್ನು ಕೋಣೆಯಲ್ಲಿ ಚದರಿಸಿದ್ದವು. ದೇವಸ್ಥಾನದ ಉತ್ಸವಕ್ಕೆ ಹೊರಟವರ ಪಟ್ಟೆ ಮತ್ತು ಜರಿ ಬಟ್ಟೆಗಳನ್ನು ಇಲಿಗಳು ಕತ್ತರಿಸಿ ಚೂರು ಚೂರು ಮಾಡಿದವು. ರಾತ್ರಿಯಲ್ಲಿ ಮಲಗಿದವರ ಕೈಕಾಲುಗಳ ಚರ್ಮವನ್ನು ಇಲಿಗಳು ಹರಿತವಾದ ಹಲ್ಲುಗಳಿಂದ ಕತ್ತರಿಸುತ್ತಿದ್ದವು. ಇಲಿಗಳು ಮಾಡುಗಳ ಗಳಗಳನ್ನು ಕತ್ತರಿಸಿದ್ದರಿಂದ ಮಾಡುಗಳು ತಲೆಯ ಮೇಲೆ ಬೀಳುತ್ತವೋ ಎಂಬಂತೆ ಜೋಲುತ್ತಿದ್ದವು. ಕಿಟಕಿ ಬಾಗಿಲುಗಳ ಕದಗಳನ್ನು ಕೊರೆದಿದ್ದರಿಂದ ಹಲಗೆಗಳು ಬಳೆಗಳಂತೆ ಕಾಣುತ್ತಿದ್ದವು.

  2. ೨. ಜೋಗಿಯು ಇಲಿಗಳನ್ನು ಯಾವ ರೀತಿ ನಾಶ ಮಾಡಿದನು?

    Answer

    ಕೊಳಲ ಜೋಗಿ ಗೌಡನ ಚಾವಡಿಯಲ್ಲಿ ಕೂಡಿದವರನ್ನು ಕಂಡು ಇಲಿಗಳ ಕಾಟ ತಪ್ಪಿಸುವೆನೆಂದು ಒಪ್ಪಿಕೊಂಡನು. ಮೊದಲು ಯಾರೂ ಅವನ ಮಾತನ್ನು ನಂಬಲಿಲ್ಲ. ಅವನು ಯಾರೂ ಕೇಳದ ವಿಚಿತ್ರ ರೀತಿಯ ರಾಗದಲ್ಲಿ ಕೊಳಲನ್ನು ಬಾರಿಸತೊಡಗಿದನು. ಆ ರಾಗ ಕೇಳಿ ಇಲಿಗಳು ಒಂದು, ಎರಡು, ಹತ್ತು, ಇಪ್ಪತ್ತು, ಐವತ್ತು, ನೂರು, ಸಾವಿರ, ಲಕ್ಷ ಹೀಗೆ ಸಾಲುಕಟ್ಟಿ ಅವನ ಸುತ್ತ ಬಂದು ಕುಣಿದಾಡಿದವು. ಜೋಗಿ ಗೌಡನ ಅಂಗಳದಿಂದ ಬೀದಿಗೆ ಇಳಿದಾಗ ನೆರೆಮನೆಯ ಇಲಿಗಳೂ ಬಂದು ಸೇರಿದವು. ಮನೆ ಮಾಡುಗಳಲ್ಲಿ, ಗೋಡೆ ಸಂದುಗಳಲ್ಲಿ, ಜಗಲಿಯ ಬಿಲಗಳಲ್ಲಿ, ಕತ್ತಲಾದ ಕೋಣೆಗಳಲ್ಲಿ, ಹಳೆ ಮರಗಳ ಪೊಟರೆಗಳಲ್ಲಿ ಇದ್ದ ಒಂದೇ ಒಂದು ಇಲಿಯೂ ಹಿಂದೆ ನಿಲ್ಲಲಿಲ್ಲ. ಬೀದಿ ತುಂಬಾ ಇಲಿಗಳು ತುಂಬಿ ಸೂಜಿಮೊನೆಗೂ ಸ್ಥಳ ಸಿಗಲಿಲ್ಲ. ಜೋಗಿ ಕೊಳಲನ್ನು ಬಾರಿಸುತ್ತ ಊರಿನ ಹೊರಗೆ ಹಳ್ಳದ ಕಡೆಗೆ ಹೋದನು; ಇಲಿಗಳ ಗುಂಪು ಅವನ ಹಿಂದೆಯೇ ಬಂತು. ಅವನು ಹಳ್ಳದಲ್ಲಿ ಇಳಿದಾಗ ಕೊಳಲಿನ ಸ್ವರದಿಂದ ಮಂಕಾದ ಇಲಿಗಳು ನೀರಿಗೆ ಇಳಿದವು. ಧಾರಾಳವಾಗಿ ತಿಂದು ಹೊಟ್ಟೆ ಬೆಳೆದ ಇಲಿಗಳಿಗೆ ಈಸಲು ಗೊತ್ತಿರಲಿಲ್ಲ; ಅವೆಲ್ಲವೂ ನೀರಿನಲ್ಲಿ ಮುಳುಗಿ ಸತ್ತುಹೋದವು.

  3. ೩. ಜೋಗಿಗೆ ಇನಾಮು ಕೊಡಲು ತಿರಸ್ಕರಿಸಿದ ಊರ ಜನರಿಗೆ ಯಾವ ಗತಿ ಉಂಟಾಯಿತು?

    Answer

    ಜೋಗಿಗೆ ಇನಾಮು ಕೊಡಲು ಗೌಡನು ತಿರಸ್ಕರಿಸಿ ತಿರುಕನಿಗೆ ಒಂದು ಹಿಡಿ ಅನ್ನ ಸಾಕು ಎಂದನು. ಊರಿನವರು ಅವನ ಮಾತಿಗೆ ನಕ್ಕು “ಸೈ, ಸೈ, ತಿರುಕನಿಗೆ ಅಷ್ಟೆ ಸಾಕು” ಎಂದರು. ಜೋಗಿಗೆ ತುಂಬಾ ವ್ಯಸನವಾಗಿ, ಹೇಳಿದ ಮಾತನ್ನು ನಡೆಸಲು ದೊಡ್ಡ ಮನುಷ್ಯರಿಗೆ ಮನಸ್ಸಿಲ್ಲ ಎಂದು ಹೇಳಿದನು. ಅವನು ಪುನಃ ಕೊಳಲನ್ನು ಬಾಯಿಗೆ ಇಟ್ಟಾಗ ಅದರಿಂದ ಬೇರೆಯಾದ ಸ್ವರ ಹೊರಟಿತು. ಆ ಸ್ವರ ಕೇಳಿದೊಡನೆ ಜನರು ತಟಸ್ಥರಾಗಿ ನೋಡತೊಡಗಿದರು. ಕೊಳಲಿನ ಸ್ವರ ಜೋರಾದಂತೆ ಮೊದಲು ಊರ ಗೌಡನು, ಆಮೇಲೆ ಬೇರೆ ಜನರು ತಾಳ ಹಾಕಿ ಕುಣಿಯತೊಡಗಿದರು. ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಸಂತೆಯ ಮೈದಾನದಲ್ಲಿ ಕುಣಿಯುತ್ತಿದ್ದರು; ಕೆಲವರು ಹಾಡಲು ತೊಡಗಿದರು. ಹಾಡಿ ಹಾಡಿ ಗಂಟಲು ಆರಿತು, ಕಾಲುಗಳು ದಣಿದವು, ಮೈಮೇಲಿಂದ ಬೆವರು ಸುರಿಯುತ್ತಿತ್ತು; ಆದರೂ ಜನರು ಕುಣಿಯುವುದನ್ನು ನಿಲ್ಲಿಸಲಾರದೆ ಹೋದರು. ಮಕ್ಕಳು ಕಾಲು ಸೋತು ನೆಲದ ಮೇಲೆ ಬಿದ್ದರೂ ಬಿದ್ದಲ್ಲಿಯೇ ತಾಳ ಹಾಕುತ್ತಿದ್ದರು. ಕಡೆಗೆ ಊರ ಮುಖಂಡರು ಕೈಗಳಿಗೆ ಗುಳ್ಳೆ ಎದ್ದಿತು, ಕಾಲುಗಳು ಸೋತವು ಎಂದು ಮೊರೆಯಿಟ್ಟರು; ದೊಡ್ಡ ಹೊಟ್ಟೆಯ ಗೌಡನು ಧೊಪ್ಪನೆ ಕೆಳಗೆ ಬಿದ್ದು ಕಡಗ ಕೊಡುವುದಾಗಿ ಹೇಳಿದನು.

ಈ. ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. ಒಡೆಯಾ! ನನ್ನ ಕೆಲಸ ತೀರಿತು. ನನ್ನ ಇನಾಮು ಕೊಡೋಣಾಗಲಿ.

    Answer

    ಈ ಮಾತನ್ನು ಜೋಗಿಯು ಊರ ಗೌಡನಿಗೆ ಹೇಳಿದನು.

  2. ೨. ನಿನಗೆ ಹೊಟ್ಟೆ ತುಂಬಾ ಒಂದು ಊಟ ಸಿಕ್ಕಿದರೆ ಸಾಲದೆ?

    Answer

    ಈ ಮಾತನ್ನು ಊರ ಗೌಡನು ಜೋಗಿಗೆ ಹೇಳಿದನು.

  3. ೩. ಸೈ, ಸೈ, ತಿರುಕನಿಗೆ ಅಷ್ಟೆ ಸಾಕು.

    Answer

    ಈ ಮಾತನ್ನು ಊರಿನ ಜನರು ಜೋಗಿಗೆ ಹೇಳಿದರು.

  4. ೪. ನಿನ್ನ ಕೊಳಲು ಸಾಕು ಮಾಡೋ ಮಹಾರಾಯ!

    Answer

    ಈ ಮಾತನ್ನು ಊರಿನ ಮುಖಂಡರು ಜೋಗಿಗೆ ಹೇಳಿದರು.

  5. ೫. ಇನ್ನಾದರೂ ಆಡಿ ತಪ್ಪಬೇಡಿ.

    Answer

    ಈ ಮಾತನ್ನು ಜೋಗಿಯು ಊರಿನ ಜನರಿಗೆ ಹೇಳಿದನು.

III. ಭಾಷಾಭ್ಯಾಸ :

ಅ. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ಕನಿಕರ : _________________________________________________

    Model sentence

    ಕನಿಕರ: ಬಿದ್ದು ಗಾಯಗೊಂಡ ಗೆಳೆಯನನ್ನು ನೋಡಿ ನನಗೆ ಕನಿಕರ ಆಯಿತು.

  2. ೨. ಮೊರೆಯಿಡು : _________________________________________________

    Model sentence

    ಮೊರೆಯಿಡು: ಬೇಸಿಗೆಯಲ್ಲಿ ನೀರಿಲ್ಲದೆ ಜನರು ಮೊರೆಯಿಟ್ಟರು.

  3. ೩. ಉತ್ಸವ : _________________________________________________

    Model sentence

    ಉತ್ಸವ: ನಮ್ಮ ಊರಿನಲ್ಲಿ ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಿಸಿದರು.

  4. ೪. ನಿಶ್ಚಯಿಸು : _________________________________________________

    Model sentence

    ನಿಶ್ಚಯಿಸು: ನಾನು ನಾಳೆ ಶಾಲೆಗೆ ಬೇಗ ಹೋಗಬೇಕೆಂದು ನಿಶ್ಚಯಿಸಿದೆ.

  5. ೫. ಅವಾಂತರ : _________________________________________________

    Model sentence

    ಅವಾಂತರ: ಮಳೆಗಾಲದಲ್ಲಿ ಬೀದಿಯಲ್ಲಿ ನೀರು ತುಂಬಿ ದೊಡ್ಡ ಅವಾಂತರವಾಯಿತು.

ಆ. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಉಪಾಯ X ________________

    Answer

    ನಿರುಪಾಯ

  2. ೨. ಆಸೆ X ________________

    Answer

    ನಿರಾಸೆ

  3. ೩. ಬೆಳಕು X ________________

    Answer

    ಕತ್ತಲೆ

  4. ೪. ರಾತ್ರಿ X ________________

    Answer

    ಹಗಲು

  5. ೫. ಕಷ್ಟ X ________________

    Answer

    ಸುಖ

ಇ. ಕೆಳಗೆ ನೀಡಲಾಗಿರುವ ವಾಕ್ಯಗಳಲ್ಲಿನ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ ಬರೆಯಿರಿ.

  1. ೧. ಹೊರಗೆ ಜೋಗಿ ಊರಿನ ಕೊಳಲನ್ನು ಹೋದನು ಬಾರಿಸುತ್ತ

    Answer

    ಜೋಗಿ ಕೊಳಲನ್ನು ಬಾರಿಸುತ್ತ ಊರಿನ ಹೊರಗೆ ಹೋದನು.

  2. ೨. ತರಿಸಿದರು ಇಲಿಗಳನ್ನು ಬೋನುಗಳನ್ನು ಹಿಡಿಯಬೇಕೆಂದು ಊರಿನವರು

    Answer

    ಇಲಿಗಳನ್ನು ಹಿಡಿಯಬೇಕೆಂದು ಊರಿನವರು ಬೋನುಗಳನ್ನು ತರಿಸಿದರು.

  3. ೩. ಕೊಳಲು ಜೋಗಿ ಇತ್ತು ಬಿದುರಿನ ಬಳಿಯಲ್ಲಿ

    Answer

    ಜೋಗಿಯ ಬಳಿಯಲ್ಲಿ ಬಿದಿರಿನ ಕೊಳಲು ಇತ್ತು.

IV. ಚಟುವಟಿಕೆಗಳು :

  1. ೧. ಕುವೆಂಪು ಅವರ 'ಕಿಂದರಿ ಜೋಗಿ' ಕವನವನ್ನು ಓದಿರಿ.

  2. ೨. ಕೊಳಲ ಜೋಗಿ ಕಥೆಯನ್ನು ನಿಮ್ಮದೇ ಧಾಟಿಯಲ್ಲಿ ಹಾವಭಾವಗಳೊಂದಿಗೆ ಹೇಳಿರಿ.

  3. ೩. ಕೊಳಲ ಜೋಗಿ ಕಥೆಯಲ್ಲಿ ಬರುವ ಲೇಖನ ಚಿಹ್ನೆಗಳನ್ನು ಗಮನಿಸಿರಿ.

Interactive Lab