CRECT Education

Class 7 Kannada Lesson 13: Philanthropist Attimabbe | Second Language – Learn the Story

Description

Learn the inspiring story of Attimabbe, the 10th‑century donor‑warrior, from the KTBS Class 7 Second Language textbook.

ಗದ್ಯ (prose) · ಸಂಪಾದಿತ

ಪಠ್ಯFull text

ನಮ್ಮ ಕರ್ನಾಟಕವು ಕವಿ-ಕಲಿಗಳ ನಾಡು. ಸಂಸ್ಕೃತಿಯ ನೆಲೆವೀಡು. ವೀರ ಪುರುಷರ, ವೀರ ರಮಣಿಯರ ನಾಡು. ಇಲ್ಲಿ ಯುದ್ಧ ವೀರರಷ್ಟೇ ಅಲ್ಲದೆ ದಾನ ವೀರರೂ ಇದ್ದಾರೆ. ದಾನ ವೀರತೆಗೆ ಹೆಸರಾದವರಲ್ಲಿ ಅತ್ತಿಮಬ್ಬೆ ಸಹ ಒಬ್ಬಳು. ಹತ್ತನೆಯ ಶತಮಾನದಲ್ಲಿ ಜೀವಿಸಿದ್ದ ಅತ್ತಿಮಬ್ಬೆಯ ತಂದೆ ಮಲ್ಲಪಯ್ಯ, ತಾಯಿ ಅಬ್ಬಕಬ್ಬೆ. ಇವಳ ಹುಟ್ಟೂರು ವೆಂಗಿಮಂಡಲದ ಪುಂಗನೂರು. ತಂದೆ-ತಾಯಿ ಸುಸಂಸ್ಕೃತರು. ಮಲ್ಲಪಯ್ಯನ ಎಂಟು ಮಕ್ಕಳಲ್ಲಿ ಅತ್ತಿಮಬ್ಬೆ ಮತ್ತು ಗುಂಡುಮಬ್ಬೆಯರು ಅಕ್ಕ ತಂಗಿಯರು. ‘ಬೆಳೆವ ಸಿರಿ ಮೊಳಕೆಯಲ್ಲಿ’ ಎಂಬಂತೆ ಅತ್ತಿಮಬ್ಬೆ ಬಾಲ್ಯದಲ್ಲಿಯೇ ಅತಿಚತುರೆ. ವಿನಯ, ವಿವೇಕ ಸಂಪನ್ನೆಯಾದ ಇವಳು ಮನೆ ಮಂದಿಯ ಮುದ್ದಿನ ಮಗಳಾಗಿ ಬೆಳೆದಳು. ‘ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ’ ಎಂಬಂತೆ ಅತ್ತಿಮಬ್ಬೆಗೆ ತಂದೆ ತಾಯಿಯಿಂದ ಉತ್ತಮ ಸಂಸ್ಕಾರ ದೊರೆಯಿತು. ಮಲ್ಲಪಯ್ಯನು ಉತ್ತಮ ಗುರುಗಳನ್ನು ನೇಮಿಸಿ ಮಕ್ಕಳಿಗೆ ಮನೆಯಲ್ಲಿಯೇ ವಿದ್ಯಾಭ್ಯಾಸ ಮಾಡಿಸಿದನು. ಅತ್ತಿಮಬ್ಬೆಯು ಜಿನಚಂದ್ರ ಎಂಬ ಗುರುಗಳಿಂದ ‘ಜಿನತತ್ತ್ವಗಳನ್ನು’ ತಿಳಿದಳು. ಅಣ್ಣಂದಿರೊಂದಿಗೆ ತಾನೂ ಕತ್ತಿವರಸೆ, ಕುದುರೆ ಸವಾರಿ, ಬಿಲ್ಲಿದ್ಯೆಗಳನ್ನು ಕಲಿತಳು. ಮಹಾವೀರನೆಂದು ಪ್ರಖ್ಯಾತನಾದ ನಾಗದೇವನೊಂದಿಗೆ ಅತ್ತಿಮಬ್ಬೆಯ ವಿವಾಹವಾಯಿತು. ವಿವಾಹ ಸಂದರ್ಭದಲ್ಲಿ ಪೊನ್ನ ಮಹಾಕವಿಯ ‘ಶಾಂತಿ ಪುರಾಣ’ ಪ್ರಕಟಗೊಂಡಿತು. ಸಾಹಿತ್ಯಾಭಿಮಾನಿಯಾದ ಮಲ್ಲಪಯ್ಯನು ಶಾಂತಿಪುರಾಣದ ಸಾವಿರ ಹಸ್ತಪ್ರತಿಗಳನ್ನು ಮಾಡಿಸಿದನು. ಮದುವೆಗೆ ಬಂದ ಬಂಧು-ಮಿತ್ರರಿಗೆ ಬಂಗಾರದ ಜಿನಬಿಂಬ ಹಾಗೂ ಹಸ್ತಪ್ರತಿಗಳನ್ನು ಉಡುಗೊರೆಯಾಗಿ ನೀಡಿದನು. ಅತ್ತಿಮಬ್ಬೆ ಬಾಗೇವಾಡಿಗೆ ಬಂದಳು. ಅತ್ತಿಮಬ್ಬೆಯು ಅತ್ತೆ ಮಾವನಿಗೆ ಮೆಚ್ಚಿನ ಸೊಸೆಯಾಗಿ, ಪತಿಗೆ ತಕ್ಕ ಸತಿಯಾದಳು. ತನ್ನ ಸನ್ನಡತೆಯಿಂದ ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಿದಳು. ಬಿಡುವಿನ ವೇಳೆಯಲ್ಲಿ ಪಂಪ ಮಹಾಕವಿಯ ‘ಆದಿಪುರಾಣ’ ಹಾಗೂ ಪೊನ್ನ ಮಹಾಕವಿಯ ‘ಶಾಂತಿ ಪುರಾಣ’ಗಳ ಹಸ್ತಪ್ರತಿಗಳನ್ನು ಮಾಡಿಸುತ್ತಿದ್ದಳು. ಆಗಾಗ ಪತಿಯೊಂದಿಗೆ ಶಸ್ತ್ರಾಗಾರಕ್ಕೆ ಹೋಗಿ ಕತ್ತಿ, ಗದೆ, ಹಿಡಿದು ತನ್ನ ಕೈಚಳಕ ತೋರಿಸುತ್ತಿದ್ದಳು. ಬಾಲಕನೊಬ್ಬ ಕಷ್ಟದಲ್ಲಿರುವುದನ್ನು ಕಂಡ ಅತ್ತಿಮಬ್ಬೆ ಮಮ್ಮಲ ಮರುಗಿದಳು. ಈತನಿಗೆ ಉತ್ತಮ ಮಾರ್ಗದರ್ಶನ ದೊರೆತರೆ ಪ್ರತಿಭಾ ಸಂಪನ್ನನಾಗುವನು ಎಂದು ಒಳಮನಸ್ಸು ಹೇಳಿತು. ಅಂತೆಯೇ ಬಾಲಕನಿಗೆ ಆಶ್ರಯ ದೊರಕಿಸಿಕೊಟ್ಟಳು. ಮುಂದೆ ಆ ಬಾಲಕ ಹೆಸರಾಂತ ಗುರುಗಳಾದ ಅಜಿತಸೇನಾಚಾರ್ಯರ ಶಿಷ್ಯನಾಗಿ ವಿದ್ಯಾಭ್ಯಾಸ ಮಾಡಿದನು. ಅತ್ತಿಮಬ್ಬೆ ಗುರುಕುಲಕ್ಕೆ ಸಾಕಷ್ಟು ಧನಸಹಾಯ ಮಾಡಿದಳು. ವಿದ್ಯಾ ವಿನಯಸಂಪನ್ನೆಯಾದ ಅತ್ತಿಮಬ್ಬೆಯು ವಿದ್ಯಾಪ್ರಗತಿಗೆ ನೆರವಾಗಿ ವಿದ್ಯಾಪೋಷಿತೆಯೇ ಆದಳು ಎಂದು ಗುರುವೃಂದವು ಕೊಂಡಾಡಿತು. ಅತ್ತಿಮಬ್ಬೆಯ ಆಶ್ರಯ ಪಡೆದ ಆ ಬಾಲಕನಾರು ಗೊತ್ತೇ? ಆತನೇ ಕವಿಚಕ್ರವರ್ತಿ ಬಿರುದಾಂಕಿತ ರನ್ನಮಹಾಕವಿ. ರನ್ನಮಹಾಕವಿಯು ‘ಸಾಹಸಭೀಮವಿಜಯ’, ‘ಅಜಿತ ತೀರ್ಥಂಕರ ಪುರಾಣ’ ಮೊದಲಾದ ಕೃತಿಗಳನ್ನು ರಚಿಸಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾನೆ. (Illustration of Attimabbe distributing books and statues to scholars and guests) ಅತ್ತಿಮಬ್ಬೆಯು ತಾಯಿಯಾಗುವ ವಿಚಾರ ತಿಳಿದು ಮನೆಯವರಿಗೆಲ್ಲ ಸಂತಸವಾಯಿತು. “ಒಂದು ಸಾವಿರ ಜಿನಾಲಯಗಳನ್ನು ಕಟ್ಟಿಸಬೇಕು. ಒಂದು ಸಾವಿರ ಬಂಗಾರದ ಜಿನಬಿಂಬಗಳನ್ನು ದಾನ ಮಾಡಬೇಕು. ಒಂದು ಸಾವಿರ ಮುನಿಗಳಿಗೆ ಆಹಾರ ನೀಡಬೇಕು” ಎಂಬುದೇ ಆಕೆಯ ಮಹಾಬಯಕೆಯಾಗಿತ್ತು. ಆ ಬಯಕೆ ಈಡೇರಿತು. ಅತ್ತಿಮಬ್ಬೆಯು ಗಂಡು ಮಗುವಿನ ತಾಯಿಯಾದಳು. ಮಗುವಿಗೆ ಅಣ್ಣಿಗದೇವ ಎಂದು ನಾಮಕರಣ ಮಾಡಿದರು. ಅತ್ತಿಮಬ್ಬೆಯು ಕೆಲವು ವೇಳೆ ನಾಗದೇವನೊಂದಿಗೆ ತಾನೂ ಯುದ್ಧಕ್ಕೆ ಹೋಗುತ್ತಿದ್ದಳು. ಸಾರಥಿಯಾಗಿ ರಥ ನಡೆಸುತ್ತಿದ್ದಳು. ಕತ್ತಿ ಹಿಡಿದು ವೀರಾವೇಶದಿಂದ ಹೋರಾಡುತ್ತಿದ್ದಳು. ಇವಳ ಶೌರ್ಯ ಸಾಹಸಗಳನ್ನು ಕಂಡು ಈಕೆ ದಾನಶೂರೆ, ದಯಾಶೀಲೆ, ಧರ್ಮಿಷ್ಠೆ ಮಾತ್ರವಲ್ಲ ರಣಧೀರೆ ಎಂದು ಜನರು ಕೊಂಡಾಡುತ್ತಿದ್ದರು. ನಾಗದೇವನ ಮರಣಾನಂತರ ಅತ್ತಿಮಬ್ಬೆಯು ವೈರಾಗ್ಯ ತಾಳಿದಳು. ತೈಲಪ ಚಕ್ರವರ್ತಿಯು ಅಣ್ಣಿಗದೇವನನ್ನು ಲಕ್ಕುಂಡಿ ಪ್ರಾಂತ್ಯಕ್ಕೆ ಸಾಮಂತನನ್ನಾಗಿ ನೇಮಿಸಿದನು. ಅತ್ತಿಮಬ್ಬೆ ಮಗನೊಂದಿಗೆ ಲಕ್ಕುಂಡಿಯಲ್ಲಿ ನೆಲೆಸಿದಳು. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಜಿನದೇವಾಲಯ ಕಟ್ಟಿಸಿದಳು. ಇಲ್ಲಿ ಅವಳ ಶಾಸನವೂ ಇದೆ. ರನ್ನ ಕವಿಯಿಂದ ‘ಅಜಿತ ತೀರ್ಥಂಕರ ಪುರಾಣ’ ಬರೆಸಿ ಅದರ ಹಸ್ತಪ್ರತಿಗಳನ್ನು ಹಂಚಿದಳು. ತಾನು ಕಟ್ಟಿಸಿದ ಜಿನಾಲಯಗಳಿಗೆ ದತ್ತಿಗಳನ್ನು ನೀಡಿದಳು. ಹೀಗೆ ಧರ್ಮಕಾರ್ಯಗಳಲ್ಲಿ ನಿರತಳಾಗಿ ತನ್ನ ಅಂತಿಮ ದಿನಗಳಲ್ಲಿ ಉಪವಾಸ ವ್ರತಗಳನ್ನು ಕೈಗೊಂಡು ಕೀರ್ತಿಶೇಷಳಾದಳು. ರನ್ನ ಮಹಾಕವಿಯು ಇವಳನ್ನು ‘ದಾನಚಿಂತಾಮಣಿ’ ಎಂದು ಹಾಡಿ ಹೊಗಳಿದ್ದಾನೆ. ತನ್ನ ಮಗಳಿಗೆ ಅತ್ತಿಮಬ್ಬೆ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾನೆ. ಕರ್ನಾಟಕ ಸರ್ಕಾರವು ಅತ್ತಿಮಬ್ಬೆಯ ಸ್ಮರಣಾರ್ಥ ಉತ್ತಮ ಸಾಧನೆಗೈದ ಮಹಿಳಾ ಸಾಹಿತಿಗೆ ‘ಅತ್ತಿಮಬ್ಬೆ ಪ್ರಶಸ್ತಿ’ ನೀಡಿ ಗೌರವಿಸುತ್ತಾ ಬಂದಿದೆ. ಅತ್ತಿಮಬ್ಬೆಯ ಈ ದಾನ ಶೀಲ ಗುಣವು ಅನುಪಮ, ಅನನ್ಯ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ ತಿಳಿಯಿರಿ :

  1. ಅನುಪಮ - ಹೋಲಿಕೆ ಮೀರಿದ; ಶ್ರೇಷ್ಠ.

  2. ಅವಳಿ - ಜೋಡಿ

  3. ಉಪವಾಸ - ಆಹಾರ ಸ್ವೀಕರಿಸದಿರುವುದು.

  4. ಜಿನ - ಜೈನ ಸನ್ಯಾಸಿ

  5. ದೃಷ್ಟಿ - ನೋಟ

  6. ಬಂಧು - ನೆಂಟ

  7. ಮಿತ್ರ - ಗೆಳೆಯ; ಸ್ನೇಹಿತ.

  8. ಸಂಪನ್ನ - ಸಜ್ಜನ; ಶ್ರೇಷ್ಠ; ಧನಿಕ.

  9. ಅನನ್ಯ - ಬೇರೆಯಲ್ಲದ; ಅದ್ವಿತೀಯ.

  10. ಈಡೇರು - ನೆರವೇರು

  11. ಕಲಿ - ವೀರ

  12. ಜಿನಬಿಂಬ - ತೀರ್ಥಂಕರರ ಪ್ರತಿಮೆ

  13. ಪ್ರಖ್ಯಾತ - ಪ್ರಸಿದ್ಧ

  14. ಬಿಂಬ - ಪ್ರತಿರೂಪ

  15. ಸನ್ನಡತೆ - ಒಳ್ಳೆಯ ನಡವಳಿಕೆ

  16. ಹಸ್ತ - ಕೈ; ಕರ.

ಟಿಪ್ಪಣಿಗಳು :

  1. ೧. ದತ್ತಿ : ದಾನವಾಗಿ ಕೊಟ್ಟ ಭೂಮಿ, ಹಣ ಇತ್ಯಾದಿ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಒಂದು ಸಂಸ್ಥೆಯಲ್ಲಿ ಒಬ್ಬರ ಹೆಸರಿನಲ್ಲಿಟ್ಟ ಶಾಶ್ವತ ನಿಧಿ.

  2. ೨. ಹಸ್ತಪ್ರತಿ : ಕೈಬರಹದ ಮೂಲಕ ಬರೆದ ಪ್ರತಿ. ಕೈಬರವಣಿಗೆಯ ಮೂಲ ಪ್ರತಿ.

  3. ೩. ವೈರಾಗ್ಯ : ಆಸೆಗಳನ್ನು ತ್ಯಜಿಸಿದ ಭಾವ.

  4. ೪. ಕೀರ್ತಿಶೇಷ : ಮರಣಾನಂತರವೂ ವ್ಯಕ್ತಿಯ ಕೀರ್ತಿ ಹಾಗೂ ಹೆಸರು ಅಮರವಾಗಿ ಉಳಿಯುವುದು.

  5. ೫. ಚಿಂತಾಮಣಿ : ಬಯಸಿದುದನ್ನು ಕೊಡಬಲ್ಲ ದೇವಲೋಕದ ದಿವ್ಯರತ್ನ.

  6. ೬. ಜಿನಾಲಯ : ಜೈನಧರ್ಮದವರ ಪ್ರಾರ್ಥನಾ ಸ್ಥಳ.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಅತ್ತಿಮಬ್ಬೆಯ ತಂದೆ, ತಾಯಿಯ ಹೆಸರೇನು?

    Answer

    ಅತ್ತಿಮಬ್ಬೆಯ ತಂದೆ ಮಲ್ಲಪಯ್ಯ ಮತ್ತು ತಾಯಿ ಅಬ್ಬಕಬ್ಬೆ.

  2. ೨. ಅತ್ತಿಮಬ್ಬೆಯನ್ನು ಜನರು ಏನೆಂದು ಕೊಂಡಾಡುತ್ತಿದ್ದರು?

    Answer

    ಅತ್ತಿಮಬ್ಬೆಯನ್ನು ಜನರು ದಾನಶೂರೆ, ದಯಾಶೀಲೆ, ಧರ್ಮಿಷ್ಠೆ ಮತ್ತು ರಣಧೀರೆ ಎಂದು ಕೊಂಡಾಡುತ್ತಿದ್ದರು.

  3. ೩. ಅತ್ತಿಮಬ್ಬೆಯ ಮೇಲಿನ ಅಭಿಮಾನವನ್ನು ರನ್ನ ಹೇಗೆ ತೋರಿದ್ದಾನೆ?

    Answer

    ರನ್ನ ಮಹಾಕವಿಯು ಅತ್ತಿಮಬ್ಬೆಯನ್ನು ‘ದಾನಚಿಂತಾಮಣಿ’ ಎಂದು ಹಾಡಿ ಹೊಗಳಿದ್ದಾನೆ ಮತ್ತು ತನ್ನ ಮಗಳಿಗೆ ಅತ್ತಿಮಬ್ಬೆ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾನೆ.

  4. ೪. ಬಾಲಕಿ ಅತ್ತಿಮಬ್ಬೆಯಲ್ಲಿದ್ದ ಗುಣಗಳಾವುವು?

    Answer

    ಬಾಲಕಿ ಅತ್ತಿಮಬ್ಬೆಯು ಅತಿಚತುರೆ, ವಿನಯ ಮತ್ತು ವಿವೇಕ ಸಂಪನ್ನೆಯಾಗಿದ್ದಳು.

  5. ೫. ಅತ್ತಿಮಬ್ಬೆ ತನ್ನ ಅಣ್ಣಂದಿರಿಂದ ಯಾವ ವಿದ್ಯೆಗಳನ್ನು ಕಲಿತಳು?

    Answer

    ಅತ್ತಿಮಬ್ಬೆ ತನ್ನ ಅಣ್ಣಂದಿರಿಂದ ಕತ್ತಿವರಸೆ, ಕುದುರೆ ಸವಾರಿ ಮತ್ತು ಬಿಲ್ಲಿದ್ಯೆಗಳನ್ನು ಕಲಿತಳು.

  6. ೬. ಅತ್ತಿಮಬ್ಬೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತಿದೆ?

    Answer

    ಅತ್ತಿಮಬ್ಬೆ ಪ್ರಶಸ್ತಿಯನ್ನು ಉತ್ತಮ ಸಾಧನೆಗೈದ ಮಹಿಳಾ ಸಾಹಿತಿಗೆ ನೀಡಲಾಗುತ್ತಿದೆ.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಅತ್ತಿಮಬ್ಬೆಯ ವಿವಾಹ ಸಂದರ್ಭದಲ್ಲಿ ಬಂಧು ಮಿತ್ರರಿಗೆ ಏನನ್ನು ಉಡುಗೊರೆಯಾಗಿ ನೀಡಲಾಯಿತು?

    Answer

    ಅತ್ತಿಮಬ್ಬೆಯ ವಿವಾಹ ಸಂದರ್ಭದಲ್ಲಿ ಬಂಧು-ಮಿತ್ರರಿಗೆ ಬಂಗಾರದ ಜಿನಬಿಂಬ ಹಾಗೂ ಶಾಂತಿಪುರಾಣದ ಹಸ್ತಪ್ರತಿಗಳನ್ನು ಉಡುಗೊರೆಯಾಗಿ ನೀಡಲಾಯಿತು.

  2. ೨. ತಾಯಿಯಾಗುವ ಸಂದರ್ಭದಲ್ಲಿ ಅತ್ತಿಮಬ್ಬೆಯ ಮಹಾಬಯಕೆ ಏನಾಗಿತ್ತು?

    Answer

    ತಾಯಿಯಾಗುವ ಸಂದರ್ಭದಲ್ಲಿ ಅತ್ತಿಮಬ್ಬೆಯ ಮಹಾಬಯಕೆ ಒಂದು ಸಾವಿರ ಜಿನಾಲಯಗಳನ್ನು ಕಟ್ಟಿಸಬೇಕು, ಒಂದು ಸಾವಿರ ಬಂಗಾರದ ಜಿನಬಿಂಬಗಳನ್ನು ದಾನ ಮಾಡಬೇಕು ಮತ್ತು ಒಂದು ಸಾವಿರ ಮುನಿಗಳಿಗೆ ಆಹಾರ ನೀಡಬೇಕು ಎಂಬುದಾಗಿತ್ತು.

  3. ೩. ಅತ್ತಿಮಬ್ಬೆ ತನ್ನ ಗಂಡನೊಂದಿಗೆ ರಣರಂಗದಲ್ಲಿ ಹೇಗೆ ಹೋರಾಟ ಮಾಡುತ್ತಿದ್ದಳು?

    Answer

    ಅತ್ತಿಮಬ್ಬೆ ತನ್ನ ಗಂಡನೊಂದಿಗೆ ರಣರಂಗದಲ್ಲಿ ಸಾರಥಿಯಾಗಿ ರಥ ನಡೆಸುತ್ತಿದ್ದಳು ಮತ್ತು ಕತ್ತಿ ಹಿಡಿದು ವೀರಾವೇಶದಿಂದ ಹೋರಾಡುತ್ತಿದ್ದಳು.

  4. ೪. ಅತ್ತಿಮಬ್ಬೆ ವಿದ್ಯಾಪೋಷಿತೆಯಾಗಿ ಮಾಡಿದ ಕಾರ್ಯಗಳೇನು?

    Answer

    ಅತ್ತಿಮಬ್ಬೆ ವಿದ್ಯಾಪೋಷಿತೆಯಾಗಿ ಕಷ್ಟದಲ್ಲಿದ್ದ ಬಾಲಕನಿಗೆ ಆಶ್ರಯ ದೊರಕಿಸಿಕೊಟ್ಟಳು, ಗುರುಕುಲಕ್ಕೆ ಸಾಕಷ್ಟು ಧನಸಹಾಯ ಮಾಡಿದಳು ಮತ್ತು ವಿದ್ಯಾಪ್ರಗತಿಗೆ ನೆರವಾದಳು.

  5. ೫. ಅತ್ತಿಮಬ್ಬೆಯು ತನ್ನ ಗಂಡನ ಮರಣಾನಂತರ ಮಾಡಿದ ಕಾರ್ಯಗಳು ಯಾವುವು?

    Answer

    ಅತ್ತಿಮಬ್ಬೆಯು ತನ್ನ ಗಂಡನ ಮರಣಾನಂತರ ವೈರಾಗ್ಯ ತಾಳಿದಳು, ಲಕ್ಕುಂಡಿಯಲ್ಲಿ ಜಿನದೇವಾಲಯ ಕಟ್ಟಿಸಿದಳು, ರನ್ನ ಕವಿಯಿಂದ ‘ಅಜಿತ ತೀರ್ಥಂಕರ ಪುರಾಣ’ ಬರೆಸಿ ಹಸ್ತಪ್ರತಿಗಳನ್ನು ಹಂಚಿದಳು ಮತ್ತು ಜಿನಾಲಯಗಳಿಗೆ ದತ್ತಿಗಳನ್ನು ನೀಡಿದಳು.

ಇ) 'ಅ' ಪಟ್ಟಿಯ ಅಂಶಗಳನ್ನು 'ಬ' ಪಟ್ಟಿಯ ಅಂಶಗಳೊಂದಿಗೆ ಹೊಂದಿಸಿ ಬರೆಯಿರಿ.

  1. 'ಅ' ಪಟ್ಟಿ

  2. ೧) ಆದಿಪುರಾಣ

    Answer

    ೧) ಆದಿಪುರಾಣ - ಈ) ಪಂಪಕವಿ

  3. ೨) ಶಾಂತಿಪುರಾಣ

    Answer

    ೨) ಶಾಂತಿಪುರಾಣ - ಇ) ಪೊನ್ನಕವಿ

  4. ೩) ಸಾಹಸಭೀಮವಿಜಯ

    Answer

    ೩) ಸಾಹಸಭೀಮವಿಜಯ - ಉ) ರನ್ನಕವಿ

  5. ೪) ದಾನಚಿಂತಾಮಣಿ

    Answer

    ೪) ದಾನಚಿಂತಾಮಣಿ - ಅ) ಅತ್ತಿಮಬ್ಬೆ

  6. 'ಬ' ಪಟ್ಟಿ

  7. ಅ) ಅತ್ತಿಮಬ್ಬೆ

  8. ಆ) ಲಕ್ಕುಂಡಿ

  9. ಇ) ಪೊನ್ನಕವಿ

  10. ಈ) ಪಂಪಕವಿ

  11. ಉ) ರನ್ನಕವಿ

ಈ) ಬಿಟ್ಟಿರುವ ಸ್ಥಳದಲ್ಲಿ ಸರಿಯಾದ ಪದವನ್ನು ಬರೆದು, ವಾಕ್ಯವನ್ನು ಪೂರ್ಣಗೊಳಿಸಿರಿ.

  1. ೧. ಅತ್ತಿಮಬ್ಬೆಯ ಗುರುಗಳ ಹೆಸರು ________________

    Answer

    ೧. ಅತ್ತಿಮಬ್ಬೆಯ ಗುರುಗಳ ಹೆಸರು ಜಿನಚಂದ್ರ.

  2. ೨. ಅತ್ತಿಮಬ್ಬೆಯ ಗಂಡನ ಹೆಸರು ________________

    Answer

    ೨. ಅತ್ತಿಮಬ್ಬೆಯ ಗಂಡನ ಹೆಸರು ನಾಗದೇವ.

  3. ೩. ರನ್ನನ ಗುರುಗಳ ಹೆಸರು ________________

    Answer

    ೩. ರನ್ನನ ಗುರುಗಳ ಹೆಸರು ಅಜಿತಸೇನಾಚಾರ್ಯ.

  4. ೪. ರನ್ನನಿಗೆ ಇದ್ದ ಬಿರುದು ________________

    Answer

    ೪. ರನ್ನನಿಗೆ ಇದ್ದ ಬಿರುದು ಕವಿಚಕ್ರವರ್ತಿ.

  5. ೫. ಅತ್ತಿಮಬ್ಬೆಯ ಮಗನ ಹೆಸರು ________________

    Answer

    ೫. ಅತ್ತಿಮಬ್ಬೆಯ ಮಗನ ಹೆಸರು ಅಣ್ಣಿಗದೇವ.

  6. ೬. ರನ್ನನ ಮಗಳ ಹೆಸರು ________________

    Answer

    ೬. ರನ್ನನ ಮಗಳ ಹೆಸರು ಅತ್ತಿಮಬ್ಬೆ.

III. ಭಾಷಾಭ್ಯಾಸ :

ಅ) ಇಲ್ಲಿ ನೀಡಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ಸನ್ನಡತೆ : ________________________________________

    Model sentence

    ಸನ್ನಡತೆ : ನನ್ನ ಸ್ನೇಹಿತೆಯ ಸನ್ನಡತೆಯನ್ನು ಎಲ್ಲರೂ ಮೆಚ್ಚುತ್ತಾರೆ.

  2. ೨. ಸಂಸ್ಕಾರ : ________________________________________

    Model sentence

    ಸಂಸ್ಕಾರ : ದೊಡ್ಡವರಿಗೆ ನಮಸ್ಕರಿಸುವುದು ಒಳ್ಳೆಯ ಸಂಸ್ಕಾರ.

  3. ೩. ವಿವೇಕ : ________________________________________

    Model sentence

    ವಿವೇಕ : ನಮ್ಮ ಅಣ್ಣ ತುಂಬಾ ವಿವೇಕದಿಂದ ಮಾತನಾಡುತ್ತಾನೆ.

  4. ೪. ವಿನಯ : ________________________________________

    Model sentence

    ವಿನಯ : ನಾವು ಶಿಕ್ಷಕರೊಂದಿಗೆ ವಿನಯದಿಂದ ನಡೆದುಕೊಳ್ಳಬೇಕು.

  5. ೫. ಅನುಪಮ : ________________________________________

    Model sentence

    ಅನುಪಮ : ನಮ್ಮ ಶಾಲೆಯ ವಾರ್ಷಿಕೋತ್ಸವದ ಸಂಭ್ರಮ ಅನುಪಮವಾಗಿತ್ತು.

ಆ) ಇಲ್ಲಿ ನೀಡಿರುವ ಪದಗಳ ಅನ್ಯಲಿಂಗ ರೂಪ ಬರೆಯಿರಿ.

  1. ೧. ಧರ್ಮಿಷ್ಠೆ - ________________

  2. ೨. ದಾನಶೂರ - ________________

    Answer

    ದಾನಶೂರೆ

  3. ೩. ಸಂಪನ್ನೆ - ________________

  4. ೪. ಚತುರ - ________________

    Answer

    ಚತುರೆ

  5. ೫. ದಯಾಶೀಲೆ - ________________

  6. ೬. ಕವಿ - ________________

    Answer

    ಕವಯಿತ್ರಿ

ಇ) ಇಲ್ಲಿ ನೀಡಿರುವ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ವಿದ್ಯಾಭ್ಯಾಸ = ________________ + ________________

    Answer

    ವಿದ್ಯಾ + ಅಭ್ಯಾಸ

  2. ೨. ದಿವ್ಯಾದರ್ಶ = ________________ + ________________

    Answer

    ದಿವ್ಯ + ಆದರ್ಶ

  3. ೩. ಬಿರುದಾಂಕಿತ = ________________ + ________________

    Answer

    ಬಿರುದ + ಅಂಕಿತ

  4. ೪. ಜಿನಾಲಯ = ________________ + ________________

    Answer

    ಜಿನ + ಆಲಯ

  5. ೫. ವೀರಾವೇಶ = ________________ + ________________

    Answer

    ವೀರ + ಆವೇಶ

  6. ೬. ಸಾಹಿತ್ಯಾಭಿಮಾನಿ = ________________ + ________________

    Answer

    ಸಾಹಿತ್ಯ + ಅಭಿಮಾನಿ

ಈ) ವಾಕ್ಯದಲ್ಲಿರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ ಬರೆಯಿರಿ.

  1. ೧. ಅತ್ತಿಮಬ್ಬೆ ನೆಲೆಸಿದಳು ಲಕ್ಕುಂಡಿಯಲ್ಲಿ ಮಗನೊಂದಿಗೆ.

    Answer

    ಅತ್ತಿಮಬ್ಬೆ ಮಗನೊಂದಿಗೆ ಲಕ್ಕುಂಡಿಯಲ್ಲಿ ನೆಲೆಸಿದಳು.

  2. ೨. ರಣರಂಗದಲ್ಲಿ ರಥ ಸಾರಥಿಯಾಗಿ ನಡೆಸುತ್ತಿದ್ದಳು ಅತ್ತಿಮಬ್ಬೆ.

    Answer

    ಅತ್ತಿಮಬ್ಬೆ ರಣರಂಗದಲ್ಲಿ ಸಾರಥಿಯಾಗಿ ರಥ ನಡೆಸುತ್ತಿದ್ದಳು.

  3. ೩. ಮರಣಾನಂತರ ನಾಗದೇವನ ವೈರಾಗ್ಯ ಅತ್ತಿಮಬ್ಬೆ ತಾಳಿದಳು.

    Answer

    ನಾಗದೇವನ ಮರಣಾನಂತರ ಅತ್ತಿಮಬ್ಬೆ ವೈರಾಗ್ಯ ತಾಳಿದಳು.

ಉ) ಇಲ್ಲಿ ನೀಡಿರುವ ಪದಗಳ ವಚನ ಬದಲಿಸಿ ಬರೆಯಿರಿ.

  1. ೧. ಕೃತಿಗಳು - ________________

  2. ೨. ಮಗು - ________________

    Answer

    ಮಕ್ಕಳು

  3. ೩. ವೀರ - ________________

    Answer

    ವೀರರು

  4. ೪. ದತ್ತಿ - ________________

    Answer

    ದತ್ತಿಗಳು

  5. ೫. ಅಣ್ಣ - ________________

    Answer

    ಅಣ್ಣಂದಿರು

  6. ೬. ಬಾಲಕ - ________________

    Answer

    ಬಾಲಕರು

ಊ) ಇಲ್ಲಿ ನೀಡಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ.

  1. ೧. ಬೆಳೆಯುವ ಸಿರಿ ಮೊಳಕೆಯಲ್ಲಿ.

    Answer

    ಒಬ್ಬ ವ್ಯಕ್ತಿಯ ಭವಿಷ್ಯದ ಗುಣಗಳು ಅಥವಾ ಸಾಧನೆಗಳು ಅವನ ಬಾಲ್ಯದ ನಡತೆಯಲ್ಲಿಯೇ ಕಾಣಿಸಿಕೊಳ್ಳುತ್ತವೆ.

  2. ೨. ಮನೆಯೇ ಮೊದಲ ಪಾಠಶಾಲೆ.

    Answer

    ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರದ ಮೊದಲ ಪಾಠವು ಮನೆಯಿಂದಲೇ ಪ್ರಾರಂಭವಾಗುತ್ತದೆ.

IV. ಚಟುವಟಿಕೆಗಳು :

  1. ೧. ಟಿ. ಸುನಂದಮ್ಮ, ಶಾಂತಾದೇವಿ ಮಾಳವಾಡ, ಕಮಲಾ ಹಂಪನಾ, ಸಾರಾ ಅಬೂಬಕ್ಕರ್, ಗೀತಾ ನಾಗಭೂಷಣ, ಬಿ.ಟಿ. ಲಲಿತಾನಾಯಕ್, ಶಶಿಕಲಾ ವೀರಯ್ಯಸ್ವಾಮಿ ಮೊದಲಾದ ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ ಪುರಸ್ಕೃತರ ಭಾವ ಚಿತ್ರಗಳನ್ನು ಸಂಗ್ರಹಿಸಿ. ಇವರ ಸಾಹಿತ್ಯ ಕೃತಿಗಳನ್ನು ಪರಿಚಯಮಾಡಿಕೊಳ್ಳಿ.

  2. ೨. ಸ್ಥಳೀಯ ಸಾಹಿತ್ಯ ಪೋಷಕರ ವಿವರ ಪಡೆದು, ಅವರನ್ನು ಭೇಟಿಮಾಡಿರಿ.

Interactive Lab