CRECT Education

Class 7 Kannada Lesson 15: A Walk in the Fair | Savi Kannada – Learn the Story

Description

Learn the story of 'ಜಾತ್ರೆಯಲ್ಲಿ ಒಂದು ಸುತ್ತು' (A Walk in the Fair) from the KTBS Class 7 Kannada Second Language textbook. We follow Venu and Rashmi through a village fair, meet a friend, watch a tightrope walker, and learn important words like ಚರ್ಮವಾದ್ಯ, ಕುಶಲತೆ, and ಹರ್ಷೋದ್ಗಾರ.

ಗದ್ಯ (prose) · ಸಂಪಾದಿತ

ಪಠ್ಯFull text

ಪರೀಕ್ಷೆ ಮುಗಿದು ಬೇಸಿಗೆ ರಜೆ ಪ್ರಾರಂಭವಾಯಿತು. ವೇಣು ಮತ್ತು ರಶ್ಮಿ ತಾಯಿಯೊಂದಿಗೆ ಅಜ್ಜನ ಮನೆಗೆ ಹೊರಟರು. ಮಧ್ಯಾಹ್ನದ ವೇಳೆಗಾಗಲೇ ಅಜ್ಜನಮನೆ ತಲುಪಿದರು. ಸಂಜೆ ಎಲ್ಲರೂ ಊರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಹೊರಟರು. [ಜಾತ್ರೆ ಮೈದಾನದಲ್ಲಿ ಸಾಲುಸಾಲು ಅಂಗಡಿಗಳು. ಆಟಿಕೆ ಸಾಮಾನುಗಳ, ಬಲೂನುಗಳ, ಗೊಂಬೆಗಳ, ಬಳೆ ಸರಗಳ, ಬೆಂಡು ಬತ್ತಾಸು ಸಿಹಿ ತಿಂಡಿಗಳ ಅಂಗಡಿಗಳು ಒಂದೆಡೆ. ಬಟ್ಟೆ, ಪಾತ್ರೆ, ಹೂ-ಹಣ್ಣುಗಳ ಅಂಗಡಿಗಳ ಸಾಲು ಮತ್ತೊಂದು ಕಡೆ. ಮಗದೊಂದು ಕಡೆ ಹೋಟೆಲುಗಳು, ಜೋಕಾಲಿಗಳು, ತೂಗುತೊಟ್ಟಿಲುಗಳು ಇದ್ದವು. ಎಲ್ಲಿ ನೋಡಿದರೂ ಜನಸಾಗರ. ಮಕ್ಕಳು ಅಜ್ಜನೊಡನೆ ಜಾತ್ರೆ ಅಂಗಳವನ್ನು ಪ್ರವೇಶಿಸುವರು....] ವೇಣು : (ಆಶ್ಚರ್ಯದಿಂದ) ಅಬ್ಬಾ ! ಅಜ್ಜಾ, ಇಲ್ಲಿ ಎಷ್ಟೊಂದು ಅಂಗಡಿಗಳಿವೆಯಲ್ಲಾ! ಪ್ರತಿದಿನವೂ ಹೀಗೆ ಇರುತ್ತವೆಯೇ? ಅಜ್ಜ : ಇಲ್ಲ ವೇಣು.... ಬೇರೆ ದಿನಗಳಲ್ಲಿ ಇಷ್ಟೊಂದು ಅಂಗಡಿಗಳು ಇರುವುದಿಲ್ಲ. ಜಾತ್ರೆಗೆಂದು ವಿಶೇಷವಾಗಿ ಹಾಕಿರುತ್ತಾರೆ. ರಶ್ಮಿ : ಅಜ್ಜ, ಜಾತ್ರೆಯಲ್ಲೇಕೆ ಇಷ್ಟೊಂದು ಅಂಗಡಿಗಳು? ಅಜ್ಜ : ರಶ್ಮಿ, ಜಾತ್ರೆಗೆ ಬಹಳಷ್ಟು ಜನ ಬರುತ್ತಾರೆ ಅಲ್ಲವಾ. ಬಂದವರು ತಮಗೆ ಬೇಕಾದುದನ್ನು ಕೊಂಡುಕೊಳ್ಳಲು ಅನುಕೂಲವಾಗಲೆಂದು ದೂರದ ಊರುಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಅಲ್ಲದೆ ಮಾರಾಟಗಾರರಿಗೂ ಒಳ್ಳೆಯ ಅವಕಾಶವಲ್ಲವೇ. ವೇಣು : ಈ ಜಾತ್ರೆ ಎಷ್ಟು ದಿನ ನಡೆಯುತ್ತದೆ? ಅಜ್ಜ : ರಥ ಎಳೆಯುವುದು ಕೇವಲ ಒಂದು ದಿನ ಮಾತ್ರ. ಆದರೆ ಜನರ ಓಡಾಟ ಎರಡು ಮೂರು ದಿನಗಳವರೆಗೂ ಇರುತ್ತದೆ. ಬನ್ನಿ ಅಂಗಡಿ ಬೀದಿಗಳನ್ನು ಸುತ್ತಿಬರೋಣ. [ಎಲ್ಲರೂ ಅಂಗಡಿ ಬೀದಿಯಲ್ಲಿ ಸುತ್ತಾಡಿ ರಥಬೀದಿಗೆ ಬಂದರು. ವೇಣುವಿನ ಗೆಳೆಯ ಇರ್ಫಾನ್ ತನ್ನ ತಂದೆ ತಾಯಿಯೊಂದಿಗೆ ಎದುರಾದನು. ವೇಣುವನ್ನು ನೋಡುತ್ತಲೇ ಇರ್ಫಾನ್ ಪ್ರೀತಿಯಿಂದ ಅಪ್ಪಿಕೊಂಡ.] ವೇಣು : ಇರ್ಫಾನ್, ಹೇಗಿದ್ದೀಯಾ? ನಿಮ್ಮನ್ನು ಇಲ್ಲಿ ನೋಡಿ ತುಂಬಾ ಸಂತೋಷವಾಯಿತು. ಇರ್ಫಾನ್ : ಚೆನ್ನಾಗಿದ್ದೇವೆ, ಇದು ನಮ್ಮೂರ ಜಾತ್ರೆ. ಇಲ್ಲಿಯ ರಥವನ್ನು ನಿರ್ಮಿಸಿದವರು ಯಾರು ಗೊತ್ತಾ? ನಮ್ಮ ತಂದೆ ಕಣೋ! ಜೊತೆಗೆ ಅವರ ಗೆಳೆಯರಾದ ರಮೇಶ್, ಜಾರ್ಜ್, ಮಹಮದ್, ವಿನ್ಸೆಂಟ್, ಶಂಕರಪ್ಪ ಇತರರೂ ಸೇರಿ ರಥ ನಿರ್ಮಿಸಿದ್ದಾರೆ. ವೇಣು : ಹೌದಾ? ರಥದ ಜೋಡಣೆ, ಅದರ ಅಲಂಕಾರ ತುಂಬಾ ಸೊಗಸಾಗಿದೆ. ಇರ್ಫಾನ್ : ಹೌದು, ಇದೆಲ್ಲಾ ಒಂದು ದಿನದಲ್ಲಿ ಮಾಡಿದ್ದಲ್ಲ, ಹಲವು ದಿನಗಳಿಂದ ಎಲ್ಲರೂ ಸೇರಿ ಮಾಡಿರುವ ಸಿದ್ಧತೆ. ವೇಣು : ಎಂತಹ ಕುಶಲತೆ, ತುಂಬಾ ಸೊಗಸಾಗಿದೆ. [ಅಷ್ಟರಲ್ಲಿ ಚರ್ಮವಾದ್ಯದ ಶಬ್ದ ಎಲ್ಲರ ಗಮನ ಸೆಳೆಯಿತು. ಮಕ್ಕಳು ಕುತೂಹಲಗೊಂಡರು.] (Illustration of a crowded fair with a decorated chariot (Ratha) and people celebrating) ರಶ್ಮಿ : ಅಜ್ಜಾ, ಅದೇನು ಶಬ್ದ? ಅಜ್ಜ : ಜನರ ಗಮನ ಸೆಳೆಯಲು ದೊಂಬರಾಟದವರು ನುಡಿಸುತ್ತಿರುವ ಚರ್ಮವಾದ್ಯ. ರಶ್ಮಿ : ದೊಂಬರಾಟವೇ! ಹಾಗೆಂದರೇನು? ಅದೆಂತಹ ಆಟ? ಅಜ್ಜ : ಆಟದ ಬಗ್ಗೆ ತಿಳಿಬೇಕಾ? ಹಾಗಿದ್ದರೆ ಬನ್ನಿ ಅಲ್ಲಿಗೇ ಹೋಗೋಣ. [ಎಲ್ಲರೂ ದೊಂಬರಾಟ ನೋಡಲು ಹೋದರು. ಸುತ್ತಲೂ ಜನರ ಗುಂಪು. ನಡುವೆ ತಂತಿಯ ಮೇಲೆ ಬಾಲಕಿ ನಡೆಯುತ್ತಿದ್ದಾಳೆ.] ವೇಣು : ವ್ಹಾ! ಇರ್ಫಾನ್ ನೋಡಲ್ಲಿ, ಆ ಹುಡುಗಿ ತಂತಿ ಮೇಲೆ ಹೇಗೆ ನಡೆತಿದ್ದಾಳೆ? (Illustration of a girl walking on a tightrope holding a long pole, with a crowd watching) ಇರ್ಫಾನ್ : ಹೌದು, ಅವಳ ಧೈರ್ಯ, ಸಾಹಸವನ್ನು ಮೆಚ್ಚಲೇಬೇಕು. ರಶ್ಮಿ : ಅವಳು, ಯಾವ ಆಧಾರವೂ ಇಲ್ಲದೆ ಹೇಗೆ ನಡೆಯುತ್ತಿದ್ದಾಳೆ ನೋಡು. ವೇಣು : ಕೋಲಿನ ಸಹಾಯದಿಂದ ದೇಹದ ಸಮತೋಲನ ಕಾಯ್ದು ಎಚ್ಚರಿಕೆಯಿಂದ ನಡೆಯುತ್ತಿದ್ದಾಳೆ. ಇದಕ್ಕೆ ಧೈರ್ಯ ಮತ್ತು ನಿರಂತರ ಅಭ್ಯಾಸ ಇರಬೇಕು ಅಲ್ಲವೇ....ಅಜ್ಜ. ಅಜ್ಜ : ಹೌದು. ನೀನು ಹೇಳಿದ್ದು ಸರಿ. ರಶ್ಮಿ : ಅಜ್ಜಾ, ಈ ರೀತಿ ಚಿಕ್ಕ ಮಕ್ಕಳನ್ನು ದುಡಿಸುವುದು ತಪ್ಪಲ್ಲವೇ? ಅಲ್ದೇ... ಅವಳೂ ನಮ್ಮಂತೆ ಶಾಲೆಗೆ ಹೋಗಬೇಕಲ್ಲವೇ? ಅಜ್ಜ : ಹೌದು, ಅದಕ್ಕೇ ಮಕ್ಕಳ ಶಿಕ್ಷಣ ಮತ್ತು ಹಕ್ಕಿನ ಕಾಯ್ದೆ ಜಾರಿಗೆ ಬಂದಿರೋದು. ಅಷ್ಟೇ ಅಲ್ಲ ಹಿಂದೆ ಈ ಆಟಗಳಲ್ಲಿ ಪ್ರಾಣಿಗಳನ್ನೂ ಬಳಸುತ್ತಿದ್ದರು. ಈಗ ಪ್ರಾಣಿಗಳನ್ನು ಬಳಸಬಾರದೆಂಬ ಕಾನೂನು ಇದೆ. ವೇಣು : ಅಜ್ಜ, ಆ ಹುಡುಗಿಯನ್ನು ಶಾಲೆಗೆ ಸೇರಿಸುವಂತೆ ಅವಳ ತಂದೆಗೆ ಹೇಳೋಣ ಬನ್ನಿ... [ಎಲ್ಲರೂ ದೊಂಬರಾಟದವನ ಬಳಿ ಹೋಗಿ ಹುಡುಗಿಯನ್ನು ಶಾಲೆಗೆ ಸೇರಿಸುವಂತೆ ಕೇಳಿಕೊಳ್ಳುತ್ತಾರೆ. ದೊಂಬರಾಟದವನು ಮಕ್ಕಳ ಮಾತುಗಳಿಗೆ ಮನಸೋತು, ಮಗಳನ್ನು ಶಾಲೆಗೆ ಸೇರಿಸಲು ಒಪ್ಪುತ್ತಾನೆ. ಮಕ್ಕಳಿಗೆ ಸಂತೋಷವಾಗುತ್ತದೆ.] ರಶ್ಮಿ : ಅಜ್ಜ, ಈಗ ರಥ ನೋಡಲು ಹೋಗೋಣವೇ? ಅಜ್ಜ : ಹೋಗೋಣ, ಈಗ ಏನಾದ್ರೂ ತಿಂತೀರಾ? ವೇಣು : ಬೇಡ ಅಜ್ಜಾ. ತೆರೆದಿಟ್ಟ ತಿಂಡಿಗಳನ್ನು ತಿನ್ನಬಾರದು. ಅವುಗಳ ಮೇಲೆ ಧೂಳು, ಕ್ರಿಮಿಕೀಟಗಳು ಕುಳಿತಿರುತ್ತವೆ. ರಶ್ಮಿ : ವೇಣು ಹೇಳಿದ್ದು ಸರಿ, ಇದನ್ನು ತಿಂದ್ರೆ ವಾಂತಿ ಭೇದಿ ಬರುತ್ತಂತೆ. ಹಾಗಂತ ನಮ್ಮ ಟೀಚರ್ ಹೇಳಿದ್ರು. ಅಜ್ಜ : ಹೌದೇ? ಹಾಗಿದ್ರೆ ತೆರೆದಿಟ್ಟ ತಿಂಡಿ ತಿನ್ನುವುದು ಬೇಡ ಬನ್ನಿ.... ಈಗ ರಥದ ಬಳಿ ಹೋಗೋಣ್ವೇ? [ಎಲ್ಲರೂ ರಥದ ಬಳಿಗೆ ಹೊರಟರು. ಅಲ್ಲಲ್ಲಿ ನಿರ್ಮಿಸಿದ್ದ ವೇದಿಕೆಗಳನ್ನು ಕಂಡರು.] ರಶ್ಮಿ : ಅಜ್ಜಾ... ಆ ವೇದಿಕೆಗಳು ಏಕೆ? ಅಜ್ಜ : ರಥವನ್ನು ಎಳೆದ ನಂತರ ಅಲ್ಲಿ ನಾಟಕ, ಯಕ್ಷಗಾನ, ಬಯಲಾಟ, ನೃತ್ಯ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಮಕ್ಕಳೇ, ಅಲ್ಲಿ ನೋಡಿ ರಥ ಎಳೆಯುತ್ತಿದ್ದಾರೆ. [ಎಲ್ಲರೂ ರಥದ ಸನಿಹಕ್ಕೆ ಬಂದರು. ಜನರು ಭಕ್ತಿ ಭಾವದಿಂದ ಘೋಷಣೆಗಳನ್ನು ಕೂಗುತ್ತಾ ರಥವನ್ನು ಎಳೆಯುತ್ತಿದ್ದಾರೆ. ನೆರೆದ ಸಮೂಹದ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಎತ್ತ ನೋಡಿದರೂ ಜನವೋ ಜನ. ರಥದ ಮುಂದೆ ಕಲಾ ತಂಡಗಳ ಮೆರವಣಿಗೆ ಸಾಗಿತ್ತು.] ವೇಣು : ರಥದ ಮುಂದೆ ಸಾಗುತ್ತಿರುವ ವಿವಿಧ ವೇಷಧಾರಿಗಳು ಯಾರು? ಅಜ್ಜ : ನೋಡಿ ಅಲ್ಲಿ ರಥದ ಮುಂದೆ ನಂದಿಧ್ವಜ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಹಾಲಕ್ಕಿ ಕುಣಿತ ಮೊದಲಾದ ಜಾನಪದ ಕಲಾವಿದರು ನರ್ತಿಸುತ್ತಾ ಸಾಗುತ್ತಿದ್ದಾರೆ. ಜೊತೆಗೆ ಬ್ಯಾಂಡ್, ಓಲಗ, ತಮಟೆ, ಕಹಳೆವಾದಕರು ಸಾಗುತ್ತಿದ್ದಾರೆ. ಚಂಡೆಧ್ವನಿಗೆ ಯಕ್ಷಗಾನ ವೇಷಧಾರಿಗಳು ಕುಣಿಯುತ್ತಾ ಸಾಗುತ್ತಿದ್ದಾರೆ. [ಎಂದು ಅಜ್ಜ ಪರಿಚಯಿಸಿದರು. ಮಕ್ಕಳು ಎಲ್ಲವನ್ನು ಸಂತಸದಿಂದ ವೀಕ್ಷಿಸಿದರು. ನಂತರ ಮನೆಗೆ ಹಿಂತಿರುಗಿದರು.]

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ ತಿಳಿಯಿರಿ :

  1. ಆಕರ್ಷಿಸು - ಸೆಳೆ; ಕಾಯ್ದೆ - ಕಾನೂನು; ಕಟ್ಟಳೆ; ನಿಯಮ; ಕುಶಲತೆ - ನಿಪುಣತೆ; ಚರ್ಮವಾದ್ಯ - ಚರ್ಮದಿಂದ ಮಾಡಿದ ವಾದ್ಯ; ಜಾತ್ರೆ - ರಥೋತ್ಸವಕ್ಕೆ ಜನ ಸೇರುವುದು; ನಿರಂತರ - ಸದಾ; ಯಾವಾಗಲೂ; ನಿರ್ಮಿಸು - ತಯಾರಿಸು; ಬೆಂಡು ಬತ್ತಾಸು - ಒಂದು ಬಗೆಯ ಸಿಹಿತಿಂಡಿ; ಸನಿಹ - ಹತ್ತಿರ; ಸಮೂಹ - ಗುಂಪು; ಸೊಗಸು - ಚೆಲುವು; ಹರ್ಷೋದ್ಗಾರ - ಸಂತೋಷದ ಧ್ವನಿ.

ಟಿಪ್ಪಣಿಗಳು :

  1. ೧. ನಂದಿಧ್ವಜ - ಹದಿನಾರರಿಂದ ಹದಿನೆಂಟು ಮೊಳ ಎತ್ತರವಿರುವ ಬಿದುರಿನ ಬೊಂಬಿಗೆ ಹಿತ್ತಾಳೆ ಬಿರುಡೆಗಳನ್ನು ಜೋಡಿಸಿರುತ್ತಾರೆ. ಏಳೆಂಟು ಅಡಿ ಎತ್ತರದಲ್ಲಿ ಸಣ್ಣ ಆಕೃತಿಯ ನಂದಿ ವಿಗ್ರಹವಿರುತ್ತದೆ. ಕಂಬದ ತುದಿಗೆ ರೇಷ್ಮೆ ಧ್ವಜವನ್ನು ಕಟ್ಟಿರುತ್ತಾರೆ.

  2. ೨. ವೀರಗಾಸೆ - ಶೈವ ಸಂಪ್ರದಾಯಕ್ಕೆ ಸೇರಿದ ಒಂದು ಜಾನಪದ ಕಲೆ.

  3. ೩. ಯಕ್ಷಗಾನ - ವಿಶಿಷ್ಟವಾದ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ ಹಾಗೂ ವೇಷಭೂಷಣಗಳನ್ನು ಒಳಗೊಂಡ ಒಂದು ಶಾಸ್ತ್ರೀಯ ಕಲೆ. ಇದು ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.

  4. ೪. ಬಯಲಾಟ - ಕರ್ನಾಟಕದ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯತೆಗಳಿಂದ ಕೂಡಿದ ಪ್ರಾಚೀನ ಗಂಡುಕಲೆ. ಇದು ಪೌರಾಣಿಕ ಕಥೆಗಳನ್ನು ಆಧರಿಸಿ ರಾತ್ರಿಯೆಲ್ಲಾ ಪ್ರದರ್ಶನಗೊಳ್ಳುತ್ತದೆ.

  5. ೫. ಕಂಸಾಳೆ - ಮಲೆಮಹದೇಶ್ವರನ ಭಕ್ತರಾದ ದೇವರ ಗುಡ್ಡರು ಬಳಸುವ ವಿಶಿಷ್ಟವಾದ ವಾದ್ಯ.

  6. ೬. ಹಾಲಕ್ಕಿ ಕುಣಿತ - ಇದೊಂದು ಸುಗ್ಗಿ ಹಬ್ಬ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.

  7. ೭. ದೊಂಬರಾಟ - ದೈಹಿಕ ವ್ಯಾಯಾಮದ ಚಮತ್ಕಾರವನ್ನು ಪ್ರದರ್ಶಿಸುವ ಒಂದು ಜಾನಪದ ಕಲೆ. ಇದನ್ನು ನಡೆಸುವವರು ಬಹುತೇಕ ಅಲೆಮಾರಿಗಳೇ ಆಗಿರುತ್ತಾರೆ.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಜಾತ್ರೆಯಲ್ಲಿನ ಅಂಗಡಿಗಳನ್ನು ನೋಡಿ ವೇಣು ಏನೆಂದು ಆಶ್ಚರ್ಯ ವ್ಯಕ್ತಪಡಿಸಿದನು?

    Answer

    ಇಲ್ಲಿ ಎಷ್ಟೊಂದು ಅಂಗಡಿಗಳಿವೆಯಲ್ಲಾ ಎಂದು ವೇಣು ಆಶ್ಚರ್ಯ ವ್ಯಕ್ತಪಡಿಸಿದನು.

  2. ೨. ದೊಂಬರಾಟದ ಹುಡುಗಿ ಯಾವ ಸಾಹಸ ಮಾಡುತ್ತಿದ್ದಳು?

    Answer

    ದೊಂಬರಾಟದ ಹುಡುಗಿ ತಂತಿಯ ಮೇಲೆ ನಡೆಯುವ ಸಾಹಸ ಮಾಡುತ್ತಿದ್ದಳು.

  3. ೩. ದೊಂಬರಾಟದ ಹುಡುಗಿಯನ್ನು ಕಂಡ ರಶ್ಮಿಗೆ ಕಾಡಿದ ಪ್ರಶ್ನೆಗಳೇನು?

    Answer

    ಈ ರೀತಿ ಚಿಕ್ಕ ಮಕ್ಕಳನ್ನು ದುಡಿಸುವುದು ತಪ್ಪಲ್ಲವೇ? ಮತ್ತು ಅವಳೂ ನಮ್ಮಂತೆ ಶಾಲೆಗೆ ಹೋಗಬೇಕಲ್ಲವೇ? ಎಂಬ ಪ್ರಶ್ನೆಗಳು ರಶ್ಮಿಗೆ ಕಾಡಿದವು.

  4. ೪. ಅಜ್ಜನು ವೇದಿಕೆ ಮೇಲೆ ಯಾವ ಯಾವ ಕಾರ್ಯಕ್ರಮಗಳು ನಡೆಯುತ್ತವೆಂದು ಹೇಳಿದನು?

    Answer

    ನಾಟಕ, ಯಕ್ಷಗಾನ, ಬಯಲಾಟ, ನೃತ್ಯ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆಂದು ಅಜ್ಜನು ಹೇಳಿದನು.

  5. ೫. ಜಾತ್ರೆಯಲ್ಲಿ ತೆರೆದಿಟ್ಟ ಪದಾರ್ಥಗಳನ್ನು ತಿನ್ನಬಾರದು ಏಕೆ?

    Answer

    ತೆರೆದಿಟ್ಟ ಪದಾರ್ಥಗಳ ಮೇಲೆ ಧೂಳು ಮತ್ತು ಕ್ರಿಮಿಕೀಟಗಳು ಕುಳಿತಿರುತ್ತವೆ ಹಾಗೂ ಅವುಗಳನ್ನು ತಿಂದರೆ ವಾಂತಿ ಭೇದಿ ಬರುತ್ತದೆ.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಜಾತ್ರೆಯಲ್ಲಿ ಯಾವ ಯಾವ ಅಂಗಡಿಗಳು ಇದ್ದವು?

    Answer

    ಜಾತ್ರೆಯಲ್ಲಿ ಆಟಿಕೆ ಸಾಮಾನುಗಳ, ಬಲೂನುಗಳ, ಗೊಂಬೆಗಳ, ಬಳೆ ಸರಗಳ, ಬೆಂಡು ಬತ್ತಾಸು ಸಿಹಿ ತಿಂಡಿಗಳ ಅಂಗಡಿಗಳು ಒಂದೆಡೆ ಇದ್ದವು. ಬಟ್ಟೆ, ಪಾತ್ರೆ, ಹೂ-ಹಣ್ಣುಗಳ ಅಂಗಡಿಗಳ ಸಾಲು ಮತ್ತೊಂದು ಕಡೆ ಇತ್ತು. ಮಗದೊಂದು ಕಡೆ ಹೋಟೆಲುಗಳು, ಜೋಕಾಲಿಗಳು, ತೂಗುತೊಟ್ಟಿಲುಗಳು ಇದ್ದವು.

  2. ೨. ಜಾತ್ರೆಯಲ್ಲಿ ಬಹಳಷ್ಟು ಅಂಗಡಿಗಳು ಇರುತ್ತವೆ ಏಕೆ?

    Answer

    ಜಾತ್ರೆಗೆ ಬಹಳಷ್ಟು ಜನ ಬರುವುದರಿಂದ, ಅವರಿಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಅನುಕೂಲವಾಗಲೆಂದು ದೂರದ ಊರುಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಇದರಿಂದ ಮಾರಾಟಗಾರರಿಗೂ ಒಳ್ಳೆಯ ಅವಕಾಶ ಸಿಗುತ್ತದೆ.

  3. ೩. ರಥದ ನಿರ್ಮಾಣದ ಬಗ್ಗೆ ಇರ್ಫಾನ್ ಏನೆಂದು ಹೇಳಿದನು?

    Answer

    ಇರ್ಫಾನ್ ತನ್ನ ತಂದೆ ಮತ್ತು ಅವರ ಗೆಳೆಯರಾದ ರಮೇಶ್, ಜಾರ್ಜ್, ಮಹಮದ್, ವಿನ್ಸೆಂಟ್, ಶಂಕರಪ್ಪ ಮುಂತಾದವರು ಸೇರಿ ರಥವನ್ನು ನಿರ್ಮಿಸಿದ್ದಾರೆಂದು ಹೇಳಿದನು. ಅದು ಹಲವು ದಿನಗಳ ಸಿದ್ಧತೆಯಿಂದ ಮಾಡಿದ್ದು ಎಂದೂ ತಿಳಿಸಿದನು.

  4. ೪. ಅಜ್ಜನು ಶಿಕ್ಷಣ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಏನೆಂದು ಹೇಳಿದನು?

    Answer

    ಮಕ್ಕಳ ಶಿಕ್ಷಣ ಮತ್ತು ಹಕ್ಕಿನ ಕಾಯ್ದೆ ಜಾರಿಗೆ ಬಂದಿದೆ ಎಂದೂ, ಹಿಂದೆ ಪ್ರಾಣಿಗಳನ್ನು ಬಳಸುತ್ತಿದ್ದರೂ ಈಗ ಪ್ರಾಣಿಗಳನ್ನು ಬಳಸಬಾರದೆಂಬ ಕಾನೂನು ಇದೆ ಎಂದೂ ಅಜ್ಜನು ಹೇಳಿದನು.

  5. ೫. ರಥದ ಮುಂದೆ ಸಾಗಿದ ಕಲಾ ತಂಡಗಳು ಯಾವುವು?

    Answer

    ನಂದಿಧ್ವಜ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಹಾಲಕ್ಕಿ ಕುಣಿತ ಮೊದಲಾದ ಜಾನಪದ ಕಲಾವಿದರು, ಜೊತೆಗೆ ಬ್ಯಾಂಡ್, ಓಲಗ, ತಮಟೆ, ಕಹಳೆವಾದಕರು ಮತ್ತು ಯಕ್ಷಗಾನ ವೇಷಧಾರಿಗಳು ರಥದ ಮುಂದೆ ಸಾಗಿದರು.

ಇ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ.

  1. ೧. “ಜಾತ್ರೆಯಲ್ಲೇಕೆ ಇಷ್ಟೊಂದು ಅಂಗಡಿಗಳು.”

    Answer

    ರಶ್ಮಿಯು ಅಜ್ಜನಿಗೆ ಹೇಳಿದಳು.

  2. ೨. “ರಥದ ಮುಂದೆ ಸಾಗುತ್ತಿರುವ ವಿವಿಧ ವೇಷಧಾರಿಗಳು ಯಾರು?”

    Answer

    ವೇಣುವು ಅಜ್ಜನಿಗೆ ಹೇಳಿದನು.

  3. ೩. “ಹೌದು, ಅವಳ ಧೈರ್ಯ, ಸಾಹಸವನ್ನು ಮೆಚ್ಚಲೇಬೇಕು.”

    Answer

    ಇರ್ಫಾನನು ವೇಣುವಿಗೆ ಹೇಳಿದನು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ಆಕರ್ಷಿಸು :_____________________________________

    Model sentence

    ಆಕರ್ಷಿಸು: ಆಟದ ಸಾಮಾನುಗಳು ನನ್ನನ್ನು ಆಕರ್ಷಿಸುತ್ತವೆ.

  2. ೨. ಕುಶಲತೆ :_____________________________________

    Model sentence

    ಕುಶಲತೆ: ನನ್ನ ಅಕ್ಕನಿಗೆ ಚಿತ್ರ ಬಿಡಿಸುವುದರಲ್ಲಿ ಕುಶಲತೆ ಇದೆ.

  3. ೩. ಸೊಗಸು :_____________________________________

    Model sentence

    ಸೊಗಸು: ನಮ್ಮ ಶಾಲೆಯ ತೋಟ ತುಂಬಾ ಸೊಗಸಾಗಿದೆ.

  4. ೪. ವೀಕ್ಷಿಸು :_____________________________________

    Model sentence

    ವೀಕ್ಷಿಸು: ನಾನು ನಿನ್ನೆ ಒಂದು ಒಳ್ಳೆಯ ನಾಟಕವನ್ನು ವೀಕ್ಷಿಸಿದೆ.

  5. ೫. ಕುತೂಹಲ :_____________________________________

    Model sentence

    ಕುತೂಹಲ: ಹೊಸ ಪುಸ್ತಕವನ್ನು ನೋಡಿ ನನಗೆ ಕುತೂಹಲವಾಯಿತು.

ಆ) ಲಿಂಗ ಸಂಬಂಧಿ ‘ಅ’ ಪಟ್ಟಿಯಲ್ಲಿರುವ ಅಂಶಗಳಿಗೆ ‘ಬ’ ಪಟ್ಟಿಯ ಅಂಶಗಳನ್ನು ಹೊಂದಿಸಿ ಬರೆಯಿರಿ.

  1. | ‘ಅ’ ಪಟ್ಟಿ | ‘ಬ’ ಪಟ್ಟಿ |

    Answer

    ೧) ಅಜ್ಜಿ - ಅಜ್ಜ

  2. |---|---|

    Answer

    ೨) ತಾಯಿ - ತಂದೆ

  3. | ೧) ಅಜ್ಜಿ | ಅ) ಹುಡುಗ |

    Answer

    ೩) ಹುಡುಗಿ - ಹುಡುಗ

  4. | ೨) ತಾಯಿ | ಆ) ಅಜ್ಜ |

    Answer

    ೪) ಬಾಲಕಿ - ಬಾಲಕ

  5. | ೩) ಹುಡುಗಿ | ಇ) ಅಕ್ಕ |

    Answer

    ೫) ಗಂಡಸು - ಹೆಂಗಸು

  6. | ೪) ಬಾಲಕಿ | ಈ) ಹೆಂಗಸು |

    Answer

    ೬) ಅತ್ತೆ - ಮಾವ

  7. | ೫) ಗಂಡಸು | ಉ) ಮಾವ |

    Answer

    ೭) ಅಣ್ಣ - ಅಕ್ಕ

  8. | ೬) ಅತ್ತೆ | ಊ) ತಂದೆ |

  9. | ೭) ಅಣ್ಣ | ಋ) ಬಾಲಕ |

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಅನುಕೂಲ X ________

    Answer

    ಪ್ರತಿಕೂಲ

  2. ೨. ಸಂತೋಷ X ________

    Answer

    ದುಃಖ

  3. ೩. ಧೈರ್ಯ X ________

    Answer

    ಭಯ

  4. ೪. ಆಧಾರ X ________

    Answer

    ನಿರಾಧಾರ

  5. ೫. ಸಮತೋಲನ X ________

    Answer

    ಅಸಮತೋಲನ

  6. ೬. ಸನಿಹ X ________

    Answer

    ದೂರ

ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ಓಡಾಟ = ________ + ________

    Answer

    ಓಡು + ಆಟ

  2. ೨. ಬಯಲಾಟ = ________ + ________

    Answer

    ಬಯಲು + ಆಟ

  3. ೩. ಹರ್ಷೋದ್ಗಾರ = ________ + ________

    Answer

    ಹರ್ಷ + ಉದ್ಗಾರ

  4. ೪. ದೊಂಬರಾಟ = ________ + ________

    Answer

    ದೊಂಬಿ + ಆಟ

IV. ಚಟುವಟಿಕೆಗಳು :

  1. ೧. ನಿಮ್ಮ ಊರಿನ ಜಾನಪದ ಕಲೆಗಳು ಹಾಗೂ ಅವುಗಳ ವಿಶೇಷತೆಗಳನ್ನು ಕೇಳಿ ತಿಳಿಯಿರಿ.

  2. ೨. ನಿಮ್ಮ ಊರಿನ ಜಾತ್ರೆ ಅಥವಾ ಉತ್ಸವಗಳಲ್ಲಿ ಬಳಸುವ ವಾದ್ಯ ಪರಿಕರಗಳ ಮಾಹಿತಿ ಸಂಗ್ರಹಿಸಿ.

  3. ೩. ನಿಮ್ಮೂರಿನ ಜಾತ್ರೆಯ ವಿಶೇಷತೆಗಳನ್ನು ವಿವರಿಸಿ ಗೆಳೆಯನಿಗೆ ಒಂದು ಪತ್ರ ಬರೆಯಿರಿ.

V. ಪೂರಕ ಓದು :

ದೊಂಬರಾಟ

  1. ನೆರೆಯಿತಿದೋ ಜನರ ದೊಂಬಿ

  2. ದೊಂಬರಾಟ ನೋಡಲು

  3. ಬೇಸರಿಕೆಯ ದೂಡಲು

  4. ನೋಡಿ ಕಾಸ ನೀಡಲು

  5. ಸ್ವಲ್ಪ ಸುಖಿಸಿ ಮತ್ತೆ ಹೆಗಲ

  6. ಬಾಳ ನೊಗಕೆ ಹೂಡಲು || ೧ ||

  7. ಸರಸರಸರ ಗಣೆಯನೇರಿ

  8. ಮಿಣಿಯ ಮೇಲೆ ನಡೆದಳು

  9. ಡೊಂಬಿತಿ ತುಸು ತಡೆದಳು

  10. ಕೋಲನೊಂದ ಹಿಡಿದಳು

  11. ಕೋಲನತ್ತ ಇತ್ತ ಚಾಚಿ

  12. ಮಣಿದು ಕುಣಿದು ನಡೆದಳು || ೨ ||

  13. ಜೋಲಿ ಹೋಗದಂತೆ ಕೋಲ

  14. ಬಳಸುವವಳ ಚಾತುರ

  15. ಮಣಿ ಮೇಗಣ ಪಾತರ

  16. ನೋಡುವವರ ಕಾತರ

  17. ಡೊಂಬನಿಗೋ ಬೇಗ ಮುಗಿಸಿ

  18. ಕಾಸು ಪಡೆವ ಆತುರ || ೩ ||

  19. ಮೂಳೆಗಳೇ ಇಲ್ಲವೇನೋ

  20. ಇವಳ ಬಿಲ್ಲು - ಮೈಯಲಿ

  21. ಇವಳ ಬಳ್ಳಿ - ಕೈಯಲಿ

  22. ಇವಳೇನೇ ಗೆಯ್ಯಲಿ || ೪ ||

  23. ಮೂಕರಾಗಿ ನೋಡುತಿಹರು

  24. ನೆರೆದ ಜನರು ಬಯಲಲಿ

  25. ಹಳ್ಳಿಯ ಸರ್ಕಸ್ಸು ಇದನು

  26. ಜನರು ನೋಡಿ ನಲಿದರು || ೫ ||

  27. ಕೈಯ ತಟ್ಟಿ ಕಲೆದರು

  28. ಆಟವಿದಕೆ ಒಲಿದರು

  29. ಕಾಸನಿತ್ತು ಕಜ್ಜ ಕರೆಯೆ

  30. ಮನೆಗಳತ್ತ ಸುಳಿದರು. || ೬ ||

  31. -ಸಿದ್ದಯ್ಯ ಪುರಾಣಿಕ

Interactive Lab