CRECT Education

Class 7 Kannada Lesson 18: Vegetable Gathering | KTBS Second Language – Learn the Story

Description

Vegetables introduce themselves at a World Health Day fair. Learn the story beat by beat with Kannada lines and key vocabulary.

ಗದ್ಯ (prose) · ಸಂಪಾದಿತ

ಪಠ್ಯFull text

ಅಂದು ಏಪ್ರಿಲ್ 7, ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ತರಕಾರಿಗಳ ಮೇಳ ಏರ್ಪಟ್ಟಿತ್ತು. ಕಾರ್ಯಕ್ರಮದಲ್ಲಿ ತರಕಾರಿಗಳ ದಂಡೇ ಸೇರಿತ್ತು. ಎಲ್ಲಿ ನೋಡಿದರೂ ದವಸ-ಧಾನ್ಯ, ಸೊಪ್ಪು-ತರಕಾರಿ, ಹಣ್ಣು-ಹಂಪಲು, ಔಷಧಿ ಸಸ್ಯಗಳು, ಸಾಂಬಾರ ಪದಾರ್ಥಗಳ ಕಲರವ ತುಂಬಿತ್ತು. ಅಲಂಕೃತವಾದ ವೇದಿಕೆಯ ಮೇಲೆ ಸೊಪ್ಪು ತರಕಾರಿಗಳು ಒಂದೊಂದಾಗಿಯೇ ಬಂದು ತಮ್ಮ ತಮ್ಮ ಗುಣ ವಿಶೇಷತೆಗಳ ಬಗೆಗೆ ನಿರರ್ಗಳವಾಗಿ ಮಾತನಾಡುತ್ತಿದ್ದವು. ಅವುಗಳ ಮಾತುಗಳನ್ನು ಕೇಳಿ ಸಭಿಕರು ಚಪ್ಪಾಳೆ ತಟ್ಟುತ್ತಿದ್ದರು. ಮೊದಲಿಗೆ ಹೀರೇಕಾಯಿ ವೇದಿಕೆಯನ್ನು ಏರಿತು. **೧. ಹೀರೇಕಾಯಿ :** “ಓ ನನ್ನ ಪ್ರೀತಿಯ ಸಹೋದರರೇ... ನಾನು ಯಾರು ಬಲ್ಲಿರಾ? ನನ್ನ ಮೈಬಣ್ಣ ಹಸಿರು. ನೋಡಿ ಮೈಯೆಲ್ಲಾ ಸುಕ್ಕುಗಟ್ಟಿದೆ. ನಾನು ಭಾರತದಲ್ಲಿಯೇ ಹುಟ್ಟಿದ್ದು, ಚಪ್ಪರದ ಬಳ್ಳಿಯಲ್ಲಿ ಜೋತು ಬೀಳುತ್ತೇನೆ. ನಾನೆಂದರೆ ನಿಮಗೆಲ್ಲಾ ತುಂಬಾ ಇಷ್ಟ. ನನ್ನ ಹೆಸರನ್ನು ಕೇಳಿದರೆ ಹಿರಿಹಿರಿ ಹಿಗ್ಗುತ್ತೀರಿ. ಈಗಲಾದರೂ ತಿಳಿಯಿತೇ ನಾನು ಯಾರೆಂದು? ನಾನೇ ಹೀರೇಕಾಯಿ. ನನ್ನಲ್ಲಿ ‘ಎ’ ಮತ್ತು ‘ಸಿ’ ಅನ್ನಾಂಗದ ಜೊತೆಗೆ ಖನಿಜಾಂಶವಿದೆ. ಪಲ್ಯ, ಸಾಂಬಾರು, ಬಜ್ಜಿ, ಗೊಜ್ಜುಗಳಲ್ಲಿ ನನ್ನನ್ನು ಬಳಸುತ್ತಾರೆ. ನಾನು ಜನರಿಗೆ ರುಚಿ ಹಾಗೂ ಆರೋಗ್ಯವನ್ನು ನೀಡುತ್ತೇನೆ” ಎಂದು ಹೇಳಿ ಸಭಿಕರಿಂದ ಜೋರಾದ ಚಪ್ಪಾಳೆಯನ್ನು ಗಿಟ್ಟಿಸಿತು. **೨. ಹೂಕೋಸು :** “ಇಲ್ಲಿ ಸೇರಿರುವ ಬಂಧುಗಳೇ, ಗೋಬಿಮಂಚೂರಿ ಎಂದರೆ ನಿಮಗೆ ಬಲು ಪ್ರೀತಿ ಅಲ್ಲವೇ. ತಿಂದಿದ್ದು ನೆನಪಿಗೆ ಬಂದು, ಬಾಯಲ್ಲಿ ನೀರು ಬಂದಿರಬಹುದಲ್ಲವೇ? ಇರಲಿ ವಿಷಯಕ್ಕೆ ಬರೋಣ. ನಾನಿಲ್ಲದೆ ಗೋಬಿಮಂಚೂರಿ ಸಿದ್ಧ ಆಗುವುದೇ ಇಲ್ಲ. ನಾವು ಮೂರು ಜನ ಸಹೋದರರು. ಗೆಡ್ಡೆಕೋಸು, ಎಲೆಕೋಸು ಮತ್ತು ಹೂಕೋಸು ಎಂದು ನಮ್ಮನ್ನು ಕರೆಯುತ್ತಾರೆ. ಸೂಪ್, ಹುಳಿ, ಪಲ್ಯ, ಪರೋಟ, ಗೋಬಿಮಂಚೂರಿ, ಪಕೋಡ ಮುಂತಾದ ಅಡುಗೆಗಳಿಗೆ ನಾವು ಬೇಕು. ನನ್ನ ಸೇವನೆಯಿಂದ ರಕ್ತ ಶುದ್ಧಿ ಹಾಗೂ ಚರ್ಮ ರೋಗಗಳು ದೂರವಾಗುತ್ತವೆ. ನಿಮ್ಮ ಸೇವೆಗೆ ನಾನು ಸದಾ ಸಿದ್ಧ. ನನ್ನನ್ನು ಸೇವಿಸಿ ಆರೋಗ್ಯದಿಂದಿರಿ” ಎಂದು ಹೇಳಿ ತನ್ನ ಮಾತನ್ನು ಮುಗಿಸಿತು. **೩. ಈರುಳ್ಳಿ :** “ಎಲ್ಲರಿಗೂ ನಮಸ್ಕಾರ, ಏಕೆ! ನನ್ನನ್ನು ನೋಡುತ್ತಿದ್ದಂತೆ ಕಣ್ಣು ಮುಚ್ಚಿದಿರಿ? ಕೊಯ್ಯುವಾಗ ಮಾತ್ರ ಕಣ್ಣಿನಲ್ಲಿ ನೀರು ಬರುತ್ತದೆ ಎಂಬುದನ್ನು ಮರೆತಿರಾ? ನನ್ನ ತವರು ನೆರೆಯ ಚೀನಾ ದೇಶ. ಆದರೂ ಭಾರತದಲ್ಲಿ ವಾಣಿಜ್ಯ ಬೆಳೆಯಾಗಿ ಸ್ಥಾನ ಪಡೆದಿದ್ದೇನೆ. ನನ್ನನ್ನು ಇಂಗ್ಲಿಷ್‌ನಲ್ಲಿ ಆನಿಯನ್, ತೆಲುಗಿನಲ್ಲಿ ಎರೆಗಡ್ಡ, ತಮಿಳಿನಲ್ಲಿ ವೆಂಗಾಯಂ ಮತ್ತು ಕನ್ನಡದಲ್ಲಿ ಉಳ್ಳಾಗಡ್ಡಿ, ಈರುಳ್ಳಿ ಎಂದು ಕರೆಯುತ್ತಾರೆ. ನನ್ನಲ್ಲಿ ಆರೋಗ್ಯಕ್ಕೆ ಅಗತ್ಯವಾದ ‘ಸಿ’ ಜೀವಸತ್ವವಿದೆ. ಪಲ್ಯ, ಸಾಂಬಾರು, ಉಪ್ಪಿಟ್ಟು, ಕೋಸಂಬರಿ ಮುಂತಾದ ಅಡುಗೆಗಳಿಗೆ ನಾನು ಬೆರೆತರೆ ಆಹಾ! ಏನು ರುಚಿ” ಎಂದು ಹೇಳಿ ವೇದಿಕೆಯಿಂದ ನಿರ್ಗಮಿಸಿತು. (Illustration showing various vegetables sitting on chairs as an audience, facing a stage with a banner "ವಿಶ್ವ ಆರೋಗ್ಯ ದಿನಾಚರಣೆ" and vegetable characters standing behind a desk) **೪. ನುಗ್ಗೆ ಸೊಪ್ಪು :** “ಹಿರಿಯರೇ, ವೈದ್ಯರು ತರಕಾರಿಯ ಜೊತೆಗೆ ಸೊಪ್ಪು ಬಳಸಲು ಹೇಳುವುದನ್ನು ಕೇಳಿರಬಹುದಲ್ಲವೇ? ನಾನು ಮರದ ಮೇಲೆ ಇರುವವಳು. ಸೊಪ್ಪಿನ ಜೊತೆಗೆ ಕಾಯಿಯನ್ನೂ ನೀಡುತ್ತೇನೆ. ಯುಗಾದಿ ಹಬ್ಬದಲ್ಲಿ ನನ್ನನ್ನು ಬಹು ಪ್ರೀತಿಯಿಂದ ಕೊಂಡೊಯ್ಯುತ್ತಾರೆ. ನನ್ನನ್ನು ಖರೀದಿಸಲು ನೂಕು ನುಗ್ಗಲು ಏಕೆ? ಆಹಾ..ಆಹಾ.. ತಿಳಿಯಿತೇ ನಾನು ‘ನುಗ್ಗೆ’ ಎಂದು. ನನ್ನನ್ನು ಪಲ್ಯ, ಸಾಂಬಾರು ಮುಂತಾದ ಅಡುಗೆಗಳಲ್ಲಿ ಬಳಸುತ್ತಾರೆ. ನನ್ನಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಜೊತೆಗೆ ‘ಎ’ ಮತ್ತು ‘ಸಿ’ ಜೀವಸತ್ವಗಳಿವೆ. ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದ್ದೇನೆ. ಇರುಳುಗಣ್ಣಿನ ತೊಂದರೆಯನ್ನು ನಿವಾರಿಸುತ್ತೇನೆ. ನಿಮ್ಮ ಮನೆ ಮತ್ತು ಶಾಲೆಯ ಆವರಣದಲ್ಲಿ ನನ್ನನ್ನು ಬೆಳೆಸಿರಿ. ಖರ್ಚಿಲ್ಲದೆ ಸದಾಕಾಲ ನುಗ್ಗೆಸೊಪ್ಪು ಮತ್ತು ನುಗ್ಗೆಕಾಯಿ ಕೊಡುತ್ತೇನೆ” ಎಂದು ಬಿನ್ನವಿಸಿತು. **೫. ಸೋರೆಕಾಯಿ :** ವೇದಿಕೆಯ ಮೇಲೆ ಆಜಾನುಬಾಹು ತರಕಾರಿಯೊಂದು ಏರಿತು. “ಮಾನ್ಯರೇ, ನಾನು ಸೋರೆಕಾಯಿ. ನನ್ನ ತವರು ಭಾರತ. ಹುಳಿ, ಕಡಬು, ಪಲ್ಯ, ಉಪ್ಪಿನಕಾಯಿ, ದೋಸೆ, ಹಲ್ವಾ ಮುಂತಾದ ಅಡುಗೆಗಳಿಗೆ ನನ್ನನ್ನು ಬಳಸುತ್ತೀರಿ. ಹಲವು ಪೌಷ್ಟಿಕಾಂಶಗಳ ಕಣಜವೇ ಆಗಿದ್ದೇನೆ. ನಾನು ಬಲಿತ ಮೇಲೆ ನನ್ನ ಹೊಟ್ಟೆಯೊಳಗಿನ ಬೀಜಗಳನ್ನು ಹೊರತೆಗೆದು, ಬುರುಡೆಯಾಕಾರದ ಹೊರ ಕವಚವನ್ನು ಒಣಗಿಸಿ ತಂಬೂರಿ ಮಾಡಿ ಗೀಗೀ ಪದಗಳನ್ನು ಆಡುತ್ತೀರಿ. ಸಂಗೀತಕ್ಕೆ ನನ್ನ ಕೊಡುಗೆ ಅಪಾರ. ಇದೋ ನಿಮಗೆ ನನ್ನ ನಮನ” ಎಂದು ಹೇಳಿ ವೇದಿಕೆಯಿಂದ ನಿರ್ಗಮಿಸಿತು. **೬. ಮೂಲಂಗಿ :** ಇತರರ ಮಾತುಗಳನ್ನು ಕೇಳಿದ ಮೂಲಂಗಿಗೆ ತನ್ನ ಪರಿಚಯ ಮಾಡಿಕೊಳ್ಳುವ ಬಯಕೆ ಉಂಟಾಯಿತು. ಗೆಳೆಯರಂತೆ ತಾನೂ ವೇದಿಕೆ ಏರಿ ಮಾತು ಆರಂಭಿಸಿತು. “ನನ್ನ ಹೆಸರು ಮೂಲಂಗಿ, ಬಣ್ಣ ಬಿಳಿ. ನನ್ನ ತವರು ಯುರೋಪ್ ಮತ್ತು ಏಷ್ಯಾ. ನನ್ನಲ್ಲಿ ಎ.ಬಿ.ಸಿ. ಅನ್ನಾಂಗಗಳಿವೆ. ಪಲ್ಯ, ಸಾಂಬಾರು, ಮೊಸರು ಬಜ್ಜಿಗಳಲ್ಲಿ ಬಳಸುತ್ತಾರೆ. ಕೆಲವರು ನನ್ನ ಘಾಟುವಾಸನೆಯನ್ನು ಇಷ್ಟಪಡುವುದಿಲ್ಲ. ಇದರಿಂದ ನನಗೂ ಸ್ವಲ್ಪ ಬೇಸರವೇ” ಎಂದು ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿತು. **೭. ಕೊತ್ತಂಬರಿಸೊಪ್ಪು :** “ಹಿರಿಯರೇ, ಇತ್ತೀಚೆಗೆ ನನ್ನನ್ನು ಹುಡುಗಿಯರ ಜುಟ್ಟಿಗೆ ಹೋಲಿಸುತ್ತಾರೆ. ನನಗೇನೂ ಬೇಸರವಿಲ್ಲ. ಏಕೆಂದರೆ ನನಗೆ ಬಿಟ್ಟಿ ಪ್ರಚಾರ ಸಿಕ್ಕು, ಖ್ಯಾತಿ ಪಡೆದಿದ್ದೇನೆ. ನಾನು ಹುಡುಗಿಯರಂತೆ ಲಲಿತ ಮೃದು. ಅಷ್ಟೇ ಹಿತ. ನನ್ನ ಹೆಸರು ಕೊತ್ತಂಬರಿಸೊಪ್ಪು. ನಾನು ಎಲ್ಲಾ ಅಡುಗೆಗೂ ಬೇಕು. ವಡೆ, ಉಪ್ಪಿಟ್ಟು, ಚಿತ್ರಾನ್ನ, ಬಾತು, ಸಾಂಬಾರು, ಪಲ್ಯ, ಮಜ್ಜಿಗೆ.. ಹೀಗೆ ಒಂದೇ ಎರಡೇ ಎಲ್ಲಾ ತಿಂಡಿ ತಿನಿಸುಗಳಿಗೆ ಬೇಕು. ಕರಿಬೇವಿನಂತೆ ನಾನೂ ಸಹ ಪರಿಮಳದಿಂದ ಕೂಡಿದ್ದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತೇನೆ. ನನ್ನಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇರುವುದನ್ನು ತಿಳಿಯಿರಿ. ಕಬ್ಬಿಣಾಂಶವು ರಕ್ತಹೀನತೆಯನ್ನು ತಡೆಯುತ್ತದೆ” ಎಂದು ಹೇಳಿ ತನ್ನ ಮಾತುಗಳನ್ನು ಮುಗಿಸಿತು. ಕಾರ್ಯಕ್ರಮದ ಅಂತ್ಯದಲ್ಲಿ ಜನರು ಆರೋಗ್ಯವೇ ಭಾಗ್ಯ ಎಂದು ತಿಳಿದರು. ಹೆಚ್ಚು ಹೆಚ್ಚು ತರಕಾರಿಗಳನ್ನು ಕೊಂಡು ಮನೆಗೆ ತೆರಳಿದರು. ತರತರದ ಅಡುಗೆಗಳನ್ನು ಮಾಡಿ ಉಂಡರು. ಆರೋಗ್ಯವಂತರಾಗಿ ಬಾಳಿದರು. ವ್ಯಕ್ತಿಯ ಆರೋಗ್ಯದಲ್ಲಿ ದೇಶದ ಆರೋಗ್ಯವಿದೆ ಎಂಬುದನ್ನು ಸಾರಿದರು.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ ತಿಳಿಯಿರಿ :

  1. ಅಂಗ - ಭಾಗ

  2. ಇರುಳುಗಣ್ಣು - ಕತ್ತಲಾದಂತೆ ಕಣ್ಣು ಕಾಣದಿರುವುದು.

  3. ಕಲರವ - ಮಧುರವಾದ ಧ್ವನಿ

  4. ಘಾಟು - ಕಟುವಾಸನೆ

  5. ತವರು - ಹುಟ್ಟಿದ ಮನೆ

  6. ನಮನ - ವಂದನೆ; ನಮಸ್ಕಾರ.

  7. ಬಿಟ್ಟಿ - ಪುಕ್ಕಟೆ; ಉಚಿತ.

  8. ಮೇಳ - ಕೂಡುವಿಕೆ; ಗುಂಪು.

  9. ಆಜಾನುಬಾಹು - ನೀಳವಾದ ತೋಳು ಉಳ್ಳವ.

  10. ಕಣಜ - ಧಾನ್ಯವನ್ನು ಸಂಗ್ರಹಿಸುವ ಸ್ಥಳ.

  11. ಖ್ಯಾತಿ - ಪ್ರಸಿದ್ಧಿ

  12. ತಂಬೂರಿ - ತಂತಿವಾದ್ಯ

  13. ದಂಡು - ಸೈನ್ಯ; ಗುಂಪು.

  14. ನೆರೆ - ಪಕ್ಕದ

  15. ಭಿನ್ನವಿಸು - ಕೋರಿಕೊಳ್ಳು; ಮನವಿ ಮಾಡು.

  16. ಸಭಿಕರು - ಪ್ರೇಕ್ಷಕರು

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಪ್ರತಿವರ್ಷ ವಿಶ್ವ ಆರೋಗ್ಯ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ?

    Answer

    ಪ್ರತಿವರ್ಷ ವಿಶ್ವ ಆರೋಗ್ಯ ದಿನಾಚರಣೆಯನ್ನು ಏಪ್ರಿಲ್ 7ರಂದು ಆಚರಿಸಲಾಗುತ್ತದೆ.

  2. ೨. ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಯಾವುದರ ಮೇಳ ಏರ್ಪಟ್ಟಿತ್ತು?

    Answer

    ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ತರಕಾರಿಗಳ ಮೇಳ ಏರ್ಪಟ್ಟಿತ್ತು.

  3. ೩. ತರಕಾರಿಯ ಮೇಳದಲ್ಲಿ ಯಾರು ಯಾರು ಪಾಲ್ಗೊಂಡಿದ್ದರು?

    Answer

    ತರಕಾರಿಯ ಮೇಳದಲ್ಲಿ ಹೀರೇಕಾಯಿ, ಹೂಕೋಸು, ಈರುಳ್ಳಿ, ನುಗ್ಗೆ ಸೊಪ್ಪು, ಸೋರೆಕಾಯಿ, ಮೂಲಂಗಿ ಮತ್ತು ಕೊತ್ತಂಬರಿಸೊಪ್ಪು ಪಾಲ್ಗೊಂಡಿದ್ದವು.

  4. ೪. ಹೂಕೋಸಿನ ಸಹೋದರರು ಯಾರು?

    Answer

    ಹೂಕೋಸಿನ ಸಹೋದರರು ಗೆಡ್ಡೆಕೋಸು ಮತ್ತು ಎಲೆಕೋಸು.

  5. ೫. ಹೂಕೋಸು ಯಾವ ರೋಗಗಳನ್ನು ದೂರಮಾಡುತ್ತದೆ?

    Answer

    ಹೂಕೋಸು ರಕ್ತ ಶುದ್ಧಿ ಮತ್ತು ಚರ್ಮ ರೋಗಗಳನ್ನು ದೂರಮಾಡುತ್ತದೆ.

  6. ೬. ಈರುಳ್ಳಿಯನ್ನು ಇಂಗ್ಲಿಷ್, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?

    Answer

    ಈರುಳ್ಳಿಯನ್ನು ಇಂಗ್ಲಿಷ್‌ನಲ್ಲಿ ಆನಿಯನ್, ತೆಲುಗಿನಲ್ಲಿ ಎರೆಗಡ್ಡ, ತಮಿಳಿನಲ್ಲಿ ವೆಂಗಾಯಂ ಮತ್ತು ಕನ್ನಡದಲ್ಲಿ ಉಳ್ಳಾಗಡ್ಡಿ, ಈರುಳ್ಳಿ ಎಂದು ಕರೆಯುತ್ತಾರೆ.

  7. ೭. ತರಕಾರಿಗಳ ಕಬ್ಬಿಣಾಂಶ ಯಾವ ಕೊರತೆಯನ್ನು ನಿವಾರಿಸುತ್ತದೆ?

    Answer

    ತರಕಾರಿಗಳ ಕಬ್ಬಿಣಾಂಶ ರಕ್ತಹೀನತೆಯ ಕೊರತೆಯನ್ನು ನಿವಾರಿಸುತ್ತದೆ.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಹೀರೇಕಾಯಿ ತನ್ನನ್ನು ಹೇಗೆ ಪರಿಚಯಿಸಿಕೊಂಡಿತು?

    Answer

    ಹೀರೇಕಾಯಿ ತನ್ನ ಮೈಬಣ್ಣ ಹಸಿರು, ಮೈಯೆಲ್ಲಾ ಸುಕ್ಕುಗಟ್ಟಿದೆ ಎಂದು ಹೇಳಿತು. ಅದು ಭಾರತದಲ್ಲಿ ಹುಟ್ಟಿದ್ದು, ಚಪ್ಪರದ ಬಳ್ಳಿಯಲ್ಲಿ ಜೋತು ಬೀಳುತ್ತದೆ ಎಂದು ತನ್ನನ್ನು ಪರಿಚಯಿಸಿಕೊಂಡಿತು.

  2. ೨. ಸೋರೆಕಾಯಿ ತನ್ನ ವಿಶೇಷತೆಯ ಬಗ್ಗೆ ಏನೆಂದು ಹೇಳಿತು?

    Answer

    ಸೋರೆಕಾಯಿ ತನ್ನನ್ನು ಹಲವು ಪೌಷ್ಟಿಕಾಂಶಗಳ ಕಣಜ ಎಂದು ಹೇಳಿಕೊಂಡಿತು. ಹಾಗೆಯೇ, ತನ್ನ ಬುರುಡೆಯಾಕಾರದ ಹೊರ ಕವಚವನ್ನು ಒಣಗಿಸಿ ತಂಬೂರಿ ಮಾಡಿ ಸಂಗೀತಕ್ಕೆ ಅಪಾರ ಕೊಡುಗೆ ನೀಡುತ್ತದೆ ಎಂದು ತಿಳಿಸಿತು.

  3. ೩. ನುಗ್ಗೆಸೊಪ್ಪಿನ ಪ್ರಯೋಜನಗಳೇನು?

    Answer

    ನುಗ್ಗೆಸೊಪ್ಪಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, 'ಎ' ಮತ್ತು 'ಸಿ' ಜೀವಸತ್ವಗಳಿವೆ. ಇದು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ಇರುಳುಗಣ್ಣಿನ ತೊಂದರೆಯನ್ನು ನಿವಾರಿಸುತ್ತದೆ.

  4. ೪. ಕೊತ್ತಂಬರಿ ಸೊಪ್ಪನ್ನು ಯಾವ ಯಾವ ಅಡುಗೆಗಳಿಗೆ ಬಳಸುತ್ತಾರೆ?

    Answer

    ಕೊತ್ತಂಬರಿ ಸೊಪ್ಪನ್ನು ವಡೆ, ಉಪ್ಪಿಟ್ಟು, ಚಿತ್ರಾನ್ನ, ಬಾತು, ಸಾಂಬಾರು, ಪಲ್ಯ ಮತ್ತು ಮಜ್ಜಿಗೆ ಮುಂತಾದ ಅಡುಗೆಗಳಿಗೆ ಬಳಸುತ್ತಾರೆ.

  5. ೫. ತರಕಾರಿಗಳ ಮೇಳದಿಂದ ಜನರಿಗಾದ ಪ್ರಯೋಜನಗಳೇನು?

    Answer

    ತರಕಾರಿಗಳ ಮೇಳದಿಂದ ಜನರು ಆರೋಗ್ಯವೇ ಭಾಗ್ಯ ಎಂದು ತಿಳಿದುಕೊಂಡರು. ಹೆಚ್ಚು ಹೆಚ್ಚು ತರಕಾರಿಗಳನ್ನು ಕೊಂಡು ತರತರದ ಅಡುಗೆಗಳನ್ನು ಮಾಡಿ ಉಂಡು ಆರೋಗ್ಯವಂತರಾಗಿ ಬಾಳಿದರು.

ಇ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. “ಗೋಬಿಮಂಚೂರಿ ಎಂದರೆ ನಿಮಗೆ ಬಲು ಪ್ರೀತಿ ಅಲ್ಲವೇ”.

    Answer

    ಈ ಮಾತನ್ನು ಹೂಕೋಸು ಸಭಿಕರಿಗೆ ಹೇಳಿತು.

  2. ೨. ಏಕೆ! ನನ್ನನ್ನು ನೋಡುತ್ತಿದ್ದಂತೆ ಕಣ್ಣು ಮುಚ್ಚಿದಿರಿ?

    Answer

    ಈ ಮಾತನ್ನು ಈರುಳ್ಳಿ ಸಭಿಕರಿಗೆ ಹೇಳಿತು.

  3. ೩. ನಾನು ಮರದ ಮೇಲೆ ಇರುವವಳು.

    Answer

    ಈ ಮಾತನ್ನು ನುಗ್ಗೆ ಸೊಪ್ಪು ಸಭಿಕರಿಗೆ ಹೇಳಿತು.

  4. ೪. “ಸಂಗೀತಕ್ಕೆ ನನ್ನ ಕೊಡುಗೆ ಅಪಾರ”.

    Answer

    ಈ ಮಾತನ್ನು ಸೋರೆಕಾಯಿ ಸಭಿಕರಿಗೆ ಹೇಳಿತು.

ಈ) ಟಿಪ್ಪಣಿ ಬರೆಯಿರಿ.

  1. ೧. ಆರೋಗ್ಯವೇ ಭಾಗ್ಯ.

  2. ೨. ಹಸಿರು ತರಕಾರಿಗಳ ಸೇವನೆ.

ಉ) ತರಕಾರಿಗಳನ್ನು ಅವುಗಳ ಬಣ್ಣದೊಂದಿಗೆ ಹೊಂದಿಸಿ ಬರೆಯಿರಿ.

  1. ೧) ಹೀರೇಕಾಯಿ - ಅ) ಹಳದಿ __________

    Answer

    ೧) ಹೀರೇಕಾಯಿ - ಇ) ಹಸಿರು

  2. ೨) ಮೂಲಂಗಿ - ಆ) ನೇರಳೆ __________

    Answer

    ೨) ಮೂಲಂಗಿ - ಈ) ಬಿಳಿ

  3. ೩) ಕ್ಯಾರೆಟ್ - ಇ) ಹಸಿರು __________

    Answer

    ೩) ಕ್ಯಾರೆಟ್ - ಉ) ಕೇಸರಿ

  4. ೪) ಟಮೇಟ - ಈ) ಬಿಳಿ __________

    Answer

    ೪) ಟಮೇಟ - ಊ) ಕೆಂಪು

  5. ೫) ಬೀಟ್ರೂಟ್ - ಉ) ಕೇಸರಿ __________

    Answer

    ೫) ಬೀಟ್ರೂಟ್ - ಆ) ನೇರಳೆ

  6. ೬) ನಿಂಬೆ - ಊ) ಕೆಂಪು __________

    Answer

    ೬) ನಿಂಬೆ - ಅ) ಹಳದಿ

ಊ) ತರಕಾರಿಗಳನ್ನು ಅವುಗಳ ರುಚಿಯೊಂದಿಗೆ ಹೊಂದಿಸಿ ಬರೆಯಿರಿ.

  1. ೧) ಮೆಣಸಿನಕಾಯಿ - ಅ) ಸಿಹಿ __________

    Answer

    ೧) ಮೆಣಸಿನಕಾಯಿ - ಉ) ಖಾರ

  2. ೨) ಮೂಲಂಗಿ - ಆ) ಹುಳಿ __________

    Answer

    ೨) ಮೂಲಂಗಿ - ಇ) ಘಾಟು

  3. ೩) ನಿಂಬೆ - ಇ) ಘಾಟು __________

    Answer

    ೩) ನಿಂಬೆ - ಆ) ಹುಳಿ

  4. ೪) ಟಮೇಟ - ಈ) ಕಹಿ __________

    Answer

    ೪) ಟಮೇಟ - ಅ) ಸಿಹಿ

  5. ೫) ಹಾಗಲಕಾಯಿ - ಉ) ಖಾರ __________

    Answer

    ೫) ಹಾಗಲಕಾಯಿ - ಈ) ಕಹಿ

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ದಿನಾಚರಣೆ = _______________ + _______________

    Answer

    ೧. ದಿನಾಚರಣೆ = ದಿನ + ಆಚರಣೆ

  2. ೨. ಒಂದೊಂದು = _______________ + _______________

    Answer

    ೨. ಒಂದೊಂದು = ಒಂದು + ಒಂದು

  3. ೩. ಖನಿಜಾಂಶ = _______________ + _______________

    Answer

    ೩. ಖನಿಜಾಂಶ = ಖನಿಜ + ಅಂಶ

  4. ೪. ಮೈಯೆಲ್ಲಾ = _______________ + _______________

    Answer

    ೪. ಮೈಯೆಲ್ಲಾ = ಮೈ + ಎಲ್ಲಾ

  5. ೫. ಇರುಳುಗಣ್ಣು = _______________ + _______________

    Answer

    ೫. ಇರುಳುಗಣ್ಣು = ಇರುಳು + ಕಣ್ಣು

  6. ೬. ಪೌಷ್ಟಿಕಾಂಶ = _______________ + _______________

    Answer

    ೬. ಪೌಷ್ಟಿಕಾಂಶ = ಪೌಷ್ಟಿಕ + ಅಂಶ

  7. ೭. ಬುರುಡೆಯಾಕಾರ = _______________ + _______________

    Answer

    ೭. ಬುರುಡೆಯಾಕಾರ = ಬುರುಡೆ + ಆಕಾರ

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಆರೋಗ್ಯ x _______________

    Answer

    ೧. ಆರೋಗ್ಯ x ಅನಾರೋಗ್ಯ

  2. ೨. ರೋಗ x _______________

    Answer

    ೨. ರೋಗ x ನಿರೋಗ

  3. ೩. ಶುದ್ಧಿ x _______________

    Answer

    ೩. ಶುದ್ಧಿ x ಅಶುದ್ಧಿ

  4. ೪. ರುಚಿ x _______________

    Answer

    ೪. ರುಚಿ x ಅರುಚಿ

  5. ೫. ನಿರ್ಗಮಿಸು x _______________

    Answer

    ೫. ನಿರ್ಗಮಿಸು x ಆಗಮಿಸು

  6. ೬. ಪೌಷ್ಟಿಕತೆ x _______________

    Answer

    ೬. ಪೌಷ್ಟಿಕತೆ x ಅಪೌಷ್ಟಿಕತೆ

ಇ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಉಪಯೋಗಿಸಿ ಬರೆಯಿರಿ.

  1. ೧. ಕಲರವ : __________________________________________________________________

    Model sentence

    ಕಲರವ: ಶಾಲೆಯ ಮೈದಾನದಲ್ಲಿ ಮಕ್ಕಳ ಕಲರವ ಕೇಳಿಸುತ್ತಿತ್ತು.

  2. ೨. ಮೇಳ : __________________________________________________________________

    Model sentence

    ಮೇಳ: ನಮ್ಮ ಊರಿನ ಜಾತ್ರೆಯಲ್ಲಿ ದೊಡ್ಡ ಮೇಳ ನಡೆಯಿತು.

  3. ೩. ಭಿನ್ನವಿಸು : __________________________________________________________________

    Model sentence

    ಭಿನ್ನವಿಸು: ನಾನು ನನ್ನ ಅಣ್ಣನಿಗೆ ಆಟವಾಡಲು ಬರುವಂತೆ ಭಿನ್ನವಿಸಿದೆ.

  4. ೪. ಕಣಜ : __________________________________________________________________

    Model sentence

    ಕಣಜ: ಅಕ್ಕಿ ಕಣಜದಲ್ಲಿ ತುಂಬಾ ಅಕ್ಕಿ ತುಂಬಿತ್ತು.

IV. ಚಟುವಟಿಕೆಗಳು :

  1. ೧. ಊಟದಲ್ಲಿ ಹೆಚ್ಚು ಹೆಚ್ಚು ತರಕಾರಿ ಮತ್ತು ಸೊಪ್ಪುಗಳನ್ನು ಬಳಸಿರಿ.

  2. ೨. ತರಕಾರಿಗಳ ಪಾತ್ರಗಳನ್ನು ಹಂಚಿಕೊಂಡು, ತರಕಾರಿಗಳು ಮಾತನಾಡಿದಂತೆ ಅಭಿನಯಿಸಿರಿ.

  3. ೩. ವಿವಿಧ ಸೊಪ್ಪು ಹಾಗೂ ತರಕಾರಿಗಳ ಪಟ್ಟಿ ತಯಾರಿಸಿ, ಅವುಗಳ ಮಹತ್ತ್ವ ತಿಳಿಯಿರಿ.

Interactive Lab