CRECT Education

Class 7 Kannada Lesson 2: Gift of Food | KTBS Second Language – Practice & Quiz

Description

Practice comprehension and language games from the story Annadana (Gift of Food).

ಗದ್ಯ (prose) · ಚಂದ್ರಶೇಖರ ಕಂಬಾರ

ಪಠ್ಯFull text

ಒಂದೂರಿನಲ್ಲಿ ತಾಯಿ ಮಗ ಇದ್ದರು. ತಾಯಿ ಅವರಿವರ ಮನೆಯ ಕಸಮುಸುರೆ ತೊಳೆದು ತಂದುದರಲ್ಲಿ ಮನೆಗೆ ಬಂದವರಿಗೆ ದಾನ ಮಾಡಿ, ಉಳಿದುದನ್ನು ಇಬ್ಬರೂ ತಿನ್ನುತ್ತಿದ್ದರು. ಒಂದೊಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು, ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು. ಮಗ ಹೀಗೇ ಬೆಳೆದು ದೊಡ್ಡವನಾದ. ವಯಸ್ಸಿಗೆ ಬಂದ. ತಾಯಿ ಬರೇ ಅನ್ನದಾನವೊಂದನ್ನು ಬಿಟ್ಟಿದ್ದರೆ ಅವರು ದೊಡ್ಡ ಶ್ರೀಮಂತರಾಗಬೇಕಿತ್ತು. ಆಗಲಿಲ್ಲ. ತಾಯಿ ಹೀಗೇಕೆ ಮಾಡುತ್ತಿರಬಹುದೆಂದು ಮಗನಿಗೆ ಯೋಚನೆಯಾಯಿತು. ಒಂದು ದಿನ ಮಗ, “ತಾಯೀ, ಇದೇಕೆ ಹೀಗೆ ಅನ್ನದಾನ ಮಾಡುತ್ತೀ? ಒಂದೊಂದು ದಿನ ನೀನೇ ಉಪವಾಸವಿದ್ದು ಬೇರೆಯವರಿಗೆ ಅನ್ನದಾನ ಮಾಡುತ್ತೀ, ಅನ್ನದಾನವೊಂದನ್ನು ಬಿಟ್ಟಿದ್ದರೆ ನಾವು ಎಷ್ಟೊಂದು ಶ್ರೀಮಂತರಾಗುತ್ತಿದ್ದೆವು. ಅದೇನು ಅನ್ನದಾನದ ಮಹತ್ತ್ವ? ಹೇಳು” ಎಂದ. ಅದಕ್ಕೆ ತಾಯಿ, “ಮಗೂ, ದಾನಗಳಲ್ಲಿ ಅನ್ನದಾನವೇ ಹೆಚ್ಚಿನದು. ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ. ಆದರೆ ಅನ್ನದಾನದ ಪುಣ್ಯ ಕೊನೆತನಕ ಇರುವಂಥಾದ್ದು” ಎಂದಳು. “ಆ ಪುಣ್ಯ ಯಾವುದು?” ಪ್ರಶ್ನಿಸಿದ ಮಗ. “ಅದನ್ನು ಹೇಳುವುದು ನಮ್ಮಂಥ ನರಮನುಷ್ಯರಿಂದ ಹೇಗಾದೀತು? ಅದು ಶಿವನಿಗೆ ಗೊತ್ತು. ಅವನನ್ನೇ ಹೋಗಿ ಕೇಳು” ಎಂದು ತಾಯಿ ಹೇಳಿದಳು. ಸರಿ, ಅದರಂತೆ ಮಗ ತಾಯಿಯ ಅಪ್ಪಣೆ ಪಡೆದುಕೊಂಡು ಶಿವನ ಬಳಿಗೆ ಹೊರಟ. ಹೋಗುತ್ತ ಹೋಗುತ್ತ ದೊಡ್ಡದೊಂದು ಅಡವಿ ಬಂತು. ಅಲ್ಲಿ ಗಿಡಮರ ದಟ್ಟವಾಗಿ ಬೆಳೆದಿದ್ದವು. ಇವನು ಬೆಟ್ಟ ಹತ್ತಿ ಇಳಿಯುವಷ್ಟರಲ್ಲಿ ಸಂಜೆಯಾಯಿತು. ಮುಂದೆ ಏನು ಮಾಡಬೇಕೆಂದು ಹೊಳೆಯದಾಯಿತು. ಆಗ ಅಲ್ಲಿಗೊಬ್ಬ ಬೇಡ ಬಂದ. ಈ ಹುಡುಗನನ್ನು ನೋಡಿ ಅವನಿಗೆ ಕರುಣೆ ಬಂತು. ಹೀಗೆ ಬಿಟ್ಟರೆ ಹುಡುಗ ಹುಲಿ ಸಿಂಹಗಳ ಬಾಯಿಗೆ ಬೀಳುತ್ತಾನೆಂದುಕೊಂಡು, “ಏ ಹುಡುಗಾ, ಸಂಜೆ ಸಮಯದಲ್ಲಿ ಹೀಗೆ ಕಾಡಿನಲ್ಲಿ ಅಡ್ಡಾಡಿದರೆ ಏನು ಗತಿಯಾದೀತು? ಇದು ಹುಲಿ-ಸಿಂಹಗಳಿರುವ ಸ್ಥಳ. ಇಂದು ರಾತ್ರಿ ನಮ್ಮ ಗುಡಿಸಲಲ್ಲಿದ್ದು ನಾಳೆ ಹೋದೀಯಂತೆ ಬಾ” ಅಂದ. ಹುಡುಗನಿಗೂ ಅಷ್ಟೇ ಬೇಕಾಗಿತ್ತು. ಬೇಡನೊಂದಿಗೆ ಹೋದ. ಗುಡಿಸಲಿಗೆ ಹೋಗಿ ಬೇಡ ಹೆಂಡತಿಗೆ ಹೇಳಿದ. “ಈತ ಕಾಡಿನಲ್ಲಿ ಅಲೆದಾಡುತ್ತಿದ್ದ, ನಾನೇ ಕರೆದುತಂದೆ. ಇಂದಿದ್ದು ನಾಳೆ ಹೋಗುತ್ತಾನೆ. ಹಸಿದಿದ್ದಾನೆ, ಹಣ್ಣು ಹಾಲು ಕೊಡು ಎಂದನು”. ಅವಳು “ಅದೆಲ್ಲಾ ನನ್ನಿಂದ ಆಗದು. ಬೇಕಿದ್ದರೆ ನಿನ್ನ ಪಾಲಿನ ಹಣ್ಣು ಹಾಲು ಕೊಡು. ಇಲ್ಲದಿದ್ದರೆ ಬಿಡು” ಎಂದಳು. ಬೇಡ, ತನ್ನ ಪಾಲಿನ ಹಣ್ಣು, ಹಾಲು ಕೊಟ್ಟ. “ಹುಡುಗಾ, ದಣಿದಿದ್ದೀಯಪ್ಪ, ಮಲಗು” ಅಂದು ಕರುಣೆಯಿಂದ ಹುಡುಗನನ್ನು ಉಪಚರಿಸಿದ. ಹಾಸಿಗೆ ಹಾಸಿ ಮಲಗಿಸಿದ. ತನಗೆ ಮಲಗಲು ಸ್ಥಳ ಇರದಿದ್ದರಿಂದ ಬಾಗಿಲ ಹೊರಗೆ ಕಾಲುಚಾಚಿ ಒಳಗೆ ತಲೆಯಿಟ್ಟು ಬಾಗಿಲು ತೆರೆದೇ ಮಲಗಿದ. ಆದರೆ ರಾತ್ರಿ ಹುಲಿ ಬಂದು ಹೊರಗರ್ಧ ಒಳಗರ್ಧ ಮಲಗಿದ್ದ ಬೇಡನನ್ನು ಕೊಂದು ತಿಂದುಹಾಕಿತು. ರಕ್ತದ ರುಚಿ ಹತ್ತಿ ಒಳಗೆ ಹೋಗಿ ಅವನ ಹೆಂಡತಿಯನ್ನೂ ತಿಂದು ಹಾಕಿತು. ಹೊಟ್ಟೆ ತುಂಬಿದ ಹುಲಿ ಆ ಹುಡುಗನನ್ನು ನೋಡದೆ ಹಾಗೇ ಹೋಯಿತು. ಮುಂಜಾನೆ ಇವನೆದ್ದು ನೋಡಿದರೆ ಇಬ್ಬರ ಎಲುಬುಗಳನ್ನು ಬಿಟ್ಟು ಬೇರೇನೂ ಇರಲಿಲ್ಲ. ಪಾಪ ಬಹಳ ಅನ್ಯಾಯವಾಯಿತೆಂದು ಹಳಹಳಿಸಿ ಮತ್ತೆ ಪ್ರಯಾಣ ಮಾಡಿದ. ದಾರಿಯಲ್ಲಿ ಒಬ್ಬ ರಾಜ ತಲೆಯ ಮೇಲೆ ಕೈಹೊತ್ತು ಕೂತಿದ್ದ. ಇವನನ್ನು ನೋಡಿ– “ಹುಡುಗಾ, ಎಲ್ಲಿ ಹೊರಟಿರುವೆ?” ಅಂದ. “ಒಂದು ಪ್ರಶ್ನೆಯಿದೆ. ಅದನ್ನು ಕೇಳಲು ಶಿವನ ಬಳಿಗೆ ಹೋಗುತ್ತಿದ್ದೇನೆ” ಎಂದ. “ಹಾಗಿದ್ದರೆ ನನ್ನದೂ ಒಂದು ಪ್ರಶ್ನೆ ಇದೆ. ಕೇಳಿಕೊಂಡು ಬರುತ್ತೀಯಾ?” ಎಂದ ರಾಜ “ಏನದು?” “ಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ. ತಟ್ಟಂತ ಒಂದು ಹನಿ ನೀರಿಲ್ಲ. ಯಾಕೆಂದು ಕೇಳಿಕೊಂಡು ಬರುತ್ತೀಯಾ?” ಆಗಲೆಂದು ಹುಡುಗ ಮುಂದೆ ಹೊರಟ. ಮುಂದೆ ಹೋಗುವಷ್ಟರಲ್ಲಿ ಒಬ್ಬ ಕುಂಟ ಕುಳಿತಿದ್ದ. ಅವನೂ, “ತಮ್ಮಾ, ನನ್ನ ಕುಂಟುತನಕ್ಕೆ ಏನು ಕಾರಣವೆಂದು ಕೇಳಿಕೊಂಡು ಬಾ” ಅಂದ. ಆಗಲೆಂದು ಹುಡುಗ ಮುಂದೆ ಹೊರಟ. ಮುಂದೆ ದಾರಿಯಲ್ಲಿ ಒಂದು ಹುತ್ತ ಸಿಕ್ಕಿತು. ಅದರಲ್ಲಿ ಅರ್ಧ ಹೊರಗೂ, ಅರ್ಧ ಒಳಗೂ ಸಿಕ್ಕಿಕೊಂಡು ಹಿಂದಕ್ಕೂ ಮುಂದಕ್ಕೂ ಚಲಿಸಲಾರದ ಒಂದು ಸರ್ಪವಿತ್ತು. ಅದಕ್ಕೂ ತನ್ನ ಪ್ರಯಾಣದ ಉದ್ದೇಶ ಹೇಳಿದ. ಅದು “ನನ್ನ ಇಂಥ ಸ್ಥಿತಿಗೆ ಏನು ಕಾರಣ ಕೇಳಿಕೊಂಡು ಬಾ” ಎಂದಿತು. ಹುಡುಗ ಆಗಲೆಂದು ಹೇಳಿ ಮುಂದಕ್ಕೆ ಹೊರಟ. ಹೋದ, ಹೋದ, ಸೀದಾ ಕೈಲಾಸ ಪರ್ವತಕ್ಕೆ ಹೋದ. ಅಲ್ಲಿ ಶಿವ ಪಾರ್ವತಿ ಕುಳಿತಿದ್ದರು. ಹೋಗಿ ನಮಸ್ಕರಿಸಿದ. “ಶಂಭೋ, ಅನ್ನದಾನದ ಪುಣ್ಯ ಯಾವುದು? ಹೇಳಬೇಕು” ಎಂದ. ಅದಕ್ಕೆ ಶಿವನು, “ನೋಡು ಮಗು, ನೇಪಾಳ ದೇಶದ ರಾಜನ ಹೆಂಡತಿ ಗರ್ಭಿಣಿಯಾಗಿದ್ದಾಳೆ. ನೀನು ಹೋಗಿ ನಾನು ಕೊಟ್ಟ ಪ್ರಸಾದ ಕೊಡು. ಹಡೆಯುತ್ತಾಳೆ. ಹುಟ್ಟಿದ ಆ ಕೂಸನ್ನು ಕೇಳಿದರೆ ಅದು ನಿನಗೆ ಅನ್ನದಾನದ ಪುಣ್ಯ ಏನೆನ್ನುವುದನ್ನು ಹೇಳುತ್ತದೆ” ಎಂದ. ಹಾಗೆಯೇ ರಾಜನ ಕೆರೆಯಲ್ಲಿ ನೀರು ಬೀಳದಿರುವ ಕಾರಣ ಕೇಳಿದ. ಅದಕ್ಕೆ ಶಿವನು ಹೇಳಿದ- “ರಾಜನಿಗೆ ಬೆಳೆದ ಒಬ್ಬ ಮಗಳಿದ್ದಾಳೆ. ಅವಳನ್ನು ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದೆ.” “ಹಾಗೆ ಕುಂಟನ ಕಾಲು ಯಾಕೆ ಹೋಗಿದೆ?” “ತನಗೆ ತಿಳಿದ ವಿದ್ಯೆಯನ್ನು ಆತ ಯಾರಿಗಾದರೂ ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬರುತ್ತದೆ.” (Illustration of a young man holding a walking stick talking to another young man walking on a path) “ಸರ್ಪವೊಂದು ಹುತ್ತದ ಒಳಗೂ ಹೋಗದೆ ಹೊರಗೂ ಬರಲಾರದೆ ಸಿಕ್ಕಿಕೊಂಡಿದೆಯಲ್ಲ. ಏನು ಕಾರಣ?” “ತನ್ನ ನೆತ್ತಿಯ ರತ್ನವನ್ನು ಒಬ್ಬ ಯೋಗ್ಯನಿಗೆ ದಾನ ಮಾಡಿದಲ್ಲಿ ಅದು ಸರಿದಾಡಬಹುದು.” -ಹೀಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೇಳಿಕೊಂಡು ಶಿವಪಾರ್ವತಿಯರಿಗೆ ನಮಸ್ಕರಿಸಿ, ಪ್ರಸಾದ ತೆಗೆದುಕೊಂಡು ತಿರುಗಿ ಬಂದ. ಬರುವಾಗ ದಾರಿಯಲ್ಲಿ ಮೊದಲು ಸರ್ಪ ಸಿಕ್ಕಿತು. “ಹುಡುಗಾ, ಕೇಳಿದೆಯಾ ನನ್ನ ಪ್ರಶ್ನೆ?” ಎಂದಿತು. “ಹೌದು ಕೇಳಿದೆ. ನಿನ್ನ ನೆತ್ತಿಯಲ್ಲೊಂದು ರತ್ನ ಇದೆಯಂತೆ. ಅದನ್ನು ಯೋಗ್ಯನಿಗೆ ದಾನ ಮಾಡಿದರೆ ನೀನು ಸರಿದಾಡಬಹುದಂತೆ” ಎಂದ. (Illustration of a man standing and pointing at a snake on an anthill with a glowing jewel on its head) “ಹಾಗಿದ್ದರೆ ಇಕೋ, ನಿನಗೇ ಅದನ್ನು ದಾನ ಮಾಡುತ್ತೇನೆ. ತಕೋ” ಎಂದು ತನ್ನ ನೆತ್ತಿಯ ರತ್ನವನ್ನು ಹುಡುಗನಿಗೆ ಕೊಟ್ಟಿತು. ಆ ಕೂಡಲೇ ಅದಕ್ಕೆ ಸರಿದಾಡುವ ಶಕ್ತಿ ಬಂದು, ಆನಂದದಿಂದ ಹೆಡೆ ತೆಗೆದು ಆಡಲಾರಂಭಿಸಿತು. ಹುಡುಗ ಮತ್ತೆ ತನ್ನ ದಾರಿ ಹಿಡಿದ. ಮುಂದೆ ಬರುವಷ್ಟರಲ್ಲಿ ಕುಂಟ ಸಿಕ್ಕಿದ. “ಹುಡುಗಾ, ನನ್ನ ಪ್ರಶ್ನೆ ಕೇಳಿದೆಯಾ?” ಎಂದು ಕೇಳಿದ. “ಕೇಳಿದೆ. ನಿನ್ನ ಹತ್ತಿರ ಇರುವ ವಿದ್ಯೆಯನ್ನೆಲ್ಲ ಒಬ್ಬ ಯೋಗ್ಯನಿಗೆ ದಾನ ಮಾಡಿದರೆ ನಿನ್ನ ಕಾಲು ಬರುತ್ತದಂತೆ.” ಎಂದ ಹುಡುಗ. “ಹಾಗಿದ್ದರೆ ನಿನಗಿಂತ ಯೋಗ್ಯ ಯಾರಿದ್ದಾರೆ? ಇಕೋ, ನನಗೆ ಗೊತ್ತಿರುವ ವಿದ್ಯೆಯನ್ನು ನಿನಗೆ ದಾನ ಮಾಡುತ್ತೇನೆ.” -ಎಂದು ಹೇಳಿ ಕುಂಟ ತನ್ನ ಅರವತ್ತನಾಲ್ಕು ವಿದ್ಯೆಗಳನ್ನೆಲ್ಲ ಇವನಿಗೆ ಧಾರೆಎರೆದ. ಅವನಿಗೆ ಕಾಲು ಬಂದಿತು. ಆನಂದದಿಂದ ಕುಣಿದಾಡಿದ. ಹುಡುಗ ಮತ್ತೆ ತನ್ನ ದಾರಿಯನ್ನು ಹಿಡಿದು ಹೊರಟ. ಇನ್ನಷ್ಟು ಮುಂದೆ ಬಂದ. ತಲೆಯ ಮೇಲೆ ಕೈಹೊತ್ತಿದ್ದ ರಾಜ ಸಿಕ್ಕಿದ. ಇವನನ್ನು ಕಂಡೊಡನೆ “ಹುಡುಗಾ, ನನ್ನ ಮಾತನ್ನು ಕೇಳಿದೆಯಾ?” ಎಂದ. “ಹೌದು, ಕೇಳಿದೆ. ನಿನ್ನ ಬೆಳೆದ ಮಗಳನ್ನು ಒಬ್ಬ ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದಂತೆ.” “ನಿನಗಿಂತ ಯೋಗ್ಯ ವರ ಇನ್ನಾರಿದ್ದಾರೆ! ಬಾ” ಎಂದು ಹೇಳಿ ರಾಜ ತನ್ನ ಮಗಳನ್ನು ಆ ಹುಡುಗನಿಗೆ ಮದುವೆ ಮಾಡಿಕೊಟ್ಟ. ಬೆಳಗಾಗುವಷ್ಟರಲ್ಲಿ ಕೆರೆ ನೀರಿನಿಂದ ತುಂಬಿ ತುಳುಕಲಾರಂಭಿಸಿತು. ಹುಡುಗ ಹೆಂಡತಿಯನ್ನು ಕರೆದುಕೊಂಡು ನೇಪಾಳ ದೇಶಕ್ಕೆ ಬಂದ. ಆ ದೇಶದ ರಾಜನ ಹೆಂಡತಿ ದಿನ ತುಂಬಿದ್ದರೂ ಹಡೆಯಲಾರದೆ ಸಂಕಟ ಪಡುತ್ತಿದ್ದಳು. ಹುಡುಗ ಹೋಗಿ ಶಿವನ ಪ್ರಸಾದ ಕೊಟ್ಟ. ಅವಳು ಆ ಕ್ಷಣವೇ ಬಂಗಾರದಂಥ ಮಗನನ್ನು ಪಡೆದಳು. “ ಕೂಸಿಗೊಂದು ಪ್ರಶ್ನೆ ಕೇಳಬೇಕಾಗಿದೆ. ದರ್ಬಾರಿಗೆ ತರಿಸಬೇಕು” ಎಂದು ಹುಡುಗ ಹೇಳಿದ. ಎಲ್ಲರಿಗೂ ಆಶ್ಚರ್ಯವಾಯಿತು. ಆದರೂ ಕೂಸನ್ನು ದರ್ಬಾರಿಗೆ ತಂದು ಬಂಗಾರದ ತಟ್ಟೆಯಿಟ್ಟರು. ಹುಡುಗ ಹೇಳಿದ – “ಮಗು, ಶಿವ ನನ್ನನ್ನು ನಿನ್ನ ಬಳಿ ಕಳಿಸಿದ್ದಾನೆ. ಅನ್ನದಾನದ ಪುಣ್ಯ ಯಾವುದು?” ಈ ಮಾತನ್ನು ಕೇಳಿ ತಟ್ಟೆಯಲ್ಲಿದ್ದ ಮಗು ಪಕ ಪಕ ನಕ್ಕು ಮಾತಾಡಿತು. (Illustration of a man and a woman holding a garland, presenting a baby on a golden plate to a king sitting on a throne) “ಅಯ್ಯಾ, ಶಿವನನ್ನು ಕಾಣುವುದಕ್ಕೆ ಹೊರಟಿದ್ದೆ. ಅಡವಿಯಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದೆ. ಆಗ ಒಬ್ಬ ಬೇಡ ಬಂದು ನಿನ್ನನ್ನು ತನ್ನ ಗುಡಿಸಲಿಗೆ ಕರೆದೊಯ್ದು ಹಣ್ಣು ಹಾಲು ಕೊಟ್ಟದ್ದು ನೆನಪಿದೆಯೇ? “ಹೌದು” “ಹಾಗೆ ಮಾಡಿದ ಬೇಡ ನಾನೇ. ಅಂದೇ ನನ್ನನ್ನೂ ನನ್ನ ಹೆಂಡತಿಯನ್ನೂ ಹುಲಿ ತಿಂದಿತು; ಅನ್ನದಾನ ಮಾಡಿದ್ದಕ್ಕೆ ನಾನಿಂದು ರಾಜಕುಮಾರನಾಗಿ ಹುಟ್ಟಿದ್ದೇನೆ. ನನ್ನ ಹೆಂಡತಿ ಕೊಡಲು ಒಪ್ಪಲಿಲ್ಲ. ಅವಳು ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ. ಬೇಕಾದರೆ ಹೋಗಿ ನೋಡು” ಎಂದು ಆ ಮಗು ಹೇಳಿತು. ಆಗ ಈ ಹುಡುಗ ತಿರುಗಿ ತನ್ನ ತಾಯಿಯ ಬಳಿಗೆ ಬಂದು ತಾನೂ ಅನ್ನದಾನ ಮಾಡುತ್ತ ಸುಖದಿಂದ ಇದ್ದ. **ಕೃತಿಕಾರರ ಪರಿಚಯ :** (Portrait of ಚಂದ್ರಶೇಖರ ಕಂಬಾರ) ಚಂದ್ರಶೇಖರ ಕಂಬಾರ ಅವರು ೧೯೩೭ ರಲ್ಲಿ ಬೆಳಗಾವಿ ಜಿಲ್ಲೆಯ ಘೋಡಗೇರಿ ಗ್ರಾಮದಲ್ಲಿ ಜನಿಸಿದರು. ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಕವಿ, ಜನಪದ ವಿದ್ವಾಂಸ, ನಾಟಕಕಾರ, ಕಾದಂಬರಿಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ‘ಹೇಳತೇನ ಕೇಳ’, ‘ಬೆಳ್ಳಿ ಮೀನು’, ‘ತಕರಾರಿನವರು’, ‘ಚಕೋರಿ’, ‘ಋಷ್ಯಶೃಂಗ’, ‘ಕಾಡುಕುದುರೆ’, ‘ಸಿರಿಸಂಪಿಗೆ’, ‘ಹುಲಿಯ ನೆರಳು’, ‘ಮಹಾಮಾಯಿ’, ‘ಅಲಿಬಾಬ ಮತ್ತು ನಲವತ್ತು ಕಳ್ಳರು’, ‘ಜೋಕುಮಾರಸ್ವಾಮಿ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಲಭಿಸಿವೆ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ ತಿಳಿಯಿರಿ :

  1. ಅಡವಿ – ಕಾಡು; ಅರಣ್ಯ.

  2. ದಣಿವು – ಆಯಾಸ

  3. ದಾನ – ಕೊಡುಗೆ

  4. ಬೇಡ – ಬೇಟೆಗಾರ

  5. ಮಂದಿ – ಜನ

  6. ಸರ್ಪ – ಹಾವು; ಉರಗ.

  7. ಹಡೆ – ಹೆರಿಗೆಯಾಗು; ಜನ್ಮನೀಡು.

  8. ಹುತ್ತ – ಹಾವಿನ ವಾಸಸ್ಥಾನ; ಗೆದ್ದಲು ಕಟ್ಟಿದ ಮಣ್ಣಿನ ಗೂಡು.

  9. ಕೈಲಾಸ – ಶಿವನ ವಾಸಸ್ಥಳ

  10. ದರ್ಬಾರು – ಅಧಿಕಾರ ನಡೆಸುವಿಕೆ

  11. ಧಾರೆ – ಒಂದೇ ಸಮನೆ ನೀರುಸುರಿಸುವಿಕೆ

  12. ಭಿಕ್ಷೆ – ಬೇಡುವುದು.

  13. ವರ – ಮದುವೆಯಾಗುವ ಗಂಡು

  14. ಸೀದಾ – ನೇರವಾಗಿ

  15. ಹಳಹಳಿಸು – ಉಮ್ಮಳಿಸು; ದುಃಖಿತನಾಗು.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ತಾಯಿಯ ಅನ್ನದಾನವನ್ನು ಕಂಡು ಮಗನಿಗೆ ಯಾವ ಯೋಚನೆ ಬಂದಿತು?

    Answer

    ತಾಯಿಯು ಏಕೆ ಅನ್ನದಾನ ಮಾಡುತ್ತಾಳೆ ಮತ್ತು ಅನ್ನದಾನದ ಮಹತ್ತ್ವವೇನು ಎಂಬ ಯೋಚನೆ ಮಗನಿಗೆ ಬಂದಿತು.

  2. ೨. ತಾಯಿಯು ಅನ್ನದಾನದ ಬಗ್ಗೆ ಮಗನಿಗೆ ಏನೆಂದು ಹೇಳಿದಳು?

    Answer

    ದಾನಗಳಲ್ಲಿ ಅನ್ನದಾನವೇ ಹೆಚ್ಚಿನದು, ಅನ್ನದಾನದ ಪುಣ್ಯ ಕೊನೆತನಕ ಇರುವಂಥಾದ್ದು ಎಂದು ತಾಯಿಯು ಮಗನಿಗೆ ಹೇಳಿದಳು.

  3. ೩. ತಾಯಿ ಮಗನನ್ನು ಶಿವನ ಬಳಿ ಏಕೆ ಕಳುಹಿಸಿದಳು?

    Answer

    ಅನ್ನದಾನದ ಪುಣ್ಯ ಯಾವುದು ಎಂಬುದು ನರಮನುಷ್ಯರಿಂದ ಹೇಳಲಾಗದು, ಅದು ಶಿವನಿಗೆ ಗೊತ್ತು ಎಂದು ತಾಯಿ ಮಗನನ್ನು ಶಿವನ ಬಳಿ ಕಳುಹಿಸಿದಳು.

  4. ೪. ಹುಡುಗನು ನೇಪಾಳ ದೇಶಕ್ಕೆ ಏಕೆ ಹೋದನು?

    Answer

    ಶಿವನ ಆಜ್ಞೆಯಂತೆ, ಅನ್ನದಾನದ ಪುಣ್ಯವನ್ನು ತಿಳಿಯಲು ನೇಪಾಳ ದೇಶದ ರಾಜನ ಹೆಂಡತಿಗೆ ಪ್ರಸಾದ ಕೊಟ್ಟು ಹುಟ್ಟುವ ಕೂಸನ್ನು ಕೇಳಲು ಹುಡುಗನು ನೇಪಾಳಕ್ಕೆ ಹೋದನು.

  5. ೫. ಬೇಡನ ಹೆಂಡತಿ ಹಂದಿಯಾಗಿ ಹುಟ್ಟಿದ್ದು ಏಕೆ?

    Answer

    ಅನ್ನದಾನ ಮಾಡಲು ಒಪ್ಪದ ಕಾರಣ ಬೇಡನ ಹೆಂಡತಿ ಹಂದಿಯಾಗಿ ಹುಟ್ಟಿದಳು.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ತಾಯಿಯೊಬ್ಬಳು ಅನ್ನದಾನ ಮಾಡುತ್ತ ಮಗನೊಂದಿಗೆ ಹೇಗೆ ಜೀವಿಸುತ್ತಿದ್ದಳು?

    Answer

    ತಾಯಿ ಮನೆಗಳಲ್ಲಿ ಕಸಮುಸುರೆ ತೊಳೆದು ತಂದ ಆಹಾರವನ್ನು ಮನೆಗೆ ಬಂದವರಿಗೆ ದಾನ ಮಾಡುತ್ತಿದ್ದಳು. ಉಳಿದುದನ್ನು ಇಬ್ಬರೂ ತಿನ್ನುತ್ತಿದ್ದರು. ಭಿಕ್ಷೆಗೆ ಬಹಳ ಮಂದಿ ಬಂದಾಗ ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು.

  2. ೨. ಮಗನು ತಾಯಿಯ ಅನ್ನದಾನವನ್ನು ಕಂಡು ಏನೆಂದು ಕೇಳಿದನು?

    Answer

    ತಾಯೀ, ನೀನು ಏಕೆ ಹೀಗೆ ಅನ್ನದಾನ ಮಾಡುತ್ತೀ? ನೀನೇ ಉಪವಾಸವಿದ್ದು ಬೇರೆಯವರಿಗೆ ದಾನ ಮಾಡುತ್ತೀ. ಅನ್ನದಾನವನ್ನು ಬಿಟ್ಟಿದ್ದರೆ ನಾವು ಶ್ರೀಮಂತರಾಗುತ್ತಿದ್ದೆವು. ಅನ್ನದಾನದ ಮಹತ್ತ್ವವೇನು? ಎಂದು ಮಗನು ಕೇಳಿದನು.

  3. ೩. ಬೇಡನು ಹುಡುಗನಿಗೆ ಏನೆಂದು ಹೇಳಿ ತನ್ನ ಗುಡಿಸಲಿಗೆ ಕರೆದುಕೊಂಡು ಹೋದನು?

    Answer

    ಸಂಜೆ ಸಮಯದಲ್ಲಿ ಕಾಡಿನಲ್ಲಿ ಅಡ್ಡಾಡಿದರೆ ಹುಲಿ-ಸಿಂಹಗಳಿಗೆ ಬಲಿಯಾಗುವೆ. ಇಂದು ರಾತ್ರಿ ನಮ್ಮ ಗುಡಿಸಲಲ್ಲಿ ಇದ್ದು ನಾಳೆ ಹೋಗು ಎಂದು ಬೇಡನು ಹುಡುಗನನ್ನು ಕರೆದುಕೊಂಡು ಹೋದನು.

  4. ೪. ಬೇಡನು ಹುಡುಗನನ್ನು ಯಾವ ರೀತಿ ಉಪಚರಿಸಿದನು?

    Answer

    ಬೇಡನು ತನ್ನ ಪಾಲಿನ ಹಣ್ಣು ಹಾಲು ಕೊಟ್ಟು, ಹಾಸಿಗೆ ಹಾಸಿ ಮಲಗಿಸಿ, ಕರುಣೆಯಿಂದ ಹುಡುಗನನ್ನು ಉಪಚರಿಸಿದನು.

  5. ೫. ಸರ್ಪ ಯಾವ ಕಷ್ಟದಲ್ಲಿ ಸಿಲುಕಿತ್ತು? ಆ ಕಷ್ಟದಿಂದ ಅದು ಹೇಗೆ ಪಾರಾಯಿತು?

    Answer

    ಸರ್ಪವು ಹುತ್ತದಲ್ಲಿ ಅರ್ಧ ಒಳಗೂ ಅರ್ಧ ಹೊರಗೂ ಸಿಕ್ಕಿಕೊಂಡು ಚಲಿಸಲಾರದ ಸ್ಥಿತಿಯಲ್ಲಿತ್ತು. ಶಿವನ ಸಲಹೆಯಂತೆ ತನ್ನ ನೆತ್ತಿಯ ರತ್ನವನ್ನು ಯೋಗ್ಯನಿಗೆ ದಾನ ಮಾಡಿದಾಗ ಸರ್ಪವು ಸರಿದಾಡುವ ಶಕ್ತಿ ಪಡೆದು ಪಾರಾಯಿತು.

  6. ೬. ಶಿವನು ಹುಡುಗನಿಗೆ ಏನೆಂದು ಹೇಳಿ ಕಳುಹಿಸಿದನು?

    Answer

    ನೇಪಾಳ ದೇಶದ ರಾಜನ ಹೆಂಡತಿಗೆ ಪ್ರಸಾದ ಕೊಟ್ಟರೆ ಹಡೆಯುತ್ತಾಳೆ, ಹುಟ್ಟಿದ ಕೂಸು ಅನ್ನದಾನದ ಪುಣ್ಯವನ್ನು ಹೇಳುತ್ತದೆ ಎಂದು ಶಿವನು ಹುಡುಗನಿಗೆ ಹೇಳಿ ಕಳುಹಿಸಿದನು.

ಇ) ಈ ಕೆಳಗಿನ ಪ್ರಶ್ನೆಗಳಿಗೆ ಆರು-ಏಳು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಬೇಡ ಮತ್ತು ಆತನ ಹೆಂಡತಿ ಹುಲಿಯ ಬಾಯಿಗೆ ಹೇಗೆ ತುತ್ತಾದರು?

    Answer

    ಬೇಡನು ಹುಡುಗನಿಗೆ ತನ್ನ ಪಾಲಿನ ಹಣ್ಣು ಹಾಲು ಕೊಟ್ಟು ಉಪಚರಿಸಿದನು. ಅವನ ಹೆಂಡತಿ ಮಾತ್ರ ಕೊಡಲು ಒಪ್ಪಲಿಲ್ಲ. ಬೇಡನು ಹುಡುಗನಿಗೆ ಹಾಸಿಗೆ ಹಾಸಿ ಮಲಗಿಸಿದನು. ತನಗೆ ಸ್ಥಳವಿಲ್ಲದೆ ಬಾಗಿಲಲ್ಲಿ ಅರ್ಧ ಹೊರಗೆ ಮಲಗಿದ್ದನು. ರಾತ್ರಿ ಹುಲಿ ಬಂದು ಬೇಡನನ್ನು ಕೊಂದು ತಿಂದುಹಾಕಿತು. ನಂತರ ರಕ್ತದ ರುಚಿಗೆ ಹೆಂಡತಿಯನ್ನೂ ತಿಂದುಹಾಕಿತು. ಹುಲಿಯು ಹುಡುಗನನ್ನು ಮಾತ್ರ ನೋಡದೆ ಹೋಯಿತು.

  2. ೨. ಹುಡುಗನು ಶಿವನ ಬಳಿ ಕೇಳಿದ ಪ್ರಶ್ನೆಗಳಾವುವು? ಅದಕ್ಕೆ ಶಿವನು ನೀಡಿದ ಉತ್ತರಗಳೇನು?

    Answer

    ಹುಡುಗನು ಶಿವನಲ್ಲಿ ಅನ್ನದಾನದ ಪುಣ್ಯ, ರಾಜನ ಕೆರೆಯಲ್ಲಿ ನೀರು ಬೀಳದಿರಲು ಕಾರಣ, ಕುಂಟನ ಕಾಲು ಹೋಗಲು ಕಾರಣ, ಮತ್ತು ಸರ್ಪವು ಹುತ್ತದಲ್ಲಿ ಸಿಕ್ಕಿಕೊಂಡಿರಲು ಕಾರಣ ಎಂಬ ಪ್ರಶ್ನೆಗಳನ್ನು ಕೇಳಿದನು. ಅನ್ನದಾನದ ಪುಣ್ಯ ತಿಳಿಯಲು ನೇಪಾಳದ ರಾಜನ ಹೆಂಡತಿಗೆ ಪ್ರಸಾದ ಕೊಟ್ಟು ಹುಟ್ಟಿದ ಕೂಸನ್ನು ಕೇಳಬೇಕೆಂದು ಶಿವನು ಹೇಳಿದನು. ರಾಜನ ಮಗಳನ್ನು ಯೋಗ್ಯ ವರನಿಗೆ ಮದುವೆ ಮಾಡಿದರೆ ಕೆರೆ ತುಂಬುತ್ತದೆ, ಕುಂಟನು ತನ್ನ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಕಾಲು ಬರುತ್ತದೆ, ಸರ್ಪವು ತನ್ನ ನೆತ್ತಿಯ ರತ್ನವನ್ನು ಯೋಗ್ಯನಿಗೆ ದಾನ ಮಾಡಿದರೆ ಸರಿದಾಡುತ್ತದೆ ಎಂದು ಶಿವನು ಉತ್ತರಿಸಿದನು.

  3. ೩. ಮಗು ಹುಡುಗನಿಗೆ ಅನ್ನದಾನದ ಮಹತ್ತ್ವವನ್ನು ಹೇಗೆ ತಿಳಿಸಿಕೊಟ್ಟಿತು?

    Answer

    ಮಗು ಹುಡುಗನಿಗೆ, ತಾನೇ ಹಿಂದಿನ ಜನ್ಮದಲ್ಲಿ ಬೇಡನಾಗಿದ್ದು, ಅನ್ನದಾನ ಮಾಡಿದ ಕಾರಣ ರಾಜಕುಮಾರನಾಗಿ ಹುಟ್ಟಿದ್ದನ್ನು ತಿಳಿಸಿತು. ಅನ್ನದಾನ ಮಾಡಲು ಒಪ್ಪದ ಅವನ ಹೆಂಡತಿ ಹಂದಿಯಾಗಿ ಹುಟ್ಟಿದ್ದಳೆಂದು ಹೇಳಿ, ಅನ್ನದಾನದ ಮಹತ್ತ್ವವನ್ನು ತಿಳಿಸಿಕೊಟ್ಟಿತು.

ಈ) ಇಲ್ಲಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ.

    Answer

    ತಾಯಿ ಮಗನಿಗೆ ಹೇಳಿದಳು.

  2. ೨. ಬೇಕಿದ್ದರೆ ನಿನ್ನ ಪಾಲಿನ ಹಣ್ಣು ಹಾಲು ಕೊಡು.

    Answer

    ಬೇಡನ ಹೆಂಡತಿ ಬೇಡನಿಗೆ ಹೇಳಿದಳು.

  3. ೩. ನಿನಗಿಂತ ಯೋಗ್ಯ ವರ ಇನ್ನಾರಿದ್ದಾರೆ! ಬಾ.

    Answer

    ರಾಜನು ಹುಡುಗನಿಗೆ ಹೇಳಿದನು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ಅಲ್ಲಿಗೊಬ್ಬ = _________ + _________

    Answer

    ಅಲ್ಲಿ + ಒಬ್ಬ

  2. ೨. ಆಗಲೆಂದು = _________ + _________

    Answer

    ಆಗಲಿ + ಎಂದು

  3. ೩. ಸರ್ಪವಿತ್ತು = _________ + _________

    Answer

    ಸರ್ಪ + ಇತ್ತು

  4. ೪. ಕೆರೆಯಲ್ಲಿ = _________ + _________

    Answer

    ಕೆರೆ + ಅಲ್ಲಿ

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಶ್ರೀಮಂತ X _________

    Answer

    ಬಡವ

  2. ೨. ಕರುಣೆ X _________

    Answer

    ಕ್ರೌರ್ಯ

  3. ೩. ಹೊರಗೆ X _________

    Answer

    ಒಳಗೆ

  4. ೪. ವಿದ್ಯೆ X _________

    Answer

    ಅವಿದ್ಯೆ

  5. ೫. ಬೆಳಕು X _________

    Answer

    ಕತ್ತಲೆ

  6. ೬. ಅನ್ಯಾಯ X _________

  7. ೭. ಯೋಗ್ಯ X _________

    Answer

    ಅಯೋಗ್ಯ

  8. ೮. ಸುಖ X _________

    Answer

    ದುಃಖ

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ಅನ್ನದಾನ : __________________________________________________

    Model sentence

    ಅನ್ನದಾನ: ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಅನ್ನದಾನ ಮಾಡುತ್ತೇವೆ.

  2. ೨. ಪುಣ್ಯ : __________________________________________________

    Model sentence

    ಪುಣ್ಯ: ದಾನ ಮಾಡುವುದರಿಂದ ಪುಣ್ಯ ಬರುತ್ತದೆ.

  3. ೩. ಪ್ರಸಾದ : __________________________________________________

    Model sentence

    ಪ್ರಸಾದ: ದೇವಸ್ಥಾನದಲ್ಲಿ ನಮಗೆ ಪ್ರಸಾದ ಕೊಟ್ಟರು.

  4. ೪. ಕೈಲಾಸ : __________________________________________________

    Model sentence

    ಕೈಲಾಸ: ನಾನು ಕೈಲಾಸ ಪರ್ವತವನ್ನು ನೋಡಬೇಕೆಂದಿದ್ದೇನೆ.

  5. ೫. ದಣಿವು : __________________________________________________

    Model sentence

    ದಣಿವು: ಆಟವಾಡಿ ನನಗೆ ತುಂಬಾ ದಣಿವಾಯಿತು.

ಈ) ಸೂಚನೆಗಳಿಗನುಸಾರ ವಾಕ್ಯಗಳನ್ನು ಪುನಃ ರಚಿಸಿರಿ.

  1. ೧. ತನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಹೋದಕಾಲು ಬರುತ್ತವೆ.

    Answer

    ತನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬಂದಿತು.

  2. (ಭೂತಕಾಲದಲ್ಲಿ ಬರೆಯಿರಿ)

  3. __________________________________________________

    Answer

    ತನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬಂದಿತು.

  4. ೨. ಹುಡುಗನನ್ನು ನೋಡಿ ಬೇಡನಿಗೆ ಕರುಣೆ ಬಂತು. (ಬಹು ವಚನದಲ್ಲಿ ಬರೆಯಿರಿ)

    Answer

    ಹುಡುಗರನ್ನು ನೋಡಿ ಬೇಡರಿಗೆ ಕರುಣೆ ಬಂತು.

  5. __________________________________________________

    Answer

    ಹುಡುಗರನ್ನು ನೋಡಿ ಬೇಡರಿಗೆ ಕರುಣೆ ಬಂತು.

  6. ೩. ಖರ್ಚುಮಾಡಿ ಕೋಟಿ ಒಂದು ಹಣ ಕೆರೆ ಕಟ್ಟಿಸಿದೆ. (ವಾಕ್ಯವನ್ನು ಸರಿಪಡಿಸಿ ಬರೆಯಿರಿ)

    Answer

    ಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ.

  7. __________________________________________________

    Answer

    ಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ.

  8. ೪. ಹುಡುಗಾ ಎಲ್ಲಿ ಹೊರಟಿರುವೆ (ಸೂಕ್ತ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ)

    Answer

    ಹುಡುಗಾ, ಎಲ್ಲಿ ಹೊರಟಿರುವೆ?

  9. __________________________________________________

    Answer

    ಹುಡುಗಾ, ಎಲ್ಲಿ ಹೊರಟಿರುವೆ?

IV. ಚಟುವಟಿಕೆಗಳು :

  1. ೧. ಈ ಕಥೆಯನ್ನು ತರಗತಿಯಲ್ಲಿ ನಿಮ್ಮದೇ ಧಾಟಿಯಲ್ಲಿ ಹಾವಭಾವಗಳೊಂದಿಗೆ ಗಟ್ಟಿಯಾಗಿ ಹೇಳಿರಿ.

  2. ೨. ಅನ್ನದಾನದ ಮಹತ್ತ್ವ ಕುರಿತು ಗೆಳೆಯರೊಂದಿಗೆ ಚರ್ಚಿಸಿರಿ.

  3. ೩. ‘ಅನ್ನದಾನ’ ಕಥೆಯಲ್ಲಿ ಬರುವ ಪಾತ್ರಗಳನ್ನು ಹಂಚಿಕೊಂಡು ತರಗತಿಯಲ್ಲಿ ಅಭಿನಯಿಸಿರಿ.

  4. ೪. ಜಾನಪದ ಕಥೆಗಳನ್ನು ಓದಿ, “ಕೇಳಿ ತಿಳಿಯಿರಿ”.

  5. * * * * *

Interactive Lab