CRECT Education

Kannada Class 4: Practice & Play - Veera Abhimanyu

Description

Practice comprehension and language play from the lesson 'Veera Abhimanyu'. Part 2 of 2.

ಗದ್ಯ (prose/play) · ಸಮಿತಿ ರಚನೆ (Committee-authored)

ಪಠ್ಯFull text

ಕೌರವರಿಗೂ ಪಾಂಡವರಿಗೂ ಕುರುಕ್ಷೇತ್ರದಲ್ಲಿ ಘನಘೋರ ಸಂಗ್ರಾಮ ನಡೆಯುತ್ತಿತ್ತು. ಹನ್ನೆರಡನೆಯ ದಿನ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಿದ್ದರು. ಕೃಷ್ಣ, ಬಲರಾಮ ಮತ್ತು ಅರ್ಜುನನನ್ನು ಬಿಟ್ಟರೆ ಚಕ್ರವ್ಯೂಹವನ್ನು ಭೇದಿಸುವ ವಿದ್ಯೆ ಉಳಿದ ಪಾಂಡವರಾರಿಗೂ ಗೊತ್ತಿರಲಿಲ್ಲ. ಇದರಿಂದ ಭೀಮಸೇನ ಮತ್ತು ಧರ್ಮರಾಯ ಚಿಂತಾಕ್ರಾಂತರಾಗಿದ್ದರು. ದೃಶ್ಯ ೧ *(ಧರ್ಮರಾಯ ಮತ್ತು ಭೀಮಸೇನ ಚರ್ಚಿಸುತ್ತಾ ಕುಳಿತಿದ್ದಾರೆ. ಅಲ್ಲಿಗೆ ಅಭಿಮನ್ಯುವಿನ ಪ್ರವೇಶ)* ಅಭಿಮನ್ಯು : ದೊಡ್ಡಪ್ಪ, ನೀವೇಕೆ ಇಂದು ಬಹಳ ಚಿಂತಾಕ್ರಾಂತರಾಗಿರುವಿರಿ? ಧರ್ಮರಾಯ : ಬಾ ಮಗು ಅಭಿಮನ್ಯು. ಇಂದು ದ್ರೋಣಾಚಾರ್ಯರು ಯುದ್ಧಭೂಮಿಯಲ್ಲಿ ಚಕ್ರವ್ಯೂಹವನ್ನು ರಚಿಸಿದ್ದಾರೆ. ಇದನ್ನು ಭೇದಿಸುವ ವಿದ್ಯೆ ನಿನ್ನ ತಂದೆಯಾದ ಅರ್ಜುನ, ಶ್ರೀಕೃಷ್ಣ ಹಾಗೂ ಬಲರಾಮರಿಗೆ ಮಾತ್ರ ಗೊತ್ತು. ಆದರೆ ಈಗ ಅವರು ಅನಿವಾರ್ಯವಾಗಿ ಸಂಶಪ್ತಕರೆಂಬ ರಾಕ್ಷಸರನ್ನು ಎದುರಿಸಲು ಹೋಗಿದ್ದಾರೆ. ಈಗೇನು ಮಾಡಬೇಕು ಎಂಬುದೇ ದೊಡ್ಡ ಚಿಂತೆಯಾಗಿದೆ. ಅಭಿಮನ್ಯು : ದೊಡ್ಡಪ್ಪ, ಇಷ್ಟು ಚಿಕ್ಕ ವಿಷಯಕ್ಕೆ ಅಷ್ಟೊಂದು ಚಿಂತೆಯೇ? ಧರ್ಮರಾಯ : ಏನು! ಇದು ಚಿಕ್ಕ ವಿಷಯವೇ ಕಂದಾ! ಪಾಂಡವರಿಗೂ ಕೌರವರಿಗೂ ಬಿಲ್ವಿದ್ಯೆ ಕಲಿಸಿದ ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸುವುದು ಅಷ್ಟು ಸುಲಭದ ಕೆಲಸವೇ? ಅಭಿಮನ್ಯು : ಚಿಂತೆಯನ್ನು ಬಿಡಿ ದೊಡ್ಡಪ್ಪ, ಚಕ್ರವ್ಯೂಹವನ್ನು ನಾನು ಭೇದಿಸುತ್ತೇನೆ. ನನ್ನನ್ನು ಆಶೀರ್ವದಿಸಿ ಕಳಿಸಿಕೊಡಿ. ಧರ್ಮರಾಯ : *(ಅಭಿಮನ್ಯುವಿನ ಮಾತುಗಳನ್ನು ಕೇಳಿ ಮನದಲ್ಲಿ ಹೆಮ್ಮೆಪಡುತ್ತಾ)* ಭೇಷ್ ಕುಮಾರ, ನಿನ್ನ ಪರಾಕ್ರಮದ ಮಾತನ್ನು ಕೇಳುತ್ತಿದ್ದರೆ, ನನಗೆ ಅತೀವ ಸಂತೋಷವಾಗುತ್ತಿದೆ. ನಿನ್ನನ್ನು ಪಡೆದ ನಾವೇ ಧನ್ಯರು. ಆದರೆ......... ಅಭಿಮನ್ಯು : ಆದರೆ...? ಹಾಗೆಂದರೇನು ದೊಡ್ಡಪ್ಪ. ನನ್ನ ಸಾಮರ್ಥ್ಯದ ಮೇಲೆ ನಿಮಗೆ ಶಂಕೆಯೇ? ನನ್ನ ಮೈಯಲ್ಲಿ ಹರಿಯುತ್ತಿರುವುದು ಕ್ಷತ್ರಿಯ ವಂಶದ ರಕ್ತ. ನಾನು ಜಗದ್ವಿಖ್ಯಾತ ಅರ್ಜುನನ ಮಗ. ಧರ್ಮರಾಯ : ಹೌದು ಮಗು, ನೀ ಹೇಳುತ್ತಿರುವ ಮಾತುಗಳಲ್ಲಿ ಸಂದೇಹವೇ ಇಲ್ಲ. ಆದರೆ ಈ ಘನ ಘೋರ ಯುದ್ಧವು ನಿನ್ನಂತಹ ಬಾಲಕನಿಗೆ ಸಲ್ಲದು ಕುಮಾರ. ಅಭಿಮನ್ಯು : ಚಕ್ರವ್ಯೂಹವನ್ನು ಭೇದಿಸುವ ವಿದ್ಯೆಯನ್ನು ನಾನು ತಾಯಿಯ ಗರ್ಭದಲ್ಲಿರುವಾಗಲೇ ಶ್ರೀಕೃಷ್ಣ ಪರಮಾತ್ಮನಿಂದ ಕೇಳಿ ತಿಳಿದುಕೊಂಡಿದ್ದೇನೆ. ನನ್ನನ್ನು ಹರಸಿ ಕಳಿಸಿ ದೊಡ್ಡಪ್ಪ. ಭೀಮಸೇನ : ಭಲೇ ಕುಮಾರ! ನಿನ್ನ ಪರಾಕ್ರಮದ ಮಾತುಗಳನ್ನು ಕೇಳುತ್ತಿದ್ದರೆ, ನೀನು ಚಕ್ರವ್ಯೂಹ ಭೇದಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಧರ್ಮರಾಯ : ಇದೇನು ಭೀಮಸೇನ? ನೀನು ಹೇಳುತ್ತಿರುವುದು. ಅಭಿಮನ್ಯು ಇನ್ನೂ ಮಗು. ಅವನನ್ನು ಯುದ್ಧಕ್ಕೆ ಕಳಿಸುವುದು ನನಗೆ ಸರಿ ಕಾಣಿಸದು. ಭೀಮಸೇನ : ಅಣ್ಣಾ! ನೀನು ಚಿಂತಿಸಬೇಡ, ಚಕ್ರವ್ಯೂಹವನ್ನು ಭೇದಿಸುವ ಸಾಮರ್ಥ್ಯ ವೀರ ಅಭಿಮನ್ಯುವಿನಲ್ಲಿದೆ. ಧರ್ಮರಾಯ : ಆಯ್ತು ಭೀಮಸೇನ. ನಿನ್ನ ಮಾತಿನಂತೆ ಅಭಿಮನ್ಯುವನ್ನು ಯುದ್ಧಕ್ಕೆ ಕಳುಹಿಸಲು ನನ್ನ ಸಹಮತವಿದೆ. ನಾವೆಲ್ಲರೂ ಯುದ್ಧರಂಗದಲ್ಲಿ ವೀರ ಬಾಲಕನಿಗೆ ರಕ್ಷಾಕವಚದಂತಿರೋಣ. ಅಭಿಮನ್ಯು : ಬಹಳ ಸಂತೋಷ ದೊಡ್ಡಪ್ಪ. ನನ್ನನ್ನು ಆಶೀರ್ವದಿಸಿ *(ಎಂದು ಹೇಳಿ ಧರ್ಮರಾಯ, ಭೀಮಸೇನರ ಪಾದಗಳಿಗೆ ನಮಸ್ಕರಿಸಿ ಹೊರಡುವನು)* ದೃಶ್ಯ ೨ *(ಸುಭದ್ರೆಯ ಅರಮನೆ. ಅಭಿಮನ್ಯು ತನ್ನ ತಾಯಿ ಸುಭದ್ರೆಯ ಪಾದಗಳಿಗೆ ಎರಗುವನು)* ಅಭಿಮನ್ಯು : ಅಮ್ಮಾ ! ಈ ದಿನ ನಾನು ಕುರುಕ್ಷೇತ್ರ ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸಲು ದೊಡ್ಡಪ್ಪಂದಿರಾದ ಧರ್ಮರಾಯ ಹಾಗೂ ಭೀಮಸೇನರಿಂದ ಆಶೀರ್ವಾದ ಪಡೆದು ಬಂದಿದ್ದೇನೆ. ನೀನೂ ನನ್ನನ್ನು ಹರಸಿ ಕಳುಹಿಸಿಕೊಡು. ಸುಭದ್ರೆ : *(ದಿಗ್ಭಾಂತಳಾಗಿ)* ಇದೇನು ಕಂದಾ! ನೀನು ಯುದ್ಧರಂಗಕ್ಕೆ ಹೋಗುವೆಯಾ! ಅಲ್ಲಿ ಚಕ್ರವ್ಯೂಹವನ್ನು ಭೇದಿಸುವೆಯಾ? ಅಭಿಮನ್ಯು : ಏಕಮ್ಮಾ? ಈ ಸುಭದ್ರಾನಂದನ ವೀರ ಅಭಿಮನ್ಯುವಿನ ಮೇಲೆ ನಿನಗೆ ಸಂದೇಹವೇ! ನನ್ನನ್ನು ಹರಸಿ ಕಳುಹಿಸಿಕೊಡಮ್ಮಾ. ಸುಭದ್ರೆ : ಆಗಲಿ ಮಗು. ಶ್ರೀಕೃಷ್ಣ ಪರಮಾತ್ಮನ ಕೃಪೆ, ತಂದೆಯ ಶೌರ್ಯ ನಿನ್ನಲ್ಲಿರುವಾಗ ಸಂದೇಹದ ಮಾತೇ ಇಲ್ಲ. ಜಯಶಾಲಿಯಾಗಿ ಬಾ...ಮಗನೇ. ಹೋಗಿ ಬಾ ನಿನಗೆ ಮಂಗಳವಾಗಲಿ. *(ಉತ್ತರೆಯ ಪ್ರವೇಶ)* ಅಭಿಮನ್ಯು : ಬಾ ಉತ್ತರೇಕೆ ನಿನ್ನ ವದನ ಇಂದು ಖಿನ್ನವಾಗಿ ಕಾಣುತ್ತಿದೆಯಲ್ಲಾ? ಉತ್ತರೆ : ಪ್ರಾಣಕಾಂತ! ನೀವು ಯುದ್ಧರಂಗಕ್ಕೆ ಹೋಗುವ ವಿಷಯ ತಿಳಿಯಿತು. ಅದಕ್ಕಾಗಿಯೇ ಈ ರೀತಿಯ ಖಿನ್ನತೆ ..... ಅಭಿಮನ್ಯು : ಚಿಂತಿಸಬೇಡ ಉತ್ತರೆ. ನಾನು ಈ ಯುದ್ಧದಲ್ಲಿ ಜಯಶಾಲಿಯಾಗಿ ಹಿಂದಿರುಗುತ್ತೇನೆ. ಧೈರ್ಯಗೆಡದೆ ನಗುಮುಖದಿಂದ ನನ್ನನ್ನು ಕಳಿಸಿಕೊಡು. ಉತ್ತರೆ : ಆಗಲಿ, ಜಯವಿರುವ ತನಕ ಭಯವೇಕೆ? ಯುದ್ಧ ಕ್ಷತ್ರಿಯರ ಧರ್ಮ. ಹೋಗಿ ಬನ್ನಿ. ಆ ಪರಮಾತ್ಮ ನಿಮಗೆ ಒಳಿತು ಮಾಡಲಿ. ದೃಶ್ಯ ೩ *(ಅಭಿಮನ್ಯು ಸೂರ್ಯನಂತೆ ಪ್ರಕಾಶಿಸುತ್ತ ರಥವನ್ನೇರಿ ಯುದ್ಧಭೂಮಿಗೆ ಪ್ರವೇಶ ಮಾಡುತ್ತಾನೆ)* ಅಭಿಮನ್ಯು : *(ಸಾರಥಿಯನ್ನು ಕುರಿತು)* ಸುಮಿತ್ರ, ಆದಷ್ಟು ಬೇಗ ನನ್ನನ್ನು ದ್ರೋಣಾಚಾರ್ಯರು ರಚಿಸಿರುವ ಚಕ್ರವ್ಯೂಹದ ಕಡೆ ಕರೆದುಕೊಂಡು ಹೋಗು. *(ಭೀಮನೊಂದಿಗೆ ಪಾಂಡವರ ಸೈನ್ಯವು ಅಭಿಮನ್ಯುವನ್ನು ನೆರಳಿನಂತೆ ಹಿಂಬಾಲಿಸಿ ಬರುತ್ತದೆ.)* ಅಭಿಮನ್ಯು : ಬನ್ನಿರಿ! ಬನ್ನಿರಿ! ಒಬ್ಬೊಬ್ಬರಾಗಿ ಬನ್ನಿ. ನಿಮ್ಮನ್ನೆಲ್ಲಾ ತರಗೆಲೆಗಳಂತೆ ತೂರಿ ಯಮಪುರಕ್ಕೆ ಕಳಿಸುತ್ತೇನೆ. *(ದ್ರೋಣ, ಕರ್ಣ ಹಾಗೂ ಇತರ ಕೌರವ ಸೇನೆ ಸೇರಿ ಅಭಿಮನ್ಯುವಿನ ವೀರಾವೇಶ ನೋಡಿ ಆತನನ್ನು ಮುಗಿಸಲು ತಂತ್ರ ಹೂಡುವರು. ವೀರಾವೇಶದಿಂದ ಹೋರಾಡುತ್ತಿರುವಾಗ ಕೌರವರು ಹಿಂದಿನಿಂದ ಬಂದು ಅಭಿಮನ್ಯುವಿನ ಕೈಗಳನ್ನು ಕತ್ತರಿಸುವರು.)* ಅಭಿಮನ್ಯು : ರಣಹೇಡಿಗಳೇ, ತಾಯಿಯ ಹಾಲುಂಡ ಯಾವುದೇ ಕ್ಷತ್ರಿಯ ಈ ಕೆಲಸ ಮಾಡಲಾರ. ವೀರಾವೇಶದಿಂದ ಎದುರಿಸಿ ಹೋರಾಡಿ ಸತ್ತು ಸ್ವರ್ಗ ಸೇರುವುದನ್ನು ಬಿಟ್ಟು ನರಕದ ದಾರಿ ಹಿಡಿಯುತ್ತೀರಾ? ನಿಮಗೆ ಧಿಕ್ಕಾರವಿರಲಿ. ದುರ್ಯೋಧನ : ಸೈಂಧವರಾಜ ಬಿಡಬೇಡ, ಹೊಡೆ. ಕರ್ಣ, ಜಯದ್ರಥ ನೀವೆಲ್ಲರೂ ಅವನ ಮೇಲೆ ಒಟ್ಟಾಗಿ ಬೀಳಿರಿ. *(ಅಭಿಮನ್ಯು ರಥದ ಚಕ್ರವನ್ನು ಕೈಯಲ್ಲಿ ತಿರುಗಿಸಿ ವೀರಾವೇಶದಿಂದ ಹೋರಾಡಿ ವೀರಮರಣ ಹೊಂದುವನು.)*

"ಬೆಳೆಯುವ ಸಿರಿ ಮೊಳಕೆಯಲ್ಲಿ" — A Kannada proverb roughly meaning "The richness of the future crop is seen in the sprouting seed," indicating that greatness shows early.

ಪದಗಳ ಅರ್ಥword meanings

KannadaPronunciationMeaning
ಭೇದಿಸುbhe-di-suಹೊಡೆ, ಮುರಿ, ಸೀಳು; ಆಶೀರ್ವದಿಸು - ಹರಸು;
ಶಂಕೆshan-keಸಂದೇಹ, ಸಂಶಯ;
ವಿಖ್ಯಾತvi-khya-taಪ್ರಸಿದ್ಧವಾದ;
ಯುದ್ಧyud-dhaಕದನ, ಸಮರ, ಸಂಗ್ರಾಮ;
ಎರಗುe-ra-guನಮಸ್ಕಾರ ಮಾಡು, ನಮಸ್ಕರಿಸು;
ದಿಗ್ಭಾಂತdig-bhran-taಗಾಬರಿಗೊಳ್ಳು, ಕಸಿವಿಸಿಯಾಗು;
ಸೂರ್ಯsoor-yaನೇಸರ, ರವಿ;
ಸೇನೆse-neದಂಡು, ಸೈನ್ಯ;
ಯಮಪುರya-ma-pu-raಯಮನಲೋಕ, ಮೃತ್ಯುಲೋಕ;
ಮರಣma-ra-naಜೀವ ಹೋಗುವಿಕೆ, ಸಾವು;
ಘನಘೋರgha-na-gho-raಉಗ್ರವಾದ; ಭಯಂಕರವಾದ;
ಚಿಂತಾಕ್ರಾಂತchin-ta-kran-taಚಿಂತೆಗೊಳಗಾದ;
ಸಂಹರಿಸುsam-ha-ri-suನಾಶಗೊಳಿಸು, ಕೊಲ್ಲು, ನಿರ್ನಾಮ ಮಾಡು;
ಪ್ರಶಂಸೆpra-sham-seಹೊಗಳಿಕೆ, ಸ್ತುತಿ;
ಪರಾಕ್ರಮpa-ra-kra-maಕಲಿತನ, ಶೌರ್ಯ;
ಸಹಮತsa-ha-ma-taಒಮ್ಮತ, ಏಕಾಭಿಪ್ರಾಯ;
ನಂದನnan-da-naಮಗ, ಪುತ್ರ, ಕಂದ;
ದಯೆda-yeಕರುಣೆ, ಅನುಕಂಪ, ಕೃಪೆ;
ಮಂಗಳman-ga-laಶುಭ;
ವದನva-da-naಮುಖ, ಮೋರೆ;
ಖಿನ್ನkhin-naದುಃಖಿತನಾದ, ನೊಂದ;
ಪರಿಣಿತpa-ri-ni-taಚತುರ, ನಿಪುಣ;
ಹೇಡಿhe-diಅಂಜುಬುರುಕ ಹೆದರುಪುಕ್ಕ;
ತಂತ್ರtan-traಉಪಾಯ;
ರಾಜೋಚಿತra-jo-chi-taಅರಸನಿಗೆ ಉಚಿತವಾದ, ರಾಜಯೋಗ್ಯವಾದ;
ಧಿಕ್ಕಾರdhik-kaa-raನಿಂದೆ, ತಿರಸ್ಕಾರ;
ಸಾಮರ್ಥ್ಯsaa-mar-thyaದಕ್ಷತೆ, ಯೋಗ್ಯತೆ, ಬಲ. ಶಕ್ತಿ;
ಅಪ್ರತಿಮa-pra-ti-maಅಸಾಮಾನ್ಯವಾದ;
ಗರ್ಭgar-bhaಬಸಿರು;
ಹಿಂಬಾಲಿಸುhim-baa-li-suಹಿಂದೆಬರು, ಅನುಸರಿಸು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. ೧. ಚಕ್ರವ್ಯೂಹವನ್ನು ರಚಿಸಿದವರು ಯಾರು?

    Answer

    ಚಕ್ರವ್ಯೂಹವನ್ನು ದ್ರೋಣಾಚಾರ್ಯರು ರಚಿಸಿದರು.

  2. ೨. ಕೌರವರು-ಪಾಂಡವರು ಯಾರಿಂದ ಬಿಲ್ವಿದ್ಯೆ ಕಲಿತರು?

    Answer

    ಕೌರವರು ಮತ್ತು ಪಾಂಡವರು ದ್ರೋಣಾಚಾರ್ಯರಿಂದ ಬಿಲ್ವಿದ್ಯೆ ಕಲಿತರು.

  3. ೩. ಅಭಿಮನ್ಯುವಿನ ತಂದೆಯ ಹೆಸರೇನು?

    Answer

    ಅಭಿಮನ್ಯುವಿನ ತಂದೆಯ ಹೆಸರು ಅರ್ಜುನ.

  4. ೪. ಕೌರವರಿಗೂ-ಪಾಂಡವರಿಗೂ ಯುದ್ಧ ಎಲ್ಲಿ ನಡೆಯಿತು?

    Answer

    ಕೌರವರಿಗೂ ಪಾಂಡವರಿಗೂ ಕುರುಕ್ಷೇತ್ರದಲ್ಲಿ ಯುದ್ಧ ನಡೆಯಿತು.

ಆ. ಕೊಟ್ಟಿರುವ ಮಾತುಗಳನ್ನು ಯಾರು? ಯಾರಿಗೆ ಹೇಳಿದರು?

  1. ೧. "ದೊಡ್ಡಪ್ಪ, ನೀವೇಕೆ ಇಂದು ಬಹಳ ಚಿಂತಾಕ್ರಾಂತರಾಗಿರುವಿರಿ"?

  2. ಯಾರು?

    Answer

    ಅಭಿಮನ್ಯು

  3. ಯಾರಿಗೆ?

    Answer

    ಧರ್ಮರಾಯನಿಗೆ

  4. ೨. "ನಿನ್ನನ್ನು ಪಡೆದ ನಾವೇ ಧನ್ಯರು"

  5. ಯಾರು?

    Answer

    ಧರ್ಮರಾಯ

  6. ಯಾರಿಗೆ?

    Answer

    ಅಭಿಮನ್ಯುವಿಗೆ

  7. ೩. "ಏನು ಕಂದಾ! ನೀನು ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವೆಯಾ?

    Answer

    "ಏನು ಕಂದಾ! ನೀನು ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವೆಯಾ?"

  8. ಯಾರು?

    Answer

    ಸುಭದ್ರೆ

  9. ಯಾರಿಗೆ?

    Answer

    ಅಭಿಮನ್ಯುವಿಗೆ

ಇ. ಹೊಂದಿಸಿ ಬರೆಯಿರಿ.

  1. ಅ (೧. ಸುಭದ್ರೆ ೨. ಉತ್ತರೆ ೩. ಸುಮಿತ್ರ ೪. ಧರ್ಮರಾಯ) — ಬ (ಅಭಿಮನ್ಯುವಿನ ಹೆಂಡತಿ, ಅಭಿಮನ್ಯುವಿನ ಗುರು, ಅಭಿಮನ್ಯುವಿನ ದೊಡ್ಡಪ್ಪ, ಅಭಿಮನ್ಯುವಿನ ತಾಯಿ, ಅಭಿಮನ್ಯುವಿನ ಸಾರಥಿ)

    Answer

    1-ಅಭಿಮನ್ಯುವಿನ ತಾಯಿ, 2-ಅಭಿಮನ್ಯುವಿನ ಹೆಂಡತಿ, 3-ಅಭಿಮನ್ಯುವಿನ ಸಾರಥಿ, 4-ಅಭಿಮನ್ಯುವಿನ ದೊಡ್ಡಪ್ಪ

ಈ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ.

  1. ೧. ಧರ್ಮರಾಯ, ಜಯದ್ರಥ, ಭೀಮಸೇನ, ಅರ್ಜುನ

  2. ೨. ವಿಖ್ಯಾತ, ಕುಖ್ಯಾತ, ಹೆಸರುವಾಸಿ, ಪ್ರಸಿದ್ಧಿ

  3. ೩. ಸೂರ್ಯ, ರವಿ, ಆರ್ಯ, ದಿನಕರ

  4. ೪. ಅಭಿಮನ್ಯು, ಉತ್ತರೆ, ಸುಭದ್ರೆ, ಶಕುನಿ

ಉ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ಬರೆಯಿರಿ.

  1. ೧. ಸಂದೇಹ :

  2. ೨. ಜಯಶಾಲಿ :

  3. ೩. ನಮಸ್ಕರಿಸು :

  4. ೪. ವೀರಾವೇಶ :

ಊ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1. ೧. ಧರ್ಮರಾಯನು ಚಿಂತಾಕ್ರಾಂತನಾಗಲು ಕಾರಣವೇನು?

    Answer

    ದ್ರೋಣಾಚಾರ್ಯರು ಚಕ್ರವ್ಯೂಹ ರಚಿಸಿದ್ದರು. ಅದನ್ನು ಭೇದಿಸುವ ವಿದ್ಯೆ ಅರ್ಜುನ, ಕೃಷ್ಣ, ಬಲರಾಮರಿಗೆ ಮಾತ್ರ ಗೊತ್ತಿತ್ತು. ಆದರೆ ಅವರು ಸಂಶಪ್ತಕರನ್ನು ಎದುರಿಸಲು ಹೋಗಿದ್ದರಿಂದ ಧರ್ಮರಾಯನು ಚಿಂತಾಕ್ರಾಂತನಾದನು.

  2. ೨. ಸುಭದ್ರೆ ಅಭಿಮನ್ಯುವನ್ನು ಏನೆಂದು ಹರಸಿದಳು?

    Answer

    ಸುಭದ್ರೆಯು ಅಭಿಮನ್ಯುವಿಗೆ ಶ್ರೀಕೃಷ್ಣನ ಕೃಪೆ ಮತ್ತು ತಂದೆಯ ಶೌರ್ಯ ನಿನ್ನಲ್ಲಿದೆ, ಜಯಶಾಲಿಯಾಗಿ ಬಾ, ಮಂಗಳವಾಗಲಿ ಎಂದು ಹರಸಿದಳು.

  3. ೩. ಅಭಿಮನ್ಯು ಉತ್ತರೆಯನ್ನು ಹೇಗೆ ಸಮಾಧಾನಪಡಿಸಿದನು?

    Answer

    ಅಭಿಮನ್ಯು ಉತ್ತರೆಗೆ ಚಿಂತಿಸಬೇಡ, ನಾನು ಯುದ್ಧದಲ್ಲಿ ಜಯಶಾಲಿಯಾಗಿ ಹಿಂದಿರುಗುತ್ತೇನೆ, ಧೈರ್ಯಗೆಡದೆ ನಗುಮುಖದಿಂದ ಕಳಿಸಿಕೊಡು ಎಂದು ಸಮಾಧಾನಪಡಿಸಿದನು.

  4. ೪. ಅಭಿಮನ್ಯು ಸಾರಥಿಯನ್ನು ಕುರಿತು ಏನು ಹೇಳಿದನು?

    Answer

    ಅಭಿಮನ್ಯು ಸಾರಥಿ ಸುಮಿತ್ರನನ್ನು ಕುರಿತು, ಆದಷ್ಟು ಬೇಗ ತನ್ನನ್ನು ದ್ರೋಣಾಚಾರ್ಯರು ರಚಿಸಿರುವ ಚಕ್ರವ್ಯೂಹದ ಕಡೆಗೆ ಕರೆದುಕೊಂಡು ಹೋಗು ಎಂದು ಹೇಳಿದನು.

ಭಾಷಾ ಚಟುವಟಿಕೆ

  1. ಅ. ಕೊಟ್ಟಿರುವ ವಿವರಣೆಯನ್ನು ಓದಿ, ಸೂಕ್ತ ಸ್ಥಳದಲ್ಲಿ ಲೇಖನ ಚಿಹ್ನೆ ಹಾಕಿ.

  2. ಹೂದೋಟದಲ್ಲಿ ಎಷ್ಟೊಂದು ಹೂಗಳು ಅರಳಿವೆ ಕೆಂಪು ಗುಲಾಬಿ ಕಣ್ಣನ ಸೆಳೆಯುತ್ತಿದೆ ಏನಿದು ಶಬ್ದ ಓಹೋ ಸಂಪಿಗೆಯ ಕಂಪಿಗೆ ದುಂಬಿಗಳು ಝೇಂಕರಿಸುತ್ತಿವೆ ಮಲ್ಲಿಗೆ ಜಾಜಿ ಸುಗಂಧರಾಜ ಸೂರ್ಯಕಾಂತಿ ಚೆಂಡು ಹೂ ಅಬ್ಬಾ ಬಗೆ ಬಗೆಯ ಹೂಗಳ ಲೋಕವೇ ಇಲ್ಲಿದೆ

    Answer

    ಹೂದೋಟದಲ್ಲಿ ಎಷ್ಟೊಂದು ಹೂಗಳು ಅರಳಿವೆ! ಕೆಂಪು ಗುಲಾಬಿ ಕಣ್ಣನ ಸೆಳೆಯುತ್ತಿದೆ. ಏನಿದು ಶಬ್ದ? ಓಹೋ! ಸಂಪಿಗೆಯ ಕಂಪಿಗೆ ದುಂಬಿಗಳು ಝೇಂಕರಿಸುತ್ತಿವೆ. ಮಲ್ಲಿಗೆ, ಜಾಜಿ, ಸುಗಂಧರಾಜ, ಸೂರ್ಯಕಾಂತಿ, ಚೆಂಡು ಹೂ... ಅಬ್ಬಾ! ಬಗೆ ಬಗೆಯ ಹೂಗಳ ಲೋಕವೇ ಇಲ್ಲಿದೆ!

  3. ಆ. ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ.

  4. ಮಾದರಿ : ನೀವು + ಏಕೆ = ನೀವೇಕೆ

  5. ೧. ನಾವು + ಏಕೆ = ........................

    Answer

    ನಾವು + ಏಕೆ = ನಾವೇಕೆ

  6. ೨. ಅವರು + ಏಕೆ = ........................

    Answer

    ಅವರು + ಏಕೆ = ಅವರೇಕೆ

  7. ೩. ಅವಳು + ಏಕೆ = ........................

    Answer

    ಅವಳು + ಏಕೆ = ಅವಳೇಕೆ

  8. ೪. ಅದು + ಏಕೆ = ........................

    Answer

    ಅದು + ಏಕೆ = ಅದೇಕೆ

  9. ಇ. ಒಗಟು ಬಿಡಿಸಿ ಉತ್ತರ ಬರೆಯಿರಿ.

  10. ೧. ಚೋಟುದ್ದ ಹುಡುಗಿಗೆ, ಮಾರುದ್ದ ಜಡೆ ........................

  11. ೨. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ ........................

  12. ೩. ಒಂಟಿ ಕಾಲು ಕೊಕ್ಕರೆ ಒಂಭೈನೂರು ತತ್ತಿ ........................

  13. ಈ. ಕೊಟ್ಟಿರುವ ಅಕ್ಷರ ಚೌಕದಲ್ಲಿ ಮಹಾಭಾರತದಲ್ಲಿ ಬರುವ ಪಾತ್ರಗಳ ಹೆಸರುಗಳಿವೆ. ಅವುಗಳನ್ನು ಕಂಡುಹಿಡಿದು ನಿಮ್ಮ ಅಭ್ಯಾಸ ಪುಸ್ತಕದಲ್ಲಿ ಪಟ್ಟಿ ಮಾಡಿ.

    Answer

    ಅಭಿಮನ್ಯು, ಅರ್ಜುನ, ಭೀಮ, ದುರ್ಯೋಧನ, ಶಕುನಿ

  14. (A 6x6 grid of letters:

  15. ಕ ಜ ಯ ದ್ರ ಧ ತ

  16. ಬ ನ ನ ರ್ಜ ಅ ಅ

  17. ದು ಡ ಕಿ ರ್ಣ ಭಿ ರ್ಜು

  18. ರ್ಯೋ ಸು ಷ್ಣ ರ ಮ ನ

  19. ಧ ರ್ಮಾ ಲ ಯ ನ್ಯು ನು

  20. ನ ಬ ಶ ಕು ನಿ ಕ

  21. — Words hidden include ಶಕುನಿ circled as an example.)

ಬಳಕೆ ಚಟುವಟಿಕೆ

  1. ಅ. ಈ ನಾಟಕದ ಪಾತ್ರಗಳನ್ನು ಹಂಚಿಕೊಂಡು ಶಿಕ್ಷಕರ ಮಾರ್ಗದರ್ಶನ ಪಡೆದು ತರಗತಿಯಲ್ಲಿ ಸ್ನೇಹಿತರ ಜೊತೆ ಸೇರಿ ಅಭಿನಯಿಸಿ.

  2. ಆ. ಶಿಕ್ಷಕರ ಸಹಾಯದಿಂದ ಮಾದರಿಯಂತೆ ಪೌರಾಣಿಕ ವೀರ ಬಾಲಕರ ಪರಿಚಯವನ್ನು ಮಾಡಿ ಕೊಡಿ.

  3. ಮಾದರಿ : ಲವ-ಕುಶ: ರಾಮ - ಸೀತೆಯರ ಅವಳಿ ಮಕ್ಕಳು. ರಾಮ-ಲಕ್ಷ್ಮಣರನ್ನು ಸೋಲಿಸಿದ ವೀರ ಬಾಲಕರು.

  4. ೧. ಏಕಲವ್ಯ -

  5. ೨. ಪ್ರಹ್ಲಾದ -

  6. ೩. ಬಬ್ರುವಾಹನ -

  7. ಇ. ಯೋಚಿಸಿ ಬರೆಯಿರಿ.

  8. ೧. ಈ ನಾಟಕದಲ್ಲಿ ನಿನಗೆ ಇಷ್ಟವಾದ ಪಾತ್ರ ಯಾವುದು? ಏಕೆ?

  9. ೨. ಅಭಿಮನ್ಯು ಯುದ್ಧಕ್ಕೆ ಹೋಗುತ್ತೇನೆ ಎಂದಾಗ ನೀನು ಧರ್ಮರಾಯನಾಗಿದ್ದರೆ ಏನು ಮಾಡುತ್ತಿದ್ದೆ?

Interactive Lab

ಭೇದಿಸುbhe-di-suಹೊಡೆ, ಮುರಿ, ಸೀಳು; ಆಶೀರ್ವದಿಸು - ಹರಸು;
ಶಂಕೆshan-keಸಂದೇಹ, ಸಂಶಯ;
ವಿಖ್ಯಾತvi-khya-taಪ್ರಸಿದ್ಧವಾದ;
ಯುದ್ಧyud-dhaಕದನ, ಸಮರ, ಸಂಗ್ರಾಮ;
ಎರಗುe-ra-guನಮಸ್ಕಾರ ಮಾಡು, ನಮಸ್ಕರಿಸು;
ದಿಗ್ಭಾಂತdig-bhran-taಗಾಬರಿಗೊಳ್ಳು, ಕಸಿವಿಸಿಯಾಗು;
ಸೂರ್ಯsoor-yaನೇಸರ, ರವಿ;
ಸೇನೆse-neದಂಡು, ಸೈನ್ಯ;
ಯಮಪುರya-ma-pu-raಯಮನಲೋಕ, ಮೃತ್ಯುಲೋಕ;
ಮರಣma-ra-naಜೀವ ಹೋಗುವಿಕೆ, ಸಾವು;
ಘನಘೋರgha-na-gho-raಉಗ್ರವಾದ; ಭಯಂಕರವಾದ;
ಚಿಂತಾಕ್ರಾಂತchin-ta-kran-taಚಿಂತೆಗೊಳಗಾದ;
ಸಂಹರಿಸುsam-ha-ri-suನಾಶಗೊಳಿಸು, ಕೊಲ್ಲು, ನಿರ್ನಾಮ ಮಾಡು;
ಪ್ರಶಂಸೆpra-sham-seಹೊಗಳಿಕೆ, ಸ್ತುತಿ;
ಪರಾಕ್ರಮpa-ra-kra-maಕಲಿತನ, ಶೌರ್ಯ;
ಸಹಮತsa-ha-ma-taಒಮ್ಮತ, ಏಕಾಭಿಪ್ರಾಯ;
ನಂದನnan-da-naಮಗ, ಪುತ್ರ, ಕಂದ;
ದಯೆda-yeಕರುಣೆ, ಅನುಕಂಪ, ಕೃಪೆ;
ಮಂಗಳman-ga-laಶುಭ;
ವದನva-da-naಮುಖ, ಮೋರೆ;
ಖಿನ್ನkhin-naದುಃಖಿತನಾದ, ನೊಂದ;
ಪರಿಣಿತpa-ri-ni-taಚತುರ, ನಿಪುಣ;
ಹೇಡಿhe-diಅಂಜುಬುರುಕ ಹೆದರುಪುಕ್ಕ;
ತಂತ್ರtan-traಉಪಾಯ;
ರಾಜೋಚಿತra-jo-chi-taಅರಸನಿಗೆ ಉಚಿತವಾದ, ರಾಜಯೋಗ್ಯವಾದ;
ಧಿಕ್ಕಾರdhik-kaa-raನಿಂದೆ, ತಿರಸ್ಕಾರ;
ಸಾಮರ್ಥ್ಯsaa-mar-thyaದಕ್ಷತೆ, ಯೋಗ್ಯತೆ, ಬಲ. ಶಕ್ತಿ;
ಅಪ್ರತಿಮa-pra-ti-maಅಸಾಮಾನ್ಯವಾದ;
ಗರ್ಭgar-bhaಬಸಿರು;
ಹಿಂಬಾಲಿಸುhim-baa-li-suಹಿಂದೆಬರು, ಅನುಸರಿಸು